ಭಾಷಾ ಯಜಮಾನಿಕೆಯ ಹೇರಿಕೆ ಕೂಡದು

ರಾಷ್ಟ್ರೀಯ ಭಾಷೆ ಯಾವುದು ಎನ್ನುವುದರ ಕುರಿತ ಭಾರತೀಯ ಚಿತ್ರರಂಗದ ಇಬ್ಬರು ನಟರ ನಡುವಿನ ಟ್ವೀಟ್ ಸಂದೇಶಗಳ ವಾಗ್ವಾದ ಮತ್ತೆ ರಾಷ್ಟ್ರಭಾಷೆಯ ಈ ಪ್ರಶ್ನೆಯನ್ನು ಚರ್ಚೆಯ ಮುನ್ನೆಲೆಗೆ ತಂದಿದೆ. ಇದೇ ತಿಂಗಳ ಮಧ್ಯದಲ್ಲಿ 37ನೆಯ ಭಾಷಾ ಸಂಸದೀಯ ಸಮಿತಿಯ ಸಭೆಯಲ್ಲಿ ಮಾತನಾಡುತ್ತಾ ಕೇಂದ್ರ ಗೃಹ ಸಚಿವ ಅಮಿತ್ ಶಾ ರವರು ಇಂಗ್ಲೀಷ್ ಗೆ ಪರ್ಯಾಯವಾಗಿ ಹಿಂದಿಯನ್ನು ಒಪ್ಪಿಕೊಳ್ಳುವಂತೆ ಎಲ್ಲ ರಾಜ್ಯಗಳ ಜನರು ಹಿಂದಿಯನ್ನು ಸಂಪರ್ಕ ಭಾಷೆಯನ್ನಾಗಿ ಅಳವಡಿಸಿಕೊಳ್ಳುವಂತೆ ತಿಳಿಸಿದ್ದರು. ಅತ್ಯಂತ ಜಾಣತನದಿಂದ ಹಿಂದಿಯ ಪ್ರಾಧಾನ್ಯತೆಯನ್ನು ಅಮಿತ್ ಶಾ ಮಂಡಿಸಿದ್ದರು. ಹಿಂದಿ ಭಾಷೆ ದೇಶವನ್ನು ಒಗ್ಗೂಡಿಸುವ ಸಾಧನ ಎಂದು ಹೇಳುವ ಮೂಲಕ ಪ್ರಾದೇಶಿಕ ಭಾಷೆಗಳು ರಾಷ್ಟ್ರದ ಸಮಗ್ರತೆಗೆ ಪೂರಕವಲ್ಲ ಎನ್ನುವುದನ್ನು ಪ್ರತಿಪಾದಿಸಿದ್ದರು. ರಾಷ್ಟ್ರಭಾಷೆ ಹಿಂದಿ ಎನ್ನುವುದನ್ನು ಪರೋಕ್ಷವಾಗಿ ಪ್ರತಿಪಾದಿಸಿ ಪ್ರಾದೇಶಿಕ ಭಾಷೆಗಳನ್ನು ನಿರ್ಲಕ್ಷಿಸಿ ಆಡಿದ ಮಾತಿಗೆ ದೇಶದಲ್ಲಿ ತೀವ್ರತರವಾದ ವಿರೋಧ ಎದುರಿಸಬೇಕಾಗಿ ಬಂದಿತ್ತು.

ಇದೀಗ ಹಿಂದಿ ಭಾಷಾ ಚಲನಚಿತ್ರ ನಟ ಅಜಯ್ ದೇವಗನ್ ಹಿಂದಿ ರಾಷ್ಟ್ರಭಾಷೆ ಅಲ್ಲವಾದರೆ ಹಿಂದಿಗೇಕೆ ಕನ್ನಡದ ಚಿತ್ರಗಳನ್ನು ಡಬ್ ಮಾಡುತ್ತೀರಿ ಎಂದು ಟ್ವೀಟ್ ಮಾಡಿರುವುದು ಮತ್ತು ಅದಕ್ಕೆ ಕನ್ನಡದ ಚಲನಚಿತ್ರ ನಟ ಸುದೀಪ್ ಪ್ರತಿಕ್ರಿಯಿಸಿ ಹಿಂದಿ ಉಳಿದ ಭಾಷೆಗಳಂತೆ ಒಂದು ಭಾಷೆ, ಕನ್ನಡವೂ ಸಹ ರಾಷ್ಟ್ರಭಾಷೆ ಎಂದು ಸಾರ್ವಜನಿಕವಾಗಿ ಪ್ರತಿಪಾದಿಸಿರುವುದು ಪ್ರಸಕ್ತವಾಗಿ ಭಾರತೀಯ ಭಾಷೆಗಳ ಸ್ಥಾನಮಾನದ ಪ್ರಶ್ನೆಯನ್ನು ಚರ್ಚೆಗೆ ತಂದಿದೆ.

ದೇಶದ ಮಟ್ಟದಲ್ಲಿ ಆಗಲಿ ಅಥವಾ ರಾಜ್ಯಗಳಲ್ಲಿ ಆಗಿರಲಿ ಆರ್ಥಿಕ, ರಾಜಕೀಯ ಬಿಕ್ಕಟ್ಟುಗಳು ಸಂಭವಿಸಿದಾಗ ಜನತೆಯನ್ನು ಹಾದಿತಪ್ಪಿಸಲು ಗಮನ ಬೇರೆ ಕಡೆಗೆ ತಿರುಗಿಸಲು ಗಡಿ, ಭಾಷೆಯಂತಹ ಭಾವನಾತ್ಮಕ ಪ್ರಶ್ನೆಗಳನ್ನು ಬಲಪಂಥೀಯ ಪಕ್ಷಗಳು ಕೆದಕುವುದು ಸಾಮಾನ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಅದರಲ್ಲಿಯೂ ಎರಡನೆಯ ಅವಧಿಗೆ ಮೋದಿ ಪ್ರಧಾನಿಯಾದ ನಂತರ ಹಿಂದಿಯನ್ನು ಎಲ್ಲದರ ಮೇಲೆ ಪ್ರತಿಷ್ಠಾಪಿಸುವ, ಅದರ ಮೇಲಿರಿಮೆಯನ್ನು ಸಾರುವ ಪ್ರಯತ್ನಗಳು ನಿರಂತರ ನಡೆಯುತ್ತಲೇ ಬಂದಿವೆ ಎನ್ನುವುದನ್ನು ಗಮನಿಸಬೇಕು.

2018ರಲ್ಲಿ ಕೇಂದ್ರ ಸರ್ಕಾರ ಹಿಂದಿಯನ್ನು ಪ್ರೋತ್ಸಾಹಿಸಲು ಸುಮಾರು 400 ಕೋಟಿ ರೂ.ಗಳ ಖರ್ಚು ಮಾಡಿ ಅಭಿಯಾನವನ್ನು ನಡೆಸಿತು. 2019ರ ಸೆಪ್ಟೆಂಬರ್ 14 ರಂದು ಆಚರಿಸಲಾದ ”ಹಿಂದಿ ದಿವಸ್” ಸಂದರ್ಭದಲ್ಲಿ ಹಿಂದಿ ದೇಶದಲ್ಲಿ ಅತಿ ಹೆಚ್ಚು ಮಾತನಾಡುವ ಭಾಷೆಯಾಗಿದ್ದು ಅದೇ ರಾಷ್ಟ್ರಭಾಷೆಯಾಗಲು ಸೂಕ್ತ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಶೇ 43 ರಷ್ಟು ಜನ ಹಿಂದಿ ಭಾಷಿಕರಿದ್ದಾರೆ ಎನ್ನುವುದು ಒಂದು ಮಿಥ್ಯೆ ಎನ್ನುವುದನ್ನು ಮರೆ ಮಾಚಿದ್ದರು. ಇತ್ತೀಚೆಗೆ ತಂದ ನೂತನ ಶಿಕ್ಷಣ ನೀತಿಯ ಕರಡು ಹಿಂದಿಯೇತರ ರಾಜ್ಯಗಳಲ್ಲಿ 6ನೇ ತರಗತಿಯಿಂದಲೇ ಹಿಂದಿಯನ್ನು ಕಲಿಯುವುದು ಕಡ್ಡಾಯ ಎಂಬ ನೀತಿಯ ಪ್ರಸ್ತಾಪವನ್ನು ಒಳಗೊಂಡಿತ್ತು. ಇವೆಲ್ಲವನ್ನೂ ಅನುಸರಿಸಿ ದೂರದರ್ಶನ, ಆಕಾಶವಾಣಿ, ರೈಲ್ವೆ, ಸಂಪರ್ಕ ಇತ್ಯಾದಿಗಳಲ್ಲಿ ಹಿಂದಿಯನ್ನು ಮತ್ತು ಸಂಸ್ಕೃತವನ್ನು ಪ್ರೋತ್ಸಾಹಿಸುವ ವಿಶಿಷ್ಟ ಕಾರ್ಯಕ್ರಮಗಳು ನಡೆಯುತ್ತಲೇ ಬಂದಿವೆ.

ವಾಸ್ತವದಲ್ಲಿ ಭಾಷೆಯೆನ್ನುವುದು ಭಾವನೆಗಳನ್ನು ಅಭಿವ್ಯಕ್ತಿಸುವ ಒಂದು ಪ್ರಮುಖ ಸಾಧನ. ಅಷ್ಟು ಮಾತ್ರವೇ ಅಲ್ಲ ಭಾಷೆ ಎನ್ನುವುದು ಬದುಕಿನ ಅವಿಭಾಜ್ಯ ಅಂಗವಾಗಿದೆ, ಅದು ಸಮಾಜದ ಸಂಸ್ಕೃತಿಯೂ ಆಗಿದೆ. ಅತ್ಯಂತ ಪ್ರಾಚೀನ ನಾಗರಿಕತೆಯ ದೇಶವಾಗಿರುವ ಭಾರತದಲ್ಲಿ ನೂರಾರು ಭಾಷೆಗಳಿವೆ. ಅದರಲ್ಲಿ 22 ಭಾಷೆಗಳನ್ನು ಮಾತ್ರ ಸಂವಿಧಾನದ 8 ನೆಯ ಷೆಡ್ಯೂಲ್ ಗೆ ಸೇರಿಸಲಾಗಿದೆ. ಕನ್ನಡ, ಮರಾಠಿ, ತೆಲುಗು, ತಮಿಳು, ಮಲೆಯಾಳಿ, ಹಿಂದಿ, ಬಂಗಾಳಿ ಇತ್ಯಾದಿ ಭಾಷೆಗಳೂ ಕೂಡ ಸಮಾನವಾದ ಸ್ಥಾನವನ್ನು ಹೊಂದಿವೆ. ವೈಜ್ಞಾನಿಕವಾಗಿ ಭಾಷೆ ಎನ್ನುವುದು ಆ ಭಾಷಿಕರ ರಾಷ್ಟ್ರೀಯತೆಯೂ ಆಗಿದೆ. ಈ ಅರ್ಥದಲ್ಲಿ ಈ ಎಲ್ಲಾ ಭಾಷೆಗಳೂ ರಾಷ್ಟ್ರೀಯ ಭಾಷೆಗಳಾಗಿವೆ. ನಮ್ಮ ಸಂವಿಧಾನವು ಎಲ್ಲ ಭಾಷೆಗಳಿಗೂ ಸಮಾನವಾದ ಸ್ಥಾನಮಾನವನ್ನು ಕಲ್ಪಿಸಿದೆ. ಯಾವುದೇ ಒಂದು ಭಾಷೆಯನ್ನು ಇಡೀ ದೇಶಕ್ಕೆ ಅನ್ವಯಿಸುವ ರಾಷ್ಟ್ರಭಾಷೆ ಎಂದು ಸಂವಿಧಾನ ಹೇಳಿಲ್ಲ. ವಿಭಿನ್ನ ಭಾಷೆಗಳಿರುವ ಭಾರತದಲ್ಲಿ ವಿವಿಧ ಪ್ರದೇಶಗಳ ಒಕ್ಕೂಟದ ಸರ್ಕಾರಗಳೊಂದಿಗೆ ವ್ಯವಹಾರವನ್ನು ನಡೆಸಲು ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳನ್ನು ಸಂಪರ್ಕಕ್ಕೆ ರಾಜ್ ಭಾಷಾ ಸ್ಥಾನಮಾನವನ್ನು ಸಂವಿಧಾನದ 343, 351 ವಿಧಿಗಳ ಮೂಲಕ ನೀಡಲಾಗಿದೆ.

2010ರಲ್ಲಿ ಗುಜರಾತ್ ಉಚ್ಛ ನ್ಯಾಯಾಲಯದ ದ್ವಿಸದಸ್ಯ ಪೀಠ ಹಿಂದಿ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆ ಅಲ್ಲ ಎಂದು ಸ್ಪಷ್ಟವಾಗಿ ತೀರ್ಪನ್ನು ನೀಡಿದೆ. ಇಷ್ಟೆಲ್ಲಾ ಸ್ಪಷ್ಟತೆ ಇರುವಾಗಲೂ ಪದೇ ಪದೇ ಬಿಜೆಪಿ ಮತ್ತು ಸಂಘ ಪರಿವಾರ ಹಿಂದಿಯನ್ನು ಏಕೈಕ ರಾಷ್ಟ್ರ ಭಾಷೆ ಎನ್ನುವುದಾಗಿ ಪ್ರತಿಪಾದಿಸಿ ಅದನ್ನು ಇಡೀ ದೇಶಕ್ಕೆ ಮೊದಲನೆಯ ಆದ್ಯತೆಯ ಸ್ಥಾನಮಾನವನ್ನು ಕಲ್ಪಿಸಿ ಆಳುವ ಭಾಷೆಯನ್ನಾಗಿ ಮಾಡಲು ಸತತವಾಗಿ ಪ್ರಯತ್ನಿಸುತ್ತಾ ಬರುತ್ತಿದೆ.

ಆಗೀಗ ಎದ್ದು ಬರುವ ಭಾಷಾ ಸ್ಥಾನಮಾನದ ಪ್ರಶ್ನೆ, ಹುಟ್ಟು ಹಾಕಲಾಗುವ ವಿವಾದಗಳು ಮೇಲ್ನೋಟದಲ್ಲಿ ಆಕಸ್ಮಿಕವೆನ್ನುವಂತೆ ಕಂಡು ಬಂದರೂ ಅದರ ಹಿಂದುಗಡೆಯಲ್ಲಿ ಅತ್ಯಂತ ಶಕ್ತಿಯುತವಾದ ಅಜೆಂಡಾ ಅಡಗಿರುವುದನ್ನು ನಿರ್ಲಕ್ಷಿಸಲಾಗದು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಸಂಘ ಪರಿವಾರ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಅದನ್ನು ಅನುಸರಿಸಲು ಒತ್ತಾಯಿಸುವುದರ ಹಿಂದೆ ಅದರ ಸ್ಪಷ್ಟ ಕಾರ್ಯಸೂಚಿ ಇದೆ. ಹಿಂದಿ ಭಾಷೆಗೆ 120 ವರ್ಷಗಳ ಇತಿಹಾಸವಿದೆ ಎನ್ನಲಾಗುತ್ತದೆ. ಆದರೆ ಇತರೆ ಭಾರತೀಯ ಭಾಷೆಗಳು ಸಾವಿರಾರು ವರ್ಷಗಳ ಇತಿಹಾಸದಲ್ಲಿ ವಿಕಸನಗೊಂಡಿವೆ. ಭಾರತದ ವೈಶಿಷ್ಟತೆಯಾಗಿರುವ ಭಾಷಾ ವೈವಿಧ್ಯತೆಯನ್ನು ನಾಶಗೊಳಿಸಿ ಏಕಭಾಷೆಯನ್ನು ಹೇರುವುದರ ಹಿಂದೆ ಫ್ಯಾಸಿಸ್ಟ್ ಮಾದರಿಯ ಆರ್ಥಿಕ, ಅದಕ್ಕೆ ಹೊಂದಿಕೊಂಡ ಸಾಂಸ್ಕೃತಿಕ ಚಿಂತನೆಯಿದೆ. ಒಂದೇ ರಾಷ್ಟ್ರ ಒಂದೇ ಭಾಷೆ ಎನ್ನುವುದು ಹಿಂದಿ, ಹಿಂದು-ಹಿಂದುಸ್ಥಾನ್, ಹಿಂದುತ್ವ ಎನ್ನುವ ಕೋಮುವಾದಿ ಫ್ಯಾಶಿಸ್ಟ್ ಚಿಂತನೆಯೊಂದಿಗೆ ಬೆಸೆದಿದೆ. ಒಂದೇ ದೇಶ, ಒಂದೇ ಭಾಷೆ ಎನ್ನುವ ವಾದವೂ ವೈವಿಧ್ಯತೆ ಮತ್ತು ವೈಶಿಷ್ಟತೆಗಳನ್ನು ಒಳಗೊಂಡಿರುವ ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾಶ ಮಾಡುವಂತಹುದಾಗಿದೆ. ಪ್ರಭುತ್ವದ ಬಲದೊಂದಿಗೆ ಒಂದೇ ಭಾಷೆಯ ಯಜಮಾನಿಕೆಯ ದುರಾಕ್ರಮಣವು ಯಾವುದೇ ಒಂದು ಸಶಕ್ತ ಭಾಷೆಯನ್ನೂ ನಾಶಪಡಿಸಬಹುದು. ಒಂದು ಭಾಷೆಯ ಸಾವು ಜನಸಮುದಾಯದ ಅಂತಸ್ಸತ್ವದ ಸಾವು ಕೂಡ ಆಗಿರುತ್ತದೆ. ಹಾಗೆ ನೋಡಿದರೆ ಭಾರತದಲ್ಲಿ 750 ಕ್ಕಿಂತಲೂ ಹೆಚ್ಚಿಗಿದ್ದ ಭಾಷೆಗಳಲ್ಲಿ ಆಳುವವರ ನಿರ್ಲಕ್ಷತೆ ಮತ್ತು ಭಾಷಾ ಯಜಮಾನಿಕೆಯ ಅತಿಕ್ರಮಣದ ಕಾರಣಗಳಿಂದ 120ಕ್ಕೂ ಹೆಚ್ಚು ಭಾಷೆಗಳು ನಶಿಸಿವೆ. ಏಕಸ್ವಾಮ್ಯ ಬಂಡವಾಳವನ್ನು ಬೆಳೆಸುತ್ತಿರುವ ಮಾರುಕಟ್ಟೆಯ ಏಕಸ್ವಾಮ್ಯವನ್ನು ಬಯಸುತ್ತಿರುವ ಬಿಜೆಪಿಯ ಆರ್ಥಿಕ ನೀತಿಗಳೊಂದಿಗೆ ರಾಜಕೀಯ ಮತ್ತು ಸಾಮಾಜಿಕ ನೀತಿಗಳು ತಳಕುಹಾಕಿಕೊಂಡಿವೆ. ಭಾಷಾ ಯಜಮಾನಿಕೆಯ ಹೇರಿಕೆಯ ವಿರುದ್ಧ ತೀವ್ರತರ ಪ್ರತಿರೋಧಗಳು ಇದ್ದಾಗ್ಯೂ ಬಿಜೆಪಿ ಮತ್ತೆ ಮತ್ತೆ ತನ್ನ ದುರಾಕ್ರಮಣವನ್ನು ಮುಂದುವರಿಸಿದೆ. ಹಾಗಾಗಿಯೆ ತನ್ನ ಹಿಂಬಾಲಕರ ಮೂಲಕ ಕೂಡ ದುರಾಕ್ರಮಣ ಜೀವಂತವಾಗಿರುವಂತೆ ನೋಡಿಕೊಳ್ಳುತ್ತದೆ.

ಯಾವುದೇ ಭಾಷೆ ಸ್ವಭಾವತಃ ದುರಾಕ್ರಮಣ ಕಾರಿಯೇನಲ್ಲ. ಆದರೆ, ಆಳುವವರ ಕೈಯಲ್ಲಿ ಪ್ರಭುತ್ವದ ಹಿತಾಸಕ್ತಿಗೆ ಅದು ಆಯುಧವೂ ಆಗಬಲ್ಲದು. ಭಾರತೀಯ ಎಲ್ಲಾ ಭಾಷೆಗಳಿಗೂ ಸಮಾನವಾದ ಸ್ಥಾನಮಾನ, ಗೌರವ ಮತ್ತು ಅದರ ಬೆಳವಣಿಗೆಗೆ ಎಲ್ಲ ರೀತಿಯ ಪ್ರೋತ್ಸಾಹ ಬೆಂಬಲ ಕೊಡುವುದು ಒಕ್ಕೂಟದ ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದರೆ ಕೇಂದ್ರದ ಬಿಜೆಪಿ ಸರ್ಕಾರ ಸಂವಿಧಾನಾತ್ಮಕ ಹೊಣೆಗಾರಿಕೆಯನ್ನು ನಿರ್ವಹಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ತದ್ವಿರುದ್ಧವಾಗಿ ಕಾರ್ಯವೆಸಗುತ್ತಿದೆ. ಈಗಲಾದರೂ ಭಾಷೆಯ ಮೂಲಕವಾಗಿ ಜನತೆಯನ್ನು ಎತ್ತಿಕಟ್ಟುವ ಮೇಲು ಕೀಳಿನ ವ್ಯವಸ್ಥೆಯನ್ನು ಬಲಗೊಳಿಸುವ ಕೃತ್ಯಗಳನ್ನು ಎಲ್ಲರೂ ನಿಲ್ಲಿಸಬೇಕು. ಬಿಜೆಪಿ ಇಂತಹ ದುರಾಕ್ರಮಣದ ನೀತಿಗಳನ್ನು ಮುಂದೊತ್ತುವ ಮೂಲಕ ಇಡೀ ಭಾರತದ ಸಮಗ್ರತೆ ಮತ್ತು ಐಕ್ಯತೆಗೆ ಧಕ್ಕೆ ಉಂಟು ಮಾಡುವ ಛಿದ್ರಕಾರಿ ರಾಜಕಾರಣವನ್ನು ನಿಲ್ಲಿಸಬೇಕು. ಸಿನಿಮಾ ಮಾರುಕಟ್ಟೆಯ ಪ್ರಶ್ನೆಗಳನ್ನು ದೇಶದ ಐಕ್ಯತೆ, ಒಕ್ಕೂಟ ವ್ಯವಸ್ಥೆಯಂತಹ ಅಮೂಲ್ಯ, ಸೂಕ್ಷ್ಮ ಪ್ರಶ್ನೆಗಳಿಗೆ ತಳುಕು ಹಾಕುವುದನ್ನು ನಟ ಅಜಯ್ ದೇವಗನ್ ರಂಥವರು ನಿಲ್ಲಿಸಬೇಕು. ನಾವೆಲ್ಲರೂ ಭಾರತೀಯರು ಭಾರತದ ಎಲ್ಲ ಭಾಷೆಗಳು ಸಮಾನ ಸ್ಥಾನಮಾನವನ್ನು ಮತ್ತು ಸಂಪದ್ಭರಿತ ಸಂಸ್ಕೃತಿಯನ್ನು ಹೊಂದಿವೆ ಎನ್ನುವುದನ್ನು ಗೌರವಿಸುವಂತಾಗಲಿ.

Leave a Reply

Your email address will not be published. Required fields are marked *