ಜನತಾ ಹೋರಾಟಗಳ ವಿರುದ್ಧ ಕೇಂದ್ರದ ಸುಳ್ಳುನ ಅಬ್ಬರದ ವಿರುದ್ಧ ತೀವ್ರ ಪ್ರಚಾರ ನಡೆಸಬೇಕು

ದೇಶದಲ್ಲಿ ಈಗ ನಡೆಯುತ್ತಿರುವ ಜನಗಳ ಹೋರಾಟಗಳ ಬಗ್ಗೆ ಕೇಂದ್ರ ಸರಕಾರ ಸುಳ್ಳು ಮಾಹಿತಿಗಳ ಅಬ್ಬರವನ್ನೇ ಹರಿಯಬಿಟ್ಟಿದೆ. ಇದರ ವಿರುದ್ಧ ಒಂದು ತೀವ್ರವಾದ ಪ್ರಚಾರಪ್ರಕ್ಷೋಭೆ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಕರೆ ನೀಡಿದೆ.

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಗಳೊಂದಿಗೆ ಸೌಹಾರ್ದ ಕಾರ್ಯಾಚರಣೆಗಳನ್ನು ಸಂಘಟಿಸಬೇಕು ಮತ್ತು ಕಾರ್ಮಿಕ ವರ್ಗ ವ್ಯಾಪಕ ಪ್ರಮಾಣದ ಖಾಸಗೀಕರಣ, ಕಾರ್ಮಿಕ ಕಾನೂನುಗಳ ರದ್ಧತಿ ಮತ್ತು ಭಾರತದ ರಾಷ್ಟ್ರೀ ಆಸ್ತಿಗಳ ಲೂಟಿಯ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಬೆಂಬಲಿಸಬೇಕು ಎಂದು ಅದು ತನ್ನ ಎಲ್ಲ ಟಕಗಳಿಗೆ ಕರೆ ನೀಡಿದೆ.

ಡಿಸೆಂಬರ್ 19ರಂದು ನಡೆದ ಪೊಲಿಟ್‌ಬ್ಯುರೊದ ಆನ್‌ಲೈನ್ ಸಭೆಯ ನಂತರ ಪ್ರಕಟಿಸಿರುವ ಹೇಳಿಕೆಯಲ್ಲಿ ಈ ಕರೆಗಳನ್ನು ನೀಡಲಾಗಿದೆ:

ಕೇರಳ ವಿಜಯಕ್ಕೆ ಪ್ರಶಂಸೆ

ಕೇರಳದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಎಲ್.ಡಿ.ಎಫ್. ವಿಜಯವನ್ನು ಪೊಲಿಟ್‌ಬ್ಯುರೊ ಪ್ರಶಂಸಿಸಿದೆ. ಕೇರಳದ ಜನತೆ ಮತ್ತೊಮ್ಮೆ ಎಲ್.ಡಿ.ಎಫ್.ನಲ್ಲಿ ತಮ್ಮ ವಿಶ್ವಾಸವನ್ನು ವ್ಯಕ್ತಗೊಳಿಸಿರುವುದಕ್ಕೆ ಅವರನ್ನು ಅದು ಅಭಿನಂದಿಸಿದೆ.

ಎಲ್.ಡಿ.ಎಫ್. 14 ಜಿಲ್ಲಾ ಪಂಚಾಯತುಗಳಲ್ಲಿ 11ರಲ್ಲಿ ಗೆದ್ದಿದೆ. 2015ರಲ್ಲಿ ಅದು 7ರಲ್ಲಿ ಗೆದ್ದಿತ್ತು. ಆರು ಮಹಾನಗರಪಾಲಿಕೆಗಳಲ್ಲಿ ಐದರಲ್ಲಿ ಗೆದ್ದಿದೆ, 2015ರಲ್ಲಿ 4ರಲ್ಲಿ ಗೆದ್ದಿತು. ಎಲ್ಲ ಮಟ್ಟಗಳಲ್ಲೂ ಎಲ್.ಡಿ.ಎಫ್. ಫಲಿತಾಂಶ ಉತ್ತಮಗೊಂಡಿದೆ.

ರೈತರ ಹೋರಾಟ

ಬೃಹತ್ ರೈತ ಹೋರಾಟ ಪ್ರತಿಗಾಮಿ ಕೃಷಿ ಕಾಯ್ದೆಗಳನ್ನು ಮತ್ತು ವಿದ್ಯುತ್(ತಿದ್ದುಪಡಿ) ಮಸೂದೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ನಡೆಸಿರುವ ಹೋರಾಟವನ್ನು ಕೆಚ್ಚಿನಿಂದ ಮತ್ತು ದೃಢ ನಿರ್ಧಾರದಿಂದ ಮುಂದುವರೆಸುತ್ತಿದೆ ಎನ್ನುತ್ತ ಇದರಲ್ಲಿ 500ಕ್ಕೂ ಹೆಚ್ಚು ಸಂಘಟನೆಗಳ ಐಕ್ಯತೆಯನ್ನು ಪೊಲಿಟ್‌ಬ್ಯುರೊ ಪ್ರಶಂಸಿಸಿದೆ.

ಸಿಪಿಐ(ಎಂ) ಈ ಹೋರಾಟಕ್ಕೆ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸುತ್ತದೆ ಎನ್ನುತ್ತ ಪೊಲಿಟ್‌ಬ್ಯುರೊ, ಭಾರತೀಯ ಕೃಷಿ ಮತ್ತು ಅನ್ನದಾತರ ರಕ್ಷಣೆಯ ಈ ಭವ್ಯ ಹೋರಾಟಕ್ಕೆ ಬೆಂಬಲವಾಗಿ ಸೌಹಾರ್ದ ಕಾರ್ಯಾಚರಣೆಗಳನ್ನು ಸಂಘಟಿಸಬೇಕು ಎಂದು ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಈ ಹೋರಾಟ 25ನೇ ದಿನವನ್ನು ಪ್ರವೇಶಿಸಿದೆ. ಈ ಹೋರಾಟದಲ್ಲಿ 31 ರೈತರು ಹುತಾತ್ಮರಾಗಿದ್ದಾರೆ. ಅವರಿಗೆ ಧೀರ ನಮನ ಸಲ್ಲಿಸಿರುವ ಪೊಲಿಟ್‌ಬ್ಯುರೊ, ಉತ್ತರ ಭಾರತದಲ್ಲಿ ತೀಕ್ಷ್ಣವಾದ ಚಳಿಗಾಳಿ ಬೀಸುತ್ತಿದ್ದರೂ, ಹೆಚ್ಚೆಚ್ಚು ರೈತರು ಈ ಹೋರಾಟವನ್ನು ಇನ್ನಷ್ಟು ಬಲಗೊಳಿಸಲು ಸಾಗಿ ಬರುತ್ತಿದ್ದಾರೆ ಎಂದು ಹೇಳಿದೆ.

ಕೇಂದ್ರ ಸರಕಾರ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕು, ನಂತರ ರೈತರು ಮತ್ತು ಇತರ ಭಾಗೀದಾರರೊಂದಿಗೆ ಕರ್ಷಕ ಸುಧಾರಣೆಗಳ ಬಗ್ಗೆ ಚರ್ಚೆಗೆ ಕುಳಿತುಕೊಳ್ಳಬೇಕು ಎಂಬ ಸಿಪಿಐ(ಎಂ) ಆಗ್ರಹವನ್ನು ಪೊಲಿಟ್‌ಬ್ಯುರೊ ಪುನರುಚ್ಚರಿಸಿದೆ.

ಬೆನ್ನುಮುರಿಯುವ ಬೆಲೆಯೇರಿಕೆ

ಮಹಾಸೋಂಕು, ಅಯೋಜಿತ ಮತ್ತು ಸಿದ್ಧತೆಗಳಿಲ್ಲದ ಲಾಕ್‌ಡೌನ್‌ಗಳು ಜನರ ಜೀವ ಮತ್ತು ಜೀವನೋಪಾಯಗಳ ಮೇಲೆ ಅಭೂತಪೂರ್ವ ಸಂಕಟಗಳನ್ನು ಹೇರಿದ ಮೇಲೆ ಬಂದಿರುವ ಬೆನ್ನು ಮುರಿಯುವ ಬೆಲೆಯೇರಿಕೆಗಳು ಜನಗಳ ಪರಿಸ್ಥಿತಿಗಳನ್ನು ಇನ್ನಷ್ಟು ಹದಗೆಡಿಸುತ್ತಿವೆ.

ಪೆಟ್ರೋಲಿಯಂ ಉತ್ಪನ್ನಗಳ, ಪೆಟ್ರೋಲಿನ ಮತ್ತು ಡೀಸೆಲಿನ ಬೆಲೆಗಳನ್ನು ಸತತವಾಗಿ ಏರಿಸಲಾಗುತ್ತಿದೆ. ಇದು ಸಾಗಾಣಿಕೆ ವೆಚ್ಚಗಳನ್ನು ಹೆಚ್ಚಿಸಿ ಹಣದುಬ್ಬರದ ಸುರುಳಿಯನ್ನು ಮೇಲಕ್ಕೆ ಒತ್ತುತ್ತದೆ. ಭಾರತ ಇಂದು ಜಗತ್ತಿನಲ್ಲೇ ಪೆಟ್ರೋಲಿಯಂ ಉತ್ಪನ್ನಗಳಿಗೆ ಅತಿ ಹೆಚ್ಚು ತೆರಿಗೆ ವಿಧಿಸಿರುವ ದೇಶವಾಗಿದೆ. ಕೇಂದ್ರ ಸರಕಾರ ಜನಗಳ ಸಂಕಟಗಳನ್ನು ಹೆಚ್ಚಿಸುವ ಮೂಲಕವೇ ಸಂಪನ್ಮೂಲಗಳನ್ನು ಗಿಟ್ಟಿಸಿಕೊಳ್ಳುತ್ತಿದೆ.

ಈ ಏರಿಕೆಗಳ ಮೇಲೆ ಈಗ ಅಡುಗೆ ಅನಿಲ ಸಿಲಿಂಡರುಗಳ ಬೆಲೆಗಳನ್ನೂ ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ. ನವಂಬರ್ ಮತ್ತು ಡಿಸೆಂಬರ್ 2020ರ ನಡುವೆ ಒಂದು ಅನಿಲ ಸಿಲಿಂಡರಿನ ವೆಚ್ಚ 100ರೂ.ಗಳಷ್ಟು ಏರಿಸಿದೆ.

ಮಹಾಸೋಂಕಿನ ಮೊದಲಿನ ಆರ್ಥಿಕ ನಿಧಾನಗತಿ ಹೇರಿದ ಸಂಕಟಗಳು ಈ ವರ್ಷ ಮತ್ತಷ್ಟು ಹದಗೆಟ್ಟಿದೆ. ಪ್ರಧಾನ ಮಂತ್ರಿ ಮೋದಿ ಮತ್ತು ಸರಕಾರಕ್ಕೆ ಜನಗಳ ಮೇಲೆ ಮತ್ತಷ್ಟು ಹೊರೆಗಳನ್ನು ಮತ್ತು ಸಂಕಟಗಳನ್ನು ಹೇರುವ ಬಗ್ಗೆ ಏನೇನೂ ಕಾಳಜಿಯೇ ಇಲ್ಲದಂತೆ ಕಾಣುತ್ತಿದೆ ಎಂದು ಪೊಲಿಟ್‌ಬ್ಯುರೊ ಖೇದ ವ್ಯಕ್ತಪಡಿಸಿದೆ.

ಹೌಹಾರುವಂತೆ ಮಾಡಿರುವ ಹಸಿವು ಮತ್ತು ಏರುತ್ತಲೇ ಇರುವ ಉದ್ಯೋಗ ನಷ್ಟಗಳು

ಇತ್ತೀಚಿನ ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ ಅಪೌಷ್ಟಿಕತೆಯಲ್ಲಿ, ನಿರ್ದಿಷ್ಟವಾಗಿ ಭಾರತದ ಭವಿಷ್ಯವಾದ ನಮ್ಮ ಮಕ್ಕಳ ನಡುವೆ ಅಪೌಷ್ಟಿಕತೆ ಬೆಚ್ಚಿಬಿಳಿಸುವ ರೀತಿಯಲ್ಲಿ ಏರಿದೆ ಎಂಬುದನ್ನು ತೋರಿಸುತ್ತಿದೆ. ಇದು ನಮ್ಮ ಜನಗಳ ಆರೋಗ್ಯವನ್ನು ನಾಶಪಡಿಸುತ್ತಿರುವ ಹಸಿವಿನ ಎಚ್ಚರಿಕೆಯ ಸಂಕೇತಗಳನ್ನು ಕೊಡುತ್ತಿದೆ.

ಈ ರೀತಿ ಹಸಿವು ತೀವ್ರವಾಗಿ ಹೆಚ್ಚುತ್ತಿದ್ದರೂ, ಉದ್ಯೋಗನಷ್ಟ ವಿಪರೀತವಾಗಿ ಏರುತ್ತಿದ್ದರೂ ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರಕಾರ ಅಗತ್ಯವಿರುವ ಜನಗಳಿಗೆ ನಗದು ವರ್ಗಾವಣೆೆ ಮತ್ತು ಉಚಿತ ಆಹಾರವನ್ನು ಒದಗಿಸಲು ನಿರಾಕರಿಸುತ್ತಿದೆ. ಎಫ್‌ಸಿಐ ಗೋದಾಮುಗಳಲ್ಲಿ 10 ಕೋಟಿ ಟನ್‌ಗಳಿಗಿಂತಲೂ ಹೆಚ್ಚು ಆಹಾರಧಾನ್ಯಗಳು ಕೊಳೆಯುತ್ತಿವೆಯಾದರೂ, ಸರಕಾರ ಉಚಿತ ಆಹಾರವನ್ನು ವಿತರಿಸಲು ನಿರಾಕರಿಸುತ್ತಿದೆ.

ತಕ್ಷಣವೇ ತಿಂಗಳಿಗೆ 7500 ರೂ.ನಂತೆ ಆರು ತಿಂಗಳು ನಗದು ವರ್ಗಾವಣೆ ಮತ್ತು ಮುಂದಿನ ಆರು ತಿಂಗಳ ಕಾಲ ಪ್ರತಿವ್ಯಕ್ತಿಗೆ ತಿಂಗಳಿಗೆ 10 ಕೆ.ಜಿ.ಯಂತೆ ಆಹಾರಧಾನ್ಯಗಳನ್ನು ವಿತರಿಸಬೇಕು ಎಂಬ ಪಕ್ಷದ ಬೇಡಿಕೆಯನ್ನು ಪೊಲಿಟ್‌ಬ್ಯುರೊ ಪುನರುಚ್ಚರಿಸಿದೆ.

ಸೆಂಟ್ರಲ್ ವಿಸ್ತಾ ಪರಿಯೋಜನೆ

ಲಭ್ಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ನಮ್ಮ ಜನಗಳಿಗೆ ಉಣಿಸುವ ಬದಲು, ಮತ್ತು ಜೀವನೋಪಾಯದ ಸಾಧನವನ್ನು ಕಲ್ಪಿಸಿಕೊಡುವ ಬದಲು, ಈ ಕೇಂದ್ರ ಸರಕಾರ ಹೊಸ ಕಟ್ಟಡಗಳನ್ನು ಕಟ್ಟಲು, ಒಂದು ಹೊಸ ಸಂಸತ್ತು ಸೇರಿದಂತೆ ದಿಲ್ಲಿಯ ಕೇಂದ್ರ ಪರಿದೃಶ್ಯ(ಸೆಂಟ್ರಲ್ ವಿಸ್ತಾ) ಪರಿಯೋಜನೆಗೆ ದೇಶದ ಸಂಪನ್ಮೂಲಗಳ ದುಂದುವೆಚ್ಚಕ್ಕೆ ಇಳಿದಿದೆ. ಮಹಾಸೋಂಕು ಮತ್ತು ಜನಗಳ ಹೆಚ್ಚುತ್ತಿರುವ ನೋವುಗಳ ನಡುವೆ, ಪ್ರಧಾನ ಮಂತ್ರಿಗಳು ಹೊಸ ಸಂಸತ್ತಿನ ನಿರ್ಮಾಣದ ಅಡಿಗಲ್ಲು ಹಾಕಿದ್ದಾರೆ.

ಸೆಂಟ್ರಲ್ ವಿಸ್ತಾ ಪರಿಯೋಜನೆಯನ್ನು ರದ್ದುಮಾಡಬೇಕು, ಇದಕ್ಕೆ ನೀಡುವ ಹಣವನ್ನು ನೋವುಸಂಕಟಗಳು ಆವರಿಸಿರುವ ಜನಗಳಿಗೆ ಉಚಿತ ಆಹಾರ ಮತ್ತು ನಗದು ವರ್ಗಾವಣೆ ಒದಗಿಸಲು ಬಳಸಬೇಕು ಎಂದು ಸಿಪಿಐ(ಎಂ) ಆಗ್ರಹಿಸುವುದಾಗಿ ಪೊಲಿಟ್‌ಬ್ಯುರೊ ಹೇಳಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನದ ರದ್ದತಿ

ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ಕೊವಿಡ್ ನೆಪವನ್ನು ಬಳಸಿಕೊಂಡು ರದ್ದುಪಡಿಸಿರುವ ಅಭೂತಪೂರ್ವ ಕ್ರಮವನ್ನು ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. ಬಿಜೆಪಿಗೆ ಚುನಾವಣಾ ಪ್ರಚಾರಗಳನ್ನು ಮತ್ತು ರ‍್ಯಾಲಿಗಳನ್ನು ಸಂಘಟಿಸಲು ಮಹಾಸೋಂಕಿನಿಂದ ಸಮಸ್ಯೆಯೇನೂ ಇಲ್ಲ, ಆದರೆ ಸಂಸತ್ತಿಗೆ ಉತ್ತರದಾಯಿ ಆಗುವುದರಿಂದ ತಪ್ಪಿಸಿಕೊಳ್ಳಲು ಇದನ್ನು ಆರಿಸಿಕೊಂಡಿದೆ. ಈ ಮೂಲಕ ಅದು ಸಂಸತ್ತಿಗೆ ಜವಾಬುದಾರನಾಗಿರಬೇಕಾದ ಸಂವಿಧಾನಿಕ ಹೊಣೆಯನ್ನು ಕೈಬಿಟ್ಟಿದೆ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

ಒಂದೆಡೆಯಲ್ಲಿ ಆರ್ಥಿಕ ಹಿಂಜರಿತವನ್ನು ಮತ್ತು ಮಹಾಸೋಂಕನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ವಿಫಲತೆ ಮತ್ತು ಇನ್ನೊಂದೆಡೆಯಲ್ಲಿ ಜನಗಳ ಜೀವನೋಪಾಯಗಳ ಮೇಲೆ ನಿರ್ದಯ ದಾಳಿಗಳನ್ನು ನಡೆಸಿ ದುಡಿಯುವ ಜನಗಳ ಮತ್ತು ರೈತಾಪಿಗಳ ಹಕ್ಕುಗಳನ್ನು ಧ್ವಂಸ ಮಾಡಿರುವುದರ ಮೇಲೆ ಪ್ರಶ್ನೆಗಳಿಗೆ ಉತ್ತರಿಸುವುದನ್ನು ಮೋದಿ ಸರಕಾರ ತಪ್ಪಿಸಿಕೊಳ್ಳುತ್ತಿದೆ ಎಂಬುದು ಸ್ಪಷ್ಟವಾಗಿದೆ.

ವಿಸ್ಟ್ರಾನ್ ಕಾರ್ಮಿಕರ ಪ್ರತಿಭಟನೆ

ಬೆಂಗಳೂರಿನ ಬಳಿಯಿರುವ ವಿಸ್ಟ್ರಾನ್ ಕಂಪನಿಯ ಕಾರ್ಖಾನೆಯಲ್ಲಿ ಕಾರ್ಮಿಕರ ಪ್ರತಿಭಟನೆ ಮತ್ತು ಅಲ್ಲಿ ನಡೆದಿರುವ ಘಟನೆಯನ್ನು ಗಮನಿಸಿರುವ ಪೊಲಿಟ್‌ಬ್ಯುರೊ ಇದು ಕಾಂಟ್ರಾಕ್ಟ್ ಕಾರ್ಮಿಕರಿಗೆ ನಾಲ್ಕು ತಿಂಗಳ ಕಾಲ ಸಂಬಳಗಳನ್ನು ಕೊಡದಿರುವ ಮತ್ತು 12 ಗಂಟೆಗಳ ಕಾಲ ಓವರ್‌ಟೈಂ ಕೂಲಿ ಹಣವನ್ನು ತೆರದೆ ದುಡಿಸಿಕೊಳ್ಳುತಿರುವುದರ ಫಲಿತಾಂಶ ಎಂದು ಅಭಿಪ್ರಾಯಪಟ್ಟಿದೆ. ಈ ಬಹುರಾಷ್ಟ್ರೀಯ ಕಂಪನಿ ಆಪಲ್ ಕಾರ್ಪೊರೇಷನ್‌ನ ಐ ಫೋನ್‌ಗಳನ್ನು ಮಾಡುವ ಒಬ್ಬ ಕಾಂಟ್ರಾಕ್ಟ್ ಕಂಪನಿ ಅಗಿದೆ. ಈ ಕಾರ್ಖಾನೆಯಲ್ಲಿ ದುಡಿಯುತ್ತಿರುವ 10,000 ಕಾರ್ಮಿಕರಲ್ಲಿ 80 ಶೇಕಡಾಕ್ಕೂ ಹೆಚ್ಚು ಖಾಯಂ ಅಲ್ಲದ ಕಾಂಟ್ರಾಕ್ಟ್‌ ಕಾರ್ಮಿಕರು. ಈಗಿರುವ ಕಾರ್ಮಿಕ ಕಾನೂನುಗಳ ಇಂತಹ ಉಲ್ಲಂಘನೆಗಳು ಬಹುರಾಷ್ಟ್ರೀಯ ಕಂಪನಿಗಳ ಒಡೆತನದ ಉದ್ದಿಮೆಗಳಲ್ಲಿ ಸಾಮಾನ್ಯ ಸಂಗತಿ. ಹೊಸ ಕಾನೂನು ಸಂಹಿತೆಗಳು ಜಾರಿಗೆ ಬಂದಾಗ, ಅದು ಕಾರ್ಮಿಕರ ಹಕ್ಕುಗಳ ಉಲ್ಲಂಘನೆಗೆ ಒಂದು ಬಹಿರಂಗ ಆಹ್ವಾನವೇ ಅಗುತ್ತದೆ ಎಂದು ಪೊಲಿಟ್‌ಬ್ಯುರೊ ಹೇಳಿದೆ.

ಸ್ವತಃ ಆಪಲ್ ಕಾರ್ಪೊರೇಷನ್ನೇ ತನ್ನ ಪೂರೈಕೆ ಕಂಪನಿ ವಿಧಿ-ವಿಧಾನಗಳನ್ನು ಉಲ್ಲಂಘಿಸಿದೆ ಎಂದು ಕಂಡಿರುವಾಗ ಕರ್ನಾಟಕದ ಮುಖ್ಯಮಂತ್ರಿಗಳು ಕಾರ್ಮಿಕರನ್ನು ಖಂಡಿಸಿರುವುದು ಮತ್ತು ಕಂಪನಿಯನ್ನು ಬೆಂಬಲಿಸಿರುವುದು ವಿಚಿತ್ರವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಕಾರ್ಮಿಕರ ವ್ಯಾಪಕ ಬಂಧನಗಳು ಮತ್ತು ಪೊಲಿಸ್ ದಮನವನ್ನು ಖಂಡಿಸಿದೆ. ಮೋದಿ ಸರಕಾರ ದೇಶದೊಳಕ್ಕೆ ಎಫ್‌ಡಿಐನ್ನು ಆಕರ್ಷಿಸುವ ಆತುರದಲ್ಲಿ ಒಂದು ಕಾರ್ಮಿಕ-ವಿರೋಧಿ ನಿಲುವನ್ನು ತಳೆಯುವುದನ್ನು ನಿಲ್ಲಿಸಬೇಕು ಎಂದು ಹೇಳಿದೆ.

ಮುಂದಿನ ಕೇಂದ್ರ ಸಮಿತಿ ಸಭೆ

ಸಿಪಿಐ(ಎಂ) ಪಕ್ಷದ ಕೇಂದ್ರ ಸಮಿತಿಯ ಮುಂದಿನ ಸಭೆಯನ್ನು ಜನವರಿ 30-31ರಂದು ಕರೆಯಲು ಪೊಲಿಟ್‌ಬ್ಯುರೊ ನಿರ್ಧರಿಸಿದೆ.

ಪೊಲಿಟ್‌ಬ್ಯುರೊ ಕರೆಗಳು

ಪೊಲಿಟ್‌ಬ್ಯುರೊ ಎಲ್ಲ ಪಕ್ಷದ ಘಟಕಗಳಿಗೆ ಈ ಕರೆಗಳನ್ನು ಕೊಟ್ಟಿದೆ:

ಕೃಷಿ ಕಾಯ್ದೆಗಳನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟಗಳೊಂದಿಗೆ ಸೌಹಾರ್ದ ಕಾರ್ಯಾಚರಣೆಗಳನ್ನು ಸಂಘಟಿಸಬೇಕು;

ಕಾರ್ಮಿಕ ವರ್ಗ ವ್ಯಾಪಕ ಪ್ರಮಾಣದ ಖಾಸಗೀಕರಣ, ಕಾರ್ಮಿಕ ಕಾನೂನುಗಳ ರದ್ಧತಿ ಮತ್ತು ಭಾರತದ ರಾಷ್ಟ್ರೀ ಆಸ್ತಿಗಳ ಲೂಟಿಯ ವಿರುದ್ದ ನಡೆಸುತ್ತಿರುವ ಕಾರ್ಯಾಚರಣೆಗಳನ್ನು ಬೆಂಬಲಿಸಬೇಕು;

ದೇಶದಲ್ಲಿ ಈಗ ನಡೆಯುತ್ತಿರುವ ಜನಗಳ ಹೋರಾಟಗಳ ಬಗ್ಗೆ ಕೇಂದ್ರ ಸರಕಾರ ಸುಳ್ಳುಮಾಹಿತಿಗಳ ಅಬ್ಬರವನ್ನೇ ಹರಿಯಬಿಟ್ಟಿರುವುದರ ವಿರುದ್ಧ ಒಂದು ತೀವ್ರವಾದ ಪ್ರಚಾರಪ್ರಕ್ಷೋಭೆ ನಡೆಸಬೇಕು.

Leave a Reply

Your email address will not be published. Required fields are marked *