216 ಕೋಟಿಯಿಂದ 135 ಕೋಟಿಗಿಳಿದ ಲಸಿಕೆ ಡೋಸ್ ಲಭ್ಯತೆ ಗಾಬರಿ ಹುಟ್ಟಿಸುವಂತದ್ದು, ರಫೆಲ್ ವ್ಯವಹಾರದ ಬಗ್ಗೆ ಫ್ರೆಂಚ್ ತನಿಖೆ-ಈಗಲಾದರೂ ಜೆಪಿಸಿ ರಚಿಸಬೇಕು: ಸಿಪಿಐ(ಎಂ)

ಜೂನ್ 3ರಂದು ಸಭೆ ಸೇರಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ, ಆಗಸ್ಟ್-ಡಿಸೆಂಬರ್ 2021ರ ಅವಧಿಯಲ್ಲಿ ದೇಶದಲ್ಲಿ 216 ಕೋಟಿ ಡೋಸುಗಳು ಲಭ್ಯವಾಗುತ್ತವೆ ಎಂದು ಮೇ 13ರಂದು ಹೇಳಿಕೊಂಡ ಮೋದಿ ಸರಕಾರ, ಜೂನ್ 26ರಂದು ಸುಪ್ರಿಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಸಂಖ್ಯೆಯನ್ನು 135 ಕೋಟಿಗೆ ಗಮನಾರ್ಹವಾಗಿ ಇಳಿಸಿರುವುದು ವರ್ಷಾಂತ್ಯದ ಗುರಿ ತಲುಪುವಲ್ಲಿ ಒಂದು ಗಾಬರಿಪಡಿಸುವ ಕೊರತೆ ಎಂದು ಹೇಳಿದೆ. ರಫೆಲ್ ವ್ಯವಹಾರ ಮತ್ತೆ ಸುದ್ದಿಯಾಗುತ್ತಿದ್ದು, ಈ ವ್ಯವಹಾರಕ್ಕೆ  ಆಳವಾದ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತೊಳೆಯುವ ಕೃತ್ಯದ ಕೆಸರು ಮೆತ್ತಿಕೊಂಡಿದೆ ಎಂಬ ಸಂದೇಹಗಳನ್ನು ದೃಢಪಡಿಸುತ್ತಿದೆಯಾದ್ದರಿಂದ ಈ ಇಡೀ ಪ್ರಕರಣದಲ್ಲಿ ಪ್ರಧಾನ ಮಂತ್ರಿಗಳು ಮತ್ತು ಸರಕಾರದ ಪಾತ್ರವನ್ನು ತನಿಖೆ ಮಾಡಲು ಮತ್ತು ಈ ವ್ಯವಹಾರದ ಸತ್ಯಾಂಶವನ್ನು ಸ್ಥಾಪಿಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದೆ.

ಇದಲ್ಲದೆ ಬೆಲೆಯೇರಿಕೆ ಮತ್ತು ಇತರ ವಿಷಯಗಳನ್ನೂ ಚರ್ಚಿಸಿದ
ಸಭೆಯ ನಂತರ ಹೊರಡಿಸಿದ ಅದರ ಪತ್ರಿಕಾ ಹೇಳಿಕೆ ಹೀಗಿದೆ:

Covid vaccineಕೊವಿಡ್ ಲಸಿಕೆ

ಮಹಾಸೋಂಕನ್ನು ನಿಭಾಯಿಸುವ ಆಡಳಿತಗಾರರ ಪ್ರಕಾರ ಸೋಂಕಿನ ಎರಡನೇ ಅಲೆ ತಗ್ಗುತ್ತಿದೆ. ಆದರೆ ಸೋಂಕಿತರ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಆಗಿಲ್ಲ. ಇದು ಗಾಬರಿ ಮತ್ತು ಆತಂಕ ಉಂಟುಮಾಡುವಂತದ್ದು.

ನಮ್ಮ ಜನಗಳ ಜೀವಗಳನ್ನು ಉಳಿಸಲು ಮತ್ತು ಈ ಮಹಾಸೋಂಕನ್ನು ತಡೆದಿಡುವ ಏಕೈಕ ದಾರಿಯೆಂದರೆ ಒಂದು ಬೃಹತ್ ಪ್ರಮಾಣದ ಉಚಿತ ಸಾರ್ವತ್ರಿಕ ಸಾಮೂಹಿಕ ಲಸಿಕೀಕರಣ ಕಾರ್ಯಕ್ರಮ. ಈ ವರ್ಷಾಂತ್ಯದೊಳಗೆ ಎಲ್ಲ ವಯಸ್ಕರಿಗೆ ಲಸಿಕೆ ಹಾಕುವ ಗುರಿ ಸಾಧಸಲು 190 ಕೋಟಿಯಷ್ಟು ಲಸಿಕೆ ಡೋಸುಗಳ ಬೇಕಾಗುತ್ತವೆ. ಆಗಸ್ಟ್-ಡಿಸೆಂಬರ್ 2021ರ ಅವಧಿಯಲ್ಲಿ ದೇಶದಲ್ಲಿ 215 ಕೋಟಿ ಡೋಸುಗಳು ಲಭ್ಯವಾಗುತ್ತವೆ ಎಂದು ಮೇ 13ರಂದು ಹೇಳಿಕೊಂಡ ಮೋದಿ ಸರಕಾರ, ಜೂನ್ 26ರಂದು ಸುಪ್ರಿಂ ಕೋರ್ಟಿಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ಈ ಸಂಖ್ಯೆಯನ್ನು 135 ಕೋಟಿಗೆ ಗಮನಾರ್ಹವಾಗಿ ಇಳಿಸಿದೆ. ಇದು ವರ್ಷಾಂತ್ಯದ ಗುರಿ ತಲುಪುವಲ್ಲಿ ಒಂದು ಗಾಬರಿಪಡಿಸುವ ಕೊರತೆ.

ಮೋದಿ ಸರಕಾರ ತಕ್ಷಣವೇ ಜಗತ್ತಿನಲ್ಲಿ ಲಭ್ಯವಾಗುವ ಎಲ್ಲೆಡೆಗಳಿಂದಲೂ ಲಸಿಕೆಗಳನ್ನು ತರಿಸಬೇಕು ಮತ್ತು ಲಸಿಕೀಕರಣ ಅಭಿಯಾನವನ್ನು ತೀವ್ರಗೊಳಿಸಬೇಕು. ಭಾರತ ಮತ್ತು ನಮ್ಮ ಜನತೆ ಮೂರನೇ ಅಲೆಯನ್ನು ಎದುರಿಸಲು ಸಾಧ್ಯವಾಗದು, ಅದನ್ನು ಸಾಮೂಹಿಕ ಲಸಿಕೀಕರಣದ ಮೂಲಕ ತಡೆಯಲೇ ಬೇಕಾಗಿದೆ ಎಂದು ಪೊಲಿಟ್‌ಬುರೊ ಎಚ್ಚರಿಸಿದೆ.

Petrol Price hike1ಶಕ್ತಿ ಉಡುಗಿಸುವ ಬೆಲೆಯೇರಿಕೆ

ಪ್ರತಿದಿನ ಎಂಬಂತೆ ಏರುತ್ತಿರುವ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಜನಗಳ ಜೀವನಾಧಾರಗಳನ್ನು ನೇರವಾಗಿ ಕುಂಠಿತಗೊಳಿಸುತ್ತಿವೆಯಲ್ಲದೆ, ಸರ್ವತೋಮುಖ ಹಣದುಬ್ಬರದ ಸುರುಳಿ ಏರಿ ಬರುವಂತೆ ಮಾಡಿವೆ. ಎಲ್ಲ ಆಹಾರ ಪದಾರ್ಥಗಳ ಬೆಲೆಗಳು ಏರುತ್ತಿವೆ. ಅಡುಗೆ ಎಣ್ಣೆಗಳ ಬೆಲೆಗಳು ಗಗನಕ್ಕೇರಿವೆ. ಅಡುಗೆ ಅನಿಲದ ಸಬ್ಸಿಡಿ ದರಗಳ ಸಿಲಿಂಡರ್ ವೆಚ್ಚವೂ ಕಳೆದ ಏಳು ತಿಂಗಳಲ್ಲಿ ರೂ.250ರಷ್ಟು ಏರಿದೆ.

ಈ ಮೋದಿ ಸರಕಾರ ಪೆಟ್ರೋಲ್ ಮೇಲಿನ ಅಬಕಾರಿ ಸುಂಕಗಳನ್ನು 256ಶೇಕಡದಷ್ಟು ಮತ್ತು ಡೀಸೆಲ್ ಮೇಲೆ 820ಶೇಕಡದಷ್ಟು ಹೆಚ್ಚಿಸಿದೆ. ಈಗಾಗಲೆ ಮಹಾಸೋಂಕನ್ನು ಎದುರಿಸಬೇಕಾದ್ದರಿಂದ ಹೆಚ್ಚಿನ ವೆಚ್ಚಗಳ ಹೊರೆಯನ್ನು ಹೊತ್ತಿರುವ ಜನಗಳ ಬದುಕುಗಳನ್ನು ಹಾಳುಗೆಡವಿ, ಅವರ ಖರ್ಚಿನಲ್ಲಿ ಕೇಂದ್ರ ಸರಕಾರ ಆದಾಯಗಳನ್ನು ಬಾಚಿಕೊಳ್ಳುತ್ತಿದೆ.

ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಈ ಅಬಕಾರಿ ಸುಂಕಗಳನ್ನು ರದ್ದು ಮಾಡಬೇಕು ಮತ್ತು ಜೀವನಾವಶ್ಯಕ ಸರಕುಗಳ ಬೆಲೆಗಳನ್ನು ನಿಯಂತ್ರಿಸಲು ಅಗತ್ಯ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ.

ಮೋದಿ ಸರಕಾರ ತಕ್ಷಣವೇ ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ ರೂ.7500 ನೇರ ನಗದು ವರ್ಗಾವಣೆಯನ್ನು ಮಾಡಬೇಕು ಮತ್ತು ದೈನಂದಿನ ಬಳಕೆಯ ಎಲ್ಲ ಅಗತ್ಯ ಪದಾರ್ಥಗಳು ಉಳ್ಳ ಉಚಿತ ಆಹಾರ ಕಿಟ್‌ಗಳನ್ನು ಹಂಚಬೇಕು ಎಂದು ಅದು ಪುನರುಚ್ಛರಿಸಿದೆ.

Rafale Scamರಫೆಲ್ ವ್ಯವಹಾರ

ನರೇಂದ್ರ ಮೋದಿ ಸರಕಾರ ನೆಡಸಿರುವ 2016ರ ಬಹು-ಮಿಲಿಯ ಡಾಲರುಗಳ ರಫೆಲ್ ಯುದ್ಧ ವಿಮಾನಗಳ ವ್ಯವಹಾರದ ಬಗ್ಗೆ ಫ್ರೆಂಚ್ ಸಾರ್ವಜನಿಕ ನ್ಯಾಯ ವಿಚಾರಣೆ ಸೇವಾ ವ್ಯವಸ್ಥೆಯಾದ ಪಿ.ಎನ್.ಎಫ್. ಒಬ್ಬ ಫ್ರೆಂಚ್ ನ್ಯಾಯಾಧೀಶರಿಂದ ತನಿಖೆಗೆ ಆದೇಶ ನೀಡಿದೆ. ಒಂದು ಫ್ರೆಂಚ್ ತನಿಖಾ ವೆಬ್ ತಾಣ ಬಯಲಿಗೆ ತಂದಿರುವ ಈ ವ್ಯವಹಾರಕ್ಕೆ ಸಂಬಂಧಪಟ್ಟ ಅಧಿಕೃತ ಕಾಗದಪತ್ರಗಳು, ಡಸಾಲ್ ಅವಿಯೇಷನ್ ಕಂಪನಿ ಮತ್ತು ಅನಿಲ್ ಅಂಬಾನಿಯ ರಿಲಯನ್ಸ್‌ ಗುಂಪಿನ ನಡುವೆ ಮಾರ್ಚ್ 26, 2015ರಂದು, ಅಂದರೆ, ಈ ಹೊಸ ವ್ಯವಹಾರವನ್ನು, ಅದರಲ್ಲಿ ಹೆಚ್‌ಎಎಲ್‌ನ್ನು ಹೊರಗಿಡುವ ಪಕ್ರಟಣೆಯನ್ನು ಮಾಡುವ ಹದಿನೈದು ದಿನಗಳ ಮೊದಲಷ್ಟೇ, ಒಂದು ಒಪ್ಪಂದವನ್ನು ಮಾಡಿಕೊಂಡವು ಎಂಬುದನ್ನು ತೋರಿಸುತ್ತವೆ.

ಹಿಂದಿನ ಖರೀದಿ ಒಪ್ಪಂದವನ್ನು ಪ್ರಧಾನ ಮಂತ್ರಿ ಮೋದಿ ಬದಲಿಸಿ ಬಿಟ್ಟ ಈ ವ್ಯವಹಾರಕ್ಕೆ  ಆಳವಾದ ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತೊಳೆಯುವ ಕೃತ್ಯದ ಕೆಸರು ಮೆತ್ತಿಕೊಂಡಿದೆ ಎಂದು ಸಿಪಿಐ(ಎಂ) ಎತ್ತಿದ್ದ  ಸಂದೇಹಗಳನ್ನು ಇದು ಮತ್ತೊಮ್ಮೆ ದೃಢಪಡಿಸಿದೆ.

ಸೆಪ್ಟಂಬರ್ 2018ರಲ್ಲಿ  ಆಗ್ರಹಿಸಿದಂತೆ, ಈ ಇಡೀ ಪ್ರಕರಣದಲ್ಲಿ ಪ್ರಧಾನ ಮಂತ್ರಿಗಳು ಮತ್ತು ಸರಕಾರದ ಪಾತ್ರವನ್ನು ತನಿಖೆ ಮಾಡಲು ಮತ್ತು ಈ ವ್ಯವಹಾರದ ಸತ್ಯಾಂಶವನ್ನು ಸ್ಥಾಪಿಸಲು ಒಂದು ಜಂಟಿ ಸಂಸದೀಯ ಸಮಿತಿ(ಜೆಪಿಸಿ)ಯನ್ನು ರಚಿಸಬೇಕು ಎಂದು ಪೊಲಿಟ್‌ಬ್ಯುರೊ ಪುನರುಚ್ಛರಿಸಿದೆ.

OFBಕರಾಳಅಗತ್ಯ ರಕ್ಷಣಾ ಸೇವೆಗಳ ಸುಗ್ರೀವಾಜ್ಞೆ

ಭಾರತದ ರಕ್ಷಣಾ ಆಸ್ತಿಗಳನ್ನು ತಮ್ಮ ಬಂಡವಾಳಶಾಹಿ ಬಂಟರಿಗೆ ಗರಿಷ್ಟ ಲಾಭ ದೋಚಲು ಅನುಕೂಲ ಕಲ್ಪಿಸಲೆಂದು ಮಾರಾಟ ಮಾಡುವುದರ ವಿರುದ್ಧ ನ್ಯಾಯಬದ್ಧ ಪ್ರತಿಭಟನೆಗಳನ್ನು ಕಾರ್ಮಿಕ ವರ್ಗ ಮತ್ತು ಯುದ್ಧಸಾಮಗ್ರಿಗಳ ಕಾರ್ಖಾನೆಗಳ ನೌಕರರು ಮಾಡದಂತೆ ನಿಷೇಧಿಸುವ ಗುರಿಯಿಂದ ಈ ಸುಗ್ರೀವಾಜ್ಞೆಯನ್ನು ಹೊರಡಿಸಲಾಗಿದೆ ಎಂದು ಪೊಲಿಟ್‌ಬ್ಯುರೊ ಬಲವಾಗಿ ಖಂಡಿಸಿದೆ. 41 ಯುದ್ಧೋಪಕರಣಗಳ ಕಾರ್ಖಾನೆಗಳನ್ನು ಏಳು ನಿಗಮಗಳಾಗಿ ಪರಿವರ್ತಿಸಲಾಗುತ್ತದೆ. ಈ ಸಾಮರಿಕ ವಲಯದಲ್ಲಿ ಕೇವಲ ನಾಲ್ಕು ಸಾರ್ವಜನಿಕ ವಲಯದ ಘಟಕಗಳಷ್ಟೇ ಉಳಿದುಕೊಳ್ಳುತ್ತವೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಇದು ರಾಷ್ಟ್ರೀಯ ಆಸ್ತಿಗಳ ನಗ್ನ ಲೂಟಿ, ಇದರ ವಿರುದ್ಧ ಪ್ರತಿಭಟನೆಗಳು ತೀವ್ರಗೊಳ್ಳುತ್ತವೆ ಎಂದಿರುವ ಸಿಪಿಐ(ಎಂ) ಪೊಲಿಟ್‌ಬ್ಯುರೊ ಈ ಸುಗ್ರೀವಾಜ್ಞೆಯನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *