ಈಶಾನ್ಯ ದಿಲ್ಲಿಯಲ್ಲಿ ಮತ್ತೆ ಕಳವಳಕಾರೀ ಘಟನೆಗಳು-ಇವನ್ನು ನಿಲ್ಲಿಸುವಂತೆ ದಿಲ್ಲಿ ಪೋಲಿಸ್ ಆಯುಕ್ತರಿಗೆ ಬೃಂದಾ ಕಾರಟ್ ಪತ್ರ

ದಿಲ್ಲಿಯ ಶಿವವಿಹಾರ್‌ನಲ್ಲಿ ಕಳವಳಕಾರೀ ಘಟನೆಗಳು ನಡೆಯುತ್ತಿವೆ, ಇವುಗಳಿಂದ ಹಾನಿಕಾರಕ ಪರಿಣಾಮಗಳಾಗಬಹುದು ಎಂದು ಇದರತ್ತ ದಿಲ್ಲಿ ಪೋಲೀಸ್ ಆಯುಕ್ತರಾಗಿರುವ ಎಸ್.ಎನ್.ಶ್ರೀವಾಸ್ತವ ಅವರ ಗಮನ ಸೆಳೆಯುತ್ತ ಒಂದು ಪತ್ರವನ್ನು ಸಿಪಿಐ(ಎಂ)ನ ಹಿರಿಯ ಮುಖಂಡರಾದ ಬೃಂದಾ ಕಾರಟ್ ಬರೆದಿದ್ದಾರೆ.

ಶ್ರೀರಾಮ್, ಹರಹರ ಮಹದೇವ್ ಎಂದು ಘೋಷಣೆ ಕೂಗುತ್ತ ಒಂದಷ್ಟು ಯುವಜನರ ಗುಂಪುಗಳು ಈ ಪ್ರದೇಶದಲ್ಲಿ ಕತ್ತಲಾದ ಮೇಲೆ ಅಲೆದಾಡುತ್ತಿದ್ದಾರೆ. ಇದು ಯಾವುದೇ ಧಾರ್ಮಿಕ ಸಮಾರಂಭಕ್ಕೆ ಸಂಬಂಧಪಟ್ಟದ್ದಲ್ಲ. ಇದು ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಹಲ್ಲೆಗಳು ನಡೆದ, ಅವರ ಮನೆಗಳನ್ನು ಸುಟ್ಟು ಹಾಕಿ. ಅವರ ಕುಟುಂಬಗಳು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆಯಬೇಕಾಗಿ ಬಂದ ಒಂದು ಪ್ರದೇಶ ಎಂಬುದನ್ನು ಪೋಲಿಸ್ ಆಯುಕ್ತರಿಗೆ ನೆನಪಿಸಿರುವ ಈ ಪತ್ರ, ಈಗಷ್ಟೇ ಈ ಕುಟುಂಬಗಳು ತಮ್ಮ ಮನೆಗಳಿಗೆ ಹಿಂದಿರುಗುತ್ತಿದ್ದಾರೆ, ಹಲವರ ಮನೆಗಳ ರಿಪೇರಿಗಳೂ ಆಗಿಲ್ಲ.  ಇಂತಹ ಸಂದರ್ಭದಲ್ಲಿ ಪೋಲಿಸ್ ಅನುಮತಿಯಿಲ್ಲದೆ ಈ ರೀತಿ ಮೆರವಣಿಗೆಗಳನ್ನು ನಡೆಸುವುದು ಆಕ್ಷೇಪಣಾರ್ಹ, ಇದನ್ನು ತಕ್ಷಣವೇ ನಿಲ್ಲಿಸಬೇಕಾಗಿದೆ ಎಂದು ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ತಾನು ಅಡಿಷನಲ್ ಕಮಿಷನರ್ ಆಫ್ ಪೋಲೀಸ್, ಅಲೋಕ್ ಕುಮಾರ್ ಅವರ ಬಳಿಯೂ ಮಾತಾಡಿರುವದಾಗಿಯೂ, ಅವರಿಗೆ ಈ ಆಕ್ಷೇಪಾರ್ಹ ಮೆರವಣಿಗೆಗಳ ವೀಡಿಯೋಗಳನ್ನು ಕೂಡ ಕಳಿಸಿರುವುದಾಗಿಯೂ ಬೃಂದಾ ಕಾರಟ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಈ ಬಗ್ಗೆ ತಮಗೆ ತಿಳಿಸಿದವರು ಈ ಕುರಿತಂತೆ ನೇರವಾಗಿ ಪೋಲೀಸರ ಬಳಿ ಹೋದರೆ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇದನ್ನು ತನಗೆ ತಿಳಿಸಿದ್ದಾರೆ ಎಂಬ ಸಂಗತಿಯನ್ನೂ ಬೃಂದಾಕಾರಟ್ ತಮ್ಮ ಪತ್ರದಲ್ಲಿ ಪೋಲಿಸ್ ಕಮಿಷನರ್ ಗಮನಕ್ಕೆ ತರುತ್ತ, ಈ ಪ್ರದೇಶದಲ್ಲಿ ವಿಶ್ವಾಸ ಮೂಡಿಸುವ ಕ್ರಮಗಳು ತಕ್ಷಣದ ಅವಶ್ಯಕತೆ, ಇದಕ್ಕೆ ಮೊದಲ ಹೆಜ್ಜೆಯೆಂದರೆ ಇಂತಹ ಮೆರವಣಿಗೆಗಳು ನಿಲ್ಲುವಂತೆ ಖಾತ್ರಿ ಪಡಿಸುವುದು, ಈ ಬಗ್ಗೆ ಕ್ರಮ ಕಮಿಷನರ್ ಕ್ರಮ ಕೈಗೊಳ್ಳುವರೆಂದು ಆಶಿಸಿದ್ದಾರೆ.

Leave a Reply

Your email address will not be published. Required fields are marked *