ಮೋದಿ ಸರಕಾರಕ್ಕೆ ಆತ್ಮಗೌರವ ಇದ್ದರೆ ಕ್ವಾಡ್‍ ನಿಂದ ಹೊರ ಬರಬೇಕು

ಭಾರತದ ಸಾರ್ವಭೌಮತ್ವವನ್ನು ಎತ್ತಿ ಹಿಡಿಯಬೇಕು: ಸಿಪಿಐ(ಎಂ) ಒತ್ತಾಯ

ಅಮೆರಿಕಾದ ನೌಕಾಪಡೆಯ ಏಳನೇ ಫ್ಲೀಟಿನ(ಹಡಗುಪಡೆಯ) ಯುದ್ಧ ಹಡಗು ಲಕ್ಷದ್ವೀಪದ ಕರಾವಳಿಯಲ್ಲಿ ಭಾರತದ ಸ್ವಂತ ಆರ್ಥಿಕ ವಲಯ(ಇ.ಇ.ಝಡ್.) ದೊಳಗೆ ಅತಿಕ್ರಮಣ ಮಾಡಿರುವುದು ಭಾರತದ ಸಾರ್ವಭೌಮತೆಗೆ  ಒಂದು ಅನಪೇಕ್ಷಿತ ಸವಾಲು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ಈ ಕಾರ್ಯಾಚರಣೆ “ಭಾರತದ ಸಮುದ್ರ ಸಂಬಂಧಿ ಮಿತಿಮೀರಿದ ದಾವೆಗಳಿಗೆ ಸವಾಲು ಹಾಕಲಿಕ್ಕಾಗಿ” ಎಂಬ ಏಳನೇ ಫ್ಲೀಟಿನ ಹೇಳಿಕೆ  ಸ್ಪಷ್ಟವಾಗಿದೆ.

ಅಮೆರಿಕ ಸಂಯುಕ್ತ ಸಂಸ್ಥಾನ ನಾಚಿಕೆಯಿಲ್ಲದೆ ಧೂರ್ತತನ ಪ್ರದರ್ಶಿಸುತ್ತಿದೆ.  ವಿಶ್ವ ಸಂಸ್ಥೆಯ ಸಮುದ್ರಗಳ ಕಾನೂನಿನ ಕುರಿತ ಅಧಿನಿರ್ಣಯಕ್ಕೆ ಭಾರತ ಸಹಿ ಹಾಕಿದೆ, ಆದರೆ ಅಮೆರಿಕ ಸಹಿ ಹಾಕಿಲ್ಲ. ಆದರೂ ಈ ಅಂತರ್‍ ರಾಷ್ಟ್ರೀಯ ಕಾನೂನಿನ ಪ್ರಕಾರ ವರ್ತಿಸುತ್ತಿರುವುದಾಗಿ ಹೇಳಿಕೊಂಡಿದೆ.

ಇಂತಹ ವೈರತ್ವದ ಕ್ರಮಕ್ಕೆ ಮೋದಿ ಸರಕಾರದ ಸ್ಪಂದನೆಯೆಂದರೆ ಭಾರತದ ಇ.ಇ.ಝಡ್‍. ನೊಳಗಿಂದ ಮಿಲಿಟರಿ ಹಡಗುಗಳು ಹೋಗುವುದಕ್ಕೆ ಭಾರತದ ಸಮ್ಮತಿಯನ್ನು ಪಡೆಯಬೇಕು ಎಂದು ಮೆದುವಾಗಿ ಹೇಳಿರುವುದು. ಆದರೆ ಅಮೆರಿಕ ಇದನ್ನು ಒಪ್ಪಿಕೊಳ್ಳಲು ನಿರಾಕರಿಸಿದೆ.

ಕ್ವಾಡ್‍ ಮೈತ್ರಿಕೂಟ ಸೇರಿಕೊಂಡು ಮೋದಿ ಸರಕಾರ ಅಮೆರಿಕನ್‍ ಹಿತಗಳನ್ನು ಈಡೇರಿಸಲು ತನ್ನನ್ನು ತಾನೇ ಬದ್ಧಗೊಳಿಸಿಕೊಂಡಿದೆ, ಭಾರತ-ಶಾಂತಸಾಗರ ಪ್ರದೇಶದಲ್ಲಿ “ನೌಕಾಯಾನದ ಸ್ವಾತಂತ್ರ್ಯ’ವೆಂಬ ಅಮೆರಿಕನ್ ಸೂತ್ರೀಕರಣವನ್ನು ಒಪ್ಪಿಕೊಂಡು ತನ್ನ ಸ್ವಂತ ನಿಲುವನ್ನು ಬಿಟ್ಟುಕೊಟ್ಟಿದೆ.

ಅಮೆರಿಕಾದ ಸಶಸ್ತ್ರ ಪಡೆಗಳು ಭಾರತವನ್ನು ಅಮೆರಿಕಾದ ಪ್ರಾದೇಶಿಕ ಮಾಂಡಲಿಕನಂತೆ  ಕಾಣುತ್ತಿದೆ. ಇದೀಗ  ಅದರ ಏಳನೇ ಹಡಗುಪಡೆ ಕೊಟ್ಟಿರುವ ಸಂದೇಶ ಎಂದು ವಿಶ್ಲೇಷಿಸಿರುವ ಸಿಪಿ(ಎಂ) ಪೊಲಿಟ್‍ ಬ್ಯುರೊ, ಮೋದಿ  ಸರಕಾರಕ್ಕೆ ಏನಾದರೂ ಆತ್ಮಗೌರವ ಎಂಬುದು ಇದ್ದರೆ  ಮತ್ತು ಭಾರತದ ಸಾರ್ವಭೌಮತೆಯ ಬಗ್ಗೆ ಗೌರವ ಇದ್ದರೆ, ಅದು ತಕ್ಷಣವೇ ಕ್ವಾಡ್  ಮೈತ್ರಿಕೂಟದಿಂದ ಹೊರ ಬರಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *