ಖಾಸಗಿ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಸಿಪಿಐ(ಎಂ) ಪ್ರತಿಭಟನಾ ಪ್ರದರ್ಶನ

ದಕ್ಷಿಣ ಕನ್ನಡ ಜಿಲ್ಲೆಯ ಖಾಸಗೀ ಬಸ್ ಪ್ರಯಾಣ ದರ ಏರಿಕೆಯ ವಿರುದ್ಧ ಹಾಗೂ ಜಿಲ್ಲಾಡಳಿತದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿ ನಗರದಲ್ಲಿ ಇಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಮತ್ತು ಡಿವೈಎಫ್‍ಐ, ಜೆಎಂಎಸ್ ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು, ಜಿಲ್ಲಾಡಳಿತ ಹಾಗೂ ಬಸ್ ಮಾಲಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ದರ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ಮಂಗಳೂರು ನಗರ ದಕ್ಷಿಣ ಸಮಿತಿ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ʻʻಕೊರೊನಾ ಸಂಕಷ್ಟದ ಕಾಲದಲ್ಲಿ ಜನತೆಯ ಬದುಕೇ ದುಸ್ತರವಾಗಿದ್ದು, ಇದೇ ಸಂದರ್ಭದಲ್ಲಿ ಬಸ್ ಪ್ರಯಾಣ ದರವನ್ನೂ ಏರಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಳೆದ ಬಾರಿ ಮಾಸ್ಕ್ ಹಾಕದ ಅಮಾಯಕ ಯುವಕನ ಮೇಲೆ ಧಾಳಿ ನಡೆಸಿ, ತಾನು ಜನರ ಪರ ಎಂಬಂತೆ ಕಪಟ ನಾಟಕವಾಡಿದ ಜಿಲ್ಲಾಧಿಕಾರಿಗಳಿಗೆ, ಬಸ್ ಪ್ರಯಾಣ ದರಯೇರಿಕೆಯಿಂದ ಲಕ್ಷಾಂತರ ಜನರಿಗೆ ತೊಂದರೆ ಆಗುತ್ತೆ ಎಂಬ ಕನಿಷ್ಟ ಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.

cpim mangalore protest 31 07 2021Aಬಸ್‌ ದರದ ಬಗ್ಗೆ ಬಸ್ ಮಾಲಕರು ಶೇಕಡ 20ರಷ್ಟು ಹೆಚ್ಚಳಕ್ಕೆ ಆಗ್ರಹಿಸಿದರೆ, ಜಿಲ್ಲಾಧಿಕಾರಿಗಳು ಶೇಕಡ 50ರಷ್ಟು ಅಧಿಕ ದರ ಏರಿಕೆಗೆ ಅನುಮತಿ ನೀಡಿರುವ ಮೂಲಕ ಬಸ್ ಮಾಲಕರ ಲಾಬಿಗೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸಂಪೂರ್ಣ ಬಲಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಚಿಂತಕರಾದ ಡಾ. ಕೃಷ್ಣಪ್ಪ ಕೊಂಚಾಡಿ ಮಾತನಾಡಿ ʻʻಬಸ್ ಪ್ರಯಾಣ ದರಯೇರಿಕೆಗೆ ಸಂಬಂಧಿಸಿ ಸಾರಿಗೆ ಪ್ರಾಧಿಕಾರದ ಸಭೆ ಕರೆಯಬೇಕಾದ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲನ್ನು ಕೇಳದೆ ಕೇವಲ ಬಸ್ ಮಾಲಕರ ಪರವಾಗಿ ವರ್ತಿಸಿರುವುದು ಭಾರೀ ಸಂಶಯಕ್ಕೆಡೆಮಾಡಿದೆʼʼ ಎಂದು ಜಿಲ್ಲಾಡಳಿತದ ಸರ್ವಾಧಿಕಾರಿ ನಡೆಯನ್ನು ಟೀಕಿಸಿದರು.

ಡಿವೈಎಫ್‍ಐ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ʻʻಪ್ರತಿಯೊಂದು ಸಂದರ್ಭದಲ್ಲೂ ಸರಕಾರದ ಪರವಾಗಿ ತುತ್ತೂರಿ ಬಾರಿಸುವ ಬಸ್ ಮಾಲಕರು ಯಾವತ್ತಾದರೂ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಯೇರಿಕೆಯ ವಿರುದ್ದ ದ್ವನಿ ಎತ್ತಿದ್ದಾರೆಯೇ…? ನೆರೆಯ ಕೇರಳ ರಾಜ್ಯ ಸರಕಾರವು ಖಾಸಗೀ ಬಸ್ ಮಾಲಕರಿಗೆ 4 ತಿಂಗಳು ತೆರಿಗೆ ವಿನಾಯಿತಿ ನೀಡಿದಂತೆ, ಕರ್ನಾಟಕ ರಾಜ್ಯ ಸರಕಾರವೂ ತಮಗೆ ನೀಡಬೇಕೆಂದು ಯಾಕೆ ಒತ್ತಾಯಿಸುತ್ತಿಲ್ಲ. ಅದನ್ನು ಬಿಟ್ಟು ಜನಸಾಮಾನ್ಯರ ಬದುಕಿಗೆ ಕೊಡಲಿಪೆಟ್ಟು ನೀಡುವುದು ಎಷ್ಟು ಸರಿʼʼ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಜಿಲ್ಲಾ ನಾಯಕರಾದ ಜೆ.ಬಾಲಕೃಷ್ಣ ಶೆಟ್ಟಿ, ದಯಾನಂದ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಬಾಬು ದೇವಾಡಿಗ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್) ಜಿಲ್ಲಾ ನಾಯಕರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್‍ಐ) ಜಿಲ್ಲಾ ನಾಯಕರಾದ ನವೀನ್ ಕೊಂಚಾಡಿ, ಮನೋಜ್ ವಾಮಂಜೂರು, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ಪಿ.ಎ. ತಣ್ಣೀರುಬಾವಿ, ಸಾಮಾಜಿಕ ಕಾರ್ಯಕರ್ತರಾದ ಜೆರಾಲ್ಡ್ ಟವರ್, ಅಶುಂತ ಡಿಸೋಜ, ಸೆಂಟರ್‌ ಆಫ್‌ ಇಂಡಿಯನ್‌ ಟ್ರೇಡ್‌ ಯೂನಿಯನ್ಸ್‌(ಸಿಐಟಿಯು) ಮುಖಂಡರಾದ ಸಂತೋಷ್ ಆರ್.ಎಸ್., ನಾಗೇಶ್ ಕೋಟ್ಯಾನ್ ಮತ್ತಿತರರು ಭಾಗವಹಿಸಿದ್ದರು.

ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ಮಂಗಳೂರು ನಗರ ಮುಖಂಡರಾದ ದಿನೇಶ್ ಶೆಟ್ಟಿ, ಪ್ರದೀಪ್, ಮನೋಜ್, ಅಶೋಕ್ ಸಾಲ್ಯಾನ್, ಡಿವೈಎಫ್‍ಐ ನಾಯಕರಾದ ನೌಶಾದ್ ಬೆಂಗರೆ, ಜಗದೀಶ್ ಬಜಾಲ್, ಜೆಎಂಎಸ್ ಮುಖಂಡರಾದ ಜಯಲಕ್ಷ್ಮಿ, ಜೆಸಿಂತ ಡಿಸೋಜ ಮುಂತಾದವರು ವಹಿಸಿದ್ದರು.

Leave a Reply

Your email address will not be published. Required fields are marked *