ಕೇರಳ ಚುನಾವಣೆಗಳಲ್ಲಿ ಅಪವಿತ್ರ ತ್ರಿವಳಿ ಕೂಟ

KaratA copy
ಪ್ರಕಾಶ್ ಕಾರಟ್

ಬಿಜೆಪಿ, ಕಾಂಗ್ರೆಸ್ ಮತ್ತು ಕೇಂದ್ರೀಯ ಸಂಸ್ಥೆಗಳು ತಾಳಮೇಳದೊಂದಿಗೆ ಎಲ್‌ಡಿಎಫ್ ಸರ್ಕಾರದ ವಿರುದ್ಧ ಒಟ್ಟಾಗಿ ಎತ್ತಿದ್ದ ಮೊದಲ ಹಂತದ ಕಳ್ಳಸಾಗಣೆ ಮತ್ತು ಭ್ರಷ್ಟಾಚಾರ ಆರೋಪಗಳನ್ನು ಕೇರಳದ ಜನರು ನಿರ್ಣಾಯಕವಾಗಿ ತಿರಸ್ಕರಿಸಿದ್ದಾರೆ. ಆ ಚುನಾವಣೆಗಳಲ್ಲಿ ಎಲ್‌ಡಿಎಫ್ ಭಾರಿ ಜಯಭೇರಿ ಬಾರಿಸಿತ್ತು. ಇದೀಗ ಮತ್ತೆ ವಿಧಾನಸಭೆ ಚುನಾವಣೆಗಳಲ್ಲಿ ಈ ಅಪವಿತ್ರ ತ್ರಿವಳಿ ಕೂಟಕ್ಕೆ ಮರೆಯಲಾರಂತಹ  ಪಾಠ ಕಲಿಸಲಿದ್ದಾರೆ.

ಕೇರಳ ವಿಧಾನಸಭೆ ಚುನಾವಣೆಯಲ್ಲಿ ಮೂರು ಮೈತ್ರಿಕೂಟಗಳು ಕಣದಲ್ಲಿವೆ: ಸಿಪಿಐ (ಎಂ) ನೇತೃತ್ವದ ಎಲ್‌ಡಿಎಫ್, ಕಾಂಗ್ರೆಸ್ ನೇತೃತ್ವದ ಯುಡಿಎಫ್, ಮತ್ತು ಬಿಜೆಪಿ ನಾಯಕತ್ವದ ಎನ್‌ಡಿಎ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಎಲ್‌ಡಿಎಫ್ ಸರ್ಕಾರದ ಮೇಲೆ ಇಲ್ಲಸಲ್ಲದ ಸುಳ್ಳು ಆರೋಪಗಳನ್ನು ಹೊರಿಸಿ ಗುರಿ ಮಾಡುತ್ತಿವೆ. ಕಳೆದ ವರ್ಷ ಜುಲೈನಲ್ಲಿ ಚಿನ್ನ ಕಳ್ಳ ಸಾಗಣೆ ಪ್ರಕರಣದೊಂದಿಗೆ ಈ ಅಪಪ್ರಚಾರ ಅಭಿಯಾನ ಆರಂಭವಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿಯಲ್ಲದೆ ಇನ್ನೂ ಒಂದು ಕೂಟ ಕೇರಳದ ಚುನಾವಣಾ ಕಣದಲ್ಲಿ ಪ್ರತ್ಯಕ್ಷವಾಗಿದೆ!. ಅದುವೇ ಜಾರಿ ನಿರ್ದೇಶನಾಲಯ (ಇ.ಡಿ.), ಸಿಬಿಐ, ಕಸ್ಟಮ್ಸ್ ಇಲಾಖೆ ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ). ಕೇಂದ್ರ ಸರ್ಕಾರದ ಈ ಸಂಸ್ಥೆಗಳ ಹಸ್ತಕ್ಷೇಪ ಅಭೂತಪೂರ್ವ ರೀತಿಯಲ್ಲಿ ಹೆಚ್ಚುತ್ತಿದೆ. ಎಲ್ಲ ಕಾನೂನು ಹಾಗೂ ಸಾಂಸ್ಥಿಕ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆ. ಒಕ್ಕೂಟ ತತ್ವದ ಮೂಲಭೂತ ನಿಯಮಗಳನ್ನೇ ಹೊಸಕಿ ಹಾಕಲಾಗುತ್ತಿದೆ. ಹಿಂದೆ ರಾಜ್ಯ ವಿಧಾನಸಭೆಯ ಯಾವುದೇ ಚುನಾವಣೆಗಳ ಸಂದರ್ಭದಲ್ಲಿ ಈ ರೀತಿ ಆಗಿರಲಿಲ್ಲ.

ವಿಭಿನ್ನ ಮಾದರಿ ‘ಎನ್‌ಕೌಂಟರ್ ಸ್ಪೆಷಲಿಸ್ಟ್’

ಬಿಜೆಪಿ ಹಿಂದೆಲ್ಲ ಪ್ರತಿಪಕ್ಷಗಳನ್ನು ಹಣಿಯಲು ಇ.ಡಿ., ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆಗಳನ್ನು (ಐಟಿ) ಬಳಸಿಕೊಂಡಿದ್ದಿದೆ. ಅಮಿತ್ ಷಾ, ಕೇಂದ್ರದ ಗೃಹ ಸಚಿವರಾದ ನಂತರ ಬೇರೆಯೇ ರೀತಿಯ ‘ಎನ್‌ಕೌಂಟರ್ ಸ್ಪೆಷಲಿಸ್ಟ್’ ಆಗಿ ಹೊರಹೊಮ್ಮಿದ್ದಾರೆ.  ಹಿಂದೆ ಯಾವುದೇ ಚುನಾವಣೆಗಳಿಗೆ ಮುಂಚೆ, ಉನ್ನತ ರಾಜಕೀಯ ಪ್ರತಿಸ್ಪರ್ಧಿಗಳನ್ನು ಕೇಂದ್ರೀಯ ಸಂಸ್ಥೆಗಳು ‘ಎನ್‌ಕೌಂಟರ್’ ಮಾಡುತ್ತಿದ್ದವು. ಮಹಾರಾಷ್ಟç ಚುನಾವಣೆಗೆ ಮುನ್ನ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಜೊತೆ ನಡೆದದ್ದೂ ಇದೇ. ಪ್ರಶ್ನಿಸಲೆಂದು ಇ.ಡಿ. ಅವರನ್ನು ಕರೆಸಿಕೊಂಡಿತ್ತು.

ಆದರೆ, ಕೇರಳದಲ್ಲಿ  ಕೇಂದ್ರೀಯ ಸಂಸ್ಥೆಗಳ ಮಧ್ಯಪ್ರವೇಶ ಬೇರೆಯೇ ರೀತಿಯಲ್ಲಾಗುತ್ತಿದೆ. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಎಲ್‌ಡಿಎಫ್ ಸರ್ಕಾರದ ಸಚಿವರನ್ನು ಗುರಿ ಮಾಡಲಾಗುತ್ತಿದೆ. ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ (ಕೆಐಐಎಫ್‌ಬಿ) ಮುಂತಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಸರ್ಕಾರಿ ಕಾರ್ಯಕ್ರಮ ಹಾಗೂ ಮಿಷನ್‌ಗಳನ್ನು ಕೂಡ ಕೇಂದ್ರ ಗುರಿ ಮಾಡುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಎಲ್‌ಡಿಎಫ್ ಸರ್ಕಾರ ಹಾಗೂ ರಾಜಕೀಯ ನಾಯಕತ್ವಕ್ಕೆ ಕೆಟ್ಟ ಹೆಸರು ತರುವ ಲೆಕ್ಕಾಚಾರದಿಂದ ಈ ರೀತಿ ಮಾಡಲಾಗುತ್ತಿದೆ.

ಬೆಟ್ಟ ಅಗೆದರೂ …..

ಚಿನ್ನ ಕಳ್ಳಸಾಗಣೆ ಪ್ರಕರಣದ ತನಿಖೆ ವೇಳೆ ಎನ್‌ಐಎ, ಇ.ಡಿ. ಮತ್ತು ಕಸ್ಟಮ್ಸ್ ಇಲಾಖೆಗಳು ವಿವಿಧ ಮಂತ್ರಿಗಳು ಮತ್ತು ನಾಯಕರನ್ನು ಸಿಕ್ಕಿಸಿ ಹಾಕುವ ಉದ್ದೇಶದಿಂದಲೇ ವಿವರಗಳನ್ನು ಕೆದಕುವ ಕೆಲಸದಲ್ಲಿ ತೊಡಗಿದ್ದವು. ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಕೆ.ಟಿ. ಜಲೀಲ್‌ರನ್ನು ಇ.ಡಿ. ತನಿಖೆಗೆ ಒಳಪಡಿಸಿತು. ಚಿನ್ನ ಬಂದ ದಿನಾಂಕಗಳು ಹಾಗೂ ರಮ್ಜಾನ್ ವೇಳೆ ವಿತರಿಸಲು ಯುಎಇ ಕಾನ್ಸುಲೇಟ್‌ನಿಂದ ಪಡೆದ ಕುರಾನ್ ಪ್ರತಿಗಳ ಬಗ್ಗೆ ಅದು ಪ್ರಶ್ನಿಸಿತು. ಕೇಂದ್ರ ಸಂಸ್ಥೆಗಳು ಬೇಕಂತಲೇ ಸೋರಿಕೆ ಮಾಡಿದ ತಪ್ಪು ಮಾಹಿತಿಗಳ ಆಧಾರದಲ್ಲಿ, ಮಂತ್ರಿಯ ರಾಜಿನಾಮೆಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬೀದಿಗಿಳಿದವು.

ಆರು ತಿಂಗಳ ತನಿಖೆ ನಡೆಸಿದ ಎನ್‌ಐಎ, ೨೦ ಜನರ ವಿರುದ್ಧ ಚಾರ್ಜ್ಷೀಟ್ ಸಲ್ಲಿಸಿತು. ರಾಜ್ಯಸರ್ಕಾರದ ಮಾಜಿ ಪ್ರಮುಖ ಕಾರ್ಯದರ್ಶಿ ಶಿವಶಂಕರ್ ಅಥವಾ ಇನ್ನಾವುದೇ ರಾಜಕೀಯ ಕಾರ್ಯಕರ್ತರ ವಿರುದ್ಧ ಅದು ದೋಷಾರೋಪ ಮಾಡಲಿಲ್ಲ. ನವೆಂಬರ್‌ನಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳ ವೇಳೆ ಕಾಂಗ್ರೆಸ್ ಮತ್ತು ಬಿಜೆಪಿಗೆ ನೆರವಾಗುವ ಏಕೈಕ ದುರುದ್ದೇಶದಿಂದ ಚಿನ್ನ ಕಳ್ಳ ಸಾಗಣೆ ಪ್ರಕರಣವನ್ನು ಬಳಸಿಕೊಳ್ಳಲಾಯಿತು.

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಎಲ್‌ಡಿಎಫ್ ಸರ್ಕಾರವನ್ನು ಸಿಲುಕಿಸಲು ಏನೂ ಸಿಗದೆ ಹತಾಶವಾದ ಸಿಬಿಐ ಮತ್ತು ಇ.ಡಿ., ಲೈಫ್ ಮಿಷನ್‌ನಂಥ ರಾಜ್ಯ ಸರ್ಕಾರದ ಹಲವು ಯೋಜನೆಗಳ ಮೇಲೆ ಕಣ್ಣು ಹಾಕಿದವು. ಕಾಂಗ್ರೆಸ್ ಶಾಸಕರೊಬ್ಬರು ನೀಡಿದ ದೂರಿನ ಆಧಾರದಲ್ಲಿ ಸಿಬಿಐ ಮಧ್ಯಪ್ರವೇಶಿಸಿ ಲೈಫ್ ಮಿಷನ್ ಅಧಿಕಾರಿಗಳ ಮೇಲೆ ಮುಗಿ ಬಿದ್ದಿತು. ಲೈಫ್ ಮಿಷನ್ ಎಲ್‌ಡಿಎಫ್ ಸರ್ಕಾರದ ಒಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು ಅದರಡಿ ಎರಡುವರೆ ಲಕ್ಷ ಬಡವರಿಗೆ ಮನೆಗಳನ್ನು ಒದಗಿಸಲಾಗಿದೆ. ಬಡ ಜನರಿಗೆ ಇಂಟರ್‌ನೆಟ್ ಸಂಪರ್ಕ ಕಲ್ಪಿಸುವ ಕೆ-ಫಾನ್ ಮುಂತಾದ ಯೋಜನೆಗಳ ಹಾಗೂ ಇಲೆಕ್ಟಿçಕ್ ವಾಹನ ನೀತಿಯ ದಾಖಲೆಪತ್ರಗಳನ್ನು ಸಲ್ಲಿಸುವಂತೆ ಇ.ಡಿ. ಆಗ್ರಹಿಸಿತ್ತು.  ಸರ್ಕಾರದಲ್ಲಿ ಏನಾದರೂ ಲೋಪ ಪತ್ತೆ ಹಚ್ಚುವುದು ಈ ಎಲ್ಲ ತನಿಖಾ ಸುತ್ತಾಟಗಳ ಉದ್ದೇಶವಾಗಿತ್ತು.

ಹಣಕಾಸು ಸಚಿವೆಯ ಅಪಪ್ರಲಾಪ

ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ರ‍್ಯಾಲಿಯೊಂದರಲ್ಲಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೆಐಐಎಫ್‌ಬಿ ಮತ್ತು ರಾಜ್ಯ ಬಜೆಟ್ ವಿರುದ್ಧ  ಇಲ್ಲಸಲ್ಲದ ಆರೋಪ ಮಾಡಿದ್ದಾರೆ. ಹಣಕಾಸು ಸಚಿವಾಲಯದಡಿ ಕಾರ್ಯ ನಿರ್ವಹಿಸುವ ಇ.ಡಿ. ಅಧಿಕಾರಿಗಳು, ವಿದೇಶ ವಿನಿಮಯ ನಿರ್ವಹಣೆ ಕಾನೂನು (ಫೆಮಾ) ಅಡಿ ಕೇಸ್  ದಾಖಲಿಸಿ ಕೆಐಐಎಫ್‌ಬಿ ಅಧಿಕಾರಿಗಳನ್ನು ವಿಚಾರಣೆಗೆ ಕರೆ ಕಳಿಸಿದರು. ಕೆಐಐಎಫ್‌ಬಿ ಮೂಲಸೌಕರ್ಯ ಯೋಜನೆಗಳಿಗೆ ಬಂಡವಾಳ ಕ್ರೋಡೀಕರಿಸಿ ವೆಚ್ಚ ಮಾಡುವ ಒಂದು ಸರ್ಕಾರಿ ಸಂಸ್ಥೆಯಾಗಿದೆ. ಅದು 20 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದಲ್ಲಿ ಹೆದ್ದಾರಿ, ಶಾಲಾ ಕಟ್ಟಡ, ಆಸ್ಪತ್ರೆ ಕಟ್ಟಡ ನಿರ್ಮಾಣ ಮತ್ತಿತರ ಕಾರ್ಯಗಳನ್ನು ಅನುಷ್ಠಾನಗೊಳಿಸಿದೆ. ಇದು ಕೇರಳದಲ್ಲಿ ಅಗಾಧ ಸಾಮಾಜಿಕ ಮತ್ತು ಆರ್ಥಿಕ ಪರಿವರ್ತನೆ ತಂದಿದೆ. ತಲೆಬುಡವಿಲ್ಲದ ಆಪಾದನೆ ಮಾಡುವ ಮೂಲಕ ಈ ಪ್ರಕ್ರಿಯೆಯನ್ನು ಬುಡಮೇಲು ಮಾಡುವುದು ಇ.ಡಿ. ಕ್ರಮದ ಉದ್ದೇಶವಾಗಿದೆ.

ಹೊಚ್ಚಹೊಸ  ದಾಳಿ ಕಸ್ಟಮ್ಸ್ ಇಲಾಖೆ ಈಚೆಗೆ ಕೇರಳ ಹೈಕೋರ್ಟ್ಗೆ ಒಂದು ಅಫಿಡವಿಟ್ ಸಲ್ಲಿಸುವುದರೊಂದಿಗೆ  ಬಂದಿದೆ. ಚಿನ್ನ ಕಳ್ಳಸಾಗಾಟದ ಆರೋಪಿಗಳಲ್ಲಿ ಒಬ್ಬರಾದ ಸ್ವಪ್ನಾ ಸುರೇಶ್ ಅವರ ಗೌಪ್ಯ ಹೇಳಿಕೆಯೊಂದನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ, ವಿಧಾನ ಸಭಾದ್ಯಕ್ಷರು, ಮತ್ತು ಇತರ ಮೂವರು ಸಚಿವರು ಡಾಲರ್ ಕಳ್ಳಸಾಗಣೆ  ಕೇಸ್‌ನಲ್ಲಿ ಒಳಗೊಂಡಿದ್ದಾರೆಂದು ಆಕೆ ಹೇಳಿದ್ದಾರೆಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ. ಕಸ್ಟಮ್ಸ್   ಸಲ್ಲಿಸಿದ ಅಫಿಡವಿಟ್, ಏನೇನೂ ಸಂಬಧವಿಲ್ಲದ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆ. ಅದು ಸ್ವಪ್ನಾ ಸುರೇಶ್‌ಗೆ ನ್ಯಾಯಾಂಗ ಕಸ್ಟಡಿಯಲ್ಲಿ ಒದಗಿಸಿದ ಭದ್ರತೆಯನ್ನು ಕುರಿತಂತೆ ಕೆಳಗಣ ನ್ಯಾಯಾಲಯವೊಂದರ ಕೆಲವು ಟಿಪ್ಪಣಿಗಳ  ವಿರುದ್ಧ ಜೈಲುಗಳ ಮಹಾನಿರ್ದೇಶಕರು ಹೈಕೋರ್ಟಿಗೆ ಸಲ್ಲಿಸಿದ ಅಪೀಲಿಗೆ ಸಂಬಂಧಪಟ್ಟದ್ದು. ಮುಖ್ಯಮಂತ್ರಿ ಹಾಗೂ ಇತರರನ್ನು ಕುರಿತಂತ ದಾವೆಗಳನ್ನು  ಪುಷ್ಟೀಕರಿಸುವ ಯಾವುದೇ ಸಾಕ್ಷ್ಯ ಸಿಕ್ಕಿಲ್ಲವೆಂದು ಒಪ್ಪಿಕೊಂಡರೂ ಕಸ್ಟಮ್ಸ್ನವರ  ಈ ಅಫಿಡವಿಟ್ ಮುಖ್ಯಮಂತ್ರಿಗಳು ಮತ್ತು ಇತರ ಸರಕಾರೀ ನಿರ್ವಾಹಕರನ್ನು  ಸಿಲುಕಿಸಲು ದಾರಿ ಬಿಟ್ಟು ಹೋಗಿದೆ.

ಒತ್ತಡಕ್ಕೆ ಪುರಾವೆ

ಇಂಥ ಹೇಳಿಕೆ ನೀಡಲು ಸ್ವಪ್ನಾ ಸುರೇಶ್ ಮೇಲೆ ಒತ್ತಡ ಹಾಕಲಾಯಿತು ಎನ್ನುವುದಕ್ಕೆ ಸಾಕಷ್ಟು ಪುರಾವೆಯಿದೆ. ವಿದೇಶದಲ್ಲಿನ ಹಣಕಾಸು ವ್ಯವಹಾರಗಳಲ್ಲಿ ಮುಖ್ಯಮಂತ್ರಿಗಳ ಹೆಸರನ್ನು ಸಿಲುಕಿಸಲು ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂದು ಆಕೆ ಹೇಳಿರುವ ದನಿ ರೆಕಾರ್ಡಿಂಗ್ ಕಳೆದ ವರ್ಷ ನವೆಂಬರ್ 18ರಂದು ಬಹಿರಂಗಕ್ಕೆ ಬಂದಿತ್ತು. ಇ.ಡಿ.ಯ ಸಹಾಯಕ ನಿರ್ದೇಶಕರೊಬ್ಬರು ಒತ್ತಡ ಹೇರಿದ್ದನ್ನು ವಿಚಾರಣೆ ವೇಳೆ ಹಾಜರಿದ್ದ ಒಬ್ಬ ಮಹಿಳಾ ಪೊಲೀಸ್ ಕಾನ್‌ಸ್ಟೇಬಲ್ ದೃಢಪಡಿಸಿದ್ದಾರೆ.

ಕೇಂದ್ರೀಯ ಸಂಸ್ಥೆಗಳು ಇಂಥ ಕೊಳಕು ತಂತ್ರಗಳನ್ನು ಕೈಗೊಳ್ಳುವುದು ಮೇಲಿನವರಿಂದ ಸೂಚನೆ ಇಲ್ಲದೆ   ಸಾಧ್ಯವೇ ಇಲ್ಲ. ಅನುಷ್ಠಾನ ನಿರ್ದೇಶನಾಲಯವು (ಇ.ಡಿ.) ರಾಜಕೀಯ ವಿರೋಧಿಗಳನ್ನು ಹಣಿಯಲು ಬಿಜೆಪಿ ಸರ್ಕಾರದ ಬಳಿಯಿರುವ ದಾಳಿ ಸಾಧನವಾಗಿದೆ. ಬಹುತೇಕ ಎಲ್ಲ ಪ್ರತಿಪಕ್ಷಗಳ ನಾಯಕರೂ ಇ.ಡಿ. ವಿಚಾರಣೆಗೆ ಅಥವ ಆರೋಪಗಳಿಗೆ ಒಳಪಟ್ಟಿದ್ದಾರೆ. ಅಖಿಲೇಶ್ ಯಾದವ್ (ಸಮಾಜವಾದಿ ಪಕ್ಷ), ಭೂಪಿಂದರ್ ಹೂಡಾ ಮತ್ತು ಡಿ.ಕೆ. ಶಿವಕುಮಾರ್ (ಕಾಂಗ್ರೆಸ್), ಫರೂಕ್ ಅಬ್ದುಲ್ಲಾ (ನ್ಯಾಷನಲ್ ಕಾನ್ಫರೆನ್ಸ್), ಮೆಹಬೂಬಾ ಮುಫ್ತಿ (ಪಿಡಿಪಿ), ತೇಜಸ್ವಿ ಯಾದವ್, ಮೀಸಾ ಭಾರತಿ (ಆರ್‌ಜೆಡಿ) … ಹೀಗೆ ಈ ಪಟ್ಟಿ ದೊಡ್ಡದಿದೆ. ಟಿಎಂಸಿಯ ಮುಕುಲ್ ರಾಯ್ ಮತ್ತು ಕಾಂಗ್ರೆಸ್‌ನ ಹಿಮಂತ ಬಿಶ್ವ ಶರ್ಮಾ ಕೂಡ ಇದೇ ರೀತಿಯ ಕಿರುಕುಳಕ್ಕೆ ಒಳಪಟ್ಟಿದ್ದರು. ಆದರೆ ಅವರು ಬಿಜೆಪಿ ಸೇರಿ ಮುಂದಿನ ಕ್ರಮದಿಂದ ತಪ್ಪಿಸಿ ಕೊಂಡರು.

ರಾಹುಲ್ ಗಾಂಧಿ ಅಂಡ್ ಕಂಪೆನಿ

ಎಲ್‌ಡಿಎಫ್ ಸರ್ಕಾರದ ವಿರುದ್ಧ ಶೀಘ್ರ ತನಿಖೆ ನಡೆಯಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕೆಂದು ಕಾಂಗ್ರೆಸ್ ಪಕ್ಷ ದೊಡ್ಡ ದನಿಯಲ್ಲಿ ಆಗ್ರಹಿಸುತ್ತ ಬಂದಿದೆ. ರಾಹುಲ್ ಗಾಂಧಿ ಕೂಡ ಅದಕ್ಕೆ ದನಿಗೂಡಿಸಿದ್ದರು. ಹಾಗೆ ಮಾಡುವ ಮೂಲಕ ರಾಹುಲ್ ಗಾಂಧಿ ಅಂಡ್ ಕಂಪೆನಿ, ಬಿಜೆಪಿಯ ಆಟಕ್ಕೆ ಬಲಿಯಾಗಿದ್ದಾರೆ. ಮಾತ್ರವಲ್ಲದೆ ಇತರ ರಾಜ್ಯಗಳಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಇ.ಡಿ. ಹೂಡಿರುವ ಹೂಟಕ್ಕೆ ಕಾನೂನು ಸಮ್ಮತತೆ ತಂದುಕೊಟ್ಟಿದ್ದಾರೆ.

ಇ.ಡಿ.ಯು ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯಡಿ ಕಾರ್ಯನಿರ್ವಹಿಸುವ ಸಂಸ್ಥೆ. ಅದು ಹೆಚ್ಚೆಚ್ಚಾಗಿ ಯಾವುದೇ ಕಾನೂನಿನ ಗಡಿಯಿಲ್ಲದ ರೀತಿ ಲಂಗುಲಗಾಮಿಲ್ಲದೆ ಕಾರ್ಯಾಚರಿಸುತ್ತಿದೆ. ಅದಕ್ಕೆ ಯಾವುದೇ ಶಾಸನಾತ್ಮಕ ಕಾನೂನಿನ ಬೆಂಬಲವೂ ಇಲ್ಲ. ಆದರೂ ದಾಳಿಗಳನ್ನು ನಡೆಸುವುದು, ಶೋಧ ಮಾಡುವುದು, ಬಂಧನ ಮತ್ತು ಆಸ್ತಿಪಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದೇ ಮೊದಲಾದ ಅಧಿಕಾರ ಚಲಾಯಿಸುತ್ತದೆ. ಹಣದ ಮಡಿ ತಡೆ ಕಾನೂನು (ಪಿಎಂಎಲ್‌ಎ) ಮತ್ತು ಫೆಮಾ ಅಡಿಯಲ್ಲಿನ ಕೇಸ್‌ಗಳ ತನಿಖೆ ಹೆಸರಲ್ಲಿ ಇವೆಲ್ಲವನ್ನೂ ಇ.ಡಿ. ಮಾಡುತ್ತದೆ.

ಇ.ಡಿ.ಯ ಹಾಲಿ ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ, ಆದಾಯ ತೆರಿಗೆ ಇಲಾಖೆಯ ಒಬ್ಬ ಮಾಜಿ ಆಯುಕ್ತರು. ಇ.ಡಿ. ನಿರ್ದೇಶಕರ ಅಧಿಕಾರ ಅವಧಿ ಎರಡು ವರ್ಷಕ್ಕೆ ನಿಗದಿಯಾಗಿರುತ್ತದೆ. ಆದರೆ ಮಿಶ್ರಾಗೆ 2020 ನವೆಂಬರ್‌ನಿಂದ ಒಂದು ವರ್ಷದ ವಿಸ್ತರಣೆ ನೀಡಲಾಗಿದೆ. ಇದರಿಂದಾಗಿ ತನ್ನ ಬಾಸ್‌ಗಳ ಆಶಯಗಳನ್ನು  ಈಡೇರಿಸಲು ಅವರು ಬದ್ಧರಾಗಿದ್ದಾರೆ.  ಇ.ಡಿ. ಗೆ ಒಂದು ಕಾನೂನು ಸನ್ನದ್ದು ಅಗತ್ಯ, ಈ ಮೂಲಕ ಅದು ಸೂಕ್ತ ವಿಧಿ-ವಿಧಾನಗಳನ್ನು ಅನುಸರಿಸುವಂತೆ ಮತ್ತು ತನ್ನ ಕ್ರಿಯೆಗಳಿಗೆ ಉತ್ತರದಾಯಿಯಾಗುವಂತೆ ಮಾಡಬೇಕಾಗಿದೆ ಎನ್ನುವುದನ್ನು ಕೇರಳದ ಅನುಭವವಗಳು ತೋರಿಸಿಕೊಟ್ಟಿವೆ.

ಬಿಜೆಪಿ, ಕಾಂಗ್ರೆಸ್ ಮತ್ತು ಕೇಂದ್ರೀಯ ಸಂಸ್ಥೆಗಳು ತಾಳಮೇಳದೊಂದಿಗೆ ಎಲ್‌ಡಿಎಫ್ ಸರ್ಕಾರದ ವಿರುದ್ಧ ಒಟ್ಟಾಗಿ ಎತ್ತಿದ್ದ ಮೊದಲ ಹಂತದ ಕಳ್ಳಸಾಗಣೆ ಮತ್ತು ಭ್ರಷ್ಟಾಚಾರ ಆರೋಪಗಳನ್ನು ಕೇರಳದ ಜನರು ನಿರ್ಣಾಯಕವಾಗಿ ತಿರಸ್ಕರಿಸಿದ್ದಾರೆ. ಆ ಚುನಾವಣೆಗಳಲ್ಲಿ ಎಲ್‌ಡಿಎಫ್ ಭಾರಿ ಜಯಭೇರಿ ಬಾರಿಸಿತ್ತು. ಇದೀಗ ಮತ್ತೆ ವಿಧಾನಸಭೆ ಚುನಾವಣೆಗಳಲ್ಲಿ ಈ ಅಪವಿತ್ರ ತ್ರಿವಳಿ ಕೂಟಕ್ಕೆ ಮರೆಯಲಾರಂತಹ ಪಾಠ ಕಲಿಸಲಿದ್ದಾರೆ.

ಅನು: ವಿಶ್ವ

Leave a Reply

Your email address will not be published. Required fields are marked *