ಸಾಂವಿಧಾನಿಕ ಪ್ರಕರಣಗಳಲ್ಲಿ ನ್ಯಾಯಾಂಗದ ನುಣುಚಿಕೊಳ್ಳುವಿಕೆ – ಸುಪ್ರೀಂ ಕೋರ್ಟ್‌ನ ಅಸಮರ್ಥನೀಯ ನಡೆ

Prakash Karat
ಪ್ರಕಾಶ್ ಕಾರಟ್

ಪ್ರಕಾಶ್ ಕಾರಟ್

ಸಂವಿಧಾನ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ತುಂಬಾ ಅಗತ್ಯವಾಗಿರುವ ಕಾಲಘಟ್ಟದಲ್ಲಿ `ನ್ಯಾಯಾಂಗದ ಈ ನುಣುಚಿಕೊಳ್ಳುವ’ ಪ್ರವೃತ್ತಿ ತೀರಾ ನಿರಾಶೆಯ  ಸಂಗತಿಯಾಗಿದೆ.

ಸಂವಿಧಾನದ 370ನೇ ವಿಧಿಯನ್ನು ತೆಗೆದು ಹಾಕಿದ್ದು ಹಾಗೂ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ವಿಸರ್ಜಿಸಿ ಎರಡು ಕೇಂದ್ರಾಡಳಿತ ಪ್ರದೇಶಗಳ ರಚನೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಬೇಸಿಗೆ ರಜೆ ನಂತರ ಜುಲೈನಲ್ಲಿ ಆರಂಭಿಸುವ ಬಗ್ಗೆ ಪರಿಶೀಲಿಸುವುದಾಗಿ ಭಾರತದ ಮುಖ್ಯ ನ್ಯಾಯಮೂರ್ತಿ(ಸಿಜೆಐ) ಎನ್.ವಿ. ರಮಣ ಕೋರ್ಟ್‌ನಲ್ಲೇ ಹೇಳಿದ್ದಾರೆ. ಪ್ರಕರಣದ ತ್ವರಿತ ವಿಚಾರಣೆ ನಡೆಸಬೇಕೆಂದು ಹಿರಿಯ ವಕೀಲರು ಮಾಡಿದ್ದ ಮನವಿಯ ಮೇರೆಗೆ ನ್ಯಾ. ರಮಣ ಈ ವಿಷಯ ತಿಳಿಸಿದ್ದಾರೆ. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನ್ಯಾಯಪೀಠದ ಐವರು ನ್ಯಾಯಾಧೀಶರುಗಳಲ್ಲಿ ಒಬ್ಬರು ನಿವೃತ್ತರಾಗಿರುವುದರಿಂದ ಪೀಠದ ಪುನರ್‌ರಚನೆ ಅಗತ್ಯವಾಗಿದೆ ಎಂದವರು ಹೇಳಿದ್ದಾರೆ. ಒಂದು ವೇಳೆ ಜುಲೈನಲ್ಲಿ ವಿಚಾರಣೆ ಆರಂಭವಾಗುವುದಾದರೆ ಸಿಜೆಐ ಸ್ಥಾನದಲ್ಲಿ ಕೂಡ ಬೇರೆಯವರನ್ನು ನೇಮಿಸಬೇಕಾಗುತ್ತದೆ. ಯಾಕೆಂದರೆ ರಮಣ ಅವರೂ ಆಗಸ್ಟ್ 26ರಂದು ನಿವೃತ್ತರಾಗಲಿದ್ದಾರೆ. ಒಟ್ಟಿನಲ್ಲಿ ಪ್ರಕರಣದ ವಿಚಾರಣೆಯ ಅಂತ್ಯವಿಲ್ಲದ ವಿಳಂಬ ಮುಂದುವರಿಯಲಿದೆ ಎನ್ನುವುದು ಇದರಿಂದ ಸ್ಪಷ್ಟವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಬಗ್ಗೆ 2019ರ ಆಗಸ್ಟ್ 5 ರಂದು ರಾಷ್ಟ್ರಪತಿ ಆದೇಶಗಳನ್ನು ಹೊರಡಿಸಲಾಗಿತ್ತು. ಆಗಿನಿಂದ ಎರಡು ವರ್ಷ ಒಂಬತ್ತು ತಿಂಗಳು ಸಂದುಹೋಗಿದೆ. ಇಂಥ ಒಂದು ಪ್ರಮುಖ ಸಾಂವಿಧಾನಿಕ ಪ್ರಕರಣದ ವಿಚಾರಣೆಯನ್ನು ಸರ್ವೋನ್ನತ ನ್ಯಾಯಾಲಯ ವಿಳಂಬಗೊಳಿಸುತ್ತಿರುವುದು ಯಾವ ರೀತಿಯಲ್ಲೂ ಸಮರ್ಥನೀಯವಲ್ಲ. ಈ ಅವಧಿಂಯಲ್ಲಿ ಕೇಂದ್ರ ಸರ್ಕಾರವು, ವಿವಿಧ ಕ್ರಮಗಳು ಹಾಗೂ ಹೊಸ ಕಾನೂನುಗಳನ್ನು ಮಾಡುವ ಮೂಲಕ ಬದಲಾವಣೆಗಳನ್ನು ಮಾಡಲು ಹೊರಟಿದೆ. ಮೊಟಕುಗೊಂಡಿರುವ ವಿಧಾನಸಭೆಯ ಕ್ಷೇತ್ರಗಳ ಪುನರ್‌ವಿಂಗಡಣೆ ಪ್ರಕ್ರಿಯೆ ಬಹುತೇಕ ಮುಗಿದಿದೆ.

ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಅರ್ಜಿಗಳು ವ್ಯಾಪಕ ಸಾಂವಿಧಾನಿಕ ಪರಿಣಾಮವನ್ನು ಹೊಂದಿರುವಂಥದ್ದಾಗಿವೆ. ರಾಷ್ಟ್ರಪತಿ ಆಡಳಿತದ ಹುನ್ನಾರ ಬಳಸಿಕೊಂಡು ಭಾರತ ಒಕ್ಕೂಟದ ಒಂದು ರಾಜ್ಯದ ಸ್ವರೂಪವನ್ನು ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ಬದಲಾಯಿಸಬಹುದೇ? ಒಕ್ಕೂಟ ತತ್ವದ ಮೂಲಭೂತ ಸಿದ್ಧಾಂತದ ಅಡಿಪಾಯವಾದ ಕೇಂದ್ರ-ರಾಜ್ಯ ಸಂಬಂಧವೇ ಇಲ್ಲಿ ಅಪಾಯಕ್ಕೆ ಸಿಲುಕಿದೆ. ಇಂಥ ಒಂದು ಮಹತ್ವದ ವಿಚಾರದಲ್ಲಿ ಯಾವುದೇ ನ್ಯಾಯಾಂಗದ ಘೋಷಣೆ ಮಾಡದಿರುವ ಮೂಲಕ ತನ್ನ ಸಂಕುಚಿತ ಹಾಗೂ ಪಕ್ಷಪಾತಿ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿದೆ.

ಪುರುಸೊತ್ತಿಲ್ಲದ ಕೋರ್ಟ್!

ಇನ್ನೂ ಇತರ ಅನೇಕ ಸಾಂವಿಧಾನಿಕ ಕೇಸ್‌ಗಳು ಸುಪ್ರೀಂ ಕೋರ್ಟ್‌ ಮುಂದಿವೆ. ಚುನಾವಣಾ ಬಾಂಡ್ ಪ್ರಶ್ನಿಸಿರುವ ಅರ್ಜಿ ನ್ಯಾಯಾಲಯದಲ್ಲಿ ನಾಲ್ಕು ವರ್ಷಕ್ಕೂ ಹೆಚ್ಚು ಅವಧಿಯಿಂದ ಬಾಕಿಯಿದೆ. 2018ರಲ್ಲಿ ಈ ಸಂಬಂಧ ಮಾಡಿದ ಕಾನೂನಿನ ನಂತರ, ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆಗಳ ಚುನಾವಣೆಗಳಲ್ಲಿ ಅನಾಮಿಕ ದೇಣಿಗೆಗಳ ಅಪಾರದರ್ಶಕ ವ್ಯವಸ್ಥೆಯ ಮೂಲಕ ಆಳುವ ಪಕ್ಷಕ್ಕೆ ಸಾವಿರಾರು ಕೋಟಿ ರೂಪಾಯಿ ಹರಿದು ಬರುವಂತೆ ಮಾಡಲಾಗಿದೆ. ಇದರಿಂದ ಚುನಾವಣಾ ಪ್ರಕ್ರಿಯೆ ಮೇಲೆ ಪರಿಣಾಮ ಉಂಟಾಗಿದೆ. ಚುನಾವಣಾ ಬಾಂಡ್ ಮೂಲಕ ಆಳುವ ಪಕ್ಷಕ್ಕೆ ಅಂತರ್ ನಿರ್ಮಿತ ಅನುಕೂಲ ಮಾಡಿಕೊಡಲಾಗಿದೆ. ಅದು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆ ಅಸ್ತವ್ಯಸ್ತಗೊಳ್ಳುವಂತೆ ಮಾಡಿದೆ. ಅಷ್ಟಾಗಿಯೂ ಈ ಕೇಸ್ ಬಗ್ಗೆ ಪೂರ್ಣ ವಿಚಾರಣೆ ನಡೆಸಿ ತೀರ್ಪು ನೀಡಲು ಸಾಂವಿಧಾನಿಕ ನ್ಯಾಯಾಲಯಕ್ಕೆ ಪುರುಸೊತ್ತಿಲ್ಲ!

ಎರಡು ವರ್ಷಕ್ಕಿಂತ ಹೆಚ್ಚು ಕಾಲವಾದರೂ ಪೌರತ್ವ ತಿದ್ದುಪಡಿ ಕಾನೂನಿಗೆ(ಸಿಎಎ) ಒಡ್ಡಲಾಗಿರುವ ಸಾಂವಿಧಾನಿಕ ಸವಾಲುಗಳಿಗೆ ನ್ಯಾಯಾಲಯದ ಪ್ರತಿಕ್ರಿಯೆ ಇಲ್ಲ. ನಾಗರಿಕರ ಮೂಲಭೂತ ಹಕ್ಕುಗಳ ಮೇಲೆ ಪರಿಣಾಮ ಬೀರುವ ಇತರ ಮಹತ್ವದ ವಿಷಯಗಳಾದ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾನೂನಿಗೆ ತಿದ್ದುಪಡಿ ವಿಷಯದಲ್ಲಿಯೂ ಕೋರ್ಟ್ ಪ್ರತಿಸ್ಪಂದನೆಯಿಲ್ಲ. ಜನರನ್ನು ಅನಿರ್ದಿಷ್ಟ ಅವಧಿವರೆಗೆ ಬಂಧನದಲ್ಲಿಡಲು ಈ ಕಾನೂನಿನ ಸೆಕ್ಷನ್ 43 (ಡಿ) (5)ಯಂಥ ಕರಾಳ ನಿಯಮಗಳು ಅವಕಾಶ ನೀಡುತ್ತವೆ.

ಮಧ್ಯಪ್ರವೇಶ ಅಗತ್ಯ, ಆದರೆ…

ಸಂವಿಧಾನ ಮತ್ತು ನಾಗರಿಕರ ಮೂಲಭೂತ ಹಕ್ಕುಗಳ ರಕ್ಷಣೆಗೆ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶ ತುಂಬಾ ಅಗತ್ಯವಾಗಿರುವ ಕಾಲಘಟ್ಟದಲ್ಲಿ `ನ್ಯಾಯಾಂಗದ ಈ ನುಣುಚಿಕೊಳ್ಳುವ’ ಪ್ರವೃತ್ತಿ ತೀರಾ ನಿರಾಶೆಯ  ಸಂಗತಿಯಾಗಿದೆ. ಅದರಲ್ಲೂ ತಮ್ಮ ಅಧಿಕಾರಾವಧಿಯ ಆರಂಭದಲ್ಲಿ ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವುದಕ್ಕೆ ಆದ್ಯತೆ ನೀಡುವುದಾಗಿ ಹೇಳಿದ್ದ ಹಾಲಿ ಸಿಜೆಐ ರಮಣ ಅವರಿಂದ ಜನರಿಗೆ ಈ ವಿಚಾರದಲ್ಲಿ ಹೆಚ್ಚಿನ ನಿರೀಕ್ಷೆಯಿತ್ತು. ಕೋರ್ಟ್ ಮುಂದಿರುವ ಪ್ರಮುಖ ಸಾಂವಿಧಾನಿಕ ಕೇಸ್‌ಗಳನ್ನು ನಿರ್ಧರಿಸುವ ಪ್ರಕ್ರಿಯೆಯನ್ನು ಅವರು ತ್ವರಿತಗೊಳಿಸುವರೆಂಬ ವಿಶ್ವಾಸವಿತ್ತು.

ಅನು: ವಿಶ್ವ

Leave a Reply

Your email address will not be published. Required fields are marked *