ಹಿಂದೂ ಮತಗಳ ಕ್ರೊಢೀಕರಣಕ್ಕಾಗಿ ಗೋಮಾಂಸ ನಿಷೇಧದ ಹುನ್ನಾರ

ಚುನಾವಣೆಗಳು, ಉಪ ಚುನಾವಣೆಗಳು ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ಹಿಂದು ಮತಗಳನ್ನು ಇನ್ನಷ್ಟು ಕ್ರೊಢೀಕರಿಸುವ ಉದ್ದೇಶದಿಂದ ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಲವ್ ಜಿಹಾದ್ ನಿಷೇಧ ಹಾಗೂ ಗೋಮಾಂಸ ನಿಷೇಧದ ಕಾಯ್ದೆಗಳನ್ನು ಅತ್ಯಂತ ತರಾತುರಿಯಿಂದ ಅಂಗೀಕರಿಸಲು ಮುಂದಾಗಿದೆ. ಹಿಂದು ಮತಬ್ಯಾಂಕ್ ಮೇಲೆ ಕಣ್ಣಿಟ್ಟು, ಗೋವಿನ ಮೇಲೆ ಹಿಂದುಗಳ ಮುಗ್ಧ ಭಕ್ತಿಯನ್ನು ಬಿಜೆಪಿಯ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುವ ಸಂಚು ಇದಾಗಿದೆ. ಅಂತರ ಧರ್ಮೀಯ ವಿವಾಹ ತಡೆಯುವ ಅದರ ಪ್ರಯತ್ನ ಸಂವಿಧಾನ ವಿರೋಧಿ ಆಗಿರುವುದರಿಂದ ಯಡಿಯೂರಪ್ಪ ಅದನ್ನು ಮುಂದೂಡಬಹುದು. ಆದರೆ ಗೋಮಾಂಸ ನಿಷೇಧ ಮಾಡುವುದು ಸುಲಭ ಸಾಧ್ಯವಾಗಲಿದೆ ಎಂದು ಯಡಿಯೂರಪ್ಪ ತಿಳಿದುಕೊಂಡಂತೆ ಕಾಣುತ್ತದೆ.

ಶಾಸನಸಭೆಯ ಇದೇ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಸಿದ್ಧಪಡಿಸಿದ ಕರಡು ಮಸೂದೆ ಗೋವಧೆ ಮತ್ತು ಗೋಮಾಂಸ ಸೇವನೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಉದ್ದೇಶವನ್ನು ಹೊಂದಿದೆ. ಆ ಮೂಲಕ ಮುಗ್ದ ಹಿಂದು ಮತದಾರರಲ್ಲಿ ಹಿಂದುತ್ವ ಅಜೆಂಡಾವನ್ನು ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಬಿಂಬಿಸಿ ಚುನಾವಣೆಗಳಲ್ಲಿ ಹಿಂದುಗಳನ್ನು ಭಾರತೀಯ ಜನತಾ ಪಕ್ಷದ ಹಿಂದೆ ಅಣಿನೆರೆಸುವುದು ಅದರ ಗುರಿಯಾಗಿದೆ ಅಧಿವೇಶನವನ್ನು ಡಿಸೆಂಬರ್ 07 ರಿಂದ ಆರಂಭಿಸಲು ನಿರ್ಧರಿಸಲಾಗಿದೆ.

“ಅದನ್ನು ಹಿಂದುತ್ವ ಅನ್ನಿರಿ, ಅಥವಾ ರಾಷ್ಟ್ರೀಯತೆ. ಅದನ್ನು ಮಾಡಿಯೇ ತೀರುತ್ತೇವೆ. ಅದು 2018ರ ನಮ್ಮ ಚುನಾವಣಾ ಪ್ರಣಾಳಿಕೆಯ ಭಾಗವಾಗಿತ್ತು. ಆದ್ದರಿಂದ ಅದನ್ನು ಜಾರಿಗೆ ತರಲು ನಾವು ಬದ್ದರು.” ಎಂದು ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಯುತ ಸಿ.ಟಿ.ರವಿ ಹೇಳಿದ್ದಾರೆ. ಅವರು ಗೋವಧೆ ತಡೆ ಕಾಯ್ದೆಯ ಪ್ರಬಲ ಪ್ರತಿಪಾದಕರು.

2010ರಲ್ಲಿ, ಯಡಿಯೂರಪ್ಪ ಮೊದಲ ಬಾರಿಗೆ ರಾಜ್ಯದ ಮುಖ್ಯ ಮಂತ್ರಿಯಾಗಿದ್ದಾಗ, ಬಿಜೆಪಿ ಸರ್ಕಾರ, “ಕರ್ನಾಟಕ ಜಾನುವಾರು ಹತ್ಯೆ ನಿಷೇಧ ಮತ್ತು ಅವುಗಳ ರಕ್ಷಣೆ” ಎಂಬ ಮಸೂದೆಯನ್ನು ಮಂಡಿಸಿತು. ಆದರೆ ರಾಷ್ಟ್ರಪತಿಯವರಿಂದ ಅದಕ್ಕೆ ಅನುಮೋದನೆ ದೊರೆಯಲಿಲ್ಲ. ನಂತರ ಬಂದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದನ್ನು ಬದಿಗಿಟ್ಟು 1964 ರ ಕರ್ನಾಟಕ “ಗೋವಧೆ ತಡೆ ಮತ್ತು ಜಾನುವಾರು ರಕ್ಷಣಾ ಕಾಯ್ದೆ”ಯನ್ನು ಚಾಲನೆಯಲ್ಲಿ ಉಳಿಸಿಕೊಂಡಿತು. ಈಗ ಜಾರಿಯಲ್ಲಿರುವ 1964ರ ಕಾಯ್ದೆ ಹೋರಿಗಳು, ಎತ್ತುಗಳು, ಎಮ್ಮೆಗಳು ಮತ್ತು ಕೋಣಗಳನ್ನು ಮಾಂಸಕ್ಕಾಗಿ ವಧಿಸಲು ಅನುಮತಿ ನೀಡುತ್ತದೆ. ಆದರೆ ಆ ಜಾನುವಾರುಗಳಿಗೆ 12 ವರ್ಷಗಳಿಗಿಂತ ಹೆಚ್ಚು ವಯಸ್ಸಾಗಿರಬೇಕು ಅಥವ ಅವುಗಳು ಸಾಕಾಣಿಕೆಗೆ ಯೋಗ್ಯವಲ್ಲದವು ಅಥವಾ ಹಾಲು ಕೊಡದಿರುವ ಜಾನುವಾರುಗಳಾಗಿರಬೇಕು.

ಬಿಜೆಪಿ ಪ್ರಸ್ತಾಪಿಸಿರುವ ಮಸೂದೆಯು ಯಾವುದೇ ಜಾನುವಾರುಗಳನ್ನು ವಧಿಸಲು ಅವಕಾಶ ನೀಡುವುದಿಲ್ಲ. ಗೋಹತ್ಯೆ ನಿಷೇಧ ಎಂದರೆ ಯಾವುದೇ ದನಗಳನ್ನು ವಧಿಸಲು ಮತ್ತು ಅದರ ಮಾಂಸ ಸೇವನೆಗೆ ಅವಕಾಶ ನೀಡುವುದಿಲ್ಲ. ಕಾಯ್ದೆ ಉಲ್ಲಂಘನೆಗೆ ದಂಡ ವಿಧಿಸಲಾಗುವುದು. ಕರ್ನಾಟಕದಲ್ಲಿ ವಿವಿಧ ಹಂತದ ಚುನಾವಣೆಗಳು ನಡೆಯಲಿವೆ. ಮತದಾರರಲ್ಲಿ ಬಹುಸಂಖ್ಯಾತರಾಗಿರುವ ಹಿಂದುಗಳನ್ನು ಆಕರ್ಷಿಸಲು ಇದು ಸಹಕಾರಿಯಾಗಲಿದೆ ಎಂದು ಬಿಜೆಪಿಗರು ತಿಳಿದಂತೆ ಕಾಣುತ್ತದೆ.

ಬಿಜೆಪಿ ಸರ್ಕಾರದ ಈ ನಡೆಯಿಂದಾಗಿ ಮುಸ್ಲಿಂ, ಕ್ರೈಸ್ತ ಮೊದಲಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಮತ್ತು ಎಸ್.ಸಿ./ಎಸ್.ಟಿ. ಜನಸಮೂಹಗಳಿಗೆ ಆತಂಕ ಉಂಟಾಗಿದೆ. ತುಲನಾತ್ಮಕವಾಗಿ ಕಡಿಮೆ ಬೆಲೆಗೆ ದೊರಕುತ್ತಿದ್ದ ಮಾಂಸ ಇನ್ನು ಮುಂದೆ ಸಿಗದಂತಾಗಿದೆ. ಅವರ ಮಕ್ಕಳು ಮಹಿಳೆಯರು ಪೌಷ್ಠಿಕ ಆಹಾರದ ಕೊರತೆಯಿಂದ ನಲುಗುವಂತಾಗಲಿದೆ. ಮಾಂಸವನ್ನು ಮಾರುಕಟ್ಟೆಗೆ ಒದಗಿಸುವ ಕಾಯಕದಲ್ಲಿ ತೊಡಗಿರುವ ಲಕ್ಷಾಂತರ ಜನಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡು ಬೀದಿಪಾಲಾಗುವರು. ದನಕರುಗಳನ್ನು ಸಾಕುತ್ತಿರುವ ರೈತರಿಗೂ ಈ ಕಾಯ್ದೆಯಿಂದ ಅನ್ಯಾಯವಾಗಲಿದೆ. ದನಗಳನ್ನು ಅವುಗಳು ಸಾಯುವವರೆಗೂ ಸಾಕುವುದು ರೈತರಿಗೆ ಹೊರೆಯಾಗಲಿದೆ. ಗೋಮಾಂಸ ಸೇವನೆಯನ್ನು ನಿಷೇಧಿಸುವ ಮೂಲಕ ತನ್ನ ಆಹಾರವನ್ನು ತಾನೇ ನಿರ್ಧರಿಸುವ ಆಹಾರದ ಹಕ್ಕಿನ ಮೇಲೆ ಬಿಜೆಪಿಗರು ಆಕ್ರಮಣ ಮಾಡಲು ಹೊರಟಿದ್ದಾರೆ.

ಕೆಲ ಹಿಂದುಗಳ ಭಾವನೆಗಳಿಗೆ ಇದರಿಂದ ನೋವು ಉಂಟಾಗುವುದಿದ್ದರೆ ಪರಸ್ಪರ ಪ್ರೀತಿ ವಿಶ್ವಾಸದಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಕಾನೂನಿನ ಮೂಲಕ ಬಲವಂತದಿಂದ ಹೇರುವುದು ಸರಿಯಲ್ಲ. ಮುಸಲ್ಮಾನರಲ್ಲಿ ಬಹಳಷ್ಟು ಜನ, ದಲಿತರಲ್ಲಿ ಬಹಳಷ್ಟು ಜನ ಗೋಮಾಂಸ ಸೇವನೆ ಮಾಡುವುದೇ ಇಲ್ಲ. ಅಕ್ಕಪಕ್ಕದಲ್ಲಿ ಹಿಂದುಗಳ ಮನೆಗಳಿದ್ದರಂತೂ ಅವರು ಗೋಮಾಂಸ ಸೇವಿಸಲು ಮುಜುಗರ ಪಟ್ಟುಕೊಳ್ಳುತ್ತಾರೆ. ಹಿಂದುಗಳು ಹಿಂದುಯೇತರರೊಂದಿಗೆ ಅನ್ಯೋನತೆಯನ್ನು ಬೆಳಸಿಕೊಂಡರೆ, ಅವರನ್ನು ಕಾಡುತ್ತಿರುವ ಪರಕೀಯತೆಯನ್ನು ಹೋಗಲಾಡಿಸಲು ಮುಂದಾದರೆ ಗೋಮಾಂಸ ಸೇವನೆಯನ್ನು ಕಾನೂನಿನ ಮೂಲಕ ನಿಷೇಧಿಸುವ ಅಗತ್ಯವಿರದು. ಈಗ ಬಿಜೆಪಿಗರು ಮಾಡಲು ಹೊರಟಿರುವುದು ಬಹುಸಂಖ್ಯಾತರು ಅಲ್ಪಸಂಖ್ಯಾತರ ಮೇಲೆ ನಡೆಸುವ ದೌರ್ಜನ್ಯವೇ ಆಗಿದೆ. ಜನತೆಯ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುವ ಈ ಮಸೂದೆಯನ್ನು ವಿರೋಧಿಸಲೇ ಬೇಕಾಗಿದೆ.

 

Leave a Reply

Your email address will not be published. Required fields are marked *