ನ್ಯಾಯ ಬೇಡುತ್ತಿದೆ ನ್ಯಾಯವ

ಜನತೆಗೆ ನ್ಯಾಯ ಒದಗಿಸುವುದು ಹೇಗೆ ಒಂದು ಸರ್ಕಾರದ ಮೂಲಭೂತ ಕರ್ತವ್ಯವೋ ಹಾಗೇ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟಿಸುವುದು ಸಹ ಜನತೆಯ ಅಷ್ಟೇ ಮೂಲಭೂತ ಹಕ್ಕಾಗಿದೆ. “ಅನ್ಯಾಯ ಎಲ್ಲಿ ಸಂಭವಿಸಿದರೂ ಅದು ನ್ಯಾಯಕ್ಕೆ ವೊಡ್ಡಲಾದ ಬೆದರಿಕೆ ಆಗಿರುತ್ತದೆ” ಎಂದು ಅಮೇರಿಕಾದ ಮಾನವ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದಾರೆ.

ಇತ್ತೀಚೆಗೆ ಅಂದರೆ ಕಳೆದ ಅಗಸ್ಟ್ ೧೧ ರಂದು ಬೆಂಗಳೂರು ಪೂರ್ವದಲ್ಲಿ ಭಯಾನಕವಾದ ಗಲಭೆಯೊಂದು ನಡೆಯಿತು. ಭಾರಿ ಪ್ರಮಾಣದ ಖಾಸಗಿ ಹಾಗೂ ಸಾರ್ವಜನಿಕ ಆಸ್ತಿ ಬೆಂಕಿಗೆ ಆಹುತಿಯಾಗಿತ್ತು. ಪೊಲೀಸರು ಹಾರಿಸಿದ ಗುಂಡಿಗೆ ಮೂವರು ಬಲಿಯಾಗಿ ಸಾವನ್ನಪ್ಪಿದರು. ಫೇಸ್‌ಬುಕ್‌ನಲ್ಲಿ ಧಾರ್ಮಿಕ ಅವಹೇಳನಾಕಾರಿ ಪೋಸ್ಟ್ ಪ್ರಕಟಿಸಿದ್ದು ಈ ಹಿಂಸಾಚಾರಕ್ಕೆ ಕಾರಣವಾಯಿತು ಎನ್ನಲಾಗಿದೆ. ರಾಜ್ಯ ಸರ್ಕಾರ ತನ್ನ ತಕ್ಷಣದ ಎಲ್ಲ ಜವಾಬ್ದಾರಿಗಳನ್ನು ಬದಿಗಿಟ್ಟು ಗಲಭೆಯಲ್ಲಿ ಸಂಭವಿಸಿದ ನಷ್ಟವನ್ನು ವಸೂಲಿ ಮಾಡಲು ರಚಿಸಲಾದ ಕ್ಲೈಮ್ಸ್ ಕಮಿಶನ್‌ಗೆ ಹೈ ಕೋರ್ಟ್ ಅನುಮತಿ ಪಡೆಯಲು ಧಾವಿಸಿತು. ೨೦೦೯ ರ ಸುಪ್ರೀಂ ಕೋರ್ಟ್ ನಿರ್ದೇಶನ ಪ್ರಕಾರ ಉತ್ತರ ಪ್ರದೇಶ ಮತ್ತು ದೆಹಲಿ ರಾಜ್ಯಗಳು ಈಗಾಗಲೇ ಇಂತಹ ಆಯೋಗಗಳನ್ನು ರಚಿಸಿವೆ. ಕರ್ನಾಟಕವೂ ಸಹ ಅದನ್ನೇ ಮಾಡಲು ಹೊರಟಿವೆ.

ಪ್ರಸಕ್ತವಾಗಿ ಉತ್ತರ ಪ್ರದೇಶ ಮತ್ತು ಕರ್ನಾಟಕ ರಾಜ್ಯಗಳೆರಡೂ ಬಿಜೆಪಿ ಆಡಳಿತದಲ್ಲಿವೆ. ಗಲಭೆ ಹಾಗೂ ಪ್ರತಿಭಟನೆಗಳಲ್ಲಿ ಸಂಭವಿಸುವ ನಷ್ಟವನ್ನು ವಸೂಲಿ ಮಾಡಲು ಕರ್ನಾಟಕವು ಉತ್ತರ ಪ್ರದೇಶ ಮಾದರಿಯನ್ನು ಅನುಸರಿಸಲು ಉತ್ಸುಕವಾಗಿದೆ. ನಿವೃತ್ತ ಜಿಲ್ಲಾ ನ್ಯಾಯಾಧೀಶರು ಅಥವಾ ಹೆಚ್ಚುವರಿ ಪೊಲೀಸ್ ಆಯುಕ್ತರ ಮಟ್ಟದ ಅಧಿಕಾರಿಯೊಬ್ಬರು ಆಯೋಗದ ಅಧ್ಯಕ್ಷರಾಗಿರುತ್ತಾರೆ. ಅವರು ೩ ತಿಂಗಳ ಒಳಗಾಗಿ ಆಗಿರುವ ನಷ್ಟವನ್ನು ನಿರ್ಧರಿಸಿ ಸರ್ಕಾರಕ್ಕೆ ವರದಿಯನ್ನು ನೀಡುತ್ತಾರೆ. ಅಪರಾಧಿಯ ಆಸ್ತಿಯನ್ನು ಮುಟ್ಟುಗೋಲು ಹಾಕುವ ಅಧಿಕಾರ ಟ್ರಿಬ್ಯೂನಲ್‌ಗೆ ಇರುತ್ತದೆ. ಉತ್ತರ ಪ್ರದೇಶ ರಾಜ್ಯದ ಕರಾಳ ಕಾಯ್ದೆ ಪ್ರಕಾರ ಟ್ರಿಬ್ಯುನಲ್ ನೀಡಿದ ತೀರ್ಪು ಅಂತಿಮವಾಗಿದ್ದು ಅದರ ವಿರುದ್ಧ ಮೇಲ್ಮನವಿ ಸಲ್ಲಿಸುವಂತಿಲ್ಲ.

ಸಿಎಎ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದ್ದಾಗ, ಪ್ರಮುಖ ಸಾರ್ವಜನಿಕ ವ್ಯಕ್ತಿಗಳನ್ನು ಒಳಗೊಂಡಂತೆ ೫೭ ಜನರನ್ನು ಪಟ್ಟಿಮಾಡಿ, ಇವರು ಸಾರ್ವಜನಿಕ ಆಸ್ತಿಯನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿ, ಅವರ ಹೆಸರುಗಳನ್ನು ಪ್ರಕಟ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಹಚ್ಚಲಾಯಿತಲ್ಲದೆ ಅವರಿಂದ ನಷ್ಟ ವಸೂಲಿಗೆ ಕ್ರಮವಹಿಸಲಾಯಿತು. ಆದರೆ, ಅಲಹಾಬಾದ್ ಉಚ್ಛ ನ್ಯಾಯಾಲಯವು ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾತೂರ್ ನೇತೃತ್ವದಲ್ಲಿ ಪ್ರಕರಣವನ್ನು ಸ್ವತಃ ಎತ್ತಿಕೊಂಡು ಯೋಗಿ ಆದಿತ್ಯನಾಥರಿಗೆ ಚಾಟಿ ಏಟು ಕೊಟ್ಟಿತ್ತಲ್ಲದೆ ಸರ್ಕಾರದ ಪರವಾಗಿ ಹಚ್ಚಲಾದ ಪ್ರಕಟಣೆಗಳನ್ನು ಕೂಡಲೇ ಕಿತ್ತುಹಾಕುವಂತೆ ಲಕ್ನೋ ಜಿಲ್ಲಾ ನ್ಯಾಯಾಧೀಶರಿಗೂ ಮತ್ತು ಪೊಲೀಸ್ ಕಮೀಶನರಿಗೂ ಖಡಕ್ ಆದೇಶ ನೀಡಿತು. ವ್ಯಕ್ತಿಗಳ ತೆಜೋವದೆ ಮಾಡುವುದ ಸಂವಿಧಾನದ ೨೧ ನೇ ಕಲಂ ನ ಉಲ್ಲಂಘನೆಯಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್ ಪೀಠವು ಅದು ಸಂವಿಧಾನಾತ್ಮಕ ಹಕ್ಕುಗಳ ಭಾಗವಾಗಿದ್ದು ಕಾನೂನಿನ ಮೂಲಕ ಅವುಗಳನ್ನು ಕಿತ್ತುಕೊಳ್ಳಲು ಬರುವುದಿಲ್ಲ ಎಂದು ಯೋಗಿ ಸರ್ಕಾರಕ್ಕೆ ಚುರುಕು ಮುಟ್ಟಿಸಿತು. ಒಂದು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಬ್ಯಾನರ್‌ಗಳಲ್ಲಿ ವ್ಯಕ್ತಿಗಳ ಹೆಸರುಗಳನ್ನು ಮುದ್ರಿಸಿ ಪ್ರಕಟಿಸುವುದರ ಔಚಿತ್ಯವೇನು ಎಂಬುದನ್ನು ನಮಗೆ ಮನವರಿಕೆ ಮಾಡುವಲ್ಲಿ ಅಡ್ವೋಕೇಟ್ ಜನರಲ್ ವಿಫಲರಾಗಿದ್ದಾರೆ ಎಂದು ಯಾವ ಮುಲಾಜಿಲ್ಲದೆ ಪೀಠ ಠೀಕಿಸಿತು.

ಉತ್ತರ ಪ್ರದೇಶದ ಕಾಯ್ದೆ ಅದರ ಉಲ್ಲಂಘನೆಗಾಗಿಯೇ ರಚನೆ ಮಾಡಿದಂತೆ ಕಾಣುತ್ತದೆ. ಆಡಳಿತಾವಸ್ಥೆಗೆ ಇಷ್ಟೋಂದು ಅನಿಯಂತ್ರಿತ ಅಧಿಕಾರ ಕೊಟ್ಟರೆ ಅದರ ದುರುಪಯೋಗವಲ್ಲದೆ ಬೇರೇನು ಆಗಲು ಸಾಧ್ಯ. ಇತ್ತೀಚೆಗೆ ನಮ್ಮ ರಾಜಕೀಯ ವ್ಯವಸ್ಥೆ ಹೆಚ್ಚೆಚ್ಚು ವ್ಯಕ್ತಿ ಪೂಜಿತವಾಗುತ್ತಿದೆ. ಇಲ್ಲಿ ಯಾವ ಸಿದ್ದಾಂತವಿಲ್ಲ. ಕಾನೂನುಗಳನ್ನು ರಾಜಕೀಯ ಹಾಗೂ ಸಾಮಾಜಿಕ ಕಾರ್ಯಕರ್ತರ ವಿರುದ್ಧ ದುರ್ಬಳಕೆ ಮಾಡಲು ವ್ಯಾಪಕ ಅವಕಾಶಗಳನ್ನು ನೀಡುತ್ತದೆ.

ನ್ಯಾಯಕ್ಕಾಗಿ ಹೋರಾಟ ಮಾಡುವವರ ಮೇಲೆ ಪ್ರಭುತ್ವವೇ ಹಿಂಸಾಚಾರಕ್ಕೆ ಇಳಿದರೆ ಪರಿಹಾರವನ್ನು ನಿರ್ಧರಿಸುವುದು ಹೇಗೆ? ಇಲ್ಲಿ ಹೊಣೆಗಾರರು ಯಾರು? ಕಾನೂನುಗಳು ಮಾತ್ರ ಸಮಾಜದಲ್ಲಿ ಶಾಂತಿಯನ್ನು ನೆಲೆಸುವಂತೆ ಮಾಡಲಾರವು. ಶಾಂತಿ ಸೌಹಾರ್ದತೆ ನೆಲೆಸುವಂತೆ ಮಾಡಲು ಸರಿಯಾದ ಆಡಳಿತ ಇರಬೇಕು.

ಜನರ ಜೀವ ಹಾಗೂ ಆಸ್ತಿಗೆ ರಕ್ಷಣೆ ನೀಡುವುದು ಸರ್ಕಾರದ ಪ್ರಮುಖ ಕರ್ತವ್ಯವಾದರೂ ಸರ್ಕಾರದ ವಿಫಲತೆಯನ್ನು ಮುಚ್ಚಿಹಾಕಲು ನ್ಯಾಯಸಮ್ಮತ ಹೋರಾಟಗಳನ್ನು ದಮನ ಮಾಡಲು ಬಳಸಬಾರದು. ಒಂದು ಪ್ರಜಾಸತ್ತಾತ್ಮಕ ಸಮಾಜದಲ್ಲಿ ಪ್ರತಿಭಟನೆ ನಡೆಸುವುದು ಜನತೆಯ ಮೂಲಭೂತ ಹಕ್ಕಾಗಿದೆ. ಸಾರ್ವಜನಿಕರ ಜೀವ, ಆಸ್ತಿಪಾಸ್ತಿಯನ್ನು ರಕ್ಷಿಸುವುದು ಸಹ ಸರ್ಕಾರದ ಹೊಣೆಯಾಗಿದೆ. ಆದರೆ ಯಾವ ಹೋರಾಟ ಕಾನೂನು ಬದ್ಧ ಎಂಬುದನ್ನು ತೀರ್ಮಾನಿಸುವವರು ಯಾರು? ಈ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಸರ್ಕಾರ ರಾಜ್ಯದಲ್ಲಿ ಕ್ಲೈಮ್ ಕಮಿಶನ್ ಮುಂದೆ ಯಾವ ಕ್ಲೈಮ್ ಮಂಡಿಸಲು ಅವಸರದಲ್ಲಿ ಧಾವಿಸುತ್ತಿದ್ದಾರೆ? ಗಲಭೆಗಳಲ್ಲಿ ಬಂಧಿಸಲಾಗುವ ಅಮಾಯಕರನ್ನು ಅಪರಾಧಿಗಳೆಂದು ಘೋಷಿಸಿ ದಂಡ ವಸೂಲಿ ಮಾಡಲು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳು ತುಂಬಾ ಅವಸರದಲ್ಲಿದ್ದಂತೆ ಕಾಣುತ್ತದೆ. ಸಮಯ ಬಂದಿದೆ, ಬಂದೇ ಬರಲಿದೆ ನ್ಯಾಯವೇ ನ್ಯಾಯವನ್ನು ಕೇಳುವ ಸಮಯ ಬಂದೇ ಬರಲಿದೆ.

Leave a Reply

Your email address will not be published. Required fields are marked *