ಕ್ಯೂಬಾದ ಮೇಲಿನ ಅಮೇರಿಕನ್ ನಿರ್ಬಂಧಗಳನ್ನು ತೆಗೆಯಬೇಕು

ಕ್ಯೂಬನ್ನರ ತಾಯ್ನಾಡು, ಸಾರ್ವಭೌಮತೆ ಮತ್ತು ಸಮಾಜವಾದದ ರಕ್ಷಣೆಯ ಹೋರಾಟಕ್ಕೆ ಬೆಂಬಲದ ಕರೆ

ಕ್ಯೂಬಾದ ಮೇಲೆ ಅಮೇರಿಕಾದ ಆರ್ಥಿಕ ನಿರ್ಬಂಧ ಉಂಟು ಮಾಡಿರುವ ಸಮಸ್ಯೆಗಳ ಮೇಲೆ ಅಲ್ಲಿನ ಒಂದು ಜನವಿಭಾಗ ಮತಪ್ರದರ್ಶನ ನಡೆಸುತ್ತಿದೆ. ಕ್ಯೂಬಾ ಸರಕಾರ ಮತ್ತು ಕ್ಯೂಬಾ ಕಮ್ಯುನಿಸ್ಟ್ ಪಕ್ಷ ಅವರನ್ನು ತಲುಪಿದೆ.

ಈ ಮತಪ್ರದರ್ಶನಗಳಿಗೆ ಅಮೆರಿಕಾದ ಬೆಂಬಲ ಇದೆ. ತನ್ನದೇ ನಿರ್ಬಂಧಗಳು ಮತ್ತು ಮಹಾಸೋಂಕಿನಿಂದಾಗಿ ಉಂಟಾಗಿರುವ ತೀವ್ರ ಆರ್ಥಿಕ ಸಮಸ್ಯೆಗಳ ಪ್ರಯೋಜನ ಪಡೆಯಲು ಅದು ಪ್ರಯತ್ನಿಸುತ್ತಿದೆ. ಸಮಾಜವಾದಿ ಕ್ಯೂಬಾವನ್ನು ಅಸ್ಥಿರಗೊಳಿಸುವುದು ಇದರ ಉದ್ದೇಶ ಎಂದಿರುವ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ಕ್ಯೂಬಾದ ಆಂತರಿಕ ವಿಷಯಗಳಲ್ಲಿ ಅಮೇರಿಕನ್ ಸಾಮ್ರಾಜ್ಯಶಾಹಿ ಹಸ್ತಕ್ಷೇಪವನ್ನು ಖಂಡಿಸಿದೆ.

ಕ್ಯೂಬಾ ಎದುರಿಸುತ್ತಿರುವ ಆರ್ಥಿಕ ಸಮಸ್ಯೆಗಳು ಕಳೆದ 60 ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಅಮೇರಿಕ ಸಂಯುಕ್ತ ಸಂಸ್ಥಾನ ಹೇರಿರುವ ಅಮಾನವೀಯ ಮತ್ತು ಕ್ರಿಮಿನಲ್ ನಿರ್ಬಂಧದ ಒಂದು ಫಲಿತಾಂಶ. ಹೆಲ್ಮ್‌ಸ್‌-ಬರ್ಟನ್ ಕಾಯ್ದೆಯ ಟೈಟಲ್-3 ನ್ನು ಬಳಸಿ ನಿರ್ಬಂಧವನ್ನು ಗಟ್ಟಿಗೊಳಿಸಲಾಗಿದೆ ಮತ್ತು ಅನಿರೀಕ್ಷಿತ ಕಷ್ಟಕೋಟಲೆಗಳನ್ನು ಹೇರಿದೆ. ಕ್ಯೂಬಾವನ್ನು “ಭಯೋತ್ಪಾದನೆಯನ್ನು ಪ್ರಾಯೋಜಿಸುವ ಪ್ರಭುತ್ವ” ಎಂದು ಅನ್ಯಾಯವಾಗಿ ಪಟ್ಟಿ ಮಾಡಿ ಮಹಾಸೋಂಕಿನ ಸಮಯದಲ್ಲಿ ಈ ನಿರ್ಬಂಧಗಳನ್ನು ಮತ್ತಷ್ಟು ಬಿಗಿಗೊಳಿಸಿದೆ. ಟ್ರಂಪ್ ಆಡಳಿತ ಇನ್ನೂ 243 ನಿರ್ಬಂಧಗಳನ್ನು ಹೇರಿತು. ಇವು ಈಗಲೂ ಮುಂದುವರೆಯುತ್ತಿವೆ.

ಇದರ ಫಲಿತಾಂಶವಾಗಿ, ಕ್ಯೂಬಾಕ್ಕೆ ಆಹಾರ, ಔಷಧಿ, ಲಸಿಕೆ ಮತ್ತು ವೈದ್ಯಕೀಯ ಸಾಧನಗಳ ಉತ್ಪಾದನೆಗೆ ಬೇಕಾಗುವ ಕಚ್ಚಾ ವಸ್ತುಗಳ ಆಮದನ್ನು ನಿರಾಕರಿಸಲಾಗಿದೆ. ಇದು ಕ್ಯೂಬಾದ ಜನಗಳ ಸಂಕಷ್ಟಗಳನ್ನು ಉಲ್ಬಣಗೊಳಿಸಿದೆ. ಕ್ಯೂಬಾದ ಜನತೆ ತಮ್ಮ ಸರಕಾರದ ವಿರುದ್ಧ ಮತಪ್ರದರ್ಶನ ನಡೆಸಲು ಅಮೇರಿಕಾ ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ.

ಇದರ ಹೊರತಾಗಿಯೂ ಕ್ಯೂಬಾದ ಸರಕಾರ ತನ್ನದೇ ಸ್ವಂತ ಲಸಿಕೆ ಮಾದರಿಗಳನ್ನು ಅಭಿವೃದ್ಧಿ ಪಡಿಸಿದೆ, ಈ ಮೂಲಕ ಜಗತ್ತು ಮಹಾಸೋಂಕಿನ ವಿರುದ್ಧ ಹೋರಾಡಲು ನೆರವಾಗುತ್ತಿದೆ ಹಾಗೂ ಆರ್ಥಿಕ ಅಡಚಣೆಗಳನ್ನು ಮೀರಿ ನಿಲ್ಲಲು ಪ್ರಯತ್ನಿಸುತ್ತಿದೆ.

“ಗಂಭೀರ ಕಷ್ಟ-ಕಾರ್ಪಣ್ಯಗಳ ಈ ಅವಧಿಯಲ್ಲಿ ನಾವು ಕ್ಯೂಬಾದ ಸರಕಾರಕ್ಕೆ ಮತ್ತು ಕ್ಯೂಬಾದ ಜನತೆಗೆ ಸೌಹಾರ್ದವನ್ನು ವ್ಯಕ್ತಪಡಿಸುತ್ತೇವೆ. ಕ್ಯೂಬಾದ ಜನತೆ ಮತ್ತು ಅವರ ಸರಕಾರಕ್ಕೆ, ತಮ್ಮ ತಾಯ್ನಾಡು, ಸಾರ್ವಭೌಮತೆ ಮತ್ತು ಸಮಾಜವಾದವನ್ನು ರಕ್ಷಿಸುವ ಅವರ ಹೋರಾಟದ ಬೆಂಬಲಕ್ಕೆ ನಿಲ್ಲಬೇಕು ಎಂದು ಜನತೆಗೆ ಕರೆ ನೀಡುತ್ತೇವೆ” ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *