ಹರಿದು ಹಂಚುವ ಚೂರು ಪಾರು ಪ್ಯಾಕೇಜ್ ಸಂಕಷ್ಟ ಪರಿಹರಿಸದು: ಸಿಪಿಐ(ಎಂ)

ಮುಖ್ಯಮಂತ್ರಿಯವರು ಪ್ರಕಟಿಸಿರುವ 363 ಕೋಟಿ ರೂ.ಗಳ 2ನೇ ಪ್ಯಾಕೇಜ್ ಹರಿದು ಹಂಚುವ ಚೂರು ಪಾರು ಪ್ಯಾಕೇಜ್ ಆಗಿದೆ ಮತ್ತು ಜನತೆಯ ಸಂಕಷ್ಟಕ್ಕೆ ಪರಿಹಾರ ನೀಡುವುದಿಲ್ಲ ಎಂದು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿಗಳು ವಿಶ್ಲೇಷಿಸಿವೆ.

ಮೊದಲನೇ ಅರೆಬರೆ ಪ್ಯಾಕೇಜ್ ಪ್ರಕಟಿಸಿದ್ದ ರಾಜ್ಯ ಬಿಜೆಪಿ ಸರ್ಕಾರವು ಎರಡನೆ ಪ್ಯಾಕೇಜ್‌ನಲ್ಲಾದರೂ ಜನತೆಯ ಕೋರಿಕೆಯಂತೆ ಪರಿಹಾರ ನೀಡಬಹುದೆಂಬ ಜನತೆಯ ನಿರೀಕ್ಷೆಯನ್ನು  ಹುಸಿಗೊಳಿಸಿದೆ. ಈ ಸರ್ಕಾರದ ಮೇಲೆ ಯಾವುದೇ ಭರವಸೆ ಇಡಲು ಸಾಧ್ಯವಿಲ್ಲ ಎಂಬುದನ್ನು ಪದೆ ಪದೆ ರಾಜ್ಯ ಸರ್ಕಾರವು ಸಾಬೀತು ಮಾಡುತ್ತಿದೆ ಎಂದಿದೆ ಸಿಪಿಐ(ಎಂ).

ವಿವಿಧ ವಿಭಾಗಗಳಿಗೆ ಪರಿಹಾರ ನೀಡಲಾಗಿದೆ ಎಂಬ ತೋರಿಕೆಯ ಪ್ಯಾಕೇಜ್ ಇದಾಗಿದೆ. ಮೊದಲ ಪ್ಯಾಕೇಜ್ ಪ್ರಕಟಿಸಿದ ನಂತರ ಅದನ್ನು ಕೆಲವು ವಿಭಾಗಗಳ ಬಿಪಿಎಲ್ ಕಾರ್ಡದಾರರಿಗೆ ಮಾತ್ರ ಜಾರಿಮಾಡುವ ಶರತ್ತು ವಿಧಿಸಿ ಬಹುತೇಕರಿಗೆ ನೇರವು ದೊರೆಯದಂತೆ ಮಾಡಿದೆ. ಆದರೂ ತಾನು ಪರಿಹಾರ ನೀಡಿದ್ದೇವೆ ಎಂಬ ಹುಸಿ ಪ್ರಚಾರ ಮಾಡುತ್ತಿದೆ. ಅದರ ಮುಂದುವರಿದ ಪ್ರಕ್ರಿಯೆ ಇದಾಗಿದೆ ಎಂದು ಸಿಪಿಐ(ಎಂ) ಟೀಕಿಸಿದೆ.

ಈಗಲಾದರೂ ಸರ್ಕಾರವು ಎಚ್ಚೆತ್ತು ಕನಿಷ್ಠ ಹದಿನೈದು ಸಾವಿರ ಕೋಟಿ ರೂಗಳ ಪ್ಯಾಕೇಜ್ ನೀಡಿ ಪ್ರತಿ ಕುಟುಂಬಕ್ಕೂ ಹತ್ತು ಸಾವಿರ ನೇರ ನಗದು ವರ್ಗಾವಣೆ ಮಾಡಬೇಕೆಂದು ಹಾಗು ಈಗಾಗಲೆ ಪ್ರಕಟಿಸಿರುವ ಪ್ಯಾಕೇಜ್ ಅನ್ನು ಬಿಪಿಎಲ್ ಷರತ್ತು ರಹಿತವಾಗಿ ಜಾರಿ ಗೊಳಿಸಬೇಕೆಂದು ಸಿಪಿಐ(ಎಂ) ಒತ್ತಾಯಿಸಿದೆ. ಅಸಂಘಟಿತ ವಲಯದ ಎಲ್ಲಾ ಕಾರ್ಮಿಕರಿಗೂ ಪರಿಹಾರ ನೀಡಲು ಅಗತ್ಯ ಕ್ರಮವಹಿಸಬೇಕೆಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *