ಕೇಂದ್ರೀಯ ಏಜೆನ್ಸಿಗಳು ಬಿಜೆಪಿ ಸರಕಾರದ ರಾಜಕೀಯ ಅಂಗಗಳಂತೆ ವರ್ತಿಸುತ್ತಿವೆ

ಜಾರಿ ನಿರ್ದೇಶನಾಲಯ(ಇ.ಡಿ.) ಮತ್ತು ಇತರ ಕೇಂದ್ರೀಯ ತನಿಖಾ ಏಜೆನ್ಸಿಗಳನ್ನು ಕೇರಳದ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಎಲ್‌ಡಿಎಫ್ ಸರಕಾರವನ್ನು ಅಸ್ಥಿರಗೊಳಿಸಲು ಮತ್ತು ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಗುರಿಯಿಡಲು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಬಲವಾಗಿ ಖಂಡಿಸಿದೆ.

ಚಿನ್ನ ಕಳ್ಳಸಾಗಾಣಿಕೆಯ ಮೂಲಕ ಪಡೆದ ಹಣವನ್ನು ರಾಷ್ಟ್ರ-ವಿರೋಧಿ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಎಂಬ ಆಪಾದನೆಯ ಬಗ್ಗೆ ಯು.ಎ.ಪಿ.ಎ. ಅಡಿಯಲ್ಲಿ ನಡೆಯುತ್ತಿರುವ ಕೇಂದ್ರೀಯ ತನಿಖೆಗಳನ್ನು, ಅದರ ಬದಲು, ಕೇರಳದಲ್ಲಿನ ಆಳುವ ಎಲ್‌ಡಿಎಫ್ ಸರಕಾರದ ರಾಜಕೀಯ ಮುಖಂಡತ್ವವನ್ನು ಸಿಗಿಸಿ ಹಾಕಲು ಬಳಸಲಾಗುತ್ತಿದೆ.

ಈಗ ತನಿಖಾ ಸಂಸ್ಥೆಗಳ ವಶದಲ್ಲಿರುವ ಆರೋಪಿಗಳಲ್ಲಿ ಇಬ್ಬರು, ತಮ್ಮ ಮೇಲೆ ರಾಜಕೀಯ ಮುಖಂಡತ್ವವನ್ನು ಹೆಸರಿಸಲು ಒತ್ತಡ ತರಲಾಗುತ್ತಿದೆ, ಅದಕ್ಕೆ ಪ್ರತಿಯಾಗಿ ತಮ್ಮನ್ನು ಆರೋಪಿಗಳ ಬದಲಾಗಿ ಅಪ್ರೂವರ್ ಆಗಿ ಮಾಡಲಾಗುವುದು ಎಂದು ಹೇಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಒಬ್ಬ ಮಹಿಳೆಯ ಆಡಿಯೋ ರೆಕಾರ್ಡಿಂಗ್ ಮತ್ತು ಒಬ್ಬ ಅಮಾನತಾಗಿರುವ ಐಎಎಸ್ ಅಧಿಕಾರಿಯ ಜಾಮೀನು ಅರ್ಜಿ ಎರಡೂ ಇದನ್ನು ಹೇಳಿವೆ.

ಇದು ಅತ್ಯಂತ ಅಸಹ್ಯಕಾರಿ ಮತ್ತು ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್‌ ಬ್ಯುರೊ ಹೇಳಿದೆ. ಬಿಜೆಪಿ ಕೇಂದ್ರ ಸರಕಾರ ಕೇಂದ್ರೀಯ ಏಜೆನ್ಸಿಗಳನ್ನು ಭಾರತೀಯ ಸಂವಿಧಾನದ ಮೂಲ ತತ್ವಗಳನ್ನು ಶಿಥಿಲಗೊಳಿಸಲು ಮತ್ತು ಇಂತಹ ಅಸಂವಿಧಾನಿಕ ಸಾಧನಗಳ ಮೂಲಕ ತಮ್ಮ ರಾಜಕೀಯ ಹಿತಗಳನ್ನು ಈಡೇರಿಸಿಕೊಳ್ಳಲು ಸಂಪೂರ್ಣವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಅದು ಹೇಳಿದೆ.

ಇಂತಹ ನಡೆಗಳನ್ನು ವಿರೋಧಿಸುವುದಾಗಿ ಹೇಳಿರುವ ಸಿಪಿಐ(ಎಂ) ಪೊಲಿಟ್‌ ಬ್ಯುರೊ ನ್ಯಾಯಾಂಗ ಮತ್ತು ಇತರ ಸ್ವತಂತ್ರ ಸಂಸ್ಥೆಗಳು ಸಂವಿಧಾನವನ್ನು ಎತ್ತಿ ಹಿಡಿಯಬೇಕು ಎಂದು ಕರೆ ನೀಡಿದೆ. ಇಂತಹ ದುಷ್ಟ ಹಂಚಿಕೆಗಳ ವಿರುದ್ಧ ಪ್ರತಿಭಟಿಸಿ ಎದ್ದು ನಿಲ್ಲಬೇಕು ಎಂದು ಅದು ಜನತೆಗೆ ಕರೆ ನೀಡಿದೆ. ಕೇರಳದ ಜನತೆ ರಾಜ್ಯದಲ್ಲಿ ಪರಸ್ಪರ ಕೈಜೋಡಿಸಿ ಕೆಲಸ ಮಾಡುತ್ತಿರುವ ಬಿಜೆಪಿ ಮತ್ತು ಯು.ಡಿ.ಎಫ್‌.ನ ಕುತಂತ್ರಗಳಿಗೆ ತಕ್ಕ ಉತ್ತರ ಕೊಡುತ್ತಾರೆ ಎಂಬ ವಿಶ್ವಾಸವನ್ನು ಪೊಲಿಟ್‌ ಬ್ಯುರೊ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *