ಪ್ರಾದೇಶಿಕ ಪಕ್ಷಗಳ ಮುಂದೆ ಈಗ ಉಳಿವು-ಅಳಿವಿನ ಸವಾಲು

ಆರ್‌ಎಸ್‌ಎಸ್ ನಡೆಯು ಸಮಾಜವನ್ನು ಏಕರೂಪವಾಗಿಸುವುದಾಗಿದೆ. ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ಅಸ್ಮಿತೆಗಳನ್ನೆಲ್ಲ ಹಿಂದುತ್ವದ ಮೂಲಕ ಉಸಿರುಕಟ್ಟಿಸುವ ಪ್ರಯತ್ನವನ್ನು ಅದು ನಡೆಸುತ್ತಿದೆ. ಇದು ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೇ ಅಪಾಯಕ್ಕೊಡ್ಡಲಿದೆ. ಬಿಜೆಪಿ ತನ್ನ ಸಂಪೂರ್ಣ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳಲು ಬಿಜೆಪಿ ಹೊರಟಿದೆ. ಮೋದಿ ಸರ್ಕಾರದೊಂದಿಗೆ ರಾಜಿ ಮಾಡಿಕೊಳ್ಳಲು ಬಯಸುವ ಮತ್ತು ಹಿಂದುತ್ವ ರಾಜಕೀಯವನ್ನು ವಿರೋಧಿಸಲು ನಿರಾಕರಿಸುತ್ತಿರುವ ಈ ಪ್ರಾದೇಶಿಕ ಪಕ್ಷಗಳು, ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡಿದ್ದ ಹಾಗೂ ಬಿಜೆಪಿ ಸರ್ಕಾರದ ಭಾಗವಾಗಿದ್ದ ಪ್ರಾದೇಶಿಕ ಪಕ್ಷಗಳ ಗತಿಯಿಂದ ಪಾಠ ಕಲಿಯಬೇಕು. ಅವರಿಗೆ ಆಯ್ಕೆ ಸುಸ್ಪಷ್ಟವಾಗಿದೆ – ಒಂದೇ ಬಿಜೆಪಿ-ಆರ್‌ಎಸ್‌ಎಸ್ ಜೋಡಿಯ ವಿರುದ್ಧ ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಹೋರಾಡಬೇಕು ಅಥವಾ ಶರಣಾಗಿ ನಶಿಸಿಹೋಗಬೇಕು. ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ ಸಲುವಾಗಿ, ಪ್ರಾದೇಶಿಕ ಪಕ್ಷಗಳು ಅತಿಮುಖ್ಯವಾದ ಆಯ್ಕೆ ಮಾಡಬೇಕಿದೆ.

KaratA copy
ಪ್ರಕಾಶ ಕಾರಟ್

ಇತ್ತೀಚೆಗೆ ತಾನೇ ಕೊನೆಗೊಂಡ ಮಹಾ ಹೈದರಾಬಾದ್ ಮುನಿಸಿಪಲ್ ಕಾರ್ಪೊರೇಷನ್ (ಜಿಹೆಚ್‌ಎಂಸಿ) ಚುನಾವಣೆಯಲ್ಲಿ ಬಿಜೆಪಿಯು ಅಬ್ಬರದ ಪ್ರಚಾರ ನಡೆಸಿದೆ, ಫಲಿತಾಂಶಗಳಿಗಾಗಿ ನಿರೀಕ್ಷಿಸಲಾಗುತ್ತಿದೆ. ದುಬ್ಬಕ ವಿಧಾನಸಭಾ ಉಪ ಚುನಾವಣೆಯಲ್ಲಿ ಈಗ ತಾನೇ ಪಡೆದ ಗೆಲುವಿನ, ಅದರಲ್ಲಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‌ಎಸ್)ಯನ್ನು ಸೋಲಿಸಿದ ಹುಮ್ಮಸ್ಸಿನಲ್ಲಿ ಅಮಿತ್ ಶಾ ರಿಂದ ಹಿಡಿದು ಆದಿತ್ಯನಾಥ್ ವರೆಗಿನ ರಾಷ್ಟ್ರೀಯ ನಾಯಕತ್ವದ ಮೂಲಕ ಬಿಜೆಪಿಯು ತನ್ನ ವಿಷಪೂರಿತ ಪ್ರಚಾರದ ಆಕ್ರಮಣ ನಡೆಸಿದೆ.

ಬಿಜೆಪಿಯು ತನ್ನೆಲ್ಲಾ ಶಕ್ತಿಯನ್ನು ಬಳಸಿ ಟಿಆರ್‌ಎಸ್ ಹಾಗೂ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ಅವರ ವಿರುದ್ಧ ಪ್ರಚಾರ ನಡೆಸಿತು. ಅವರ ಮೇಲೆ ವಂಶಪಾರಂಪರ‍್ಯಾದ, ಭಷ್ಟಾಚಾರದ ಹಾಗೂ ಮುಸ್ಲಿಂ ತುಷ್ಟೀಕರಣದ ಆರೋಪವನ್ನು ಹೊರಿಸಿ, ಪ್ರಾಸ್ತಾವಿಕವಾಗಿ ಹಿಂದಿನ ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಗಳಲ್ಲಿ ಎಐಎಂಐಎಂ ಜತೆ ಮೈತ್ರಿ ಮಾಡಿಕೊಂಡಿದ್ದನ್ನು ಬಿಜೆಪಿ ಪ್ರಸ್ತಾಪಿಸಿತು. ಅದರ ಉದ್ದೇಶ ಸ್ಪಷ್ಟವಾಗಿತ್ತು – ಕಾರ್ಪೊರೇಷನ್ ಚುನಾವಣೆಯನ್ನು ಟಿಆರ್‌ಎಸ್ ಹಾಗೂ ಅದರ ಸರ್ವೋಚ್ಛ ನಾಯಕನ ವಿರುದ್ಧ ಗುರಿಯಾಗಿಸುವ ಮೂಲಕ ತನ್ನನ್ನೇ ಪರ್ಯಾಯವೆಂದು ಬಿಂಬಿಸಿಕೊಳ್ಳಲು ಯತ್ನಿಸಿತು. ಈ ಅನಿರೀಕ್ಷಿತ ಆಕ್ರಮಣದಿಂದ ಟಿಆರ್‌ಎಸ್ ಮತ್ತು ಅದರ ನಾಯಕತ್ವಕ್ಕೆ ಆಶ್ಚರ್ಯವಾಗಿದ್ದರೆ, ಅದಕ್ಕೆ ಅವರೇ ಕಾರಣ.

2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ, ಮೋದಿ ಸರ್ಕಾರವನ್ನು ವಿರೋಧಿಸದಿರುವ ನಿಲುವನ್ನು ಟಿಆರ್‌ಎಸ್ ಅನುಸರಿಸಿಕೊಂಡು ಬಂದಿದೆ. ಸಂಸತ್ತಿನಲ್ಲಿ ಅತ್ಯಂತ ಪ್ರಜಾಪ್ರಭುತ್ವ-ವಿರೋಧಿ ಶಾಸನಗಳನ್ನು ಅದು ಬೆಂಬಲಿಸಿದೆ. ಅಷ್ಟೇ ಅಲ್ಲ, ಪೌರತ್ವ ತಿದ್ದುಪಡಿ ಕಾಯಿದೆಗೆ ವಿರೋಧ ಮಾಡಿದ್ದೊಂದನ್ನು ಬಿಟ್ಟು, ಬಿಜೆಪಿಯ ಹಿಂದುತ್ವ ಕಾರ್ಯಸೂಚಿಯ ವಿಚಾರದಲ್ಲಿ ಅದು ದಿವ್ಯ ಮೌನ ವಹಿಸಿದೆ.

ಇಲ್ಲಿಯ ತನಕವೂ ಟಿಆರ್‌ಎಸ್ ತನ್ನ ಟೀಕೆಗಳ ಸುರಿಮಳೆಯನ್ನು ಅವನತಿಯಲ್ಲಿರುವ ಕಾಂಗ್ರೆಸ್ ವಿರುದ್ಧ ತೀವ್ರವಾಗಿಸುವ ಮೂಲಕ, ಬಿಜೆಪಿಯು ತೆಲಂಗಾಣದಲ್ಲಿ ಮುನ್ನಡೆ ಸಾಧಿಸಲು ಅವಕಾಶ ಮಾಡಿಕೊಟ್ಟಿತು. 2019ರ ಲೋಕಸಭಾ ಚುನಾವಣೆಯ ಫಲಿತಾಂಶವು ಒಂದು ಎಚ್ಚರಿಕೆಯ ಗಂಟೆ ಬಾರಿಸಿದೆ – ಬಿಜೆಪಿಯು ನಾಲ್ಕು ಸ್ಥಾನಗಳನ್ನು ಗಳಿಸಿ, ಸರಿಸುಮಾರು 20% ಮತಗಳನ್ನು ಆ ರಾಜ್ಯದಲ್ಲಿ ಪಡೆದುಕೊಂಡಿದೆ.

2014ರಲ್ಲಿ ಮೋದಿ ಸರ್ಕಾರ ಬಂದಾಗಿನಿಂದ, ಅದನ್ನು  ವಿರೋಧಿಸದಿರುವ ನಿಲುವನ್ನು ಟಿಆರ್‌ಎಸ್ ಅನುಸರಿಸಿಕೊಂಡು ಬಂದಿದೆ. ಸಂಸತ್ತಿನಲ್ಲಿ ಅತ್ಯಂತ ಪ್ರಜಾಪ್ರಭುತ್ವ-ವಿರೋಧಿ ಶಾಸನಗಳನ್ನು ಅದು ಬೆಂಬಲಿಸಿದೆ. ಬಿಜೆಪಿಯ ಹಿಂದುತ್ವ ಕಾರ್ಯಸೂಚಿಯ ವಿಚಾರದಲ್ಲಿ ಅದು ದಿವ್ಯ ಮೌನ ವಹಿಸಿದೆ. ಈಗ ಬಿಜೆಪಿ ಹೈದರಾಬಾದ್ ಕಾರ್ಪೊರೇಷನ್ ಚುನಾವಣೆಯನ್ನು ಟಿಆರ್‌ಎಸ್ ಹಾಗೂ ಅದರ ಸರ್ವೋಚ್ಛ ನಾಯಕನ ವಿರುದ್ಧ ಗುರಿಯಾಗಿಸುವ ಮೂಲಕ ತನ್ನನ್ನೇ ಪರ್ಯಾಯವೆಂದು ಬಿಂಬಿಸಿಕೊಳ್ಳಲು ಯತ್ನಿಸಿದೆ.. ಈ ಅನಿರೀಕ್ಷಿತ ಆಕ್ರಮಣದಿಂದ ಟಿಆರ್‌ಎಸ್ ಮತ್ತು ಅದರ ನಾಯಕತ್ವಕ್ಕೆ ಆಶ್ಚರ್ಯವಾಗಿದ್ದರೆ, ಅದಕ್ಕೆ ಅವರೇ ಕಾರಣ.

New Delhi: Telangana Chief Minister K Chandrasekhar Rao calls on Prime Minister Narendra Modi in New Delhi on Oct 4, 2019. (Photo: IANS)

ಟಿ.ಆರ್.ಎಸ್ ಎದುರಿಸುತ್ತಿರುವ ಈ ದುಃಸ್ಥಿತಿಯು ಇತರ ಪ್ರಾದೇಶಿಕ ಪಕ್ಷಗಳು ಅನುಭವಿಸಿದ ರೀತಿಯಲ್ಲೇ ಇದೆ. ಎಲ್ಲಾ ಪ್ರಾದೇಶಿಕ ಪಕ್ಷಗಳು – ಅಧಿಕಾರದಲ್ಲಿರಲಿ ಅಥವಾ ಇಲ್ಲದಿರಲಿ – ಹುಚ್ಚುಚ್ಚಾಗಿ ಎಗರಾಡುತ್ತಿರುವ ಬಿಜೆಪಿಯನ್ನು ಎದುರಿಸುತ್ತಿವೆ, ಅವುಗಳ ಬೆಂಬಲದ ನೆಲೆಯನ್ನು ಅದು ಕೊರೆದುಹಾಕುತ್ತಿದೆ ಅಥವಾ ಅವುಗಳನ್ನು ಹಿಂದುತ್ವ ಶಕ್ತಿಗಳ ಅಧೀನ ಮಿತ್ರರನ್ನಾಗಿಸಿ ಅಮುಖ್ಯರನ್ನಾಗಿ ಮಾಡಿದೆ.

ಬಹುತೇಕ ಪ್ರಾದೇಶಿಕ ಪಕ್ಷಗಳು ತಾವೇ ಹೇಳಿಕೊಂಡಂತೆ ಸ್ವಾಭಾವಿಕವಾಗಿ ಜಾತ್ಯತೀತವಾಗಿರುತ್ತವೆ ಆದರೆ ಅವುಗಳ ಸಮಯಸಾಧಕತನವು, ಕೆಲವು ವೇಳೆ ರಾಜ್ಯ ರಾಜಕೀಯ ತುರ್ತಿನಿಂದಾಗಿ, ಕಳೆದ ಎರಡು ದಶಕಗಳಲ್ಲಿ ಒಂದಲ್ಲಾ ಒಂದು ಸಮಯದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವಂತೆ ಮಾಡಿವೆ. ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ಮತ್ತು ಸಮಾಜವಾದಿ ಪಕ್ಷಗಳನ್ನು ಹೊರತುಪಡಿಸಿ, ಈ ಪಕ್ಷಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿವೆ.

ಈ ಪಕ್ಷಗಳಿಗೆ ಏನಾಯಿತು ಎನ್ನುವುದನ್ನು ಅಸ್ಸಾಂ ಗಣ ಪರಿಷತ್ತಿ(ಎಜಿಪಿ)ನ ಅವಸ್ಥೆಯು ಸೋದಾಹರಣವಾಗಿ ವಿವರಿಸುತ್ತದೆ. ಎಜಿಪಿಯು 2001ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೊದಲು ಮೈತ್ರಿ ಮಾಡಿಕೊಂಡಿತು. ತದನಂತರ, ಬಿಜೆಪಿಯೊಂದಿಗೆ ಆಗಾಗ ಮಾಡಿಕೊಳ್ಳುತ್ತಿದ್ದ ಸಂಬಂಧಗಳು ಕ್ರಮೇಣವಾಗಿ ಅದರ ನೆಲೆಯನ್ನು ಕೊರೆದವು ಮತ್ತು ಅವನ್ನು ಬಿಜೆಪಿಯತ್ತ ಸರಿಸಿದವು. ಬಿಜೆಪಿ ನೇತೃತ್ವದ ಈಗಿನ ಸರ್ಕಾರದ ಮುಖ್ಯಮಂತ್ರಿ, ಸರ್ಬಾನಂದ ಸೋನೋವಲ್ ಈ ಹಿಂದೆ ಎಜಿಪಿಯ ಮುಖಂಡರಾಗಿದ್ದರು, 2011 ರಲ್ಲಿ ಬಿಜೆಪಿಗೆ ಪಕ್ಷಾಂತರವಾದರು. ಇವತ್ತು ಎಜಿಪಿಯು ತನ್ನದೇ ಮಸುಕಾದ ನೆರಳಿನಂತಾಗಿ, ಬಿಜೆಪಿ ಸರ್ಕಾರದಲ್ಲಿ ಅಂಚಿಗೆ ತಳ್ಳಲ್ಪಟ್ಟ ಪಾಲುದಾರನಾಗಿ ಕುಳಿತುಕೊಂಡಿದೆ.

ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ಉತ್ತರಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷ(ಬಿಎಸ್‌ಪಿ) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ನಷ್ಟಮಾಡಿಕೊಂಡ ಪಕ್ಷಗಳ ಇನ್ನೆರಡು ಉದಾಹರಣೆಗಳು. ಕಳೆದ ಲೋಕಸಭಾ ಚುನಾವಣೆಗೆ ಮುಂಚೆ ಟಿಡಿಪಿಯು ಬಿಜೆಪಿಯೊಂದಿಗೆ ಸಂಬಂಧ ಕಡಿದುಕೊಂಡಾಗ, ಅದರ ಸಾಕಷ್ಟು ಲೋಕಸಭಾ ಸದಸ್ಯರು ಬಿಜೆಪಿಗೆ ಪಕ್ಷಾಂತರಗೊಂಡಿದ್ದನ್ನು ನೋಡಬೇಕಾಯಿತು. ದಲಿತರ ಹಾಗೂ ಬಹುಜನರ ಒಂದು ಪ್ರತಿಪಾದಕ ಪಕ್ಷವಾಗಿ ಬಿಎಸ್‌ಪಿಯ ಪ್ರತಿಷ್ಠೆಯನ್ನು ಈ ಹಿಂದೆ ಬಿಜೆಪಿಯೊಂದಿಗಿನ ಸಹವಾಸವು ತಿಂದುಹಾಕಿತು.

ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ಪಕ್ಷವು ವಾಜಪೇಯಿ ಸರ್ಕಾರದಲ್ಲಿ ಪಾಲುದಾರನಾಗಿತ್ತು ಮತ್ತು 1999ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಸಾಧಿಸಿತ್ತು. ಎಡಪಂಥೀಯರ ವಿರುದ್ಧ ಭಯೋತ್ಪಾದನೆ ಹಾಗೂ ದೈಹಿಕ ದಬ್ಬಾಳಿಕೆಗಳನ್ನು ಹರಿಬಿಡುವುದರ ಮೂಲಕ ಬಿಜೆಪಿ ಬೆಳೆಯಲು ಅವಕಾಶ ಕಲ್ಪಿಸಿತು. ಬಂಗಾಳ ರಾಜಕೀಯದಲ್ಲಿ ಕೋಮು ರಕ್ಕಸನನ್ನು ಸಾಕಿ ಸಲಹಿದ ನಂತರ, ಈಗ ಮಮತಾ ಬ್ಯಾನರ್ಜಿ ಬಿಜೆಪಿಯ ಪೌರೋಹಿತ್ಯದ ಪ್ರವಚನಗಳನ್ನು ತಾನೇ ಕೇಳಬೇಕಾದ ಸ್ಥಿತಿ ಒದಗಿ ಬಂದಿದೆ.

ಒರಿಸ್ಸಾದಲ್ಲಿ ನವೀನ್ ಪಾಟ್ನಾಯಕ್ ಅವರ ಬಿಜು ಜನತಾ ದಳ ಸರ್ಕಾರ ಮತ್ತು ಆಂಧ್ರ ಪ್ರದೇಶದಲ್ಲಿ ಜಗನ್ ಮೋಹನ್ ರೆಡ್ಡಿಯವರ ವೈಎಸ್‌ಆರ್‌ಸಿಪಿ ಸರ್ಕಾರ ಕೇಂದ್ರದ ಮೋದಿ ಸರ್ಕಾರದೊಂದಿಗೆ ಸಹಕಾರದ ದಾಖಲೆ ಮಾಡಿವೆ. ಸಂಸತ್ತಿನ ಕಳೆದ ಅಧಿವೇಶನದಲ್ಲಿ ಅಂಗೀಕಾರಗೊಂಡ ಮೂರು ಕೃಷಿ ಮಸೂದೆಗಳನ್ನೂ ಒಳಗೊಂಡಂತೆ ಮೋದಿ ಸರ್ಕಾರವು ತಂದಿರುವ ಎಲ್ಲಾ ಪ್ರಮುಖ ಶಾಸನಗಳನ್ನು ಅವು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸಿವೆ.

ಒರಿಸ್ಸಾದಲ್ಲಿ ಬಿಜೆಪಿಯು ಈಗಾಗಲೇ ಬಿಜೆಡಿಗೆ ವಿರುದ್ಧದ ಪ್ರಮುಖ ಪಕ್ಷವಾಗಿ ಹೊರಹೊಮ್ಮಿದೆ ಮತ್ತು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅದನ್ನು ಸೋಲಿಸಲು ಶತಾಯ ಗತಾಯ ಎಲ್ಲಾ ಪ್ರಯತ್ನಗಳನ್ನೂ ಮಾಡಲಿದೆ. ಆಂಧ್ರಪ್ರದೇಶದಲ್ಲಿ, ವೈಎಸ್‌ಆರ್‌ಸಿಪಿ ಮತ್ತು ಟಿಡಿಪಿ ಎರಡೂ ಪಕ್ಷಗಳು ಬಿಜೆಪಿಯ ಅನುಗ್ರಹಕ್ಕಾಗಿ, ಅಂತಹ ನಿರ್ಲಜ್ಜೆಯ ರಾಜಕೀಯಗಳಿಂದ ಅವರು ತೆರಬೇಕಾದ ದುಬಾರಿ ಬೆಲೆಯನ್ನು ಲೆಕ್ಕಿಸದೆ ಪರಸ್ಪರ ಪೈಪೋಟಿ ನಡೆಸಿವೆ.

ಈ ಕೆಲವು ಪಕ್ಷಗಳು ಮತ್ತು ಸರ್ಕಾರಗಳು ಅವರ ನಾಯಕರು ಮತ್ತು ಕುಟುಂಬದವರ ಮೇಲೆ ಕೇಂದ್ರ ಸರ್ಕಾರದ ಸಂಸ್ಥೆಗಳಾದ ಸಿ.ಬಿ.ಐ. ಹಾಗೂ ಇ.ಡಿ. ಹರಿಬಿಡಬಹುದಾದ ದಾಳಿಗಳ ಬಗ್ಗೆ ನಿರಂತರವಾದ ಭಯದಲ್ಲಿವೆ. ಇದು, ಮೋದಿ ಸರ್ಕಾರ ಸರ್ವಾಧಿಕಾರಶಾಹಿ ಕೇಂದ್ರೀಕರಣದ ಧಾವಂತದಿಂದ ರಾಜ್ಯಗಳ ಹಕ್ಕುಗಳು ಹಾಗೂ ಒಕ್ಕೂಟ ವವ್ಯಸ್ಥೆಯ ತತ್ವಗಳ ಬಗ್ಗೆ ದಯ ದಾಕ್ಷಿಣ್ಯವಿಲ್ಲದೆ ಒರಟಾಗಿ ವರ್ತಿಸುತ್ತಿರುವಾಗಲೂ ಮೌನವಾಗಿರುವಂತೆ ಮಾಡಿದೆ.

ಬಿಜೆಪಿಯ ಏಕ-ಪಕ್ಷ ಪ್ರಾಬಲ್ಯದ ಹೊಸ ಯುಗದಿಂದ ಉದ್ಭವಿಸಿದ ಸವಾಲುಗಳ ಕಾರಣ ಈ ಪ್ರಾದೇಶಿಕ ಪಕ್ಷಗಳು ಬಿಕ್ಕಟ್ಟಿನಲ್ಲಿವೆ. ಹಲವಾರು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ಸಿನ ವಿರುದ್ಧ ಹೋರಾಡುತ್ತಾ ಬೆಳೆದಿವೆ ಮತ್ತು ಕಾಂಗ್ರೆಸ್ಸನ್ನು ಸೋಲಿಸಿ ಹಾಗೂ ಅದನ್ನು ಕೆಳಗಿಳಿಸಿ ಅಧಿಕಾರಕ್ಕೆ ಬಂದಿವೆ. ಡಿಎಂಕೆ, ಟಿಡಿಪಿ, ಎಜಿಪಿ, ಬಿಜೆಡಿ, ಅಕಾಲಿಗಳು – ಇವೆಲ್ಲವೂ ಈ ವರ್ಗದಲ್ಲಿ ಬರುತ್ತವೆ. ಬಿಜೆಪಿ ಒಂದು ಆಕ್ರಮಣಕಾರಿ ಶಕ್ತಿಯಾಗಿ ಹೊರಹೊಮ್ಮಿದ ನಂತರವೂ, ಈ ಪಕ್ಷಗಳು, ಡಿಎಂಕೆಯನ್ನು ಹೊರತುಪಡಿಸಿ, ಹೊಸ ವಾಸ್ತವಕ್ಕೆ ಅನುಗುಣವಾಗಿ ತಮ್ಮ ಧೋರಣೆಯನ್ನು ಬದಲಾಯಿಸಿಕೊಳ್ಳಲು ಸಮರ್ಥವಾಗಿಲ್ಲ ಮತ್ತು ಹಳೆಯ ಚೌಕಟ್ಟಿನ ರಾಜಕೀಯದೊಳಗೇ ಮುಂದುವರಿಯುತ್ತಿವೆ. ಇದರ ಪರಿಣಾಮವಾಗಿ, ಈ ಅನೇಕ ರಾಜ್ಯಗಳಲ್ಲಿ ಕಾಂಗ್ರೆಸ್ಸಿನ ಅವನತಿಯಾಗಿರುವಾಗ, ಸಂಬಂಧಪಟ್ಟ ಪ್ರಮುಖ ಪ್ರಾದೇಶಿಕ ಪಕ್ಷಗಳಿಂದ ಹೆಚ್ಚಿನ ಪ್ರತಿರೋಧವಿಲ್ಲದೇ ಬಿಜೆಪಿಯು ಆ ಖಾಲಿ ಸ್ಥಾನವನ್ನು ತುಂಬಲು ಸಮರ್ಥವಾಗಿದೆ.

ಹಾಗಂದ ಮಾತ್ರಕ್ಕೆ ಈ ಪ್ರಾದೇಶಿಕ ಪಕ್ಷಗಳು ತಮ್ಮ ಹಳೆಯ ವೈರಿಯಾದ ಕಾಂಗ್ರೆಸ್ಸಿನೊಂದಿಗೆ ಅನಿವಾರ್ಯವಾಗಿ ನಿಂತುಕೊಳ್ಳಬೇಕು ಅಂತಲ್ಲ, ಬದಲಿಗೆ ಬಿಜೆಪಿಯನ್ನು ತಮ್ಮ ಮುಖ್ಯ ಪ್ರತಿರೋಧಿಯನ್ನಾಗಿ ಗುರುತಿಸಿ ಅದರ ವಿರುದ್ಧ ಕಾರ್ಯಾಚರಣೆ ನಡೆಸಬೇಕು.

ಕೇಂದ್ರದಲ್ಲಿರುವ ಸರ್ವಾಧಿಕಾರಶಾಹಿ ಬಿಜೆಪಿ ಸರ್ಕಾರವನ್ನು ವಿರೋಧಿಸದಿರುವ ಅವರ ಮನೋಭಾವದಿಂದಾಗಿ, ಅವರು ತಮ್ಮನ್ನು ತಾವು ತಮ್ಮ ಬಗಲಲ್ಲೇ ಇರುವ ಬಿಜೆಪಿಯ ದಾಳಿಗಳಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ. ಮೋದಿ ಸರ್ಕಾರದೊಂದಿಗೆ ರಾಜಿ ಮಾಡಿಕೊಳ್ಳಲು ಬಯಸುವ ಮತ್ತು ಹಿಂದುತ್ವ ರಾಜಕೀಯವನ್ನು ವಿರೋಧಿಸಲು ನಿರಾಕರಿಸುತ್ತಿರುವ ಈ ಪ್ರಾದೇಶಿಕ ಪಕ್ಷಗಳು, ಬಿಜೆಪಿಯ ಜತೆ ಮೈತ್ರಿ ಮಾಡಿಕೊಂಡಿದ್ದ ಹಾಗೂ ಬಿಜೆಪಿ ಸರ್ಕಾರದ ಭಾಗವಾಗಿದ್ದ ಪ್ರಾದೇಶಿಕ ಪಕ್ಷಗಳಿಂದ ಪಾಠ ಕಲಿಯಬೇಕು ಕೂಡ.

ಅಕಾಲಿ ದಳ ಹಾಗೂ ಶಿವಸೇನಾ ಎನ್‌ಡಿಎಯಲ್ಲಿ ಬಹಳ ಕಾಲದಿಂದ ಮಿತ್ರರಾಗಿದ್ದವರು, ಸರ್ಕಾರದಿಂದ ಹಾಗೂ ಮೈತ್ರಿಕೂಟದಿಂದ ಹೊರಬಂದಿದ್ದಾರೆ. ಮತ್ತೊಂದು ಎನ್‌ಡಿಎ ಮಿತ್ರಪಕ್ಷವಾಗಿದ್ದ ಲೋಕ ಜನಶಕ್ತಿ ಪಕ್ಷವನ್ನು ಬಳಸಿಕೊಂಡು ಜೆಡಿಯು ಹಾಗೂ ನಿತೀಶ್ ಕುಮಾರ್ ಅವರನ್ನು ಬಿಹಾರ ಚುನಾವಣೆಯಲ್ಲಿ ಬಿಜೆಪಿ ಮಟ್ಟಹಾಕಿದೆ ಮತ್ತು ನಿತೀಶ್ ಅವರನ್ನು ದುರ್ಬಲಗೊಳಿಸಿದೆ.

ತನ್ನ ಸಂಪೂರ್ಣ ಪ್ರಾಬಲ್ಯವನ್ನು ಸ್ಥಾಪಿಸಿಕೊಳ್ಳಲು ಬಿಜೆಪಿ ಹೊರಟಿದೆ, ಅದು ತನ್ನ ಮಿತ್ರಪಕ್ಷಗಳನ್ನೂ ಸಂಪೂರ್ಣವಾಗಿ ತನಗೆ ಅಧೀನವಾಗುವಂತೆ ಮಾಡುತ್ತದೆ. ಆರ್‌ಎಸ್‌ಎಸ್ ನಡೆಯು ಸಮಾಜವನ್ನು ಏಕರೂಪವಾಗಿಸುವುದಾಗಿದೆ. ವೈವಿಧ್ಯಮಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ಅಸ್ಮಿತೆಗಳನ್ನೆಲ್ಲ ಹಿಂದುತ್ವದ ಮೂಲಕ ಉಸಿರುಕಟ್ಟಿಸುವ ಪ್ರಯತ್ನವನ್ನು ಅದು ನಡೆಸುತ್ತಿದೆ. ಇದು ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೇ ಅಪಾಯಕ್ಕೊಡ್ಡಲಿದೆ.

ಅವರಿಗೆ ಆಯ್ಕೆ ಸುಸ್ಪಷ್ಟವಾಗಿದೆ – ಒಂದೇ ಬಿಜೆಪಿ-ಆರ್‌ಎಸ್‌ಎಸ್ ಜೋಡಿಯ ವಿರುದ್ಧ ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಹೋರಾಡಬೇಕು ಅಥವಾ ಶರಣಾಗಿ ನಶಿಸಿಹೋಗಬೇಕು. ಪ್ರಜಾಪ್ರಭುತ್ವ ಹಾಗೂ ಒಕ್ಕೂಟ ವ್ಯವಸ್ಥೆಯ ಸಲುವಾಗಿ, ಪ್ರಾದೇಶಿಕ ಪಕ್ಷಗಳು ಅತಿಮುಖ್ಯವಾದ ಆಯ್ಕೆ ಮಾಡಬೇಕಿದೆ.

 

ಅನು: ಟಿ.ಸುರೇಂದ್ರ ರಾವ್

 

Leave a Reply

Your email address will not be published. Required fields are marked *