ಕೋವಿಡ್ ನಿರ್ವಹಣೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ

ಕೋವಿಡ್‌ ನಿರ್ವಹಣೆಯಲ್ಲಿರುವ ಸಮಸ್ಯೆಗಲನ್ನು ಕೂಡಲೇ ಪರಿಹರಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಭಾರತ ಕಮ್ಯೂನಿಸ್ಟ್‌ ಪಕ್ಷ-ಸಿಪಿಐ, ಸೋಷಲಿಸ್ಟ್‌ ಯೂನಿಟಿ ಸೆಂಟರ ಆಫ್‌ ಇಂಡಿಯಾ (ಕಮ್ಯೂನಿಸ್ಟ್‌)-ಎಸ್‌ಯುಸಿಐ(ಸಿ), ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಮಾರ್ಕ್ಸ್‌ವಾದಿ-ಲೆನಿನ್‌ವಾದಿ)-ಲಿಬರೇಷನ್‌-ಸಿಪಿಐ(ಎಂಎಲ್‌)ಎಲ್‌, ಫಾರ್ವಡ್‌ ಬ್ಲಾಕ್‌, ರಿಪಬ್ಲಿಕ್‌ ಪಾರ್ಟಿ ಆಫ್‌ ಇಂಡಿಯಾ-ಆರ್‌ಪಿಐ, ಸ್ವರಾಜ್‌ ಇಂಡಿಯಾ ಪಕ್ಷಗಳ ರಾಜ್ಯ ಸಮಿತಿಗಳು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಜಂಟಿ ಮನವಿ ಪತ್ರದ ಪೂರ್ಣ ವಿವರ ಕೆಳಗಿನಂತಿವೆ:

ದಿನಾಂಕ: 08.05.2021

: ಮನವಿ ಪತ್ರ :

ಇವರಿಗೆ,
ಮಾನ್ಯ ಮುಖ್ಯಮಂತ್ರಿಗಳು,
ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.

ಮಾನ್ಯರೇ,

ವಿಷಯ: ಕೋವಿಡ್ ನಿರ್ವಹಣೆಯಲ್ಲಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ.

ಕೋವಿಡ್ ಎರಡನೇ ಅಲೆ ಕರ್ನಾಟಕವನ್ನು ಆವರಿಸಿದೆ. ಇಂತಹ ವಿಪತ್ತಿನ ಕುರಿತು ತಜ್ಞರು ಮುನ್ನೆಚ್ಚರಿಕೆ ನೀಡಿದ್ದರೂ ಕೂಡ ಕೊನೆಘಳಿಗೆಯವರೆಗೆ ತಮ್ಮ ಸರ್ಕಾರ ಅಗತ್ಯ ಕ್ರಮ ಕೈಗೊಂಡಿಲ್ಲದಿರುವುದು ಅತ್ಯಂತ ವಿಷಾದನೀಯ. ಐಸಿಯು ಮತ್ತು ವೆಂಟಿಲೇಟರ್‌ಗಳ ಕೊರತೆಯಿಂದ ರಾಜ್ಯದಾದ್ಯಂತ ನೂರಾರು ರೋಗಿಗಳು ಜೀವ ಕಳೆದುಕೊಳ್ಳುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ದೊರಕುತ್ತಿಲ್ಲ. ಖಾಸಗಿ ಆಸ್ಪತ್ರೆಗಳಿಗೆ ನೋಡಲ್ ಕಚೇರಿಯಿಂದ ಕಳುಹಿಸಿದಾಗಲೂ ದಾಖಲಿಸಲು ನಿರಾಕರಿಸಿದ ಘಟನೆಗಳಿವೆ.

ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ ರೋಗಿಗಳಿಗೆ ತಾರತಮ್ಯದ ಕಳಪೆ ಸೇವೆ ನೀಡುವ ಪ್ರಕರಣಗಳು ನಡೆಯುತ್ತಿವೆ. ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆಗಳು ಲಭ್ಯವಿದೆ ಎಂಬ ಪಾರದರ್ಶಕ ಮಾಹಿತಿ ಸಾರ್ವಜನಿಕರಿಗೆ ದೊರಕದೆ ರೋಗಿಗಳ ಜೊತೆಗೆ ಅಲೆದಾಡುವ ಪರಿಸ್ಥಿತಿ ಬಂದಿದೆ. ಬಹುಮುಖ್ಯವಾದ ಬಿಯು ಸಂಖ್ಯೆಯನ್ನು ಒದಗಿಸುವಲ್ಲಿ ತುಂಬಾ ವಿಳಂಬವಾಗುತ್ತಿದೆ. ಈ ಸಂಖ್ಯೆ ಇಲ್ಲದಿದ್ದರೆ ಆಸ್ಪತ್ರೆಗಳಲ್ಲಿ ಪ್ರವೇಶ ಸಾಧ್ಯವಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳ ತೀವ್ರ ಕೊರತೆಯಿಂದಾಗಿ ಪ್ರವೇಶ ನಿರಾಕರಿಸಲ್ಪಟ್ಟ ರೋಗಿಗಳು ಆಂಬ್ಯುಲೆನ್ಸ್‌ಗಳೊಳಗೆ, ಬೀದಿಗಳಲ್ಲಿ ಮತ್ತು ಆಸ್ಪತ್ರೆಗಳ ಮುಂದೆ ಸಾವನ್ನಪ್ಪುತ್ತಿದ್ದಾರೆ. ಲಭ್ಯವಿರುವ ಹಾಸಿಗೆಗಳನ್ನು ಅಗತ್ಯಕ್ಕೆ ತಕ್ಕಂತೆ ವಿತರಿಸುವ ಕೇಂದ್ರೀಕೃತ ವ್ಯವಸ್ಥೆಯೂ ಇಲ್ಲ.

ಖಾಸಗಿ ಆಸ್ಪತ್ರೆಗಳಿಗೆ ಹೋಗಲು ಬಡವರು ಸಾಧ್ಯವಾಗದೆ ಜೀವ ಬಿಡುತ್ತಿದ್ದಾರೆ. ಸಾವಿರಾರು ವಲಸೆ ಕಾರ್ಮಿಕರ ಬದುಕು ಬೀದಿಗೆ ಬಿದ್ದಿದೆ, ಅತಂತ್ರವಾಗಿದೆ. ಇನ್ನೊಂದೆಡೆ ಕೊರತೆ ಸೃಷ್ಟಿಯಾಗುತ್ತಿದ್ದಂತೆ ಜೀವರಕ್ಷಕ ಔಷಧಿಗಳ ಬೆಲೆಯೂ ಗಗನಕ್ಕೇರುತ್ತಿದೆ, ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಬೆಂಗಳೂರಿನ ಆಸ್ಪತ್ರೆಗಳಲ್ಲಿ ಅಧಿಕಾರಿಗಳು ಶಾಮೀಲಾಗಿ ಕೋವಿಡ್ ರೋಗಿಗಳ ಹಾಸಿಗೆ ಮೀಸಲಿಡುವಲ್ಲಿ ಅವ್ಯವಹಾರ ನಡೆಸಿರುವ ವರದಿಯಾಗಿರುವುದು ಅಘಾತಕಾರಿ ಸಂಗತಿಯಾಗಿದೆ. ಸರ್ಕಾರವು ಮೇ 1 ರಿಂದ 18 ವರ್ಷ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸಿನ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದು ಘೋಷಿಸಿದ್ದರೂ ಸಹ ಇದುವರೆಗೆ ಯಾವ ಸೂಕ್ತ ಕ್ರಮವನ್ನೂ ಕೈಗೊಂಡಿಲ್ಲ. ಒಟ್ಟಿನಲ್ಲಿ ರಾಜ್ಯದ ಜನರ ಪರಿಸ್ಥಿತಿ ಶೋಚನೀಯವಾಗಿದೆ. ಬಡಜನರ ಬಗೆಗಿನ ಸರ್ಕಾರದ ದಿವ್ಯ ನಿರ್ಲಕ್ಷ್ಯದ ಬಗ್ಗೆ ಜನತೆ ತೀವ್ರ ಅತೃಪ್ತರಾಗಿದ್ದಾರೆ.

ಮೊದಲನೇ ಅಲೆಯಲ್ಲಿ ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳಿಗೆ ಕನಿಷ್ಠ ಔಷಧಿಗಳನ್ನಾದರೂ ತಮ್ಮ ಸರ್ಕಾರ ಉಚಿತವಾಗಿ ವಿತರಿಸಿತ್ತು. ಈಗ ಅದೂ ಇಲ್ಲವಾಗಿದೆ. ಲಾಕ್‌ಡೌನ್‌ನಿಂದ ಆದಾಯವೂ ಇಲ್ಲದೆ, ಬಡ ಸೋಂಕಿತರು ಕೈಚೆಲ್ಲಿ ಕೂರುವಂತಾಗಿದೆ. ಅಲ್ಲದೆ ಆರ್‌ಟಿ-ಪಿಸಿಆರ್‌ ಪರೀಕ್ಷಾ ವರದಿ ವಿಳಂಬವಾಗುತ್ತಿದೆ. ಸೋಂಕಿತರ ಪತ್ತೆ ಮತ್ತು ಐಸೋಲೇಷನ್ ಕೂಡ ವಿಳಂಬವಾಗುತ್ತಿದೆ. ಇರುವ ವೆಂಟಿಲೇಟರ್‌ಗಳನ್ನು ಬಳಸಲು ತರಬೇತಿಯುಳ್ಳ ಅರಿವಳಿಕೆ ತಜ್ಞರ ಮತ್ತು ತಂತ್ರಜ್ಞರ ಕೊರತೆಯೂ ಇದೆ. ನುರಿತ ವೈದ್ಯರು, ದಾದಿಯರು, ಪ್ರಯೋಗಾಲಯ ತಜ್ಞರು, ಡಿ-ಗ್ರೂಪ್ ನೌಕರರು ಬೇಕಾಗಿದ್ದಾರೆ. ಕೋವಿಡ್ ಈಗ ನಗರಗಳಿಂದ ಹಳ್ಳಿಗಳಿಗೂ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಚಿಕಿತ್ಸಾ ಸೌಕರ್ಯಗಳನ್ನು ಸಜ್ಜುಗೊಳಿಸಬೇಕು. ಇಂದು ಇಡೀ ಆರೋಗ್ಯ ವ್ಯವಸ್ಥೆಯ ಖಾಸಗೀಕರಣ ಮತ್ತು ವ್ಯಾಪಾರೀಕರಣದ ಪರಿಣಾಮವಾಗಿ ಇಡೀ ದೇಶವೇ ಪರಿತಪಿಸುವಂತಾಗಿದೆ. ಲಾಭದ ದಾಹ ಮಾನವೀಯತೆಯನ್ನೇ ನಾಶಗೊಳಿಸುತ್ತಿದೆ. ಲೂಟಿಕೋರ ಬಂಡವಾಳಶಾಹಿ ವ್ಯವಸ್ಥೆಯ ನಿಜಬಣ್ಣ ಬಯಲಾಗಿದೆ. ಸರ್ಕಾರಗಳ ಬಂಡವಾಳಶಾಹಿಗಳ ಪರವಾದ ನೀತಿಗಳ ಅನಾವರಣವಾಗುತ್ತಿದೆ.

ಇದಲ್ಲದೆ, ಪ್ರಸಕ್ತ ಪರಿಸ್ಥಿತಿಯಿಂದಾಗಿ ಭಾರಿ ನಿರುದ್ಯೋಗ ಕಂಡುಬರುತ್ತಿದೆ. ನಿರ್ಮಾಣ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿರುವುದರಿಂದ ಲಕ್ಷಾಂತರ ನಿರ್ಮಾಣ ಕಾರ್ಮಿಕರು ಉದ್ಯೋಗ ಕಳೆದುಕೊಂಡಿದ್ದಾರೆ. ಸಹಸ್ರಾರು ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ಅಂಗಡಿ ಮಾಲೀಕರು ಸಂಪಾದನೆ ಮಾಡಲಾಗದೆ ಬವಣೆಗೆ ಒಳಗಾಗಿದ್ದಾರೆ. ಇನ್ನೊಂದೆಡೆ ಸಾಕಷ್ಟು ಕೆಲಸ ಇರುವವರಿಗೆ ಈಗ ಅರ್ಧದಷ್ಟು ಸಂಬಳವನ್ನೂ ನೀಡುತ್ತಿಲ್ಲ. ಈ ಆತಂಕಕಾರಿ ಆರ್ಥಿಕ ಪರಿಸ್ಥಿತಿಯಲ್ಲಿ ಸರ್ಕಾರವು ಅವರಿಗೆ ಅಗತ್ಯ ಆಹಾರ ಧಾನ್ಯಗಳ ಉಚಿತ ಪೂರೈಕೆಯೊಂದಿಗೆ ತಿಂಗಳ ಹಣವನ್ನೂ ಒದಗಿಸಬೇಕು. ನಮ್ಮಲ್ಲಿ ಬಹಳ ಹೆಚ್ಚಿನ ಮಟ್ಟಿಗೆ ಬಡ ಜನರು ಪೌಷ್ಟಿಕಾಂಶದಿಂದ ಬಳಲುತ್ತಿರುವ ಇಂದಿನ ವಾಸ್ತವದ ಹಿನ್ನೆಲೆಯಲ್ಲಿ ಇದು ಬಹಳ ಹೆಚ್ಚು ಅಗತ್ಯವಾಗಿದೆ.

ಇತ್ತೀಚೆಗೆ ಚಾಮರಾಜನಗರ, ಕಲಬುರ್ಗಿ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪಿದ ಜೀವಗಳಿಗೆ ನಮ್ಮ ಸಂತಾಪ ಸಲ್ಲಿಸುತ್ತಾ, ಮೃತರಾದವರ ಕುಟುಂಬಗಳಿಗೆ ಪರಿಹಾರ ನೀಡಬೇಕು ಹಾಗೂ ಇನ್ನಾದರೂ ಎಚ್ಚೆತ್ತುಕೊಂಡು ಇಂತಹ ದಾರುಣ ಪ್ರಕರಣಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇವೆ. ಕೇಂದ್ರ – ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡದೇ ಹೋದರೆ ಜನತೆ ಇನ್ನಷ್ಟು ತೀವ್ರ ಸಂಕಷ್ಟಕ್ಕೀಡಾಗಲಿದ್ದಾರೆ.

ಭಾರತ ಇಂದು ಸ್ವಾತಂತ್ರ್ಯಾನಂತರದ ಅತ್ಯಂತ ಘೋರ ಆರೋಗ್ಯ ಬಿಕ್ಕಟ್ಟಿನ ಹಿಡಿತಕ್ಕೆ ಒಳಗಾಗಿದೆ. ಅಷ್ಟೇ ಅಲ್ಲ, ಮಹಾಸೋಂಕಿನ ಪಿಡುಗು ಇನ್ನಷ್ಟು ತೀವ್ರಗೊಳ್ಳುತ್ತಿದೆ. ಇದನ್ನು ಎದುರಿಸಲು, ಜನರು ಮತ್ತು ಜೀವನೋಪಾಯಗಳನ್ನು ರಕ್ಷಿಸಲು ರಾಜ್ಯ ಸರಕಾರ ಸಮರೋಪಾದಿಯಲ್ಲಿ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕೆಂದು ಎಡಪಕ್ಷಗಳು ಆಗ್ರಹಿಸುತ್ತವೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದ ಅತೃಪ್ತ ಜನತೆ ಬೀದಿಗಿಳಿಯುವುದು ಅನಿವಾರ್ಯವಾಗುತ್ತದೆಂದು ಹೇಳಲು ಇಚ್ಚಿಸುತ್ತವೆ:

ಹಕ್ಕೊತ್ತಾಯಗಳು:

1)    ರಾಜ್ಯದಲ್ಲಿ ಆಮ್ಲಜನಕದ ಕೊರತೆಯನ್ನು ನೀಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ರಾಜ್ಯದ ಉತ್ಪಾದನೆ ಕೊರತೆಯಾದರೆ ಕೇಂದ್ರವನ್ನು ಆಗ್ರಹಿಸಬೇಕು.

2) ಆರ್‌ಟಿ-ಪಿಸಿಆರ್‌ ಪರೀಕ್ಷೆಯ ವರದಿಯನ್ನು ಒಂದೇ ದಿನದಲ್ಲಿ ದೊರಕಿಸಿ, ಅದಕ್ಕೆ ಬೇಕಾದ ಪರಿಕರಗಳು ಮತ್ತು ಸಿಬ್ಬಂದಿಯನ್ನು ಒದಗಿಸಿ. ಸೋಂಕಿತರ ಪತ್ತೆ ಮತ್ತು ಐಸೋಲೇಷನ್ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು.

3)    ಹೋಂ ಐಸೋಲೇಷನ್‌ನಲ್ಲಿರುವ ರೋಗಿಗಳಿಗೆ ಹಿಂದಿನಂತೆ ಅಗತ್ಯ ಔಷಧಿಗಳನ್ನು ಉಚಿತವಾಗಿ ಒದಗಿಸಬೇಕು.

4)    ಐಸಿಯು, ವೆಂಟಿಲೇಟರ್ ಹಾಸಿಗೆಗಳ ಕೊರತೆಯಿಂದ ಸಾವು ಸಂಭವಿಸುತ್ತಿದೆ. ತಾಲೂಕುಗಳಲ್ಲಿ ವೆಂಟಿಲೇಟರ್‌ಗಳ ಕೊರತೆ, ಅವುಗಳ ಬಳಕೆಗೆ ತಜ್ಞರ ಕೊರತೆ ಕಾಡುತ್ತಿದೆ. ಇವುಗಳನ್ನು ಈ ಕೂಡಲೇ ಸರಿಪಡಿಸಬೇಕು.

5)    ತಕ್ಷಣವೇ ಸಮರ್ಪಕ ಪ್ರಮಾಣದಲ್ಲಿ ಆಸ್ಪತ್ರೆ ಹಾಸಿಗೆಗಳು, ವೆಂಟಿಲೇಟರುಗಳು, ಐಸಿಯು ಹಾಸಿಗೆಗಳು, ಮತ್ತು ವೈರಾಣು ವಿರೋಧಿ ಔಷಧಿಗಳು ಮತ್ತು ಲಸಿಕೆಗಳ ವ್ಯವಸ್ಥೆ ಮಾಡಬೇಕು. ವಿಶೇಷವಾಗಿ ಸೋಂಕು ತ್ವರಿತವಾಗಿ ಹರಡುತ್ತಿರುವ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳು ಸಿಗುವಂತೆ ಮಾಡಬೇಕು.

6)    ಸರ್ಕಾರಿ ಆಸ್ಪತ್ರೆಗಳಲ್ಲಿ ಬೈಪಾಪ ಯಂತ್ರ, ನಾನ್ ಇನ್ವೇಸಿವ್ ವೆಂಟಿಲೇಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ರೋಗಿಗಳಿಗೂ ಉತ್ತಮ, ಆಮ್ಲಜನಕದ ಬಳಕೆ ಕಡಿಮೆಯಾಗಬಹುದು, ಇದನ್ನು ಅಳವಡಿಸಬೇಕು.

7)    ಹಾಸಿಗೆಗಳ ಲಭ್ಯತೆಯ ಮಾಹಿತಿಯ ಕೊರತೆಯಿಂದಾಗಿ ರೋಗಿಗಳು ಅಲೆದಾಡುವುದನ್ನು ತಪ್ಪಿಸಲು ಪ್ರತಿ ಜಿಲ್ಲೆಯಲ್ಲಿ ಕೇಂದ್ರೀಕೃತ ವ್ಯವಸ್ಥೆ ಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಹಾಸಿಗೆಗಳ ಮಾಹಿತಿಯನ್ನು ನೀಡುವ ವೆಬ್ ಪೋರ್ಟಲ್ ಸಿದ್ಧಪಡಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಸರ್ಕಾರಿ ಕೋಟಾದ ರೋಗಿಗಳನ್ನು ದಾಖಲಿಸಲು ಕೆಲವೊಮ್ಮೆ ನಿರಾಕರಿಸುತ್ತಿದ್ದು, ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬೇಕು.

8)    ಕೋವಿಡ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದು, ಗಂಭೀರ ರೋಗ ಲಕ್ಷಣಗಳು ಇರುವವರಿಗೆ ಚಿಕಿತ್ಸೆ ದೊರಕುವುದು ಕಷ್ಟವಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು.

9)    ಆಮ್ಲಜನಕ ವ್ಯವಸ್ಥೆ ಇರುವ ಕೋವಿಡ್ ಅಂಬುಲೆನ್ಸ್‌ಗಳ ಕೊರತೆಯನ್ನು ನೀಗಿಸಬೇಕು.

10)  ಕೋವಿಡ್‌ ಸೆಂಟರ್‌ಗಳಾಗಿ ಕೆಲಸ ಮಾಡುವ ಖಾಸಗಿ ಆಸ್ಪತ್ರೆಗಳಿಗೂ ಸರ್ಕಾರದ ನಡುವೆ ಸಮನ್ವಯ ಬೇಕು. ಅಲ್ಲಿರುವ ಸೋಂಕಿತರ ಪರಿಸ್ಥಿತಿ ಗಂಭೀರವಾದಾಗ ಅವರು ಕೈಚೆಲ್ಲುತ್ತಾರೆ. ಚಿಕಿತ್ಸೆ ನೀಡುವ ಖಾಸಗಿ ಆಸ್ಪತ್ರೆಗಳಲ್ಲಿ ರೆಮ್ಡಿಸಿವಿರ್ ಖಾತ್ರಿಪಡಿಸಬೇಕು.

11)‌ ಆರ್‌ಟಿ-ಪಿಸಿಆರ್‌ ವರದಿ ಇಲ್ಲದ ಗಂಭೀರ (ಹೃದಯಾಘಾತ, ಪಾರ್ಶ್ವವಾಯು, ಕ್ಯಾನ್ಸರ್ ಇತ್ಯಾದಿ) ರೋಗಿಗಳಿಗೆ ತುರ್ತುಚಿಕಿತ್ಸೆ ಪಡೆಯುವುದೂ ಕಷ್ಟವಾಗುತ್ತಿದ್ದು, ಈ ಕುರಿತು ಒಂದು ಸರಿಯಾದ ನೀತಿ ರೂಪಿಸಬೇಕು.

12)  ತಜ್ಞ ವೈದ್ಯರು, ದಾದಿಯರು, ಲ್ಯಾಬ್ ತಂತ್ರಜ್ಞರು, ಬಯೋ ಮೆಡಿಕಲ್ ಇಂಜಿನಿಯರುಗಳು ಮುಂತಾದ ಪರಿಣಿತ ಸಿಬ್ಬಂದಿಯ ತೀವ್ರ ಕೊರತೆ ಇದ್ದು ಇವರ ನೇಮಕಾತಿಗೆ ತಕ್ಷಣ ಕ್ರಮಕೈಗೊಳ್ಳಬೇಕು.

13) ಆವಶ್ಯಕ ಔಷಧಿಗಳ ಮತ್ತು ಆಮ್ಲಜನಕಗಳ ಬೆಲೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಬೇಕು ಮತ್ತು ಅವುಗಳ ಕಳ್ಳ ದಾಸ್ತಾನು ಹಾಗೂ ಕಾಳಸಂತೆಯನ್ನು ನಿಗ್ರಹಿಸಬೇಕು.

14)  ಲಸಿಕೆಗಳನ್ನೂ, ಜೀವ ಉಳಿಸುವ ಔಷಧಿಗಳನ್ನು ತಯಾರಿಸಬಲ್ಲ ಸಾಮರ್ಥ್ಯ-ಸೌಕರ್ಯಗಳು ಇರುವ ಎಲ್ಲರೂ ಉತ್ಪಾದಿಸಲು ಸಾಧ್ಯವಾಗುವಂತೆ ಕಾಯ್ದೆಯ ‘ಕಡ್ಡಾಯ ಲೈಸೆನ್ಸಿಂಗ್’ ಉಪಬಂಧವನ್ನು ಬಳಸಿಕೊಳ್ಳಬೇಕು.

15)  ಪರಿಸ್ಥಿತಿ ಕೈಮೀರಿಹೋದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಸರ್ಕಾರದ ವಶಕ್ಕೆ ಪಡೆದು ನಿರ್ವಹಿಸಲು ಮುಂದಾಗಬೇಕು.

16)  ಮೃತರ ಗೌರವಯುತ ಅಂತ್ಯಸಂಸ್ಕಾರಕ್ಕೆ ಬೇಕಾದ ಪೂರ್ವತಯಾರಿ ಮಾಡಿಕೊಳ್ಳಬೇಕು.

17)  ಉಚಿತ ಸಾರ್ವತ್ರಿಕ ಲಸಿಕೀಕರಣ ಕಾರ್ಯವನ್ನು ಆರಂಭಿಸಿ ಶೀಘ್ರವಾಗಿ ಪೂರೈಸಬೇಕು.

18)  ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ 10,000 ರೂಪಾಯಿಗಳನ್ನು ಪ್ರತಿ ತಿಂಗಳು ನೀಡಬೇಕು ಮತ್ತು ಎಲ್ಲರಿಗೆ ಉಚಿತ ಆಹಾರಧಾನ್ಯಗಳ ಕಿಟ್‌ಗಳ ವಿತರಣೆಯನ್ನು ಮಾಡಬೇಕು.

19)  ಹಾಸಿಗೆ ಮೀಸಲಿಡುವಿಕೆ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆ ನಡೆಸಬೇಕು.

ತಮ್ಮಿಂದ ಉತ್ತಮ ಹಾಗೂ ತುರ್ತುಕ್ರಮಗಳನ್ನು ನಿರೀಕ್ಷಿಸುತ್ತ,

ವಂದನೆಗಳೊಂದಿಗೆ,

ತಮ್ಮ ವಿಶ್ವಾಸಿಗಳು

ಯು.ಬಸವರಾಜ, ಸಿ.ಪಿ.ಐ(ಎಂ) ರಾಜ್ಯ ಕಾರ್ಯದರ್ಶಿ
ಸಾತಿ ಸುಂದರೇಶ್, ಸಿ.ಪಿ.ಐ ರಾಜ್ಯ ಕಾರ್ಯದರ್ಶಿ
ಕ್ಲಿಷ್ಟನ್ ರೋಜಾರಿಯೊ, ಸಿ.ಪಿ.ಐ(ಎಂ.ಎಲ್-ಲಿಬರೇಷನ್) ರಾಜ್ಯ ಕಾರ್ಯದರ್ಶಿ
ಕೆ.ಉಮಾ, ಎಸ್.ಯು.ಸಿ.ಐ(ಸಿ) ರಾಜ್ಯ ಕಾರ್ಯದರ್ಶಿ
ಜಿ.ಆರ್ ಶಿವಶಂಕರ್, ಫಾರ್ವರ್ಡ್ ಬ್ಲಾಕ್ ರಾಜ್ಯ ಕಾರ್ಯದರ್ಶಿ
ಮೋಹನ್ ರಾಜ್ ಆರ್‌.ಪಿ.ಐ. ಅಧ್ಯಕ್ಷರು
ಚಾಮರಸ ಪಾಟೀಲ್, ಸ್ವರಾಜ್ ಇಂಡಿಯ ಗೌರವ ಅಧ್ಯಕ್ಷರು

Leave a Reply

Your email address will not be published. Required fields are marked *