ಭಾರತದ ಕಮ್ಯೂನಿಸ್ಟ್ ಚಳುವಳಿಯ ನೂರು ವರ್ಷಗಳು

ಪ್ರೊ. ಪ್ರಭಾತ್ ಪಟ್ನಾಯಕ್

Communist Part 100 copyಸಮಾಜದ ಪ್ರಚಲಿತ ಸ್ಥಿತಿ-ಗತಿಗಳ ಸಂದರ್ಭದಲ್ಲಿ ಬಂಡವಾಳಶಾಹಿ ವರ್ಗದ ಮತ್ತು ರೈತಾಪಿಗಳ ಬೇರೆ ಬೇರೆ ವಿಭಾಗಗಳೊಂದಿಗೆ ಮತ್ತು ಶ್ರಮಿಕ ವರ್ಗವು (proletariat) ಹೊಂದಿರುವ ಸಂಬಂಧಗಳ ಒಂದು ಸೈದ್ಧಾಂತಿಕ ವಿಶ್ಲೇಳಣೆ ಮತ್ತು ಈ ವಿಶ್ಲೇಷಣೆಯನ್ನು ಆಧರಿಸಿ ಇತರ ರಾಜಕೀಯ ಶಕ್ತಿಗಳ ಬಗ್ಗೆ ಕಾರ್ಯತಂತ್ರಗಳು  ಕಮ್ಯೂನಿಸ್ಟ್ ಪಕ್ಷದ ತಾತ್ವಿಕ ನಡವಳಿಕೆ (praxis)ಯ ಪ್ರಮುಖ ಅಂಶ.   ಭಾರತದಲ್ಲಿ ಕಮ್ಯುನಿಸಂ ಅಸ್ತಿತ್ವದಲ್ಲಿರುವ ಕಳೆದ ನೂರು ವರ್ಷಗಳ ಅವಧಿಯಲ್ಲಿ  ಈ ತಾತ್ವಿಕ ನಡವಳಿಕೆ(praxis)ಯ ಅಧ್ಯಯನವು ತುಂಬಾ ಬೋಧಪ್ರದವಾಗಿಯೂ ಮತ್ತು ಸುದೀರ್ಘವಾಗಿಯೂ ಇವೆ. ಇದರ ಪೂರ್ಣ ವಿವರಣೆಗಳು ಇಲ್ಲಿ ನನಗಿರುವ ವ್ಯಾಪ್ತಿಯನ್ನು ಮೀರುತ್ತವೆ. ಹಾಗಾಗಿ, ಈ ಸುದೀರ್ಘ ಇತಿಹಾಸದ ಕೆಲವೇ ಕೆಲವು ಘಟ್ಟಗಳ ಬಗ್ಗೆ ಮಾತ್ರ ನನ್ನ ಕೆಲವು ಚಿಂತನೆಗಳನ್ನು ಹಂಚಿಕೊಳ್ಳುತ್ತೇನೆ.

ವಸಾಹತುಶಾಹಿ ಪ್ರಶ್ನೆಯನ್ನು ವಿಶ್ಲೇಷಿಸಿದ ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್‌ನ ಆರನೇ ಮಹಾಧಿವೇಶನ (1928), “ವಸಾಹತುಶಾಹಿ ಶೋಷಣೆಯು ರೈತರ ನಿರ್ಗತಿಕತನವನ್ನು ಉಂಟುಮಾಡುತ್ತದೆಯೇ ಹೊರತು, ರೈತರ ಶ್ರಮಿಕೀಕರಣವನ್ನಲ್ಲ” ಎಂಬಂತಹ ಮೌಲಿಕ ಪ್ರತಿಪಾದನೆಗಳನ್ನು ಮಾಡಿದ್ದರೂ, ಅದು ಕಮ್ಯೂನಿಸ್ಟ್ ಪಕ್ಷಗಳಿಗೆ ಸಂಕುಚಿತ ಪಂಥವಾದೀ ಸ್ವರೂಪದ ಕ್ರಿಯೆಯ ಹಾದಿಯನ್ನು ಮುಂದಿಟ್ಟಿತು.  ಹಾಗಾಗಿ, ಆರನೆಯ ಮಹಾಧಿವೇಶನದ ನಂತರದ ‘ಮೂರನೆಯ ಅವಧಿ’ ಎಂದು ಹೇಳಲಾಗುವ ಅವಧಿಯನ್ನು ಪಂಥವಾದದೊಂದಿಗೆ ಕಾಣಲಾಗುತ್ತಿದೆ. ಅರ್ನಸ್ಟ್ ಥೇಲ್ಮನ್, ಆಂಟೋನಿಯೋ ಗ್ರಾಂಸ್ಕಿ ಮತ್ತು ಇತರ ಅನೇಕರನ್ನು ಬಲಿಪಡೆದ ಫ್ಯಾಸಿಸಂ ವಿರುದ್ಧದ ಹೋರಾಟದ ನಡುವೆ, 1935ರಲ್ಲಿ ನಡೆದ ಕಮ್ಯೂನಿಸ್ಟ್ ಇಂಟರ್‌ನ್ಯಾಷನಲ್‌ನ ಏಳನೇ ಮಹಾಧಿವೇಶನದಲ್ಲಿ, ಈ ಪಂಥವಾದವನ್ನು ಸರಿಪಡಿಸಲಾಯಿತು ಮತ್ತು ಕಮ್ಯೂನಿಸ್ಟ್ ಪಕ್ಷಗಳು ಸಂಯುಕ್ತ ರಂಗಗಳನ್ನು ರಚಿಸುವ ಅಗತ್ಯವನ್ನು ಒತ್ತಿ ಹೇಳಲಾಯಿತು. ಏಳನೆಯ ಮಹಾಧಿವೇಶನದ ಈ ಪರಿಕಲ್ಪನೆಯನ್ನು ಭಾರತದ ಸನ್ನಿವೇಶದಲ್ಲಿ ‘ಸಾಮ್ರಾಜ್ಯಶಾಹಿ-ವಿರೋಧಿ ಜನತಾ ಸಂಯುಕ್ತ ರಂಗ’ವನ್ನು ರಚಿಸುವ ಮೂಲಕ ಸಾಕಾರಗೊಳಿಸುವಂತೆ ಬ್ರಿಟನ್ ಕಮ್ಯೂನಿಸ್ಟ್ ಪಕ್ಷದ ಪ್ರತಿನಿಧಿಗಳಾದ ರಜನಿ ಪಾಮೆ ದತ್ ಮತ್ತು ಬೆನ್ ಬ್ರಾಡ್ಲೆ ಮಂಡಿಸಿದ ಪ್ರತಿಪಾದನೆಯು(ದತ್-ಬ್ರಾಡ್ಲಿ ಪ್ರತಿಪಾದನೆ) ಕರೆಕೊಟ್ಟಿತು.

ಇಂತಹ ಒಂದು ಸಂಯುಕ್ತ ರಂಗದಲ್ಲಿ, ಮುಷ್ಕರದ ಹಕ್ಕು, ಕಾರ್ಮಿಕರ ವೇತನವನ್ನು ಕಡಿತಗೊಳಿಸುವ ಮತ್ತು ಅವರನ್ನು ವಜಾ ಮಾಡುವ ಕ್ರಮಗಳ ನಿಷೇಧ, ಕನಿಷ್ಟ ವೇತನ ಮತ್ತು ದಿನದ ಕೆಲಸದ ಅವಧಿಯನ್ನು ಎಂಟು ಗಂಟೆಗಳಿಗೆ ನಿಗದಿ ಮಾಡುವುದು, ಬಾಡಿಗೆ/ ಗೇಣಿಗಳಲ್ಲಿ ಶೇ.50ರಷ್ಟು ಕಡಿತ ಮತ್ತು ಸಾಲಕ್ಕೆ ಬದಲಿಯಾಗಿ ರೈತರ ಭೂಮಿಯನ್ನು ಲೇವಾದೇವಿಗಾರರು, ಜಮೀನ್ದಾರರು, ಸ್ಥಳೀಯ ರಾಜರು ಮತ್ತು ಸಾಮ್ರಾಜ್ಯಶಾಹಿಗಳು ವಶಪಡಿಸಿಕೊಳ್ಳುವುದಕ್ಕೆ ನಿಷೇಧ ಮುಂತಾದ ಆರ್ಥಿಕ ಅಂಶಗಳನ್ನು ಒಳಗೊಂಡ ಒಂದು ಆರ್ಥಿಕ ಕಾರ್ಯಕ್ರಮಗಳ ಆಧಾರದ ಮೇಲೆ ಭಾಗವಹಿಸಬೇಕು ಎಂಬುದು ಕಮ್ಯೂನಿಸ್ಟ್ರ ತಿಳುವಳಿಕೆಯಾಗಿತ್ತು.

ಇದರ ಫಲಿತಾಂಶವೇ ಕಮ್ಯುನಿಸ್ಟರು ಕಾಂಗ್ರೆಸಿನೊಳಗಿದ ರಹಸ್ಯವಾಗಿ ಕೆಲಸ ಮಾಡಲಾರಂಭಿಸಿದ್ದು (ದಕ್ಷಿಣ ಆಫ್ರಿಕಾದಲ್ಲಿದ್ದಂತೆ ದಕ್ಷಿಣ ಆಫ್ರಿಕಾದ ಕಮ್ಯೂನಿಸ್ಟ್ ಪಕ್ಷದ (SACP) ಮತ್ತು ಆಫ್ರಿಕನ್ ರಾಷ್ಟ್ರೀಯ ಕಾಂಗ್ರೆಸ್ (ANC) ಸದಸ್ಯನಾಗಬಹುದಾಗಿದ್ದ ದ್ವಿಸದಸ್ಯತ್ವಕ್ಕೆ ಇಲ್ಲಿ ಅವಕಾಶವಿರಲಿಲ್ಲ) ಮತ್ತು ಕಾಂಗ್ರೆಸ್ ಸೋಶಲಿಸ್ಟ್ ಪಕ್ಷದೊಂದಿಗೆ ಸಹಕಾರದಲ್ಲಿ ಕೆಲಸ ಮಾಡಿದ್ದು.

ಜರ್ಮನಿಯು ಸೋವಿಯತ್ ಒಕ್ಕೂಟದ ಮೇಲೆ ಯುದ್ಧ ಆರಂಭಿಸಿದ ನಂತರ ಸಂಯುಕ್ತ ರಂಗದ ಈ ಹಂತವು ಕೊನೆಗೊಂಡಿತು. ಈ ದಾಳಿಯಿಂದಾಗಿ ಯುದ್ಧದ ಸ್ವರೂಪವೇ ಬದಲಾಯಿತು ಎಂಬ ಕಮ್ಯೂನಿಸ್ಟ್ ಪಕ್ಷದ ತಿಳುವಳಿಕೆಯು ಪ್ರಮುಖ ಕಾಂಗ್ರೆಸ್ಸಿಗರಲ್ಲಿ ಸಹಾನುಭೂತಿಯನ್ನು ಹುಟ್ಟಿಸಿತಾದರೂ, ಕಮ್ಯೂನಿಸ್ಟ್ರ ನಿಲುವನ್ನು ಕಾಂಗ್ರೆಸ್ ಸಮಾಜವಾದಿ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳು ಅಧಿಕೃತವಾಗಿ ತಿರಸ್ಕರಿಸಿದವು ಮತ್ತು ಅದೇ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಿದವು. ಈ ಚಳುವಳಿಯಲ್ಲಿ ಕಾಂಗ್ರೆಸ್‌ನ ಸದಸ್ಯರಾಗಿದ್ದ ಅನೇಕ ಕಮ್ಯುನಿಸ್ಟರು ಕೂಡ ದೀರ್ಘ ಕಾಲದ ಜೈಲುವಾಸ ಅನುಭವಿಸಿದರು.

ಸಮಾಜವಾದಿ ಕ್ರಾಂತಿಗೆ ನೇತೃತ್ವ ನೀಡಬೇಕಾದ ಶ್ರಮಿಕ ವರ್ಗ ಸಮಾಜದ ಇತರ ವರ್ಗಗಳೊಂದಿಗೆ ಹೊಂದಿರುವ ಸಂಬಂಧಗಳ ವಿಶ್ಲೇಷಣೆಯ ಆಧಾರದಲ್ಲಿ ಕಮ್ಯುನಿಸ್ಟ್ ಪಕ್ಷವೊಂದು ಕಾಲಕಾಲಕ್ಕೆ ತನ್ನ ಕಾರ್ಯತಂತ್ರಗಳನ್ನು ರೂಪಿಸಿಕೊಳ್ಳುತ್ತದೆ. ಭಾರತದಲ್ಲಿ ಕಮ್ಯುನಿಸ್ಟರು ಕಳೆದ ನೂರು ವರ್ಷಗಳಲ್ಲಿ ಇದನ್ನು ಹೇಗೆ ರೂಪಿಸಕೊಂಡರು ಎಂಬುದನ್ನು ಈ ಲೇಖನದಲ್ಲಿ ಹಿರಿಯ ಆರ್ಥಿಕ ತಜ್ಞ ಪ್ರೊ. ಪ್ರಭಾತ್ ಪಟ್ನಾಯಕ್ ಮಾಡಿದ್ದಾರೆ. ಮರಣಾವಸ್ಥೆಯಲ್ಲಿರುವ ನವ ಉದಾರ ಬಂಡವಾಳಶಾಹಿಯನ್ನು ರಕ್ಷಿಸಲು, ಒಂದೆಡೆಯಲ್ಲಿ ದಬ್ಬಾಳಿಕೆ, ಇನ್ನೊಂದೆಡೆಯಲ್ಲಿ “ಅನ್ಯರನ್ನು” ಶತ್ರುಗಳು ಎಂದು ಭಾವಿಸುವಂತೆ ಜನರ ಗಮನವನ್ನು ತಿರುಗಿಸುವ ಕ್ರಮಗಳ ಮೂಲಕ ಪ್ರಯತ್ನಿಸಲಾಗುತ್ತಿದೆ. ಈ ಪರಿಸ್ಥಿತಿಯಿಂದ ಹೊರಬರುವುದೇ ಭಾರತದ ಕಮ್ಯುನಿಸ್ಟ್ ಚಳುವಳಿಯ ಶತಮಾನೋತ್ಸವದ ಸಂದರ್ಭದಲ್ಲಿ ಕಮ್ಯೂನಿಸ್ಟ್ರ ಮುಂದಿರುವ ಹೊಸ ಸವಾಲು ಎನ್ನುತ್ತಾರೆ ಅವರು.

ಸ್ವಾತಂತ್ರ್ಯದೊಂದಿಗೆ ಹೊಸ ಪ್ರಭುತ್ವದ ಸ್ವರೂಪ ಮತ್ತು ಬಂಡವಾಳಶಾಹಿಗಳೊಂದಿಗಿನ ಸಂಬಂಧದ ಪ್ರಶ್ನೆಯು ಮುನ್ನೆಲೆಗೆ ಬಂತು. ಪಕ್ಷದೊಳಗೆ ಒಂದು ತೀವ್ರ ಸ್ವರೂಪದ ಆಂತರಿಕ ಚರ್ಚೆಯನ್ನು ಹುಟ್ಟುಹಾಕಿದ ಈ ಪ್ರಶ್ನೆಯು ಅಂತಿಮವಾಗಿ ಪಕ್ಷವನ್ನೇ ವಿಭಜಿಸಿತು. ಸಿಪಿಐ(ಎಂ) ತನ್ನ ಕಾರ್ಯಕ್ರಮದಲ್ಲಿ ನೆಲೆಗೊಳಿಸಿದ ಸೈದ್ಧಾಂತಿಕ ನಿಲುವು, ಕ್ರಾಂತಿಪೂರ್ವದಲ್ಲಿ ರಷ್ಯಾದ ಸಮಾಜವಾದಿ ಪ್ರಜಾಪ್ರಭುತ್ವವಾದಿ ಕಾರ್ಮಿಕ ಪಕ್ಷದ (RSDLP) ಆಂತರಿಕ ಚರ್ಚೆಗಳಲ್ಲಿ ಲೆನಿನ್ ತೆಗೆದುಕೊಂಡ ನಿಲುವಿನಿಂದ ಮೂಡಿಬಂದದ್ದೇ ಆಗಿದೆ. ಈ ನಿಲುವು, ಇಪ್ಪತ್ತನೇ ಶತಮಾನದಲ್ಲಿ ಮೂರನೆಯ ಜಗತ್ತಿನ ಕ್ರಾಂತಿಕಾರಿ ಪಕ್ಷಗಳ ಕಾರ್ಯಕ್ರಮಗಳಿಗೆ ಒಂದಲ್ಲಾ ಒಂದು ರೀತಿಯಲ್ಲಿ ಆಧಾರವಾಗಿದೆ. ಲೆನಿನ್ ಅವರ ವಾದ ಹೀಗಿತ್ತು: ಚಾರಿತ್ರಿಕವಾಗಿ ಬಂಡವಾಳಶಾಹಿಯು ತಡವಾಗಿ ಕಾಲಿಟ್ಟ ದೇಶಗಳಲ್ಲಿ, ಊಳಿಗಮಾನ್ಯ-ವಿರೋಧಿ ಪ್ರಜಾಪ್ರಭುತ್ವ ಕ್ರಾಂತಿಯನ್ನು ನೆರವೇರಿಸಲು ಅದು ಅಸಮರ್ಥವಾಯಿತು; ಏಕೆಂದರೆ, ಊಳಿಗಮಾನ್ಯ ಆಸ್ತಿ-ಸಂಬಂಧಗಳ ಮೇಲೆ ಅದು ನಡೆಸುವ ಆಕ್ರಮಣವು ಬಂಡವಾಳಶಾಹಿ (ತನ್ನ) ಆಸ್ತಿ-ಸಂಬಂಧಗಳ ಮೇಲೆಯೂ ತಿರುಗಿ ಬೀಳಬಹುದು ಎಂಬ ಭಯ ಅದನ್ನು ಕಾಡುತ್ತಿತ್ತು. ಆದ್ದರಿಂದ, ಅದು ರೈತರ ಪ್ರಜಾಸತ್ತಾತ್ಮಕ ಆಶೋತ್ತರಗಳನ್ನು ಈಡೇರಿಸಲಿಲ್ಲ. ರೈತಾಪಿ ವರ್ಗದ ಸಖ್ಯದೊಂದಿಗೆ ಕಾರ್ಮಿಕ ವರ್ಗವು ನಡೆಸುವ ಕ್ರಾಂತಿಯಿಂದ ಮಾತ್ರ ಊಳಿಗಮಾನ್ಯ ಆಸ್ತಿ-ಸಂಬಂಧಗಳನ್ನು ಮುರಿದು, ಸವಲತ್ತುಗಳನ್ನು ಕಿತ್ತುಹಾಕಿ, ಭೂಮಿಯ ಮರುಹಂಚಿಕೆಯ ಮೂಲಕ ಪ್ರಜಾತಾಂತ್ರಿಕ ಕ್ರಾಂತಿಯನ್ನು ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ. ಈ ಪ್ರಜಾತಾಂತ್ರಿಕ ಕ್ರಾಂತಿಯು, ಆರ್ಥಿಕ ಅಭಿವೃದ್ಧಿಯನ್ನು ತಡೆಹಿಡಿಯುವುದರ ಬದಲಾಗಿ, ಭೂಸುಧಾರಣೆಗಳ ಮೂಲಕ ಕೃಷಿಯ ಬೆಳವಣಿಗೆಯನ್ನು ವೇಗಗೊಳಿಸಿ, ದೇಶದ ಆಂತರಿಕ ಮಾರುಕಟ್ಟೆಯ ಗಾತ್ರವನ್ನು ವಿಸ್ತರಿಸುವುದೇ ಅಲ್ಲದೆ ಆರ್ಥಿಕ ಅಭಿವೃದ್ಧಿಯ ಪ್ರಯೋಜನವು ಹೆಚ್ಚು ಹೆಚ್ಚು ಮಂದಿಗೆ ಲಭ್ಯವಾಗುವಂತೆ ಮಾಡುತ್ತದೆ

ಸ್ವಾತಂತ್ರ್ಯನಂತರ ಭಾರತದ ಪ್ರಭುತ್ವವು ಆಮೂಲಾಗ್ರ ಭೂ ಹಂಚಿಕೆಯನ್ನು ತೊರೆದು, ಅದರ ಬದಲಿಗೆ ಅನುಪಸ್ಥಿತ (ಬೇರೊಂದು ಊರಿನಲ್ಲಿ ವಾಸಿಸುವ) ಜಮೀನ್ದಾರರ ಭೂಮಿಯನ್ನು ಸ್ವಾಧೀನಪಡಿಸಿಕೊಂಡ ರೈತಾಪಿಯ ಮೇಲ್ವರ್ಗದ ದೊಡ್ಡ ದೊಡ್ಡ ಹಿಡುವಳಿದಾರರೊಂದಿಗೆ, ಪಾಳೇಗಾರಿ ಭೂಮಾಲೀಕರೂ ತಮ್ಮ ಖುದ್‌ಕಷ್ಟ್ ಭೂಮಿಯನ್ನು ಬಳಸಿಕೊಂಡು ಬಂಡವಾಳಗಾರರಾಗಿ ಬದಲಾಗಲು ಪ್ರೋತ್ಸಾಹಿಸಿದ ಕ್ರಮಗಳು, ಬಂಡವಾಳಶಾಹಿಯು ಭೂಮಾಲೀಕರೊಂದಿಗೆ ಸಖ್ಯ ಬೆಳೆಸಿರುವುದನ್ನು ಬಿಂಬಿಸುತ್ತದೆ. ದೊಡ್ಡ ಬಂಡವಾಳಶಾಹಿಗಳ ನೇತೃತ್ವದ ಬಂಡವಾಳಶಾಹಿ-ಭೂಮಾಲಿಕ ಹಿಡಿತದ ಪ್ರಭುತ್ವವು ಬಂಡವಾಳಶಾಹಿ ಮಾದರಿಯ ಅಭಿವೃದ್ಧಿಯನ್ನು ಮುಂದುವರೆಸಿತು ಮತ್ತು ಅದು ಗ್ರಾಮೀಣ ಪ್ರದೇಶಗಳಲ್ಲಿ ದೊಡ್ಡ ಹಿಡುವಳಿದಾರರ ಮತ್ತು ಪಾಳೇಗಾರಿ ಭೂಮಾಲೀಕರ ಮಿಶ್ರಣದ ರೈತ ಬಂಡವಾಳಶಾಹಿ ಅಭಿವೃದ್ಧಿಯ ಸ್ವರೂಪ ಪಡೆಯಿತು. ಹಾಗಾಗಿ, ಈ ಪ್ರಭುತ್ವವನ್ನು ಬದಲಾಯಿಸುವ ಹೊಣೆಗಾರಿಕೆಯನ್ನು ಶ್ರಮಿಕ ವರ್ಗವೇ ನಿರ್ವಹಿಸಬೇಕಾಗಿದೆ. ಈ ಜವಾಬ್ದಾರಿಯನ್ನು ನಿರ್ವಹಿಸುವ ಶ್ರಮಿಕ ವರ್ಗವು ಬಹುಸಂಖ್ಯೆಯ ರೈತರೊಂದಿಗೆ ಸಖ್ಯ ಬೆಳೆಸಿ, ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಮುನ್ನಡೆಸಿ, ಬಂಡವಾಳಶಾಹಿ-ಭೂಮಾಲಕ ಪ್ರಭುತ್ವವನ್ನು ಒಂದು ಹೊಸ ಪ್ರಭುತ್ವದೊಂದಿಗೆ ಬದಲಾಯಿಸಿ, ಸಮಾಜವನ್ನು ಅಂತಿಮವಾಗಿ ಸಮಾಜವಾದದತ್ತ ಕೊಂಡೊಯ್ಯ ಬೇಕಾಗುತ್ತದೆ. ಸಾಮ್ರಾಜ್ಯಶಾಹಿಯಿಂದ ಸ್ವಲ್ಪ ಮಟ್ಟಿನ ಸ್ವಾಯತ್ತತೆ ಕಾಯ್ದುಕೊಂಡ ರೀತಿಯ ಬಂಡವಾಳಶಾಹಿ ಮಾದರಿಯನ್ನು ಅನುಸರಿಸುವ ಮಹತ್ವಾಕಾಂಕ್ಷೆಯನ್ನು ಬಂಡವಾಳಶಾಹಿಯು ಹೊಂದಿತ್ತಾದರೂ, ಕಮ್ಯೂನಿಸ್ಟ್ ಪಕ್ಷವು ಗಮನಿಸಿರುವ ಹಾಗೆ, ವಿದೇಶಿ ಹಣಕಾಸು ಬಂಡವಾಳದೊಂದಿಗೆ ಅದರ ಸಹಯೋಗವು ಹೆಚ್ಚುತ್ತಾ ಹೋಯಿತು.

ಪ್ರಭುತ್ವದ ಮತ್ತು ಬಂಡವಾಳಶಾಹಿಯ ಲಕ್ಷಣಗಳ ಈ ನಿರೂಪಣೆಯಲ್ಲಿ ಎರಡು ಅಂಶಗಳು ಗಮನ ಸೆಳೆಯುತ್ತವೆ. ಮೊದಲನೆಯದು, ದೇಶದಲ್ಲಿ ಬಂಡವಾಳಶಾಹಿ ಮಾದರಿಯ ಅಭಿವೃದ್ಧಿಯನ್ನು ಅನುಸರಿಸಿತ್ತಾದರೂ ಸಹ ಅದು ಸಾಮ್ರಾಜ್ಯಶಾಹಿಯ ಆಶ್ರಯದಲ್ಲಲ್ಲ ಎಂಬುದು. ಭಾರತದ ಬಂಡವಾಳಶಾಹಿಯು ಬೆಳೆಯಲು ಮುಂದುವರೆದ ದೇಶಗಳ ಮಹಾನಗರೀಯ(ಮೆಟ್ರೊಪಾಲಿಟನ್) ಬಂಡವಾಳದ ನೆರವು ಪಡೆಯುವುದರ ಬದಲಾಗಿ ದೇಶದ ಸಾರ್ವಜನಿಕ ವಲಯವನ್ನು ಬಳಕೆಮಾಡಿಕೊಂಡದ್ದು, ಸೋವಿಯತ್ ಒಕ್ಕೂಟದ ನೆರವಿನಿಂದ ಆರ್ಥಿಕ ನಿರ್ವಸಾಹತೀಕರಣ (economic decoloni sation) ಪ್ರಕ್ರಿಯೆಯ ಚಾಲನೆ, ಯಾವ ಅರ್ಥದಲ್ಲಿ ನಿರ್ವಸಾಹತೀಕರಣ ಅಂದರೆ, ದೇಶದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮೆಟ್ರೋಪಾಲಿಟನ್ ಬಂಡವಾಳವು ಹೊಂದಿದ್ದ ನಿಯಂತ್ರಣ ಪುನಃ ದೇಶದ ಸಾರ್ವಜನಿಕ ವಲಯದ ವಶಕ್ಕೆ ಒಳಪಡಿಸುವ ಕ್ರಮ, ಮತ್ತು, ದೇಶವು ಅಲಿಪ್ತ-ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡ ಅಂಶಗಳು ಭಾರತದ ಬಂಡವಾಳಶಾಹಿಯು ಸಾಮ್ರಾಜ್ಯಶಾಹಿಗೆ ಯಾವ ರೀತಿಯಲ್ಲೂ ಅಧೀನವಾಗಿರಲಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸುತ್ತವೆ. ಇದೆಲ್ಲವನ್ನೂ ಬೇರೊಂದು ರೀತಿಯಲ್ಲಿ ಹೇಳುವುದಾದರೆ, ದೇಶದಲ್ಲಿ ಬಂಡವಾಳಶಾಹಿಯು ಅಭಿವೃದ್ಧಿ ಹೊಂದಲು ಸ್ವಾತಂತ್ರ್ಯೋತ್ತರ ಪ್ರಭುತ್ವವು ಜಾಗತಿಕ ಬಂಡವಾಳಶಾಹಿಯ ಬಣವನ್ನು ಸೇರಲಿಲ್ಲ.

ಗಮನ ಸೆಳೆಯುವ ಎರಡನೆಯ ಅಂಶವೆಂದರೆ, ಪ್ರಭುತ್ವವು, ಬಂಡವಾಳಶಾಹಿಯನ್ನು ಬೆಳೆಸುವಲ್ಲಿ ಮತ್ತು ಬಂಡವಾಳಗಾರರ ಹಾಗೂ ಭೂಮಾಲೀಕರ ಆಸ್ತಿಯನ್ನು ರಕ್ಷಿಸುವಲ್ಲಿ ತನ್ನ ವರ್ಗಸ್ವರೂಪವನ್ನು ತೋರಿಸಿಕೊಂಡಿತಾದರೂ, ಉಳಿದೆಲ್ಲವನ್ನೂ ಬಿಟ್ಟು ಸಂಪೂರ್ಣವಾಗಿ ಬಂಡವಾಳಶಾಹಿಯ ಮತ್ತು ಭೂಮಾಲೀಕರ ಹಿತಾಸಕ್ತಿಗಳ ರಕ್ಷಣೆಗಾಗಿಯೇ ಕೆಲಸ ಮಾಡಲಿಲ್ಲ. ಕಾರ್ಮಿಕರ ಮತ್ತು ರೈತರ ಪರವಾಗಿ ಆಗಾಗ ನಿಂತರೂ ಸಹ, ಎಲ್ಲ ವರ್ಗಗಳ ಹಿತಾಸಕ್ತಿಯನ್ನು ಕಾಪಾಡುತ್ತಿರುವುದಾಗಿ ತೋರಿಸಿಕೊಂಡಿತು. ಬಂಡವಾಳಶಾಹಿ ಕೃಷಿಗಾರಿಕೆ ಮಾಡುವ ಉದ್ದೇಶದಿಂದ ಭೂಮಾಲೀಕರು ತಮ್ಮ ಗೇಣಿದಾರರನ್ನು ಒಕ್ಕಲೆಬ್ಬಿಸಿದ ಅರ್ಥದಲ್ಲಿ ಬಂಡವಾಳದ ಆದಿಮ ಶೇಖರಣೆಯ ಉಸ್ತುವಾರಿ ವಹಿಸಿತ್ತಾದರೂ ಸಹ, ಪ್ರಭುತ್ವವು, ನಗರದ ದೊಡ್ಡ ದೊಡ್ಡ ಬಂಡವಾಳಗಾರರು ರೈತ ಕೃಷಿಯನ್ನಾಗಲಿ ಅಥವಾ ಕರಕುಶಲ ಉತ್ಪಾದನೆಯನ್ನಾಗಲಿ ಒತ್ತುವರಿ ಮಾಡುವ ಸಾಮಾನ್ಯ ಅರ್ಥದಲ್ಲಿ ಬಂಡವಾಳದ ಆದಿಮ ಶೇಖರಣೆಯನ್ನು ತಡೆಗಟ್ಟಿತು. ಆದಿಮ ಶೇಖರಣೆಗೆ ವಿರುದ್ಧವಾಗಿ, ಮೀಸಲು ನಿಗದಿಪಡಿಸುವ ಮೂಲಕ ಕೈಮಗ್ಗದ ಬಟ್ಟೆ ಉತ್ಪಾದನೆಗೆ ಪ್ರೋತ್ಸಾಹ ಕೊಟ್ಟದ್ದು ಮಾತ್ರವಲ್ಲದೆ, ಲಾಭದಾಯಕ ಬೆಲೆಗಳಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಲು ಮುಂದಾಯಿತು. ಈ ರೀತಿಯಲ್ಲಿ ಪ್ರಭುತ್ವವು ಕೃಷಿ ವಲಯದಲ್ಲಿ ಮಧ್ಯಪ್ರವೇಶ ಮಾಡಿದ್ದರ ಫಲಾನುಭವಿಗಳು ಏಕೈಕವಾಗಿ ಭೂಮಾಲೀಕರೇ ಆಗಿರಲಿಲ್ಲ; ಎಲ್ಲ ಕೃಷಿಕರೂ ಅದರ ಪ್ರಯೋಜನ ಪಡೆದರು. ಅದೇ ರೀತಿಯಲ್ಲಿ, ಜಾಗತಿಕ ಮಾರುಕಟ್ಟೆಯ ಬೆಲೆ ಏರಿಳಿತಗಳಿಂದ ರೈತರಿಗೆ ರಕ್ಷಣೆ, ಕೃಷಿ ಲಾಗುವಾಡುಗಳಿಗೆ(inputs) ಸಬ್ಸಿಡಿ, ಸಾಂಸ್ಥಿಕ ಸಾಲಗಳಿಗೆ ಸಬ್ಸಿಡಿ, ಸರ್ಕಾದ ವಿಸ್ತರಣಾ ಸೇವೆಗಳ ಮೂಲಕ ಕೃಷಿಯಲ್ಲಿ ಹೊಸ ಹೊಸ ಪದ್ಧತಿಗಳು ಮತ್ತು ಹೊಸ ತಳಿಯ ಬೀಜಗಳು ಮುಂತಾದ ಸೌಲಭ್ಯಗಳನ್ನು ರೈತರಿಗೆ ಒದಗಿಸಲಾಯ್ತು. ಈ ಎಲ್ಲ ಪ್ರಯೋಜನಗಳ ಸಿಂಹಪಾಲು ಗ್ರಾಮೀಣ ಉದಯೋನ್ಮುಖ ಬಂಡವಾಳಗಾರರಿಗೆ ದೊರೆತರೂ ಸಹ, ಹೆಚ್ಚಿನ ಸಂಖ್ಯೆಯ ಸಣ್ಣ ರೈತರಿಗೂ ಪ್ರಯೋಜನ ಲಭಿಸಿತು.

ಬಂಡವಾಳಶಾಹಿ ಮಾದರಿಯನ್ನು ಅನುಸರಿಸಿದ ಅಭಿವೃದ್ಧಿಯು ಅದರ ಪಾಡಿಗೆ ಅದು (sui generis) ಮುಂದುವರೆಯಿತು. ಸಾಮ್ರಾಜ್ಯಶಾಹಿಯೊಂದಿಗೆ ಸಹಯೋಗ ಹೆಚ್ಚುತ್ತಿದ್ದ ಅಂಶದ ಹೊರತಾಗಿಯೂ ಮತ್ತು ಆಗಾಗ ಮೆಟ್ರೋಪಾಲಿಟನ್ ಬಂಡವಾಳಕ್ಕೆ ಮುಜುಗುರ ಉಂಟುಮಾಡಿದ ಈ ಅಭಿವೃದ್ಧಿಯು ದೇಶದೊಳಗಿನಿಂದಲೇ ಉಂಟಾಯಿತೇ ವಿನಃ ಸಾಮ್ರಾಜ್ಯಶಾಹಿಯ ಆಶೀರ್ವಾದದಿಂದ ಆದದ್ದಲ್ಲ. ಅಭಿವೃದ್ಧಿಯ ಈ ವಿಚಿತ್ರ ಗುಣ-ಲಕ್ಷಣದಿಂದಾಗಿ, ಅದು ಸಮಾಜದಲ್ಲಿ ಸರಿಪಡಿಸಲಾಗದ ಲೋಪ-ದೋಷಗಳನ್ನು ಉಂಟುಮಾಡಲಿಲ್ಲ. ಅಂದರೆ, ವಸಾಹತುಶಾಹಿ-ವಿರೋಧಿ ಹೋರಾಟದ ಸಮಯದಲ್ಲಿ ಸಾಮ್ರಾಜ್ಯಶಾಹಿಯ ವಿರುದ್ಧ ಭುಜಕ್ಕೆ ಭುಜ ಕೊಟ್ಟು ಹೋರಾಡಿದ ಬೇರೆ ಬೇರೆ ವರ್ಗಗಳ ಒಳಗೆ ದ್ವೇಷಾಸೂಯೆ ಉಂಟಾಗುವ ಮಟ್ಟಿನ ಲೋಪಗಳಿರಲಿಲ್ಲ. ಇದನ್ನೇ ಬೇರೊಂದು ರೀತಿಯಲ್ಲಿ ಹೇಳುವುದಾದರೆ, ವಸಾಹತುಶಾಹಿ-ವಿರೋಧಿ ಹೋರಾಟದಲ್ಲಿ ಕೊಟ್ಟಿದ್ದ ಉಳುವವ£ಗೆ ಭೂಮಿ, ಉದ್ಯೋಗ ಮುಂತಾದ ಅನೇಕ ಭರವಸೆಗಳಿಗೆ ಬಂಡವಾಳಶಾಹಿಯು ದ್ರೋಹ ಬಗೆಯಿತಾದರೂ, ಆರ್ಥಿಕ, ಸಾಮಾಜಿಕ ವಿಷಯಗಳ ಬಗ್ಗೆ ಸರ್ಕಾರದ ನಿಯಂತ್ರಣವೇ ಪ್ರಧಾನವಾಗಿದ್ದ ಸಮಯದವರೆಗೂ ವಸಾಹತುಶಾಹಿ-ವಿರೋಧಿ ಹೋರಾಟದ ಆಶಯಗಳಿಗೆ ಸಂಪೂರ್ಣವಾಗಿ ದ್ರೋಹ ಬಗೆಯಲಿಲ್ಲ. ಈ ಕಾರಣದಿಂದಾಗಿಯೇ, ಪಕ್ಷವು ಆಡಳಿತವನ್ನು ವಿರೋಧಿಸುತ್ತಿದ್ದರೂ ಸಹ, ಬ್ಯಾಂಕ್ ರಾಷ್ಟ್ರೀಕರಣ, ಸಾರ್ವಜನಿಕ ವಲಯದ ಅಭಿವೃದ್ಧಿ ಮತ್ತು ದೇಶದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಮೆಟ್ರೋಪಾಲಿಟನ್ ಬಂಡವಾಳವು ಹೊಂದಿದ್ದ ನಿಯಂತ್ರಣ ಪುನಃ ಸಾರ್ವಜನಿಕ ವಲಯದ ವಶಕ್ಕೆ, ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ ಮುಂತಾದ ಅನೇಕ ಪ್ರಗತಿಪರ ಕ್ರಮಗಳನ್ನು ಬೆಂಬಲಿಸಿತು.

ಬಂಡವಾಳಶಾಹಿಯ ತನ್ನ ಪಾಡಿಗೆ ಬೆಳೆಯುವ (sui generis) ಈ ಸ್ವಭಾವವು ಅನೇಕ ಮಂದಿಯಲ್ಲಿ ಒಂದು ತಪ್ಪು ಕಲ್ಪನೆ ಮೂಡಲು ಕಾರಣವಾಗಿತ್ತು. ಅದೇನೆಂದರೆ, ಬಂಡವಾಳಶಾಹಿಯ ಈ ಬೆಳವಣಿಗೆಯನ್ನು ನಿರ್ವಹಿಸುತ್ತಿರುವುದು ಒಂದು “ಮಧ್ಯಂತರದ ಆಳ್ವಿಕೆ”, ಬಂಡವಾಳಶಾಹಿ-ಭೂಮಾಲಕ ಪ್ರಭುತ್ವವಲ್ಲ ಎಂದು ಅನೇಕರು ಭಾವಿಸಿದ್ದರು. ಈ ತಪ್ಪು ಕಲ್ಪನೆಯೇ ಅದರ ಈ sui generis ಸ್ವಭಾವಕ್ಕೆ ಒಂದು ಪುರಾವೆಯಾಗುತ್ತದೆ. ಬಂಡವಾಳಶಾಹಿಯ ಈ ರೀತಿಯ ಬೆಳವಣಿಗೆಯು ಕನಿಷ್ಟ ನಾಲ್ಕು ಕಾರಣಗಳಿಂದಾಗಿ ಬಹಳ ಕಾಲ ಬಾಳಲಿಲ್ಲ: ಮೊದಲನೆಯದು, ಇಂತಹ ಒಂದು ಅಭಿವೃದ್ಧಿ ದಿಕ್ಪಥವನ್ನು ಸಾಧ್ಯವಾಗಿಸಿದ್ದ ಸೋವಿಯತ್ ಒಕ್ಕೂಟವೇ ಪತನವಾದದ್ದು; ಎರಡನೆಯದು, ಸ್ವಾತಂತ್ರ್ಯನಂತರದಲ್ಲಿ ಬಂಡವಾಳಗಾರರು ಮತ್ತು ಭೂಮಾಲಿಕರು ಎಸಗಿದ ಬೃಹತ್ ಪ್ರಮಾಣದ ತೆರಿಗೆ ವಂಚನೆಯಿಂದಾಗಿ ಉಲ್ಬಣಗೊಂಡ ವಿತ್ತೀಯ ಬಿಕ್ಕಟ್ಟು. ಮೂರನೆಯದು, ಎಪ್ಪತ್ತರ ದಶಕದಲ್ಲಿ ತೈಲ ಬೆಲೆಗಳ ತೀವ್ರ ಏರಿಕೆಯಿಂದಾಗಿ (“ತೈಲ-ಆಘಾತಗಳು”) ಮುಂದುವರೆದ ದೇಶಗಳ ಬ್ಯಾಂಕ್‌ಗಳಲ್ಲಿ ಶೇಖರಣೆಯಾದ ಬೆಟ್ಟದಷ್ಟು ಲಾಭವು ಹಣಕಾಸು ಬಂಡವಾಳವಾಗಿ ಮಾರ್ಪಟ್ಟಿತು. ಬ್ರೆಟನ್-ವುಡ್ಸ್ ವ್ಯವಸ್ಥೆಯನ್ನು ಕಿತ್ತೊಗೆದ ನಂತರ ಈ ಹಣಕಾಸು ಬಂಡವಾಳವು ಜಾಗತಿಕವಾಗಿ ಹರಿಯಿತು(ಬ್ರೆಟನ್-ವುಡ್ಸ್ ವ್ಯವಸ್ಥೆಯ ಕಿತ್ತೆಸೆತವನ್ನು ಸ್ವತಃ ಈ ಹಣಕಾಸು ಬಂಡವಾಳವೇ ರೂಪಿಸಿತ್ತು ಎಂದು ಹೇಳಲಾಗಿದೆ). ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿಯ ಲಾಭ ಪಡೆದು ಭಾರತದಂತಹ ರಾಷ್ಟ್ರಗಳಿಗೆ ಸಾಲ ಕೊಡಲು ಈ ಹಣಕಾಸು ಬಂಡವಾಳವು ಬಳಕೆಯಾಯ್ತು. ನಾಲ್ಕನೆಯದು, ವಸಾಹತುಶಾಹಿ ಕಾಲಕ್ಕೆ ಹೋಲಿಸಿದರೆ, ಬಡ ಜನರಿಗೆ ಅನೇಕ ಸೌಲಭ್ಯಗಳನ್ನು ಒದಗಿಸಿದ ಸಾಧನೆಗಳನ್ನು ಮಾಡಿದ್ದರೂ ಸಹ, ಈ ‘ನಿಯಂತ್ರಣದ ವ್ಯವಸ್ಥೆ’ಯು (dirigiste regime) ಬಡವರ ಬೆಂಬಲವನ್ನು ಉಳಿಸಿಕೊಳ್ಳುವುದು ಸಾಧ್ಯವಾಗಲಿಲ್ಲ.

ಜಾಗತಿಕ ಹಣಕಾಸು ಬಂಡವಾಳದ ಅಧೀನದ ನವ ಉದಾರವಾದಿ ಆಡಳಿತವು ಒಂದು ಅತ್ಯಂತ ಸಂಪ್ರದಾಯವಾದಿ ಸ್ವರೂಪದ ಬಂಡವಾಳಶಾಹಿಯನ್ನು ಪ್ರತಿನಿಧಿಸುತ್ತಿದೆ. ‘ನಿಯಂತ್ರಣದ ವ್ಯವಸ್ಥೆಯ ಅವಧಿ’ಯಲ್ಲಿ (dirigiste period) ಬಾಳಿದ sui generis ಬಂಡವಾಳಶಾಹಿಗೆ ಹೋಲಿಸಿದರೆ, ನವ ಉದಾರ ಆಡಳಿತ ಕಾಲದ ಬಂಡವಾಳಶಾಹಿಯು ಭಿನ್ನವಾಗಿದೆ. ನವ ಉದಾರದಡಿಯ ಪ್ರಭುತ್ವವು ಆಳುವ ವರ್ಗಗಳ ಹಿತಾಸಕ್ತಿಗಳನ್ನು, ಅದರಲ್ಲೂ ವಿಶೇಷವಾಗಿ ಜಾಗತಿಕ ಹಣಕಾಸು ಬಂಡವಾಳದೊಂದಿಗೆ ನಿಕಟ ಬಾಂಧವ್ಯ ಹೊಂದಿರುವ ಕಾರ್ಪೊರೇಟ್-ಹಣಕಾಸು ಕುಳಗಳ ಹಿತಾಸಕ್ತಿಗಳನ್ನು ಮತ್ತು ನೇರವಾಗಿಯೇ ಜಾಗತಿಕ ಹಣಕಾಸು ಬಂಡವಾಳದ ಹಿತಾಸಕ್ತಿಗಳನ್ನು ಉತ್ತೇಜಿಸುತ್ತದೆ (ಇಲ್ಲದಿದ್ದರೆ ವಿದೇಶಿ ಬಂಡವಾಳವು ಹಾರಿ ಹೋಗಬಹುದು ಎಂಬ ಭಯದಲ್ಲಿ). ದೇಶದ ಹಿರಿಯ ಬಂಡವಾಳಶಾಹಿಯು ಸಾಮ್ರಾಜ್ಯಶಾಹಿ ಯೊಂದಿಗಿನ ಸಂಬಂಧದಲ್ಲಿ ಸ್ವಲ್ಪ ಮಟ್ಟಿಗಾದರೂ ಸ್ವಾಯತ್ತತೆಯನ್ನು ಉಳಿಸಿಕೊಳ್ಳಬೇಕೆಂಬ ತನ್ನ ಮಹತ್ವಾಕಾಂಕ್ಷೆಯನ್ನು ತೊರೆದು ಈಗ ಮೆಟ್ರೋಪಾಲಿಟನ್ ಬಂಡವಾಳದೊಂದಿಗೆ ಬೆಸೆದುಕೊಳ್ಳುತ್ತಿರುವುದರಿಂದ, ದೇಶದೊಳಗೆ ಒಂದು ದಾಟಲಾಗದ ಕಂದಕ ನಿರ್ಮಾಣವಾಗಿದೆ.

ನವ ಉದಾರವಾದಿ ಆಡಳಿತವು ಕಿರು ಉತ್ಪಾದಕರಿಗೆ ಮತ್ತು ರೈತ ಕೃಷಿಗೆ ಕೊಟ್ಟಿದ್ದ ಬೆಂಬಲವನ್ನು ಬಹುಮಟ್ಟಿಗೆ ಹಿಂತೆಗೆದುಕೊಂಡಿದೆ. ಹಾಗಾಗಿ ಅವರು ದುರ್ಬಲರಾಗಿದ್ದಾರೆ. ಅಷ್ಟೇ ಅಲ್ಲದೆ, ಬಂಡವಾಳದ ಆದಿಮ ಶೇಖರಣೆಯನ್ನು ರೈತ ಕೃಷಿಯ ಮೇಲೆ ಹರಿಯಬಿಡಲಾಗಿದೆ. ಈ ಪ್ರಕ್ರಿಯೆಯು ಭೂಮಾಲೀಕರಿಂದ ನಡೆಯುತ್ತಿಲ್ಲ. ಬದಲಾಗಿ, ಕೃಷಿ-ವ್ಯಾಪಾರಿಗಳು ಮತ್ತು ಹೊರಗಿನ ದೊಡ್ಡ ಬಂಡವಾಳಗಾರರಿಂದ ನಡೆಯುತ್ತಿದೆ. ಅದೇ ರೀತಿಯಲ್ಲಿ, ನೋಟು ರದ್ದತಿಯ ಮೂಲಕ ಮತ್ತು ಜಿಎಸ್‌ಟಿ ಪದ್ಧತಿಗೆ ಹೊರಳುವ ಮೂಲಕ ಕಿರು ಉತ್ಪಾದನಾ ವಲಯದಲ್ಲೂ ಬಂಡವಾಳದ ಆದಿಮ ಶೇಖರಣೆಯಾಗುತ್ತಿದೆ. ಈ ವಲಯದ ಉತ್ಪನ್ನಗಳಿಗೆ ಒದಗಿಸಿದ್ದ ಮೀಸಲು ವ್ಯವಸ್ಥೆಯನ್ನು ಕೈಬಿಡಲಾಗಿದೆ. ತಮ್ಮ ಕಸುಬು/ಉದ್ಯೋಗಗಳಿಂದ ಪಲ್ಲಟಗೊಂಡ ರೈತರು ಮತ್ತು ಕಿರು ಉತ್ಪಾದಕರು ಉದ್ಯೋಗವನ್ನು ಅರಸಿ ಪಟ್ಟಣಗಳಿಗೆ ಹೋಗುತ್ತಾರೆ. ಆದರೆ, ಪಟ್ಟಣಗಳಲ್ಲಿ ಉದ್ಯೋಗಗಳು ಕ್ಷೀಣಿಸಿವೆ. ತಾಂತ್ರಿಕ ಆವಿಷ್ಕಾರಗಳು ಮತ್ತು ಸಂರಚನಾತ್ಮಕ ಬದಲಾವಣೆಗಳ ಮೇಲೆ ಯಾವ ನಿರ್ಬಂಧಗಳೂ ಇಲ್ಲದುದರಿಂದ ಮತ್ತು ಹಿಂದಿನ ಪರವಾನಗಿ ವ್ಯವಸ್ಥೆಯು ಹೇರಿದ್ದ ನಿರ್ಬಂಧಗಳನ್ನು ಕೈಬಿಟ್ಟಿದ್ದರಿಂದ ಉದ್ಯೋಗಗಳು ಕ್ಷೀಣಿಸಿವೆ. ಹಾಗಾಗಿ, ದಿನೇ ದಿನೇ ಬೆಳೆಯುತ್ತಿರುವ ನಿರುದ್ಯೋಗಿ ಪಡೆಯ ಗಾತ್ರವು ಸಂಘಟಿತ ಕಾರ್ಮಿಕರ ಸ್ಥಿತಿ ಗತಿಗಳಿಗೆ ಅಪಾಯ ಒಡ್ಡಿದೆ. ರೈತರ, ಕೃಷಿ ಕೂಲಿಕಾರರ, ಕಿರು ಉತ್ಪಾದಕರ ಮತ್ತು ಸಂಘಟಿತ ಕಾರ್ಮಿಕರ ಪಾಡು ದಿನೇ ದಿನೇ ಹದಗೆಡುತ್ತಾ ಬಿಡಿಸಲಾಗದ ಕಗ್ಗಂಟಾಗಿದೆ. ಹಾಗಾಗಿ, ಅಸಮಾನತೆ ಮಾತ್ರವಲ್ಲ, ಬಡತನವೂ ಉಲ್ಬಣಗೊಂಡಿದೆ.

ಅದೇ ಸಮಯದಲ್ಲಿ ನವ ಉದಾರವಾದವು ಹಲವಾರು ಚಟುವಟಿಕೆಗಳು/ಉದ್ಯೋಗಗಳನ್ನು, ಅದರಲ್ಲೂ ವಿಶೇಷವಾಗಿ ಸೇವಾ ವಲಯದ ಉದ್ಯೋಗಗಳನ್ನು (ಐಟಿ ಸಂಬಂಧಿತ ಸೇವೆಗಳು) ದೇಶ ದೇಶಗಳ ಮಹಾ ನಗರಗಳಿಂದ ಭಾರತದ ಅರ್ಥವ್ಯವಸ್ಥೆಗೆ ವರ್ಗಾಯಿಸಿದೆ. ಅದರಿಂದಾಗಿ ನಮ್ಮ ಜಿಡಿಪಿಯ ಬೆಳವಣಿಗೆಯ ದರ ಹೆಚ್ಚಿದೆ. ಈ ವಿದ್ಯಮಾನವು ಈ ಕೆಳಗಿನ ವಾದದಿಂದಾಗಿ ಪಕ್ಷದ ಮುಂದೆ ಹೊಸ ಸವಾಲನ್ನು ಒಡ್ಡುತ್ತದೆ.

ಮಾರ್ಕ್ಸ್ ತನ್ನ ‘ರಾಜಕೀಯ ಅರ್ಥಶಾಸ್ತ್ರದ ವಿಮರ್ಶೆಗೆ ಒಂದು ಕೊಡುಗೆ’ ಎಂಬ ಕೃತಿಯ ಮುನ್ನುಡಿಯಲ್ಲಿ, ಉತ್ಪಾದನೆಯ ಸ್ವರೂಪವನ್ನು ನಿರೂಪಿಸುವ ಉತ್ಪಾದನಾ ಸಂಬಂಧಗಳೇ ಉತ್ಪಾದಕ ಶಕ್ತಿಗಳ ಅಭಿವೃದ್ಧಿಯನ್ನು ಅಡ್ಡಿಪಡಿಸಿದಾಗ, ಉತ್ಪಾದನಾ ವಿಧಾನವು ಚಾರಿತ್ರಿಕವಾಗಿ ಗತಿಸುತ್ತದೆ ಎಂಬುದಾಗಿ ಹೇಳಿದ್ದರು. ಈ ಹೇಳಿಕೆಯ ಆಧಾರದಲ್ಲಿ, ಉತ್ಪಾದಕ ಶಕ್ತಿಗಳು ಅಭಿವೃದ್ಧಿ ಹೊಂದುತ್ತಾ ಹೋಗುವ ವರೆಗೆ, ಆ ಉತ್ಪಾದನಾ ವಿಧಾನವು ಐತಿಹಾಸಿಕವಾಗಿ ಪ್ರಗತಿಶೀಲವಾಗಿ ಉಳಿಯುತ್ತದೆ ಎಂಬ ಒಂದು ನಿರ್ಣಯಕ್ಕೆ ಬರಲಾಗುತ್ತದೆ. ಉತ್ಪಾದಕ ಶಕ್ತಿಗಳ ಅಭಿವೃದ್ಧಿಯ ಒಂದು ಸ್ಪಷ್ಟ ಸೂಚಿಯೆಂದರೆ ಜಿಡಿಪಿಯ ಬೆಳವಣಿಗೆಯ ದರವೇ. ಈ ಅಂಶವು ಏನನ್ನು ಹೇಳುತ್ತದೆ ಎಂದರೆ, ಜಿಡಿಪಿಯ ಬೆಳವಣಿಗೆಯು ವೇಗವಾಗಿ ಇರುವವರೆಗೂ ಒಂದು ಆಡಳಿತವನ್ನು ಅನ್ಯಾಯ ಮತ್ತು ಶೋಷಣೆಯ ಹೆಸರಿನಲ್ಲಿ ವಿರೋಧಿಸುವುದು ಐತಿಹಾಸಿಕವಾಗಿ ಅಸಮರ್ಥನೀಯವಾಗುತ್ತದೆ. ಈ ವಾದದ ಪ್ರಕಾರ, ಕಮ್ಯುನಿಸ್ಟರು ನವ ಉದಾರವಾದಿ ಜಾಗತೀಕರಣವನ್ನು ವಿರೋಧಿಸಬಾರದು. ಅದನ್ನು ಒಪ್ಪಿಕೊಳ್ಳುವಲ್ಲಿ ಇತರ ರಾಜಕೀಯ ಶಕ್ತಿಗಳೊಂದಿಗೆ ಕೈಜೋಡಿಸಬೇಕು, ವಿಮರ್ಶಾತ್ಮಕವಾಗಿಯಾದರೂ.

ಆದರೆ, ಈ ವಾದವು ಪರಿಶೀಲನೆಯಲ್ಲಿ ಬಿದ್ದು ಹೋಗುತ್ತದೆ. ಕ್ರಾಂತಿ ಪೂರ್ವದ ರಷ್ಯಾವು ಅಭೂತಪೂರ್ವ ಆರ್ಥಿಕ ಬೆಳವಣಿಗೆಯನ್ನು ಮತ್ತು ವಿಶೇಷವಾಗಿ ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸಿತ್ತು ಮತ್ತು ಮುಂದುವರಿದ ಬಂಡವಾಳಶಾಹಿ ಜಗತ್ತು ಒಂದು ಸುದೀರ್ಘ ಬೆಳವಣಿಗೆಯನ್ನು ಕಂಡಿತ್ತು ಎಂಬುದನ್ನು ಅರ್ಥಶಾಸ್ತ್ರದ ಇತಿಹಾಸಕಾರರು ಒಪ್ಪುತ್ತಾರೆ. ಆದಾಗ್ಯೂ, ಆ ಕಾಲದ ಬಂಡವಾಳಶಾಹಿಯು “ಮರಣಾವಸ್ಥೆಯಲ್ಲಿದೆ” ಎಂದು ಕರೆಯಲು ಲೆನಿನ್‌ಗೆ ಯಾವ ಸಂಕೋಚವೂ ಇರಲಿಲ್ಲ. ಸಂಕ್ಷಿಪ್ತವಾಗಿ ಹೇಳುವುದಾದರೆ, ಜಿಡಿಪಿ ಬೆಳವಣಿಗೆಯನ್ನು ಒಂದು ಉತ್ಪಾದನಾ ವಿಧಾನದ ಚಾರಿತ್ರಿಕ ಸೂಚಕವಾಗಿ ತೆಗೆದುಕೊಳ್ಳುವುದು ಸರಕುಗಳ ಸಂಕೇತಾರಾಧನೆ ಯಾಗುತ್ತದೆ ಮತ್ತು “ವಸ್ತುಗಳ” ಪ್ರಪಂಚದಲ್ಲಿ “ಸಂಬಂಧಗಳ” ಪ್ರಪಂಚಕ್ಕೆ ಸೇರಿದ ವಿದ್ಯಮಾನಗಳನ್ನು ಗುರುತಿಸಲು ಪ್ರಯತ್ನಿಸಿದಂತಾಗುತ್ತದೆ.

ಇತರ ರಾಜಕೀಯ ಶಕ್ತಿಗಳು ನವ ಉದಾರವಾದಿ ಜಾಗತೀಕರಣವನ್ನು ಒಪ್ಪಿಕೊಂಡರೂ ಸಹ, ಪಕ್ಷವು ಅದನ್ನು ದೃಢವಾಗಿ ವಿರೋಧಿಸಿದೆ. ಇತರ ಎಡ ರಾಜಕೀಯ ಶಕ್ತಿಗಳೊಂದಿಗೆ ಒಟ್ಟಾಗಿ, ಈ ಜಾಗತೀಕರಣದ ಬಲಿಪಶುಗಳಾದ ಕಾರ್ಮಿಕರು ಮತ್ತು ರೈತರ ಬೆಂಬಲಕ್ಕೆ ನಿಂತಿದೆ. ಹಲವು ದೇಶಗಳಲ್ಲಿ ಅನೇಕ ಎಡ ಗುಂಪುಗಳು ಜಾಗತೀಕರಣವನ್ನು ಒಂದು ಪ್ರಗತಿಯ ಸಂಕೇತವಾಗಿ ಸೂಚ್ಯವಾಗಿ ಇಲ್ಲವೇ ಮುಚ್ಚುಮರೆ ಇಲ್ಲದೆ ಸ್ವೀಕರಿಸಿರುವ ಸನ್ನಿವೇಶದಲ್ಲಿ ಇಲ್ಲಿ ಕಮ್ಯುನಿಸ್ಟ್ ಪಕ್ಷವು ಜಾಗತೀಕರಣವನ್ನು ದೃಢವಾಗಿ ವಿರೋಧಿಸಿದೆ.

ಕಮ್ಯೂನಿಸ್ಟ್ರ ಜಾಗತೀಕರಣದ ವಿರೋಧವು ಅವರಿಗೆ ಕಾರ್ಯತಃ ಕೆಲವು ಸಮಸ್ಯೆಗಳನ್ನು ತಂದೊಡ್ಡಿದೆ. ‘ನಿಯಂತ್ರಣದ ವ್ಯವಸ್ಥೆ’ (dirigiste period) ಕಾಲದಲ್ಲಿ ಬೇರೆ ಪಕ್ಷಗಳಿಂದ ಕಮ್ಯೂನಿಸ್ಟರನ್ನು ಬೇರ್ಪಡಿಸುತ್ತಿದ್ದ ಒಂದು ಅಂಶವೆಂದರೆ ಭೂಸುಧಾರಣೆಯೇ. ಕಮ್ಯೂನಿಸ್ಟ್ ಪಕ್ಷವು ಒಂದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಅದು ನಿರ್ವಹಿಸುವ ಕಾರ್ಯವು ಸ್ಪಷ್ಟವಾಗಿರುತ್ತಿತ್ತು. ಅಂದರೆ, ಭೂ ಸುಧಾರಣೆಗಳನ್ನು ಅದು ಜಾರಿಗೊಳಿಸುತ್ತಿತ್ತು. ಭೂ ಸುಧಾರಣೆಗಳನ್ನು ಪೂರ್ಣಗೊಳಿಸಿದ ನಂತರ ಮುಂದಿನ ಕಾರ್ಯ ಯಾವುದು ಎಂಬುದರ ಬಗ್ಗೆ ಸ್ಪಷ್ಟತೆ ಇರಲಿಲ್ಲ. ಕೈಗಾರಿಕೀಕರಣದ ಅವಶ್ಯಕತೆಯಿದ್ದಾಗ, ಅದು ಯಾವ ರೂಪದಲ್ಲಿರಬೇಕು ಮತ್ತು ಅದನ್ನು ಯಾವ ರೀತಿಯಲ್ಲಿ ಕಾರ್ಯರೂಪಕ್ಕೆ ತರಬೇಕು ಎಂಬ ಅಂಶಗಳ ಬಗ್ಗೆ, ರಾಜ್ಯ ಸರ್ಕಾರಗಳಿಗೆ (ಕಮ್ಯುನಿಸ್ಟರು ಸಾಮಾನ್ಯವಾಗಿ ಬಲವಾಗಿರುವ ರಾಜ್ಯಗಳಲ್ಲಿ) ನವ ಉದಾರವಾದಿ ಆಡಳಿತದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಅವಕಾಶವೇ ಇಲ್ಲ. ಹಾಗಾಗಿ, ಇಂತಹ ಆಳ್ವಿಕೆಯ ಅಡಿಯಲ್ಲಿ ಕಮ್ಯುನಿಸ್ಟ್ ರಾಜ್ಯ ಸರ್ಕಾರಗಳು ತಮಗೆ ಒಪ್ಪಿಗೆಯಾಗದಿದ್ದರೂ ಸಹ, ಅನೇಕ ಸಂದರ್ಭಗಳಲ್ಲಿ ಇತರ ರಾಜ್ಯ ಸರ್ಕಾರಗಳನ್ನು ಅನುಕರಿಸಬೇಕಾಗುತ್ತಿತ್ತು. ಈ ಬಗ್ಗೆ ಹೆಚ್ಚಿನ ಚಿಂತನೆಗಳು ಮತ್ತು ಪ್ರಯೋಗಗಳು ನಡೆಯಬೇಕಾಗಿದೆ.

ಈಗ ನವ ಉದಾರವಾದಿ ಜಾಗತೀಕರಣಕ್ಕೇ ಮುಂದೆ ದಾರಿ ಕಾಣದಂತಾಗಿದೆ. ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಸರ್ವಾಧಿಕಾರಶಾಹಿ/ಫ್ಯಾಸಿಸ್ಟ್ ಆಡಳಿತಗಳು ನಾಯಿ ಕೊಡೆಗಳಂತೆ ತಲೆ ಎತ್ತಿರುವ ವಿದ್ಯಮಾನವು ಬಂಡವಾಳಶಾಹಿ ಬಿಕ್ಕಟ್ಟಿನ ದ್ಯೋತಕವಾಗಿದೆ. ಮರಣಾವಸ್ಥೆಯಲ್ಲಿರುವ ನವ ಉದಾರ ಬಂಡವಾಳಶಾಹಿಯನ್ನು ರಕ್ಷಿಸಲು, ದಬ್ಬಾಳಿಕೆಯ ಮತ್ತು “ಅನ್ಯರನ್ನು” ಶತ್ರುಗಳು ಎಂದು ಪರಿಭಾವಿಸುವತ್ತ ಜನರ ಗಮನವನ್ನು ತಿರುಗಿಸುವ ಕ್ರಮಗಳ ಮಿಶ್ರಣದ ಮೂಲಕ ಪ್ರಯತ್ನಿಸಲಾಗುತ್ತಿದೆ. ಈ ಪರಿಸ್ಥಿತಿಯಿಂದ ಹೊರಬರುವುದೇ ಭಾರತದ ಕಮ್ಯುನಿಸ್ಟ್ ಚಳುವಳಿಯ ಶತಮಾನೋತ್ಸವದ ಸಂದರ್ಭದಲ್ಲಿ ಕಮ್ಯೂನಿಸ್ಟ್ರ ಮುಂದಿರುವ ಒಂದು ಹೊಸ ಸವಾಲು.

ಅನು: ಕೆ.ಎಂ.ನಾಗರಾಜ್

Leave a Reply

Your email address will not be published. Required fields are marked *