ಯುಎಪಿಎ ಅಡಿಯಲ್ಲಿ ಉಮರ್ ಖಾಲಿದ್‍ ಬಂಧನ- ಸಿಪಿಐ(ಎಂ) ಖಂಡನೆ

“ಪಕ್ಷಪಾತಪೂರ್ಣ ಪೋಲೀಸ್‍ ತನಿಖೆಯ ಬದಲು ಸ್ವತಂತ್ರ ನ್ಯಾಯಾಂಗ ತನಿಖೆ ಅಗತ್ಯವಾಗಿದೆ”

ಉಮರ್ ಖಾಲಿದ್‍ ಅವರನ್ನು ಕರಾಳ ಯು.ಎ.ಪಿ.ಎ. ಅಡಿಯಲ್ಲಿ ಬಂಧಿಸಿರುವುದನ್ನು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಖಂಡಿಸಿದೆ. ಇದಕ್ಕೆ ಮೊದಲು ಯು.ಎ.ಪಿ.ಎ. ಅಡಿಯಲ್ಲಿ ನತಾಶಾ ನರ್ವಾಲ್, ದೇವಾಂಗನಾ ಕಲಿತಾ(ಜೆ.ಎನ್‍.ಯು.) , ಇಷ್ರತ್‍ ಜಹಾನ್, ಕಾಂಗ್ರೆಸ್‍ ಪಕ್ಷದ ಒಬ್ಬ ಮಾಜಿ ಕೌನ್ಸಿಲರ್, ಜಾಮಿಯ ವಿದ್ಯಾರ್ಥಿಗಳು ಮೀರನ್‍ ಹೈದರ್, ಆರ್‍.ಜೆ.ಡಿ. ಯುವ ಮುಖಂಡರು, ಆಸಿಫ್ ತನ್ಹಾ, ಸಫೂರಾ ಝಗರ್ ಮತ್ತು ಗುಲ್ಫಿಷಾ ಫಾತಿಮ ಹಾಗೂ ಶಿಫ್ರ್-ಉಲ್-ರಹ್ಮಾನ್ ಇವರುಗಳನ್ನು ಕೂಡ ಬಂಧಿಸಲಾಗಿತ್ತು.

ಕೇಂದ್ರ ಸರಕಾರ ದ್ವೇಷಭಾಷಣಗಳನ್ನು ಮಾಡಿ ಹಿಂಸಾಚಾರವನ್ನು ಪ್ರಚೋದಿಸಿದ ಉನ್ನತ ಬಿಜೆಪಿ ಮುಖಂಡರನ್ನು ರಕ್ಷಿಸುತ್ತಿದ್ದರೆ, ಸಿಎಎ ವಿರುದ್ಧ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಯುವಜನಗಳ ಮೇಲೆ ಗುರಿಯಿಡಲಾಗುತ್ತಿದೆ, ಸಿಎಎ-ವಿರೋಧಿ ಪ್ರತಿಭಟನೆಗಳು ಮತ್ತು ಕೋಮು ಹಿಂಸಾಚಾರವನ್ನು ತಳಕು ಹಾಕುವ ದೇಶದ ಗೃಹ ಮಂತ್ರಾಲಯ ಮತ್ತು ದಿಲ್ಲಿ ಪೋಲೀಸ್‍ ನ ಅತ್ಯಂತ ಕಪೋಲಕಲ್ಪಿತ ಆವೃತ್ತಿಯನ್ನು ತೋರಿಸಿ ಬಂಧಿಸಲಾಗುತ್ತಿದೆ. ಕೇಂದ್ರ ಸರಕಾರ ಸಿಎಎ-ವಿರೋಧಿ ಕಾರ್ಯಕರ್ತರನ್ನು ಸ್ಪೆಷಲ್‍ ಬ್ರಾಂಚ್ ಪ್ರಶ್ನೆ ಕೇಳಲೆಂದು ಕರೆಸಿಕೊಂಡು ಅವರು ಗೃಹ ಮಂತ್ರಾಲಯ ಮತ್ತು ಪೋಲೀಸ್ ಗುರಿ ಮಾಡಿರುವವರನ್ನು ಸಿಲುಕಿಸಿ ಹಾಕುವಂತೆ ಬಲಾತ್ಕರಿಸುವ ಅಭ್ಯಾಸವನ್ನು ನಿಲ್ಲಿಸಬೇಕು.

ಯುಎಪಿಎ ಯನ್ನು ಸಾಮಾನ್ಯ ನ್ಯಾಯ ಪ್ರಕ್ರಿಯೆಯನ್ನು ತಡೆಗಟ್ಟಲು ಬಳಸಲಾಗುತ್ತಿದೆ. ಸಾಮಾನ್ಯ ಪ್ರಕ್ರಿಯೆಯ ಮೂಲಕ ಅವರು ಜಾಮೀನಿನಲ್ಲಿ ಹೊರಬರಬಹುದಿತ್ತು. ಏಕೆಂದರೆ ಹಲವಾರು ಕೆಳಗಣ ನ್ಯಾಯಾಲಯಗಳು ಹೇಳಿರುವಂತೆ ಅವರ ಯಾರ ವಿರುದ್ಧವೂ ಹಿಂಸಾಚಾರವನ್ನು ಪ್ರಚೋದಿಸುವ ಎಳ್ಳಷ್ಟೂ ಸಾಕ್ಷ್ಯ ಇರುವುದಿಲ್ಲ. ಈ ಬಂಧನಗಳು ಅಸಮ್ಮತಿ ವ್ಯಕ್ತಪಡಿಸುವ ಪ್ರಜಾಪ್ರಭುತ್ವ ಹಕ್ಕಿಗೆ ಇರುವ ಸಂವಿಧಾನಿಕ ಖಾತ್ರಿಯ ಮೇಲೆ ನಡೆಸಿರುವ ಒಂದು ಆಕ್ರಮಣವಾಗಿದೆ. ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.

ತಾವು  ಸಿಎಎ-ಎನ್‍.ಆರ್.ಸಿ.ಯನ್ನು ಆರಂಭದಿಂದಲೂ ಸಂಸತ್ತಿನ ಒಳಗೂ, ಮತ್ತು ಹೊರಗೂ ವಿರೋಧಿಸಿಕೊಂಡೇ ಬರುತ್ತಿದ್ದು,   ದೇಶಾದ್ಯಂತ ಹಲವಾರು ಪ್ರತಿಭಟನೆಗಳಲ್ಲಿ ತನ್ನ ಬಲವಾದ ವಿರೋಧವನ್ನು ಪುನರುಚ್ಚರಿಸುತ್ತಲೇ ಇದ್ದೇವೆ ಎಂದಿರುವ ಸಿಪಿಐ(ಎಂ)  ಕೇಂದ್ರ ಸರಕಾರದ ದಮನವನ್ನು ಎದುರಿಸುತ್ತಿರುವ ಎಲ್ಲರೊಂದಿಗೂ ಸೌಹಾರ್ದವನ್ನು ವ್ಕ್ತಕ್ತಪಡಿಸಿದೆ,  ದಿಲ್ಲಿ ಕೋಮುವಾದಿ ಹಿಂಸಾಚಾರದ ಪ್ರಕರಣದಲ್ಲಿ ಯುಎಪಿಎ ಅಡಿಯಲ್ಲಿ ಬಂಧಿಸಿದವರನ್ನೆಲ್ಲರನ್ನೂ ಬಿಡುಗಡೆ ಮಾಡಬೇಕು ಎಂದು ಅದು ಆಗ್ರಹಿಸಿದೆ.

ಇತ್ತಿಚಿನ ಬೆಳವಣಿಗೆಗಳು, ದಿಲ್ಲಿ ಪೋಲೀಸ್‍ ಕೇಂದ್ರ ಗೃಹ ಮಂತ್ರಾಲಯದ ನಿರ್ದೇಶನದ ಅಡಿಯಲ್ಲಿ ನಡೆಸಿರುವ ಪಕ್ಷಪಾತಪೂರ್ಣ ತನಿಖೆಗೆ ವಿರುದ್ಧವಾಗಿ, ಹಿಂಸಾಚಾರದ ಕಾರಣಗಳನ್ನು ತನಿಖೆ ಮಾಡಲು ಒಬ್ಬ ನಿವೃತ್ತ ನ್ಯಾಯಾಧೀಶರ ಅಡಿಯಲ್ಲಿ ಒಂದು ಸ್ವತಂತ್ರ ತನಿಖೆ ತುರ್ತಾಗಿ ಅಗತ್ಯವಾಗಿದೆ ಎಂಬುದನ್ನು ಸೂಚಿಸುತ್ತವೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *