ಕೋವಿಡ್ ಹಾಗೂ ಲಾಕ್‌ಡೌನ್‌ಗಳ ದುಸ್ಥಿತಿಗೆ ಪರಿಹಾರಗಳ ಸಮರ್ಪಕ ಪ್ಯಾಕೇಜ್‌ಗಾಗಿ ಒತ್ತಾಯಿಸಿ ಮನವಿ

ಕೋವಿಡ್‌ ಹಾಗೂ ಅದರ ಪರಿಣಾಮವಾಗಿ ಲಾಕ್‌ಡೌನ್‌ ಜಾರಿಯಿಂದಾಗಿ ಸರಕಾರ ಕ್ರಮಗಳನ್ನು ಅನುಸರಿಸುತ್ತಿದೆ. ಆದರೆ, ಇದರ ಭಾಗವಾಗಿ ಜನತೆ ಮತ್ತಷ್ಟು ಸಂಕಟಗಳಿ ಈಡಾಗುತ್ತಿರುವ ಹಿನ್ನೆಲೆಯಲ್ಲಿ ಕೆಲವು ಹಕ್ಕೊತ್ತಾಯಗಳನ್ನು ಮಂಡಿಸಿರುವ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಕೂಡಲೇ ಪರಿಹರಿಸಬೇಕೆಂದು ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದೆ. ಮನವಿ ಪತ್ರದ ಮೂರ್ಣ ವಿವರ ಹೀಗಿವೆ:

ದಿನಾಂಕ: 15.06.2021

ಇವರಿಗೆ,
ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರಕಾರ,

ವಿಧಾನಸೌಧ,  ಬೆಂಗಳೂರು.

ಮಾನ್ಯರೇ,

ವಿಷಯ: ಕೋವಿಡ್ ಹಾಗೂ ಲಾಕ್‌ಡೌನ್‌ಗಳ ದುಸ್ಥಿತಿಗೆ ಪರಿಹಾರಗಳ ಸಮರ್ಪಕ ಪ್ಯಾಕೇಜ್‌ಗಾಗಿ ಒತ್ತಾಯಿಸಿ ಮನವಿ

ಉಲ್ಲೇಖ : 1) ದಿನಾಂಕ : ಮೇ 05, 2021 ರಂದು ನಾವು ನೀಡಿದ ಮನವಿ
2) ದಿನಾಂಕ : ಜೂನ್- 01, 2021 ರಂದು ನಾವು ನೀಡಿದ ಮನವಿ

ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಜ್ಞರ ಸೂಚನೆಯಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದರಿಂದ, ಕೋವಿಡ್-19ರ ಎರಡನೇ ಅಲೆಯ ಬಾಧೆಗೆ ದೇಶ ಹಾಗೂ ರಾಜ್ಯವು ತುತ್ತಾಗಬೇಕಾಯಿತು. ಈ ದುಸ್ಥಿತಿ ಮತ್ತಷ್ಠು ಉಲ್ಬಣಗೊಳ್ಳಲು ಯಾವುದೇ ಪೂರ್ವಬಾವಿ  ಕ್ರಮಗಳನ್ನು ಕೈ ಗೊಳ್ಳದೇ ಮೇಲಿಂದ, ಮೇಲೆ ಲಾಕ್ ಡೌನ್ ಗಳನ್ನು ಹೇರಲಾದದು ಕೂಡಾ ರಾಜ್ಯದ ಜನತೆಯನ್ನು ಆರ್ಥಿಕವಾಗಿ ಅತ್ಯಂತ ದುಸ್ಥಿತಿಗೀಡು ಮಾಡಿತಲ್ಲದೇ ಕೋವಿಡ್ ಮತ್ತಷ್ಠು ವಿಸ್ತಾರಗೊಳ್ಳಲು ನೆರವಾಯಿತು. ಇದರಿಂದಾಗಿ ರಾಜ್ಯದಲ್ಲಿ ಹಲವು ಶೂಸೃಸೆಗಳ ಕೊರತೆಯುಂಟಾಗಿ ಸಾವಿರಾರು ಅಮಾಯಕರು ಪ್ರಾಣ ಕಳೆದುಕೊಳ್ಳುವಂತಾಯಿತೆಂಬುದು ತಮ್ಮ ಗಮನಕ್ಕಿದೆ.

ಇದಲ್ಲದೇ, ಜನರ ಮೇಲೆ ಪೆಟ್ರೋಲಿಯಂ ಉತ್ಪನ್ನಗಳ ಮತ್ತು ವಿದ್ಯುತ್ ದರ ಹಾಗೂ ರಸಾಯನಿಕ ಗೊಬ್ಬರಗಳ ಮತ್ತು ಇವುಗಳಿಂದಾಗಿ ಸಾರಿಗೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆಯ ಹೊರೆಯನ್ನು ಹೇರಲಾಗಿದೆ‌.

ಕೃಷಿ ಭೂಮಿ ಹಾಗೂ ಎಲ್ಲರ ಕಸುಬುಗಳನ್ನು, ಕಸಿಯುವ ಮತ್ತು ಕಾರ್ಮಿಕರನ್ನು ಹಾಗೂ ಗ್ರಾಹಕ ಸಮುದಾಯಗಳನ್ನು ಲೂಟಿಗೊಳಪಡಿಸಲು, ಕಾರ್ಪೋರೇಟ್ ಕಂಪನಿಗಳ ಪರವಾದ ಕಾಯ್ದೆಗಳನ್ನು ಮತ್ತು ವಿದ್ಯುತ್, ಸಾರಿಗೆ, ಹಣಕಾಸು ಮುಂತಾದ ಸಾರ್ವಜನಿಕ ಉದ್ದಿಮೆಗಳನ್ನು ಕಾರ್ಪೋರೇಟ್ ಲೂಟಿಗೆ ತೆರೆಯಲಾಗಿದೆ. ಜನರ ಈ ಗಂಭೀರ ದುಸ್ಥಿತಿಯ ಸಂದರ್ಭದಲ್ಲಿಯೇ, ವಿರೋಧದ ನಡುವೆ ಅವುಗಳ ಜಾರಿಯ ಕ್ರೌರ್ಯವನ್ನು ಮೆರೆಯುತ್ತಿರುವುದು ತೀವ್ರ ಖಂಡನೀಯವಾಗಿದೆ.

ಇವುಗಳ ಜೊತೆ, ಆಡಳಿತ ಪಕ್ಷದ ತಮ್ಮ ಕೆಲ ಶಾಸಕರು, ಸಂಘಪರಿವಾರದ ಶಕ್ತಿಗಳು, ಬೆಡ್, ಔಷಧಿ, ಲಸಿಕೆ, ಆಮ್ಲಜನಕಗಳ ಕಾಳಸಂತೆಯಲ್ಲಿ ತೊಡಗಿವೆ ಮತ್ತು ಜಾತಿ ಹಾಗೂ ರಾಜಕೀಯ ತಾರತಮ್ಯ ಎಸಗುತ್ತಿವೆ.

ಜನರ ಪ್ರಾಣ ಹಾಗೂ ಆರೋಗ್ಯಕ್ಕಿಂತಲೂ, ಕಾರ್ಪೋರೇಟ್ ಲೂಟಿಯೇ ಸರಕಾರಗಳಿಗೆ ಮುಖ್ಯವಾಗಿರುವುದು ವಿಷಾಧನೀಯವಾಗಿದೆ.

ಈ ಎಲ್ಲ ದುಷ್ಪರಿಣಾಮಗಳನ್ನು ರಾಜ್ಯದ ದುಡಿಯುವ ಜನರು ವರ್ತಕರು ಹಾಗೂ ಕೈಗಾರಿಕೆಗಳು, ಅಸಹಾಯಕರು, ದಲಿತರು, ಆದಿವಾಸಿಗಳು, ಮಹಿಳೆಯರು, ತೀವ್ರವಾಗಿ ಅನುಭವಿಸುತ್ತಿದ್ದಾರೆ.

ಇಂತಹ ಕೊಲೆಪಾತಕ ದುಸ್ಥಿತಿಗಳಿಗೆ ಕಾರಣವಾದ ತಮ್ಮ ಸರಕಾರಗಳೇ ಜನತೆಗೆ ಪರಿಹಾರ ನೀಡಬೇಕಾಗಿದೆ.

ಜನರ ಒತ್ತಡಕ್ಕೆ ಮಣಿದು, ಒಲ್ಲದ ಮನಸ್ಸಿನಿಂದ  ಅಗ್ಗದ ಪ್ರಚಾರ ಪಡೆಯಲು  ಕೇವಲ 1,423 ಕೋಟಿ ರೂಗಳ ಪರಿಹಾರದ ಎರಡು ಅಸಮರ್ಪಕ ಪ್ಯಾಕೇಜ್ ಗಳನ್ನು ತಾವು ಘೋಷಿಸಿದ್ದೀರಿ. ಇವುಗಳು ಯಾವುದೇ ರೀತಿಯಲ್ಲೂ ಜನತೆಯ ಕೋವಿಡ್ ಮತ್ತಿತರೇ ಭಾರೀ ಆರ್ಥಿಕ ಸಂಕಷ್ಠಕ್ಕೆ ಪರಿಹಾರಗಳಾಗಿಲ್ಲ ಎಂದು ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳು ಸ್ಪಷ್ಠಪಡಿಸುತ್ತೇವೆ.

ಜನತೆಯ ಒತ್ತಾಯ ಹಾಗೂ ಸುಪ್ರೀಂ ಕೋರ್ಟ್‌ ಮದ್ಯಪ್ರವೇಶಕ್ಕೆ ಮಣಿದು 18 ವರ್ಷಕ್ಕೆ ಮೇಲಿನವರಿಗೆ ಉಚಿತ ಲಸಿಕೆ ನೀಡುವುದಾಗಿ ಕೇಂದ್ರ ಸರಕಾರ ಹೇಳಿರುವುದು ದೇಶದ ಜನತೆಯ ಹೋರಾಟಕ್ಕೆ ದೊರೆತ ಜಯವಾಗಿದೆ. ಆದರೇ, ಲಾಕ್ ಡೌನ್ ಪರಿಹಾರವಾಗಿ ಕೇಂದ್ರ ಸರಕಾರ ನೀಡಿರುವುದು ಕೇವಲ 10 ಕೆಜಿ ಮುಗ್ಗುಲು ಅಕ್ಕಿ ಮಾತ್ರವೇ? ಇತರ ಪರಿಹಾರದ ಘೋಷಣೆ ಮಾಡಲಿಲ್ಲ. ಇಂತಹ ಸಂಕಷ್ಠದ ಸಂದರ್ಭದಲ್ಲೂ ರಾಜ್ಯಗಳಿಗೆ ಕೊಡಬೇಕಾದ ಜಿಎಸ್ ಟಿ ಪಾಲನ್ನು ನೀಡದೇ ಸತಾಯಿಸುತ್ತಿರುವುದು ಹೇಯ ವರ್ತನೆಯಾಗಿದೆ. ರಾಜ್ಯ ಸರಕಾರ ಬಡವರಿಗೆ ನೀಡುವ ಅಕ್ಕಿಯ ಕಡಿತವನ್ನು ಹಿಂಪಡೆದಿಲ್ಲ. ಹೊಲಗಳಲ್ಲಿ ಕೊಳೆಯಲು ಬಿಟ್ಟ  ಉತ್ಪನ್ನಗಳಿಗೆ ಸೂಕ್ತ ಪರಿಹಾರ ಈಗಲೂ ನೀಡಿಲ್ಲ. ಕೂಲಿಕಾರರು, ರೈತರು, ಕಸುಬುದಾರರು, ಕಾರ್ಮಿಕರು, ವಿದ್ಯಾವಂತ ನಿರುದ್ಯೋಗಿಗಳಿಗೆ ನೆರವಿಲ್ಲ.

ಇಡೀ ರಾಜ್ಯದ 6.8 ಕೋಟಿ ಜನತೆ ಕೋವಿಡ್ ಸಂಕಟದಲ್ಲಿದ್ದರೇ ರಾಜ್ಯ ಸರಕಾರ ಕೇವಲ 5 ಲಕ್ಷ ಜನರಿಗೆ ಮಾತ್ರವೇ ಪರಿಹಾರ ಘೋಷಿಸಿದೆ. ಕುಟುಂಬಕ್ಕೊಬ್ಬರಿಗೆ ಮಾತ್ರವೇ ಪರಿಹಾರವೆಂಬ ತಮ್ಮ ಸರಕಾರದ ನೀತಿಯಿಂದ ಬಹುತೇಕರು ಬೇಸ್ತು ಬೀಳಲಿದ್ದಾರೆ.

ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳಂತೆ ಪರಿಹಾರಗಳನ್ನು ನೀಡಿ ಜನರನ್ನು ರಕ್ಷಿಸಲು ಮರಳಿ ನಾವು ಒತ್ತಾಯಿಸುತ್ತೇವೆ.

ಹಕ್ಕೊತ್ತಾಯಗಳು:

1)     ಉಚಿತ ಹಾಗೂ ಸಾರ್ವತ್ರಿಕ ಲಸಿಕೀಕರಣಕ್ಕೆ ಕೂಡಲೇ ಕ್ರಮವಹಿಸಬೇಕು.

2)     ಈ ಕೆಳಕಂಡ ಅಂಶಗಳನ್ನು ಒಳಗೊಂಡ ಸಮಗ್ರ ಪರಿಹಾರದ ಪ್ಯಾಕೇಜ್ ಮೊತ್ತವನ್ನು ಘೋಷಿಸಬೇಕು. ಕೇಂದ್ರ ಸರಕಾರ ನೀಡಬೇಕಾದ ಜಿಎಸ್ ಟಿ ಪಾಲನ್ನು ಪಡೆಯಬೇಕು.

ಅ)   ಹಾಸಿಗೆ, ಲಸಿಕೆ, ಔಷದಿ, ಆಮ್ಲಜನಕಗಳ ಹಗರಣಗಳು, ಜಾತಿ ಹಾಗೂ ರಾಜಕೀಯ ತಾರತಮ್ಯದ ಪ್ರಕರಣಗಳನ್ನು ಸ್ವತಂತ್ರ ಉನ್ನತ ನ್ಯಾಯಾಂಗ ತನಿಖೆಗೊಳಪಡಿಸ ಬೇಕು. ಈ ಅರೋಪಿ ಶಾಸಕರಿಂದ ರಾಜಿನಾಮೆಗಳನ್ನು ಪಡೆಯಬೇಕು. ಈ ಕಾರಣಗಳಿಂದ ಸತ್ತ ಎಲ್ಲ ನಾಗರೀಕರಿಗೆ ಮತ್ತು ಅನಾಥ ಮಕ್ಕಳಿಗೆ ಪರಿಹಾರ ನೀಡಬೇಕು.

ಆ)    ಆದಾಯ ತೆರಿಗೆಯಡಿ ಬಾರದ ಎಲ್ಲಾ ಕುಟುಂಬಗಳಿಗೆ ಮಾಸಿಕ ತಲಾ 10 ಕೇಜಿ ಸಮಗ್ರ ಆಹಾರಧಾನ್ಯ ಮತ್ತು ಆರೋಗ್ಯ ಸುರಕ್ಷತಾ ಸಾಮಗ್ರಿಗಳ ಪೊಟ್ಟಣವನ್ನು ಮತ್ತು ಕೇಂದ್ರ ಸರಕಾರದ ಸಹಾಯ ಪಡೆದು 10,000 ರೂ.ಗಳ ನೆರವನ್ನು ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ನೀಡಬೇಕು. ದಲಿತರು, ಬಡವರ ಪ್ರದೇಶಗಳಲ್ಲಿ ಇಂದಿರಾ ಕ್ಯಾಂಟೀನ್ ಗಳನ್ನು ವಿಸ್ಥರಿಸಬೇಕು, ಬಲಗೊಳಿಸಬೇಕು. ಬಡವರಿಗೆ ನೀಡಲಾಗುವ ಪಡಿತರ ಕಡಿತವನ್ನು ವಾಪಾಸು ಪಡೆಯಬೇಕು.

ಇ)    ಹೊಲಗಳಲ್ಲಿಯೇ ಕೊಳೆತು ಹೋದ ಹೂ, ಹಣ್ಣು, ಆಲುಗಡ್ಡೆ, ಈರುಳ್ಳಿ ಮುಂತಾದ ಬೆಳೆಗಳಿಗೆ, ಎಕರೆಗೆ ಕನಿಷ್ಠ 25,000 ರೂಗಳನ್ನು ಒದಗಿಸಬೇಕು ಮತ್ತು ರಾಜ್ಯದ ರೈತರು, ಕೂಲಿಕಾರರು, ಕಾರ್ಮಿಕರು, ಕಸುಬುದಾರರು, ದಲಿತರು, ಆದಿವಾಸಿಗಳು, ಅಲ್ಪ ಸಂಖ್ಯಾತರು ಮತ್ತು ಮಹಿಳೆಯರ ಎಲ್ಲ ರೀತಿಯ ಸಾಲಗಳನ್ನು ಕೇರಳದ ಋಣ ಮುಕ್ತ ಕಾಯ್ದೆ ಮಾದರಿಯಲ್ಲಿ ಮನ್ನಾ ಮಾಡಬೇಕು.

ಈ)   ಕಾರ್ಮಿಕರಿಗೆ ಲಾಕ್ ಡೌನ್ ಕಾಲಾವಧಿಯ ವೇತನ ಮತ್ತು ಉದ್ಯೋಗ ರಕ್ಷಿಸಲು ಅಗತ್ಯ ಆದೇಶ ಹೊರಡಿಸಿ ಜಾರಿಗೊಳಿಸಬೇಕು.

ಉ)   ಉದ್ಯೋಗ ಖಾತ್ರಿಯನ್ನು ನಗರಗಳಿಗೆ ಹಾಗೂ 200 ದಿನಗಳಿಗೆ ವಿಸ್ಥರಿಸಬೇಕು. ಕೂಲಿಯನ್ನು ಕೃಷಿ ರಂಗದ ವೇತನದಂತೆ 424 ರೂ. ಗಳಿಗೆ ಹೆಚ್ಚಿಸಬೇಕು.

ಊ) ಕೋವಿಡ್ ಮುಂಚೂಣಿಯ ಎಲ್ಲಾ ಕಾರ್ಯಕರ್ತರಿಗೆ ವಿಮೆ ಸೌಲಭ್ಯ- ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಮಸಣ ಕೆಲಸಗಾರರು, ಮುನಿಸಿಪಲ್ ಮುಂತಾದ ಶುಚಿ ಕಾರ್ಯದಲ್ಲಿ ತೊಡಗಿದವರಿಗೂ ಸೌಲಭ್ಯಗಳನ್ನು ವಿಸ್ಥರಿಸಬೇಕು.

3)     ಕೇಂದ್ರ ಸರಕಾರ ಜಾರಿಗೊಳಿಸುವ ಕಾರ್ಪೋರೇಟ್ ಕಂಪನಿಗಳ ಪರವಾದ ರೈತ ಹಾಗೂ ಕಾರ್ಮಿಕರ ಮತ್ತು ಗ್ರಾಹಕರ ವಿರೋಧಿಗಳಾದ ತಿದ್ದುಪಡಿ ಕೃಷಿ ಕಾಯ್ದೆಗಳು ಹಾಗೂ ಕಾರ್ಮಿಕ ಸಂಹಿತೆಗಳು, ಅಗತ್ಯ ವಸ್ತುಗಳ ತಿದ್ದುಪಡಿ ಕಾಯ್ದೆ – 2020,

ವಿದ್ಯುತ್ ತಿದ್ದುಪಡಿ ಮಸೂದೆ- 2020 ಹಾಗೂ ರಾಜ್ಯ ಸರಕಾರದ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ – 2020, ಎಪಿಎಂಸಿ ತಿದ್ದುಪಡಿ ಕಾಯ್ದೆ -2020, ಜಾನುವಾರು ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ -2020 ಗಳನ್ನು ತಕ್ಷಣ ಹಿಂಪಡೆಯ ಬೇಕು. ಸಾರ್ವಜನಕ ರಂಗದ ಉದ್ದಿಮೆಗಳ ಖಾಸಗೀಕರಣವನ್ನು ತಡೆಯಬೇಕು.

4) ಕನಿಷ್ಟ ಬೆಂಬಲ ಬೆಲೆ ಖಾತರಿಯ ಕಾಯ್ದೆ ಮತ್ತು ಪ್ರಕೃತಿ ವಿಕೋಪಗಳಿಂದ  ರೈತರ ಸಂರಕ್ಷಣೆಗೆ ಋಣ ಮುಕ್ತ ಕಾಯ್ದೆ ಗಳನ್ನು ಜಾರಿಗೊಳಿಸಬೇಕು.

ವಂದನೆಗಳೊಂದಿಗೆ,

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸ್‌ವಾದಿ)-ಸಿಪಿಐ(ಎಂ)

ಸಾತಿ ಸುಂದರೇಶ್, ರಾಜ್ಯ ಕಾರ್ಯದರ್ಶಿ,  ಭಾರತ ಕಮ್ಯುನಿಸ್ಟ್ ಪಕ್ಷ-ಸಿಪಿಐ

ಕೆ‌. ಉಮಾ, ರಾಜ್ಯ ಕಾರ್ಯದರ್ಶಿ, ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯ(ಕಮ್ಯೂನಿಸ್ಟ್‌)-ಎಸ್‌ಯುಸಿಐ(ಸಿ)

ಕ್ಲಿಫ್ಟನ್ ರೋಜಾರಿಯೋ ಜಿ ಬಿ, ಕಾರ್ಯದರ್ಶಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ, ಲೆನಿನ್ ವಾದಿ) ಲಿಬರೇಷನ್, ಸಿಪಿಐ(ಎಂಎಲ್‌) ಲಿಬರೇಷನ್‌

ಜಿ.ಆರ್. ಶಿವಶಂಕರ್, ಕಾರ್ಯದರ್ಶಿ, ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್-ಎಐಎಫ್‌ಬಿ

ಚಾಮರಸ ಮಾಲೀ ಪಾಟೀಲ, ಅಧ್ಯಕ್ಷರು, ಸ್ವರಾಜ್ ಇಂಡಿಯಾ

ಮೋಹನ್ ರಾಜ್, ಅಧ್ಯಕ್ಷರು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ-ಆರ್‌ಪಿಐ

Leave a Reply

Your email address will not be published. Required fields are marked *