ರಾಜ್ಯ ರಸ್ತೆ ಸಾರಿಗೆ ನೌಕರರ ಚರಿತ್ರಾರ್ಹ ಮುಷ್ಕರಕ್ಕೆ ಜನಬೆಂಬಲ ಹರಿದು ಬರಲಿ

ಆರನೇ ವೇತನ ಆಯೋಗದ ಶಿಫಾರಸ್ಸಿನಂತೆ ವೇತನ ಜಾರಿಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರ ಅನಿರ್ದಿಷ್ಟವಾಗಿ ಮುಂದುವರೆದಿದೆ. ಯಡಿಯೂರಪ್ಪ ಸರ್ಕಾರದ ಬೆದರಿಕೆಗಳಿಗೆ ಸೊಪ್ಪು ಹಾಕದೆ, ಇದು ತಮ್ಮ ಜೀವನ್ಮಮರಣದ ಹೋರಾಟ ಎಂಬಂತೆ ಹೋರಾಡುತ್ತಿರುವ ಸಾವಿರಾರು ನೌಕರರು ಮತ್ತು ಅವರ ಕುಟುಂಬಗಳ ಸದಸ್ಯರಿಗೆ ನಾಡಿನ ಜನರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಬೇಕು.

ಸಾರಿಗೆ ನೌಕರರು ಬಹುದಿನಗಳಿಂದ ಅದುಮಿಟ್ಟ ಅತೃಪ್ತಿ ಸ್ಪೋಟಗೊಂಡಂತೆ ಕಾಣುತ್ತದೆ. ಇದರಿಂದ ರಾಜ್ಯಾದ್ಯಂತ ಬಸ್ ಪ್ರಯಾಣಿಕರು ಬಾರೀ ಬವಣೆ ಅನುಭವಿಸಿವಂತಾಗಿರುವುದು ನಿಜ. ಸರ್ಕಾರಿ ಬಸ್ಸುಗಳನ್ನೇ ಅವಲಂಬಿಸಿರುವ ಜನಸಾಮಾನ್ಯರ ಗೋಳು ಹೇಳತೀರದಾಗಿದೆ. ಈ ನಡುವೆ ರಾಜ್ಯ ಬಿಜೆಪಿ ಸರ್ಕಾರದ ಹಠಮಾರಿ ಧೋರಣೆಯನ್ನು ಯಾರೂ ಬೆಂಬಲಿಸುವ ಪರಿಸ್ಥಿತಿ ಉಳಿದಿಲ್ಲ.

ಹೋರಾಟಗಳ ನಡುವೆಯೇ ತಾನು ಬೆಳೆದು ಬಂದವನು ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಯಡಿಯೂರಪ್ಪ ಶ್ರಮಿಕರ ಹೋರಾಟಗಳನ್ನು ದಮನ ಮಾಡುವುದೇ ತನ್ನ ಪ್ರವೃತ್ತಿ ಎಂದು ಹಲವು ಬಾರಿ ಪ್ರದರ್ಶಿಸಿದ್ದಾರೆ. ಜನರ ಹೋರಾಟಗಳಿಗೆ ಸ್ಪಂದಿಸುವ ಕಿಂಚಿತ್ತೂ ಮಾನವೀಯತೆ ಅವರಲ್ಲಿ ಇಲ್ಲ. ಮುಷ್ಕರ ಕೈಬಿಡದೆ ಮಾತುಕತೆ ಸಾಧ್ಯವಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದಾರೆ. ನೂರಾರು ನೌಕರರನ್ನು ಶಿಸ್ತುಕ್ರಮಕ್ಕೆ ಒಳಪಡಿಸಿ ಕೆಲಸದಿಂದ ವಜಾ ಮಾಡಿದ್ದಾರೆ.

ಯುಗಾದಿ ಹಬ್ಬದ ಸಂದರ್ಭದಲ್ಲಿ ಸಂಬಳವನ್ನು ನಿರಾಕರಿಸಿ ಕ್ರೌರ್ಯವನ್ನು ಮೆರೆದಿದ್ದಾರೆ. ಸೇಡಿನ ಕ್ರಮವಾಗಿ ನೌಕರರನ್ನು ಮನಬಂದಂತೆ ವರ್ಗಾವಣೆ ಮಾಡಿದ್ದಾರೆ. ಅನೇಕ ಮಂದಿ ನೌಕರರನ್ನು ಬಂಧಿಸಿ ಮಾನಸಿಕ ಕ್ಷೋಭೆಗೆ ಒಳಪಡಿಸಿದ್ದಾರೆ. ಕೆಲವು ನೌಕರರು ಈಗಾಗಲೇ ಬೇರೆ ದಾರಿ ಕಾಣದಂತಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನೌಕರರ ಹೆಂಡರು ಮಕ್ಕಳ ಗೋಳು ಹೇಳತೀರದಾಗಿದೆ. ಊಟದ ಖಾಲಿ ತಟ್ಟೆಗಳನ್ನು ಬಾರಿಸುತ್ತಾ ಬೀದಿಗಳಲ್ಲಿ ಭಿಕ್ಷಾಟನೆ ಮಾಡಿದ್ದಾರೆ. ಅವರೊಂದಿಗೆ ಸಾರ್ವಜನಿಕರು ಸೇರಿಕೊಂಡು ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಸಾರಿಗೆ ನೌಕರರ ಬದುಕನ್ನು ಕತ್ತಲಲ್ಲಿ ಇಟ್ಟಿರುವ ಸರ್ಕಾರದ ಕರಾಳ ನಡೆಯನ್ನು ಖಂಡಿಸಿ ಮೇಣದಬತ್ತಿ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಪಕ್ಷಾತೀತವಾಗಿ ಧರಣಿ ನಡೆಸಿದ್ದಾರೆ. ಆದರೆ ಇದು ಯಾವುದೂ ಕಲ್ಲು ಹೃದಯದ ಮುಖ್ಯಮಂತ್ರಿಗೆ ತಟ್ಟದಿರುವುದು ನಾಡಿನ ದುರಂತ.

ಇವರಂತಹ ಮನುಷ್ಯತ್ವವಿಲ್ಲದ ಮನುಷ್ಯರು ಅಧಿಕಾರಕ್ಕೆ ಬಂದರೆ ಏನೆಲ್ಲಾ ಆಗಬಹುದು, ದೇಶದಲ್ಲಿ ಏನಾಗಬಹುದು ಎಂಬುದನ್ನು ನಾವೆಲ್ಲರೂ ನೋಡಿದಂತಾಯಿತು. ನಮ್ಮನ್ನು ಆತ್ಮಹತ್ಯೆಗೆ ನೂಕಬೇಡ ಎಂದು ಕೂಗುವ ನೇಗಿಲಯೋಗಿಗಳು ಕಳೆದ ಕೆಲವು ತಿಂಗಳುಗಳಿಂದ ದೇಶದ ರಾಜಧಾನಿಗೆ ಪ್ರವೇಶ ನಿರಾಕರಿಸಲ್ಪಟ್ಟು ದೆಹಲಿ ಗಡಿಗಳಲ್ಲಿ ಕುಟುಂಬಸಮೇತರಾಗಿ ಅತ್ಯಂತ ಶಾಂತಿಯಿಂದ ಧರಣಿ ನಡೆಸುತ್ತಿದ್ದರೂ ಪ್ರಧಾನಿ ಮೋದಿಯವರು ಕರಗಲಿಲ್ಲ. ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಅದೇ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿದೆ.

ಶೋಷಿತರು, ದಮನಿತರು ನ್ಯಾಯಕ್ಕಾಗಿ ಹೋರಾಡುವುದು ಸಂವಿಧಾನ ಕೊಡಮಾಡಿದ ಹಕ್ಕು. ನಮ್ಮ ಸಂವಿಧಾನ ಉಳಿಯುವುದು, ಗಟ್ಟಿಗೊಳ್ಳುವುದು ಜನಪರ ಹೋರಾಟಗಳಿಂದ ಮಾತ್ರ. ಪ್ರಜಾಪ್ರಭುತ್ವವನ್ನು ಉಳಿಸಲು ರೈತರು, ಕಾರ್ಮಿಕರು, ಎಲ್ಲರೂ ಹೋರಾಡಬೇಕು. ಜನಪರ ಹೋರಾಟಗಳ ದ್ವನಿ ಅಡಗಿದರೆ ಪ್ರಜಾಪ್ರಭುತ್ವ ಸಾಯುತ್ತದೆ, ಸರ್ವಾಧಿಕಾರ ತಲೆ ಎತ್ತುತ್ತದೆ. ಸರ್ವಾಧಿಕಾರ ತಲೆ ಎತ್ತುವುದನ್ನು ನಡೆಯಲು ಜನ ಚಳುವಳಿ ಜೀವಂತವಾಗಿರಬೇಕು. ರೈತರ ಚಳುವಳಿ, ಕಾರ್ಮಿಕ ವರ್ಗದ ಚಳುವಳಿ ನಾವೆಲ್ಲರೂ ಕೂಡಿ ನಡೆಸಬೇಕಾದ ಚಳುವಳಿ. ದೆಹಲಿ ಗಡಿಯಲ್ಲಿ ಚರಿತ್ರೆಯನ್ನು ಬರೆಯುತ್ತಿರುವ ಚಳುವಳಿಗೆ ದೇಶದೆಲ್ಲೆಡೆ ಜನಬೆಂಬಲ ಹರಿದು ಬರಬೇಕು. ಅದರಂತೆಯೇ ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಚಳುವಳಿಗೆ ವಿಶಾಲವಾದ ಬೆಂಬಲ ವ್ಯಕ್ತವಾಗಬೇಕು. ಸಾರ್ವಜನಿಕರಿಗೆ ಏನೇ ಅನಾನುಕೂಲತೆ ಉಂಟಾದರೂ ಜನಪರ ಚಳುವಳಿಗೆ ನಾವು ಬೆಂಬಲವಾಗಿ ನಿಲ್ಲಬೇಕು. ಸರ್ಕಾರಗಳ ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಬೇಕು.

ರಾಜ್ಯದ ರಸ್ತೆ ಸಾರಿಗೆ ಸಾರ್ವಜನಿಕ ರಂಗದ ಉದ್ದಿಮೆ. ಲಾಭಗಳಿಕೆ ಅದರ ಉದ್ದೇಶವಾಗಿರಬಾರದು. ಖಾಸಗೀಕರಣ ಅದರ ಪರಿಹಾರವಲ್ಲ. ನೆಗಡಿ ಬಂದಿದೆ ಎನ್ನುವ ಕಾರಣಕ್ಕೆ ಯಡಿಯೂರಪ್ಪ ರವರು ಮೂಗನ್ನೇ ಕತ್ತರಿಸುತ್ತಾರೊ? ಸಾರಿಗೆ ನೌಕರರಿಗೆ ಕೊಟ್ಟ ಮಾತಿನಂತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೌಹಾರ್ದ ಪ್ರಯತ್ನ ಮಾಡಿದರೆ ಇಂದು ನೌಕರರು ತಮ್ಮ ಬೇಡಿಕೆಗಳ ಬಗ್ಗೆ ಬಿಗಿ ಪಟ್ಟು ಹಿಡಿಯುವ ಪರಿಸ್ಥಿತಿ ಬರುತ್ತಿರಲಿಲ್ಲ. ಸಮಸ್ಯೆಗೆ ಮಾತುಕತೆ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ನೌಕರರನ್ನು ಬೆದರಿಸುವ, ಅವರನ್ನು ವಸತಿ ನಿಲಯಗಳಿಂದ ಹೊರಹಾಕುವ ಪ್ರಯತ್ನ ಸರ್ಕಾರಕ್ಕೆ ತಿರುಗುಬಾಣವಾಗದೆ ಇರಲಾರದು. ಕಾರ್ಮಿಕ ಕಾನೂನು, ಕಾರ್ಮಿಕ ನ್ಯಾಯಾಲಯಗಳನ್ನು ಬಳಸಿ ಮುಷ್ಕರವನ್ನು ನಿಷೇಧಿಸುವ ಪ್ರಯತ್ನವೂ ಸಹ ಸರ್ಕಾರದ ದೌರ್ಜನ್ಯದ ಕ್ರಮವಾಗಿ ಚರಿತ್ರೆಯಲ್ಲಿ ದಾಖಲಾಗುವುದು. ಯಡಿಯೂರಪ್ಪ ರವರ ಚರಿತ್ರೆ ಒಬ್ಬ ನಿರಂಕುಶ ಆಡಳಿತಗಾರನ ಚರಿತ್ರೆಯಾಗಿ ಮುಂದಿನ ನಮ್ಮ ಪೀಳಿಗೆಗೆ ಅಧ್ಯಯನಕ್ಕೊಂದು ಪಾಠವಾಗಲಿದೆ. ಇನ್ನೂ ಕಾಲ ಮಿಂಚಿಲ್ಲ ಜನ ಪಾಠ ಕಲಿಸುವ ಒಳಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ತನ್ನ ತಪ್ಪು ತಿದ್ದಿಕೊಳ್ಳಬೇಕು. ಸಾರಿಗೆ ನೌಕರರ ಪ್ರಶ್ನೆ ಇತ್ಯರ್ಥವಾಗಬೇಕು. ಸಾರಿಗೆ ನೌಕರರಿಗೆ ನಮ್ಮೆಲ್ಲರ ಬೆಂಬಲ.

Leave a Reply

Your email address will not be published. Required fields are marked *