ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಸೇರಿದಂತೆ ಮೂವರು ಬಿಜೆಪಿ ಶಾಸಕರ ರಾಜೀನಾಮೆ ಪಡೆಯಲು: ಸಿಪಿಐ(ಎಂ) ಒತ್ತಾಯ

ಉಪಮುಖ್ಯಮಂತ್ರಿ ಶ್ರೀ ಸಿ.ಎನ್‌. ಅಶ್ವತ್ಥ ನಾರಾಯಣರವರು ಲಸಿಕೆ ವಿತರಣೆಯಲ್ಲಿ ಜಾತಿ ಭೇದದ ತಾರತಮ್ಯ ಎಸಗುತ್ತಾರೆ. ಬ್ರಾಹ್ಮಣರಿಗೆ ಪ್ರತ್ಯೇಕವಾಗಿ ಲಸಿಕೆ ಹಾಕಿಸಲು ವ್ಯವಸ್ಥೆ ಮಾಡಿದ ಆರೋಪವಿದೆ. ಅದೇ ರೀತಿ, ಬಿಜೆಪಿ ಪಕ್ಷದ ಕಾರ್ಯಕರ್ತರಿಗೆ ಪ್ರತ್ಯೇಕವಾಗಿ ಲಸಿಕೆ ಹಾಕಿಸುವ ರಾಜಕೀಯ ತಾರತಮ್ಯ ಎಸಗಿದ ಆರೋಪವನ್ನು ಶಾಸಕ ಶ್ರೀ ಎಸ್.ರಘು ಹೊತ್ತಿದ್ದಾರೆ. ಶ್ರೀ ಎಲ್‌.ಎ. ರವಿ ಸುಭ್ರಮಣ್ಯರವರು ಲಸಿಕೆ ಮಾರಾಟ ಉತ್ತೇಜನದಲ್ಲಿ ಕಮಿಷನ್ ಪಡೆದ ಆರೋಪ ಎದುರಿಸುತ್ತಿದ್ದಾರೆ ಮಾತ್ರವಲ್ಲಾ, ಶಾಸಕ ಶ್ರೀ ಎಂ. ಸತೀಶ್ ರೆಡ್ಡಿ ಬೆಡ್ ಬ್ಲಾಕಿಂಗ್ ದಂದೆಯ ಆರೋಪಿಯಾಗಿದ್ದಾರೆ.

ಇವರೆಲ್ಲರೂ, ಭಾರತದ ಸಂವಿಧಾನದಲ್ಲಿ ನಿಷ್ಠೆ ಇಟ್ಟು ಕಾರ್ಯನಿರ್ವಹಿಸುವುದಾಗಿ ರಾಜ್ಯಪಾಲರ ಹಾಗೂ ಸದನದ ಸಮ್ಮುಖದಲ್ಲಿ ರಾಜ್ಯದ ಜನತೆಯ ಮುಂದೆ ಪ್ರಮಾಣ ಮಾಡಿದವರು, ಅದಕ್ಕೆ ತದ್ವಿರುದ್ದವಾಗಿ ನಡೆದುಕೊಂಡಿದ್ದಾರೆ.

ಆದ್ದರಿಂದ ಇವರು ಪ್ರಜಾಪ್ರತಿನಿಧಿಗಳಾಗಿ ಮುಂದುವರೆಯಲು ಅನರ್ಹರಾಗಿದ್ದು, ಅವರಿಂದ ತಕ್ಷಣವೇ ರಾಜೀನಾಮೆ ಪಡೆಯಬೇಕೆಂದು ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪರವರನ್ನು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)ದ ರಾಜ್ಯ ಸಮಿತಿ ಬಲವಾಗಿ ಒತ್ತಾಯಿಸುತ್ತದೆ.

ರಾಜ್ಯದ ಜನತೆ ಒಂದೆಡೆ ತೀವ್ರ ರೀತಿಯ ಆರ್ಥಿಕ ಮತ್ತು ಕೋವಿಡ್  ಸಂಕಷ್ಢದಲ್ಲಿರುವಾಗ ಎಲ್ಲ ಜನತೆಯನ್ನು ಸಂತೈಸಿ, ನೆರವಾಗಬೇಕಾದ, ಜನತೆಯಿಂದ ಆಯ್ಕೆಯಾದ ಆಡಳಿತ ಪಕ್ಷದ ಈ ಪ್ರಜಾಪ್ರತಿನಿಧಿಗಳ ಬೇಜವಾಬ್ದಾರಿಯುತ ನಡೆಗಳು, ರಾಜ್ಯದ ಜನತೆಯನ್ನು ನಾಗರೀಕ ಜಗತ್ತಿನ ಮುಂದೆ  ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿವೆ. ಇವು ತೀವ್ರ ನಾಚಿಕೆಗೇಡಿನ ಪ್ರಸಂಗಗಳಾಗಿವೆ ಎಂದು ಸಿಪಿಐ(ಎಂ) ಬಲವಾಗಿ ಖಂಡಿಸುತ್ತದೆ.

ಸಂಸದ ತೇಜಸ್ವಿ ಸೂರ್ಯ ಔಷಧಿಯ ಪ್ರಮೋಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆನ್ನಲಾಗಿದೆ. ರಾಜ್ಯದಾದ್ಯಂತ ಹಲವು ಜಿಲ್ಲೆಗಳಲ್ಲಿ ರೆಮ್ಡಿಸಿವರ್ ಔಷಧಿ ಕಾಳಸಂತೆಯ ದಂಧೆಯ ವಿಚಾರದಲ್ಲಿ ಆಡಳಿತ ಪಕ್ಷದ ಹಾಗೂ ಸಂಘ ಪರಿವಾರದ ಬೆಂಬಲಿಗರು, ಮುಖಂಡರು ಆರೋಪಿಗಳಾಗಿದ್ದಾರೆ.

ಈ ಪ್ರಸಂಗಗಳು ರಾಜ್ಯದ ಜನತೆಯ ನಡುವೆ ತೀವ್ರ ಆತಂಕಗಳನ್ನುಂಟು ಮಾಡಿವೆ. ರಾಜ್ಯದಲ್ಲಿ ಸರಕಾರದ ಆಡಳಿತವಿದೆಯೇ? ಕಾನೂನು – ಸುವ್ಯವಸ್ಥೆ ಇದೆಯೇ? ಎಂಬ ಪ್ರಶ್ನೆಗಳನ್ನು ಇದು ಮುನ್ನೆಲೆಗೆ ತರುತ್ತಿದೆ. ರಾಜ್ಯದಲ್ಲಿ ಸ್ವಜನ ಪಕ್ಷಪಾತ, ಲೂಟಿಕೋರತನ, ಕೊಲೆಪಾತಕ ನಿರ್ಲಕ್ಷ್ಯಗಳು ಮೆರೆಯುತ್ತಿವೆ. ಈ ಎಲ್ಲಾ ಅರಾಜಕತೆಗಳನ್ನು ನಿವಾರಿಸಲು ಇಂತಹ ಕಠಿಣ ಕ್ರಮಗಳ ಅವಶ್ಯಕತೆಯಿದೆ ಎಂದು ಸಿಪಿಐ(ಎಂ) ಒತ್ತಾಯಿಸುತ್ತದೆ.

ಇವುಗಳೆಲ್ಲವು, ತಮ್ಮ ಸರಕಾರದ ಪಾತ್ರವೂ ಇವುಗಳಲ್ಲಿ ಅಪ್ರತ್ಯಕ್ಷವಾಗಿ ಇರುವುದರ ಕಡೆ ಬೆರಳು ತೋರುತ್ತವೆ.

ಆದ್ದರಿಂದ, ರಾಜ್ಯದ ಜನತೆ ನಿಜವನ್ನು ತಿಳಿಯುವಂತಾಗಲು, ಈ ಎಲ್ಲ ಪ್ರಕರಣಗಳನ್ನು ರಾಜ್ಯ ಸರಕಾರ ಉನ್ನತ ಮಟ್ಟದ ಸ್ವತಂತ್ರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಅದಕ್ಕಾಗಿ ಕೂಡಲೇ ಆದೇಶವನ್ನು ಹೊರಡಿಸಬೇಕೆಂದು ಸಿಪಿಐ(ಎಂ) ಮುಖ್ಯಮಂತ್ರಿಗಳನ್ನು ಅಗ್ರಹಿಸುತ್ತದೆ.

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *