ಸುಧಾರಣೆಗಳು ಜನ-ಕೇಂದ್ರಿತವಾಗಬೇಕು, ಲಾಭ-ಕೇಂದ್ರಿತವಾಗಬಾರದು

SitaramYechury-7apr
ಸೀತಾರಾಮ್ ಯೆಚುರಿ

ಭಾರತದ ಆರ್ಥಿಕ ಸುಧಾರಣೆಗಳ ಸಂದರ್ಭದಲ್ಲಿ, “ನೀವು ಸುಧಾರಣೆಗಳ ಪರವೊ ಅಥವಾ ವಿರೋಧವೊ?” ಎಂದು ನಮ್ಮನ್ನು ಆಗಾಗ್ಗೆ ಕೇಳುತ್ತಾರೆ. ಸುಧಾರಣೆಗಳಿಗೆ ನಮ್ಮ ಬೆಂಬಲ ಅಥವಾ ವಿರೋಧವು, ಅವು ಜನರ ಹಿತಾಸಕ್ತಿಗಳಿಗೆ ಮತ್ತು ಅವರ ಜೀವನೋಪಾಯಗಳಿಗೆ ಪೂರಕವಾಗಿವೆಯೇ ಅಥವಾ ಇಲ್ಲವೇ, ಹಾಗೂ, ಸುಧಾರಣೆಗಳು ದೇಶದ ಆರ್ಥಿಕ ಸಾರ್ವಭೌಮತ್ವವನ್ನು ಬಲಪಡಿಸುತ್ತವೆಯೇ ಅಥವಾ ಇಲ್ಲವೇ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ. ಇದು ನಮ್ಮ ಸ್ಪಷ್ಟ ಅಭಿಪ್ರಾಯ ಮತ್ತು ಅದು ಮುಂದುವರಿಯುತ್ತದೆ ಕೂಡ.

ಭಾರತದಲ್ಲಿ ಮೂರು ದಶಕಗಳ ಆರ್ಥಿಕ ಸುಧಾರಣೆಗಳ ನಂತರ, ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ಮತ್ತು ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸಿ ನಮ್ಮ ರೈತರು ಏಳು ತಿಂಗಳಿಂದಲೂ ಸತತವಾಗಿ ನಡೆಸುತ್ತಿರುವ ಅಭೂತಪೂರ್ವ ಹೋರಾಟವನ್ನು ನಾವು ನೋಡುತ್ತಿದ್ದೇವೆ. ಈ ಹೋರಾಟವು, ಒಂದು ಶತಮಾನದ ಹಿಂದೆ ಚಂಪಾರಣ್ ರೈತರು ತಮ್ಮನ್ನು ಇಂಡಿಗೊ ಮರಗಳನ್ನು ಬೆಳೆಯುವಂತೆ ಬಲವಂತಪಡಿಸುತ್ತಿದ್ದ ಬ್ರಿಟಿಷರ ವಿರುದ್ಧ ನಡೆಸಿದ ಸತ್ಯಾಗ್ರಹವನ್ನು ನೆನಪಿಸುತ್ತದೆ.

ಈ ಸುಧಾರಣೆಗಳು ಬಡತನವನ್ನು ಹೆಚ್ಚಿಸಿವೆ, ಆರ್ಥಿಕ ಅಸಮಾನತೆಗಳ ಹೆಚ್ಚಳಕ್ಕೆ ಕಾರಣವಾಗಿವೆ ಮತ್ತು ಎಲ್ಲಾ ದೇಶಗಳಲ್ಲೂ ಬೇಡಿಕೆಯ ತೀವ್ರ ಕುಸಿತಕ್ಕೆ ಕಾರಣವಾಗಿವೆ ಎಂಬುದನ್ನು ಭಾರತದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲಿನ ಅನುಭವಗಳು ನಮಗೆ ಹೇಳುತ್ತವೆ. ಜಾಗತಿಕ ಆರ್ಥಿಕ ಕುಸಿತವು ಎಲ್ಲ ದೇಶಗಳ ಜನ ಜೀವನದ ಮೇಲೆ ವಿನಾಶಕಾರಿ ಪರಿಣಾಮ ಬೀರಿದೆ. ಕೋವಿಡ್ ಸಾಂಕ್ರಾಮಿಕ ರೋಗವು ಆರ್ಥಿಕ ಕುಸಿತವನ್ನು ಮತ್ತಷ್ಟು ಉಲ್ಬಣಗೊಳಿಸಿದೆ. ಈ ವಿದ್ಯಮಾನವು, ಮಾರ್ಕ್ಸ್ ಒಮ್ಮೆ ಹೇಳಿದ ಮಾತುಗಳನ್ನು ನೆನಪಿಸುತ್ತದೆ: “ಬಂಡವಾಳಶಾಹಿಯು ಅದೆಂತಹ ಬೃಹತ್ ಉತ್ಪಾದನಾ ಸಾಧನಗಳನ್ನು ಮತ್ತು ವಿನಿಮಯ ಸಾಧನಗಳನ್ನು ಸೃಷ್ಟಿಸಿದೆ ಎಂದರೆ, ನರಕ ಪ್ರಪಂಚದ ಶಕ್ತಿಯನ್ನು ನಿಯಂತ್ರಿಸಲು ಅದನ್ನು ತನ್ನ ಮಂತ್ರಗಳ ಮೂಲಕ ಸೃಷ್ಟಿಸಿದ ಮಾಂತ್ರಿಕನಿಗೂ ಸಾಧ್ಯವಾಗುವುದಿಲ್ಲ ಎನ್ನುವ ರೀತಿಯಲ್ಲಿ”.

ಭಾರತದಲ್ಲಿ ಜಾರಿಗೆ ತಂದ ಸುಧಾರಣೆಗಳು ನವ-ಉದಾರವಾದದ ಸಿದ್ಧಾಂತಕ್ಕೆ ಅನುಗುಣವಾಗಿವೆ ಮತ್ತು ಅಂತರರಾಷ್ಟ್ರೀಯ ಹಣಕಾಸು ಬಂಡವಾಳದ ಪ್ರಾಬಲ್ಯಕ್ಕೆ ಅಧೀನವಾಗಿವೆ. ಈ ಸುಧಾರಣೆಗಳ ಉದ್ದೇಶವೇ ಅನಿರ್ಬಂಧಿತ ಮತ್ತು ಗರಿಷ್ಠ ಲಾಭ ಗಳಿಕೆ. ಬಂಡವಾಳಶಾಹಿಯ ಪರಭಕ್ಷಕ ಕ್ರೂರ “ಮೃಗೀಯ ಹುಮ್ಮಸ್ಸಿ”ನ ಮೂಲಕ ಇದನ್ನು ಸಾಧಿಸಲಾಗುತ್ತದೆ. ಬಂಡವಾಳಗಾರರ ಭಕ್ಷಣೆಗಾಗಿ ಸಾರ್ವಜನಿಕ ಸ್ವತ್ತುಗಳು, ಖನಿಜ ಸಂಪನ್ಮೂಲಗಳು, ಸಾರ್ವಜನಿಕ ಸೌಲಭ್ಯಗಳು ಮತ್ತು ಸೇವೆಗಳನ್ನು (“ಬಳಕೆದಾರರ ಶುಲ್ಕಗಳನ್ನು”ಜನರ ಮೇಲೆ ಹೇರುವ ಕ್ರಮ) ಖಾಸಗೀಕರಿಸಲಾಗುತ್ತಿದೆ.

ಸುಧಾರಣೆಗಳು ಕಾರ್ಪೊರೇಟ್‌ಗಳಿಗೆ ಹಬ್ಬದೂಟವಾಗಿವೆ. ಕಳೆದ ಮೂವತ್ತು ವರ್ಷಗಳಲ್ಲಿ, ಶ್ರೀಮಂತರ ಮೇಲಿನ ತೆರಿಗೆಗಳು ಜಾಗತಿಕವಾಗಿ ಶೇಕಡಾ 79 ರಷ್ಟು ಇಳಿದಿವೆ. 2008ರ ಜಾಗತಿಕ ಆರ್ಥಿಕ ಕುಸಿತದ ನಂತರ, ಅನೇಕ ಮಂದಿ ಬಿಲಿಯನೇರ್‌ಗಳು ತಾವು ಕಳೆದುಕೊಂಡಿದ್ದ ಸಂಪತ್ತನ್ನು ಕೇವಲ ಮೂರು ವರ್ಷಗಳಲ್ಲಿ ಮರಳಿ ಪಡೆದಿದ್ದಾರೆ ಮತ್ತು 2018 ರ ಹೊತ್ತಿಗೆ ವೇಳೆಗೆ ಅದನ್ನು ದ್ವಿಗುಣಗೊಳಿಸಿಕೊಂಡಿದ್ದಾರೆ. ಇದು ಉತ್ಪಾದನೆಯ ಮೂಲಕ ಗಳಿಸಿದ ಸಂಪತ್ತಲ್ಲ. ಇದು ಷೇರು ಮಾರುಕಟ್ಟೆಯ ಜೂಜಾಟದ ಪ್ರಕ್ರಿಯೆಯಲ್ಲಿ ಬೆಳೆದಿದೆ. ಈ ವಿದ್ಯಮಾನವು, ಜಾಗತಿಕ ಆರ್ಥಿಕ ಹಿಂಜರಿತದ ಹೊಡೆತವು ಷೇರು ಮಾರುಕಟ್ಟೆಗಳ ಜೂಜುಕೋರತನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿಲ್ಲ ಎಂಬುದನ್ನು ವಿವರಿಸುತ್ತದೆ. ಮತ್ತೊಂದೆಡೆ, ಆದಾಯವನ್ನು ಕಳೆದುಕೊಂಡ ವಿಶ್ವದ ಶೇಕಡಾ 80 ಮಂದಿ ತಮ್ಮ 2008ರ ಪೂರ್ವದ ಮಟ್ಟಕ್ಕೆ ಚೇತರಿಸಿಕೊಂಡಿಲ್ಲ. ಸಂಘಟಿತ ಉದ್ಯಮದ ಮೇಲಿನ ದಾಳಿಗಳು ಮತ್ತು ಕಾರ್ಮಿಕರ ಹಕ್ಕುಗಳ ಮೇಲಿನ ದಾಳಿಗಳು ಟ್ರೇಡ್ ಯೂನಿಯನ್‌ಗಳನ್ನು ದುರ್ಬಲಗೊಳಿಸಿವೆ. ಉದಾಹರಣೆಗೆ, ಅಮೇರಿಕಾದಲ್ಲಿ 1979 ರಲ್ಲಿ ನಾಲ್ಕು ಕಾರ್ಮಿಕರಲ್ಲಿ ಒಬ್ಬನನ್ನು ಯೂನಿಯನ್ ಪ್ರತಿನಿಧಿಸುತ್ತಿದ್ದರೆ, ಇಂದು ಹತ್ತರಲ್ಲಿ ಒಬ್ಬರನ್ನು ಮಾತ್ರ ಪ್ರತಿನಿಧಿಸುತ್ತಿವೆ.

Photo1ಭಾರತ: ಅಸಮಾನತೆಗಳ ಅಸಹ್ಯಕರ ಬೆಳವಣಿಗೆ

ಸುಧಾರಣೆಗಳ ಪರಿಣಾಮವಾಗಿ, ಆರ್ಥಿಕ ಅಸಮಾನತೆಗಳು ನಾಗಾಲೋಟದಲ್ಲಿ ಸಾಗಿವೆ. ‘ಬೆಳಗುತ್ತಿರುವ ಭಾರತ’ವು ಸದಾ ಕಾಲವೂ ‘ನರಳುತ್ತಿರುವ ಭಾರತ’ದ ಹೆಗಲ ಮೇಲೆ ಸವಾರಿ ಮಾಡಿದೆ. ‘ಬೆಳಗುತ್ತಿರುವ ಭಾರತ’ದ ತೇಜಸ್ಸು ‘ನರಳುತ್ತಿರುವ ಭಾರತ’ದಿಂದ ಕಿತ್ತುಕೊಂಡಷ್ಟೂ ಹೆಚ್ಚು ದೇದೀಪ್ಯಮಾನವಾಗಿ ಬೆಳಗುತ್ತದೆ.

ಭಾರತಕ್ಕೆ ಸಂಬಂಧಿಸಿದಂತೆ, ಆಕ್ಸ್‌ಫಾಮ್ ಸಂಸ್ಥೆಯ ಇತ್ತೀಚಿನ ವರದಿಯಲ್ಲಿ “ಅಸಮಾನತೆಯ ವೈರಸ್” ಎಂಬ ಶಿರೋನಾಮೆಯಡಿಯಲ್ಲಿ ಕೆಲವು ಕುತೂಹಲಕಾರಿ ಅಂಶಗಳಿವೆ: ಭಾರತದ ನೂರು ಮಂದಿ ಬಿಲಿಯನೇರ್‌ಗಳು ಮಾರ್ಚ್ 2020 ರಿಂದ ಈಚೆಗೆ ತಮ್ಮ ಸಂಪತ್ತನ್ನು 12,97,822 ಕೋಟಿ ರೂ.ಗಳಷ್ಟು ಹೆಚ್ಚಿಸಿಕೊಂಡಿದ್ದಾರೆ. ಇದನ್ನು 138 ದಶಲಕ್ಷ ಬಡ ಭಾರತೀಯ ಜನರಿಗೆ ದೇಣಿಗೆಯಾಗಿ ನೀಡಿದರೆ, ಪ್ರತಿಯೊಬ್ಬರಿಗೂ 94,045 ರೂ. ಗಳ ಚೆಕ್ ನೀಡಬಹುದು.

ಸಾಂಕ್ರಾಮಿಕದ ಅವಧಿಯಲ್ಲಿ ಮುಖೇಶ್ ಅಂಬಾನಿ ಒಂದು ಗಂಟೆಯಲ್ಲಿ ಗಳಿಸಿದ ಸಂಪತ್ತನ್ನು ಗಳಿಸಲು ಒಬ್ಬ ಕೌಶಲ್ಯರಹಿತ ಕಾರ್ಮಿಕನಿಗೆ 10,000 ವರ್ಷಗಳು ಹಿಡಿಯುತ್ತವೆ. ಅವರು ಒಂದು ಸೆಕೆಂಡಿನಲ್ಲಿ ಗಳಿಸಿದ್ದನ್ನು ಸರಿಗಟ್ಟಲು ಮೂರು ವರ್ಷಗಳು ಹಿಡಿಯುತ್ತವೆ.

ಮತ್ತೊಂದೆಡೆ, ಏಪ್ರಿಲ್ 2020ರ ತಿಂಗಳ ಪ್ರತಿ ಗಂಟೆಯಲ್ಲಿ 170,000 ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಭಾರತದ ಬಿಲಿಯನೇರ್‌ಗಳ ಸಂಪತ್ತು 2009 ರಿಂದ ಶೇಕಡಾ 90 ರಷ್ಟು ಹೆಚ್ಚಳವಾಗಿ ಮತ್ತು ಲಾಕ್‌ಡೌನ್ ಅವಧಿಯಲ್ಲಿ ಶೇಕಡಾ 35 ರಷ್ಟು ಹೆಚ್ಚಳವಾಗಿ, 422.9 ಬಿಲಿಯನ್ ಡಾಲರ್‌ಗೆ ಏರಿದೆ. ವಾಸ್ತವವಾಗಿ, ಸಾಂಕ್ರಾಮಿಕದ ಅವಧಿಯಲ್ಲಿ ಭಾರತದ ಅಗ್ರ 11 ಬಿಲಿಯನೇರ್‌ಗಳ ಸಂಪತ್ತಿನ ಹೆಚ್ಚಳದಲ್ಲಿ ಉದ್ಯೋಗ ಖಾತ್ರಿ ಯೋಜನೆಯನ್ನು 10 ವರ್ಷಗಳವರೆಗೆ ಅಥವಾ ಆರೋಗ್ಯ ಸಚಿವಾಲಯದ ಬಜೆಟ್‌ಅನ್ನು 10 ವರ್ಷಗಳವರೆಗೆ ನಿರ್ವಹಿಸಬಹುದಾಗಿದೆ.

ಸರ್ಕಾರದ ವೆಚ್ಚದ ಪಾಲಿನಲ್ಲಿ, ಭಾರತದ ಆರೋಗ್ಯ ಬಜೆಟ್ ವಿಶ್ವದಲ್ಲೇ ನಾಲ್ಕನೇ ಅತಿ ಕಡಿಮೆಯದು. ಸಾಂಕ್ರಾಮಿಕದ ಅವಧಿಯಲ್ಲಿ ಭಾರತದ ಅಗ್ರ 11 ಬಿಲಿಯನೇರ್‌ಗಳ ಸಂಪತ್ತಿನ ಹೆಚ್ಚಳದ ಮೇಲೆ ಕೇವಲ 1% ತೆರಿಗೆ ವಿಧಿಸಿದರೆ, ಬಡವರು ಮತ್ತು ಅಂಚಿನಲ್ಲಿರುವರಿಗೆ ಕೈಗೆಟುಕುವ ಔಷಧಿಗಳನ್ನು ಒದಗಿಸುವ ಜನ-ಔಷಧಿ ಯೋಜನೆಗೆ ಒದಗಿಸಿದ ಹಂಚಿಕೆಯನ್ನು 140 ಬಾರಿ ಒದಗಿಸಬಹುದು.

ಭಾರತದಲ್ಲಿ ಜಾರಿಯಾದ ಸುಧಾರಣೆಗಳು ಲಾಭ ಕೇಂದ್ರಿತವಾಗಿವೆಯೇ ಹೊರತು ಜನಕೇಂದ್ರಿತವಾಗಲಿಲ್ಲ. ಈ ಸುಧಾರಣೆಗಳು ಬಂಡವಾಳಗಾರರಿಗೆ ಪ್ರಯೋಜನವಾಗಿವೆ ಮತ್ತು ಆರ್ಥಿಕ ಅಸಮಾನತೆಗಳನ್ನು ತೀವ್ರವಾಗಿ ಹೆಚ್ಚಿಸಿವೆ. ಪ್ರಧಾನಿ ಮೋದಿ ಅವರು ಬಂಡವಾಳಗಾರರನ್ನು ಸಂಪತ್ತಿನ ಸೃಷ್ಟಿಕರ್ತರು ಎಂದು ಬಣ್ಣಿಸುತ್ತಾರೆ ಮತ್ತು ಅವರನ್ನು ಗೌರವಿಸುವಂತೆ ನಮ್ಮನ್ನು ಆಗ್ರಹಿಸುತ್ತಾರೆ. ವಾಸ್ತವವಾಗಿ, ಸಂಪತ್ತು ಎಂದರೆ, ದುಡಿಯುವ ಜನರು ಉತ್ಪಾದಿಸುವ ಮೌಲ್ಯದ ನಗದೀಕರಣವಲ್ಲದೆ ಬೇರೇನೂ ಅಲ್ಲ. ಆದ್ದರಿಂದ, ಈ ಮೌಲ್ಯ ಸೃಷ್ಟಿಕರ್ತರನ್ನು ನಾವು ಗೌರವಿಸಬೇಕು ವಿನಃ ಬಂಡವಾಳಗಾರರನ್ನಲ್ಲ.

ಬಡತನ: ವಿಪರೀತ ಹೆಚ್ಚಳ

ಸ್ವಾತಂತ್ರ್ಯನಂತರ ಅನುಸರಿಸುತ್ತಿದ್ದ ಮೂಲ ಪೌಷ್ಠಿಕಾಂಶದ ಮಾದರಿಯ ಮೂಲಕ ಬಡತನವನ್ನು ಅಳೆಯುವ ಪದ್ಧತಿಯನ್ನು ಮೋದಿ ಸರ್ಕಾರ ಕೈಬಿಟ್ಟಿದೆ. ಈ ಹಿಂದೆ ನಿಗದಿಪಡಿಸಿದ ನಿಯಮಗಳ ಪ್ರಕಾರ, ಗ್ರಾಮೀಣ ಪ್ರದೇಶದಲ್ಲಿ ದಿನಕ್ಕೆ 2,200 ಕ್ಯಾಲೊರಿಗಳಿಗಿಂತ ಕಡಿಮೆ ಮತ್ತು ನಗರ ಭಾರತದಲ್ಲಿ 2,100 ಕ್ಯಾಲೊರಿಗಳಿಗಿಂತ ಕಡಿಮೆ ಪ್ರಮಾಣದ ಆಹಾರ ಸೇವಿಸುವ ವ್ಯಕ್ತಿಗಳನ್ನು ಬಡವರು ಎಂದು ಪರಿಗಣಿಸಲಾಗುತ್ತಿತ್ತು. ಈ ಮಾದರಿಯ ಆಧಾರದ ಮೇಲೆ 1993-94ರಲ್ಲಿ ನಡೆಸಿದ ಎನ್.ಎಸ್.ಎಸ್. ಸಮೀಕ್ಷೆಯು ಗ್ರಾಮೀಣ ಪ್ರದೇಶದಲ್ಲಿ ಶೇಕಡಾ 58 ಮತ್ತು ನಗರ ಭಾರತದಲ್ಲಿ ಶೇಕಡಾ 57ರಷ್ಟು ಜನರು ಈ ಬಡತನ ರೇಖೆಗಿಂತ ಕೆಳಗಿದ್ದಾರೆ ಎಂದು ತೋರಿಸಿತು. ಮುಂದಿನ ಇದೇ ರೀತಿಯ 2011-12ರ ಎನ್.ಎಸ್.ಎಸ್. ಸಮೀಕ್ಷೆಯು ಈ ಶೇಕಡಾವಾರು ಪ್ರಮಾಣವನ್ನು ಕ್ರಮವಾಗಿ 68 ಮತ್ತು 65 ಇತ್ತು ಎಂದು ತೋರಿಸಿತು. ನಂತರದ ಸಮೀಕ್ಷೆಯನ್ನು 2017-18 ರಲ್ಲಿ ನಡೆಸಲಾಯಿತು. ಆದರೆ, ಈ ಸಮೀಕ್ಷೆಯ ಫಲಿತಾಂಶವನ್ನು/ವರದಿಯನ್ನು ಮೋದಿ ಸರ್ಕಾರ ಬಚ್ಚಿಟ್ಟಿತು, ಸತ್ಯವನ್ನು ಮರೆಮಾಚಲು. ಈ ಒಂದು ಕೃತ್ಯವು ಎನ್.ಎಸ್.ಎಸ್ ಗಳಿಸಿದ್ದ ವಿಶ್ವ-ವಿಖ್ಯಾತಿಯನ್ನು ನಾಶಪಡಿಸಿದೆ. ಆದಾಗ್ಯೂ, ಸೋರಿಕೆಯಾದ ದತ್ತಾಂಶದ ಪ್ರಕಾರ, ಗ್ರಾಮೀಣ ಭಾರತದಲ್ಲಿ ತಲಾ ನೈಜ ಬಳಕೆ ವೆಚ್ಚದಲ್ಲಿ (ಕೇವಲ ಆಹಾರ ಸೇವನೆ ಮಾತ್ರವಲ್ಲ) ಶೇಕಡಾ ಒಂಬತ್ತರಷ್ಟು ಕುಸಿತವಾಗಿದೆ. ಸಾಂಕ್ರಾಮಿಕವು ಅಪ್ಪಳಿಸುವ ಮೊದಲೇ ಗ್ರಾಮೀಣ ಮತ್ತು ನಗರ ಭಾರತಗಳೆರಡರಲ್ಲೂ ಬಡತನವು ಅಭೂತಪೂರ್ವ ಪ್ರಮಾಣದಲ್ಲಿ ಹೆಚ್ಚಿಗೆಯಾಗಿತ್ತು ಎಂಬುದು ಸ್ಪಷ್ಟವಾಗಿದೆ. ಆನಂತರದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.

ಕೋವಿಡ್ ಸಾಂಕ್ರಾಮಿಕವು ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆಯು ಜನರ ಜೀವವನ್ನು ರಕ್ಷಿಸುವಲ್ಲಿ ಸಂಪೂರ್ಣವಾಗಿ ಅಸಮರ್ಪಕವಾಗಿದೆ ಎಂಬುದನ್ನು ಬಟಾ ಬಯಲು ಮಾಡಿದೆ. ಈಗ ನಮ್ಮನ್ನು ಕಾಡುತ್ತಿರುವ ಆರ್ಥಿಕ ಹಿಂಜರಿತವು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿದೆ. ಜಾಗತಿಕ ನವ-ಉದಾರವಾದಿ ಪಥದ ಭಾಗವಾಗಿರುವ ಈ ಆರ್ಥಿಕ ಹಿಂಜರಿತದಲ್ಲಿ ಮಿತವ್ಯಯ ಕ್ರಮಗಳಿಂದ ಹಿಡಿದು ವೇತನ ಕಡಿತ, ಉದ್ಯೋಗ ನಾಶ, ಕೆಲಸದಿಂದ ವಜಾ ಮತ್ತು ಮುಖ್ಯವಾಗಿ, 2016ರ ನೋಟು ಅಮಾನ್ಯೀಕರಣದಿಂದಾದ ಕಿರು ಉತ್ಪಾದನೆಯ ನಾಶದವರೆಗೆ ಸಾಧ್ಯವಿರುವ ಎಲ್ಲಾ ರೀತಿಯಲ್ಲಿ ಜನರ ಶೋಷಣೆಯನ್ನು ತೀವ್ರಗೊಳಿಸುವ ಮೂಲಕ ಲಾಭವನ್ನು ಗರಿಷ್ಠಗೊಳಿಸಲಾಗಿದೆ. ಭಾರತದ ಕೃಷಿಯನ್ನು, ಗುತ್ತಿಗೆ ಕೃಷಿಯ ಮೂಲಕ, ಕಾರ್ಪೊರೇಟ್ ಲೂಟಿಗೆ ಈಗ ತೆರೆದಿಡಲಾಗಿದೆ. ಪರಿಣಾಮವಾಗಿ, ಆಹಾರದ ಕೊರತೆ ಮತ್ತು ಬೆಲೆ ಏರಿಕೆಗಳು ಈ ವಿದ್ಯಮಾನವನ್ನು ಅನುಸರಿಸುತ್ತವೆ.

ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ, ವಿಂಗಡಣೆಯಡಿಯಲ್ಲಿ ಭಾರತವು “ಗಂಭೀರ” ಎಂಬ ಸ್ಥಾನ ಪಡೆದಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ಪ್ರಕಾರ, ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಶಿಶು ಮರಣದ ಪ್ರಮಾಣವು ಆತಂಕಕಾರಿ ಮಟ್ಟವನ್ನು ತಲುಪಿದೆ. ಪ್ಯೂ ರಿಸರ್ಚ್ ಸೆಂಟರ್‌ನ ಅಂದಾಜಿನ ಪ್ರಕಾರ, ಕಳೆದ ಒಂದು ವರ್ಷದಲ್ಲಿ, ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆಯು 60 ರಿಂದ 134 ದಶಲಕ್ಷಕ್ಕೆ ಏರಿದೆ ಮತ್ತು ನಮ್ಮ ಮಧ್ಯಮ ವರ್ಗದ 59.3% ಜನರು ಬಡತನಕ್ಕೆ ಜಾರಿದ್ದಾರೆ.

ಕೋಮುವಾದಿ-ಕಾರ್ಪೊರೇಟ್ ನಂಟು

2014ರಿಂದ ಕೋಮುವಾದ ಮತ್ತು ಕಾರ್ಪೊರೇಟ್‌ಗಳ ನಡುವೆ ಹೊರಹೊಮ್ಮಿದ ನಂಟಸ್ತನವು ಒಂದು ಭ್ರಷ್ಟ-ಸ್ವಾರ್ಥಸಾಧಕ ಕೂಟವಾಗಿದೆ. ಸಾರ್ವಜನಿಕ ವಲಯ, ಸಾರ್ವಜನಿಕ ಉಪಯೋಗ-ಸೇವಾ ಸಂಸ್ಥೆಗಳು ಮತ್ತು ಖನಿಜ ಸಂಪನ್ಮೂಲಗಳ ಖಾಸಗೀಕರಣದ ಮೂಲಕ ರಾಷ್ಟ್ರದ ಸ್ವತ್ತುಗಳನ್ನು ಲೂಟಿ ಹೊಡೆಯಲು ಕಾರ್ಪೋರೇಟ್‌ಗಳಿಗೆ ಅವಕಾಶ ಕಲ್ಪಿಸಿಕೊಡಲಾಗಿದೆ. ಲಾಭವನ್ನು ಅವು ಗರಿಷ್ಠ ಪ್ರಮಾಣದಲ್ಲಿ ಬಾಚಿಕೊಳ್ಳುತ್ತಿವೆ. ಈ ಕ್ರಮವು ಬಂಟ-ಬಂಡವಾಳಶಾಹಿಯ (crony capitalism) ಮತ್ತು ರಾಜಕೀಯ ಭ್ರಷ್ಟಾಚಾರದ ಬೆಳವಣಿಗೆಗೆ ಕಾರಣವಾಗಿದೆ. ಇದರೊಂದಿಗೆ ಜನರ ಪ್ರಜಾಪ್ರಭುತ್ವ ಹಕ್ಕುಗಳು, ನಾಗರಿಕ ಹಕ್ಕುಗಳು ಮತ್ತು ಮಾನವ ಹಕ್ಕುಗಳ ಮೇಲೆ ನಡೆಸಿದ ದಾಳಿಗಳೂ ಸೇರಿವೆ. ಸರ್ಕಾರದ ಟೀಕೆಯನ್ನು ದೇಶದ್ರೋಹವೆಂದೂ ಮತ್ತು ಭಿನ್ನಮತೀಯರನ್ನು ರಾಷ್ಟ್ರ ವಿರೋಧಿಗಳೆಂದೂ ಹಣೆಪಟ್ಟಿ ಹಚ್ಚಲಾಗುತ್ತಿದೆ. ಯು.ಎ.ಪಿ.ಎ. ಯಂತಹ ಕಠಿಣ ಕಾನೂನುಗಳ ಅಡಿಯಲ್ಲಿ ಅವರನ್ನು ಮನಸೊ ಇಚ್ಛೆಯಾಗಿ ಬಂಧಿಸಲಾಗುತ್ತದೆ. ಇದು ಭಾರತದ ಸಂವಿಧಾನವು ಜನರಿಗೆ ಕೊಟ್ಟ ಖಾತ್ರಿ-ಭರವಸೆಗಳನ್ನು ಒಳಗೊಳಗೆ ಕೊರೆದುಹಾಕುತ್ತದೆ.

ಈ ವಿದ್ಯಮಾನಗಳಿಂದಾಗಿ ಭಾರತವನ್ನು ಒಂದು “ಚುನಾವಣಾ ನಿರಂಕುಶಪ್ರಭುತ್ವ” ಎಂದು ವಿಶ್ವವು ಗುರುತಿಸಿದೆ. ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕವು ಹದಗೆಟ್ಟು, ಹಿಂದಿನ ವರ್ಷ 79ನೇ ಶ್ರೇಯಾಂಕದಲ್ಲಿದ್ದ ಭಾರತವನ್ನು ಇನ್ನೂ ಕೆಳಕ್ಕೆ, 105ನೇ ಸ್ಥಾನಕ್ಕೆ ತಳ್ಳಿದೆ. ಮಾನವ ಸ್ವಾತಂತ್ರ್ಯ ಸೂಚ್ಯಂಕವು ಭಾರತವನ್ನು 94ನೇ ಶ್ರೇಯಾಂಕದಿಂದ 111ನೇ ಸ್ಥಾನಕ್ಕೆ ಕೆಳಗಿಳಿಸಿದೆ. ವಿಶ್ವ ಸಂಸ್ಥೆಯ ಮಾನವ ಅಭಿವೃದ್ಧಿ ಸೂಚ್ಯಂಕವು ಕಳೆದ ವರ್ಷದ 129ನೇ ಶ್ರೇಯಾಂಕದಿಂದ 131ನೇ ಸ್ಥಾನಕ್ಕೆ ನಮ್ಮನ್ನು ತಳ್ಳಿದೆ.

ನಮ್ಮ ಬಹು ದೊಡ್ಡ ಸಂಖ್ಯೆಯ ಜನರಿಗೆ ಹೆಚ್ಚುತ್ತಿರುವ ಸಂಕಷ್ಟಗಳ ಜೊತೆಗೆ, ಬೆಳೆಯುತ್ತಿರುವ ಈ ಸರ್ವಾಧಿಕಾರಶಾಹಿಯು “ಆಡಳಿತದೊಂದಿಗೆ ಕಾರ್ಪೊರೇಟ್‌ಗಳ ಸಮ್ಮಿಳನ” ಎಂಬ ಮುಸೊಲಿನಿಯ ಫ್ಯಾಸಿಸಂನ ಅಶುಭ ವ್ಯಾಖ್ಯಾನಕ್ಕೆ ಹತ್ತಿರವಾಗಿದೆ. ಅರ್ಥವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ನವ-ಉದಾರವಾದಿ ಸುಧಾರಣೆಗಳ ದಿವಾಳಿತನವನ್ನು ಜಾಗತಿಕವಾಗಿ ಹೆಚ್ಚು ಹೆಚ್ಚಾಗಿ ಗುರುತಿಸಲಾಗುತ್ತಿದೆ. ಆತಂಕಕಾರಿಯಾಗಿ ಬೆಳೆಯುತ್ತಿರುವ ಅಸಮಾನತೆಗಳನ್ನು ಸಮೀಕ್ಷೆ ಮಾಡಿದ ‘ದಿ ಎಕನಾಮಿಸ್ಟ್’ ಪತ್ರಿಕೆಯ ಲೇಖನ “ಅಸಮಾನತೆಯು ತಲುಪಿರುವ ಹಂತವು ಎಂಥಹದ್ದು ಎಂದರೆ, ಬೆಳವಣಿಗೆಗೆ ಅದು ಅದಕ್ಷವೂ ಮತ್ತು ಕೆಟ್ಟದ್ದೂ ಆಗಬಹುದು” ಎಂಬ ತೀರ್ಮಾನಕ್ಕೆ ಬಂದಿದೆ.

Photo2
ವ್ಯಂಗ್ಯಚಿತ್ರ ಕೃಪೆ: ಪಂಜು ಗಂಗೊಳ್ಳಿ, ಬಿಸಿನೆಸ್‌ ಇಂಡಿಯಾ

ನವ-ಉದಾರವಾದಿ ಸುಧಾರಣೆಗಳ ದಿವಾಳಿತನ

ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಜೋಸೆಫ್ ಸ್ಟಿಗ್ಲಿಟ್ಜ್ ತನ್ನ ‘ಅಸಮಾನತೆಗೆ ತೆರುವ ಬೆಲೆ’ (The Price of Inequality) ಎಂಬ ಪುಸ್ತಕದಲ್ಲಿ, ಮೇಲ್ತುದಿಯ 1% ಮತ್ತು ಉಳಿದ 99% ಜನರ ಬಗ್ಗೆ ಹೀಗೆ ಹೇಳುತ್ತಾರೆ: “ನಮ್ಮ ಆರ್ಥಿಕ ಬೆಳವಣಿಗೆಯನ್ನು ಸರಿಯಾಗಿ ಅಳೆದರೆ, ನಮ್ಮ ಸಮಾಜವು ಆಳವಾಗಿ ವಿಭಜಿತವಾಗಿಯೇ ಉಳಿದರೆ ಸಾಧಿಸಬಹುದಾದುದಕ್ಕಿಂತ ಅದು ಬಹಳ ಹೆಚ್ಚಾಗಿರುತ್ತದೆ”.

ಮುಂದುವರಿದ ಎಲ್ಲಾ ದೇಶಗಳೂ ಪ್ರಭುತ್ವವು ಬೃಹತ್ ವೆಚ್ಚಗಳನ್ನು ಮಾಡುವ ಉತ್ತೇಜಕ ಪ್ಯಾಕೇಜ್‌ಗಳನ್ನು ಘೋಷಿಸಿವೆ. ಇದು ನವ-ಉದಾರೀಕರಣಕ್ಕೆ ಅನಿಷ್ಟಕರವಾಗಿದೆ. ಈ ಉತ್ತೇಜಕ ಪ್ಯಾಕೇಜ್‌ಗಳು ದೇಶೀಯ ಬೇಡಿಕೆ ಮತ್ತು ಆರ್ಥಿಕ ಚಟುವಟಿಕೆಗಳನ್ನು ಚೇತರಿಸುವ ಗುರಿ ಹೊಂದಿವೆ. ಬ್ರಿಟನ್ನಿನ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್, “ನಾನು ಒಬ್ಬ ಕಮ್ಯುನಿಸ್ಟ್ ಅಲ್ಲ, ಆದರೆ…” ಎಂದು ಹೇಳುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿ, ತಮ್ಮ ಸರ್ಕಾರವು ಖರ್ಚು-ವೆಚ್ಚಗಳನ್ನು ಹೆಚ್ಚಿಸುವುದನ್ನು ಪ್ರತಿಪಾದಿಸಿದರು.

ಆದಾಗ್ಯೂ, ಮೋದಿ ಸರ್ಕಾರವು ತನ್ನ ಆಪ್ತರು ಪಡೆದ ಬೃಹತ್ ಬ್ಯಾಂಕ್ ಸಾಲಗಳನ್ನು ಮನ್ನಾ ಮಾಡಿದ ಸಂದರ್ಭದಲ್ಲೂ ಸಹ, ಸರ್ಕಾರದ ಖರ್ಚು-ವೆಚ್ಚಗಳನ್ನು ಹೆಚ್ಚಿಸಲು ಹಿಂಜರಿಯುತ್ತಾರೆ. ಪೆಟ್ರೋ ದರಗಳನ್ನು ಅನುದಿನವೂ ಏರಿಸಿದ ಪರಿಣಾಮವಾಗಿ ಉಂಟಾಗುವ ಹಣದುಬ್ಬರದ ಹೆಣಭಾರವನ್ನೂ ಜನರ ಮೇಲೆ ಹೇರುತ್ತದೆ. ಬೆಲೆ ಏರಿಕೆಯ ಪರಿಣಾಮವಾಗಿ ಆಂತರಿಕ ಬೇಡಿಕೆ ಕುಗ್ಗುತ್ತದೆ ಮತ್ತು ಆರ್ಥಿಕ ಹಿಂಜರಿತವು ಆಳಗೊಳ್ಳುತ್ತದೆ.

ಈ ರೀತಿಯ ಸುಧಾರಣಾ ದಿಕ್ಪಥವನ್ನು ಒಂದು ಗಂಭೀರ ವಿಮರ್ಶೆಗೆ ಒಳಪಡಿಸಬೇಕಾಗುತ್ತದೆ ಮತ್ತು ನಮ್ಮ ಆದ್ಯತೆಗಳನ್ನು ಮರುರೂಪಿಸಿಕೊಳ್ಳಬೇಕಾಗುತ್ತದೆ: ಕೃಷಿಯ ಬಲ ವರ್ಧನೆ, ಆಹಾರ ಭದ್ರತೆ, ಆರೋಗ್ಯ ಮತ್ತು ಶಿಕ್ಷಣ ವಲಯಗಳಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು, ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಆಂತರಿಕ ಬೇಡಿಕೆಯನ್ನು ಹೆಚ್ಚಿಸುವ ಸಲುವಾಗಿ ಅಗತ್ಯ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳ ನಿರ್ಮಾಣಕ್ಕಾಗಿ ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸುವುದು-ಆರ್ಥಿಕ ಪುನರುಜ್ಜೀವನಕ್ಕೆ ಇದೊಂದೇ ಮಾರ್ಗ. ಸೂಕ್ತ ತಂತ್ರಜ್ಞಾನ ಯಾವುದು ಎಂಬುದನ್ನು ನಿರ್ಧರಿಸುವಾಗ ಪರಿಸರ ಕಾಳಜಿಯನ್ನು ಗಮನದಲ್ಲಿಟ್ಟುಕೊಳ್ಳಬೇಕು. ಎಲ್ಲಕ್ಕಿಂತ ಮುಖ್ಯವಾಗಿ, ನಮ್ಮ ಸಾಮಾಜಿಕ ಸಾಮರಸ್ಯವನ್ನು ಕೆಡಿಸುವ ಎಲ್ಲಾ ವಿಭಜಕ ಶಕ್ತಿಗಳು ಮತ್ತು ಪ್ರವೃತ್ತಿಗಳನ್ನೂ ಸೋಲಿಸಬೇಕು. ನಮ್ಮ ಸಮಾಜವನ್ನು ಅಮಾನುಷಗೊಳಿಸುವ ಅಂಧಶ್ರದ್ಧೆ ಮತ್ತು ಅತಾರ್ಕಿಕತೆಯ ವಿರುದ್ಧ ನಾವು ಹೋರಾಡಬೇಕು. ಇಂತಹ ಜನ-ಕೇಂದ್ರಿತ ಸುಧಾರಣೆಗಳು ಭಾರತಕ್ಕೆ ಇಂದು ಬೇಕಾಗಿವೆ.

ಇಂತಹ ಸುಧಾರಣೆಗಳನ್ನು ಸಾಕಾರಗೊಳಿಸುವ ಉದ್ದೇಶಕ್ಕಾಗಿ ಬೇಕಾಗುವ ಶಕ್ತಿ-ಕೂಟವೆಂದರೆ, ಜನರ ಹೋರಾಟಗಳೇ. ಸಂಕಷ್ಟಗಳನ್ನು ಜನರ ಮೇಲೆ ಹೊರಿಸುತ್ತಿರುವ ಭಾರತದ ಆಳುವ ವರ್ಗಗಳು ಅನುಸರಿಸುತ್ತಿರುವ ದಿಕ್ಪಥವನ್ನು ಸುಧಾರಣೆಗಳ ಪರ್ಯಾಯ ದಿಕ್ಪಥವನ್ನು ಅಂತರ್ಗತವಾಗಿಸಿಕೊಂಡ ಜನಪ್ರಿಯ ಚಳುವಳಿಗಳು ಮಾತ್ರ ತಿರುಗುಮುರುಗು ಮಾಡಬಲ್ಲವು. ನಾವೀಗ ಸಾಗುತ್ತಿರುವ ಹಾದಿಯನ್ನು ಬದಲಾಯಿಸಿಕೊಳ್ಳಲು ಪ್ರಸಕ್ತ ಸುಧಾರಣೆಗಳಿಗೆ ಮೂರು ದಶಕಗಳು ಸಂದ ಈ ಸಂದರ್ಭವೇ ಸೂಕ್ತ.

ಅನುವಾದ: ಕೆ.ಎಂ. ನಾಗರಾಜ್

Leave a Reply

Your email address will not be published. Required fields are marked *