ಸ್ಟಾನ್‍ ಸ್ವಾಮಿಯವರ ಸಾವಿಗೆ ಹೊಣೆಗಾರರನ್ನು ಶಿಕ್ಷಿಸಿ: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಫಾದರ್ ಸ್ಟಾನ್‍ ಸ್ವಾಮಿಯವರ ಸಾವಿನ ಬಗ್ಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ತನ್ನ ತೀವ್ರ ದುಃಖವನ್ನು ವ್ಯಕ್ತಪಡಿಸಿದೆ.

ಝಾರ್ಖಂಡಿನ ದುರ್ಗಮ ಪ್ರದೇಶಗಳಲ್ಲಿ ಆದಿವಾಸಿಗಳ ಹಕ್ಕುಗಳು ಮತ್ತು ಉದ್ದೇಶಗಳನ್ನು ಪ್ರತಿಪಾದಿಸುತ್ತಿದ್ದ ಈ 84 ವರ್ಷದ ಕ್ರೈಸ್ತ ಪಾದ್ರಿ ಮತ್ತು ಸಕ್ರಿಯ ಹೋರಾಟಗಾರರನ್ನು ಕಳೆದ ಅಕ್ಟೋಬರಿನಲ್ಲಿ ಕರಾಳ ಯು.ಎ.ಪಿ.ಎ. ಅಡಿಯಲ್ಲಿ ಕಪೋಲಕಲ್ಪಿತ ಆಪಾದನೆಗಳನ್ನು ಹೊರಿಸಿ ಜೈಲಿಗೆ ಹಾಕಲಾಗಿತ್ತು ಮತ್ತು ಅವರನ್ನು ಭೀಮ ಕೊರೆಗಾಂವ್‍ ಕೇಸಿನಲ್ಲಿ ತಳುಕು ಹಾಕಲು ಪ್ರಯತ್ನಿಸಲಾಗಿತ್ತು.

ನಿತ್ರಾಣಗೊಳಿಸುವ ಪಾರ್ಕಿನ್ಸನ್ ಕಾಯಿಲೆ ಸೇರಿದಂತೆ ಅವರ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನಿರಾಕರಿಸಲಾಗಿತ್ತು. ದ್ರವಪದಾರ್ಥಗಳನ್ನು ಕುಡಿಯಲು ಅವರಗೆ ಅಗತ್ಯವಾಗಿದ್ದ ಒಂದು ಸಿಪ್ಪರ್(ಹೀರಕ)ನ್ನು ಕೂಡ ಅವರಿಗೆ ಕೊಟ್ಟದ್ದು ವಿವಿಧ ಮಾನವ ಹಕ್ಕುಗಳ ಮತ್ತು ವಿಕಲಾಂಗರ ಹಕ್ಕುಗಳ ಸಂಘಟನೆಗಳು ನಡೆಸಿದ ಅಭಿಯಾನದ ನಂತರವೇ ಎಂಬುದನ್ನು ಇಲ್ಲಿ ಒತ್ತಿ ಹೇಳಬೇಕಾಗುತ್ತದೆ.

ಇದನ್ನು ಓದಿ: ಭೀಮಾ-ಕೊರೆಗಾಂವ್ ಹಿಂಸಾಚಾರ: ನ್ಯಾಯ ಒದಗಿಸಿ

ಅವರನ್ನು ಇಟ್ಟಿದ್ದ ತಲೋಜ ಜೈಲು ಕೈದಿಗಳಿಂದ ತುಂಬಿಹೋಗಿದ್ದಂತದ್ದು. ಅಲ್ಲಿ ಕೊವಿಡ್‍ ಸೋಂಕು ಅಪಾರ ಪ್ರಮಾಣದಲ್ಲಿ ಹೆಚ್ಚಿದಾಗ ಅವರನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವ ಮನವಿಗಳಿಗೆ ಕಿವಿಗೊಡಲೇ ಇಲ್ಲ. ಜಾಮೀನು ಕೊಡಬೇಕು, ಮನೆಗೆ ಕಳಿಸಬೇಕು ಎಂಬ ಅವರ ವಿನಂತಿಗಳನ್ನು ತಿರಸ್ಕರಿಸಲಾಯಿತು. ಕೋವಿಡ್‍ ಸೋಂಕು ತಗಲಿ ಅವರ ದೇಹಸ್ಥಿತಿ ಹದಗೆಡಲಾರಂಭಿಸಿದಾಗಲಷ್ಟೇ ಮುಂಬೈ ಹೈಕೋರ್ಟಿನ ಮಧ್ಯಪ್ರವೇಶದ ನಂತರ ಅವರನ್ನು ಒಂದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅದರೆ ಆವೇಳೆಗೆ  ಕಸ್ಟಡಿಯಲ್ಲಿ ಅವರ ಸಾವನ್ನು ತಡೆಯುವಲ್ಲಿ ತುಂಬಾ ವಿಳಂಬವಾಗಿತ್ತು.

ಅವರ ಮೇಲೆ ಸುಳ್ಳು ಕೇಸುಗಳನ್ನು ಹೇರಿದವರು, ಅವರು ಜೈಲಿನಲ್ಲಿಯೇ ಇರುವಂತೆ ಮಾಡಿದವರು ಮತ್ತು ಅಮಾನವೀಯವಾಗಿ ನಡೆಸಿಕೊಂಡವರು ಈಗ ಉತ್ತರಕೊಡಬೇಕಾಗಿದೆ, ಇದರಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ರಾಜಕೀಯ ದುರುದ್ದೇಶದ ಕೇಸುಗಳಲ್ಲಿ, ಯುಎಪಿಎ, ರಾಜದ್ರೋಹದಂತಹ ಕರಾಳ ಕಾಯ್ದೆಗಳ ದುರ್ಬಳಕೆ ಮಾಡಿ ಭೀಮ ಕೊರೆಗಾಂವ್‍ ಮತ್ತು ಇತರ ಕೇಸುಗಳಲ್ಲಿ ಬಂಧನದಲ್ಲಿ ಇಟ್ಟಿರುವ ಎಲ್ಲರನ್ನೂ ತಕ್ಷಣವೇ ಬಿಡುಗಡೆ ಮಾಡಲೇ ಬೇಕಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ಜನರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಬೇಕು ಮತ್ತು ಸಂವಿಧಾನದ ಅಡಿಯಲ್ಲಿ ಖಾತ್ರಿಪಡಿಸಿರುವ ಮೂಲಭೂತ ಹಕ್ಕುಗಳ ರಕ್ಷಣೆಗೆ ಎದ್ದು ನಿಲ್ಲಬೇಕು ಎಂದು ಕರೆ ನೀಡಿದೆ.

Leave a Reply

Your email address will not be published. Required fields are marked *