24 ಸಂಸದರ ಅಮಾನತು: ಸಂಸತ್ತಿನ ಕತ್ತು ಹಿಸುಕುವ ಕ್ರಮ-ಸಿಪಿಐ(ಎಂ) ಪೊಲಿಟ್‍ ಬ್ಯುರೊ

ಕಳೆದ ಎರಡು ದಿನಗಳಲ್ಲಿ ಲೋಕಸಭೆಯ 4 ಪ್ರತಿಪಕ್ಷ ಸಂಸದರು ಮತ್ತು ರಾಜ್ಯಸಭೆಯಲ್ಲಿ ಪ್ರತಿಪಕ್ಷದ 20 ಸಂಸದರನ್ನು ಅಮಾನತುಗೊಳಿಸಲಾಗಿದೆ. ಇವರಲ್ಲಿ ಇಬ್ಬರು ಸಿಪಿಐ(ಎಂ)ನ ಸಂಸದರು. ಇದು ಸಂಸತ್ತಿನ ಪ್ರಜಾಸತ್ತಾತ್ಮಕ ಕಾರ್ಯನಿರ್ವಹಣೆಗೊಂದು ಗಂಭೀರ ಹೊಡೆತವಾಗಿದೆ ಮತ್ತು  ಇದು ಸಂಸತ್ತಿನ ಸದಸ್ಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳ ಮೇಲೆ ನಡೆಸಿರುವ ಪ್ರಹಾರವಾಗಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಟೀಕಿಸಿದೆ.

ಮೋದಿ ಸರಕಾರವೇ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು, ಅವರ ಜೀವನವನ್ನು ನಾಶಪಡಿಸುವ ಬೆಲೆ ಏರಿಕೆ, ನಿರುದ್ಯೋಗ ಇತ್ಯಾದಿಗಳ ಬಗ್ಗೆ ಸಂರಚನಾತ್ಮಕ ಚರ್ಚೆಗಾಗಿ ನಿಯಮಗಳ ಅಡಿಯಲ್ಲಿ ಪ್ರತಿಪಕ್ಷಗಳು ಮಂಡಿಸುವ ಯಾವುದೇ ಗೊತ್ತುವಳಿಯನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿರುವುದು. ತಾವು ಸಂಸತ್ತಿನಲ್ಲಿ ಎಲ್ಲಾ ವಿಷಯಗಳನ್ನು ಕೂಡ ಚರ್ಚಿಸಲು ಬಯಸುತ್ತೇವೆ ಎಂದು ಸಾರ್ವಜನಿಕವಾಗಿ ಹೇಳಿಕೊಂಡರೂ, ಅವರು ಉದ್ದೇಶಪೂರ್ವಕವಾಗಿಯೇ ಅಂತಹ ಯಾವುದೇ ಚರ್ಚೆಗೆ ಅವಕಾಶವಾಗದಂತೆ  ಅಡ್ಡಿಪಡಿಸುತ್ತಿದ್ದಾರೆ. ಜನರ ಕಾಳಜಿಯ ಮತ್ತು ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಚರ್ಚಿಸುವ ಸರ್ವೋಚ್ಚ ವೇದಿಕೆಯಾಗಿ ಸಂಸತ್ತನ್ನು ನಾಶಪಡಿಸುತ್ತಿರುವುದಕ್ಕೆ  ಮೋದಿ ಸರ್ಕಾರವೇ ಏಕೈಕ ಹೊಣೆ ಎಂದು ಪೊಲಿಟ್‍ ಬ್ಯುರೊ ಹೇಳಿದೆ.

ಮೋದಿ ಸರಕಾರವು ವ್ಯವಸ್ಥಿತವಾಗಿ ಸಂಸತ್ತನ್ನು ಅಪಮೌಲ್ಯಗೊಳಿಸುತ್ತಿದೆ ಮತ್ತು ಪ್ರತಿಪಕ್ಷಗಳ ದನಿಯನ್ನು ಅಡಗಿಸುತ್ತಿದೆ. ಸಾರ್ವಜನಿಕ ಅಭಿಪ್ರಾಯವನ್ನು ಕ್ರೋಢೀಕರಿಸುವ ಮೂಲಕ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಒಗ್ಗಟ್ಟಿನ ಹೋರಾಟವನ್ನು ಪ್ರಾರಂಭಿಸುವ ಮೂಲಕ ಇದನ್ನು ಪ್ರತಿರೋಧಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *