ವಿಧ್ವಂಸದ ಎರಡು ಯಾತನಾಮಯ ವರ್ಷಗಳು

  • ಕಳೆದ ಎರಡು ವರ್ಷಗಳು ಭಾರತದ ಜನರಿಗೆ ಹಾಗೂ ನಮ್ಮ ಸಾಂವಿಧಾನಿಕ ಗಣತಂತ್ರಕ್ಕೆ ಯಾತನಾಮಯ,  ಭೀತಿಗ್ರಸ್ತ ವರ್ಷಗಳು. ೨೦೨೦ರ ಜನವರಿಯ ಕೊನೆಯಲ್ಲಿ ಕೊವಿಡ್-19  ಮೊದಲಿಗೆ ಸ್ಫೋಟಗೊಂಡಂದಿನಿಂದಲೂ ಮೋದಿ ಸರಕಾರ ಈ ಮಹಾರೋಗವನ್ನು ಎದುರಿಸಲು ಮತ್ತು ಹಾಗೂ ಜನರ ಜೀವವನ್ನು ಉಳಿಸಲು ಮನಃಪೂರ್ವಕವಾಗಿ  ತೊಡಗಲೇ ಇಲ್ಲ,  ಬದಲಿಗೆ ಈ ಸರಕಾರ  ಆರ್‌ಎಸ್‌ಎಸ್‌ನ ಯೋಜನೆಯನ್ನು ಅನಾವರಣಗೊಳಿಸುವ ತನ್ನ ಎಂದಿನ ಕಾರ್ಯದಲ್ಲಿಯೇ ಅವಿರತವಾಗಿ  ಮಗ್ನವಾಗಿದೆ. ಅದರ ಒಟ್ಟಾರೆ ಫಲಿತಾಂಶವೆಂದರೆ; ಜೀವರಕ್ಷಕ ಔಷಧಿಗಳ ತೀವ್ರ ಕೊರತೆ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಾಗೂ ವೆಂಟಿಲೇಟರುಗಳ ತೀವ್ರ ಕೊರತೆಯಿಂದಾಗಿ ಜನರು ಉಸಿರಾಡಲಾಗದೇ ಜೀವ ಕಳೆದುಕೊಳ್ಳುವಂತಾಗಿದೆ.  ನದಿಗಳಲ್ಲಿ, ಮುಖ್ಯವಾಗಿ ಗಂಗಾ ನದಿಯಲ್ಲಿ ತೇಲುವ ಶವಗಳ ಭೀಭತ್ಸ ದೃಶ್ಯಗಳು ಮತ್ತು ಸಾಮೂಹಿಕ ಅಂತ್ಯಕ್ರಿಯೆಗಳು ಈ  ಸರಕಾರ ದೇಶಕ್ಕೆ ಮತ್ತು ಜನಗಳಿಗೆ ತಂದು ಕೊಟ್ಟ ಸಾವಿನ ಘೋರ ಕುಣಿತವನ್ನು ಬಿಂಬಿಸುತ್ತಿವೆ.
yechury1
ಸೀತಾರಾಮ್ ಯೆಚುರಿ

ಮರುಆಯ್ಕೆಯಾದ ಮೋದಿ-೨  ಸರ್ಕಾರದ ಈ ಎರಡು ವರ್ಷಗಳಲ್ಲಿ, ಏಳು ವರ್ಷಗಳ ಹಿಂದೆ ೨೦೧೪ರ ಸಾರ್ವತ್ರಿಕ ಚುನಾವಣೆಯ ನಂತರದಲ್ಲಿ ಚಾಲನೆಗೆ ತಂದ ಪ್ರಕ್ರಿಯೆಯ ಕ್ರೋಢೀಕರಣವನ್ನು ನಾವು ಕಾಣುತ್ತಿದ್ದೇವೆ. ಅದು ಭಾರತವನ್ನು, ಒಂದು ಉನ್ಮತ್ತ ಅಸಹಿಷ್ಣು, ಮತೀಯ, ಫ್ಯಾಸಿಸ್ಟ್ ನಮೂನೆಯ “ಹಿಂದೂ ರಾಷ್ಟ್ರ”ವನ್ನಾಗಿ ಪರಿವರ್ತಿಸಬೇಕೆಂಬ ಕಲ್ಪನೆಯ ಆರ್‌ಎಸ್‌ಎಸ್‌ನ ಯೋಜನೆಯನ್ನು ಸಾಕಾರಗೊಳಿಸುವ ಪ್ರಕ್ರಿಯೆ. ೧೯೨೫ರಲ್ಲಿ ಅದರ ಸ್ಥಾಪನೆಯಾದಾಗ ಘೋಷಿಸಲ್ಪಟ್ಟ ಉದ್ದೇಶವದು. “ಹಿಂದುತ್ವ” ಎಂಬುದನ್ನು ಸಾವರ್ಕರ್ ಒಂದು ರಾಜಕೀಯ ಯೋಜನೆಯಾಗಿ  ಸೃಷ್ಟಿಸಿದರು, ಇದಕ್ಕೂ ಹಿಂದೂ ಧರ್ಮಕ್ಕೂ ಏನೇನೂ  ಸಂಬಂಧವಿಲ್ಲ. ಈ ಯೋಜನೆಯನ್ನು ಜಾರಿ ಮಾಡಲು ಒಂದು ಸೈದ್ಧಾಂತಿಕ ನೆಲೆಯ ಸಂಘಟನಾತ್ಮಕ ಸಂರಚನೆಯನ್ನು ೧೯೩೯ರಲ್ಲಿ ಗೋಲ್ವಾಲ್ಕರ್ ಹುಟ್ಟುಹಾಕಿದರು. ಆರ್‌ಎಸ್‌ಎಸ್‌ನ ಈ ಯೋಜನೆಗೆ  ತದ್ವಿರುದ್ಧವಾದ ಭಾರತದ ಸಂವಿಧಾನದ ಮೇಲೆ ದಾಳಿ ಮಾಡುವ ಹುನ್ನಾರ ಅವರದಾಗಿದೆ. ಜಾತ್ಯತೀತ ಪ್ರಜಾಸತ್ತಾತ್ಮಕ ಗಣತಂತ್ರ ಸಂವಿಧಾನವನ್ನು ನಿರ್ನಾಮಗೊಳಿಸುವ ಕ್ರಿಯೆಯು ೨೦೧೯ರ ಚುನಾವಣೆಯ ನಂತರ ಉನ್ಮಾದಕರ ವೇಗ ಪಡೆದುಕೊಂಡಿದೆ.

ಮಹಾಸೋಂಕಿನ ಮಹಾವಿನಾಶ

ಭಾರತದಲ್ಲಿ ಈ ಮಹಾಸೋಂಕು ೨೦೨೦ರ ಜನವರಿಯ ಕೊನೆಯಲ್ಲಿ ಮೊದಲಿಗೆ ಸ್ಫೋಟಗೊಂಡಂದಿನಿಂದಲೂ,  ಮೋದಿ ಸರಕಾರ ಈ ಮಹಾರೋಗವನ್ನು ಎದುರಿಸಲು ಮತ್ತು  ಹಾಗೂ ಜನರ ಜೀವವನ್ನು ಉಳಿಸಲು ಮನಃಪೂರ್ವಕವಾಗಿ  ತೊಡಗಲೇ ಇಲ್ಲ,  ಬದಲಿಗೆ ಈ ಸರ್ಕಾರ  ಆರ್‌ಎಸ್‌ಎಸ್‌ನ ಯೋಜನೆಯನ್ನು ಅನಾವರಣಗೊಳಿಸುವ ತನ್ನ ಎಂದಿನ ಕಾರ್ಯದಲ್ಲಿಯೇ ಅವಿರತವಾಗಿ  ಮಗ್ನವಾಗಿದೆ.

2 covid agonyಇದರಿಂದಾಗಿ ಭಾರತದ ಜನರು ದುಬಾರಿ ಬೆಲೆ ತೆರಬೇಕಾಗಿ ಬಂದಿದೆ. ಇಡೀ ಒಂದು ವರ್ಷ, ನಮ್ಮ ಪಕ್ಷ (ಸಿಪಿಐ(ಎಂ)) ಹಾಗೂ ಇತರ ಹಲವಾರು ವಿರೋಧ ಪಕ್ಷಗಳು ಎಷ್ಟು ಗೋಗರೆದರೂ, ಈ ಮಹಾಸೋಂಕನ್ನು ಎದುರಿಸುವ ನಿಟ್ಟಿನಲ್ಲಿ ಯಾವುದೇ ಅಗತ್ಯ ಕ್ರಮ ಕೈಗೊಳ್ಳಲಿಲ್ಲ. ನಿಜ ಹೇಳಬೇಕೆಂದರೆ, ಏನನ್ನು ಮಾಡದ ಒಂದು ಅಸಡ್ಡೆಯೇ ಆವರಿಸಿತ್ತು. ನಮ್ಮ ಆರೋಗ್ಯ ಸಿಬ್ಬಂದಿಗಳಿಗೆ ಅಗತ್ಯವಿದ್ದ ಸಂರಕ್ಷಕ ಸಲಕರಣೆಗಳನ್ನು ಒದಗಿಸುವಲ್ಲಿ, ಆಸ್ಪತ್ರೆಗಳಲ್ಲಿ ಸ್ಥಳವನ್ನು ವ್ಯಾಪಕವಾಗಿ ವಿಸ್ತರಿಸುವಲ್ಲಿ, ಖಾಸಗಿ ಆಸ್ಪತ್ರೆಗಳ ಸೌಕರ್ಯಗಳನ್ನು ಒಳಗೊಳ್ಳುವಲ್ಲಿ(ಸ್ಪೆನ್ ದೇಶದಲ್ಲಿ ಎಲ್ಲಾ ಖಾಸಗಿ ಆರೋಗ್ಯ ಸೌಕರ್ಯಗಳನ್ನು ತಾತ್ಕಾಲಿಕವಾಗಿ ರಾಷ್ಟ್ರೀಕರಣ ಮಾಡಿರುವುದನ್ನು ಸರ್ಕಾರದ ಗಮನಕ್ಕೆ ತಂದಾಗಲೂ) ಮತ್ತು ಆಮ್ಲಜನಕ ಪೂರೈಸುವಲ್ಲಿ ಹಾಗೂ ಆಗತಾನೇ ಉತ್ಪಾದನೆಯಾಗುತ್ತಿದ್ದ ಲಸಿಕೆಗಳಿಗೆ ಸರ್ಕಾರದಿಂದ ಮುಂಚೆಯೇ ಬೇಡಿಕೆಗಳನ್ನು ಸಲ್ಲಿಸುವಲ್ಲಿ ಹೀಗೆ ಆರೋಗ್ಯ ಕ್ಷೇತ್ರದಲ್ಲಿ ಯಾವುದೇ ತಯಾರಿ ಮಾಡಲಿಲ್ಲ. ಈ ಎಲ್ಲಾ ವಿಷಯಗಳಿಗೆ ಮೋದಿ ಸರ್ಕಾರ ಯಾವುದೇ ಗಮನ ನೀಡಲಿಲ್ಲ, ಹಾಗಾಗಿ ದಯನೀಯವಾಗಿ ವಿಫಲವಾಗಿದೆ.

ಹಠಾತ್ತಾಗಿ, ಯಾವುದೇ ತಯಾರಿಯಿಲ್ಲದೇ, ಕೆಟ್ಟ ಯೋಜನೆಯ ಲಾಕ್‌ಡೌನ್ ಭಾರಿ ಅನಾಹುತವನ್ನೇ ಮಾಡಿತು. ಕೋವಿಡ್ ದಾಳಿಗೆ ಮುಂಚೆಯೇ ಹಿಂಜರಿತಕ್ಕೆ ಜಾರಿದ್ದ ಭಾರತದ ಆರ್ಥಿಕತೆಯು ಈಗ ವಿನಾಶದ ಅಂಚನ್ನು ತಲುಪಿತು. ಕೋಟ್ಯಾಂತರ ಜನರು ಉದ್ಯೋಗ ಕಳೆದುಕೊಂಡರು. ಹಸಿವು ವ್ಯಾಪಕವಾಗಿತ್ತು. ಆದರೆ ನೇರ ನಗದು ಹಣ ವರ್ಗಾವಣೆಯನ್ನಾಗಲೀ ಅಥವಾ ಉಚಿತ ಆಹಾರ ಧಾನ್ಯಗಳ ವಿತರಣೆಯನ್ನಾಗಲೀ ಸರ್ಕಾರ ಕೈಗೊಳ್ಳಲಿಲ್ಲ.

ಕೈಗಾರಿಕಾ ಕೇಂದ್ರಗಳಿಂದ ವಲಸೆ ಕಾರ್ಮಿಕರು ಹತಾಶರಾಗಿ ತಮ್ಮ ತಮ್ಮ ಮನೆ ಊರುಗಳಿಗೆ ಹೋಗಬೇಕೆಂದು  ದೊಡ್ಡ ಸಂಖ್ಯೆಯಲ್ಲಿ ಗುಳೆ ಹೋಗುವ ದೃಶ್ಯಗಳು ದೇಶವಿಭಜನೆಯ ಸಂದರ್ಭದಲ್ಲಿನ ಜನರ ಸಂಕಟವನ್ನು ನೆನಪಿಸುವಂತಿದ್ದವು.  ಅವರಿಗೆ ರಸ್ತೆ ಸಾರಿಗೆಯನ್ನಾಗಲೀ ಅಥವಾ ರೈಲು ಪ್ರಯಾಣ ವ್ಯವಸ್ಥೆಯನ್ನಾಗಲೀ ಸರ್ಕಾರ ಒದಗಿಸಲಿಲ್ಲ. ಇದು ಸಹಜವಾಗಿಯೇ, ವೈರಾಣು ವ್ಯಾಪಕವಾಗಿ ಹಬ್ಬಲು ಕಾರಣವಾಯಿತಲ್ಲದೇ ಭಾರತದ ಉತ್ಪಾದನಾ ಚಟುವಟಿಕೆಯ ಬೆನ್ನೆಲುಬಾಗಿರುವ ಈ ಅದೃಷ್ಟಹೀನ ಬಡವರ ಹೇಳಲಾಗದ ಸಾವು-ನೋವುಗಳಲ್ಲಿ ಪರ್ಯವಸಾನವಾಯಿತು.

2 migrant workers-1-bbc india

ಎಲ್ಲಾ ಮುನ್ನೆಚ್ಚರಿಕೆಗಳಿದ್ದರೂ, ಅವುಗಳ ನಡುವೆಯೂ, ಮೋದಿ ಸರ್ಕಾರ ಕೋವಿಡ್ ವಿರುದ್ಧದ ಸಮರದಲ್ಲಿ ಗೆದ್ದಿರುವುದಾಗಿ ಸಾರಿತು. ತನ್ನನ್ನು “ವಿಶ್ವಗುರು” ಎಂದು ಬಿಂಬಿಸಿಕೊಳ್ಳುವ ಆತುರದಲ್ಲಿ, ಭಾರತವು ತನ್ನ ಲಸಿಕೆ ಉತ್ಪಾದನೆ ಮೂಲಕ ಮಾನವ ಕುಲವನ್ನು ರಕ್ಷಿಸುತ್ತಿದೆ ಎಂದು ಆಟಾಟೋಪದಿಂದ ಹೇಳಿಕೊಂಡರು.

ಈ ಮಧ್ಯೆ, ಕುಂಭಮೇಳಕ್ಕೆ ಅನುಮತಿ ನೀಡಲಾಯಿತು. ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕೋಮು ಧೃವೀಕರಣದ ಮೂಲಕ ಹೆಚ್ಚು ಮತಗಳನ್ನು ಗಳಿಸಿ ಚುನಾವಣಾ ಪ್ರಯೋಜನ ಪಡೆಯುವ ಸಲುವಾಗಿ ಒಂದು ವರ್ಷ ಮುಂಚೆಯೇ ಅದನ್ನು ಮಾಡುವ ತೀರ್ಮಾನ ಮಾಡಲಾಯಿತು. ಐಪಿಎಲ್ ಕ್ರಿಕೆಟ್ ಪಂದ್ಯಕ್ಕೆ ಅನುಮತಿ ನೀಡಲಾಯಿತು. ಕೋವಿಡ್‌ನ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಪ್ರಧಾನಿ ಮತ್ತು ಗೃಹಮಂತ್ರಿಗಳ ಬೃಹತ್ ಚುನಾವಣಾ ಸಭೆಗಳನ್ನು ಏರ್ಪಡಿಸಲಾಯಿತು. ಈ ಎಲ್ಲಾ ನಿರ್ಧಾರಗಳು ಅನಾಹುತಕ್ಕೆ ಕಾರಣವಾದವು. ಅವು ಕೋವಿಡ್ ವೈರಾಣುವಿನ ಸಾಮೂಹಿಕ ಪ್ರಸರಣವನ್ನು  ತ್ವರಿತಗೊಳಿಸಿದವು. ಸಾವುಗಳು ಮತ್ತು ಸೋಂಕುಗಳು ತೀವ್ರವಾಗಿ ಏರಿದವು, ಜತೆಯಲ್ಲೇ ಲಸಿಕೆಯ ಕೊರತೆ ಕೂಡ ತೀವ್ರಗೊಂಡಿತು.

ಎರಡನೇ ಅಲೆಯ ಕ್ರೌರ್ಯ  ಶುರುವಾದಂತೆ, ತನ್ನ ಹೊಣೆಗಾರಿಕೆಯಿಂದ ನುಣುಚಿಕೊಂಡ ಮೋದಿ ಸರ್ಕಾರ ಯಾವುದೇ ಆರ್ಥಿಕ ಪ್ಯಾಕೇಜುಗಳನ್ನು ನೀಡದೇ ರಾಜ್ಯ ಸರ್ಕಾರಗಳ ಮೇಲೆ ಹೊರೆ ಹೊರಿಸಿತು, ಮತ್ತು ಮುನ್ನೆಚ್ಚರಿಕೆಯನ್ನು ಕಡೆಗಣಿಸಿದರೆಂದು ಜನರನ್ನು ದೂಷಿಸಲು ಪ್ರಾರಂಭಿಸಿತು. ಅದರ ಒಟ್ಟಾರೆ ಫಲಿತಾಂಶವೆಂದರೆ; ಜೀವರಕ್ಷಕ ಔಷಧಿಗಳ ತೀವ್ರ ಕೊರತೆ ಮತ್ತು ಆಸ್ಪತ್ರೆಗಳಲ್ಲಿ ಹಾಸಿಗೆಗಳ ಹಾಗೂ ವೆಂಟಿಲೇಟರುಗಳ ತೀವ್ರ ಕೊರತೆಯಿಂದಾಗಿ ಜನರು ಉಸಿರಾಡಲಾಗದೇ ಜೀವ ಕಳೆದುಕೊಳ್ಳುವಂತಾಯಿತು.

covid-2021-waiting at LNJP

ಭಾರತವು ಇವತ್ತು  ಪ್ರತಿದಿನ ಅತ್ಯಂತ ಹೆಚ್ಚಿನ ಸಂಖ್ಯೆಯ ಸಾವು ಮತ್ತು ಸೋಂಕಿನ ಪ್ರಕರಣಗಳನ್ನು ಹೊಂದಿರುವ ಅತ್ಯಂತ ರೋಗಗ್ರಸ್ತ ದಾಖಲೆಯನ್ನು ಪಡೆದಿದೆ. ಮೋದಿಯ ಕೋವಿಡ್ ನಿರ್ವಹಣೆ ಅಂತಹ ಅನಾಹುತಕ್ಕೆ ಕಾರಣವಾಗಿದೆ. ಅದು ಜನರ ಜೀವ ರಕ್ಷಣೆಯನ್ನೂ ಮಾಡಲಿಲ್ಲ, ಮರಣ ಹೊಂದಿದವರಿಗೆ ಗೌರವಯುತವಾದ ಅಂತ್ಯಕ್ರಿಯೆಯ ಏರ್ಪಾಟು ಮಾಡಲು ಕೂಡ ಅದಕ್ಕೆ ಸಾಧ್ಯವಾಗಲಿಲ್ಲ. ನದಿಗಳಲ್ಲಿ, ಮುಖ್ಯವಾಗಿ ಗಂಗಾ ನದಿಯಲ್ಲಿ ತೇಲುವ ಶವಗಳ ಭೀಭತ್ಸ ದೃಶ್ಯಗಳು ಮತ್ತು ಸಾಮೂಹಿಕ ಅಂತ್ಯಕ್ರಿಯೆಗಳು ಈ  ಸರಕಾರ ದೇಶಕ್ಕೆ ಮತ್ತು ಜನಗಳಿಗೆ ತಂದು ಕೊಟ್ಟ ಸಾವಿನ ಕರಾಳ ನೃತ್ಯವನ್ನು ಬಿಂಬಿಸುತ್ತಿವೆ.

covid 2021-PM s tears
ವ್ಯಂಗ್ಯಚಿತ್ರ ಕೃಪೆ: ಸತೀಶ ಆಚಾರ್ಯ

ಈಗಲೂ ಕೂಡ, ಎಲ್ಲಾ ಮೂಲಗಳಿಂದ ಲಸಿಕೆಗಳನ್ನು ತರಿಸುವ ಮೂಲಕ ಮತ್ತು ದೇಶಾದ್ಯಂತ ಎಲ್ಲರಿಗೂ ಉಚಿತವಾದ ಹಾಗೂ ಸಾರ್ವತ್ರಿಕ ಸಾಮೂಹಿಕ ಲಸಿಕೆಯನ್ನು ನೀಡುವ ಮೂಲಕ ಜನರಿಗೆ ಪರಿಹಾರ ಒದಗಿಸಲು ನಿರಾಕರಿಸುವ ಹೀನಾಯ ಸ್ಥಿತಿಯೇ ಇದೆ. ಈಗಲೂ, ಸಮರೋಪಾದಿಯಲ್ಲಿ ಅಗತ್ಯವಾದ ಆರ್ಥಿಕ ಹಾಗೂ ಆಹಾರ ನೆರವಿನ ಜತೆಯಲ್ಲಿ ಲಸಿಕೆ ನೀಡುವಂತೆ ಮೋದಿ ಸರ್ಕಾರವನ್ನು ಬಲವಂತ ಮಾಡಿದರೆ ಮಾತ್ರವೇ ಭಾರತದ ಜನರು ತಮ್ಮ ಜೀವ ಉಳಿಸಿಕೊಳ್ಳಬಹುದು ಎಂಬುದು ಸತ್ಯಸಂಗತಿ.

ಸಂವಿಧಾನದ ಧ್ವಂಸ

ಮೋದಿ 2.0 ಸರ್ಕಾರ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಸ್ಥಾನಮಾನ ನಿರೂಪಿಸಿದ್ದ ಮತ್ತು  ರಕ್ಷಿಸಿದ್ದ  ಭಾರತೀಯ ಸಂವಿಧಾನದ ಪರಿಚ್ಛೇದ 370 ಮತ್ತು 35ಎ ಗಳನ್ನು ರದ್ದುಗೊಳಿಸುವ ಮೂಲಕ ತನ್ನ ಆಳ್ವಿಕೆಯನ್ನು ಆರಂಭಿಸಿತು. ಒಂದೇ ಹೊಡೆತದಲ್ಲಿ ಒಂದು ರಾಜ್ಯದ ಅಸ್ತಿತ್ವವೇ ಕೊನೆಗೊಂಡಿತು ಮತ್ತು ಕಾರ್ಯತಃ ಮಿಲಿಟರಿಯ ವಶಕ್ಕೆ ಆ ರಾಜ್ಯ ಹೋಯಿತು, ಎಲ್ಲಾ ಸಂಪರ್ಕಗಳೂ ಕಡಿದುಹೋಗಿ ಜನಜೀವನ ಅಸ್ತವ್ಯಸ್ತಗೊಂಡಿತು. ಎರಡು ವರ್ಷಗಳ ನಂತರವೂ ಜನರು ತಮ್ಮ ದಿನನಿತ್ಯದ ಸಹಜ ಚಟುವಟಿಕೆಗಳನ್ನು ನಡೆಸಲಾರದ ಪರಿಸ್ಥಿತಿ ಅಲ್ಲಿದೆ. ಕುತಂತ್ರದಿಂದ ಕೈಗೊಂಡ ಈ ಕ್ರಮವು ಸಂವಿಧಾನ ಮತ್ತದರ ವಿಧಿ-ವಿಧಾನಗಳ ಸ್ಪಷ್ಟ ಉಲ್ಲಂಘನೆಯಾಗಿದೆ.

ಇದರ ಜತೆಯಲ್ಲಿಯೇ ಪೌರತ್ವ (ತಿದ್ದುಪಡಿ) ಕಾಯಿದೆ(ಸಿಎಎ)ಯ ಅಂಗೀಕಾರ ಕೂಡ ಸಂವಿಧಾನದ ನಗ್ನ ಉಲ್ಲಂಘನೆಯಾಗಿದ್ದು  ನಮ್ಮ ಸಂವಿಧಾನಕ್ಕೆ ಬಗೆದ ದ್ರೋಹವಾಗಿದೆ. ಮೊಟ್ಟ ಮೊದಲ ಬಾರಿಗೆ, ದೇಶದ ಪೌರತ್ವವನ್ನು ಒಬ್ಬ ವ್ಯಕ್ತಿಯ ಧಾರ್ಮಿಕ ನೆಲೆಗೆ ತಳಕು ಹಾಕಲಾಗಿದೆ.

ಈ ಸಿಎಎ ವಿರುದ್ಧ ದೇಶಾದ್ಯಂತ ದೊಡ್ಡ ಮಟ್ಟದ ಯುವಜನರ ಪಾಲ್ಗೊಳ್ಳುವಿಕೆಯೊಂದಿಗೆ ನಡೆದ ಭಾರಿ ಪ್ರತಿಭಟನೆಗಳನ್ನು ನಿರ್ವಹಿಸಿದ ರೀತಿಯು ಶಾಂತಿಯುತ ಪ್ರತಿಭಟನೆ ಮಾಡುವ ಜನರ ಸಾಂವಿಧಾನಿಕ ಹಕ್ಕುಗಳನ್ನು ಸರ್ಕಾರ ಎಷ್ಟು ತುಚ್ಛವಾಗಿ ಕಾಣುತ್ತದೆ ಎನ್ನುವುದಕ್ಕೆ ಸಾಕ್ಷಿ. ಸಿಎಎ/ಎನ್‌ಪಿಆರ್/ಎನ್‌ಆರ್‌ಸಿಗಳ ವಿರುದ್ಧ ಬೆಳೆಯುತ್ತಿದ್ದ ಈ ಐಕ್ಯತೆಯನ್ನು ಒಡೆಯುವ ಸಲುವಾಗಿ ಅಲಿಘರ್, ಜಾಮಿಯಾ, ಜೆಎನ್‌ಯು ವಿಶ್ವವಿದ್ಯಾಲಯಗಳನ್ನೂ ಒಳಗೊಂಡಂತೆ ಹಲವಾರು ಪ್ರದೇಶಗಳಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ದಾಳಿ ಮಾಡುವ ಮೂಲಕ ಮತ್ತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ “ನಮಸ್ತೆ ಟ್ರಂಪ್” ಎಂಬ ಭಾರಿ ಸಾರ್ವಜನಿಕ ಸ್ವಾಗತ ಸಮಾರಂಭ ಏರ್ಪಡಿಸುವಾಗಲೇ ದೆಹಲಿಯಲ್ಲಿ ಕೋಮು ಗಲಭೆಯನ್ನು ಹರಿಬಿಡಲಾಯಿತು.

welcome trump
ಟ್ರಂಪ್‍ಗೆ ಸ್ವಾಗತ ಮತ್ತು ಇಂಡಿಯಾಗೇಟ್‍ ಬಂದ್ ವ್ಯಂಗ್ಯಚಿತ್ರ ಕೃಪೆ: ಅರವಿಂದ್‍ ಟಿಎಂ

ಸಂವಿಧಾನದ ಆಧಾರ ಸ್ತಂಭಗಳ ಮೇಲೆ ಹಲ್ಲೆ

ಸಂವಿಧಾನದ ಮೇಲಿನ ಹಲ್ಲೆಯು ನಿಜಕ್ಕೂ ಸ್ವತಂತ್ರ ಭಾರತದ ಸ್ವರೂಪದ ಮೇಲೆಯೇ ಮಾಡಿದ ಹಲ್ಲೆಯಾಗಿದೆ. ಭಾರತದ ಸಂವಿಧಾನವು ನಮ್ಮ ದೇಶ ಹಾಗೂ ಜನರ ಶ್ರೀಮಂತ ಬಹುತ್ವ ಹಾಗೂ ವೈವಿಧ್ಯತೆಯ ಅಭಿವ್ಯಕ್ತಿಯಾಗಿದೆ. ಈ ವೈವಿಧ್ಯತೆಯೊಳಗಿನ ಸಮಾನ ಅಂಶಗಳ ಎಳೆಗಳನ್ನು ಬಲಪಡಿಸುವ ಮೂಲಕ ಮಾತ್ರವೇ ಭಾರತದ ಐಕ್ಯತೆಯನ್ನು ಕ್ರೋಢೀಕರಿಸಲು ಸಾಧ್ಯವಾಗುತ್ತದೆ. ಈ ಪರಿಕಲ್ಪನೆಯ ಮೇಲೆಯೇ ದಾಳಿ ಮಾಡುವ ಮೂಲಕ ಬಿಜೆಪಿ/ಆರ್‌ಎಸ್‌ಎಸ್ ನಮ್ಮ ವೈವಿಧ್ಯತೆಗಳ – ಭಾಷಾ, ಜನಾಂಗೀಯ, ಧಾರ್ಮಿಕ ಮುಂತಾದ- ಎಲ್ಲಾ ಅಭಿವ್ಯಕ್ತಿಗಳ ಮೇಲೆ ಏಕರೂಪತೆಯನ್ನು ಹೇರಲು ಬಯಸುತ್ತದೆ. “ಹಿಂದುತ್ವ ರಾಷ್ಟ್ರ”ವೆಂಬ ಆ ಪರಿಕಲ್ಪನೆಯೇ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತ ಗುಂಪುಗಳನ್ನು ಒಂದೇ ಹಿಂದೂವಾದದಲ್ಲಿ ಅಂತರ್ಗತಗೊಳ್ಳಬೇಕು ಅಥವಾ ಸಮಾನತೆಯ ಯಾವುದೇ ಸಾಂವಿಧಾನಿಕ ಹಕ್ಕುಗಳಿಲ್ಲದೇ ಎರಡನೇ ದರ್ಜೆಯ ಪ್ರಜೆಗಳಂತೆ ಬದುಕಬೇಕೆಂಬ ಬಲವಂತಕ್ಕೆ ಒಳಪಡಿಸುತ್ತದೆ. ಹಿಂದೂವಾದದ ಅಡಿಯಲ್ಲಿ ಎಲ್ಲಾ ಭಿನ್ನ ಗುಂಪುಗಳ ಸೇರ್ಪಡೆ  ಮೂಲಕ ಜನಾಂಗೀಯ ವೈವಿಧ್ಯತೆಯನ್ನು ಅಳಿಸಿಹಾಕುವ ಪ್ರಯತ್ನ ನಡೆಯುತ್ತಿದೆ. ‘ಹಿಂದು-ಹಿಂದಿ-ಹಿಂದೂಸ್ತಾನ್’ ಎಂಬ ಆರ್‌ಎಸ್‌ಎಸ್‌ನ ಘೋಷಣೆಯು ಒಂದು ಭಾಷಾ ಏಕರೂಪತೆಯನ್ನು ಹೇರುತ್ತದೆ. ಈ ಯತ್ನವು ಸಾಮಾಜಿಕ ಅಂತಃಸ್ಪೋಟದ ಸೂತ್ರವಾಗುತ್ತದೆ. ಇದನ್ನು  ಬಿಜೆಪಿಯು ಪ್ರಜಾಪ್ರಭುತ್ವ, ಪ್ರಜಾಸತ್ತಾತ್ಮಕ ಹಕ್ಕುಗಳು ಮತ್ತು ನಾಗರಿಕ ಹಕ್ಕುಗಳನ್ನು ಪಕ್ಕಕ್ಕೆ ಎಸೆದು,  ಫ್ಯಾಸಿಸ್ಟ್ ನಮೂನೆಯ ವಿಧಾನಗಳನ್ನು ಪ್ರಯೋಗಿಸಿ ಮತ್ತು ಯುಎಪಿಎ, ದೇಶದ್ರೋಹ ಇತ್ಯಾದಿ ಕರಾಳ ಕಾನೂನುಗಳನ್ನು ಬಳಸಿ ದಮನ ಮಾಡುತ್ತದೆ. ಇವುಗಳನ್ನು ವಿರೋಧಿಸುವವರನ್ನೆಲ್ಲಾ “ಆಂತರಿಕ ವೈರಿಗಳು” ಎಂದು ಬಗೆಯಲಾಗುತ್ತದೆ. ಹೀಗೆ ಪ್ರಜಾಪ್ರಭುತ್ವದ ಹಾಗೂ ಸಾಂವಿಧಾನಿಕ ಹಕ್ಕುಗಳಾದ ಸ್ವಾತಂತ್ರ್ಯ ಮತ್ತು ಸಮಾನತೆಯ ನಿರಾಕರಣೆಯಾಗುತ್ತದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿರುವುದು ಈಗ ಲಕ್ಷದ್ವೀಪದಲ್ಲಿ  ಪುನರಾವರ್ತನೆಗೊಳ್ಳುತ್ತಿದೆ.  ಧಾರ್ಮಿಕ ಅಲ್ಪಸಂಖ್ಯಾತರ ಹಕ್ಕುಗಳ ಮೇಲೆ ಆವೇಶಭರಿತ ಕೋಮುವಾದಿ ದಾಳಿಗಳೊಂದಿಗೆ ಜನರ ಸಾಂವಿಧಾನಿಕ ಹಕ್ಕುಗಳ ಮೇಲೆ ಹಲ್ಲೆ ಮಾಡಲು ಯತ್ನಿಸಲಾಗುತ್ತಿದೆ.

ಸ್ವಾವಲಂಬನೆ: ಸ್ವಾವಲಂಬನೆಯ ಆಧಾರಸ್ತಂಭದ ಅಡಿಪಾಯವನ್ನು ೨೦೧೪ರ ನಂತರ ವ್ಯವಸ್ಥಿತವಾಗಿ ಶಿಥಿಲಗೊಳಿಸಲಾಗುತ್ತಿದೆ, ೨೦೧೯ರ ನಂತರ ಇದು ಇನ್ನೂ ಜೋರಾಗಿ ನಡೆಯುತ್ತಿದೆ. ನಿರ್ದಯವಾಗಿ ರಾಷ್ಟ್ರೀಯ ಸಂಪತ್ತನ್ನು ಲೂಟಿ ಮಾಡಲಾಗುತ್ತಿದೆ. ಬಂಟ ಬಂಡವಾಳಶಾಹಿಯ ಅತ್ಯಂತ ಒರಟು ಅಭಿವ್ಯಕ್ತಿಯು ಅದರ ಜತೆಗೂಡಿದೆ. ಸಾರ್ವಜನಿಕ ವಲಯವನ್ನು ಕಳಚಿಹಾಕಲಾಗುತ್ತಿದೆ ಹಾಗೂ ಬೇಕಾಬಿಟ್ಟಿಯಾಗಿ ಮಾರಲಾಗುತ್ತಿದೆ; ಹಣಕಾಸು ವಲಯವನ್ನು ವಿರಾಷ್ಟ್ರೀಕರಣ ಮಾಡಲಾಗುತ್ತಿದ್ದು ಅದು ಅಂಚಿಗೆ ತಳ್ಳಲ್ಪಟ್ಟಿರುವ ಜನವಿಭಾಗಗಳನ್ನು ಹೊರದಬ್ಬುತ್ತದೆ.

ಇದರೊಂದಿಗೆ  ದುಡಿಯುವ ಜನರ ಹಕ್ಕುಗಳ ಮೇಲೆ ಒಂದು ನಿರ್ದಯ ದಾಳಿ ಮಾಡುತ್ತಿದೆ. ಎಲ್ಲಾ ಕಾರ್ಮಿಕ ಕಾನೂನುಗಳನ್ನು ರದ್ದುಮಾಡಲಾಗಿದೆ; ಹೊಸ ಕಾರ್ಮಿಕ ಸಂಹಿತೆಗಳು ಒಂದು ಹೀನ ಸಮರ್ಥನೆಯಷ್ಟೆ. ಹೊಸ ಕೃಷಿ ಕಾನೂನುಗಳ ಮೂಲಕ ಕೃಷಿಯನ್ನು ಕಾರ್ಪೊರೇಟ್ ಹಿತಾಸಕ್ತಿಗೆ ಒತ್ತೆಯಿಡಲಾಗುತ್ತಿದೆ, ಅದು ನಿಸ್ಸಂಶಯವಾಗಿಯೂ ಭಾರತೀಯ ಕೃಷಿ ಹಾಗೂ ರೈತರ ವಿನಾಶಕ್ಕೆ ನಾಂದಿ ಹಾಡಲಿದೆ. ಅದೇ ರೀತಿಯಲ್ಲಿ ಖನಿಜ ಸಂಪತ್ತನ್ನು ಖಾಸಗಿಯವರ ಗರಿಷ್ಠ ಲಾಭಕ್ಕಾಗಿ ತೆರೆದಿಡಲಾಗಿದೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಕಳೆದ ಏಳು ದಶಕಗಳ ಕಾಲ ಭಾರತದ ಸಹಾಯಕ್ಕೊದಗಿದ ಭಾರತದ ಸ್ವಾವಲಂಬೀ ಬುನಾದಿಗಳನ್ನು ಖಾಸಗಿ ಬಂಡವಾಳದ ಗರಿಷ್ಟ ಲಾಭಕ್ಕಾಗಿ  ನಾಶ ಮಾಡಲಾಗುತ್ತಿದೆ.

ಇದರ ಘೋರ ಪರಿಣಾಮವೆಂದರೆ, ಉನ್ನತ ಹಂತಗಳಲ್ಲಿ ಭ್ರಷ್ಟಾಚಾರದ ಮಟ್ಟಗಳ ಏರಿಕೆ, ಚುನಾವಣಾ ಬಾಂಡುಗಳ ಮೂಲಕ ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧಗೊಳಿಸುವುದು ಮತ್ತು ವಿದೇಶಿ ಸಂಸ್ಥೆಗಳಿಂದ ವಂತಿಗೆ ಪಡೆಯಲು ರಾಜಕೀಯ ಪಕ್ಷಗಳಿಗೆ ಅನುಮತಿ ನೀಡುವುದು.

ಆರ್ಥಿಕ ಅಸಮಾನತೆಗಳು ಅಸಹ್ಯಕರ ಆಘಾತಕಾರಿ ಮಟ್ಟವನ್ನು ತಲುಪಿರುವುದೇ ಇವೆಲ್ಲವುಗಳ ಒಟ್ಟಾರೆ ಫಲಿತಾಂಶವಾಗಿದೆ. ಬಡವರನ್ನು ಇನ್ನಷ್ಟು ಬಡತನಕ್ಕೆ ಸಂಕಟಕ್ಕೆ ತಳ್ಳುತ್ತಾ, ಶ್ರೀಮಂತರನ್ನು ಹೇಸಿಗೆಯೆನಿಸುವಂತಹ ಶ್ರೀಮಂತಿಕೆಗೆ ಏರಿಸಲಾಗುತ್ತಿದೆ.

ಒಕ್ಕೂಟ ತತ್ವ: ಕಳೆದ ಎರಡು ವರ್ಷಗಳಲ್ಲಿ ರಾಜ್ಯಗಳ ಹಕ್ಕುಗಳ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ. ಕೊರೊನಾ ಮಹಾರೋಗದ ಈ ಇಡೀ ಅವಧಿಯಲ್ಲಿ ಒಕ್ಕೂಟವಾದದ ಮೇಲಿನ ದಾಳಿ ವ್ಯಾಪಕವಾಗಿದೆ. ಜಿ.ಎಸ್.ಟಿ. ಜಾರಿಯ ವಿಷಯದಲ್ಲಿ ರಾಜ್ಯಗಳ ಯಾವುದೇ ಸಲಹೆಗಳನ್ನು ಆಲಿಸಲು ನಿರಾಕರಿಸುತ್ತಿರುವ, ರಾಜ್ಯಗಳಿಗೆ ನೀಡಬೇಕಾದ ಪಾಲನ್ನು ನಿರಾಕರಿಸುತ್ತಿರುವ ಮತ್ತು ಜೀವರಕ್ಷಕ ಔಷಧಿಗಳು ಹಾಗೂ ಉಪಕರಣಗಳ ಮೇಲೆ ವಿಪರೀತ ತೆರಿಗೆಯನ್ನು ವಿಧಿಸುತ್ತಿರುವ ರೀತಿಯು ಇವೆಲ್ಲವೂ ರಾಜ್ಯ ಸರ್ಕಾರಗಳ ಸಾಂವಿಧಾನಿಕ ಹಕ್ಕುಗಳ ಮೇಲೆ ಸವಾರಿ ಮಾಡುವ ಸನ್ನಿವೇಶದತ್ತ ಸಾಗುತ್ತಿವೆ.

ಸಾಮಾಜಿಕ ನ್ಯಾಯ: ಅಲ್ಪಸಂಖ್ಯಾತರು, ದಲಿತರು, ಆದಿವಾಸಿಗಳು ಮತ್ತು ಮಹಿಳೆಯರನ್ನು ಗುರಿಯಾಗಿಸಿದ ವಿಷಪೂರಿತ ದ್ವೇಷ ಪ್ರಚಾರ ಮತ್ತು ಹಿಂಸೆಯ ವಾತಾವರಣವು ಕಳೆದ ಎರಡು ವರ್ಷಗಳಲ್ಲಿ ಅಸಾಧಾರಣವಾಗಿ ಹೆಚ್ಚುತ್ತಿದೆ. ಸಾಮೂಹಿಕ ಅತ್ಯಾಚಾರಗಳು ಮತ್ತು ಹದಿಹರೆಯದ ದಲಿತ ಹೆಣ್ಣುಮಕ್ಕಳ ಕೊಲೆಗಳು, ಆದಿವಾಸಿಗಳನ್ನು ಅವರ ಅರಣ್ಯ ಜಮೀನುಗಳಿಂದ ಒಕ್ಕಲೆಬ್ಬಿಸುವ ಮೂಲಕ ಅರಣ್ಯ ಹಕ್ಕುಗಳ ಕಾಯಿದೆಯ ಬಹುತೇಕ ರದ್ದತಿ, ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ದಿಗಿಲು ಹುಟ್ಟಿಸುವ ಹಲ್ಲೆಗಳು ಹಾಗೂ ಬಡವರ ಮೇಲಿನ ನಿಷ್ಕರುಣೆಯ ದಾಳಿಗಳು ಇವೆಲ್ಲವೂ ಸಂವಿಧಾನವು ನೀಡಿದ ನಮ್ಮ ಜನರ ಸಾಮಾಜಿಕ ನ್ಯಾಯವನ್ನು ಖಾತ್ರಿಪಡಿಸುವ ಮೂಲ ತತ್ವವನ್ನೇ ಹಾಳುಗೆಡವಿವೆ.

covid 2021-state vaccines -modi photo
ಲಸಿಕೆಗಳನ್ನು ರಾಜ್ಯಗಳು ಖರೀದಿಸಲಿ, ಫೋಟೋ ಮಾತ್ರ ಇವರದ್ದೇ ಇರಬೇಕು. ವ್ಯಂಗ್ಯಚಿತ್ರ ಕೃಪೆ: ಅಲೋಕ್‍ ನಿರಂತರ್

“ನವ ಭಾರತ”ದ ಕಥನ

ಮೋದಿ 2.0  ಸರ್ಕಾರವು ಕಳೆದ ಎರಡು ವರ್ಷಗಳಲ್ಲಿ ಸಾಗುತ್ತಿರುವುದು  ಜಾತ್ಯತೀತ ಪ್ರಜಾಸತ್ತಾತ್ಮಕ ಸಾಂವಿಧಾನಿಕ ಗಣತಂತ್ರವನ್ನು ನಾಶ ಮಾಡುವ ಮತ್ತು ಅದರ ಸ್ಥಾನದಲ್ಲಿ ಉನ್ಮತ್ತ ಅಸಹಿಷ್ಣು ಫ್ಯಾಸಿಸ್ಟ್ ನಮೂನೆಯ ಹಿಂದುತ್ವ ರಾಷ್ಟ್ರವನ್ನು ಸ್ಥಾಪಿಸುವ ಗುರಿಸಾಧನೆಯ ದಿಕ್ಕಿನಲ್ಲಿ.

ಇದಕ್ಕಾಗಿ ಎಲ್ಲಾ ಸಾಂವಿಧಾನಿಕ ಪ್ರಾಧಿಕಾರ ಮತ್ತು ಸಂಸ್ಥೆಗಳು ಹಾಕಿರುವ ಪರಿಮಿತಿಗಳನ್ನು ತೊಡೆದುಹಾಕಬೇಕಾಗುತ್ತದೆ.

ಸಂಸತ್ತು: ಸಂಸತ್ತನ್ನು ಶಿಥಿಲಗೊಳಿಸುವುದರೊಂದಿಗೆ ಮತ್ತು ಯಾವುದೇ ಅರ್ಥಪೂರ್ಣ ಚರ್ಚೆ ಅಥವಾ ಸಮಿತಿಗಳ ಕಾರ್ಯನಿರ್ವಹಣೆ ನಡೆಯದಂತೆ ಮಾಡುವ ಮೂಲಕ ಇದು ಪ್ರಾರಂಭವಾಗುತ್ತದೆ. ಸಂಸತ್ತನ್ನು ಒಂದು ಬಹುಮತದ ದಬ್ಬಾಳಿಕೆಯ ಮಟ್ಟಕ್ಕೆ  ಇಳಿಸಲಾಗಿದೆ.

ಕೃಷಿ ಮಸೂದೆಗಳನ್ನು ಪಾಸು ಮಾಡಿಸಿಕೊಂಡ ರೀತಿ

ಇದು ಅಪಾಯಕಾರಿ. ಭಾರತೀಯ ಸಂವಿಧಾನವನ್ನು ಕೇಂದ್ರವಾಗಿಟ್ಟುಕೊಂಡು,  ಶಾಸಕರು ಜನರಿಗೆ ಜವಾಬುದಾರರರು ಮತ್ತು ಸರ್ಕಾರ ಶಾಸಕಾಂಗಕ್ಕೆ ಜವಾಬುದಾರ ಎಂಬುದರ ಮೂಲಕ  ಜನತೆಯ ಸಾರ್ವಭೌಮತೆಯ ಚಲಾವಣೆಯಾಗಬೇಕು. ಇದು “ನಾವು ಜನತೆ” ನಮ್ಮ ಸಾರ್ವಭೌಮತೆಯನ್ನು ಚಲಾಯಿಸುವ ರೀತಿ. ಸಂಸತ್ತು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ  ಜನತೆಯ ಈ ಸಾರ್ವಭೌಮತೆ ಶಿಥಿಲಗೊಳ್ಳುತ್ತದೆ.

ಇದರ ಜತೆಯಲ್ಲೇ ನ್ಯಾಯಾಂಗದ ಸ್ವಾತಂತ್ರ್ಯವನ್ನು(ಪರಿಚ್ಛೇದ 370 ರದ್ದತಿಯನ್ನು, ಸಿಎಎಯನ್ನು ಪ್ರಶ್ನಿಸಿರುವ ಅರ್ಜಿಗಳು ವಿಚಾರಣೆಗೇ ಬರದೇ ಹಾಗೆಯೇ ಉಳಿದಿವೆ); ಚುನಾವಣಾ ಆಯೋಗದ ನಿಷ್ಪಕ್ಷಪಾತತೆ ಮತ್ತು ಸಿಬಿಐ, ಸಿಎಜಿ, ಜಾರಿ ಹಾಳುಗೆಡವಲಾಗುತ್ತಿದೆ. ಅವುಗಳಲ್ಲಿ ಕೆಲವನ್ನು ಬಹಿರಂಗವಾಗಿ ಕೇಂದ್ರ ಸರ್ಕಾರದ ಹಾಗೂ ಗೃಹ ಸಚಿವಾಲಯದ ರಾಜಕೀಯ ಅಂಗವಾಗಿ ಬಳಸಲಾಗುತ್ತಿದೆ.

ಮಾಧ್ಯಮ: ಆರ್.ಎಸ್.ಎಸ್. ತನ್ನ ಕಾರ್ಯಸೂಚಿಯನ್ನು ಸಾಕಾರಗೊಳಿಸುವಲ್ಲಿ ಯಶಸ್ವಿಯಾಗಬೇಕಾದರೆ, ಸರ್ಕಾರದ ಕಥನಗಳನ್ನು “ವಸ್ತುನಿಷ್ಟ ಸುದ್ದಿಗಳು” ಎಂದು ಬಿಂಬಿಸುತ್ತಾ ಸರ್ಕಾರಿ-ಪರ ಸುಳ್ಳುಗಳಿಗೆ ಒತ್ತಾಸೆ ಕೊಡುವ ಹಾಗೂ ಧೃವೀಕರಣವನ್ನು ತೀಕ್ಷ್ಣಗೊಳಿಸುವ ಸರ್ಕಾರದ ಪ್ರಚಾರಗಳನ್ನು ಸಕ್ರಿಯವಾಗಿ ಮುಂದೊತ್ತುವ ಒಂದು ಬಹುಮಟ್ಟಿಗೆ ಗುಲಾಮನಾಗಿರುವ ಮಾಧ್ಯಮದ ಅಗತ್ಯವಿರುತ್ತದೆ

ಕಳೆದ ಎರಡು ವರ್ಷಗಳಲ್ಲಿ ಕಾರ್ಪೊರೇಟ್ ಮಾಧ್ಯಮಗಳು ಸರ್ಕಾರದ ‘ತುತ್ತೂರಿ ಊದುವ’ ದೀನಾವಸ್ಥೆಯನ್ನು ತಲುಪಿರುವುದನ್ನು ಸ್ವತಂತ್ರ ಭಾರತ ಹಿಂದೆಂದೂ ಕಂಡಿಲ್ಲ.

ವಿವೇಚನೆಯ ಮೇಲೆ ದಾಳಿ: ಆರ್.ಎಸ್.ಎಸ್.ನ ಯೋಜನೆ ಸಫಲವಾಗಬೇಕಾದರೆ ವಿವೇಚನೆ, ವೈಚಾರಿಕತೆ ಹಾಗೂ ವೈಜ್ಞಾನಿಕ ಮನೋಭಾವಗಳು ಸಾರ್ವಜನಿಕ ಅಭಿಪ್ರಾಯಗಳ ಮೇಲೆ ಪ್ರಭಾವ ಬೀರಲು ಖಂಡಿತವಾಗಿಯೂ ಸಾಧ್ಯವಾಗಬಾರದು. ವೈಜ್ಞಾನಿಕ ಮನೋಭಾವವನ್ನು ನಾಶ ಮಾಡಿ, ಅದರ ಸ್ಥಾನದಲ್ಲಿ ಗೊಡ್ಡು ಸಂಪ್ರದಾಯಶರಣತೆ, ಮೂಢನಂಬಿಕೆಗಳು ಪ್ರಾಬಲ್ಯ ಸಾಧಿಸಿ ಹಿಂದುತ್ವ ರಾಷ್ಟ್ರದ ಉದ್ದೇಶವನ್ನು ಈಡೇರಿಸಿಕೊಳ್ಳುವ ಯತ್ನ ನಡೆಯುತ್ತಿದೆ. ವಿವೇಚನೆ ಹಾಗೂ ವೈಚಾರಿಕತೆಯ ಕೇಂದ್ರಗಳಾದ ವಿಶ್ವವಿದ್ಯಾಲಯಗಳ ಮೇಲೆ ದಾಳಿ ನಡೆದು ಅವೈಚಾರಿಕತೆ ಮೇಲುಗೈ ಪಡೆಯಲು ಅನುವು ಮಾಡಿಕೊಟ್ಟು ಇತಿಹಾಸ ಮರುರಚನೆಯ ಆರ್.ಎಸ್.ಎಸ್.ನ ಯೋಜನೆಗೆ ಸಹಾಯ ಮಾಡುವ ಯತ್ನ ನಡೆದಿದೆ; ಭಾರತದ ಸಮ್ಮಿಶ್ರ ಚರಿತ್ರೆಯ ಅಧ್ಯಯನದ ಸ್ಥಾನದಲ್ಲಿ ಹಿಂದೂ ಪುರಾಣವನ್ನು ಹಾಗೂ ಭಾರತೀಯ ದರ್ಶನಗಳ ಶ್ರೀಮಂತ ವೈವಿಧ್ಯತೆಯ ಸ್ಥಾನದಲ್ಲಿ ಹಿಂದೂ ದೈವವಾದವನ್ನು ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಕೊರೊನಾ ಮಹಾರೋಗದ ಸಂದರ್ಭದಲ್ಲಿ ಹೊಸ ಶಿಕ್ಷಣ ನೀತಿಯನ್ನು ಪ್ರಜಾಪ್ರಭುತ್ವ-ವಿರೋಧಿ ರೀತಿಯಲ್ಲಿ ಜಾರಿ ಮಾಡುತ್ತಿರುವುದರ ನಿಜವಾದ ಉದ್ದೇಶವೇ ಇದೇ ಆಗಿದೆ.

ಸಂಕೇತಗಳು: ಅಂತಿಮವಾಗಿ, “ನವ ಭಾರತ”ದ ಕಥನವು ಸ್ವತಂತ್ರ ಭಾರತದ ಸಂಕೇತಗಳ ಸ್ಥಾನದಲ್ಲಿ  ತನ್ನದೇ ಆದ ಸಂಕೇತಗಳನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ. ಸಾಕಾರಗೊಳ್ಳದಿದ್ದಾಗ್ಯೂ ಬುಲೆಟ್ ರೈಲು, ಬೃಹದಾಕಾರದ ಪ್ರತಿಮೆಗಳು, ನವದೆಹಲಿಯ ಸೆಂಟ್ರಲ್ ವಿಸ್ಟಾ ಎಂಬ ಮರುಅಭಿವೃದ್ಧಿಯ ನಿರ್ಮಾಣದಂತಹ  ಭ್ರಾಂತಿಕಾರಕ ಯೋಜನೆಗಳೆಲ್ಲವೂ ಕೂಡ ತನ್ನ ಫ್ಯಾಸಿಸ್ಟ್ ಆಳ್ವಿಕೆಯನ್ನು ಉಜ್ವಲಗೊಳಿಸಬೇಕಾಗಿದ್ದ ಬರ್ಲಿನ್ನಿನ ಹಿಟ್ಲರನ ಗೊಮ್ಮಟವನ್ನು ನೆನಪಿಸುತ್ತವೆ. ಅದು  ಎರಡನೇ ವಿಶ್ವ ಯುದ್ಧದಿಂದಾಗಿ ಸಾಕಾರಗೊಳ್ಳಲಿಲ್ಲ ಎಂಬುದು ಸಮಾಧಾನದ ಸಂಗತಿ!

for central vista-no photo
ಮಹಾಸೋಂಕಿನ ನಡುವೆಯೇ ಸೆಂಟ್ರಲ್‍ ವಿಸ್ತಾ ಕಾಮಗಾರಿ ನಡೆಯುತ್ತಿದೆ-ಫೋಟೋ ನಿಷಿದ್ಧ!

ಭೀತಿಗ್ರಸ್ತ ಎರಡು ವರ್ಷಗಳು

ಕಳೆದ ಎರಡು ವರ್ಷಗಳು ಭಾರತದ ಜನರಿಗೆ ಹಾಗೂ ನಮ್ಮ ಸಾಂವಿಧಾನಿಕ ಗಣತಂತ್ರಕ್ಕೆ ನಿಜವಾಗಿಯೂ ಭೀತಿಗ್ರಸ್ತವಾಗಿದ್ದವು. ಭಾರತದ ಜನರನ್ನು, ಅವರ ಜೀವಗಳನ್ನು ಮತ್ತು ಅವರ ಬದುಕಿನ ಗುಣಮಟ್ಟವನ್ನು ಉಳಿಸುವ, ಭಾರತದ ಸಾಂವಿಧಾನಿಕ ಗಣತಂತ್ರವನ್ನು ಬಲಪಡಿಸುವ ಹಾಗೂ ರಕ್ಷಿಸುವ ಮತ್ತು ನಮ್ಮ ಜನರ ಅವಿಭಾಜ್ಯ ಪ್ರಜಾಪ್ರಭುತ್ವ ಹಕ್ಕುಗಳು, ಸಮಾನತೆ ಹಾಗೂ ನಾಗರಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಸಲುವಾಗಿ ಭಾರತೀಯ ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಮೌಲ್ಯಗಳನ್ನು ಹಾಗೂ ಹಕ್ಕುಗಳನ್ನು ಪ್ರೀತಿಸುವ ಹಾಗೂ ಗೌರವಿಸುವ ಎಲ್ಲರೂ ಭಾರತೀಯ ಗಣತಂತ್ರದ ಹಾಗೂ ನಮ್ಮ ಜನರ ಮೇಲಿನ ಪ್ರಹಾರವನ್ನು ಪ್ರತಿರೋಧಿಸಲು ಹಾಗೂ ಸೋಲಿಸಲು ಒಂದುಗೂಡಬೇಕಿರುವುದು ನಮ್ಮ ಈಗಿನ ಕರ್ತವ್ಯವಾಗಿದೆ

ಅನು: ಟಿ ಸುರೇಂದ್ರ ರಾವ್

Leave a Reply

Your email address will not be published. Required fields are marked *