ರಾಜ್ಯಪಾಲರ ನೇಮಕ ಮತ್ತು ಪಾತ್ರದಲ್ಲಿ ಸುಧಾರಣೆ

ಪ್ರಕಾಶ್ ಕಾರಟ್

Prakash Karat
ಪ್ರಕಾಶ್ ಕಾರಟ್

ಪ್ರಸಕ್ತ ಸಾಂವಿಧಾನಿಕ ಅಂಶದ ಪ್ರಕಾರ ರಾಜ್ಯಪಾಲರು ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುತ್ತಾರೆ. ಸಿಪಿಐ(ಎಂ) 2008ರಲ್ಲೇ ಹೇಳಿರುವಂತೆ ರಾಜ್ಯಗಳಿಗೆ ಕೇಂದ್ರದಿಂದ ನೇಮಕಗೊಳ್ಳುವ ರಾಜ್ಯಪಾಲರಿರುವುದು ಒಕ್ಕೂಟ ಜನತಾಂತ್ರಿಕ ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿಲ್ಲ. ರಾಜ್ಯಪಾಲರ ಹುದ್ದೆಯನ್ನು ಮುಂದುವರಿಸಲೇಬೇಕು ಎಂದಾದರೆ ಆಗ ʻಸರ್ಕಾರಿಯಾ ಆಯೋಗʼ ಸೂಚಿಸಿದ ಮಾನದಂಡಕ್ಕೆ ಅನುಗುಣವಾಗಿ ಆಯಾ ರಾಜ್ಯದ ಮುಖ್ಯಮಂತ್ರಿ ಶಿಫಾರಸ್ಸು ಮಾಡುವ ಮೂರು ಪ್ರಮುಖ ವ್ಯಕ್ತಿಗಳ ಪಟ್ಟಿಯಿಂದ ಒಬ್ಬರನ್ನು ಆಯ್ಕೆ ಮಾಡಬೇಕು. ಆದರೆ ಇಂತಹ ಸುಧಾರಣೆಗಳನ್ನು ಈಗ ಕೇಂದ್ರದಲ್ಲಿ ಅಧಿಕಾರ ನಡೆಸುವವರಿಂದಂತೂ ನಿರೀಕ್ಷಿಸಲು ಸಾಧ್ಯವಿಲ್ಲ. ಪ್ರತಿಪಕ್ಷ ಆಡಳಿತದ ರಾಜ್ಯಗಳು, ಚುನಾಯಿತ ರಾಜ್ಯ ಸರ್ಕಾರ ಮತ್ತು ಶಾಸನಸಭೆಗಳ ಅಧಿಕಾರಗಳ ಮೇಲೆ ಆಕ್ರಮಣ ನಡೆಯುವುದನ್ನು ತಡೆಯಲು ಎಚ್ಚರದಿಂದಿರುವುದು.

ರಾಜ್ಯಪಾಲರ ನೇಮಕ ಅಥವಾ ಅವರನ್ನು ವಾಪಸ್ಸು ಕರೆಸಿಕೊಳ್ಳುವ ವಿಚಾರದಲ್ಲಿ ರಾಜ್ಯಗಳಿಗೆ ಅಧಿಕಾರ ನೀಡುವ ದಿಸೆಯಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಸಲಹೆ ಮಾಡಿ ಕೇರಳ ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ಪತ್ರ ಬರೆದಿದೆ. ಕೇಂದ್ರ-ರಾಜ್ಯ ಸಂಬಂಧಗಳ ಸುಧಾರಣೆ ಕುರಿತು ಜಸ್ಟಿಸ್ ಪುಂಛಿ ಆಯೋಗ ಸಲ್ಲಿಸಿದ್ದ ಶಿಫಾರಸ್ಸುಗಳಿಗೆ ಪ್ರತಿಕ್ರಿಯೆಯಾಗಿ ಕೇರಳದ ಎಲ್‌ಡಿಎಫ್ ಸರಕಾರ ಈ ಪತ್ರ ಬರೆದಿದೆ. ಕೇರಳ ತಳೆದಿರುವ ನಿಲುವು ಈಗ ಕೇಂದ್ರ ಸರಕಾರದಿಂದ ನೇಮಕವಾಗಿ ಅದರ ಏಜೆಂಟರಂತೆ ವರ್ತಿಸುವ ರಾಜ್ಯಪಾಲರ ಪಾತ್ರದಲ್ಲಿ ಬದಲಾವಣೆ ಆಗಬೇಕೆಂಬ ದೀರ್ಘ ಕಾಲದ ಅಗತ್ಯವನ್ನು ಪ್ರತಿಬಿಂಬಿಸುತ್ತದೆ.

ರಾಜ್ಯಪಾಲರನ್ನು ವಾಪಸ್ಸು ಕರೆಸಲು ಶಿಫಾರಸ್ಸು ಮಾಡುವ ಅಧಿಕಾರವನ್ನು ರಾಜ್ಯ ಶಾಸನಸಭೆಗಳಿಗೆ ನೀಡುವ ನಿಟ್ಟಿನಲ್ಲಿ ಸಂವಿಧಾನದ 156ನೇ ಕಲಮಿಗೆ ತಿದ್ದುಪಡಿ ಮಾಡುವಂತೆಯೂ ಕೇರಳ ಸರ್ಕಾರ ಆಗ್ರಹಿಸಿದೆ. ರಾಜ್ಯಪಾಲರು ಸಾಂವಿಧಾನಿಕ ಹಾಗೂ ಶಾಸನಾತ್ಮಕ ಕಾರ್ಯಗಳನ್ನು ಉಲ್ಲಂಘಿಸುವುದು ಕಂಡುಬಂದಲ್ಲಿ ಅವರನ್ನು ವಾಪಸ್ಸು ಕರೆಸಲು ರಾಜ್ಯಗಳಿಗೆ ಅಧಿಕಾರವಿರಬೇಕೆಂಬುದು ಕೇರಳದ ನಿಲುವಾಗಿದೆ.

ಇತ್ತೀಚಿನ ವರ್ಷಗಳಲ್ಲಿ, 2014ರಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಅಗತ್ಯಗಳಿಗೆ ಅಡಿಯಾಳಾಗಿ ಕಾರ್ಯನಿರ್ವಹಿಸುವಂಥ ರಾಜ್ಯಪಾಲರನ್ನೇ ನಾಚಿಕೆಯಿಲ್ಲದೆ ನೇಮಕ ಮಾಡಲಾಗುತ್ತಿದೆ. ಕೆಲವು ರಾಜ್ಯಪಾಲರಂತೂ ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದವರಾಗಿದ್ದರೆ, ಇನ್ನು ಹಲವರು ಆಳುವ ಪಕ್ಷದೊಂದಿಗೆ ಒಳ್ಳೆಯವರಾಗಿರಲು ಇನ್ನೂ ಹೆಚ್ಚಾಗಿಯೇ ಕೇಂದ್ರದ ಆಜ್ಞಾಪಾಲಕರಾಗಿರುವಂಥವರು.

kerala-raj-bhavanಕೇರಳದ ರಾಜ್ಯಪಾಲ ಅರಿಫ್ ಮಹಮದ್ ಖಾನ್ ಸಂವಿಧಾನದ ನಿಯಮಗಳಿಗೆ ಅನುಗುಣವಾಗಿರದ ಅತಿರೇಕದ ನಿಲುವುಗಳನ್ನು ತಳೆಯುತ್ತಿದ್ದಾರೆ. ರಾಜ್ಯದ ಪ್ರಸಕ್ತ ಬಜೆಟ್ ಅಧಿವೇಶನದ ಆರಂಭದ ಸಂದರ್ಭದಲ್ಲಿ, ವಿಧಾನಸಭೆಯಲ್ಲಿ ಮಾಡುವ ಭಾಷಣಕ್ಕೆ ಸಹಿ ಹಾಕಲು ನಿರಾಕರಿಸಿದ್ದರು. ಕೊನೆ ಕ್ಷಣದಲ್ಲಿ ಅವರು ಅದಕ್ಕೆ ಒಪ್ಪಿ ರಾಜ್ಯಪಾಲರ ಕರ್ತವ್ಯದಂತೆ ಪೂರ್ಣ ಭಾಷಣವನ್ನು ಓದಿದರು. ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ವಿಚಾರದಲ್ಲಿ ಕೂಡ ರಾಜ್ಯಪಾಲ ಖಾನ್ ಪಾತ್ರ ವಿವಾದಾತ್ಮಕವಾಗಿದೆ. ಕಣ್ಣೂರು ವಿಶ್ವವಿದ್ಯಾಲಯದ ಕುಲಪತಿ ನೇಮಕಕ್ಕೆ ಸಹಿ ಹಾಕಿದ ನಂತರ ಕೆಲವು ತಪ್ಪು ಅಭಿಪ್ರಾಯ ಬರುವಂಥ ಹೇಳಿಕೆಗಳನ್ನು ಅವರು ನೀಡಿದ್ದರು. ಕೇರಳ ಹೈಕೋರ್ಟ್ ಈ ವಿಚಾರದಲ್ಲಿನ ಎಲ್ಲ ಸಂಶಯಗಳನ್ನು ನಿವಾರಿಸಿದೆ.

ಬಿಜೆಪಿಯೇತರ ಆಡಳಿತವಿರುವ ಇತರ ರಾಜ್ಯಗಳಲ್ಲಿ ಕೂಡ ರಾಜ್ಯಪಾಲರು ನಿರ್ಲಜ್ಜವಾಗಿ ನಡೆದುಕೊಳ್ಳುತ್ತಿದ್ದಾರೆ. ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ. ಬಂಗಾಳ ರಾಜ್ಯಪಾಲ ಜಗದೀಪ್ ಧನ್‌ಕರ್ ಅವರಂತೂ ಆಗಾಗ ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಟ್ವೀಟ್ ಮಾಡುತ್ತಿರುತ್ತಾರೆ. ಚುನಾಯಿತ ರಾಜ್ಯ ಸರ್ಕಾರವನ್ನು ಧಿಕ್ಕರಿಸಿ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆನ್ನುವುದು ಅವರ ಬಯಕೆಯಾಗಿದೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ರಾಜ್ಯ ವಿಧಾನ ಪರಿಷತ್‌ನ 12 ಸದಸ್ಯರ ನಾಮಕರಣ ಕುರಿತ ರಾಜ್ಯ ಸಕಾರದ ಶಿಫಾರಸ್ಸುನ್ನು ಇನ್ನೂ ಹಾಗೇ ಇಟ್ಟುಕೊಂಡಿದ್ದಾರೆ. ಕುಲಾಧಿಪತಿ ಎಂಬ ನೆಲೆಯಲ್ಲಿ ಕುಲಪತಿಗಳೊಂದಿಗೆ ನೇರವಾಗಿ ವ್ಯವಹರಿಸಲು ಅವರು ಮುಂದಾಗುತ್ತಾರೆ.

ರಾಜ್ಯಪಾಲರ ಈ ರೀತಿಯ ಹಸ್ತಕ್ಷೇಪದಿಂದ ರೋಸಿ ಹೋದ ಮಹಾರಾಷ್ಟ್ರ ಸರ್ಕಾರ 2021 ಡಿಸೆಂಬರ್‌ನಲ್ಲಿ ಮಹಾರಾಷ್ಟ್ರ ಸಾರ್ವಜನಿಕ ವಿಶ್ವವಿದ್ಯಾಲಯಗಳ ಕಾನೂನಿಗೆ ತಿದ್ದುಪಡಿ ತಂದಿದೆ. ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವರನ್ನು ಪ್ರೊ-ಚಾನ್ಸಲರ್ ಆಗಿ ನೇಮಿಸಲು ಹಾಗೂ ಕುಲಪತಿಗಳ ನೇಮಕ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ತರಲು ಈ ತಿದ್ದುಪಡಿ ಅವಕಾಶ ಕಲ್ಪಿಸುತ್ತದೆ. ರಾಜ್ಯ ಸರ್ಕಾರ ಸೂಚಿಸುವ ಎರಡು ಹೆಸರುಗಳಲ್ಲಿ ಒಂದನ್ನು 30 ದಿನದೊಳಗೆ ಆಯ್ಕೆ ಮಾಡುವುದಷ್ಟಕ್ಕೆ ರಾಜ್ಯಪಾಲರ ಪಾತ್ರವನ್ನು ಈ ತಿದ್ದುಪಡಿ ಸೀಮಿತಗೊಳಿಸುತ್ತದೆ.

ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಕೂಡ ವಿವಿಗಳ ಕುಲಪತಿಗಳೊಂದಿಗೆ ನೇರವಾಗಿ ವ್ಯವಹರಿಸಬಯಸುತ್ತಾರೆ. ವಿಧಾನಸಭೆ ಒಕ್ಕೊರಲಿನಿಂದ ಅಂಗೀಕರಿಸಿದ್ದ ನೀಟ್ ಕುರಿತ ಕಾನೂನನ್ನು ಅವರು ಸರ್ಕಾರಕ್ಕೆ ವಾಪಸ್ಸು ಕಳಿಸಿದ್ದಾರೆ.

ನಿರ್ದಿಷ್ಟ ರಾಜ್ಯಪಾಲರು ಯಾವುದಾದರೊಂದು ವಿಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿದ್ದಾರೆ ಎನ್ನುವುದು ಇಲ್ಲಿ ಅಡಕವಾಗಿರುವ ಪ್ರಶ್ನೆಯಲ್ಲ. ಇಲ್ಲಿ ತುಂಬಾ ಆಳವಾದ ಒಳಬೇನೆ ಇದೆ. ಪ್ರಸಕ್ತ ಸಾಂವಿಧಾನಿಕ ಅಂಶದ ಪ್ರಕಾರ ರಾಜ್ಯಪಾಲರು ಕೇಂದ್ರ ಸರಕಾರದ ಪ್ರತಿನಿಧಿಯಾಗಿರುತ್ತಾರೆ. ಇದು ರಾಜ್ಯಪಾಲರು ಕೇಂದ್ರದ ಪ್ರತಿನಿಧಿಯಷ್ಟೇ ಆಗಿರುವುದನ್ನು ಅನಿವಾರ್ಯಗೊಳಿಸುತ್ತದೆ.

ರಾಜ್ಯಪಾಲರ ನೇಮಕದ ಅಧಿಕಾರ ಕೇಂದ್ರ ಸರ್ಕಾರದ ಕೈಯಲ್ಲಿ ಇರುವ ತನಕ ಸಾರ್ವಜನಿಕ ಸೇವೆಯಲ್ಲಿರುವ ಪ್ರಮುಖರು ಅಥವಾ ರಾಜಕೀಯೇತರ ವ್ಯಕ್ತಿಗಳು ರಾಜ್ಯಪಾಲರಾಗಿರಬೇಕೆಂಬ ಅನೇಕ ಪ್ರಸ್ತಾಪನೆಗಳಿಗೆ ಅರ್ಥವೇ ಇಲ್ಲದಂತಾಗುತ್ತದೆ. ನಿಜ ಹೇಳಬೇಕೆಂದರೆ, ರಾಜ್ಯಪಾಲರಾಗಿ ನೇಮಕಗೊಂಡ ನಿವೃತ್ತ ಅಧಿಕಾರಿಗಳಂಥ ರಾಜಕೀಯೇತರ ವ್ಯಕ್ತಿಗಳು ಇನ್ನೂ ಕೆಟ್ಟದಾಗಿ ವರ್ತಿಸಿರುವುದು ಅನುಭವದಿಂದ ಗೊತ್ತಾಗಿದೆ. ಏಕೆಂದರೆ ಅವರು ತನ್ನ ಹುದ್ದೆಗಾಗಿ ಕೇಂದ್ರ ಸರಕಾರಕ್ಕೆ ಋಣಿಯಾಗಿರುತ್ತಾರೆ.

ಆದ್ದರಿಂದಲೇ 1983ರಲ್ಲಿ ಶ್ರೀನಗರದಲ್ಲಿ ನಡೆದ ಕೇಂದ್ರ-ರಾಜ್ಯ ಸಂಬಂಧ ಕುರಿತ ಪ್ರತಿಪಕ್ಷಗಳ ಸಮಾವೇಶ, ಸಂಬಂಧಪಟ್ಟ ರಾಜ್ಯಗಳು ಶಿಫಾರಸ್ಸು ಮಾಡಿದ ಪಟ್ಟಿಯ ಆಧಾರದಲ್ಲಿ ರಾಷ್ಟ್ರಪತಿಯವರು ರಾಜ್ಯಪಾಲರನ್ನು ನೇಮಿಸಬೇಕೆಂದು ಸಲಹೆ ಮಾಡಿತ್ತು.

ಜಸ್ಟಿಸ್ ಸರ್ಕಾರಿಯಾ ಮತ್ತು ಪುಂಛಿ ಆಯೋಗಕ್ಕೆ ಸಿಪಿಐ(ಎಂ) ಇದೇ ರೀತಿಯ ಪ್ರಸ್ತಾವನೆಗಳನ್ನು ಸಲ್ಲಿಸಿದೆ. “ಕೇಂದ್ರ-ರಾಜ್ಯ ಸಂಬಂಧ ಪುನಾರಚನೆ ಕುರಿತ ನಿಲುವು ಪ್ರಬಂಧೆ’ʼ ಎಂಬ ಒಂದು ಸಮಗ್ರ ಪ್ರಬಂಧವನ್ನು 2008ರ ಅಕ್ಟೋಬರ್‌ನಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿ ಅಂಗೀಕರಿಸಿತ್ತು. “ರಾಜ್ಯಗಳಿಗೆ ಕೇಂದ್ರದಿಂದ ನೇಮಕಗೊಳ್ಳುವ ರಾಜ್ಯಪಾಲರಿರುವುದು ಒಂದು ಆಭಾಸವಾಗಿದೆ. ಇದು ಒಕ್ಕೂಟ ಜನತಾಂತ್ರಿಕ ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿಲ್ಲ. ರಾಜ್ಯಪಾಲರ ಹುದ್ದೆಯನ್ನು ಮುಂದುವರಿಸಲೇಬೇಕು ಎಂದಾದರೆ ಆಗ ಸರ್ಕಾರಿಯಾ ಆಯೋಗ ಸೂಚಿಸಿದ ಮಾನದಂಡಕ್ಕೆ ಅನುಗುಣವಾಗಿ ಆಯಾ ರಾಜ್ಯದ ಮುಖ್ಯಮಂತ್ರಿ ಶಿಫಾರಸ್ಸು ಮಾಡುವ ಮೂರು ಪ್ರಮುಖ ವ್ಯಕ್ತಿಗಳ ಪಟ್ಟಿಯಿಂದ ಒಬ್ಬರನ್ನು ಆಯ್ಕೆ ಮಾಡಬೇಕು’ʼ ಎಂದು ಅದರಲ್ಲಿ ಸಿಪಿಐ(ಎಂ) ಹೇಳಿತ್ತು.

ಕೇಂದ್ರದಲ್ಲಿ ಈಗ ಆಡಳಿತ ನಡೆಸುತ್ತಿರುವವರು ರಾಜ್ಯಪಾಲರ ನೇಮಕ ಹಾಗೂ ಈ ಸಾಂವಿಧಾನಿಕ ಅಧಿಕಾರಿಯ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ಯಾವುದೇ ಸುಧಾರಣೆ ತರುವ ಸಾಧ್ಯತೆಯೇ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಾಡಬಹುದಾದ್ದೆಂದರೆ, ಪ್ರತಿಪಕ್ಷ ಆಡಳಿತದ ರಾಜ್ಯಗಳು, ಚುನಾಯಿತ ರಾಜ್ಯ ಸರ್ಕಾರ ಮತ್ತು ಶಾಸನಸಭೆಗಳ ಅಧಿಕಾರಗಳ ಮೇಲೆ ಆಕ್ರಮಣ ನಡೆಯುವುದನ್ನು ತಡೆಯಲು ಎಚ್ಚರದಿಂದಿರುವುದು. ಅದರೊಂದಿಗೆ, ರಾಜ್ಯಪಾಲರು ತಮಗೆ ವಿಧಿಸಿರುವ ನಿಯಮಾವಳಿಗಳನ್ನು ಮೀರಿ ಹೋಗದಂತೆ ಖಾತ್ರಿಪಡಿಸಲು ರಾಜ್ಯ ಶಾಸನಸಭೆಗಳು ಅಗತ್ಯವಿದ್ದರೆ, ವಿವಿಗಳ ಕಾನೂನಿನಂಥ ಕಾನೂನುಗಳನ್ನು ತಿದ್ದುಪಡಿ ಮಾಡಬಹುದು.

ಅನು: ವಿಶ್ವ

Leave a Reply

Your email address will not be published. Required fields are marked *