ಅಮೆರಿಕ ತಕ್ಷಣವೇ ಲಸಿಕೆ ಸಾಮಗ್ರಿಗಳ ರಫ್ತು ನಿಷೇಧವನ್ನು ತೆಗೆಯಬೇಕು

ಭಾರತದಲ್ಲಿ ಲಸಿಕೆ ಉತ್ಪಾದನೆಯ ಪ್ರಮಾಣವನ್ನು ಹೆಚ್ಚಿಸುವುದಕ್ಕೆ ಅದಕ್ಕೆ ಬೇಕಾಗುವ ಮಧ್ಯಂತರ ಸಾಮಗ್ರಿಗಳ ಕೊರತೆ ಅಡ್ಡಿಯಾಗಿದೆ. ಇವುಗಳಲ್ಲಿ ಬಹಳಷ್ಟು ಸಾಮಗ್ರಿಗಳು, ಫಿಲ್ಟರ್ ಗಳು, ದ್ರಾವಣಗಳು,, ಪ್ಲಾಸ್ಟಿಕ್ ಚೀಲಗಳು ಮುಂತಾದವು  ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಬರಬೇಕು. ಆದರೆ  ಆ ದೇಶದ ಆಡಳಿತ ತನ್ನ ‘ರಕ್ಷಣಾ ಉತ್ಪಾದನಾ ಕಾಯ್ದೆಯ ಅಡಿಯಲ್ಲಿ  ಲಸಿಕೆ ಸಾಮಗ್ರಿಗಳ ರಫ್ತನ್ನು ನಿಷೇಧಿಸಿದೆ. ಭಾರತೀಯ ಅಧಿಕಾರಿಗಳು ವಿನಂತಿಸಿಕೊಂಡರೂ  ಈ ಸಾಮಗ್ರಿಗಳ ರಫ್ತಿನಲ್ಲಿ ಯಾವುದೇ ರಿಯಾಯ್ತಿಯನ್ನು ಅಥವಾ ವಿನಾಯ್ತಿಯನ್ನು ಕೊಟ್ಟಿಲ್ಲ. ದೇಶದ ಅತಿ ದೊಡ್ಡ ಲಸಿಕೆ ತಯಾರಕ ಕಂಪೆನಿಯಾದ ಸೀರಮ್  ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬಹಳ ಸಮಯದಿಂದ  ಈ ಸಮಸ್ಯೆಯತ್ತ ಗಮನ ಸೆಳೆಯುತ್ತ  ಬಂದಿದೆ.

ಬಿಡೆನ್ ಆಡಳಿತದ ನಿಲುವಿನಲ್ಲಿ ಎರಡು ನಾಲಗೆಯ ವಾಸನೆ ಬರುತ್ತದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ  ಖೇದ ವ್ಯಕ್ತಪಡಿಸಿದೆ. ಕಳೆದ ತಿಂಗಳಷ್ಟೇ, ಮಾರ್ಚ್ 12 ರಂದು ನಡೆದ ಕ್ವಾಡ್ ಶೃಂಗಸಭೆಯಲ್ಲಿ ಹೊರಡಿಸಿದ ಜಂಟಿ ಹೇಳಿಕೆ “ಆರ್ಥಿಕ ಪುನಶ್ಚೇತನವನ್ನು ತ್ವರಿತಗೊಳಿಸಲು  ಮತ್ತು ಜಾಗತಿಕ ಆರೋಗ್ಯದ ಪ್ರಯೋಜನಕ್ಕಾಗಿ ಸುರಕ್ಷಿತ, ಕೈಗೆಟಕುವ ಮತ್ತು ಪರಿಣಾಮಕಾರಿ ಲಸಿಕೆ ಉತ್ಪಾದನೆ ಹಾಗು ಸಮತ್ವಪೂರ್ಣ ಲಭ್ಯತೆಯನ್ನು ವಿಸ್ತರಿಸಲು ಕೈಜೋಡಿಸುತ್ತೇವೆ” ಎಂದಿತ್ತು. ಅಲ್ಲದೆ ಭಾರತ-ಶಾಂತಸಾಗರ ಪ್ರದೇಶದಲ್ಲಿ ಭಾರತವು ಒಂದು  ಲಸಿಕೆ ಉತ್ಪಾದನೆಯ ಜಾಲ ಕೇಂದ್ರವಾಗುವಂತೆ ನೆರವಾಗಲು ಭಾರತೀಯ ಕಂಪನಿ, ಬಯೋಲಾಜಿಕಲ್ ಇ  ಲಿಮಿಟೆಡ್ ನಿಂದ ಲಸಿಕೆಗಳ ಉತ್ಪಾದನೆಗೆ ಹಣಕಾಸು ಒದಗಿಸುವುದಾಗಿಯೂ ಆಶ್ವಾಸನೆ ಕೊಟ್ಟಿತ್ತು ಎಂಬ ಸಂಗತಿಯತ್ತ ಸಿಪಿಐ(ಎಂ ಗಮನ ಸೆಳೆದಿದೆ.

ಲಸಿಕೆ ಉತ್ಪಾದನೆಯಲ್ಲಿ ಬಳಸುವ ಸಾಮಗ್ರಿಗಳ ರಫ್ತುಗಳ ಮೇಲೆ ನಿಷೇಧ ಸಂಪೂರ್ಣವಾಗಿ ಈ ಪ್ರಕಟಿತ ಉದ್ದೇಶದ ವಿರುದ್ಧ ಹೋಗುತ್ತದೆ. ಕ್ವಾಡ್ ಮೈತ್ರಿಯನ್ನು ಬಹಳಷ್ಟು ನೆಚ್ಚಿಕೊಂಡಿರುವ ಮೋದಿ ಸರಕಾರ ಬಿಡೆನ್ ಆಡಳಿತ ತನ್ನ ಮಾತಿಗೆ ಬದ್ಧವಾಗಿರುವಂತೆ ಮತ್ತು ತಕ್ಷಣವೇ ಭಾರತಕ್ಕೆ ಅಗತ್ಯ  ಲಸಿಕೆ ಸಾಮಗ್ರಿಗಳ ಪೂರೈಕೆಯಾಗುವಂತೆ ಖಾತ್ರಿಪಡಿಸಬೇಕು. ಭಾರತ ಒಂದು ಅಭೂತಪೂರ್ವ ಕೊವಿಡ್  ಸೋಂಕು ಏರಿಕೆಯ ಸಮಯದಲ್ಲಿ ಲಸಿಕೆ ಕೊರತೆಯನ್ನು ಎದುರಿಸುತ್ತಿರುವಾಗ ಇಷ್ಟಾದರೂ ಮಾಡಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೋ ಹೇಳಿದೆ.

Leave a Reply

Your email address will not be published. Required fields are marked *