ಸಂಸತ್ತು ತನ್ನ ಹೊಣೆಗಾರಿಕೆ ನಿಭಾಯಿಸದಂತೆ ಅಡ್ಡಿಪಡಿಸುವುದನ್ನು ಮೋದಿ ಸರಕಾರ ನಿಲ್ಲಿಸಬೇಕು-ಸಿಪಿಐ(ಎಂ) ಪೊಲಿಟ್‌ಬ್ಯುರೊ

ಈ ಬಿಜೆಪಿ ಸರಕಾರ ಸಂಸತ್ತು ತನ್ನ ಹೊಣೆಗಾರಿಕೆಯನ್ನು ನಿಭಾಯಿಸದಂತೆ ಅಡ್ಡಿಯುಂಟು ಮಾಡುತ್ತಿದೆ, ಮತ್ತು ದುಡಿಯುವ ಜನಗಳ ಜೀವನ್ಮರಣ ಪ್ರಶ್ನೆಗಳನ್ನು ಕುರಿತಂತೆ ಶಾಸನಗಳನ್ನು ರಚಿಸದಂತೆ ಅದನ್ನು ದುರ್ಬಲಗೊಳಸುತ್ತಿದೆ. ಇದು ನಿಲ್ಲಬೇಕು ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಗ್ರಹಿಸಿದೆ. ಸರಕಾರೀ ಪ್ರಾಯೋಜಿತ ಅಡೆ-ತಡೆಗಳಿಂದ ಉಂಟು ಮಾಡಿದ ಗದ್ದಲದ ನಡುವೆ ಕೇಂದ್ರ ಸರಕಾರ ಮಹತ್ವದ ಶಾಸನಗಳನ್ನು ಪಾಸು ಮಾಡಿಸಿಕೊಳ್ಳುತ್ತಿದೆ ಎಂದು ಅದು ದೂರಿದೆ.

ಜುಲೈ 31ರಂದು ಸಭೆ ಸೇರಿದ ಪೊಲಿಟ್‌ಬ್ಯುರೊ ಮತ್ತೆ ಏರುತ್ತಿರುವ ಕೋವಿಡ್ ಸೋಂಕಿನ ಪ್ರಮಾಣ, ಲಸಿಕೀಕರಣದಲ್ಲಿ ನಿಧಾನಗತಿ, ಪೆಗಸಸ್ ಗೂಢಚಾರಿಕೆ ತಂತ್ರಾಂಶದ ಮೇಲೆ ತನಿಖೆ ನಡೆಸುವ ವಿಷಯದಲ್ಲಿ ಮೊಂಡುತನದ ಪ್ರದರ್ಶನ, ಅಸ್ಸಾಂ-ಮಿಝೋರಾಂ ಸಶಸ್ತ್ರ ತಿಕ್ಕಾಟದ ಅಭೂತಪೂರ್ವ ಘಟನೆ, ಶೈಕ್ಷಣಿಕ ಸಂಸ್ಥೆಗಳ ಪುನರಾರಂಭಕ್ಕೆ ಕ್ರಮ ಹಾಗೂ ಮುಂದುವರೆಯುತ್ತಿರುವ ರೈತರ ಹೋರಾಟವನ್ನು ಚರ್ಚಿಸಿತು. ಸಭೆಯ ನಂತರ ಅದು ಹೊರಡಿಸಿರುವ ಪತ್ರಿಕಾ ಪ್ರಕಟಣೆ ಈ ಕೆಳಗಿನಂತಿದೆ:

ಕೋವಿಡ್ ಮಹಾಸೋಂಕು

ಅಧಿಕೃತ ಮಾಹಿತಿಗಳು ಕೂಡ ಸರಾಸರಿ ಕೋವಿಡ್ ಪಾಸಿಟಿವ್ ದರಗಳು ಏರುತ್ತಿವೆ ಎಂಬುದನ್ನು ತೋರಿಸುತ್ತಿವೆ. ಇದು ಒಂದು ಅನರ್ಥಕಾರೀ ಮೂರನೇ ಅಲೆಯ ಹಂತ ತಲುಪದಂತೆ ತಡೆಯಲು ಲಸಿಕೆ ಹಾಕುವ ದರವನ್ನು ಹಲವು ಪಟ್ಟು ಹೆಚ್ಚಿಸಲೇ ಬೇಕಾಗಿದೆ. ಇದುವರೆಗೆ ವಯಸ್ಕರಲ್ಲಿ ಕೇವಲ 10.83% ಮಂದಿ ಪೂರ್ಣವಾಗಿ ಲಸಿಕೆ ಪಡೆದಿದ್ದಾರೆ. ಲಸಿಕೆಗಳ ಕೊರೆತೆಯಿದೆ ಎಂದು ಪ್ರತಿಯೊಂದು ರಾಜ್ಯ ಸರಕಾರವೂ ವರದಿ ಮಾಡಿದೆ. ಕೇಂದ್ರ ಸರಕಾರದಿಂದ ಖರೀದಿ ನಿಧಾನವಾಗಿದೆ. ಅದು ಲಸಿಕೆ ಲಭ್ಯತೆಯ ಬಗ್ಗೆ ಸಂಸತ್ತಿಗೆ ಒಂದೇ ದಿನದಲ್ಲಿ ಮೂರು ಪರಸ್ಪರ ವಿರುದ್ಧವಾದ ಮಾಹಿತಿಗಳನ್ನು ಕೊಟ್ಟಿದೆ.

ಮೋದಿ ಸರಕಾರ ಜಗತ್ತಿನ ಎಲ್ಲೆಡೆಗಳಿಂದ ಲಸಿಕೆಗಳನ್ನು ಖರೀದಿಸಬೇಕು ಮತ್ತು ತಕ್ಷಣವೇ ದೇಶಾದ್ಯಂತ ಒಂದು ಉಚಿತ ಸಾರ್ವತ್ರಿಕ ಸಾಮೂಹಿಕ ಲಸಿಕೀಕರಣವನ್ನು ಆರಂಭಿಸಬೇಕು.

ಮಹಾಸೋಂಕು ಮುಂದುವರಿಯುತ್ತಿರುವಾಗಲೇ ಮತ್ತು ವಿವಿಧ ಲಾಕ್‌ಡೌನುಗಳು ನಡೆಯುತ್ತಿರುವಾಗಲೇ ಕೇಂದ್ರ ಸರಕಾರ ಜನಗಳ ಜೀವನಾಧಾರಗಳ ಮೇಲೆ ಪ್ರಹಾರಗಳನ್ನು ಮುಂದುವರೆಸುತ್ತಲೇ ಇದೆ. ಇದರಿಂದಾಗಿ ನಿರುದ್ಯೋಗ ನಾಗಾಲೋಟ ಹೂಡಿದೆ. ಪ್ರತಿದಿನ ಇಂಧನ ಬೆಲೆಗಳಲ್ಲಿ ಏರಿಕೆ ಒಟ್ಟಾರೆಯಾಗಿ ಹಣದುಬ್ಬರದ ಸುರುಳಿಯನ್ನು ಹರಿಯ ಬಿಟ್ಟಿದೆ. ಅದು ಜನಗಳ ಜೀವನಾಧಾರಗಳನ್ನೇ ನುಂಗಿ ಹಾಕುತ್ತಿದೆ, ಹಸಿವು ಮತ್ತು ಅಪೌಷ್ಟಿಕತೆಯನ್ನು ಹೆಚ್ಚಿಸುತ್ತಿದೆ. ಇಂತಹ ಸನ್ನಿವೇಶದಲ್ಲಿ ಮೋದಿ ಸರಕಾರ ತಕ್ಷಣವೇ ಆದಾಯ ತೆರಿಗೆ ತೆರುವ ವ್ಯಾಪ್ತಿಯಲ್ಲಿರದ ಎಲ್ಲ ಕುಟುಂಬಗಳಿಗೆ 7,500ರೂ. ನೇರ ನಗದು ವರ್ಗಾವಣೆ ಮಾಡಬೇಕು ಮತ್ತು ಅಗತ್ಯವಿರುವ ಎಲ್ಲರಿಗೂ ಉಚಿತ ಆಹಾರ ಕಿಟ್‌ಗಳನ್ನು ಹಂಚಬೇಕು ಎಂಬ ತನ್ನ ಆಗ್ರಹವನ್ನು ಪುನರುಚ್ಚರಿಸಿದೆ.

ಪೆಗಾಸಸ್: ಬಿಜೆಪಿ ಸರಕಾರ ಸಂಸತ್ತನ್ನು ಭಂಗಪಡಿಸುತ್ತಿದೆ

ಮೋದಿ ಸರಕಾರ ಪೆಗಾಸಸ್ ಗೂಢಚಾರಿಕೆ ತಂತ್ರಾಂಶದ ಕಣ್ಗಾವಲಿನ ಪ್ರಶ್ನೆಯನ್ನು ಚರ್ಚಿಸಲು ಮೊಂಡುತನದಿಂದ ನಿರಾಕರಿಸುತ್ತಿರುವುದು ಸಂಸತ್ತಿನ ಕಲಾಪಗಳಿಗೆ ಭಂಗ ತರುತ್ತಿದೆ. ಅದಕ್ಕಿಂತ ಮಹತ್ವದ ಸಂಗತಿಯೆಂದರೆ, ಸರಕಾರ ಸತ್ಯವನ್ನು ಹೇಳ ಬಯಸುತ್ತಿಲ್ಲ, ಸಂವಿಧಾನ ವಿಧಿಸಿರುವಂತೆ ಸಂಸತ್ತಿಗೆ ಜವಾಬ್ದಾರಿಯಾಗಿರ ಬಯಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರಧಾನಿ ಮೋದಿಯವರು ಸರಕಾರ ಅಥವಾ ಅದರ ಯಾವುದೇ ಸಂಸ್ಥೆ ರಾಜಕೀಯ ಮುಖಂಡರಿಂದ ಹಿಡಿದು ಪತ್ರಕರ್ತರು, ನ್ಯಾಯಾಂಗದ ಅಧಿಕಾರಿಗಳು, ಮಾಜಿ ಸಿಬಿಐ ಮುಖ್ಯಸ್ಥರು, ಮಾಜಿ ಚುನಾವಣಾ ಆಯುಕ್ತರು ಮುಂತಾದವರವರೆಗೆ ವ್ಯಕ್ತಿಗಳ ಮೇಲೆ ಗೂಢಚಾರಿಕೆ ನಡೆಸಲು ಇಸ್ರೇಲಿ ಎನ್‌ಎಸ್‌ಒದ ಶಸ್ತ್ರ ದರ್ಜೆಯ ಪೆಗಾಸಸ್ ಗೂಢಚಾರಿಕೆ ತಂತ್ರಾಂಶವನ್ನು ಬಳಸಲು ತೊಡಗಿಸಿದೆಯೇ ಎಂಬುದಕ್ಕೆ ಉತ್ತರ ನೀಡಲು ನಿರಾಕರಿಸುತ್ತಿದ್ದಾರೆ. ಇದು ಅನಿಷ್ಟಕಾರಿ. ಈ ದಾಳಿ ಖಾಸಗಿತ್ವದ ಮೂಲಭೂತ ಹಕ್ಕಿನ ಉಲ್ಲಂಘನೆ ಮಾತ್ರವೇ ಅಲ್ಲ, ಒಂದು ಪ್ರಜಾಪ್ರಭುತ್ವದಲ್ಲಿ ಮಹತ್ವದ ತಪಾಸಣೆ ಮತ್ತು ಸಮತೋಲನ ಕಾಪಾಡುವ ಸಂವಿಧಾನಿಕ ಕರ್ತವ್ಯಗಳನ್ನು ನಿಭಾಯಿಸುವ ಸಂಸ್ಥೆಗಳ ಮೇಲಿನ ದಾಳಿಯೂ ಆಗಿದೆ.

ತಕ್ಷಣವೇ ಸತ್ಯವನ್ನು ಸ್ಥಾಪಿಸಲು ಮತ್ತು ತಪ್ಪಿತಸ್ಥರನ್ನು ದಂಡಿಸಲು ಒಂದು ಉನ್ನತ ಮಟ್ಟದ ನ್ಯಾಯಾಂಗ ತನಿಖೆಯನ್ನು ಸುಪ್ರಿಂ ಕೋರ್ಟಿನ ಉಸ್ತುವಾರಿಯಲ್ಲಿ ನಡೆಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯುರೊ ಪುನರುಚ್ಚರಿಸಿದೆ.

ಅಸ್ಸಾಂ -ಮಿಝೋರಾಂ ತಿಕ್ಕಾಟ

ಎರಡು ನೆರೆಕರೆ ರಾಜ್ಯಗಳು, ಅಸ್ಸಾಂ ಮತ್ತು ಮಿಝೋರಾಂ ಸಶಸ್ತ್ರ ತಿಕ್ಕಾಟಗಳು ಮತ್ತು ವೈಷಮ್ಯದಲ್ಲಿ ತೊಡಗಿರುವುದು ಒಂದು ಹಿಂದೆಂದೂ ಸಂಭವಿಸಿರದ ಸಂಗತಿ. ಇದು ಕೇಂದ್ರ ಸರಕಾರದ ಮತ್ತು ಗೃಹ ಮಂತ್ರಾಲಯದ ಸಂಪೂರ್ಣ ವಿಫಲತೆಯಾಗಿದೆ. ಅದಕ್ಕಿಂತಲೂ ಕೆಟ್ಟ ಸಂಗತಿಯೆಂದರೆ, ಇದು ಗೃಹ ಮಂತ್ರಿಗಳು ಅಲ್ಲಿಗೆ ಹೋಗಿ ತಾನೇ ಕರೆದ ಎಲ್ಲ ಈಶಾನ್ಯ ರಾಜ್ಯಗಳು ಮತ್ತು ಅಲ್ಲಿನ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ನಂತರ ಸಂಭವಿಸಿದೆ. ಈ ಘರ್ಷಣೆಗಳು ನಿಲ್ಲುವಂತೆ ಮತ್ತು ಶಾಂತಿ ನೆಲೆಸುವಂತೆ ಕೇಂದ್ರ ಸರಕಾರ ಖಾತ್ರಿ ಪಡಿಸಬೇಕು.

ಅಸ್ಸಾಂ ಮತ್ತು ಮಿಝೋರಾಂ ಎರಡೂ ಎನ್‌ಡಿಎ ಸರಕಾರಗಳನ್ನು ಹೊಂದಿವೆ. ಎನ್‌ಡಿಎಗೆ ಬಿಜೆಪಿ ನೇತೃತ್ವ ನೀಡುತ್ತಿದೆ. ಆಳುವ ಪಕ್ಷ ಏನು ಮಾಡುತ್ತಿದೆ ಎಂದು ಪೊಲಿಟ್ ಬ್ಯುರೊ ಪ್ರಶ್ನಿಸಿದೆ.

ಶೈಕ್ಷಣಿಕ ಸಂಸ್ಥೆಗಳನ್ನು ಬೇಗನೇ ಪುನರಾರಂಭಿಸುವ ಪರಿಸ್ಥಿತಿಗಳನ್ನು ನಿರ್ಮಿಸಬೇಕು

ಈಗ ಒಂದೂವರೆ ವರ್ಷಕ್ಕಿಂತ ಹೆಚ್ಚು ಸಮಯದಿಂದ ಶೈಕ್ಷಣಿಕೆ ಸಂಸ್ಥೆಗಳು ಮುಚ್ಚಿರುವುದರಿಂದಾಗಿ ಕಷ್ಟಕ್ಕೆ ಸಿಲುಕಿರುವ ತನ್ನ ಯುವಜನರನ್ನು ವ್ಯರ್ಥಗೊಳಿಸದಂತೆ ಭಾರತ ತಡೆಯಬೇಕಾಗಿದೆ. 22 ಶೇಕಡಾ ವಿದ್ಯಾರ್ಥಿಗಳಿಗೆ ಮಾತ್ರವೇ ಡಿಜಿಟಲ್ ಶಿಕ್ಷಣ ಲಭ್ಯವಿದೆ ಎಂದು ವರದಿಯಾಗಿದೆ. ಬಹುಪಾಲು ಸರಕಾರೀ ಮತ್ತು ಖಾಸಗೀ ಶಾಲೆಗಳು ವೈಫೈ ಸೌಲಭ್ಯಗಳನ್ನು ಹೊಂದಿಲ್ಲ. ಈ ಡಿಜಿಟಲ್ ವಿಭಜನೆ ಮಕ್ಕಳ ಮತ್ತು ಮಾನವ ಕಳ್ಳಸಾಗಣೆ, ಬಾಲದುಡಿಮೆ, ಸಣ್ಣಪುಟ್ಟ ಅಪರಾಧಗಳು, ಮಧ್ಯಾಹ್ನದ ಊಟದ ಕೊರತೆಯಿಂದ ಅಪೌಷ್ಟಿಕತೆ ಮುಂತಾದವುಗಳಲ್ಲಿ ಭಾರಿ ಹೆಚ್ಚಳದಂತಹ ಅಸಂಖ್ಯಾ ಸಮಸ್ಯೆಗಳನ್ನು ಸೃಷ್ಟಿಸಿದೆ.

ಶೈಕ್ಷಣಿಕ ಸಂಸ್ಥೆಗಳನ್ನು ಬೇಗನೇ ಪುನರಾರಂಭಿಸಲು ಅಗತ್ಯವಾದ ಸನ್ನಿವೇಶವನ್ನು ನಿರ್ಮಿಸುವಂತೆ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಶೈಕ್ಷಣಿಕ ಸಂಸ್ಥೆಗಳ ಸಿಬ್ಬಂದಿಯನ್ನು ಮುಂಚೂಣಿಯ ಕಾರ್ಯಕರ್ತರೆಂದು ಪರಿಗಣಿಸಿ ಅವರಿಗೆ ಆದ್ಯತೆಯ ಮೇಲೆ ಪೂರ್ಣವಾಗಿ ಲಸಿಕೆಗಳನ್ನು ಹಾಕಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ.

ರೈತರ ಚಳುವಳಿ-ಸರಕಾರದ ಮೊಂಡುತನ ನಿಲ್ಲಬೇಕು

ರೈತರು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ಈಗ ಎಂಟು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ ಒಂದು ನಿರಂತರ ಪ್ರತಿಭಟನಾ ಕಾರ್ಯಾಚರಣೆ ಮತ್ತು ಹೋರಾಟದಲ್ಲಿ ನಿರತರಾಗಿದ್ದಾರೆ. ಮೋದಿ ಸರಕಾರ ಅವರೊಂದಿಗೆ ಯಾವುದೇ ಮಾತುಕತೆಯಲ್ಲಿ ತೊಡಗಲು ಮೊಂಡುತನದಿಂದ ನಿರಾಕರಿಸುತ್ತಿದೆ. ಕೇಂದ್ರ ಸರಕಾರ ಸಂಯುಕ್ತ ಕಿಸಾನ್ ಮೋರ್ಚಾದೊಂದಿಗೆ ಮಾತುಕತೆಗಳನ್ನು ಪುನರಾರಂಭಿಸಬೇಕು ಎಂದಿರುವ ಸಿಪಿಐ(ಎಂ) ರೈತರ ಹೋರಾಟಗಳನ್ನು ಪೂರ್ಣವಾಗಿ ಬೆಂಬಲಿಸುತ್ತ, ಈ ಕೃಷಿ ಕಾಯ್ದೆಗಳನ್ನು ಕೂಡಲೇ ರದ್ದು ಮಾಡಬೇಕು ಮತ್ತು ಸಿ2+50% ಸೂತ್ರದಂತೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಒಂದು ಕಾಯ್ದೆಯಾಗಿ ತರಬೇಕು ಎಂದು ಪುನರುಚ್ಚರಿಸಿದೆ.

ಕೋವಿಡ್‍ ಹಾವಳಿ ನಡುವೆಯೇ ಕಾರ್ಮಿಕ ವರ್ಗದ ಮೇಲೆ ದಾಳಿಗಳು

ನಮ್ಮ ರಾಷ್ಟ್ರೀಯ ಆಸ್ತಿಗಳ ಲೂಟಿ ಮತ್ತು ಎಲ್ಲ ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣದೊಂದಿಗೇ, ಬಿಜೆಪಿ ಕೇಂದ್ರ ಸರಕಾರ ದುಡಿಯುವ ಜನಗಳ ಹಕ್ಕುಗಳ ಮೇಲೆ ಹೆಚ್ಚೆಚ್ಚು ದಾಳಿಗಳನ್ನು ನಡೆಸಲು ಉದ್ಯುಕ್ತವಾಗಿದೆ. ಅಗತ್ಯ ರಕ್ಷಣಾ ಸೇವೆಗಳ ಸುಗ್ರೀವಾಜ್ಞೆ, 2021ನ್ನು ಶಾಸನವಾಗಿ ಪರಿವರ್ತಿಸಬಾರದು ಎಂದು ಆಗ್ರಹಿಸುತ್ತ, ಇದನ್ನು ಸಂಸತ್ತಿನಲ್ಲಿ ಸಿಪಿಐ(ಎಂ) ಇತರ ಪಕ್ಷಗಳೊಡಗೂಡಿ ವಿರೋಧಿಸುವುದಾಗಿ ಹೇಳಿದೆ.

ಸರಕಾರೀ ಪ್ರಾಯೋಜಿತ ಅಡೆ-ತಡೆಗಳಿಂದ ಉಂಟು ಮಾಡಿದ ಗದ್ದಲದ ನಡುವೆ ಕೇಂದ್ರ ಸರಕಾರ ಮಹತ್ವದ ಶಾಸನಗಳನ್ನು ಪಾಸು ಮಾಡಿಸಿಕೊಳ್ಳುತ್ತಿದೆ ಎನ್ನುತ್ತ ಸಿಪಿಐ(ಎಂ) ಒಂದು ಸರಿಯಾದ ಸಂರಚಿತ ಚರ್ಚೆಯಿಲ್ಲದೆ ಯಾವುದೇ ಶಾಸನವನ್ನು ಪಾಸು ಮಾಡಿಸಬಾರದು ಎಂದು ಆಗ್ರಹಿಸಿದೆ. ಈ ಬಿಜೆಪಿ ಸರಕಾರ ಸಂಸತ್ತು ತನ್ನ ಹೊಣೆಗಾರಿಕೆಯನ್ನು ನಿಭಾಯಿಸದಂತೆ ಮತ್ತು ದುಡಿಯುವ ಜನಗಳ ಜೀವನ್ಮರಣ ಪ್ರಶ್ನೆಗಳನ್ನು ಕುರಿತಂತೆ ಶಾಸನಗಳನ್ನು ರಚಿಸದಂತೆ ಅದನ್ನು ದುರ್ಬಲಗೊಳಸುತ್ತಿದೆ. ಇದು ನಿಲ್ಲಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *