ಬೊಮ್ಮಾಯಿ ಸರ್ಕಾರದಿಂದ ಏನನ್ನು ನಿರೀಕ್ಷಿಸಬಹುದು?

ಬಿಜೆಪಿ ಅಖಿಲ ಭಾರತ ವರಿಷ್ಠರ ನಿರ್ದೇಶನದಂತೆ ಹಾವೇರಿ ಜಿಲ್ಲೆ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ರಾಜ್ಯದ 30ನೇ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಅವರು ರಾಜ್ಯದ ಮುಖ್ಯಮಂತ್ರಿಯಾಗುತ್ತಿರುವ 23ನೇ ವ್ಯಕ್ತಿ. ಅವರ ತಂದೆ ಎಸ್.ಆರ್. ಬೊಮ್ಮಾಯಿ ರಾಜ್ಯದ 11ನೇ ಮುಖ್ಯಮಂತ್ರಿಯಾಗಿ 1988 ರಿಂದ 1989 ರ ವರೆಗೆ ಸೇವೆ ಸಲ್ಲಿಸಿದ್ದರು. ಬಸವರಾಜ ಬೊಮ್ಮಯಿಯವರು ಬಿ.ಎಸ್.ಯಡಿಯೂರಪ್ಪರವರ ಪರಮಾಪ್ತರಲ್ಲಿ ಒಬ್ಬರಾಗಿದ್ದು ಸಹಜವಾಗಿ ಅವರ ಉತ್ತರಾಧಿಕಾರಿಯಾಗಿ ಮುಖ್ಯಮಂತ್ರಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.

ನೂತನ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕಮಡೊಳ್ಳಿ ಗ್ರಾಮದಲ್ಲಿ ಹುಟ್ಟಿದರು. ತಂದೆ ದಿವಂಗತ ಎಸ್.ಆರ್.ಬೊಮ್ಮಾಯಿ, ರಾಜ್ಯದ ಮಾಜಿ ಮುಖ್ಯಮಂತ್ರಿಗಳು. ತಾಯಿ ದಿವಂಗತ ಗಂಗಮ್ಮ ಬೊಮ್ಮಾಯಿ. ಇಂಜಿನಿಯರಿಂಗ್ ಪದವಿದರರಾಗಿದ್ದ ಇವರು ಕಾಲೇಜ್ ಹಂತದಲ್ಲೇ ರಾಜಕೀಯ ಸಂಘಟನೆಯತ್ತ ಒಲವನ್ನು ಬೆಳೆಸಿಕೊಂಡಿದ್ದರು. 1997 ರಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜ್ಯ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಮುಂದೆ ಹಾವೇರಿ ಜಿಲ್ಲೆಯ ಶಿಗ್ಗಾವಿ ಕ್ಷೇತ್ರದಿಂದ 2008 ರಿಂದ ಮೂರು ಬಾರಿ ಸತತವಾಗಿ ಶಾಸಕರಾಗಿ ಆಯ್ಕೆಯಾದರು.

ಇದನ್ನು ಓದಿ: ಜನವಿರೋಧಿ ಆಡಳಿತ ಹಾಗೂ ಅಧಿಕಾರಕ್ಕಾಗಿ ಬಿಜೆಪಿಯೊಳಗೆ ಕಚ್ಚಾಟ

ಬಸವರಾಜ ಬೊಮ್ಮಾಯಿಯವರು ತಂದೆಗೆ ತಕ್ಕ ಮಗ ಎಂದು ಹೇಳುವವರಿದ್ದಾರೆ. ಅಪ್ಪನ ಹಾದಿಯಲ್ಲೇ ನಡೆದು ಹೆಸರು ಮಾಡುತ್ತಾರೆ ಎಂದು ಅವರ ಅಭಿಮಾನಿಗಳ ನಿರೀಕ್ಷೆ. ಆದರೆ ಬಸವರಾಜ ಬೊಮ್ಮಾಯಿಯವರು ತನ್ನ ತಂದೆ ತುಳಿದ ರಾಜಕೀಯ ಹಾದಿಯನ್ನು ತ್ಯಜಿಸಿ ವರ್ಷಗಳೇ ಕಳೆದಿವೆ. ಎಸ್.ಆರ್.ಬೊಮ್ಮಾಯಿಯವರು ರಾಯಿಸ್ಟ್ ಸಮಾಜವಾದಿ ಸಿದ್ಧಾಂತವನ್ನು ಮೈಗೂಡಿಸಿಕೊಂಡವರು. ತಂದೆಯ ರಾಜಕೀಯ ಪಯಣವನ್ನು ಬಾಲ್ಯದಿಂದಲೇ ಗಮನಿಸುತ್ತಾ ಬಂದಿದ್ದ  ಬಸವರಾಜ ಬೊಮ್ಮಾಯಿಯವರು ಸಮಾಜವಾದಿ ಚಿಂತನೆಯ ರಾಜಕೀಯವನ್ನೇ ಆಯ್ಕೆ ಮಾಡಿಕೊಂಡರು. ಬಹುಬೇಗ ಜನತಾ ಪರಿವಾರದ ಸಂಘಟನೆಯಲ್ಲಿ ಕ್ರಿಯಾಶೀಲರಾದರು. ಜಯಪ್ರಕಾಶ ನಾರಾಯಣ, ಲೋಹಿಯಾ ಸಿದ್ದಾಂತಗಳನ್ನು ಅಧ್ಯಯನ ಮಾಡಿದರು. ಆದರೆ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ ಮೂಲಕ ಬಿಜೆಪಿಗೆ ಹತ್ತಿರವಾದರು. ಯಡಿಯೂರಪ್ಪರವರ ಪರಮಾಪ್ತರಾದರು. ಮುಂದೆ ಯಡಿಯೂರಪ್ಪರವರು ಬಿಜೆಪಿ ಬಿಟ್ಟು ಕೆಜೆಪಿ ಪಕ್ಷ ಕಟ್ಟಿದಾಗ ಬೊಮ್ಮಾಯಿರವರು ಬಿಜೆಪಿಯಲ್ಲಿಯೇ ಉಳಿದರು ಮಾತ್ರವಲ್ಲ ಯಡಿಯೂರಪ್ಪರವರನ್ನು ಮರಳಿ ಬಿಜೆಪಿಗೆ ಕರೆತರುವಲ್ಲಿಯೂ ಬೊಮ್ಮಾಯಿ ಪ್ರಮುಖ ಪಾತ್ರ ವಹಿಸಿದ್ದರು. ಇದರಿಂದಾಗಿ ಬಿಜೆಪಿ ವರಿಷ್ಠರಲ್ಲಿ ಬೊಮ್ಮಾಯಿ ಬಗ್ಗೆ ವಿಶ್ವಾಸ ಗಟ್ಟಿಗೊಳ್ಳಲು ಒಂದು ಕಾರಣವಾಯಿತು.

ಲಿಂಗಾಯತರ ಪೈಕಿ ಪಂಚಮಶಾಲಿ, ಬಣಜಿಗ ಮತ್ತು ಗಾಣಿಗೇರರು ರಾಜಕೀಯವಾಗಿ ಪ್ರಭಾವಿಗಳು. ಅವರೆಲ್ಲರನ್ನು ಒಂದುಗೂಡಿಸಿ ಯಡಿಯೂರಪ್ಪ ಅವರ ನಾಯಕರಾಗಿ ಹೊರಹೊಮ್ಮಿದ್ದರು. ಲಿಂಗಾಯತರ ಪೈಕಿ `ಸಾದರು’ ಅತಿ ಚಿಕ್ಕ ಉಪಪಂಗಡಕ್ಕೆ ಸೇರಿದವರಾಗಿದ್ದಾರೆ. ಬೊಮ್ಮಾಯಿಯವರು `ಸಾದರ’ ಒಳಪಂಗಡಕ್ಕೆ ಸೇರಿದವರು. ಮುಂದಿನ ದಿನಗಳಲ್ಲಿ ಲಿಂಗಾಯತರು ಒಳಪಂಗಡಗಳ ಆಧಾರದಲ್ಲಿ ತಿರುಗಿಬಿದ್ದರೆ ಅಚ್ಚರಿಯೇನಲ್ಲ.

ಅನಿರೀಕ್ಷಿತವಾಗಿ ರಾಜ್ಯದ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಅವರಿಂದ ಜನತೆ ಏನನ್ನು ನಿರೀಕ್ಷಿಸಬಹುದು. “ಪಕ್ಷದ ಸಿದ್ಧಾಂತ, ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ” ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಬಿಜೆಪಿಯ ತತ್ವ ಸಿದ್ದಾಂತಗಳು ಆರ್‌ಎಸ್‌ಎಸ್ ಸಿದ್ಧಾಂತಗಳೇ ಆಗಿರುತ್ತವೆ ಎಂಬ ವಿಷಯ ಎಲ್ಲರಿಗೂ ತಿಳಿದಿರುವುದೆ. ಬೊಮ್ಮಾಯಿ ಮಾತುಗಳಲ್ಲಿ ಯಾವುದೇ ಹೊಸತನವಿಲ್ಲ. ಸಮಾಜವಾದಿ ದಾರಿಯನ್ನು ತ್ಯಜಿಸಿ ಕೋಮುವಾದಿ ಪಥವನ್ನು ಆಯ್ಕೆಮಾಡಿಕೊಂಡಿರುವ ಬಸವರಾಜ ಬೊಮ್ಮಾಯಿಯವರಿಂದ ಯಾವ ಒಳ್ಳೆಯ ದಿನಗಳನ್ನು ನಿರೀಕ್ಷಿಸಬಹುದು? ಬೊಮ್ಮಾಯಿಯವರಿಂದ ಯಾವ ಒಳ್ಳೆಯ ದಿನಗಳನ್ನು ನಿರೀಕ್ಷಿಸಬಹುದು. ಬೊಮ್ಮಾಯಿರವರು ಯಡಿಯೂರಪ್ಪರವರನ್ನು, ಯಡಿಯೂರಪ್ಪ ಮೋದಿಯವರನ್ನು ಅವಲಂಬಿಸಿ ಆಡಳಿತ ನಡೆಸಬೇಕು. ಯಾವ ಸ್ವತಂತ್ರ ಕಾರ್ಯಾಚರಣೆ ಸಾಧ್ಯವಿಲ್ಲ. ವ್ಯಕ್ತಿ ಬದಲಾವಣೆ ಮುಖ್ಯವಲ್ಲ. ಧೋರಣೆಗಳು ಬದಲಾಗಬೇಕು. ಜನತೆಯ ಆದಾಯ ಹೆಚ್ಚಿಸುವ, ನಿರುದ್ಯೋಗವನ್ನು ನಿರ್ಮೂಲನೆ ಮಾಡುವ, ರೈತರಿಗೆ ನ್ಯಾಯವನ್ನು ದೊರಕಿಸುವ, ಅಸ್ಪೃಶ್ಯತೆ, ಅಸಮಾನತೆ ಕಿತ್ತುಹಾಕುವ, ಮಹಿಳೆಯರಿಗೆ ಸದಾ ರಕ್ಷಣೆಯನ್ನು ನೀಡುವ, ಜವಾಬ್ದಾರಿಯುತ ಆಡಳಿತವನ್ನು ನೀಡಲಾಗದೆ ಬೊಮ್ಮಾಯಿ ಸರ್ಕಾರ ಜನತೆಗೆ ಏನು ಒಳ್ಳೆಯದನ್ನು ಮಾಡಲು ಸಾಧ್ಯ. ಬೊಮ್ಮಾಯಿ ಅವರ ಆಡಳಿತ ಜನವಿರೋಧಿಯಾಗಿಯೇ ಮುಂದುವರೆದರೆ ಆಶ್ಚರ್ಯವೇನಿಲ್ಲ.

Leave a Reply

Your email address will not be published. Required fields are marked *