ಕೃಷಿ ಕಾರ್ಮಿಕರ ಮತ್ತು ನರೇಗಾ ಕೆಲಸಗಾರರ ಕನಿಷ್ಠ ವೇತನದಲ್ಲಿ ಯಾಕೆ ಈ ವ್ಯತ್ಯಾಸ?

ಕೃಷಿ ಸಂಬಂಧಿತ ಕೆಲಸಗಳಲ್ಲಿ ತೊಡಗುವ ಕೃಷಿ ಕಾರ್ಮಿಕರ ಕನಿಷ್ಠ ವೇತನವನ್ನು ಪರಿಷ್ಕರಿಸಿ ಒಂದು ವರ್ಷದ ಹಿಂದೆಯೇ ಅಂದರೆ 01-04-2020 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ನೋಟಿಫಿಕೇಷನ್ ನಂ.ಕೆಎಇ228ಎಲ್‌ಡಬ್ಲೂಎ 2018 ದಿನಾಂಕ 11-12-2019. ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಪ್ರಕಟಿಸಿದ ಈ ಪರಿಷ್ಕೃತ ಕನಿಷ್ಠ ವೇತನದಿಂದಾಗಿ ಹೊಲ, ಗದ್ದೆ, ತೋಟಗಳಲ್ಲಿ ಭೂಮಿಯನ್ನು ಉಳುವ, ಸಮ ಮಾಡುವ, ಮಡಿಗಳನ್ನು ನಿರ್ಮಾಣ ಮಾಡುವ, ಬಿತ್ತುವ, ನಾಟಿ ಮಾಡುವ, ಕಳೆ ಕೀಳುವ, ಗೊಬ್ಬರ ಹಾಕುವ, ಕ್ರಿಮಿನಾಶಕ ಸಿಂಪಡಿಸುವ, ಕಟಾವ್ ಮಾಡುವ, ಕಾಳು ಬೇರ್ಪಡಿಸುವುದು, ಹತ್ತಿ, ತೆಂಗು, ಅಡಿಕೆ ಮೊದಲಾದವುಗಳನ್ನು ಕೀಳುವುದು, ಸಾಗಾಟ ಮಾಡುವುದು ಮುಂತಾದ ಕೃಷಿ ಸಂಬಂಧಿತ ಕೆಲಸಗಳಿಗೆ 8 ಗಂಟೆಗಳ ಕೆಲಸಕ್ಕೆ 01-04-2020 ರಿಂದ ತುಟ್ಟಿಭತ್ತೆ ಒಳಗೊಂಡ ರೂ.424.80 ಕನಿಷ್ಠ ದಿನಗೂಲಿ ಸಿಗಲಿದೆ. ಈ ಪರಿಷ್ಕೃತ ಕನಿಷ್ಠ ವೇತನ 01-04-2020 ರಿಂದಲೇ ಜಾರಿಯಾಗಿದ್ದು 01-04-2021 ರಿಂದ ಇನ್ನೊಂದು ಸುತ್ತಿನ ಪರಿಷ್ಕೃತ ತುಟ್ಟಿಭತ್ತೆ ಜಾರಿಗೆ ಬರಲಿದೆ.

ಇದೇ ಸಮಯದಲ್ಲಿ ಕೇಂದ್ರ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅಡಿಯಲ್ಲಿ ಕೆಲಸ ಮಾಡುತ್ತಿರುವ ನರೇಗಾ ಕೆಲಸಗಾರರ ಕನಿಷ್ಠ ವೇತನವನ್ನು ಪರಿಷ್ಕರಿಸಿದೆ. 15-03-2021 ರಂದು ಗ್ರಾಮೀಣಾಭಿವೃದ್ಧಿ ಕೇಂದ್ರ ಮಂತ್ರಾಲಯವು ಹೊರಡಿಸಿರುವ ಈ ಆದೇಶದ ಪ್ರಕಾರ 01-04-2021 ರಿಂದ ನರೇಗಾ ಕೆಲಸಗಾರರ ಕನಿಷ್ಠ ದಿನಗೂಲಿ ಕರ್ನಾಟಕದಲ್ಲಿ ಕೇವಲ ರೂ.289 ಆಗಲಿದೆ.

ಕರ್ನಾಟಕ ಸರ್ಕಾರ ಕೃಷಿ ಕಾರ್ಮಿಕರಿಗೆ ಪರಿಷ್ಕರಿಸಿದ ರೂ.424.80 ಕನಿಷ್ಠ ದಿನಗೂಲಿಗೂ ಕೇಂದ್ರ ಸರ್ಕಾರ ನರೇಗಾ ಕಾರ್ಮಿಕರಿಗೆ ಪರಿಷ್ಕರಿಸಿದ ರೂ. 289 ಕನಿಷ್ಠ ದಿನಗೂಲಿಗೂ ಗಣನೀಯ ವ್ಯತ್ಯಾಸವಿದೆ. ಇದರಿಂದ ನರೇಗಾ ಕಾರ್ಮಿಕರಿಗೆ ಸರ್ಕಾರ ಅನ್ಯಾಯ ಮಾಡಿದಂತಾಗಿದೆ. ಅಕುಶಲ ಕೆಲಸದಲ್ಲಿ ಕಾರ್ಮಿಕ ಎರಡು ಗುಂಪುಗಳ ಕೂಲಿಯ ವಿಷಯದಲ್ಲಿ ತಾರತಮ್ಯ ಮಾಡುವುದು ಕಾನೂನು ಬಾಹಿರವಾಗಿದೆ.

ನರೇಗಾ ಪ್ರಾರಂಭವಾದಾಗ ಈ ತಾರತಮ್ಯ ನೀತಿ ಇರಲಿಲ್ಲ. ಈ ಎರಡು ಕೂಲಿ ದರಗಳಲ್ಲಿ ಯಾವುದು ಹೆಚ್ಚೋ ಅದನ್ನೇ ಕೊಡಬೇಕೆಂದು ನಿಯಮವಿತ್ತು. ಈ ನಿಯಮವನ್ನು ಸದ್ದಿಲ್ಲದೆ ಬದಲಾಯಿಸಲಾಗಿದೆ. ರಾಜ್ಯ ಸರಕಾರ ಕೃಷಿ ಕಾರ್ಮಿಕರಿಗೆ ನಿಗಧಿಪಡಿಸುವ ಕನಿಷ್ಠ ವೇತನಕ್ಕೂ ಕೇಂದ್ರ ಸರ್ಕಾರ ಜಾರಿಗೆ ತರುವ ಕನಿಷ್ಠ ವೇತನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಲಾಗುತ್ತದೆ.

ಕೇಂದ್ರ ಸರ್ಕಾರದ ಈ ಅನ್ಯಾಯದ ವಿರುದ್ಧ ಗ್ರಾಮೀಣ ಕೆಲಸಗಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೇ ಏಪ್ರಿಲ್ 9 ರಂದು ರಾಜ್ಯಾದಂತ ಪ್ರತಿಭಟನೆ ಮಾಡಿದ್ದಾರೆ. ನರೇಗಾ ದಿನಗೂಲಿ ಕನಿಷ್ಠ ರೂ.600 ಆಗಬೇಕು. ಎಂಬುದು ಅವರ ನ್ಯಾಯ ಸಮ್ಮತ ಬೇಡಿಕೆಯಾಗಿದೆ. ಅಲ್ಲಿಯವರೆಗೆ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ರೂ.425 ಕನಿಷ್ಠ ವೇತನವಾಗಿ ನೀಡಬೇಕು.

ಕೋವಿಡ್ ಸಾಂಕ್ರಮಿಕದ ಎರಡನೇ ಅಲೆ ಜನರಲ್ಲಿ ಆತಂಕವನ್ನು ಉಂಟು ಮಾಡಿದೆ. ವಲಸೆ ಹೋದ ಕಾರ್ಮಿಕರು ಕುಟುಂಬ ಸಮೇತರಾಗಿ ವಾಪಸ್ ಬರುತ್ತಿದ್ದಾರೆ. ಅವರಿಗೆ ಉದ್ಯೋಗವನ್ನು ಹಾಗೂ ಜೀವನ ನಿರ್ವಹಣೆಗೆ ಆರ್ಥಿಕ ನೆರವು ನೀಡಲು ಸರ್ಕಾರ ಸಜ್ಜಾಗಿಲ್ಲ. ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲ. ಅಗತ್ಯ ಔಷಧಿಗಳಿಲ್ಲ. ಲಸಿಕೆ ಹಾಕಿಸಿಕೊಳ್ಳುವುದರಲ್ಲಿ ಸರ್ಕಾರದ ಮೇಲೆ ಜನರಲ್ಲಿ ವಿಶ್ವಾಸ ಮೂಡಿಲ್ಲ. ಮನೆಬಿಟ್ಟು ಹೊರಗೆ ಬರಬೇಡಿ ಎಂದು ಉಚಿತ ಉಪದೇಶ ಮಾತ್ರ ಮಾಡಲಾಗುತ್ತದೆ. ಸರ್ಕಾರ ತಜ್ಞರಿಂದ ಸಲಹೆ ಪಡೆಯುತ್ತಿಲ್ಲ. ಹಿಂದಿನ ಅನುಭವದಿಂದ ಪಾಠ ಕಲಿತ್ತಿಲ್ಲ.

ನರೇಗಾ ಕೆಲಸವನ್ನು ಎಲ್ಲ ಗ್ರಾಮಗಳಿಗೂ ವಿಸ್ತರಿಸಬೇಕು. ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕು. ಬಡ ಕುಟುಂಬಗಳಿಗೆ ಒಳ್ಳೆಯ ಗುಣಮಟ್ಟದ ಆಹಾರ ಒದಗಿಸಬೇಕು. 100 ದಿನಕ್ಕಿಂತ ಹೆಚ್ಚು ದಿನಗಳ ಕೆಲಸ ನೀಡಬೇಕು.

Leave a Reply

Your email address will not be published. Required fields are marked *