ಪೆಟ್ರೋಲ್ ಬೆಲೆಯೇರಿಕೆಗಳನ್ನು ಹಿಂತೆಗೆದುಕೊಳ್ಳಬೇಕು, ಅಗತ್ಯ ಸರಕುಗಳ, ಔಷಧಿಗಳ ಬೆಲೆಗಳನ್ನು ನಿಯಂತ್ರಿಸಬೇಕು, ಜೂನ್ 16 ರಿಂದ 30- ಪ್ರತಿಭಟನಾ ಪಕ್ಷಾಚರಣೆ: ಎಡಪಕ್ಷಗಳ ಕರೆ

ಎಲ್ಲ ಆವಶ್ಯಕ ಸರಕುಗಳ ಬೆಲೆಗಳು ಸತತವಾಗಿ ಏರುತ್ತಿರುವುದರಿಂದಾಗಿ ಜನಗಳ ಜೀವನಾಧಾರಗಳ ಮೇಲೆ ಹೆಚ್ಚೆಚ್ಚು ದಾಳಿಗಳು ನಡೆಯುತ್ತಿವೆ. ಮೋದಿ ಸರಕಾರ ಕೋವಿಡ್ ಆರೋಗ್ಯ ವಿಪತ್ತಿನ ಹಾವಳಿಗಳನ್ನು ಎದುರಿಸಲು ಜನರಿಗೆ ನೆರವಾಗುವ ಬದಲು ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳನ್ನು ಏರಿಸುತ್ತಲೇ ಇದೆ. ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸಬೇಕೆಂದು ಐದು ಎಡಪಕ್ಷಗಳು, ಸಿಪಿಐ(ಎಂ), ಸಿಪಿಐ, ಸಿಪಿಐ(ಎಂಎಲ್)-ಲಿಬರೇಷನ್, ಫಾರ್ವರ್ಡ್ ಬ್ಲಾಕ್ ಮತ್ತು ಆರ್‌ಎಸ್‌ಪಿ ಜನಗಳಿಗೆ ಕರೆ ನೀಡಿವೆ.

ಮೇ 2 ರಂದು ವಿಧಾನಸಭಾ ಚುನಾವಣಾ ಫಲಿತಾಂಶಗಳು ಪ್ರಕಟವಾದ ಮೇಲೆ ಕನಿಷ್ಟ 21 ಬಾರಿ ಬೆಲೆಗಳನ್ನು ಮೋದಿ ಸರಕಾರ ಏರಿಸಿದೆ. ಇದು ಬೇರೆಲ್ಲ ಸರಕುಗಳ ಮೇಲೂ ಸರಣಿ ಪರಿಣಾಮಗಳನ್ನು ಬೀರಿ ಹಣದುಬ್ಬರದ ಸುರಳಿಗಳನ್ನು ಹರಿಯಬಿಟ್ಟಿದೆ. ಇದರಿಂದಾಗಿ ಸಗಟು ಬೆಲೆ ಸೂಚ್ಯಂಕ ಕಳೆದ ಹನ್ನೊಂದು ವರ್ಷಗಳಲ್ಲಿ ಕಾಣದಷ್ಟು ಮಟ್ಟಕ್ಕೆ ಏರಿದೆ.

ಆಹಾರ ವಸ್ತುಗಳ ಬೆಲೆಗಳು ಎಪ್ರಿಲ್ ತಿಂಗಳಲ್ಲಿ 5% ದಷ್ಟು ಏರಿವೆ. ಪ್ರಾಥಮಿಕ ಸರಕುಗಳ ಬೆಲೆಗಳು 10.16% ದಷ್ಟು ಮತ್ತು ತಯಾರಿತ ಸರಕುಗಳ ಬೇಲೆಗಳು 9.01% ದಷ್ಟು ಏರಿವೆ. ಇವು ಚಿಲ್ಲರೆ ಮಾರುಕಟ್ಟೆಯನ್ನು ಸೇರುವ ವೇಳೆಗೆ, ಬಳಕೆದಾರರು ಇನ್ನೂ ಹೆಚ್ಚಿನ ಬೆಲೆಗಳನ್ನು ತೆರಬೇಕಾಗುತ್ತಿದೆ.

ಅತ್ತ ಅರ್ಥವ್ಯವಸ್ಥೆ ಆಳವಾದ ಹಿಂಜರಿತ, ನಿರುದ್ಯೋಗದ ನಾಗಾಲೋಟ, ಜನಗಳ ಖರೀದಿ ಶಕ್ತಿಯಲ್ಲಿ ಕುಸಿತ ಮತ್ತು ಹಸಿವಿನ ಮಟ್ಟ ಹೆಚ್ಚುತ್ತಿರುವುದನ್ನು ಕಾಣುತ್ತಿರುವಾಗ ಇವೆಲ್ಲ ಸಂಭವಿಸುತ್ತಿವೆ ಎಂದು ಎಡಪಕ್ಷಗಳು ಹೇಳಿವೆ.

ಕಾಳಸಂತೆ ಮತ್ತು ಕಳ್ಳ ದಾಸ್ತಾನು ಸರಕಾರೀ ಕೃಪಾಪೋಷಣೆಯಲ್ಲೇ ನಡೆಯುತ್ತಿದೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಮೋದಿ ಸರಕಾರ ಇಂತಹ ಕಾಳಸಂತೆಯನ್ನು, ಮುಖ್ಯವಾಗಿ ಜನಗಳು ಬದುಕುಳಿಯಲು ಆವಶ್ಯಕವಾದ ಔಷಧಿಗಳಲ್ಲಿ ಕಾಳಸಂತೆಯನ್ನು ಕಟ್ಟುನಿಟ್ಟಾದ ಕ್ರಮಗಳ ಮೂಲಕ ಹತ್ತಿಕ್ಕಬೇಕು.

ತಕ್ಷಣವೇ ಮೋದಿ ಸರಕಾರ ಆದಾಯ ತೆರಿಗೆ ವ್ಯಾಪ್ತಿಯೊಳಕ್ಕೆ ಬಾರದ ಕುಟುಂಬಗಳಿಗೆ ಆರು ತಿಂಗಳು ಮಾಸಿಕ 7500ರೂ.ಗಳ ನಗದು ವರ್ಗಾವಣೆ ಮಾಡಬೇಕು.

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಅಡಿಯಲ್ಲಿ 5 ಕೆಜಿ ಆಹಾರಧಾನ್ಯಗಳನ್ನು ಕೊಡುವುದನ್ನು ದೀಪಾವಳಿಯವರೆಗೆ ವಿಸ್ತರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದಾರೆ. ಇದು ಏನೇನೂ ಸಾಲದು. ಇದನ್ನು ಎಲ್ಲ ವ್ಯಕ್ತಿಗಳಿಗೆ ತಿಂಗಳಿಗೆ 10 ಕೆಜಿಯಂತೆ ಕೊಡಬೇಕು, ಇದರಲ್ಲಿ ಬೇಳೆಕಾಳುಗಳು, ಅಡುಗೆ ಎಣ್ಣೆ, ಸಕ್ಕರೆ, ಮಸಾಲೆ ಸಾಮಾನುಗಳು, ಚಹಾ ಇತ್ಯಾದಿಗಳೂ ಸೇರಿರುವ ಆಹಾರ ಕಿಟ್‌ಗಳನ್ನು ಕೂಡ ಉಚಿತವಾಗಿ ಹಂಚಬೇಕು.

ಇವನ್ನೆಲ್ಲ ಆಗ್ರಹಿಸಿ ಜೂನ್ 16 ರಿಂದ 30 ರ ವರೆಗೆ ಪ್ರತ್ರಿಭಟನಾ ಪಕ್ಷಾಚರಣೆ ನಡೆಸಬೇಕು ಎಂದು ಎಡಪಕ್ಷಗಳು ಜನತೆಗೆ ಕರೆ ನೀಡಿವೆ. ಈ ಪ್ರತಿಭಟನೆಗಳನ್ನು ಕೋವಿಡ್ ಪರಿಸ್ಥಿತಿಗಳಿಂದಾಗಿ ಮುನ್ನೆಚ್ಚರಿಕೆಗಳು ಮತ್ತು ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಲೇ, ಆಯಾಯ ರಾಜ್ಯಗಳಲ್ಲಿನ ಮೂರ್ತ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ನಡೆಸಬೇಕು ಎಂದು ಈ ಐದು ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ್ ಯೆಚುರಿ, ಡಿ.ರಾಜ, ದೀಪಂಕರ್ ಭಟ್ಟಾಚಾರ್ಯ, ದೇಬಬ್ರತ ಬಿಸ್ವಾಸ್ ಮತ್ತು ಮನೋಜ್ ಭಟ್ಟಾಚಾರ್ಯ ಜಂಟಿ ಹೇಳಿಕೆಯಲ್ಲಿ ಕರೆ ನೀಡಿದ್ದಾರೆ.

Leave a Reply

Your email address will not be published. Required fields are marked *