ಪೆಗಾಸಸ್: ಸರ್ವಾಧಿಕಾರಶಾಹಿಯ ಸೈಬರ್ ಆಯುಧ

prakash karat
ಪ್ರಕಾಶ್ ಕಾರಟ್

ಪೆಗಾಸಸ್ ಗೂಢಚರ್ಯೆ ತಂತ್ರಾಂಶ  ಖರೀದಿಸಿದ್ದನ್ನು ಮೆಕ್ಸಿಕೋ ಸರ್ಕಾರ ಒಪ್ಪಿಕೊಂಡಿದೆ. ಆದರೆ ‘ಕ್ರೊನೋಲಜಿ’ ಸ್ಪಷ್ಟವಾಗಿದ್ದರೂ ಭಾರತ ಸರ್ಕಾರ ನಿರಾಕರಿಸುತ್ತಿದೆ. ಇಸ್ರೇಲ್‌ನ ಶಸ್ತ್ರಾಸ್ತ್ರಗಳಿಗೆ ಭಾರತವೇ ಅತಿ ದೊಡ್ಡ ಗಿರಾಕಿಯಾಗಿದ್ದು, ಆಂತರಿಕ ಭದ್ರತಾ ಉದ್ದೇಶಗಳಿಗೆ ಭಾರತಕ್ಕೆ ಇಸ್ರೇಲ್ ಮಹತ್ವದ ಉಪಕರಣಗಳು ಮತ್ತು ತಂತ್ರಜ್ಞಾನ ಒದಗಿಸುತ್ತಿದೆಯಾದ್ದರಿಂದ ಈ ಭಾರೀ ದುಬಾರಿಯಾದ ಪೆಗಾಸಸ್ ಗೂಢಚರ್ಯೆ ತಂತ್ರಾಂಶವನ್ನು ಭಾರತದ ಯಾವ ಭದ್ರತಾ ಸಂಸ್ಥೆ ಬಳಸುತ್ತಿದೆ ಎನ್ನುವುದಷ್ಟೇ ಸ್ಪಷ್ಟವಾಗಬೇಕಿರುವ ವಿಷಯವಾಗಿದೆ. ಆದ್ದರಿಂದ ಒಂದು ಉನ್ನತ ಮಟ್ಟದ ತನಿಖೆ ನಡೆಸುವುದು ತೀರಾ ಅವಶ್ಯವಾಗಿದೆ. ಸುಪ್ರೀಂ ಕೋರ್ಟ್ ಇಂಥ ತನಿಖೆಯ ಮುತುವರ್ಜಿ ಮತ್ತು ಉಸ್ತುವಾರಿ ವಹಿಸಬೇಕು – ಪ್ರಕಾಶ್ ಕಾರಟ್

ದೇಶದ ರಾಜಕೀಯ ಕ್ಷೇತ್ರದಲ್ಲಿ ಅಲೋಲ ಕಲ್ಲೋಲಕ್ಕೆ ಕಾರಣವಾಗಿರುವ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಹಗರಣ ಕೇವಲ ಜನರ ಖಾಸಗಿತ್ವದ ಉಲ್ಲಂಘನೆ ಅಥವಾ ಭದ್ರತಾ ಸಂಸ್ಥೆಗಳು ಕಾನೂನುಬಾಹಿರವಾಗಿ ಬೇಹುಗಾರಿಕೆ ನಡೆಸುವುದು ಅಥವ ಕದ್ದಾಲಿಸುವುದಷ್ಟಕ್ಕೆ ಸೀಮಿತವಾದ ಒಂದು ಪ್ರಕರಣವಲ್ಲ. ಅದಕ್ಕೂ ಹೆಚ್ಚಿನ ಆಯಾಮ ಅದಕ್ಕಿದೆ. ಪೆಗಾಸಸ್ ಮಿಲಿಟರಿ ಮಟ್ಟದ  ಗೂಢಚರ್ಯೆ ತಂತ್ರಾಂಶ ಆಗಿದ್ದು ಕಣ್ಗಾವಲು ಮತ್ತು ಬೇಧನೆ(ಹ್ಯಾಕಿಂಗ್)ಯನ್ನು ಒಂದು ಹೊಸ ಮಟ್ಟಕ್ಕೇ ಒಯ್ಯುತ್ತದೆ. ಈ ವಿಶಾಲ ಚಿತ್ರ ಮಸುಕಾಗದಂತೆ ನೋಡಿಕೊಳ್ಳಬೇಕು.

ಪೆಗಾಸಸ್ ಬಳಕೆಯು ವಿಸ್ತೃತ ಸರ್ವಾಧಿಕಾರಶಾಹಿ ಸಂರಚನೆಯ ಭಾಗವಾಗಿದ್ದು ಕಳೆದ ಏಳು ವರ್ಷಗಳಿಂದ ಅದನ್ನು ರೂಪಿಸಲಾಗುತ್ತಿದೆ. ಅಂದರೆ ಸರ್ವಾಧಿಕಾರಶಾಹಿ ಹಿಂದುತ್ವ ಆಡಳಿತವನ್ನು ಸ್ಥಾಪಿಸಲು ಹಾಗೂ ಅದನ್ನು ಇನ್ನಷ್ಟು ಕ್ರೋಢೀಕರಿಸಲು ಯಾವ ಮಾರ್ಗವನ್ನದರೂ ಬಳಸಬಹುದು ಎನ್ನುವುದೇ ಇದರ ಸಾರಸರ್ವಸ್ವ ಸಂದೇಶವಾಗಿದೆ. ಕಾನೂನು ಬಾಹಿರ ಚಟುವಟಿಕೆ ತಡೆ ಕಾನೂನು(ಯುಎಪಿಎ), ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳ ಕಂಪ್ಯೂಟರ್‌ಗಳನ್ನು ಬೇಧಿಸಿ ಅವರ ವಿರುದ್ಧ ಸಾಕ್ಷಿ ಸೃಷ್ಟಿಸಲು ಕುತಂತ್ರಾಂಶವನ್ನು ಅವುಗಳಲ್ಲಿ ಹಾಕುವುದು, ಬೆದರಿಸಲು ಹಾಗೂ ಜೈಲಿಗೆ ಹಾಕಲು ಜಾರಿ ನಿರ್ದೇಶನಾಲಯ (ಇ.ಡಿ.) ಮತ್ತಿತರ ಕೇಂದ್ರೀಯ ಸಂಸ್ಥೆಗಳ ಬಳಕೆ ಮುಂತಾದ ಪ್ರಕರಣಗಳಂತೆ ಸಂಭಾವ್ಯ ರಾಜಕೀಯ ವಿರೋಧಿಗಳು ಮತ್ತು ಬೆದರಿಕೆಗಳ ವಿರುದ್ಧ ಪೆಗಾಸಸ್ ಒಂದು ಸೈಬರ್ ಆಯುಧವಾಗಿದೆ.

ಇಸ್ರೇಲ್ ಕಂಪನಿ ಎನ್‌ಎಸ್‌ಒ ತಯಾರಿಸಿರುವ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಭಾರತದಲ್ಲಿ ಬಳಕೆ ಆಗಿರುವುದು ಏನನ್ನು ಸೂಚಿಸುತ್ತದೆ?. ಎನ್‌ಎಸ್‌ಒ ದತ್ತಾಂಶ ಭಂಡಾರದಿಂದ ಒಂದು ಫ್ರೆಂಚ್ ಎನ್‌ಜಿಒಗೆ ಸೋರಿಕೆ ಮಾಡಿರುವ ಜಗತ್ತಿನಾದ್ಯಂತದ 50,000 ಫೋನ್ ನಂಬರ್‌ಗಳಲ್ಲಿ ಸುಮಾರು 1,000  ಭಾರತದ್ದಾಗಿದೆ. ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಸ್ಥಾಪಿಸುವ ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ ಅವರಿದ್ದಾರೆ. ಆ ಪೈಕಿ 300 ಸಂಖ್ಯೆಗಳನ್ನು ಪರಿಶೀಲಿಸಲಾಗಿದೆ. ಆ ಪಟ್ಟಿ ನೋಡಿದರೇ ಉದ್ದೇಶ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಹೆಸರು ಅದರಲ್ಲಿವೆ. ಕರ್ನಾಟಕದ ಹಿಂದಿನ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯ ಸಹಾಯಕರು, ಇಬ್ಬರು ಹಾಲಿ ಕೇಂದ್ರ ಸಚಿವರು (ಆ ಪೈಕಿ ಒಬ್ಬರು 2017ರಲ್ಲಿ ಎಂ.ಪಿ. ಕೂಡ ಆಗಿರಲಿಲ್ಲ) ಪಟ್ಟಿಯಲ್ಲಿದ್ದಾರೆ. 40 ಪತ್ರಕರ್ತರ ಹೆಸರುಗಳೂ ಇವೆ. ಭಾರತ ಚುನಾವಣೆ ಆಯೋಗದ ಒಬ್ಬ ಸದಸ್ಯ, ಉಮರ್ ಖಾಲಿದ್‌ರಂಥ ವಿದ್ಯಾರ್ಥಿ ಕಾರ್ಯಕರ್ತರು, ಒಬ್ಬ ರೈಲ್ವೆ ಟ್ರೇಡ್ ಯೂನಿಯನ್ ನಾಯಕ ಹೀಗೆ ಅನೇಕ ಜನರ ಹೆಸರುಗಳು ಅದರಲ್ಲಿವೆ.

pegasusAಉದ್ದೇಶ ಸುಸ್ಪಷ್ಟ

ಗೂಢಚರ್ಯೆ ತಂತ್ರಾಂಶದ ಉದ್ದೇಶ ಮತ್ತು ಬಳಕೆಯ ವಿನ್ಯಾಸವೇ ಅದರ ಕಾರ್ಯಸೂಚಿಯನ್ನು ಸ್ಪಷ್ಟಪಡಿಸುತ್ತದೆ. ಅಧಿಕಾರದಲ್ಲಿರುವವರನ್ನು ಉಳಿಸುವುದು ಮತ್ತು ಪ್ರತಿಪಕ್ಷಗಳನ್ನು ಅಸ್ಥಿರಗೊಳಿಸುವುದು, ಮಾಧ್ಯಮದಲ್ಲಿನ ತನಿಖಾತ್ಮಕ ದನಿಗಳ ಮೇಲೆ ಕಣ್ಗಾವಲು ಇಡುವುದು ಅದರ ಗುರಿಯಾಗಿದೆ.

ಅಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಮಹಿಳೆ ಸಹಿತ 11 ವ್ಯಕ್ತಿಗಳ ಸಂಖ್ಯೆ ಕೂಡ ಇರುವುದು ಪ್ರಮುಖ ಹುದ್ದೆಯಲ್ಲಿರುವ ಯಾರನ್ನೋ ರಕ್ಷಿಸುವುದು ಉದ್ದೇಶ ಎಂಬುದನ್ನು ದೃಢಪಡಿಸುತ್ತದೆ. ಬಹುಶಃ ನ್ಯಾಯಾಂಗವನ್ನು ಮಂಡಿಯೂರುವಂತೆ ಮಾಡಲು ಆ ಮಾಹಿತಿಯನ್ನು ಬಳಸಿಕೊಳ್ಳುವ ಉದ್ದೇಶವೂ ಇರಬಹುದು.

ನರೇಂದ್ರ ಮೋದಿ ಆಡಳಿತದಲ್ಲಿ ಸಂಸದೀಯ ಸಂಸ್ಥೆಗಳ ಮಹತ್ವವನ್ನು ಕಡೆಗಣಿಸಲಾಗುತ್ತಿದೆ ಎಂಬ ಟೀಕೆ ಸರ್ವೇಸಾಮಾನ್ಯವಾಗಿದೆ. ಮೋದಿ ಪರವಾದ ಚುನಾವಣಾ ಆಯೋಗದ ಕೆಲವು ನಿರ್ಧಾರಗಳಿಗೆ ಭಿನ್ನಮತ ವ್ಯಕ್ತಪಡಿಸಿದ್ದ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಅವರನ್ನು ಗುರಿ ಮಾಡಿರುವುದು, ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಿಗಳಿಗೆ ಕಿರುಕುಳ ನೀಡಲು ಹಾಗೂ ಸಾಧ್ಯವಾದರೆ ಬ್ಲಾಕ್‌ಮೇಲ್ ಮಾಡಲು ಕೂಡ ಗೂಢಚರ್ಯೆ ತಂತ್ರಾಂಶವನ್ನು ಹೇಗೆ ಬಳಸಿಕೊಳ್ಳಲಾಗುತ್ತಿದೆ ಎನ್ನುವುದನ್ನು ತೋರಿಸುತ್ತದೆ.

ಸರ್ಕಾರಕ್ಕೆ ಕೆಟ್ಟ ಹೆಸರು ತರುವ ಪಿತೂರಿಯ ಭಾಗವಾಗಿ ಪೆಗಾಸಸ್ ಈ ಎಲ್ಲ ಸಂಖ್ಯೆ ಹಾಗೂ ಹೆಸರುಗಳನ್ನು ಬಹಿರಂಗಪಡಿಸಿದೆ ಎಂದು ಮೋದಿ ಸರ್ಕಾರ ಇದನ್ನು ತಳ್ಳಿ ಹಾಕಿದೆ. ನಮ್ಮ “ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವುದು” ಇದರ ಉದ್ದೇಶವಾಗಿದೆ ಎಂದಿದೆ. ಮಾಹಿತಿ ತಂತ್ರಜ್ಞಾನ ಸಚಿವ ವೈಷ್ಣವ್ ಸಂಸತ್‌ನಲ್ಲಿ ನೀಡಿದ ಹೇಳಿಕೆಯಲ್ಲಿ ಇಸ್ರೇಲಿ ಕಂಪನಿಯ ಎನ್‌ಎಸ್‌ಒದ ಒಂದು ಹೇಳಿಕೆಯನ್ನೇ ಸರ್ಕಾರದ ಸಮರ್ಥನೆಗೆ ಬಳಸಿಕೊಂಡು ಪಟ್ಟಿ ಆಧಾರರಹಿತ ಎಂದಿದ್ದಾರೆ. ಆದರೆ, ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಖರೀದಿಗೆ ಸರ್ಕಾರದ ಯಾವುದಾದರೂ ಸಂಸ್ಥೆ ಎನ್‌ಎಸ್‌ಒ ದಿಂದ ಗುತ್ತಿಗೆ ಪಡೆದಿತ್ತೇ ಎನ್ನುವುದನ್ನು ಸಚಿವರು ಸ್ಪಷ್ಟಪಡಿಸಿಲ್ಲ. ದೇಶದಲ್ಲಿ ಅನಧಿಕೃತವಾಗಿ ಕಣ್ಗಾವಲು ಇರಿಸಲು ಸಾಧ್ಯವಿಲ್ಲ ಎಂದಷ್ಟೇ ಸರ್ಕಾರ ಹೇಳಿದೆ.

ಎನ್‌ಎಸ್‌ಒದಿಂದ ಗೂಢಚರ್ಯೆ ತಂತ್ರಾಂಶ ಬಳಕೆಯಾಗುತ್ತಿರುವ ಬಗ್ಗೆ ತನಗೇನೂ ಗೊತ್ತಿಲ್ಲ ಎಂದು ಸರ್ಕಾರ ಹೇಳುತ್ತಿದೆ. ಭಾರತದಲ್ಲಿ ಪೆಗಾಸಸ್ ಬಳಸಿ 121 ವ್ಯಕ್ತಿಗಳ ಫೋನ್‌ಗಳನ್ನು ಬೇಧಿಸಲಾಗಿದೆ ಎಂದು 2019ರಲ್ಲಿ ವಾಟ್ಸ್ಆ್ಯಪ್ ಹೇಳಿದ್ದಾಗಲೂ ಆ ಕುರಿತ ಮಾಹಿತಿ ತನಗಿಲ್ಲ ಎಂದು ಸರ್ಕಾರ ತಿಳಿಸಿತ್ತು. ಆ ಪೈಕಿ ಕೆಲವು ಸಂಖ್ಯೆಗಳು ಭೀಮಾ ಕೋರೆಗಾಂವ್ ಪ್ರಕರಣದ ಆರೋಪಿಗಳದ್ದಾಗಿತ್ತು.

ಮೋದಿ ಸರಕಾರದತ್ತವೇ ಬೆರಳು

‘ಭಯೋತ್ಪಾದನೆ ಮತ್ತು ಗಂಭೀರ ಅಪರಾಧಗಳನ್ನು ತಡೆಯುವ ಏಕೈಕ ಉದ್ದೇಶದಿಂದ ಸರ್ಕಾರಿ ಬೇಹುಗಾರಿಕೆ ಹಾಗೂ ಕಾನೂನು ಅನುಷ್ಠಾನದ ಸಂಸ್ಥೆಗಳಿಗೆ ಮಾತ್ರವೇ ತನ್ನ ಉತ್ಪನ್ನಗಳ ಬಳಕೆಗೆ ಲೈಸೆನ್ಸ್ ನೀಡಲಾಗುತ್ತದೆ’ ಎಂದು ಸ್ವತಃ ಸ್ಪೈವೇರ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ಪಷ್ಟಪಡಿಸಿದೆ. ಇಸ್ರೇಲ್‌ನ ರಕ್ಷಣಾ ಸಚಿವಾಲಯದ ವ್ಯಾಪ್ತಿಯಲ್ಲಿ ಬರುವ ರಕ್ಷಣಾ ರಫ್ತು ನಿಯಂತ್ರಣ ಸಂಸ್ಥೆಯ ಉಸ್ತುವಾರಿಯಲ್ಲಿ ಮಾತ್ರವೇ ಇಂಥ ಲೈಸೆನ್ಸ್ ನೀಡಲಾಗುತ್ತದೆ ಎನ್ನುವುದು ಕೂಡ ತಿಳಿದಿರುವ ವಿಚಾರವೇ ಆಗಿದೆ. ಆದ್ದರಿಂದ ಭಾರತದಲ್ಲಿ ಯಾವುದೇ ಖಾಸಗಿ ಸಂಸ್ಥೆ ಗೂಢಚರ್ಯೆ ತಂತ್ರಾಂಶ ಪಡೆದುಕೊಂಡಿರುವ ಸಾಧ್ಯತೆ ಇಲ್ಲವೇ ಇಲ್ಲ. ಇನ್ನೂ ಹೇಳಬೇಕೆಂದರೆ, ಎಚ್.ಡಿ. ಕುಮಾರಸ್ವಾಮಿಯ ಸಹಾಯಕನ ಅಥವಾ ಆದಿವಾಸಿಗಳನ್ನು ಅವರ ಜಮೀನಿನಿಂದ ಒಕ್ಕಲೆಬ್ಬಿಸಿದ್ದನ್ನು ಬಯಲು ಮಾಡಿದ ಜಾರ್ಖಂಡ್‌ನ ಒಬ್ಬ ಪತ್ರಕರ್ತನ ಫೋನ್ ನಂಬರ್ ಬಗ್ಗೆ ಯಾವ ವಿದೇಶಿ ಸರ್ಕಾರ ಅಥವಾ ಸಂಸ್ಥೆಗೆ ಆಸಕ್ತಿ ಇರುತ್ತದೆ ಹೇಳಿ ನೋಡೋಣ.

ನಿಸ್ಸಂಶಯವಾಗಿಯೂ ಮೋದಿ ಸರ್ಕಾರ ಮತ್ತು ಅದರ ಭದ್ರತಾ ಸಂಸ್ಥೆಗಳತ್ತಲೇ ಬೆರಳು ಹೋಗುತ್ತದೆ. ಇತರ ದೇಶಗಳಲ್ಲಿ ಸಾಕ್ಷ್ಯಗಳ ಹಾದಿಯನ್ನು ಗಮನಿಸಿದರೆ ಇದು ಇನ್ನಷ್ಟು ಸ್ಫುಟವಾಗುತ್ತದೆ. ಮೆಕ್ಸಿಕೋದಲ್ಲಿ ಸುಮಾರು 15,000 ಜನರ ಫೋನ್ ನಂಬರ್ ಮೇಲೆ ಗುರಿಯಿಟ್ಟಿದ್ದು, ಆ ಪೈಕಿ 50 ಜನರು ಹಾಲಿ ಅಧ್ಯಕ್ಷ ಮಾನ್ಯುಯೆಲ್ ಲೊಪೆಜ್ ಒಬ್ರೇಡರ್ ಅವರ ಆಪ್ತರಾಗಿದ್ದಾರೆ. ಅಧ್ಯಕ್ಷರ ಪತ್ನಿ, ಮಕ್ಕಳು, ಸಹಾಯಕರು ಮತ್ತು ವೈದ್ಯರು ಕೂಡ ಸೇರಿದ್ದಾರೆ. ಆದರೆ ಒಬ್ರೇಡರ್ 2017ರಲ್ಲಿ ಪ್ರಮುಖ ಪ್ರತಿಪಕ್ಷ ನಾಯಕನಾಗಿದ್ದಾಗ ತಯಾರಿಸಿದ್ದ ಪಟ್ಟಿಯಿದು.

2011ರಲ್ಲಿ ಮೊದಲಿಗೆ ರಕ್ಷಣಾ ಇಲಾಖೆ ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಖರೀದಿಸಿತ್ತು. ನಂತರ ರಾಷ್ಟ್ರೀಯ ಭದ್ರತಾ ಬೇಹುಗಾರಿಕೆ ಸಂಸ್ಥೆ ಮತ್ತಿತರ ಸರ್ಕಾರಿ ಭದ್ರತಾ ಸಂಸ್ಥೆಗಳು ಅದನ್ನು ಪಡೆದಿದ್ದವು ಎಂದು ಮೆಕ್ಸಿಕೊ ಸರ್ಕಾರ ದೃಢಪಡಿಸಿದೆ. ಪೆಗಾಸಸ್ ಗೂಢಚರ್ಯೆ ತಂತ್ರಾಂಶ ಖರೀದಿಸಿದ್ದನ್ನು ಮೆಕ್ಸಿಕೋ ಸರ್ಕಾರ ಒಪ್ಪಿಕೊಂಡಂತೆ ಕಾಣುತ್ತಿದೆ. ಆದರೆ ಅದನ್ನು ಒಪ್ಪಿಕೊಳ್ಳಲು ಭಾರತ ಸರ್ಕಾರ ನಿರಾಕರಿಸುತ್ತಿದೆ.

international conspiracy 200721
..ಉದ್ಯೋಗ……ಬಡತನ…..ಲಸಿಕೆ…   ಅರ್ಥವ್ಯವಸ್ಥೆ….ಪೆಟ್ರೋಲ್….ಭದ್ರತೆ… ………………………………….. ಸರ್, ಇದು ಒಂದು ಅಂತರ‍್ರಾಷ್ಟ್ರೀಯ ಪಿತೂರಿಯ ಹಾಗೆ ಕಾಣುತ್ತಿದೆ.       ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ

“ಕ್ರೊನೋಲಜಿ” ಸ್ಪಷ್ಟವಾಗಿದೆ

ಆದರೆ ವಿದ್ಯಮಾನಗಳ ‘ಕಾಲಾನುಕ್ರಮಣಿಕೆ’ (ಕ್ರೊನೋಲಜಿ) ತುಂಬಾ ಸ್ಪಷ್ಟವಾಗಿದೆ. ನರೇಂದ್ರ ಮೋದಿ 2017 ಜುಲೈನಲ್ಲಿ ಇಸ್ರೇಲ್‌ಗೆ ಭೇಟಿ ನೀಡಿದ್ದನ್ನು ಕೆಲವು ಮಾಧ್ಯಮದವರು ನೆನಪಿಸಿದ್ದಾರೆ. ಇಸ್ರೇಲ್‌ಗೆ ಭೇಟಿ ಕೊಟ್ಟ ಭಾರತದ ಮೊದಲ ಪ್ರಧಾನಿ ಮೋದಿ. ಸರಿಸುಮಾರು ಆ ವೇಳೆಗೆ, ಭಾರತದಲ್ಲಿ ಗೂಢಚರ್ಯೆ ತಂತ್ರಾಂಶ ಬಳಕೆಯಲ್ಲಿತ್ತು ಎಂದು ಹೇಳಲಾಗಿದೆ. ಆದರೆ ಮೋದಿ ಭೇಟಿಗೂ ಮುನ್ನ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಪ್ರಧಾನಿ ಮೋದಿ ಭೇಟಿಗೆ ರಂಗ ಸಜ್ಜುಗೊಳಿಸಲು ಮಾರ್ಚ್‌ನಲ್ಲಿ ಇಸ್ರೇಲ್‌ಗೆ ತೆರಳಿದ್ದರು. ಆಗಿನ ‘ಕ್ರೊನೋಲಜಿ’ ಗಮನಿಸಿದರೆ, ‘ಭದ್ರತಾ’ ಸಹಯೋಗಕ್ಕೆ ಆಗಲೇ ಹೊಸ ಹೆಜ್ಜೆಗಳನ್ನು ಚರ್ಚಿಸಲಾಗಿತ್ತು ಎನ್ನುವುದು ಗೊತ್ತಾಗುತ್ತದೆ. ದೋವಲ್‌ರ ಭೇಟಿ “ಭಯೋತ್ಪಾದನೆ ಮತ್ತು ಭದ್ರತಾ ಕ್ಷೇತ್ರದಲ್ಲಿ ಭಾರತ-ಇಸ್ರೇಲ್ ನಡುವೆ ಹೆಚ್ಚು ಕ್ರಿಯಾಶೀಲ, ಬಲಿಷ್ಠ ಬಾಂಧವ್ಯಕ್ಕೆ ರಂಗ ಸಜ್ಜುಗೊಳಿಸಿದೆ” ಎಂದು ಆಗ ಮಾಧ್ಯಮಗಳಲ್ಲಿ ಪ್ರಕಟವಾದ ಸರ್ಕಾರದ ಅಧಿಕೃತ ವಿವರ ತಿಳಿಸಿತ್ತು.

ಇಸ್ರೇಲ್‌ನ ಶಸ್ತ್ರಾಸ್ತ್ರಗಳಿಗೆ ಭಾರತವೇ ಅತಿ ದೊಡ್ಡ ಗಿರಾಕಿಯಾಗಿದೆ. ಆಂತರಿಕ ಭದ್ರತಾ ಉದ್ದೇಶಗಳಿಗೆ ಭಾರತಕ್ಕೆ ಇಸ್ರೇಲ್ ಮಹತ್ವದ ಉಪಕರಣಗಳು ಮತ್ತು ತಂತ್ರಜ್ಞಾನ ಒದಗಿಸುತ್ತಿದೆ. ಹಾಗಾಗಿ ಈ ಭಾರೀ ದುಬಾರಿಯಾದ ಪೆಗಾಸಸ್ ಗೂಢಚರ್ಯೆ ತಂತ್ರಾಂಶವನ್ನು ಭಾರತದ ಯಾವ ಭದ್ರತಾ ಸಂಸ್ಥೆ ಬಳಸುತ್ತಿದೆ ಎನ್ನುವುದಷ್ಟೇ ಸ್ಪಷ್ಟವಾಗಬೇಕಿರುವ ವಿಷಯವಾಗಿದೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯ ರಕ್ಷಣೆ ಮತ್ತು ನಾಗರಿಕರ ಹಕ್ಕುಗಳ ರಕ್ಷಣೆ ದೃಷ್ಟಿಯಿಂದ ಕಾನೂನುಗಳನ್ನು ಮೀರಿ ಹೋದವರು, ಹಾಗೂ ಕಾನೂನಿನ ಎಲ್ಲ ಗಡಿಗಳನ್ನು ಉಲ್ಲಂಘಿಸಿದವರು ಯಾರು ಎಂದು ಹೊಣೆಯನ್ನು ನಿಗದಿಪಡಿಸುವುದು ಅತಿ ಅಗತ್ಯವಾಗಿದೆ. ಮೋದಿ ಸರ್ಕಾರ ಇದಕ್ಕೆ ನಿರಾಕರಿಸುವ ಮನೋಭಾವ ತೋರಿಸುತ್ತಿದೆ ಮತ್ತು ತಪ್ಪಿತಸ್ಥರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆಯಾದ್ದರಿಂದ ಒಂದು ಉನ್ನತ ಮಟ್ಟದ ತನಿಖೆ ನಡೆಸುವುದು ತೀರಾ ಅವಶ್ಯವಾಗಿದೆ. ಸುಪ್ರೀಂ ಕೋರ್ಟ್ ಇಂಥ ತನಿಖೆಯ ಮುತುವರ್ಜಿ ಮತ್ತು ಉಸ್ತುವಾರಿ ವಹಿಸಬೇಕು.

ಅನು: ವಿಶ್ವ

Leave a Reply

Your email address will not be published. Required fields are marked *