ಮಾತುಕತೆ ಮೂಲಕ ಮೇಕೆದಾಟು ವಿವಾದ ಬಗೆಹರಿಯಲಿ

ಮತ್ತೊಮ್ಮೆ ನದಿ ನೀರಿನ ವಿವಾದವೊಂದು ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಎದ್ದು ನಿಂತಿದೆ. ರಾಮನಗರ ಜಿಲ್ಲೆಯ ಮೇಕೆದಾಟುವಿನಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆ ಎರಡೂ ರಾಜ್ಯಗಳ ಜನರ ನಡುವೆ ವಿವಾದದ ಹೊಗೆಯಾಡಲಾರಂಭಿಸಿದೆ.

ಕಾವೇರಿ ನೀರಿನ ಕುರಿತು ಕರ್ನಾಟಕ ಮತ್ತು ತಮಿಳುನಾಡು ನಡುವಿನ ವಿವಾದಕ್ಕೆ ಸುದೀರ್ಘ ಇತಿಹಾಸವಿದೆ. ಸುಪ್ರೀಂಕೋರ್ಟ್ ಕಾವೇರಿ ನದಿ ನೀರಿನ ಹಂಚಿಕೆಯ ಬಗ್ಗೆ ಸ್ವಷ್ಟವಾದ ತೀರ್ಪು ನೀಡಿದೆ. ಅದರ ಪ್ರಕಾರ ತಮಿಳುನಾಡಿಗೆ ಎಷ್ಟು ನೀರು ಬಿಡಬೇಕು ಮತ್ತು ಯಾವಾಗ ಬಿಡಬೇಕು ಎನ್ನುವುದು ನಿರ್ಧಾರವಾಗಿದೆ. ರಾಜ್ಯಕ್ಕೆ ಹಂಚಿಕೆಯಾಗಿರುವ ಕಾವೇರಿ ನದಿ ನೀರಿನ ಪಾಲಿನಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಉತ್ಪಾದನೆಗಾಗಿ ಮೇಕೆದಾಟು ಯೋಜನೆಯನ್ನು ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ. ಆದರೆ ಮೇಕೆದಾಟುವಿನಲ್ಲಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟು ಯೋಜನೆಗೆ ಅನುಮತಿ ನೀಡಬಾರದೆಂದು ತಮಿಳುನಾಡು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದೆ. ಅದರ ಪ್ರಕಾರ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಿದರೆ ತಮ್ಮ ರೈತರ ಹಿತ್ತಾಸಕ್ತಿಗೆ ಧಕ್ಕೆಯಾಗುತ್ತದೆ ಎನ್ನುವುದು ತಮಿಳುನಾಡಿನ ವಾದ. ಆದರೆ, ಬೆಂಗಳೂರಿಗೆ ಕುಡಿಯುವ ನೀರಿನ ಪೂರೈಕೆ ಮತ್ತು ವಿದ್ಯುತ್ ಉತ್ಪಾದನೆಗಾಗಿ ಮಾತ್ರ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಕರ್ನಾಟಕದ ವಾದ. ಈ ನೀರಿನ ಬಳಕೆಯೂ ಸುಪ್ರೀಂ ಕೋರ್ಟಿನ ನಿರ್ಧೇಶನದಂತೆಯೇ ನಡೆಯಬೇಕಾಗಿದೆ.

ಕಾವೇರಿ ನೀರಿನ ಹಂಚಿಕೆಯನ್ನು ಭಾವನಾತ್ಮಕಗೊಳಿಸಿ, ಆದರೆ ರಾಜಕೀಯ ಲಾಭ ಪಡೆಯಲು ಎರಡೂ ರಾಜ್ಯಗಳ ಕೆಲವು ರಾಜಕೀಯ ಪಕ್ಷಗಳು ಪ್ರಯತ್ನಿಸುತ್ತಾ ಬಂದಿವೆ. ಇಂತಹ ರಾಜಕೀಯ ಮೇಲಾಟಗಳಿಂದಾಗಿ ಎರಡೂ ರಾಜ್ಯಗಳ ಜನರ ಮನಸ್ಸಿನಲ್ಲಿ ಅನಗತ್ಯ ದ್ವೇಷದ ಭಾವನೆ ಮೂಡಲು ಕಾರಣವಾಗುತ್ತಾ ಬಂದಿದ್ದು ಅದಕ್ಕೆ ಈಗ ಪುನಃ ಅವಕಾಶ ನೀಡಬಾರದು.

ಕರ್ನಾಟಕದಿಂದ ತಮಿಳುನಾಡಿನತ್ತ ಮಳೆಗಾಲದಲ್ಲಿ ಹರಿಯುವ ನೀರನ್ನು ಹಿಡಿದಿಡಲು ಬೇಕಾದ ಅಣೆಕಟ್ಟು, ಬ್ಯಾರೇಜ್ ಮತ್ತು ಕಾಲುವೆಗಳ ವ್ಯವಸ್ಥೆ ತಮಿಳುನಾಡು ಮಾಡಿಕೊಂಡಿಲ್ಲ. ಹೀಗೆ ಪೋಲಾಗಿ ಹೋಗುವ ನೀರಿನ ಸದ್ಭಳಕೆ ಮಾಡಿಕೊಳ್ಳಲು ಮೇಕೆದಾಟು ಅಣೆಕಟ್ಟು ನಿರ್ಮಾಣ ಪ್ರಯೋಜನಕಾರಿಯಾಗಿದೆ. ಇದರಿಂದ ತಮಿಳುನಾಡಿನ ರೈತರ ಕೃಷಿಗೆ ನೀರಿನ ಕೊರತೆ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸುವುದು ಸಮಂಜಸವಲ್ಲ.

ತಮಿಳುನಾಡಿಗೆ ಕಾಲಕಾಲಕ್ಕೆ ಕರ್ನಾಟಕ ಬಿಡುಗಡೆ ಮಾಡಬೇಕಾದ ನೀರಿನಲ್ಲಿ ಯಾವುದೇ ಕಡಿತ ಮಾಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟಿನ ತೀರ್ಪಿನಂತೆ ಸ್ಥಾಪನೆ ಮಾಡಲಾದ ಕಾವೇರಿ ನೀರು ಪ್ರಾಧಿಕಾರವೂ ಕೆಲಸ ಮಾಡುತ್ತದೆ. ಹಾಗಿರುವಾಗ ತಮಿಳುನಾಡು ಅಪಸ್ವರ ಎತ್ತುವುದು ಸೂಕ್ತವಲ್ಲ. ನ್ಯಾಯಾಲಯದ ಮಧ್ಯಪ್ರವೇಶದ ನಂತರವೂ ಅನುಮಾನ, ಆತಂಕ ಉಳಿದುಕೊಳ್ಳಬಹುದು. ವಿಷಯವನ್ನು ರಾಜಕೀಯಗೊಳಿಸದೆ ಮಾತುಕತೆಯಿಂದ ಬಗೆ ಹರಿಸಿಕೊಳ್ಳಲು ಎರಡೂ ರಾಜ್ಯಗಳು ಪ್ರಯತ್ನಿಸುವುದು ಸೂಕ್ತ.

ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕಕ್ಕೆ ನ್ಯಾಯ ಒದಗಿಸುವ ಭರವಸೆ ಕೊಟ್ಟಿದೆ ಎಂದು ಹೇಳಲಾಗುತ್ತದೆ. ತಮಿಳುನಾಡಿನಲ್ಲಿ ಬಿಜೆಪಿಯ ಮಿತ್ರ ಪಕ್ಷ ಅಧಿಕಾರದಲ್ಲಿದ್ದಾಗ ಬಿಜೆಪಿ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಇಂತಹ ಭರವಸೆ ನೀಡಲು ಮುಂದಾಗುತ್ತಿರಲಿಲ್ಲ. ಈಗ ಬಿಜೆಪಿಗೆ ವಿರುದ್ಧವಾದ ಪಕ್ಷದ ಸರ್ಕಾರ ತಮಿಳುನಾಡಿನಲ್ಲಿ ಇರುವುದರಿಂದ ಅದನ್ನು ಕೆಣಕಲು ಕೇಂದ್ರದ ಬಿಜೆಪಿ ಸರ್ಕಾರ ಕರ್ನಾಟಕದ ಬಿಜೆಪಿ ಸರ್ಕಾರಕ್ಕೆ ನ್ಯಾಯದ ಭರವಸೆ ನೀಡುತ್ತಿದೆ. ಇದೆಂತಹ ನ್ಯಾಯ? ತಮ್ಮ ಚುನಾವಣ ಲಾಭಕ್ಕಾಗಿ ಎರಡು ರಾಜ್ಯಗಳ ಜನರನ್ನು ಪರಸ್ಪರ ಎತ್ತಿಕಟ್ಟುವ ಕೀಳು ಮಟ್ಟದ ರಾಜಕಾರಣ. ಜನತೆ ಇದರ ಹಿಂದಿನ ಮೋಸವನ್ನು ಅರ್ಥಮಾಡಿಕೊಳ್ಳಲು. ಇಂತಹ ವಿವಾದಗಳ ವಿಷಯದಲ್ಲಿ ಎರಡೂ ರಾಜ್ಯಗಳ ಜನರಿಗೆ ಯಾವುದೇ ರಾಜಕೀಯ ಪಕ್ಷಪಾತ ಮಾಡದೆ ನ್ಯಾಯ ಒದಗಿಸುವುದು ಕೇಂದ್ರ ಸರ್ಕಾರದ ಕರ್ತವ್ಯ.

Leave a Reply

Your email address will not be published. Required fields are marked *