ಪದವಿ ವ್ಯಾಸಂಗ ನಾಲ್ಕು ವರ್ಷಕ್ಕೆ ವಿಸ್ತರಿಣೆಯನ್ನು ರದ್ದುಪಡಿಸಲು ಮುಖ್ಯಮಂತ್ರಿಗಳಿಗೆ ಮನವಿ

ಕರ್ನಾಟಕ ರಾಜ್ಯ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಭಾಗವಾಗಿ, ಪದವಿ ವ್ಯಾಸಂಗವನ್ನು ಮೂರು ವರ್ಷಗಳಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದನ್ನು ಕೂಡಲೇ ವಾಪಸ್ಸು ಪಡೆಯಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ), ಕರ್ನಾಟಕ ರಾಜ್ಯ ಸಮಿತಿಯು ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಿದೆ. ಮನವಿ ಪತ್ರದ ಹೇಳಿಕೆ ಕೆಳಗಿನಂತಿವೆ:

ದಿನಾಂಕ : 19.06.2021

ಇವರಿಗೆ,
ಶ್ರೀ ಬಿ.ಎಸ್. ಯಡಿಯೂರಪ್ಪರವರು
ಮುಖ್ಯ ಮಂತ್ರಿಗಳು,
ಕರ್ನಾಟಕ ಸರಕಾರ,
ವಿಧಾನ ಸೌಧ, ಬೆಂಗಳೂರು.

ಮಾನ್ಯರೇ,

ವಿಷಯ: ಪದವಿ ವ್ಯಾಸಂಗ ಪೂರೈಸಲು  ಶಿಕ್ಷಣದ ಅವಧಿಯನ್ನು ನಾಲ್ಕು ವರ್ಷಗಳಿಗೆ ವಿಸ್ತರಣೆ ಮಾಡಿರುವುದನ್ನು ಮತ್ತು ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಕಲಿಕೆಯನ್ನು ಮೊಟಕು ಮಾಡಿರುವುದನ್ನು ವಾಪಾಸು ಪಡೆದು ಈ ಹಿಂದಿನ ರೀತಿಯಲ್ಲಿ ಮುಂದುವರೆಸಬೇಕು

ಕರ್ನಾಟಕ ರಾಜ್ಯ ಸರಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿರುವ ಭಾಗವಾಗಿ, ಪದವಿ ವ್ಯಾಸಂಗವನ್ನು ಮೂರು ವರ್ಷಗಳಿಂದ ನಾಲ್ಕು ವರ್ಷಗಳಿಗೆ ವಿಸ್ತರಿಸಲಾಗಿದೆ  ಮತ್ತು ಮೂರು ವರ್ಷಗಳ ಪದವಿ ವ್ಯಾಸಂಗದ ಸಂದರ್ಭದಲ್ಲಿದ್ದ ನಾಲ್ಕು ಸೆಮಿಸ್ಟರ್‌ಗಳ ಕನ್ನಡ ಭಾಷಾ ವ್ಯಾಸಂಗವನ್ನು ಎರಡು ಸೆಮಿಸ್ಟರ್‌ಗಳಿಗೆ ಮೊಟಕುಗೊಳಿಸಲಾಗಿದೆ. ರಾಜ್ಯ ಸರಕಾರದ ಈ ಎರಡು ಕ್ರಮಗಳು ವಿದ್ಯಾರ್ಥಿ ಹಾಗೂ ಕನ್ನಡ ವಿರೋಧಿ ಮತ್ತು ರಾಜ್ಯದ ಅಭಿವೃದ್ದಿ ವಿರೋಧಿ ಕ್ರಮಗಳಾಗಿವೆಯೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ತಕ್ಷಣವೇ ಆ ಎರಡು ಜನ ವಿರೋಧಿ ಕ್ರಮಗಳನ್ನು ವಾಪಾಸು ಪಡೆಯುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ.

ಪದವಿ ವ್ಯಾಸಂಗವನ್ನು ನಾಲ್ಕು ವರ್ಷಗಳಿಗೆ ವಿಸ್ತರಿಸಿರುವುದು ಕೇವಲ ಮೂರು ವರ್ಷಗಳಲ್ಲೆ ಪದವಿ ವ್ಯಾಸಂಗ ಮುಗಿಸಿ, ನಿರುದ್ಯೋಗ ಸೈನ್ಯ ಸೇರುವವರನ್ನು ಕನಿಷ್ಠ ಒಂದು ವರ್ಷ ನಿಯಂತ್ರಿಸುವ ದುಷ್ಟ ಯೋಚನೆಯಾಗಿದೆ ಮತ್ತು ವಿದ್ಯಾರ್ಥಿ ಹಾಗೂ ಆತನ ಪೋಷಕರು ಮತ್ತೊಂದು ವರ್ಷದ ವ್ಯಾಸಂಗಕ್ಕೆ ದುಬಾರಿ ಶುಲ್ಕ ಮತ್ತಿತರೇ ವೆಚ್ಚ ಭರಿಸುವ ಹೊರೆಯನ್ನು ಹೇರುವ ಮತ್ತು ಆ ಮೂಲಕ ಖಾಸಗೀ ಶಿಕ್ಷಣ ಸಂಸ್ಥೆಗಳ ಲೂಟಿಯ ಹರಿವನ್ನು ವಿಸ್ತರಿಸುವ ಸಂಚಾಗಿದೆ.

ಅದೇ ರೀತಿ, ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಕಲಿಯುವ ಅವಕಾಶವನ್ನು ನಾಲ್ಕು ಸೆಮಿಸ್ಟರ್‌ಗಳ ಅವಧಿಗಳಿಂದ ಎರಡು ಸೆಮಿಸ್ಟರ್‌ಗಳ ಅವಧಿಗೆ ಮೊಟಕು ಮಾಡಿರುವುದು ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಕಲಿಕೆಯನ್ನು ಮೊಟಕು ಮಾಡುವ ಮತ್ತು ಆ ಮೂಲಕ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಅರಿವನ್ನು ಮೊಟಕು ಮಾಡಿದಂತಾಗಿದೆ. ಆ ಮೂಲಕ ಅದು ಕನ್ನಡ ವಿರೋಧಿಯಾಗಿದೆ.

ಆದ್ದರಿಂದ, ಈ ಎರಡು ಜನವಿರೋಧಿ ಕ್ರಮಗಳನ್ನು ರಾಜ್ಯ ಸರಕಾರ ಕೂಡಲೇ ವಾಪಾಸು ಪಡೆದು ಈ ಹಿಂದಿನಂತೆಯೇ ಮುನ್ನಡೆಸಲು ವಿನಂತಿ.

 

ಯು. ಬಸವರಾಜ ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *