ಭಾರತದ ಕಮ್ಯುನಿಸ್ಟ್ ಚಳುವಳಿಗೆ ನೂರು ವರ್ಷ

ಭಾರತದ ಕಮ್ಯುನಿಸ್ಟ್ ಚಳುವಳಿಯ ನೂರು ವರ್ಷಗಳ ರೋಚಕ ಇತಿಹಾಸದ ಸ್ಥೂಲ ನೋಟ. ಎರಡು ಭಾಗಗಳಲ್ಲಿ. ಇಲ್ಲಿ ದೇಶದ ಸ್ವಾತಂತ್ರ್ಯಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರದ ಬಗೆಗಿನ ಮೊದಲ ಭಾಗವಿದೆ. ಎರಡನೆಯ ಭಾಗ ಮುಂದಿನ ವಾರ.

ವಿಜಯ್ ಪ್ರಶಾದ್, ಟ್ರೈಕಾಂಟಿನೆಂಟಲ್ ‌

Communist Part 100 copyದಬ್ಬಾಳಿಕೆ, ದಮನ ಮತ್ತು ಶೋಷಣೆಗಳ ವಿರುದ್ಧದ ಕೆಚ್ಚಿನ ಪ್ರತಿರೋಧದ ಪರಂಪರೆಯ ಭಾರತದ ಕಮ್ಯುನಿಸ್ಟ್ ಚಳುವಳಿಯು 17 ಅಕ್ಟೋಬರ್ 2020ರಂದು ನೂರು ವರ್ಷಗಳನ್ನು ಪೂರೈಸಲಿದೆ. ಈ ನೂರು ವರ್ಷಗಳಲ್ಲಿ ಸಮಾನತಾವಾದಿ ಮತ್ತು ನೈಜ ಪ್ರಜಾಪ್ರಭುತ್ವದ ಕನಸುಗಳನ್ನು ನನಸು ಮಾಡಲು ತಮ್ಮ ಜೀವನವನ್ನೇ ಪಣಕ್ಕಿಟ್ಟ ಸಾವಿರಾರು ಕ್ರಾಂತಿಕಾರಿಗಳ ತ್ಯಾಗ-ಬಲಿದಾನಗಳಾದವು. ಪ್ರಭುತ್ವದ ದಬ್ಬಾಳಿಕೆ, ಹಿಂಸೆ ಮತ್ತು ಅಪರಿಮಿತ ಬುಡಮೇಲು ಕೃತ್ಯಗಳ ವಿರುದ್ಧದ ಹೋರಾಟದಲ್ಲಿ ಸಮಸಮಾಜದ ಕನಸನ್ನು ಹೊತ್ತ ಸಾವಿರಾರು ಕಾರ್ಯಕರ್ತರು ಹುತಾತ್ಮರಾದರು. ಇನ್ನೂ ಹಲವರು ಆ ಹೋರಾಟವನ್ನು ಮುಂದುವರೆಸುತ್ತಿದ್ದಾರೆ.

ಕಮ್ಯುನಿಸ್ಟರು ತಮ್ಮ ವೈಯುಕ್ತಿಕ ಜೀವನವನ್ನು ಬದಿಗಿಟ್ಟು, ಅಸಂಖ್ಯಾತ ಜನರನ್ನು ಸಮಾಜದ ದೂರಗಾಮಿ ಪರಿವರ್ತನೆಗಾಗಿ ಕ್ರಿಯಾಶೀಲಗೊಳಿಸಿದ್ದಾರೆ. ವಿಚ್ಛಿದ್ರಕಾರಿ ಮತಾಂಧತೆ ಮತ್ತು ಜಾತಿ ತಾರತಮ್ಯದ ವಿರುದ್ಧ ಹೋರಾಟ ನಡೆಸಿದ್ದಾರೆ, ಮಾನವೀಯ ಹಕ್ಕುಗಳಿಗಾಗಿ ರೈತ ಕಾರ್ಮಿಕರನ್ನು ಸಂಘಟಿಸಿದ್ದಾರೆ ಮತ್ತು ಎಲ್ಲ ಅಂಚಿಗೆ ತಳ್ಳಲ್ಪಟ್ಟ, ಶೋಷಿತ ದಮನಿತರು ಉತ್ತಮವಾಗಿ ಬದುಕುವಂತಹ ಸಮಾಜವನ್ನು ನಿರ್ಮಿಸಲು ಜನರ ಪ್ರಜ್ಞೆಯನ್ನು ಜಾಗೃತಗೊಳಿಸಿ ಪ್ರಗತಿಯ ದಿಕ್ಕಿನತ್ತ ಕೊಂಡೊಯ್ಯಲು ಶ್ರಮಿಸಿದ್ದಾರೆ. ಮಾನವನಿಂದ ಮಾನವನ ಮೇಲೆ ನಡೆಯುವ ಶೋಷಣೆಯು ಸಮಾಜವಾದದ ಸಮಾಜದಿಂದ ಮಾತ್ರ ಕೊನೆಯಾಗುವುದೆಂದು ಮನಗಂಡು ಕಮ್ಯುನಿಸ್ಟರು ಮಾನವೀಯ ನೆಲೆಯಲ್ಲಿ ಸಮಸಮಾಜದ ಗುರಿಗಾಗಿ ಹೋರಾಟ ಮುಂದುವರಿಸಿದ್ದಾರೆ.

ಭಾರತದ ಕಮ್ಯುನಿಸ್ಟರು ದೇಶಪ್ರೇಮಿಗಳು

ಅವರ ಕಾರ್ಯಾಚರಣೆ ಭಾರತದ ಸಾಮಾಜಿಕ-ಆರ್ಥಿಕ ಮತ್ತು ಸಾಂಸ್ಕೃತಿಕ ವಾಸ್ತವದಲ್ಲಿ ಆಳವಾಗಿ ಬೇರೂರಿದೆ. ಆದರೂ ಭಾರತದ ಕ್ರಾಂತಿಕಾರಿ ಹೋರಾಟವು ಜಗತ್ತಿನಲ್ಲಿ ಮಾನವನ ವಿಮೋಚನೆಗಾಗಿ ನಡೆಯುತ್ತಿರುವ ಹೋರಾಟದ ಭಾಗವಾಗಿದೆ ಎಂದು ಕಮ್ಯುನಿಸ್ಟರು ಭಾವಿಸಿದ್ದಾರೆ. ಜಗತ್ತಿನ ಮೂಲೆ ಮೂಲೆಯಲ್ಲಿನ ಸಂಗಾತಿಗಳ ಜೊತೆ ಭವಿಷ್ಯದ ಸಮತಾವಾದದ ಕನಸನ್ನು ಹಂಚಿಕೊಳ್ಳುತ್ತಾ ಸಾಗುತ್ತಿದ್ದಾರೆ. ಇದರ ಅರ್ಥ ಭಾರತದ ಕಮ್ಯುನಿಸ್ಟ್ ಚಳುವಳಿಯು ಜಾಗತಿಕ ಹೋರಾಟವಾಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಭಾರತ ಕಮ್ಯುನಿಸ್ಟ್ ಚಳುವಳಿ ಜಗತ್ತಿನ ಎಲ್ಲಾ ದಮನಿತ ದೇಶಗಳ ಮತ್ತು ಜನರ ಹಕ್ಕುಗಳಿಗಾಗಿ ಬೆಂಗಾವಲಾಗಿ ನಿಲ್ಲುತ್ತದೆ.

1917ರಲ್ಲಿ ರಷ್ಯಾದಲ್ಲಿ ನಡೆದ ಅಕ್ಟೋಬರ್ ಕ್ರಾಂತಿಯಿಂದ ಭಾರತದ ಕಮ್ಯುನಿಸ್ಟ್ ಚಳುವಳಿಯು ಬಹಳಷ್ಟು ಸ್ಫೂರ್ತಿ ಪಡೆಯಿತು. ಇತಿಹಾಸದಲ್ಲಿ ಅಕ್ಟೋಬರ್ ಕ್ರಾಂತಿ ಪ್ರಮುಖ ಅಧ್ಯಾಯ, ಇದು ಕೇವಲ ತ್ಸಾರ್ ರಾಜಪ್ರಭುತ್ವದ ವಿರುದ್ಧದ ಹೋರಾಟವಾಗಿರಲಿಲ್ಲ, ಬದಲಾಗಿ ಎಲ್ಲಾ ದಮನಿತ ದೇಶಗಳಿಗೆ ಪ್ರೇರಣೆ ನೀಡಿದ ಹೋರಾಟವಾಗಿತ್ತು. ಹೀಗೆ ಪ್ರೇರಿತಗೊಂಡು ಭಾರತದಲ್ಲಿ ಬ್ರಿಟಿಷ್ ವಸಾಹತುಶಾಹಿಯನ್ನು ಕಿತ್ತೊಸೆಯಲು ಬಯಸಿದ್ದ ಕ್ರಾಂತಿಕಾರಿಗಳ ಒಂದು ಗುಂಪು ತಾಷ್ಕೆಂಟಿಗೆ ಪ್ರಯಾಣ ಬೆಳೆಸಿತು. ಸೋವಿಯತ್ ಒಕ್ಕೂಟ ಮತ್ತು ವಿವಿಧ ದೇಶದ ಕ್ರಾಂತಿಕಾರಿಗಳ ಸಮ್ಮುಖದಲ್ಲಿ, ಮೆಕ್ಸಿಕನ್ ಕಮ್ಯುನಿಸ್ಟ್ ಪಕ್ಷದ ಸ್ಥಾಪಕರು ಮತ್ತು ಕಮ್ಯುನಿಸ್ಟ್ ಇಂಟರ್‌ನ್ಯಾಷನಲ್‌ನ ಕಾರ್ಯಕಾರಿ ಸದಸ್ಯರಾಗಿದ್ದ ಭಾರತದ ಕ್ರಾಂತಿಕಾರಿ ಎಂ.ಎನ್.ರಾಯ್ ನೆರವಿನಿಂದ 17ನೇ ಅಕ್ಟೋಬರ್ 1920ರಂದು ಭಾರತ ಕಮ್ಯುನಿಸ್ಟ್ ಪಕ್ಷವನ್ನು ಸ್ಥಾಪಿಸಲಾಯಿತು.

ಈ ವಲಸಿಗ ಭಾರತ ಕಮ್ಯುನಿಸ್ಟ್ ಪಕ್ಷ ಅಲ್ಲದೆ, ದೇಶದ ವಿವಿಧ ಭಾಗಗಳಲ್ಲಿ 1920ರ ಸುಮಾರಿಗೆ ಅನೇಕ ಕಮ್ಯುನಿಸ್ಟ್ ಗುಂಪುಗಳು ಉದಯವಾಗುತ್ತಿದ್ದವು. ಬಾಂಬೆಯಲ್ಲಿ ಎಸ್.ಎ. ಡಾಂಗೆ, ಕಲ್ಕತ್ತಾದಲ್ಲಿ ಮುಝಾಫರ್ ಅಹಮದ್, ಮದ್ರಾಸಿನಲ್ಲಿ ಸಿಂಗಾರವೇಲು ಚೆಟ್ಟಿಯಾರ್ ಮತ್ತು ಲಾಹೋರ್‌ ನಲ್ಲಿ ಗುಲಾಮ ಹುಸೇನ್ ಇವರು ಈ ಕಮ್ಯುನಿಸ್ಟ್ ಗುಂಪುಗಳ ನೇತೃತ್ವ ವಹಿಸಿದ್ದರು. ವಲಸಿಗ ಭಾರತ ಕಮ್ಯುನಿಸ್ಟ್ ಪಕ್ಷ ತನ್ನ ಚಟುವಟಿಕೆಗಳ ಮೂಲಕ ಈ ಗುಂಪುಗಳಿಗೆ ಮಾರ್ಕ್ಸ್‌ವಾದಿ-ಲೆನಿನವಾದಿ ಸಿದ್ಧಾಂತ ಮತ್ತು ಕಾರ್ಯಾಚರಣೆಯ ಶಿಕ್ಷಣವನ್ನು ನೀಡಲು ಪ್ರಾರಂಭಿಸಿತು.

ಎಂ.ಎನ್.ರಾಯ್ ಗೆ ಸಂಪರ್ಕವಿದ್ದ ಎಲ್ಲ ಕಮ್ಯುನಿಸ್ಟರು ಈಗ ಉತ್ತರಪ್ರದೇಶದಲ್ಲಿರುವ ಕಾನ್ಪುರದಲ್ಲಿ 1925ನೇ ಇಸವಿಯ ಡಿಸೆಂಬರ್ 25 ರಿಂದ 28ರವರೆಗೆ ಬಹಿರಂಗ ಸಮ್ಮೇಳನವನ್ನು ಆಯೋಜಿಸಿದರು. ಈ ಸಮ್ಮೇಳನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷವನ್ನು ಕಾರ್ಯಪ್ರವೃತ್ತಗೊಳಿಸಿ ಪಕ್ಷದ ಮುಖ್ಯ ಕಛೇರಿಯನ್ನು ಬಾಂಬೆಯಲ್ಲಿ ಆರಂಭಿಸಬೇಕೆಂದು ನಿರ್ಧರಿಸಲಾಯಿತು. ಇದು ಭಾರತ ನೆಲದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ಸ್ಥಾಪನೆಯ ಮೊದಲ ಹೆಜ್ಜೆಯಾಗಿತ್ತು ಮತ್ತು ಕೆಲ ಕಮ್ಯುನಿಸ್ಟರು ಇದು ಭಾರತ ಕಮ್ಯುನಿಸ್ಟ್ ಚಳುವಳಿಯ ಆರಂಭವಾಗಿತ್ತು ಎಂದು ಪರಿಗಣಿಸುತ್ತಾರೆ.

ಆರಂಭದ ವರ್ಷಗಳು

ಭಾರತದ ಕಮ್ಯುನಿಸ್ಟರು ಬ್ರಿಟಿಷ್ ವಸಾಹತುಶಾಹಿಯಿಂದ ಭಾರತವನ್ನು ಸಂಪೂರ್ಣವಾಗಿ ಸ್ವತಂತ್ರಗೊಳಿಸಿ ಅವರ ಕಣ್ಮುಂದೆ ಇದ್ದ ಸೋವಿಯತ್ ಒಕ್ಕೂಟದ ಮಾದರಿಯಲ್ಲಿ ದುಡಿಯುವ ಜನರೇ ಆಡಳಿತ ನಡೆಸುವ ಸಮಾಜವನ್ನು ಕಟ್ಟಬೇಕೆಂದು ನಿರ್ಧರಿಸಿದರು. ಈ ಗುರಿ ಸಾಧನೆಗಾಗಿ ಬೇರುಮಟ್ಟದಿಂದ ಸಂಘಟನೆಯನ್ನು ಕಟ್ಟಿ, 1920ರ ದಶಕದ ಕೊನೆಯ ಹೊತ್ತಿಗೆ ನಗರ ಪ್ರದೇಶಗಳಲ್ಲಿ ಕಾರ್ಮಿಕ ಸಂಘಟನೆಗಳ ಚಳುವಳಿಗಳನ್ನು ಪ್ರಬಲವಾಗಿಸಿದರು. 1928 ಮತ್ತು 1929ರಲ್ಲಿ ದೇಶದಲ್ಲೆಲ್ಲ ಕಾರ್ಮಿಕ ವರ್ಗದ ಹೋರಾಟಗಳ ಅಲೆಯೂ ಸೃಷ್ಟಿಯಾಯಿತು. ಅದರಲ್ಲಿ ಬಾಂಬೆ ಜವಳಿ ಕಾರ್ಖಾನೆ ಕಾರ್ಮಿಕರ ಹೋರಾಟ ಮತ್ತು ಬಂಗಾಳದ ರೈಲ್ವೆ ಕಾರ್ಮಿಕರ ಹೋರಾಟ ಅತ್ಯಂತ ಪ್ರಮುಖವಾದ ಹೋರಾಟಗಳಾಗಿದ್ದವು.

ವಸಾಹತುಶಾಹಿಯ ವಿರುದ್ಧದ ಹೋರಾಟದಲ್ಲಿ ಕಮ್ಯುನಿಸ್ಟರ ಮುನ್ನಡೆಯ ಪರಿಣಾಮವಾಗಿ, ಆ ಸಮಯದಲ್ಲಿ ಭಾರತ ರಾಷ್ಟ್ರೀಯ ಚಳುವಳಿಯ ನಾಯಕತ್ವ ವಹಿಸಿದ್ದ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಬ್ರಿಟಿಷರ ವಿರುದ್ಧ ತೀವ್ರಗಾಮಿ ನಿಲುವುಗಳನ್ನು ಅನುಸರಿಸಲು ಪ್ರಾರಂಭಿಸಿತು. ಅಲ್ಲಿಯ ತನಕ ಅವರು ಹೋರಾಟದಲ್ಲಿ ಅಳವಡಿಸಿಕೊಂಡಿದ್ದ ಮಂದ ಪ್ರತಿರೋಧದ ನೀತಿಯನ್ನು ಕೈಬಿಟ್ಟರು. 1921ರಲ್ಲಿ ಅಹಮದಬಾದ್‌ ನಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೇಸಿನ ಸಮಾವೇಶದಲ್ಲಿ ಕಮ್ಯುನಿಸ್ಟರಾದ ಹಸರತ್ ಮೊಹಾನಿ ಮತ್ತು ಸ್ವಾಮಿ ಕುಮಾರಾನಂದ ಬ್ರಿಟಿಷ್ ಆಡಳಿತದಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸಿ ನಿರ್ಣಯವನ್ನು ಮುಂದಿಟ್ಟರು. ಆ ನಿರ್ಣಯವನ್ನು ಕಾಂಗ್ರೇಸು ತಿರಸ್ಕರಿಸಿತು, ಆದರೆ ಸಭೆಯಲ್ಲಿ ಇದರ ಪರವಾಗಿ ಪ್ರಬಲವಾಗಿ ಕೂಗು ಕೇಳಿ ಬಂದಿದ್ದು ಮತ್ತು ಅದನ್ನು ಗಂಭೀರವಾಗಿ ಪರಿಗಣಿಸಲಾಯಿತು ಎಂಬುದು, ಕಮ್ಯುನಿಸ್ಟ್ ವಿಚಾರಗಳು ವಸಾಹತುಶಾಹಿ ವಿರುದ್ಧದ ಚಳುವಳಿಯಲ್ಲಿ ಪರಿಣಾಮ ಬೀರಲಾರಂಭಿಸಿದ್ದವು ಎಂದು ತೋರಿಸಿದವು.

Meerut pitoorigararru

ಕಮ್ಯುನಿಸ್ಟ್ ವಿಚಾರಗಳು ದೇಶದಲ್ಲೆಲ್ಲ ಪಸರಿಸಲು ಆರಂಭಿಸುತ್ತಿದಂತೆ ತನ್ನ ಸಾಮ್ರಾಜ್ಯದ ಮೇಲೆ ಆಗಬಹುದಾದ ಪರಿಣಾಮಗಳಿಂದ ಬ್ರಿಟಿಷರು ನಿದ್ದೆಗೆಟ್ಟು ಕಮ್ಯುನಿಸ್ಟರ ವಿರುದ್ಧ ಪಿತೂರಿ ಮೊಕದ್ದಮೆಗಳನ್ನು ಹೂಡಿದರು. ಇದರ ಪರಿಣಾಮ 1921 ಮತ್ತು 1933ರ ನಡುವೆ ಹಲವಾರು ಕಮ್ಯುನಿಸ್ಟ್ ನಾಯಕರಿಗೆ ಜೈಲು ಶಿಕ್ಷೆ ವಿಧಿಸಲಾಯಿತು. ಅದರಲ್ಲಿ ಮೀರತ್ ಪಿತೂರಿ ಪ್ರಕರಣ (1929-1933) ಅತ್ಯಂತ ಪ್ರಮುಖವಾದುದು. ಕಮ್ಯುನಿಸ್ಟರನ್ನು ಹತ್ತಿಕ್ಕಲು ಈ ಪ್ರಕರಣವನ್ನು ಹೂಡಲಾಗಿತ್ತಾದರೂ, ಮಾರ್ಕ್ಸ್‌ವಾದಿ ವಿಚಾರಗಳನ್ನು ಕೊಂಡೊಯ್ಯಲು ಇದೇ ಅತ್ಯುತ್ತಮ ವೇದಿಕೆಯಾಯಿತು. ಈ ಅವಕಾಶವನ್ನು ಬಳಸಿಕೊಂಡ ಕಮ್ಯುನಿಸ್ಟರು ನ್ಯಾಯಾಲಯದ ಕಟಕಟೆಯಲ್ಲಿ ತಮ್ಮ ಮಾರ್ಕ್ಸ್‌ವಾದಿ ವಿಚಾರಗಳನ್ನು ಸಮರ್ಥಿಸಿ ಉತ್ಸಾಹದಿಂದ ವಿವರಿಸಿದರು, ಇದರಿಂದ ಭಾರತದ ಜನಸಾಮಾನ್ಯರ ನಡುವೆ ಕಮ್ಯುನಿಸ್ಟ್ ವಿಚಾರಗಳು ಹರಡಲು ಸಹಾಯವಾಯಿತು. ಈ ಪಿತೂರಿಯಡಿ ಬಂಧಿತರಾದ 33 ಜನರಲ್ಲಿ 27 ಜನರನ್ನು ತಪ್ಪಿತಸ್ಥರೆಂದು ಪರಿಗಣಿಸಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. 1934ರಲ್ಲಿ ಬ್ರಿಟಿಷ್ ಸರ್ಕಾರ ಕಮುನಿಸ್ಟ್ ಪಕ್ಷ ಮತ್ತು ಅದರ ಸಂಘಟನೆಗಳನ್ನು ನಿಷೇಧಗೊಳಿಸಿತು, ಅದರ ಸದಸ್ಯತ್ವ ಹೊಂದುವುದು ಅಪರಾಧ ಎಂದು ಫರ್ಮಾನು ಹೊರಡಿಸಿತು. ಇದಕ್ಕೆಲ್ಲ ಲೆಕ್ಕಿಸದ ಕಮ್ಯುನಿಸ್ಟರು ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ರಹಸ್ಯವಾಗಿಯೇ ಮುಂದುವರೆಸಿ, ಪಕ್ಷದ ತಲುಪುವಿಕೆ ಮತ್ತು ಸದಸ್ಯತ್ವವನ್ನು ವಿಸ್ತರಿಸಿದರು.

ಬಂಡವಾಳಶಾಹಿ ಜಗತ್ತಿಗೆ ದೊಡ್ಡ ಪೆಟ್ಟನ್ನು ನೀಡಿದ ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ಸೋವಿಯತ್ ಒಕ್ಕೂಟ ಯಶಸ್ವಿಯಾದದ್ದನ್ನು ಕಂಡು ವಿಶ್ವದ ಉದ್ದಕ್ಕೂ ಗಣನೀಯ ಸಂಖ್ಯೆಯಲ್ಲಿ ಜನರು ಸಮಾಜವಾದ ಮತ್ತು ಮಾರ್ಕ್ಸ್‌ವಾದದ ಕಡೆ ಆಕರ್ಷಿತರಾದರು. ಭಾರತ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಭಾರತದಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ನಿಷೇಧಿಸಿದ್ದರೂ ಕೂಡ ಕಮ್ಯುನಿಸ್ಟರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಸೇರಿದಂತೆ ರಾಷ್ಟ್ರೀಯ ಚಳುವಳಿಯ ಭಾಗವಾಗಿದ್ದ ವಿವಿಧ ಸಂಘಟನೆಗಳಲ್ಲಿ ತಮ್ಮ ಚಟುವಟಿಕೆಗಳನ್ನು ಮುಂದುವರಿಸಿದರು. ತಮ್ಮ ಪಕ್ಷದ ಚಟುವಟಿಕೆಗಳನ್ನು ರಹಸ್ಯವಾಗಿ ನಡೆಸಿ ಹಲವಾರು ಯುವಜನರನ್ನು ಪಕ್ಷದ ಕಡೆ ಸೆಳೆದರು. ಈ ರೀತಿಯಲ್ಲಿ ಕಮ್ಯುನಿಸ್ಟ್ ಚಳುವಳಿಗೆ ಸೇರಿದ ಹಲವಾರು ಯುವಕರು ಮುಂದೆ ಪ್ರಭಾವಿ ನಾಯಕರಾಗಿ ಹೊರಹೊಮ್ಮಿದರು. ಕಾಂಗ್ರೇಸ್ ಸಮಾಜವಾದಿ ಪಾರ್ಟಿ (ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ಸಿನಲ್ಲಿದ್ದ ಎಡ ಬಣ) ಸೇರಿದಂತೆ ವಿವಿಧ ವೇದಿಕೆಗಳನ್ನು ಬಳಸಿ ವಿಶಾಲವಾದ ಜನಸಮುದಾಯವನ್ನು ವರ್ಗ ಮತ್ತು ಸಾಮೂಹಿಕ ಸಂಘಟನೆಗಳಾದ ರೈತ, ಕಾರ್ಮಿಕ, ವಿದ್ಯಾರ್ಥಿ ಮತ್ತು ಬರಹಗಾರರ ಸಂಘಟನೆಗಳ ಮೂಲಕ ಸಂಘಟಿಸಿ ಕಮ್ಯುನಿಸ್ಟರು ರಭಸವಾಗಿ ಚಳುವಳಿಗೆ ಮುನ್ನುಗ್ಗಿದರು

ಸಾಮೂಹಿಕ ಮತ್ತು ವರ್ಗ ಸಂಘಟನೆಗಳ ಬೆಳವಣಿಗೆ

ಚಳುವಳಿಯು ಪ್ರೌಢಾವಸ್ಥೆಗೆ ಕಾಲಿಡುತ್ತಿದ್ದಂತೆ ಪೂರ್ಣ ಸ್ವಾತಂತ್ರ್ಯವನ್ನು ಸಾಧಿಸಲು ಕಮ್ಯುನಿಸ್ಟರು ಕಾರ್ಮಿಕ ವರ್ಗ ಮತ್ತು ರೈತಾಪಿ ವರ್ಗದ ಮೈತ್ರಿಯ ಪ್ರಾಮುಖ್ಯತೆಯನ್ನು ಗುರುತಿಸಿದರು. ವಸಾಹತುಶಾಹಿ ಆಡಳಿತ ಯಂತ್ರ ಮತ್ತು ಅದರ ಸಾರಿಗೆ – ಸಂಪರ್ಕವನ್ನು ದುರ್ಬಲಗೊಳಿಸಲು ಕ್ರಾಂತಿಕಾರಿ ಶ್ರಮಜೀವಿಗಳ ಪಾತ್ರ ಅತ್ಯಂತ ಮುಖ್ಯವಾದದು ಎಂದು ತಿಳಿದು ಕಮ್ಯುನಿಸ್ಟ್ ಚಟುವಟಿಕೆಗಳನ್ನು ನಡೆಸಿದ ಪರಿಣಾಮ ದೇಶದ ಉದ್ದಗಲಕ್ಕೂ 6 ಲಕ್ಷ ಕಾರ್ಮಿಕರನ್ನೊಳಗೊಂಡ ದುಡಿಯುವ ವರ್ಗದ ಹೋರಾಟದ ಅಲೆಯೇ ಮೂಡಿಬಂತು.

ಕಾರ್ಮಿಕ ವರ್ಗ ಮಾತ್ರವಲ್ಲದೆ, ರಾಷ್ಟ್ರೀಯ ಚಳುವಳಿಯಲ್ಲಿ ವಿದ್ಯಾರ್ಥಿಗಳು, ಯುವಜನ ಮತ್ತು ಬುದ್ಧಿಜೀವಿಗಳ ಪಾತ್ರವನ್ನು ಗುರುತಿಸಿದ ಕಮ್ಯುನಿಸ್ಟರು ಕ್ರಾಂತಿಕಾರಿ ಉದ್ದೇಶಕ್ಕಾಗಿ ಅವರನ್ನು ಕೂಡ ಅಣಿನೆರೆಸಲು ಮುಂದಾದರು.

ಮುಖ್ಯವಾಗಿ ಭಾರತದಲ್ಲಿ ಶೇಕಡ 80ರಷ್ಟು ಜನಸಂಖ್ಯೆ ಕೃಷಿ ಅವಲಂಬಿತ ಸಮಾಜದಲ್ಲಿ ಬದುಕುತ್ತಿರುವುದನ್ನು ಗಮನಿಸಿದ ಕಮ್ಯುನಿಸ್ಟರು, ರೈತರನ್ನು ಸಂಘಟಿಸಿದಾಗ ಮಾತ್ರ ದೇಶದ ವಿಮೋಚನೆ ಸಾಧ್ಯ ಎಂದು ಅರಿತರು. ಈ ಕಾರಣ ಆರಂಭದಲ್ಲಿ ಕೇವಲ ನಗರ ಪ್ರದೇಶಗಳನ್ನೆ ಕೇಂದ್ರವಾಗಿಸಿಕೊಂಡಿದ್ದ ಕಮ್ಯುನಿಸ್ಟ್ ಚಟುವಟಿಕೆಗಳು ತರುವಾಯ ಭಾರತದ ಗ್ರಾಮೀಣ ಭಾಗದಲ್ಲಿ ವಿಸ್ತರಿಸಿದವು.

ಈ ಮೂಲಕ ಭಾರತದ ಕಮ್ಯುನಿಸ್ಟರು 1936ರಲ್ಲಿ ಹಲವಾರು ಸಾಮೂಹಿಕ ಸಂಘಟನೆಗಳನ್ನು ಹುಟ್ಟು ಹಾಕಿದರು: ಅವುಗಳೆಂದರೆ ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್‌), ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟ (ಎಐಎಸ್‌ಎಫ್‌), ಪ್ರಗತಿಪರ ಬರಹಗಾರರ ಸಂಘ (ಪಿಡಬ್ಲ್ಯೂಎ) ಮತ್ತು 1943ರಲ್ಲಿ ಆರಂಭವಾದ ಇಪ್ಟಾ. ಮೊಟ್ಟಮೊದಲ ಬಾರಿಗೆ ಕೃಷಿಕೂಲಿ ಕಾರ್ಮಿಕರ ಸಂಘಟನೆಯನ್ನು ಕೂಡ ಕಮ್ಯುನಿಸ್ಟರೇ ಪ್ರಾರಂಭಿಸಿದರು. ಇವೆಲ್ಲ ಸಂಘಟನೆಗಳು ವಿವಿಧ ವರ್ಗಗಳ ಜನರ ಹಕ್ಕುಗಳಿಗಾಗಿ ಹೋರಾಡುತ್ತಲೆ ಜನರ ನಡುವೆ ಕ್ರಾಂತಿಕಾರಿ ಪ್ರಜ್ಞೆಯನ್ನು ಮೂಡಿಸಲು ಯತ್ನಿಸಿದವು.

ಕಮ್ಯುನಿಸ್ಟ್ ಚಳುವಳಿಯು ಭಾರತಕ್ಕೆ ಗ್ರಾಮೀಣ ಭಾಗಕ್ಕೆ ಕಾಲಿಡುತ್ತಿದ್ದಂತೆ, ಅಲ್ಲಿ ಬೇರೂರಿದ್ದ ಜಾತಿ ಮತ್ತು ವರ್ಗದ ಮಿಶ್ರಣವಾಗಿದ್ದ ಭಾರತದ ಪಾಳೇಗಾರಿ ವ್ಯವಸ್ಥೆ ವಿರುದ್ಧ ಸೆಣಸಬೇಕಾಗಿತ್ತು. ಗ್ರಾಮೀಣ ಭಾರತದಲ್ಲಿ ರೈತರ ಮೇಲಿನ ಭೂಮಾಲಿಕ ವರ್ಗ, ಸಾಲದಾರರು ಮತ್ತು ಸರ್ಕಾರಿ ಅಧಿಕಾರಿಗಳ ವಿಪರೀತ ದಬ್ಬಾಳಿಕೆ ಮತ್ತು ಶೋಷಣೆ ವ್ಯಾಪಕವಾಗಿತ್ತು. ಸಾಲದಾರರಿಗೆ ಸಾಲ ಮತ್ತು ಗೇಣಿ ನೀಡಿದ ನಂತರ ತಾನು ಬೆಳೆದ ಆಹಾರವೇ ರೈತ ಕುಟುಂಬಕ್ಕೆ ಸಾಕಾಗುತ್ತಿರಲಿಲ್ಲ. ಸಾಲದ ಸುಳಿಯಲ್ಲಿ ಸಿಲುಕಿದ ರೈತರ ದೊಡ್ಡ ವಿಭಾಗ ಭೂಮಿಯನ್ನು ಕಳೆದುಕೊಂಡು ಗೇಣಿದಾರರಾಗಿ ದುಡಿಯುತ್ತಿದ್ದರು. ಹೆಚ್ಚಾಗಿ ಅಸ್ಪೃಶ್ಯ ಜಾತಿಗಳಿಗೆ ಸೇರಿದ ಭೂರಹಿತ ಕೂಲಿಕಾರರ ಪರಿಸ್ಥಿತಿ ಇದಕ್ಕಿಂತ ಕೆಳಮಟ್ಟದಲ್ಲಿತ್ತು. ಅವರನ್ನು ದೈಹಿಕ ದಂಡನೆಯ ಬೆದರಿಕೆ ಮತ್ತು ಸಮಾಜದ ಕಟ್ಟುಪಾಡುಗಳಿಂದ ಬಲಾತ್ಕಾರವಾಗಿ ವೇತನರಹಿತ ದುಡಿಮೆಗಾರರನ್ನಾಗಿ ಮಾಡಿ, ಸಾಮಾಜಿಕವಾಗಿ ವಿಧಿಸಿದ ಪಶುಸಮಾನ ಸ್ಥಿತಿಗೆ ದಬ್ಬಲಾಗಿತ್ತು. ಹಳ್ಳಿಗಳಲ್ಲಿ ಕಮ್ಯುನಿಸ್ಟರು ಮೊಟ್ಟಮೊದಲು ಇಟ್ಟ ಹೆಜ್ಜೆ ಅಸ್ಪೃಶ್ಯತೆಯ ವಿರುದ್ಧವೇ ಆಗಿತ್ತು, ಅದರ ಜೊತೆ ಅವರು ಕನಿಷ್ಠ ವೇತನಕ್ಕಾಗಿ ಮತ್ತು ಬಲವಂತದ ದುಡಿಮೆಯ ವಿರುದ್ಧವಾಗಿ ಅನೇಕ ಹೋರಾಟಗಳನ್ನು ಸಂಘಟಿಸಿದರು.

ಕಮ್ಯುನಿಸ್ಟರ ನಾಯಕತ್ವದಲ್ಲಿ ರೈತರು ಬಹುದೊಡ್ಡ ರೀತಿಯಲ್ಲಿ ಸಂಘಟಿತರಾದರು. ಕಮ್ಯುನಿಸ್ಟ್ ನಾಯಕತ್ವದ ಅಖಿಲ ಭಾರತ ಕಿಸಾನ್ ಸಭಾದ ಸದಸ್ಯತ್ವ ಮೇ 1938ರಲ್ಲಿ 6 ಲಕ್ಷ ಇದ್ದು ಏಪ್ರಿಲ್ 1939ರ ವೇಳೆಗೆ 8 ಲಕ್ಷಕ್ಕೆ ಏರಿತು. ರೈತ ಚಳುವಳಿ ಹಲವು  ಬೇಡಿಕೆಗಳನ್ನು ಮುಂದಿಟ್ಟಿತು. ಭೂಮಾಲಿಕತ್ವವನ್ನು ನಾಶಗೊಳಿಸುವುದು, ಉಳುಮೆ ಮಾಡುವ ರೈತರಿಗೆ ಭೂಮಿಯ ಹಕ್ಕನ್ನು ನೀಡುವುದು, ಒತ್ತಾಯದ ದುಡಿಮೆ ಕೊನೆಗಾಣಿಸುವುದು ಮತ್ತು ಭೂಮಾಲಿಕರ ಅಡಿಯಿದ್ದ ಗೇಣಿದಾರ ರೈತರನ್ನು ಕಾನೂನುಬಾಹಿರ ಸುಲಿಗೆಗಳಿಂದ ಮತ್ತು ಬಲವಂತದ ದುಡಿಮೆಗಳಿಂದ ಮುಕ್ತಗೊಳಿಸುವುದು, ಭೂರಹಿತ ರೈತರಿಗೆ ಭೂಮಿ ಹಂಚಿಕೆ, ಭೂ ಕಂದಾಯದಲ್ಲಿ ತೀವ್ರವಾದ ಬದಲಾವಣೆ ತರುವುದು ಮತ್ತು ಬೆಳೆಗಳಿಗೆ ಉತ್ತಮ ದರವನ್ನು ನಿಗದಿಪಡಿಸುವುದು – ಇವು ರೈತ ಚಳುವಳಿ ಮುಂದಿಟ್ಟ ಪ್ರಮುಖ ಬೇಡಿಕೆಗಳಾಗಿದ್ದವು.

ಕಮ್ಯುನಿಸ್ಟರು ರೈತರನ್ನು ಅಣಿ ನೆರೆಸುತ್ತಿದ್ದಂತೆ, ದೇಶದ ಅನೇಕ ಭಾಗಗಳಲ್ಲಿ ಕಾಂಗ್ರೇಸ್ ನಾಯಕತ್ವವು ಭೂಮಾಲೀಕ ಮತ್ತು ಭಾರತದ ಕೈಗಾರಿಕೋದ್ಯಮಿಗಳ ಜೊತೆ ಕೈ ಜೋಡಿಸಿತು. ಭೂಮಾಲೀಕ ವರ್ಗ ಮತ್ತು ಭಾರತದ ಕೈಗಾರಿಕೋದ್ಯಮಿಗಳು ಕಾಂಗ್ರೇಸಿಗೆ ಎರಡು ಪ್ರಧಾನ ಆಧಾರ ಸ್ತಂಭಗಳಾದರು. ಇದರ ಪರಿಣಾಮ ಕಾಂಗ್ರೇಸಿನ ಒಳಗಡೆ ಕಮ್ಯುನಿಸ್ಟರು ಮತ್ತು ಬಲಪಂಥಿಯರ ನಡುವೆ ತಿಕ್ಕಾಟಗಳು ಪ್ರಾರಂಭವಾದವು. ಕಾಂಗ್ರೇಸ್ ನೇತೃತ್ವದಲ್ಲಿ ರಚನೆಯಾದ ತಾತ್ಕಾಲಿಕ ಸರ್ಕಾರಗಳು ಭೂಮಾಲಿಕ ಮತ್ತು ಕೈಗಾರಿಕೊದ್ಯಮಿಗಳ ಬೆನ್ನಿಗೆ ಬೆಂಬಲವಾಗಿ ನಿಂತವು, ಬಲಪಂಥೀಯರ ಒತ್ತಡದ ಪರಿಣಾಮವಾಗಿ ಕಾಂಗ್ರೇಸ್ ಸಮಾಜವಾದಿ ಪಕ್ಷ ಕಮ್ಯುನಿಸ್ಟರನ್ನು ಉಚ್ಚಾಟಿಸಿತು. ಇದರ ಪರಿಣಾಮವಾಗಿ, ಧೀರ ಕಮ್ಯುನಿಸ್ಟ್ ನಾಯಕ ಮತ್ತು ಮುಂದೆ ಕೇರಳ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾದ ಇ.ಎಂ.ಎಸ್ ನಂಬೂದರಿಪಾಡ್ ರವರು ‘ವಿವಿಧ ರಾಜ್ಯಗಳಲ್ಲಿರುವ ಕಾಂಗ್ರೇಸ್ ಸಮಾಜವಾದಿ ಪಾರ್ಟಿಯ ಜಿಲ್ಲಾ ಮತ್ತು ಸ್ಥಳೀಯ ಶಾಖೆಗಳಿಗೆ (ಕೇರಳ ರಾಜ್ಯದ ಎಲ್ಲಾ ಕಾಂಗ್ರೇಸ್ ಸಮಾಜವಾದಿ ಪಾರ್ಟಿಯ ಶಾಖೆಗಳಿಗೆ) ಭಾರತ ಕಮ್ಯುನಿಸ್ಟ್‌ ಪಕ್ಷಕ್ಕೆ ಪರಿವರ್ತನೆಯಾಗಲು ಕರೆ ಕೊಡಲಾಯಿತು’ ಎಂದು ನೆನಪಿಸಿಕೊಂಡಿದ್ದಾರೆ.

ಎರಡನೆ ಜಾಗತಿಕ ಮಹಾಯುದ್ಧ

1939ರಲ್ಲಿ ಎರಡನೆ ಜಾಗತಿಕ ಮಹಾಯುದ್ಧ ಸ್ಫೋಟವಾಯಿತು, ಬ್ರಿಟನ್ ಭಾರತದ ಜನ ಪ್ರತಿನಿಧಿಗಳ ಒಪ್ಪಿಗೆ ಪಡೆಯದೇ ಭಾರತವನ್ನು ಮಹಾಯುದ್ಧದ ಅಂಗಳಕ್ಕೆ ನೂಕಿತು. ಈ ಮಹಾಯುದ್ಧದಿಂದ ದಿನಬಳಕೆಯ ವಸ್ತುಗಳು ಗಗನಕ್ಕೇರಿದ್ದರಿಂದ ಭಾರತೀಯ ಜನರಿಗೆ ಸಂಕಷ್ಟ ಎದುರಾಯಿತು. ಆಗ ಭಾರತ ಕಮ್ಯುನಿಸ್ಟ್ ಪಕ್ಷ ಪ್ರಾಮಾಣಿಕವಾಗಿ ಯುದ್ಧವನ್ನು ವಿರೋಧಿಸಿ ಬೃಹತ್ ಹೋರಾಟಗಳನ್ನು ಸಂಘಟಿಸಿತು. ಇದರಿಂದ ಕುಪಿತರಾದ ಬ್ರಿಟಿಷರು ಹೆಚ್ಚಿನ ಸಂಖ್ಯೆಯಲ್ಲಿ ಕಮ್ಯುನಿಸ್ಟರನ್ನು ಬಂಧಿಸಿದರು. ಮೇ 1941ರ ಹೊತ್ತಿಗೆ ಇಡಿ ಕಮ್ಯುನಿಸ್ಟ್ ಪಕ್ಷದ ನಾಯಕತ್ವ ಜೈಲು ಸೇರಿತ್ತು.

22ನೇ ಜೂನ್ 1941ರಲ್ಲಿ ನಾಜೀ ಜರ್ಮನಿ ಸೋವಿಯತ್ ಒಕ್ಕೂಟದ ಮೇಲೆ ದಾಳಿ ಮಾಡಿದಾಗ ಯುದ್ಧದ ಸ್ವರೂಪವು ಬದಲಾಯಿತು, ಮೊದಲ ಹಂತದಲ್ಲಿ ಸಾಮ್ರಾಜ್ಯಶಾಹಿಗಳ ನಡುವಿನ ಯುದ್ಧವಾಗಿದ್ದ ಇದು ನಂತರ ಫ್ಯಾಸಿಸಂ ವಿರುದ್ಧ ವಿಶ್ವದ ಜನರ ಯುದ್ಧವಾಗಿ ಬದಲಾಯಿತು. ಆಗ ಹಿಟ್ಲರ್‌ನ ಫ್ಯಾಸಿಸಂನ್ನು ಪ್ರಮುಖ ಶತ್ರು ಎಂದು ಪರಿಗಣಿಸಬೇಕೆಂದು ಕಾರ್ಮಿಕರ  ಅಂತರ್‌ ರಾಷ್ಟ್ರೀಯವು ವಿಶ್ವದ ಎಲ್ಲ ಕಮ್ಯುನಿಸ್ಟ್ ಪಕ್ಷಗಳಿಗೆ ಕರೆ ನೀಡಿತು. ಮಾನವಕುಲವನ್ನು ರಕ್ಷಿಸಿ, ವಿಶ್ವ ಕ್ರಾಂತಿಯ ನೆಲೆಯನ್ನು ಕಾಪಾಡಲು ಬ್ರಿಟನ್, ಅಮೇರಿಕಾ ಜೊತೆ ಸೇರಿ ಸೋವಿಯತ್ ಒಕ್ಕೂಟವು ಫ್ಯಾಸಿಸಂ ಮೇಲೆ ಯುದ್ಧವನ್ನು ಗೆಲ್ಲಬೇಕಿದೆ ಎಂದಿತು. (ಕಮ್ಯುನಿಸ್ಟ್ ಪಕ್ಷದ ಪೊಲಿಟ್ ಬ್ಯೂರೋ ನಿರ್ಣಯ, 15 ಡಿಸೆಂಬರ್ 1941)

ಬ್ರಿಟಿಷರೊಂದಿಗೆ ಕಾಂಗ್ರೇಸ್ ಸಂಧಾನದಲ್ಲಿತ್ತು. ಬ್ರಿಟಷರು ಅನೇಕ ರಿಯಾಯಿತಿಗಳನ್ನು ನೀಡಲು ಒಪ್ಪಿದರು, ಆದರೆ ಯುದ್ಧದ ನಂತರ ಮಾತ್ರ ಅಧಿಕಾರ ಹಸ್ತಾಂತರ ಮಾಡುವುದಾಗಿ ಹೇಳಿದರು. ಈ ಸಂಧಾನಗಳು ಮುರಿದು ಬಿದ್ದವು. ಜಪಾನ್ ಪಡೆಗಳು ಮುನ್ನುಗ್ಗಿ ಬ್ರಿಟಿಷ್ ಆಕ್ರಮಿತ ಪ್ರದೇಶಗಳಾದ ಸಿಂಗಾಪುರ, ಬರ್ಮಾ, ಮಲಯಾ ಮತ್ತು ಅಂಡಮಾನ್ ದ್ವೀಪಗಳನ್ನು ವಶಪಡಿಸಿಕೊಳ್ಳುತ್ತಿದ್ದಂತೆ ಭಾರತದ ಮೇಲೆ ಜಪಾನಿನ ಆಕ್ರಮಣದ ಬೆದರಿಕೆ ಹೆಚ್ಚಾಯಿತು. ಇದೇನೆ ಇದ್ದರೂ ಫ್ಯಾಸಿಸಂ ವಿರುದ್ಧ ದೀರ್ಘಕಾಲ ಪ್ರಚಾರ ಮಾಡಿದ್ದ ಕಾಂಗ್ರೇಸ್ ‘ಕ್ವಿಟ್ ಇಂಡಿಯಾ’ ಚಳುವಳಿಗೆ ಕರೆ ಕೊಟ್ಟಿತು. ವಸಾಹತುಶಾಹಿ ಆಡಳಿತಗಾರರು ಭಾರತವನ್ನು ಸಂಪೂರ್ಣವಾಗಿ ತೊರೆಯಬೇಕು ಎಂದು ಒತ್ತಾಯಿಸಿತು ಮತ್ತು ಬ್ರಿಟಿಷರು ಶೀಘ್ರವಾಗಿ ರಾಜಿ ಮಾಡಿಕೊಳ್ಳಲು ಒತ್ತಡ ಹೇರಿತು.

ಅಖಿಲ ಭಾರತ ಕಾಂಗ್ರೇಸ್‌ ಸಮಿತಿಯ ಕ್ವಿಟ್ ಇಂಡಿಯಾ ಕರೆಯನ್ನು ಕಮ್ಯುನಿಸ್ಟರು ವಿರೋಧಿಸಿದರು. ಫ್ಯಾಸಿಸ್ಟ್ ಶಕ್ತಿಗಳು ಜಾಗತಿಕವಾಗಿ ಬೆಳೆಯುತ್ತಿರುವ ಅಪಾಯವನ್ನು ಗಮನಿಸಿದ ಅವರು ಈ ಕರೆ ಈ ಸಮಯದಲ್ಲಿ ಸೂಕ್ತವಲ್ಲ ಎಂದು ಅಭಿಪ್ರಾಯಪಟ್ಟರು. ಮಿತ್ರರಾಷ್ಟ್ರಗಳ ದುರ್ಬಲಗೊಳಿಸುವಿಕೆ ಫ್ಯಾಸಿಸ್ಟ್ ವಿರೋಧಿ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು. ಆದರೆ ವಸಾಹತುಶಾಹಿಯ ಯಾವುದೇ ಪ್ರಸ್ತಾಪವನ್ನು ಒಪ್ಪಲು ದೇಶದ ಜನರು ಸಿದ್ಧರಿರಲಿಲ್ಲ, ಹೀಗಾಗಿ ಕಮ್ಯುನಿಸ್ಟರ ಈ ನಿಲುವು ಆ ಸಮಯದಲ್ಲಿ ದೇಶದ ಜನರ ಭಾವನೆಗಳಿಗೆ ವಿರುದ್ಧವಾಗಿತ್ತು.

ಭಾರತ ಸ್ವಾತಂತ್ರ್ಯ ಪಡೆದ ನಂತರ ಈ ನಿಲುವನ್ನು ಕಮ್ಯುನಿಸ್ಟ್ ಪಕ್ಷ ಪುನಃ ಪರಿಶೀಲಿಸಿತು, ಕ್ವಿಟ್ ಇಂಡಿಯಾ ಚಳುವಳಿಯ ಸಮಯದಲ್ಲಿ ಜನರ ಮನಸ್ಥಿತಿಯ ವಿರುದ್ಧವಾಗಿ ಹೋಗಿದ್ದು ಗಂಭೀರ ತಪ್ಪು ಎಂದು ತೀರ್ಮಾನಿಸಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನತೆಯ ಯುದ್ಧವನ್ನು ಬೆಂಬಲಿಸುವ ಜೊತೆಗೆ, ಭಾರತದಲ್ಲಿ ಬ್ರಿಟಿಷ ವಸಾಹತುಶಾಹಿಗಳ ವಿರುದ್ಧದ ಕ್ವಿಟ್ ಇಂಡಿಯಾ ಚಳುವಳಿಯನ್ನು ಬೆಂಬಲಿಸಿ ಜನರ ಬೆನ್ನಿಗೆ ನಿಲ್ಲಬೇಕಾಗಿತ್ತು ಎಂದು ಸಿಪಿಐ ಅಭಿಪ್ರಾಯ ಪಟ್ಟಿತು. ಕಾಂಗ್ರೇಸ್‌ ಕ್ವಿಟ್ ಇಂಡಿಯಾ ಚಳುವಳಿಗೆ ಕರೆ ನೀಡುತ್ತಿದ್ದಂತೆ ಅದರ ಮುಂಚೂಣಿ ನಾಯಕರನ್ನು ಜೈಲಿಗೆ ತಳ್ಳಲಾಯಿತು, ಈ ಚಳುವಳಿಯನ್ನು ಹತ್ತಿಕ್ಕಲು ಬ್ರಿಟಿಷರು ತೀವ್ರ ಬಲ ಪ್ರಯೋಗಿಸಿದರು. ಕಾಂಗ್ರೇಸಿಗೆ ಇಂತಹ ಸಂದರ್ಭದಲ್ಲಿ ಹೋರಾಟವನ್ನು ಹೇಗೆ ಕೊಂಡೊಯ್ಯಬೇಕು ಎಂಬ ಕಣ್ಣೋಟ ಇರಲಿಲ್ಲ. ಈ ಕರೆಗೆ ವಿರುದ್ಧದ ಹೊರತಾಗಿಯೂ, ಕಮ್ಯುನಿಸ್ಟರು ಜೈಲಿನಲ್ಲಿದ್ದ ಕಾಂಗ್ರೇಸ್‌ ನಾಯಕರ ಬಿಡುಗಡೆಗಾಗಿ ಹೋರಾಟ ನಡೆಸಿದರು ಮತ್ತು ರಾಷ್ಟ್ರೀಯ ಏಕತಾ ಸರ್ಕಾರವನ್ನು ರಚಿಸಬೇಕೆಂದು ಒತ್ತಾಯಿಸಿದರು.

Beekara Bangala Baragala1934ರಲ್ಲಿ ಹೇರಿದ್ದ ಕಮ್ಯುನಿಸ್ಟ್ ಪಕ್ಷದ ನಿಷೇಧವನ್ನು 1942ರ ಜುಲೈ ತಿಂಗಳಲ್ಲಿ ತೆರವುಗೊಳಿಸಿ ಕಮ್ಯುನಿಸ್ಟರನ್ನು ಜೈಲಿನಿಂದ ಬಿಡುಗಡೆಗೊಳಿಸಲಾಯಿತು. ಈ ಜಾಗತಿಕ ಯುದ್ಧದ ಮಧ್ಯೆ 1943-44ರ ಸುಮಾರಿನಲ್ಲಿ ಭೀಕರ ಬಂಗಾಳ ಬರಗಾಲದ ಪರಿಣಾಮವಾಗಿ ಬಂಗಾಳ, ಓರಿಸ್ಸಾ, ಬಿಹಾರ ಮತ್ತು ಅಸ್ಸಾಂನಲ್ಲಿ 30 ಲಕ್ಷ ಜನ ಸಾವನ್ನಪ್ಪಿದರು. ಅರ್ಥಶಾಸ್ತ್ರಜ್ಞೆ ಉತ್ಸಾ ಪಟ್ನಾಯಕ್ ಹೇಳುವ ಪ್ರಕಾರ “ಬ್ರಿಟಿಷರು ದಕ್ಷಿಣ ಏಷ್ಯಾದಲ್ಲಿ ಜಪಾನಿನ ವಿರುದ್ಧದ ಯುದ್ಧಕ್ಕಾಗಿ ಮಿತ್ರರಾಷ್ಟ್ರಗಳಿಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ‘ಲಾಭದ-ಉಬ್ಬರ’ ಸೃಷ್ಟಿಸಿದ ಮತ್ತು ಜನರ ಜೀವನಾವಶ್ಯಕ ವಸ್ತುಗಳನ್ನು ಕಡಿತಗೊಳಿಸಿದ ಪ್ರಜ್ಞಾಪೂರ್ವಕ ನೀತಿಯ ಪರಿಣಾಮವಾಗಿ ಈ ಬರಗಾಲ ಸಂಭವಿಸಿತು.” ಈ ಸಂದರ್ಭದಲ್ಲಿ ಕಮ್ಯುನಿಸ್ಟರು ಜನರಿಗೆ ಆಹಾರ ಮತ್ತು ಅಗತ್ಯ ವಸ್ತುಗಳನ್ನು ಪೂರೈಸಲು ಹಗಲು ರಾತ್ರಿಯೆನ್ನದೇ ದುಡಿದರು, ಅಕ್ರಮವಾಗಿ ಆಹಾರ ಧಾನ್ಯಗಳು ಸೇರಿದಂತೆ, ಜೀವನಾವಶ್ಯಕ ವಸ್ತುಗಳನ್ನು ದಾಸ್ತಾನು ಮಾಡಿದ್ದ ವ್ಯಾಪಾರಿ ವರ್ಗ ಮತ್ತು ಭೂಮಾಲೀಕ ವರ್ಗದ ವಿರುದ್ಧ ಚಳುವಳಿಯನ್ನು ಕಟ್ಟಿದರು ಮತ್ತು ಅವರಿಗೆ ನೆರವು ನೀಡುತ್ತಿದ್ದ ಬ್ರಿಟಿಷ್ ಆಡಳಿತಗಾರರ ಜನವಿರೋಧಿ ಪಾತ್ರವನ್ನು ಬಯಲಿಗೆಳೆದರು. ಮಾನವ ಕಳ್ಳಸಾಗಾಣಿಕೆಯಿಂದ ಯುವತಿಯರನ್ನು ರಕ್ಷಿಸಲು ಮಹಿಳಾ ಆತ್ಮರಕ್ಷಾ ಸಮಿತಿಯನ್ನು ರಚಿಸಲಾಯಿತು, ಸ್ವಯಂಸೇವಕರು ಮತ್ತು ವೈದ್ಯಕೀಯ ತಂಡಗಳನ್ನು ಸಜ್ಜುಗೊಳಿಸಿ ಪರಿಹಾರ ಕಾರ್ಯಗಳಿಗೆ ಕಳುಹಿಸಲಾಯಿತು. ಇಂತಹ ದಣಿವಿಲ್ಲದ ಕೆಲಸದ ಪರಿಣಾಮವಾಗಿ, ಯುದ್ಧದ ಕುರಿತು ಜನರ ಭಾವನೆಗಳ ವಿರುದ್ಧದ ನಿಲುವನ್ನು ತೆಗೆದುಕೊಂಡಿದ್ದರೂ ಸಹ, ಕಮ್ಯುನಿಸ್ಟ್ ಪಕ್ಷಕ್ಕೆ ಜನಸಮೂಹದ ಬೆಂಬಲ ಗಮನಾರ್ಹವಾಗಿ ಹೆಚ್ಚಾಯಿತು. ಇದರ ಮೂಲಕ ಕಮ್ಯುನಿಸ್ಟರು ತಮ್ಮ ಸ್ವತಂತ್ರ ಶಕ್ತಿಯನ್ನು ಉಳಿಸಿಕೊಂಡರು.

ಯುದ್ಧಾನಂತರದ ಹೋರಾಟಗಳ ಅಲೆ

ಎರಡನೇ ಜಾಗತಿಕ ಮಹಾಯುದ್ಧವು ಅಂತ್ಯವಾದ ನಂತರ, ಭಾರತದಲ್ಲಿ ಜನಸಮೂಹದ ಹೋರಾಟಗಳ ಅಲೆಯೇ ಎದ್ದಿತು. ಅವುಗಳಲ್ಲಿ ಹಲವು ಹೋರಾಟಗಳ ನೇತೃತ್ವವನ್ನು ಕಮ್ಯುನಿಸ್ಟ್ ಪಕ್ಷ ವಹಿಸಿತ್ತು. ಯುದ್ಧದ ಸಮಯದಲ್ಲಿ ದೇಶದ ವಿವಿಧ ಪ್ರದೇಶಗಳಲ್ಲಿ ಕಟ್ಟಿದ್ದ ಪಕ್ಷದ ಬಲವನ್ನು ಜನಸಮೂಹದ ಕಾರ್ಯಾಚರಣೆಗೆ ಸಜ್ಜುಗೊಳಿಸಲಾಯಿತು.

ಜಾಗತಿಕ ಯುದ್ಧ ಅಂತ್ಯ ಆಗುತ್ತಿದ್ದಂತೆ, ದೇಶದಲ್ಲಿ 50 ಲಕ್ಷದಿಂದ 70 ಲಕ್ಷದಷ್ಟು ಕಾರ್ಮಿಕರನ್ನು ಕೆಲಸದಿಂದ ವಜಾಮಾಡಲಾಯಿತು ಮತ್ತು ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿತು. ಇದರ ವಿರುದ್ಧ ಪ್ರತಿಭಟನೆಗಳ ಜೊತೆಗೇ ಭಾರತದ ಸ್ವಾತಂತ್ರಕ್ಕಾಗಿ ನಡೆಯುತ್ತಿರುವ ಚಳುವಳಿಯನ್ನು ಬಲಪಡಿಸಲು ಕಾರ್ಮಿಕ ವರ್ಗದ ಹೋರಾಟಗಳ ಅಲೆಯೇ ಮೂಡಿ ಬಂದಿತು. ಇದರಲ್ಲಿ ಅಂಚೆ ಕಛೇರಿ ಕಾರ್ಮಿಕರ ಹೋರಾಟ ಮತ್ತು 1946ರಲ್ಲಿ ನಡೆದ ರೈಲ್ವೆ ಕಾರ್ಮಿಕರ ಹೋರಾಟಗಳು ಸೇರಿದ್ದವು.

1946ರ ಫೆಬ್ರುವರಿಯಲ್ಲಿ ನಡೆದ ರಾಯಲ್ ಇಂಡಿಯನ್ ನೇವಿ (ಆರ್.ಐ.ಎನ್ – ರಿನ್) ನೌಕಾದಳದ ಸೈನಿಕರ ದಂಗೆ ಇತಿಹಾಸದಲ್ಲಿಯೇ ಮಹತ್ವದ ಹೋರಾಟವಾಗಿದೆ. ಬಾಂಬೆಯ ನೌಕಾದಳದ ಸೈನಿಕರು ಮುಷ್ಕರ ನಡೆಸಿ, ರಾಷ್ಟ್ರೀಯ ಹೋರಾಟದಲ್ಲಿ ಮುಂಚೂಣಿ ನಾಯಕತ್ವ ವಹಿಸಿದ್ದ ಪಕ್ಷಗಳ ಧ್ವಜಗಳನ್ನು ನೌಕೆಯಲ್ಲಿ ಹಾರಿಸಿದರು. ಅದರಲ್ಲಿ ಕೆಂಪು ಧ್ವಜವು ಸೇರಿತ್ತು. ನೌಕಾದಳದ ಸೈನಿಕರು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡು ಉನ್ನತ ಅಧಿಕಾರಿಗಳನ್ನೆಲ್ಲ ಬಂಧಿಸಿದರು. ಈ ಬಂಡಾಯಕ್ಕೆ ಭಾರತ ಕಮ್ಯುನಿಸ್ಟ್ ಪಕ್ಷ ಸಂಪೂರ್ಣ ಬೆಂಬಲ ಸೂಚಿಸಿ 1946ರ ಫೆಬ್ರುವರಿ 22ರಂದು ದೇಶವ್ಯಾಪಿ ಹೋರಾಟಕ್ಕೆ ಕರೆ ನೀಡಿತು. ಇದರ ಭಾಗವಾಗಿ ಲಕ್ಷಾಂತರ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಿದರು, ವ್ಯಾಪಾರಿಗಳು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟಿಸಿದರು ಮತ್ತು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿದರು. ಆದರೆ ಅಂತಿಮವಾಗಿ, ದಂಗೆಯೆದ್ದ ನೌಕಾಪಡೆ ಮುಷ್ಕರ ವಾಪಸ್ಸು ಪಡೆದು ಶರಣಾಯಿತು. ಆದರೆ ಕಮ್ಯುನಿಸ್ಟ್ ನೇತೃತ್ವದ ಹೋರಾಟಗಳ ಫಲವಾಗಿ ಅವರು ಗಳಿಸಿದ್ದ ಅಭೂತಪೂರ್ವ ಜನ ಬೆಂಬಲ ಅವರ ಪೂರ್ಣ ವಿನಾಶವನ್ನು ತಡೆಯಿತು.

ಈ ಅವಧಿಯಲ್ಲಿ ಭಾರತದ ವಿವಿಧ ಭಾಗಗಳಲ್ಲಿ ಭೂಮಾಲೀಕರ ಶೋಷಣೆಯ ವಿರುದ್ಧವಾಗಿ ಕಮ್ಯುನಿಸ್ಟರ ನೇತೃತ್ವದಲ್ಲಿ ರೈತರು ಬೃಹತ್ ರೀತಿಯಲ್ಲಿ ಸಂಘಟಿತರಾದರು. ಎಲ್ಲೆಡೆ ಸಿಪಿಐ ಪಕ್ಷ ಶತಮಾನಗಳಿಂದ ಹಳ್ಳಿಗಳಲ್ಲಿದ ಆರ್ಥಿಕ ಮತ್ತು ಸಾಮಾಜಿಕ ಶೋಷಣೆಯ ವಿವಿಧ ರಚನೆಗಳನ್ನು ಕೊನೆಗಾಣಿಸಲು ಪ್ರಯತ್ನಿಸಿತು. ಕೆಲವು ಪ್ರದೇಶಗಳಲ್ಲಿ ಕಮ್ಯುನಿಸ್ಟರ ನೇತೃತ್ವದ ರೈತ ಹೋರಾಟಗಳು ಸಶಸ್ತ್ರ ದಂಗೆಗಳಾಗಿ ಬದಲಾದವು. ಆಂಧ್ರ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ, ಬಂಗಾಳ, ಅಸ್ಸಾಂ, ತ್ರಿಪುರ ಮತ್ತು ಕಾಶ್ಮೀರದುದ್ದಕ್ಕೂ ರೈತರು ಮತ್ತು ರೈತ ಮಹಿಳೆಯರು ಬೃಹತ್ ರೀತಿಯಲ್ಲಿ ಸಂಘಟಿತರಾದರು. ಈ ಸಂಘಟಿತ ರೈತರ ಐಕ್ಯತೆಯು ಆಳುವ ವರ್ಗಗಳನ್ನು ಬೆಚ್ಚಿ ಬೀಳಿಸಿತು. ಇದನ್ನು ಅಡಗಿಸಲು ಆಳುವ ವರ್ಗಗಳು ತೀವ್ರ ಹಿಂಸಾಚಾರದ ಮಾರ್ಗವನ್ನು ಬಳಸಿದವು. ಅಂತಿಮವಾಗಿ ರೈತರು ತಾವು ಹೋರಾಡುತ್ತಿದ್ದ ಹಲವಾರು ಹಕ್ಕುಗಳಿಗಾಗಿ ವಿಜಯ ಸಾಧಿಸಿ ಕಮ್ಯುನಿಸ್ಟ್ ಚಳುವಳಿಗೆ ಹೆಚ್ಚಿನ ಬಲ ತುಂಬಿದರು.

Tebhaga movement, kisan volunteers corps bengal (1)ತೇಭಾಗ ಚಳುವಳಿ

1946 ರಿಂದ 1950ರವರೆಗೆ ಕಮ್ಯುನಿಸ್ಟ್ ನೇತೃತ್ವದ ಅಖಿಲ ಭಾರತ ಕಿಸಾನ್‌ ಸಭಾದ ಅಡಿಯಲ್ಲಿ ಬಂಗಾಳದಲ್ಲಿ ನಡೆದ ತೇಭಾಗ ಚಳುವಳಿಯು ರೈತವರ್ಗದ ಅತ್ಯಂತ ಪ್ರಮುಖವಾದ ಭಾರೀ ಹೋರಾಟವಾಗಿತ್ತು. ಪಾಲುದಾರ ಗೇಣಿ ರೈತರು ತಾವು ಬೆಳೆದ ಬೆಳೆಯಲ್ಲಿ ಕೇವಲ ಅರ್ಧದಷ್ಟು ಪಾಲನ್ನು ಮಾತ್ರ ಪಡೆದು, ಉಳಿದ ಅರ್ಧ ಬೆಳೆಯನ್ನು ಭೂಮಾಲಿಕರಿಗೆ ನೀಡುತ್ತಿದ್ದರು. ಪಾಲುದಾರ ಗೇಣಿ ರೈತರಿಗೆ ಅವರು ಬೆಳೆದ ಬೆಳೆಯಲ್ಲಿ ಮೂರನೇ ಎರಡರಷ್ಟು ಪಾಲನ್ನು ನೀಡಬೇಕೆಂದು ಮತ್ತು ಭೂಮಿಯ ಗೇಣಿಯನ್ನು ಇಳಿಸಲು ತೇಭಾಗ ಚಳುವಳಿಯು ಒತ್ತಾಯಿಸಿತು. ತೇಭಾಗ ಎಂದರೆ “ಮೂರು ಪಾಲು” ಎಂದರ್ಥ. ಬೆಳೆಯನ್ನು ಮೂರು ಪಾಲುಗಳನ್ನಾಗಿ ಮಾಡಿ, ಅದರಲ್ಲಿ ಎರಡು ಪಾಲುಗಳನ್ನು ಪಾಲುದಾರ ಗೇಣಿ ರೈತನಿಗೆ ಸಲ್ಲಬೇಕೆಂಬ ಬೇಡಿಕೆಯನ್ನು ಚಳುವಳಿ ಒಳಗೊಂಡಿತ್ತು. ಈ ಚಳುವಳಿಯ ಅವಧಿಯಲ್ಲಿ ಕಲ್ಕತ್ತಾ ಮತ್ತು ಪೂರ್ವ ಬಂಗಾಳದ ನೌಖಾಲಿ ಜಿಲ್ಲೆಯಲ್ಲಿ ಕೋಮುಗಲಭೆಗಳು ಘಟಿಸಿದವು. ಆದರೆ ಅದಕ್ಕೆ ತದ್ವಿರುದ್ಧವಾಗಿ ತೇಭಾಗ ಚಳುವಳಿಯು ವರ್ಗ ಹೋರಾಟದ ಮೂಲಕ ಹಿಂದು-ಮುಸ್ಲಿಂ ಐಕ್ಯತೆಯ ಅದ್ಭುತ ಉದಾಹರಣೆಯನ್ನು ನೀಡಿತು. ಕಿಸಾನ ಸಭಾ ಪ್ರಭಾವಕ್ಕೆ ಒಳಗಾಗಿದ್ದ ಪ್ರದೇಶಗಳು ಕೋಮುಗಲಭೆಗಳಿಂದ ಮುಕ್ತವಾಗಿದ್ದವು. ತೇಭಾಗ ಚಳುವಳಿಯಲ್ಲಿ ಹಿಂದು, ಮುಸ್ಲಿಂ ಮತ್ತು ಬುಡಕಟ್ಟು ಸಮುದಾಯಗಳ ಪುರುಷರು, ಮಹಿಳೆಯರು ಸೇರಿದಂತೆ 73 ಜನರು ಪೊಲೀಸ್ ಹಿಂಸಾಚಾರದಲ್ಲಿ ಸಾವನ್ನಪ್ಪಿದರು. ಬಂಗಾಳ ಮುಸ್ಲಿಂ ಲೀಗ್ ಮಂತ್ರಿಮಂಡಲದ ಕ್ರೂರ ದಬ್ಬಾಳಿಕೆಗಳ ನಡುವೆಯೂ ತೇಭಾಗ ಚಳುವಳಿಯು ಯಶಸ್ವಿಯಾಯಿತು, ಅನೇಕ ಪ್ರದೇಶಗಳಲ್ಲಿ ಪಾಲುದಾರ ರೈತರು ತಮ್ಮ ಬೇಡಿಕೆಯ ಹಕ್ಕುಗಳನ್ನು ಗಳಿಸುವಲ್ಲಿ ವಿಜಯಶಾಲಿಯಾದರು.

Telangana Raitara Horataತೆಲಂಗಾಣ ಸಶಸ್ತ್ರ ಹೋರಾಟ

ತೆಲಂಗಾಣ ಹೋರಾಟವು ಭಾರತದ ಇತಿಹಾಸದಲ್ಲಿಯೇ ಕಮ್ಯುನಿಸ್ಟ್ ನೇತೃತ್ವದಲ್ಲಿ ನಡೆದ ಅತಿ ದೊಡ್ಡ ಸಶಸ್ತ್ರ ಹೋರಾಟ. ತೆಲುಗು ಮಾತನಾಡುವ ತೆಲಂಗಾಣ ಪ್ರಾಂತದಲ್ಲಿ 1946ರಿಂದ 1951ರವರೆಗೆ ಈ ಹೋರಾಟ ನಡೆಯಿತು. ಆ ಸಂದರ್ಭದಲ್ಲಿ ತೆಲಂಗಾಣವು ನಿಜಾಮ ಆಡಳಿತದ ಹೈದರಬಾದ್ ಸಂಸ್ಥಾನದ ಭಾಗವಾಗಿತ್ತು. ಈ ಸಂಸ್ಥಾನವು ಬ್ರಿಟಿಷ್ ಅಧೀನತೆಯನ್ನು ಒಪ್ಪಿ ಪರೋಕ್ಷವಾಗಿ ಬ್ರಿಟಿಷ್ ಆಡಳಿತಕ್ಕೆ ಒಳಪಟ್ಟ ಸಂಸ್ಥಾನಗಳಲ್ಲೊಂದಾಗಿತ್ತು. ಕಮ್ಯುನಿಸ್ಟ್ ಪಕ್ಷದ ನೇತೃತ್ವದಲ್ಲಿ ತೆಲಂಗಾಣ ಹೋರಾಟವು ನಿಜಾಮನ ನಿರಂಕುಶ ಆಡಳಿತ ಮತ್ತು ಭೂಮಾಲೀಕರ ಶೋಷಣೆಯ ವಿರುದ್ಧ ವೀರೋಚಿತ ಹೋರಾಟ ನಡೆಸಿತು. ಅನ್ಯಾಯದ ತೆರಿಗೆ ಮತ್ತು ಜೀತ ಪದ್ಧತಿಯನ್ನು ರದ್ದುಪಡಿಸುವುದು ಮತ್ತು ಉಳುವ ರೈತನಿಗೆ ಭೂಮಿ ಒಡೆತನ ನೀಡುವ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಹೋರಾಟವು ಆರಂಭವಾಯಿತು. ಈ ಹೋರಾಟವು ಪ್ರಬಲವಾಗುತ್ತಿದ್ದಂತೆ ನಿಜಾಮನ ಸೈನಿಕರಾದ ರಜಾಕಾರರು ಮತ್ತು ಪೊಲೀಸರು ತೀವ್ರ ಹಿಂಸೆಯ ಮೂಲಕ ಚಳುವಳಿಯನ್ನು ಅಡಗಿಸಲು ಪ್ರಯತ್ನಿಸಿದರು. ಈ ಹಿಂಸೆಯಲ್ಲಿ ಹಲವಾರು ಕಮ್ಯುನಿಸ್ಟರು ಸಾವನ್ನಪ್ಪಿದರು. ಇದರ ಪರಿಣಾಮ ಹೋರಾಟವು ಸಶಸ್ತ್ರ ಹೋರಾಟವಾಗಿ ಬದಲಾಯಿತು. ಈ ಸಶಸ್ತ್ರ ಚಳುವಳಿಯು 30 ಲಕ್ಷ ಜನಸಂಖ್ಯೆಯುಳ್ಳ 3000 ಹಳ್ಳಿಗಳನ್ನು ಹಿಡಿತಕ್ಕೆ ತೆಗೆದುಕೊಂಡಿತು. ಈ ಹೋರಾಟದ ಫಲವಾಗಿ ಪಡೆದಿದ್ದ 10 ಲಕ್ಷ ಎಕರೆ ಭೂಮಿಯನ್ನು ರೈತರಿಗೆ ಹಂಚಲಾಯಿತು. ಅಲ್ಲದೇ ಜೀತ ಪದ್ಧತಿಯನ್ನು ನಿಷೇಧಗೊಳಿಸಲಾಯಿತು, ದಿನಗೂಲಿ ಕಾರ್ಮಿಕರ ವೇತನವನ್ನು ಹೆಚ್ಚಿಸಲಾಯಿತು ಮತ್ತು ಕನಿಷ್ಠ ವೇತನವನ್ನು ನಿಗದಿಪಡಿಸಲಾಯಿತು. ಈ ಹಳ್ಳಿಗಳಲ್ಲಿ ಸ್ವಯಂ-ಸಂಘಟಿತ ಸಮಿತಿಗಳನ್ನು ರಚಿಸಿ ಶಿಕ್ಷಣ, ಆರೋಗ್ಯ ಮತ್ತು ಇತರ ಸೇವೆಗಳನ್ನು ಆರಂಭಿಸಲಾಯಿತು.

ಸೆಪ್ಟೆಂಬರ್ 13, 1948ರಂದು ಕೇಂದ್ರದ ಕಾಂಗ್ರೇಸ್‌ ಸರ್ಕಾರವು ಕಮ್ಯುನಿಸ್ಟ್ ನೇತೃತ್ವದ ಹೋರಾಟವನ್ನು ಹತ್ತಿಕ್ಕಲು ಮತ್ತು ನಿಜಾಮ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಲು ಪೊಲೀಸ್ ಕಾರ್ಯಾಚರಣೆಗೆ ಮುಂದಾಯಿತು. ಪರಿಣಾಮವಾಗಿ ಹೈದರಾಬಾದ್‌ನ ನಿಜಾಮನು ಶರಣಾಗತನಾಗಿ ತನ್ನ ಹೈದರಾಬಾದ್ ಸಂಸ್ಥಾನವನ್ನು ಭಾರತದ ಒಕ್ಕೂಟಕ್ಕೆ ವಿಲೀನಗೊಳಿಸಿದ್ದಾಗಿ ಪ್ರಕಟಿಸಿದ. ಆದರೆ ಇಡೀ ಹೈದರಾಬಾದ್ ಪ್ರದೇಶವನ್ನು ಪೂರ್ಣವಾಗಿ ಸ್ವಾಧೀನಕ್ಕೆ ತೆಗೆದುಕೊಳ್ಳಲು ಕಾಂಗ್ರೇಸ್‌ ಸರ್ಕಾರಕ್ಕೆ ಆಗಲಿಲ್ಲ. ಭಾರತದ ಸೇನೆ ರೈತ ಹೋರಾಟವನ್ನು ಹತ್ತಿಕ್ಕಲು ಹಳ್ಳಿಗಳಿಗೆ ಪ್ರವೇಶಿಸಿತು. ಈ ಹಿಂದೆ ನಿಜಾಮನ ಅಧೀನದಲ್ಲಿದ್ದ ಸ್ಥಳೀಯ ಆಡಳಿತಾಧಿಕಾರಿಗಳು ಮತ್ತು ಪಾಳೇಗಾರರು ಭಾರತೀಯ ಸೇನೆಯ ಜೊತೆ ಕೈ ಜೋಡಿಸಿ ತಮ್ಮ ಭೂಮಿಯನ್ನು ಪುನಃ ವಶಪಡಿಸಿಕೊಳ್ಳಲು ಮುಂದಾದರು. ಆಗ ಹಲವಾರು ಕಡೆ ಇದರ ವಿರುದ್ಧ ಜನರು ಪ್ರತಿರೋಧ ಒಡ್ಡಿ ಯಶಸ್ವಿಯಾದರು. ಆದರೆ ಸೇನೆಯ ದಮನದಿಂದ 4 ಸಾವಿರ ಕಮ್ಯುನಿಸ್ಟರು ಮತ್ತು ರೈತ ನಾಯಕರು ಕೊಲೆಗೀಡಾದರು, ಅಲ್ಲದೇ 10 ಸಾವಿರಕ್ಕಿಂತಲೂ ಹೆಚ್ಚಿನ ಜನರನ್ನು ಯಾತನಾ ಶಿಬಿರಗಳಲ್ಲಿ ಬಂಧಿಸಿ ಮೂರರಿಂದ ನಾಲ್ಕು ವರ್ಷಗಳ ಕಾಲ ಚಿತ್ರಹಿಂಸೆಯನ್ನು ನೀಡಲಾಯಿತು.

Punnappra Vayalar herores after release from prison (1)ಪುನ್ನಪ್ರ ವಯಲಾರ್ ದಂಗೆ

ಪುನ್ನಪ್ರ ಮತ್ತು ವಯಲಾರ್, ಕೇರಳ ರಾಜ್ಯದ ಅಲಪ್ಪುಳ ಜಿಲ್ಲೆಯ ಎರಡು ಹಳ್ಳಿಗಳು. ಈ ಹಳ್ಳಿಗಳು 1946ರಲ್ಲಿ ತಿರುವಾಂಕೂರು ರಾಜ ಮತ್ತು ಅವನ ಪ್ರಧಾನ ಮಂತ್ರಿಯ ನಿರಂಕುಶ ಆಡಳಿತದ ವಿರುದ್ಧ ನಡೆದ ಧೀರೋದ್ದಾತ ಹೋರಾಟದ ಪ್ರಮುಖ ಕೇಂದ್ರ ಬಿಂದುಗಳಾಗಿವೆ. ತಿರುವಾಂಕೂರು ಸಂಸ್ಥಾನ ಹೈದರಾಬಾದ್ ಸಂಸ್ಥಾನದ ರೀತಿಯ ರಾಜಪ್ರಭುತ್ವವಾಗಿತ್ತು. ಅದನ್ನು ಆಳುತ್ತಿದ್ದ ತಿರುವಾಂಕೂರು ರಾಜ ಸ್ವತಂತ್ರ ಭಾರತಕ್ಕೆ ಸೇರಲು ಸಿದ್ಧವಿರಲಿಲ್ಲ. ಭಾರತವು ಅಂಗೀಕರಿಸಿದ ಸಂಸದೀಯ ವ್ಯವಸ್ಥೆಗೆ ಪ್ರತಿಯಾಗಿ ‘ಅಮೇರಿಕನ್ ಮಾದರಿ’ಯ ಅಧ್ಯಕ್ಷೀಯ ಕಾರ್ಯಾಂಗ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಬಯಸಿದ್ದ. ಇದರ ವಿರುದ್ಧ ಕಮ್ಯುನಿಸ್ಟ್ ಪಕ್ಷ ನೇತೃತ್ವದ ಕಾರ್ಮಿಕ ವರ್ಗವು ಸಿಡಿದು ನಿಂತಿತು, ಕಾರ್ಮಿಕರು ಮತ್ತು ಪೋಲಿಸರ ನಡುವೆ ತೀವ್ರ ಸಂಘರ್ಷಗಳಾದವು. ಅಕ್ಟೋಬರ್ 24ರಿಂದ 27ರ ನಡುವೆ ಪೋಲಿಸರು ಗುಂಡಿನ ದಾಳಿಗೈದು ನೂರಾರು ಕಾರ್ಮಿಕರನ್ನು ಕೊಂದರು. ಈ ಘಟನೆ ನಡೆದು ವರ್ಷದ ಒಳಗೆ ಜನರಿಂದ ತೀವ್ರ ಅಪಖ್ಯಾತಿಗೆ ಒಳಗಾದ ಪ್ರಧಾನಮಂತ್ರಿ ತಿರುವಾಂಕೂರನ್ನು ಬಿಡಬೇಕಾಯಿತು. ತದನಂತರ ಕಮ್ಯುನಿಸ್ಟರ ಬೇಡಿಕೆಯಂತೆ ತಕ್ಷಣವೇ ತಿರುವಾಂಕೂರು ಸಂಸ್ಥಾನ ಭಾರತದ ಜೊತೆ ವಿಲೀನವಾಗಿ ವಾಸ್ತವದಲ್ಲಿ ಈಡೇರಿತು. ಮತ್ತು ಈ ಹೋರಾಟವು ಮಲಯಾಳಂ ಮಾತನಾಡುವ ಪ್ರದೇಶಗಳಾದ ತಿರುವಾಂಕೂರು, ಕೊಚ್ಚಿ ಮತ್ತು ಮದ್ರಾಸ ಪ್ರೆಸಿಡೆನ್ಸಿಯ ಭಾಗವಾಗಿದ್ದ ಮಲಬಾರ್ ಜಿಲ್ಲೆಗಳನ್ನು ಒಂದುಗೂಡಿಸಿ ಏಕಭಾಷೆಯ ಆಧಾರದ ಮೇಲೆ ಕೇರಳ ರಾಜ್ಯ ರಚನೆಯಾಗಲೂ ಮುನ್ನುಡಿ ಹಾಡಿತು.

ಅನುವಾದ: ವಸಂತ ಕಲಾಲ್

Leave a Reply

Your email address will not be published. Required fields are marked *