ರಾಜ್ಯದಾದ್ಯಂತ ಮಳೆಹಾನಿ, ಪ್ರವಾಹ ಮತ್ತು ನೆರೆ ಹಾನಿಗೆ ಪರಿಹಾರ ಒದಗಿಸಿ

ಕಳೆದ ಒಂದೆರಡು ತಿಂಗಳಲ್ಲಿ ರಾಜ್ಯದಾದ್ಯಂತ ಸುರಿದ ಮುಂಗಾರು ಮಳೆ ಹಲವು ಜಿಲ್ಲೆಗಳಲ್ಲಿ ಪ್ರವಾಹವಾಗಿದೆ. ಮಾತ್ರವಲ್ಲಾ, ಇದರಿಂದಾಗಿ, ರಾಜ್ಯದಾದ್ಯಂತ ಇರುವ ಎಲ್ಲಾ ಜಲಾಶಯಗಳೆಲ್ಲಾ ತುಂಬಿ  ನದಿಗಳೆಲ್ಲಾ ಉಕ್ಕಿ ಹರಿಯುವ ಪರಿಸ್ಥಿತಿ ಉಂಟಾಗಿದೆ. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆ, ಕರಾವಳಿ ಮತ್ತು ಮಲೆನಾಡು ಪ್ರದೇಶ ಹಾಗೂ ಉತ್ತರ ಹಾಗೂ ದಕ್ಷಿಣ ಕರ್ನಾಟಕದ ಹಲವಾರು ಜಿಲ್ಲೆಗಳು ಹಾನಿಗೀಡಾಗಿವೆ.

ಇದರಿಂದಾಗಿ ರಾಜ್ಯದಾದ್ಯಂತ ಜನ ಜೀವನ ಅಸ್ತವ್ಯಸ್ಥವಾಗಿದೆ. ಈ ಮಳೆಯ ಕಾರಣದಿಂದ ಕೋಟ್ಯಾಂತರ ಕೂಲಿಕಾರರು, ಬಡ ರೈತರು, ಕಾರ್ಮಿಕರು, ಕಸುಬುದಾರರು ಉದ್ಯೋಗ ಹೀನರಾಗಿದ್ದಾರೆ. ವಸತಿ-ಮನೆಗಳನ್ನು ಕಳೆದುಕೊಂಡರೇ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಜಾನುವಾರು ನೀರು ಪಾಲಾಗಿವೆ. ರಾಜ್ಯದಾದ್ಯಂತ ಹಲವಾರು ಜಿಲ್ಲೆಗಳಲ್ಲಿ ಲಕ್ಷಾಂತರ ಎಕರೆ ಜಮೀನುಗಳಿಗೆ ನೀರು ನುಗ್ಗಿ ಜಮೀನುಗಳಲ್ಲಿ ಕೊರಕಲುಗಳುಂಟಾಗಿ ಹಾನಿಗೀಡಾಗಿವೆ, ಬೆಳೆನಷ್ಟವಾಗಿದೆ.

ಹೆದ್ದಾರಿಗಳು, ಸೇತುವೆಗಳು, ನಾಗರೀಕ ರಸ್ತೆಗಳು, ಚರಂಡಿಗಳು ಗಂಭೀರ ಹಾನಿಗೀಡಾಗಿವೆ. ವಿದ್ಯುತ್ ಕಂಬಗಳು ಸಂಪರ್ಕ ಕಡಿತಗೊಂಡು ಮುರಿದು ಬಿದ್ದಿವೆ. ಮಳೆಯು ಸ್ವಲ್ಪ ಕಡಿಮೆಯಾಗುವುದರೊಂದಿಗೆ ನೆರೆಯ ಭೀತಿ ಆರಂಭಗೊಂಡಿದೆ ಇದು ಸಾಂಕ್ರಾಮಿಕ ಹರಡಲು ಕಾರಣವಾಗಲಿದೆ.

ಈ ನೆಲೆಯಲ್ಲಿ ರಾಜ್ಯ ಸರಕಾರ ಕೂಡಲೇ, ಸಂಕಷ್ಟದಲ್ಲಿರುವ ಜನತೆಯನ್ನು ರಕ್ಷಿಸಲು ಅಗತ್ಯ ನೆರವಿಗೆ ಧಾವಿಸಲು ಜಿಲ್ಲಾವಾರು ನೆರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ಆಹಾರದ ಪೊಟ್ಟಣಗಳು, ಪಡಿತರ ವಿತರಣೆ, ತಾತ್ಕಾಲಿಕ ವಸತಿಗಳನ್ನು ನಿರ್ಮಿಸಬೇಕು.

ಅದೇ ರೀತಿ, ರಾಜ್ಯದಾದ್ಯಂತ ಆಗಿರುವ ಹಾನಿಯನ್ನು ಗುರುತಿಸಲು ಅಧಿಕಾರಿಗಳ ತಂಡವನ್ನು ರಚಿಸಿ ಗಣತಿ ಮಾಡಬೇಕು. ಬೆಳೆ ಹಾನಿಗೆ ಪ್ರತಿ ಎಕರೆಗೆ ತಲಾ ರೂ.20,000, ಮರಗಳ ಹಾನಿಗೆ ತಲಾ ಮರಕ್ಕೆ ರೂ.10,000 ಗಳಂತೆ, ಹೊಲದ ಕೊರಕಲುಗಳಿಗೆ ಪ್ರತಿ ಎಕರೆಗೆ ರೂ.20,000 ಮತ್ತು ಜಾನುವಾರು ಹಾನಿಗೆ ತಲಾ ರೂ.50,000, ಬಿದ್ದ ಮನೆಗಳಿಗೆ ಪರಿಹಾರವನ್ನು ಒದಗಿಸಬೇಕೆಂದು ಮತ್ತು ಸಾಂಕ್ರಾಮಿಕ ಹಾವಳಿ ತಡೆಯಲು ಅಗತ್ಯ ಕ್ರಮವಹಿಸುವಂತೆ ಭಾರತ ಕಮ್ಯುನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ), ಕರ್ನಾಟಕ ರಾಜ್ಯ ಸಮಿತಿ ಒತ್ತಾಯಿಸುತ್ತದೆ.

ಯು. ಬಸವರಾಜ, ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *