ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಡಿತಗೊಳಿಸಲಾದ ಅನುದಾನವನ್ನು ಕೂಡಲೇ ಬಿಡುಗಡೆಗೊಳಿಸಲು ಮನವಿ

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಡಿತಗೊಳಿಸಲಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ರಾಜ್ಯ ಸರ್ಕಾರಕ್ಕೆ ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದ ಮುಖ್ಯಮಂತ್ರಿಗಳಿಗೆ ಕಳುಹಿಸಿರುವ ಮನವಿ ಪತ್ರದ ಪೂರ್ಣ ವಿವರ ಕೆಳಗಿನಂತಿದೆ….

ಇವರಿಗೆ,
ಮಾನ್ಯ ಶ್ರೀ . ಬಿ.ಎಸ್. ಯಡಿಯೂರಪ್ಪನವರು,
ಮುಖ್ಯಮಂತ್ರಿಗಳು,ಕರ್ನಾಟಕ
ಸರಕಾರ,
ವಿಧಾನಸೌಧ, ಬೆಂಗಳೂರು.

ಮಾನ್ಯರೇ,

ವಿಷಯಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಡಿತಗೊಳಿಸಲಾದ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲು ಒತ್ತಾಯಿಸಿ ಮನವಿ

ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳು ಹಿಂದುಳಿದಿರುವ ಹಿನ್ನೆಲೆಯಲ್ಲಿ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೂಲಕ ಸರಕಾರವು ಈ ಸಮುದಾಯಗಳ ಅಭಿವೃದ್ಧಿಗಾಗಿ ಜಾರಿಯಲ್ಲಿಟ್ಟಿರುವುದು ಸರಿಯಷ್ಠೇ. ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಲ್ಲಿ ಇಂತಹ ವಿಶೇಷ ಆಧ್ಯತಾ ಯೋಜನೆಗಳು ಅವಶ್ಯಕವಾಗಿವೆ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಆಭಿವೃದ್ಧಿ ಸಮಾನವಾಗಿ ಸಾಧ್ಯವಾಗುವವರೆಗೂ ಈ ಯಾವ ಯೋಜನೆಗಳೂ ಯಾವುದೇ ಕಾರಣಗಳಿಗೆ ಸ್ಥಗಿತಗೊಳ್ಳಬಾರದು ಬದಲಿಗೆ, ಹಿಂದುಳಿದಿರುವಿಕೆಯನ್ನು ತೊಡೆದು ಹಾಕಲು ಅವುಗಳು ಮತ್ತಷ್ಠು ಬಲಗೊಳ್ಳುವುದು ಅವಶ್ಯವಿದೆ ಎಂದು ಆಗ್ರಹಿಸುತ್ತೇವೆ.

ಕರ್ನಾಟಕ ರಾಜ್ಯದಲ್ಲಿ ತಮ್ಮ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ನಂತರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತನ್ನ ಮೂಲಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯಗಳಾದ ಮುಸ್ಲಿಂ, ಕ್ರಿಶ್ಚಿಯನ್, ಸಿಖ್, ಬೌದ್ಧ, ಪಾರ್ಸಿ ಮತ್ತು ಜೈನ ಸಮುದಾಯಗಳ ಜನಪರ ಕಲ್ಯಾಣ ಯೋಜನೆಗಳಿಗೆ ನಿಗದಿಗೊಳಿಸಲಾದ ಅನುದಾನ ಕಡಿತಗೊಳಿಸಿರುವದನ್ನು  ಭಾರತ ಕಮ್ಯುನಿಷ್ಟ್ ಪಕ್ಷ ( ಮಾರ್ಕ್ಸವಾದಿ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ.

ತಮ್ಮ ನೇತೃತ್ವದ ಸರಕಾರ ಬಂದ ಮೇಲೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಈ ಹಿಂದೆ ನಿಗದಿಗೊಳಿಸುತ್ತ ಬಂದಿರುವ ಅನುದಾನ ಕಡಿತಗೊಳಿಸಿದ್ದಲ್ಲದೇ ಹಲವು ಯೋಜನೆಗಳನ್ನು ರದ್ದು ಮಾಡಲಾಗಿದೆ.

2019-20ನೇ ಸಾಲಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರಕಾರ ಬಜೆಟ್‌ನಲ್ಲಿ ಘೋಷಿಸಿದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅನುದಾನವನ್ನು 1867 ಕೋಟಿ ರೂ. ಗಳಿಂದ 1570 ಕೋಟಿ ರೂ. ಗೆ ಕಡಿತ ಗೊಳಿಸಿದೆ. 2020-21ನೇ ಸಾಲಿನಲ್ಲಿ ತಮ್ಮ ನೇತೃತ್ವದ ಸರಕಾರ ಮಂಡಿಸಿದ ಬಜೆಟ್‌ನಲ್ಲಿ 1177 ಕೋಟಿ ರೂ. ಗಳಷ್ಟಿದ್ದ ಅನುದಾನವನ್ನು ಮತ್ತೆ ಕಡಿತಗೊಳಿಸಿ 1055 ಕೋಟಿ ರೂ. ಗಳಿಗೆ ನಿಗದಿಗೊಳಿಸಿದೆ. ಇತ್ತೀಚಿಗೆ ಮತ್ತೆ ಅದರಲ್ಲಿ 50 ಕೋಟಿ ರೂ. ಅನುದಾನ ಕಡಿತಗೊಳಿಸಿದೆ.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ಕಳೆದ 5 ವರ್ಷಗಳಿಂದ ಜಾರಿಯಲ್ಲಿಟ್ಟಿದ್ದ ಹಲವು ಜನಪರ ಕಲ್ಯಾಣ ಯೋಜನೆಗಳನ್ನು ಈಗ ಅನುದಾನ ಕಡಿತಗೊಳಿಸಿರುವುದರಿಂದ ಜಾರಿಗೊಳಿಸದೆ ನಿಲ್ಲಿಸಿದೆ.

ಹಿಂದಿನ ಸರಕಾರಗಳು ಜಾರಿಯಲ್ಲಿಟ್ಟಿದ್ದ ಕಾಲೋನಿ ಅಭಿವೃದ್ದಿ ಯೋಜನೆ, ಶಾದಿಭಾಗ್ಯ ಯೋಜನೆಗಳನ್ನು ರದ್ದುಗೊಳಿಸಿದೆ. ಇವೆಲ್ಲಕ್ಕಿಂತ ಪ್ರಮುಖ ಯೋಜನೆಗಳಾದ, ವಿದೇಶದಲ್ಲಿ ಉನ್ನತ ವ್ಯಾಸಂಗದ ಯೋಜನೆ, ನಾಗರೀಕ ಸೇವಾ ತರಬೇತಿ ಯೋಜನೆ, ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನ, ಶುಲ್ಕ ವಿನಾಯತಿ, ವಿದ್ಯಾಸಿರಿಯಂತಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆಗೆ ಪೂರಕವಾದಂತಹ ಯೋಜನೆಗಳ 2019-20 ನೇ ಸಾಲಿನ ಅನುದಾನ ಸರಕಾರ ಇಲ್ಲಿಯವರೆಗೆ ಬಿಡುಗಡೆಗೊಳಿಸದೇ ಇರುವದು ವಿದ್ಯಾರ್ಥಿಗಳಿಗೆ ಸಾಕಷ್ಟು ಆರ್ಥಿಕ ತೊಂದರೆ ನೀಡುವ ಕ್ರಮವಾಗಿದೆ. ರಾಜ್ಯದಲ್ಲಿ 2016-17ರಿಂದ ಜಾರಿಯಲ್ಲಿರುವ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಸಂಶೋಧನೆ (ಪಿ.ಎಚ್.ಡಿ./ಎಂ.ಫೀಲ್) ಕೈಗೊಳ್ಳಲು ಪ್ರತಿ ತಿಂಗಳು ನೀಡಲಾಗುತ್ತಿದ್ದ ಪ್ರೋತ್ಸಾಹಧನ 25,000 ರೂ. ಗಳನ್ನು 8333 ರೂ. ಗಳಿಗೆ ಕಡಿತಗೊಳಿಸಿದ್ದರಿಂದ ಯಾರೂ ಸಂಶೋಧನೆಯನ್ನು ಪೂರ್ಣಗೊಳಿಸದಂತಹ ವಾತಾವರಣ ನಿರ್ಮಾಣಗೊಂಡಿದೆ.

2020-21ನೇ ಸಾಲಿನಲ್ಲಿ ರಾಜ್ಯಾದ್ಯಂತ ಸುಮಾರು 300 ವಿದ್ಯಾರ್ಥಿಗಳು ಸಂಶೋಧನೆಯ ಕಾರ್ಯದಲ್ಲಿ ತೊಡಗಿದವರು ಅಗತ್ಯ ಪ್ರೋತ್ಸಾಹ ಧನವಿಲ್ಲದೆ ತೊಂದರೆಗೀಡಾಗಿದ್ದಾರೆ.

ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನಕ್ಕಾಗಿ ವಾರ್ಷಿಕವಾಗಿ ಕರ್ನಾಟಕ ರಾಜ್ಯದಿಂದ ಸುಮಾರು 12.50 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರಕಾರ ಸೇರಿ ಒಟ್ಟು 270 ಕೋ.ರೂ. ಅನುದಾನ ನಿಗದಿಗೊಳಿಸಿದೆ.

ಆದರೆ 2019-20ನೇ ಸಾಲಿನಲ್ಲಿ ರಾಜ್ಯ ಸರಕಾರ ಅಗತ್ಯ ಅನುದಾನ ಬಿಡುಗಡೆಗೊಳಿಸದೇ ಇರುವದರಿಂದ ಶೇ 50ರಷ್ಟು ವಿದ್ಯಾರ್ಥಿಗಳು ಕಳೆದ ವರ್ಷದ ವಿದ್ಯಾರ್ಥಿ ವೇತನ ಪಡೆಯಲು ಸಾದ್ಯವಾಗಿಲ್ಲ. ಈಗಲೂ ಈ ವಿದ್ಯಾರ್ಥಿ ವೇತನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುವ ಪರಿಸ್ಥಿತಿ ಬಡ ಅಲ್ಪಸಂಖ್ಯಾತ ವಿದ್ಯಾರ್ಥಿಗಳದ್ದಾಗಿದೆ.

ಶುಲ್ಕ ವಿನಾಯತಿ ಯೋಜನೆಯು 1980 ರಿಂದ ರಾಜ್ಯದಲ್ಲಿ ಎಲ್ಲ ಹಿಂದುಳಿದ ವಿದ್ಯಾರ್ಥಿಗಳಿಗೆ ಜಾರಿಯಲ್ಲಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯು ಪ್ರತ್ಯೇಕಗೊಂಡ ನಂತರ 2014 ರಿಂದ ಅರ್ಜಿ ಸಲ್ಲಿಸಿದ ಅಲ್ಪಸಂಖ್ಯಾತ ಸಮುದಾಯದ ಅರ್ಹ ವಿದ್ಯಾರ್ಥಿಗಳಿಗೆ ವಿನಾಯಿತಿ ನೀಡುತ್ತಾ ಬರಲಾಗಿದೆ. ಆದರೆ, 2019 -20ನೇ ಸಾಲಿನಲ್ಲಿ ಅರ್ಜಿ ಸಲ್ಲಿಸಿದ ಅರ್ಹ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ಈಗಲೂ ಅನುದಾನ ಬಿಡುಗಡೆಗೊಳಿಸದೇ ಇರುವುದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಡೋಲಾಯನಮಾನವಾಗಿದೆ.

ಅದೇ ರೀತಿ, ರಾಜ್ಯದಲ್ಲಿ ಎಲ್ಲ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ 2014-15ನೇ ಸಾಲಿನಿಂದ, ಹೊರಗಡೆಯಿದ್ದು ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆಂದೇ ಜಾರಿಗೊಳಿಸಿದ ವಿದ್ಯಾಸಿರಿ ಯೋಜನೆಯ 2019-20ನೇ ಸಾಲಿನ ಅನುದಾನ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಗೆ ಬಿಡುಗಡೆಗೊಳಿಸದೇ ಇರುವುದರಿಂದ ಈ ಯೋಜನೆಯಡಿಯ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಆತಂಕದಲ್ಲಿದ್ದಾರೆ.

ಅದೇ ರೀತಿ, ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಮೂಲಕ ಅನುಷ್ಠಾನ ಮಾಡಲಾಗುತ್ತಿರುವ ಅರಿವು ಶೈಕ್ಷಣಿಕ ಸಾಲದ ಯೋಜನೆ ಕೂಡಾ ಈ ವರ್ಷ ದಾರಿ ತಪ್ಪಿದೆ, ಈ ಯೋಜನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ದೊರೆಯದಂತಾಗಿದೆ.

ಒಂದು ಕಡೆ ಪ್ರೋತ್ಸಾಹಧನ ಕಡಿತಗೊಳಿಸಿ, ಮತ್ತೊಂದು ಕಡೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ, ಮೆರಿಟ್-ಕಮ್ ಮೀನ್ಸ್ ವಿದ್ಯಾರ್ಥಿ ವೇತನದ ಅನುದಾನ ಕಡಿತಗೊಳಿಸಿದ್ದಲ್ಲದೇ ಶುಲ್ಕವಿನಾಯತಿ, ವಿದ್ಯಾಸಿರಿ ಅನುದಾನವೂ ಸರಕಾರ ನೀಡುತ್ತಿಲ್ಲ, ಇದನ್ನು ಹೊರತುಪಡಿಸಿ, ಇದ್ದಂತಹ ಅರಿವು ಶೈಕ್ಷಣಿಕ ಸಾಲದ ಯೋಜನೆಯನ್ನು ಮೊಟುಕುಗೊಳಿಸಲು ಹೊರಟಿರುವುದು  ಅಲ್ಪಸಂಖ್ಯಾತ ಸಮುದಾಯದ ವಿರೋಧಿ ನೀತಿಯಾಗಿದೆ.

ಅನುದಾನ ಕಡಿತಗೊಳಿಸಲು ಕೋವಿಡ್-19 ಕಾರಣವೆನ್ನಲಾಗಿದ್ದರೂ, ಯಾವುದೇ ಸರಕಾರ ಜನಪರ ಕಲ್ಯಾಣ ಇಲಾಖೆಗಳ ಯೋಜನೆಗಳನ್ನು ಕಡಿತಗೊಳಿಸುವದು ಸಾಮಾಜಿಕ ಬದ್ದತೆಯ ದೃಷ್ಟಿಯಿಂದ ಒಳ್ಳೆಯ ಆಡಳಿತದ ಮಾದರಿಯಾಗಲಾರದು.

ಕೇಂದ್ರ ಸರಕಾರದಿಂದ ಬರಬೇಕಾದ ಅನುದಾನ ಬಾಕಿಗಳು ಮತ್ತು ಅಗತ್ಯ ನೆರವುಗಳನ್ನು ಪಡೆಯದೇ ಈ ರೀತಿ ಬಡವರ ಮೇಲೆ ಎರಗುವುದು ಅಕ್ಷಮ್ಯವಾಗಿದೆ.

ಆದ್ದರಿಂದ ಕರ್ನಾಟಕ ರಾಜ್ಯ ಸರಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂದಿಸಿದ ಈಗಾಗಲೇ ಜಾರಿಯಲ್ಲಿರುವ ಎಲ್ಲ ಯೋಜನೆಗಳನ್ನು ಮುಂದುವರೆಸಬೇಕು, ಸದರಿ ಯೋಜನೆಗಳನ್ನು ಮುಂದುವರೆಸಲು ಬೇಕಾಗುವ ಅನುದಾನವನ್ನು ಸಂಪೂರ್ಣವಾಗಿ ಬಿಡುಗಡೆಗೊಳಿಸಬೇಕೆಂದು ಸಿಪಿಐಎಂ  ಬಲವಾಗಿ ಆಗ್ರಹಿಸುತ್ತದೆ.

ಯು. ಬಸವರಾಜ
ಕಾರ್ಯದರ್ಶಿ

Leave a Reply

Your email address will not be published. Required fields are marked *