ಕೃಷಿ ಕಾಯ್ದೆಗಳು, ಕೋವಿಡ್‍ ನಿರ್ವಹಣೆಯಲ್ಲಿ ವಿಫಲತೆ, ಪೆಗಾಸಸ್ ಗೂಢಚಾರಿಕೆ ವಿರುದ್ಧ ಸೆಪ್ಟಂಬರ್‌ನಲ್ಲಿ ವ್ಯಾಪಕ ಪ್ರತಿಭಟನೆ – ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಕೋವಿಡ್ ಮಹಾಸೋಂಕಿನ ಅನಾಹುತಕಾರೀ ಮೂರನೇ ಅಲೆಯ ಭೀತಿ ಉಂಟುಮಾಡಿರುವ ಸರಕಾರದ ಕೋವಿಡ್‍ ನಿರ್ವಹಣಾ ವಿಫಲತೆ, ಜನರ ಖಾಸಗಿತ್ವವನ್ನು ಬೇಧಿಸುವ ಪೆಗಾಸಸ್ ಗೂಢಚಾರಿಕೆ, ರೈತರ ಪ್ರತಿಭಟನೆಗಳಿಗೆ ಕೇಂದ್ರದ ನಿರ್ಲಕ್ಷ್ಯ ಮತ್ತಿತರ ಪ್ರಶ್ನೆಗಳ ಮೇಲೆ 15 ಆಗ್ರಹಗಳನ್ನು ಮುಂದಿಟ್ಟು ಸೆಪ್ಟೆಂಬರ್‌ನಲ್ಲಿ ಪ್ರತಿಭಟನೆಗಳನ್ನು ಸಂಘಟಿಸಲು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕೇಂದ್ರ ಸಮಿತಿಯು ಕರೆ ನೀಡಿದೆ. ಇದರಲ್ಲಿ ಗರಿಷ್ಠ ಸಾರ್ವಜನಿಕ ಭಾಗವಹಿಸುವಿಕೆ ಇರುತ್ತದೆ ಎಂದು ಆಗಸ್ಟ್ 6 ರಿಂದ 8ರವರೆಗೆ ಸಭೆ ಸೇರಿದ ಕೇಂದ್ರ ಸಮಿತಿಯ ಸಭೆಯ ನಂತರ ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೇಶಾದ್ಯಂತ ಆಗಸ್ಟ್ 9ರ ‘ಭಾರತ ಉಳಿಸಿ’ ಕಾರ್ಯಾಚರಣೆ ಸೇರಿದಂತೆ ವಿವಿಧ ಜನವಿಭಾಗಗಳ ಹೋರಾಟಗಳಿಗೆ ಈಗಾಗಲೇ ಅದು ಬೆಂಬಲ ನೀಡಿದೆ ಎಂದು ಈ ಸಭೆಯ ವಿವರಗಳನ್ನು ನೀಡುತ್ತ ಈ ಕುರಿತ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿ ಹೇಳಿದರು.

ಐದು ರಾಜ್ಯಗಳಲ್ಲಿ ಇತ್ತೀಚಿನ ವಿಧಾನಸಭಾ ಚುನಾವಣೆಗಳ ವಿಮರ್ಶೆ, ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಮತ್ತು ಸಿಪಿಐ(ಎಂ)ನ 23ನೇ ಮಹಾಧಿವೇಶನದ ಬಗ್ಗೆ ಕೇಂದ್ರ ಸಮಿತಿ ನಡೆಸಿದ ಚರ್ಚೆಗಳ ಬಗ್ಗೆ ಈ ಹೇಳಿಕೆ ತಿಳಿಸಿದೆ. ಪಕ್ಷದ 23ನೇ ಮಹಾಧಿವೇಶನವನ್ನು ಕೇರಳದ ಕಣ್ಣೂರಿನಲ್ಲಿ ಕೋವಿಡ್‍ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಪ್ರಿಲ್‍ 2022ರಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅದು ಹೇಳಿದೆ. ಅಲ್ಲದೆ ಆಗಸ್ಟ್ 15ರಿಂದ ಭಾರತದ ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವವನ್ನು ಆಚರಿಸಲು ಕೇಂದ್ರ ಸಮಿತಿ ನಿರ್ಧರಿಸಿದೆ.

ಕೇಂದ್ರ ಸಮಿತಿಯ ಹೇಳಿಕೆಯನ್ನು ಈ ಮುಂದೆ ಕೊಡಲಾಗಿದೆ:

ವಿಧಾನಸಭೆ ಚುನಾವಣೆ ವಿಮರ್ಶೆ

ಈ ಸುತ್ತಿನ ವಿಧಾನಸಭಾ ಚುನಾವಣೆಯ ಫಲಿತಾಂಶಗಳು ಕೇರಳ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹಿನ್ನಡೆಯಾಗಿರುವುದನ್ನು ತೋರಿಸಿವೆ. ಅಸ್ಸಾಂನಲ್ಲಿ, ಅದು ತನ್ನ ಸರ್ಕಾರವನ್ನು ಪ್ರತಿಪಕ್ಷಗಳ `ಮಹಾಜೋತ್’ಗಿಂತ ಕೇವಲ 0.78 ಶೇಕಡಾದ ಅತ್ಯಂತ ಅಂತರದಿಂದಷ್ಟೆ ಹೇಗೋ ಉಳಿಸಿಕೊಂಡಿದೆ. ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ, ಅಭೂತಪೂರ್ವ ಹಣವನ್ನು ಖರ್ಚು ಮಾಡುವ, ಕೇಂದ್ರ ಏಜೆನ್ಸಿಗಳನ್ನು ಆಕ್ರಾಮಕ ರೀತಿಯಲ್ಲಿ ದುರುಪಯೋಗಪಡಿಸಿಕೊಳ್ಳುವ ಮತ್ತು ಚುನಾವಣಾ ವ್ಯವಸ್ಥೆಯಲ್ಲಿ ಕೈಚಳಕ ನಡೆಸುವ, ವಿರೋಧ ಪಕ್ಷಗಳು ಮತ್ತು ಅದರ ನಾಯಕರನ್ನು ಹೆದರಿಸುವ ಮತ್ತು ಬೆದರಿಸುವ ತನ್ನ ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳು ಅವರು ಬಯಸಿದ ಜನರ ಬೆಂಬಲವನ್ನು ಪಡೆಯುವಲ್ಲಿ ವಿಫಲವಾಗಿವೆ. ಕೇರಳ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡಿನಲ್ಲಿ ಬಿಜೆಪಿ ನಿರ್ಣಾಯಕವಾಗಿ ಸೋತಿದೆ.

ಕೇರಳ: ಕೇರಳದಲ್ಲಿ ಎಡ ಪ್ರಜಾಸತ್ತಾತ್ಮಕ ರಂಗದ ಭರ್ಜರಿ ಗೆಲುವನ್ನು ಕೇಂದ್ರ ಸಮಿತಿ ಪ್ರಶಂಸಿಸಿದೆ. ಎಲ್‌ಡಿಎಫ್‌ನಲ್ಲಿ ನಂಬಿಕೆ ಇಟ್ಟಿದ್ದಕ್ಕಾಗಿ ಮತ್ತು ಅಧಿಕಾರದಲ್ಲಿರುವ ಸರ್ಕಾರವನ್ನು ಅಭೂತಪೂರ್ವ ರೀತಿಯಲ್ಲಿ ಮರು ಆಯ್ಕೆ ಮಾಡಿದ್ದಕ್ಕಾಗಿ ಕೇರಳದ ಜನರಿಗೆ ಕೇಂದ್ರ ಸಮಿತಿ ಧನ್ಯವಾದಗಳನ್ನು ಅರ್ಪಿಸಿದೆ. ಕಳೆದ ವಿಧಾನಸಭಾ ಚುನಾವಣೆಗಿಂತ ಎಲ್‌ಡಿಎಫ್ ಫಲಿತಾಂಶ ಉತ್ತಮವಾಗಿದೆ.

ಅಧಿಕಾರದಲ್ಲಿರುವ ಸರ್ಕಾರದ ಕಾರ್ಯಕ್ಷಮತೆ, ಅನುಸರಿಸಿದ ಪರ್ಯಾಯ ನೀತಿಗಳು, ಎಲ್ಲಾ ನೈಸರ್ಗಿಕ ವಿಪತ್ತುಗಳನ್ನು ಎದುರಿಸಿದ ರೀತಿ, ಸಾಂಕ್ರಾಮಿಕ ಮತ್ತು ಅದರ ಪರಿಣಾಮಗಳನ್ನು ನಿಭಾಯಿಸುವ ಮಾದರಿ ವಿಧಾನ, ಕೈಗೊಂಡ ಕಲ್ಯಾಣ ಕ್ರಮಗಳು ಮತ್ತು ಕೇರಳ ಸಮಾಜದ ಜಾತ್ಯತೀತ ಪ್ರಜಾಸತ್ತಾತ್ಮಕ  ಸಾಮರಸ್ಯದ ಚಾರಿತ್ರ್ಯವನ್ನು ಕಾಪಾಡಿಕೊಂಡಿರುವುದು, ಇವೆಲ್ಲದರ ಮೇಲೆ ಕೇರಳದ ಜನರು ಮತ ಚಲಾಯಿಸಿದ್ದಾರೆ.

ಪಶ್ಚಿಮ ಬಂಗಾಳ: ಬಿಜೆಪಿ ತನ್ನ ಹಣಬಲ ಮತ್ತು ಎಲ್ಲಾ ಕುತಂತ್ರಗಳ ಹೊರತಾಗಿಯೂ ಹಿನ್ನಡೆ ಅನುಭವಿಸಿತು. ಬಂಗಾಳದ ಜನರು ಕೋಮು ಧ್ರುವೀಕರಣದ ಸಿದ್ಧಾಂತವನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ.

ಸಿಪಿಐ(ಎಂ) ಮತ್ತು ಎಡರಂಗಕ್ಕೆ ಈ ಫಲಿತಾಂಶಗಳು ವಿನಾಶಕಾರಿ. 1946 ರ ನಂತರ ಮೊದಲ ಬಾರಿಗೆ, ಯಾವುದೇ ಕಮ್ಯುನಿಸ್ಟ್ ವಿಧಾನಸಭೆಗೆ ಆಯ್ಕೆಯಾಗಿಲ್ಲ. ತೀಕ್ಷ್ಣವಾದ ವಿಮರ್ಶಾತ್ಮಕ ಆತ್ಮಾವಲೋಕನ ನಡೆಸಿದ ಕೇಂದ್ರ ಸಮಿತಿಯು ಇದರಿಂದ ಪಾಠಗಳನ್ನು ಗುರುತಿಸಿ, ಕೈಗೊಳ್ಳಬೇಕಾದ ಸರಿಪಡಿಸುವ ಕ್ರಮಗಳ ರೂಪುರೇಷೆಯನ್ನು ಕೊಟ್ಟಿತು. ಪಶ್ಚಿಮ ಬಂಗಾಳದ ರಾಜ್ಯ ಸಮಿತಿಯು ಈ ವಿಮರ್ಶೆಯನ್ನು ಚರ್ಚಿಸಿ ಕಾರ್ಯಗತಗೊಳಿಸುತ್ತದೆ.

ತಮಿಳುನಾಡು: ವಿಜಯಶಾಲಿ ಡಿಎಂಕೆ ನೇತೃತ್ವದ ರಂಗದ ಭಾಗವಾಗಿ, ಇಬ್ಬರು ಸಿಪಿಐ(ಎಂ) ಶಾಸಕರು ಆಯ್ಕೆಯಾದರು.

ಅಸ್ಸಾಂ: `ಮಹಾಜೋತ್ ‘ನೊಂದಿಗೆ ಸೀಟು ಹೊಂದಾಣಿಕೆಯಲ್ಲಿ, ಸಿಪಿಐ(ಎಂ) ಸೊರಬೊಗ್ ಕ್ಷೇತ್ರದಿಂದ ಗೆದ್ದಿತು. ಹತ್ತು ವರ್ಷಗಳ ನಂತರ ಪಕ್ಷವು ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಪಡೆದಿದೆ.

ಈ ಎಲ್ಲಾ ರಾಜ್ಯಗಳಲ್ಲಿ, ಚುನಾವಣೆಯ ನಂತರದ ಪರಿಸ್ಥಿತಿಯಲ್ಲಿ ಪಕ್ಷವು ಕೈಗೊಳ್ಳಬೇಕಾದ ಕ್ರಮಗಳನ್ನು ಚರ್ಚಿಸಲಾಗಿದೆ ಮತ್ತು ರಾಜ್ಯ ಸಮಿತಿಗಳು ಮುಂದಿನ ಕ್ರಮ ಕೈಗೊಳ್ಳಲು ವಿವರಿಸಲಾಗಿದೆ.

ರಾಜಕೀಯ ಬೆಳವಣಿಗೆಗಳು

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿ: ಕೊರೋನಾ ಸೋಂಕುಗಳು ಏರುತ್ತಲೇ ಇವೆ. ಒಂದು ಅನಾಹುತಕಾರೀ ಮೂರನೇ ತರಂಗವನ್ನು ತಡೆಗಟ್ಟಲು ಲಸಿಕೀಕರಣ ದರವು ಭಾರೀ ಪ್ರಮಾಣದಲ್ಲಿ ಹೆಚ್ಚಾಗುವುದು ಅತ್ಯಗತ್ಯ. ಪ್ರಸ್ತುತ ನಮ್ಮ ವಯಸ್ಕ ಜನಸಂಖ್ಯೆಯಲ್ಲಿ ಕೇವಲ 11.3 ಪ್ರತಿಶತದಷ್ಟು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ ಮತ್ತು ಒಂದು ಡೋಸ್‍ ಪಡೆದವರ ಪ್ರಮಾಣ , ಈ 11.3 ಶೇಕಡಾವೂ ಸೇರಿದಂತೆ 40 ಪ್ರತಿಶತದಷ್ಟು. ಈ ದರದಲ್ಲಿ, ವರ್ಷಾಂತ್ಯದಲ್ಲಿ ಇಡೀ ವಯಸ್ಕ ಜನಸಂಖ್ಯೆಗೆ ಲಸಿಕೆ ಹಾಕುವ ಗುರಿ ಈಡೇರಿಕೆ  ಅಸಾಧ್ಯ. ಲಸಿಕೆಯ ನಿಧಾನಗತಿಯು ಮುಖ್ಯವಾಗಿ ಲಸಿಕೆ ಕೊರತೆಯಿಂದಾಗಿ ಆಗಿದೆ. ಗುರಿಯನ್ನು ಸಾಧಿಸಲು ನಾವು ದಿನಕ್ಕೆ ಒಂದು ಕೋಟಿ ಡೋಸ್‌ಗಳ ದರದಲ್ಲಿ ಲಸಿಕೆ ಹಾಕುವ ಅಗತ್ಯವಿದೆ. ಕೇಂದ್ರ ಸರ್ಕಾರ ತಕ್ಷಣವೇ ಜಾಗತಿಕವಾಗಿ ಲಸಿಕೆಗಳನ್ನು ಖರೀದಿಸಬೇಕು ಮತ್ತು ಲಸಿಕೆ ಹಾಕುವಿಕೆಯನ್ನು ತೀವ್ರಗೊಳಿಸಬೇಕು.

ಕೋವಿಡ್ ದುರಾಡಳಿತ ಮತ್ತು ಅಳಗೊಳ್ಳುತ್ತಿರುವ ಆರ್ಥಿಕ ಹಿಂಜರಿತ: ಕೇಂದ್ರ ಸರ್ಕಾರಕ್ಕೆ  ಕೋವಿಡನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗದಿರುವುದು ಮತ್ತು ಅದರ ನೀತಿಗಳಿಂದ ಆರ್ಥಿಕ ವ್ಯವಸ್ಥೆ ಸುಮಾರಾಗಿ ನಾಶವೇ ಆಗುವ ಸ್ಥಿತಿಯಲ್ಲಿರುವುದು ನಮ್ಮ ಜನರ ಮೇಲೆ ತೀವ್ರ ಸಂಕಟಗಳನ್ನು  ಹೇರುತ್ತಿದೆ. ನಿರುದ್ಯೋಗ ತೀವ್ರವಾಗಿ ಬೆಳೆಯುತ್ತಿದೆ. ನಾಗಾಲೋಟ ಹೂಡಿರುವ  ಹಣದುಬ್ಬರದೊಂದಿಗೆ ಬಡತನ ಆತಂಕಕಾರಿಯಾಗಿ ಏರುತ್ತಿದೆ. ಕಡಿಮೆ ಆದಾಯ ಮತ್ತು ಹೆಚ್ಚುತ್ತಿರುವ ಬೆಲೆಯೊಂದಿಗೆ ನಿರುದ್ಯೋಗದ ದ್ವಿವಿಧ ದಾಳಿಯು ಜನರ ಜೀವನೋಪಾಯದ ಜೀವಾಳವನ್ನೇ ತಿಂದು ಹಾಕುತ್ತಿದೆ ಮತ್ತು ಕುಟುಂಬಗಳನ್ನು ಸಾಲದ ಬಲೆಗೆ ತಳ್ಳುತ್ತಿದೆ.

ಈ ಸಮಸ್ಯೆಗಳನ್ನುಕೈಗೆತ್ತಿಕೊಳ್ಳುವ ಮತ್ತು ಜನರಿಗೆ ಪರಿಹಾರ ಒದಗಿಸುವ ಬದಲು, ಈ ಬಿಜೆಪಿ ಕೇಂದ್ರ ಸರ್ಕಾರ  ಭಾರತದ ರಾಷ್ಟ್ರೀಯ ಸ್ವತ್ತುಗಳನ್ನು ಮತ್ತು ಜನರ ಸಂಪತ್ತನ್ನು ದೊಡ್ಡ ಪ್ರಮಾಣದ ಖಾಸಗೀಕರಣದ ಮೂಲಕ ಆಕ್ರಾಮಕ  ರೀತಿಯಲ್ಲಿ ಲೂಟಿಯನ್ನು ಮುಂದುವರೆಸಿದೆ. ಮತ್ತು ಕೋಮು ಧ್ರುವೀಕರಣವನ್ನು ತೀಕ್ಷ್ಣಗೊಳಿಸುವುದರೊಂದಿಗೆ,  ಮಹಿಳೆಯರು, ದಲಿತರು ಹಾಗೂ ಆದಿವಾಸಿಗಳು ಮತ್ತು ಜನರ ಪ್ರಜಾಪ್ರಭುತ್ವ ಹಕ್ಕುಗಳೂ ಹಾಗೂ ನಾಗರಿಕ ಸ್ವಾತಂತ್ರ್ಯಗಳ ಮೇಲೆ ದಾಳಿಗಳು ಹೆಚ್ಚುತ್ತಿವೆ.

ಸಂಸತ್ತಿನಲ್ಲಿ ಅಡಚಣೆ: ದೇಶ ಮತ್ತು ಜನರ ಮುಂದಿರುವ ಪ್ರಚಂಡ ಸಮಸ್ಯೆಗಳ ಈ ಪರಿಸ್ಥಿತಿಯಲ್ಲಿ, ಆಡಳಿತಾರೂಢ ಬಿಜೆಪಿ ಮತ್ತು ಕೇಂದ್ರ ಸರ್ಕಾರವು ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಕಣ್ಗಾವಲು ಪ್ರಶ್ನೆಯನ್ನು ಚರ್ಚಿಸಲು ಪಟ್ಟು ಹಿಡಿದು ನಿರಾಕರಿಸುತ್ತ ಸಂಸತ್ತಿಗೆ ಅಡ್ಡಿಯುಂಟು ಮಾಡುತ್ತಿವೆ. ಈ ಬಿಜೆಪಿ ಕೇಂದ್ರ ಸರ್ಕಾರ ಸಂವಿಧಾನದ ಆದೇಶದಂತೆ  ಸಂಸತ್ತಿಗೆ ಉತ್ತರದಾಯಿಯಾಗಲು ಅಭೂತಪೂರ್ವ ಭಂಡ ನಿರಾಕರಣೆಯನ್ನು  ಪ್ರದರ್ಶಿಸುತ್ತಿದೆ.

ಅದೇ ಸಮಯದಲ್ಲಿ, ಸಂಸತ್ತನ್ನು ಅಡ್ಡಿಪಡಿಸುತ್ತಲೇ, ಅದು ಜನವಿರೋಧಿ ಮತ್ತು ಭಾರತದ ಆರ್ಥಿಕ ಸಾರ್ವಭೌಮತ್ವವನ್ನು ದುರ್ಬಲಗೊಳಿಸುವ ವಿವಿಧ ಮಸೂದೆಗಳನ್ನು ಗದ್ದಲದ ನಡುವೆಯೇ  ಶಾಸನಗಳಾಗಿ  ಮಾಡುತ್ತಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಅದನ್ನು ಪ್ರತಿರೋಧಿಸಲಾಗುತ್ತದೆ.

ಪೆಗಾಸಸ್ ಗೂಢಚರ್ಯೆ ತಂತ್ರಾಂಶದ ಕಣ್ಗಾವಲು: ಭಾರತ ಸರ್ಕಾರವು ಜನರ ಮೇಲೆ ಗೂಢಚಾರಿಕೆ ನಡೆಸಲು ಪೆಗಾಸಸ್ ಮಿಲಿಟರಿ ಗೂಢಚರ್ಯೆ ತಂತ್ರಾಂಶವನ್ನು ಖರೀದಿಸುತ್ತಿರುವುದು ತುಂಬಾ ಆತಂಕಕಾರಿಯಾಗಿದೆ. ಪೆಗಾಸಸ್ ಮಿಲಿಟರಿ ಗೂಢಚರ್ಯೆ ತಂತ್ರಾಂಶದ ಬಳಕೆಗಾಗಿ ಅದು ಅಥವಾ ಅದರ ಯಾವುದೇ ಏಜೆನ್ಸಿಗಳು ಸೈಬರ್ ಮಿಲಿಟರಿ ಕಣ್ಗಾವಲು ಕ್ಷೇತ್ರದ ಜಗತ್ತಿನ ಪ್ರಧಾನ   ಇಸ್ರೇಲಿ ಸಂಸ್ಥೆ – NSO ದೊಂದಿಗೆ ವ್ಯವಹರಿಸಿದ್ದಾರೆಯೇ ಎಂಬ  ಒಂದು ನೇರ ಪ್ರಶ್ನೆಗೆ ಉತ್ತರಿಸಲು ಸರ್ಕಾರ ನಿರಾಕರಿಸುತ್ತಿದೆ. ಸರ್ಕಾರ ಉತ್ತರಿಸಲೇಬೇಕು ಮತ್ತು ಸಂಗತಿಯನ್ನು ಸ್ಪಷ್ಟಪಡಿಸಬೇಕು. ಇಂತಹ ಕಣ್ಗಾವಲು ಜನರ ಖಾಸಗಿತನದ ಮೂಲಭೂತ ಹಕ್ಕಿನ ಸಂಪೂರ್ಣ ಉಲ್ಲಂಘನೆಯಾಗಿದೆಯಷ್ಟೇ ಅಲ್ಲ,  ಇದು ಭಾರತೀಯ ಪ್ರಜಾಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ದಾಳಿಯಾಗಿದೆ. ಕಣ್ಗಾವಲಿನಲ್ಲಿರುವವರ ಪಟ್ಟಿಯಲ್ಲಿ ರಾಜಕೀಯ ನಾಯಕರು, ಪತ್ರಕರ್ತರು, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ನ್ಯಾಯಾಂಗದ ಅಧಿಕಾರಿಗಳು, ಮಾಜಿ ಸಿಬಿಐ ಮುಖ್ಯಸ್ಥರು, ಮಾಜಿ ಚುನಾವಣಾ ಆಯುಕ್ತರು ಮುಂತಾದವರು ಸೇರಿದ್ದಾರೆ. ಇದು ಅನಿಷ್ಟಕಾರಿ. ವ್ಯಕ್ತಿಗಳ ಹೊರತಾಗಿ, ಇದು ಪ್ರಜಾಪ್ರಭುತ್ವದಲ್ಲಿ ತಪಾಸಣೆ ಮತ್ತು ಸಮತೋಲನದ ಬಹು ಮಹತ್ವದ ಕಾರ್ಯವನ್ನು ನಿರ್ವಹಿಸುವ ಸಂಸ್ಥೆಗಳ ಮೇಲೆ ಮತ್ತು ಅವುಗಳ  ಸಾಂವಿಧಾನಿಕ ಜವಾಬ್ದಾರಿ ನಿರ್ವಹಣೆಯ ಮೇಲಿನ ದಾಳಿಯಾಗಿದೆ.

ಸತ್ಯವನ್ನು ಸ್ಥಾಪಿಸಲು ಮತ್ತು ತಪ್ಪಿತಸ್ಥರನ್ನು ಶಿಕ್ಷಿಸಲು ಸರ್ವೋಚ್ಚ ನ್ಯಾಯಾಲಯ ಮೇಲ್ವಿಚಾರಣೆ ನಡೆಸುವ ಒಂದು ಉನ್ನತ ಮಟ್ಟದ  ವಿಚಾರಣೆ ತಕ್ಷಣವೇ ನಡೆಯಬೇಕು.

ಹೆಚ್ಚುತ್ತಿರುವ ಪ್ರತಿಭಟನೆಗಳು

ಐತಿಹಾಸಿಕ ರೈತ ಹೋರಾಟ: ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಮತ್ತು  ಸಿ 2+50 %  ಉತ್ಪಾದನಾ ವೆಚ್ಚದ ಸೂತ್ರದಂತೆ ನಿಗದಿಪಡಿಸುವ ಎಂ.ಎಸ್‍.ಪಿ. ದರಗಳಲ್ಲಿ ಮಾರುವ ಕಾನೂನಾತ್ಮಕ ಹಕ್ಕಿಗಾಗಿ ಒತ್ತಾಯಿಸಿ ಭಾರತೀಯ ರೈತರು  ಎಂಟು ತಿಂಗಳಿಗಿಂತಲೂ ಹೆಚ್ಚು ಸಮಯದಿಂದ  ನಿರಂತರ ನಡೆಸಿರುವ ಹೋರಾಟವನ್ನು ಸ್ವತಂತ್ರ ಭಾರತ ಹಿಂದೆಂದೂ ಕಂಡಿಲ್ಲ.

ಈ ಶಾಂತಿಯುತ ಪ್ರತಿಭಟನೆಗೆಭಾರತೀಯ ಜನವಿಭಾಗಗಳಿಂದ ವ್ಯಾಪಕ ಸೌಹಾರ್ದವನ್ನು ಗಳಿಸಿದೆ ಮತ್ತು ಅದು ಮುಂದುವರೆದಿದೆ.ಪ್ರಸಕ್ತ  ಸಂಸತ್ ಅಧಿವೇಶನದ ಅಂತ್ಯದವರೆಗೂ ನಡೆಯುತ್ತಿರುವ ಸಮಾನಾಂತರ `ಕಿಸಾನ್ ಸಂಸಾದ್ ‘ಈ ಬೇಡಿಕೆಗಳಿಗೆ ವ್ಯಾಪಕ ಬೆಂಬಲವನ್ನು ಎತ್ತಿ ತೋರಿಸುತ್ತಿದೆ.

ಕಾರ್ಮಿಕ ಸಂಘಟನೆಗಳು, ಕಿಸಾನ್ ಸಭಾಗಳು ಮತ್ತು ಕೃಷಿ ಕಾರ್ಮಿಕ ಸಂಘಟನೆಗಳ ಜಂಟಿ ಪ್ರತಿಭಟನೆಗಳು: ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಮತ್ತು ಕೃಷಿ ಕಾರ್ಮಿಕ ಸಂಘಟನೆಗಳು ಒಟ್ಟುಗೂಡಿರುವುದು ತಮ್ಮ ಹಕ್ಕುಗಳ ರಕ್ಷಣೆಯಲ್ಲಿ ನಮ್ಮ ದೇಶದ ಆಸ್ತಿಗಳ ರಕ್ಷಣೆಗಾಗಿ, ದೇಶದ ಆಧಾರವಾಗಿರುವ ದುಡಿಯುವ  ಜನಗಳ ಐಕ್ಯತೆಯನ್ನು ಬಲಪಡಿಸುವ ಒಂದು ಐತಿಹಾಸಿಕ ಹೆಜ್ಜೆಯಾಗಿದೆ.

ಕಾರ್ಮಿಕ ವರ್ಗದ ಕಾರ್ಯಾಚರಣೆಗಳು: ಖಾಸಗೀಕರಣದ ವಿರುದ್ಧ ದೊಡ್ಡ ಪ್ರಮಾಣದ ಪ್ರತಿಭಟನೆಗಳು ಮತ್ತು ಹೋರಾಟಗಳು ವಿವಿಧ ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ವಲಯಗಳಲ್ಲಿ ನಡೆಯುತ್ತಿವೆ. ಸಾಮಾನ್ಯ ವಿಮಾ ಕ್ಷೇತ್ರದ ಉದ್ಯೋಗಿಗಳು ಆಗಸ್ಟ್ 4 ರಂದು ದೇಶಾದ್ಯಂತ ಸಂಪೂರ್ಣ ಮುಷ್ಕರ ನಡೆಸಿದ್ದಾರೆ. ಮೊದಲ ಬಾರಿಗೆ ವಿದ್ಯುತ್ ನೌಕರರು ಮತ್ತು ಅಧಿಕಾರಿಗಳ ಸಂಪೂರ್ಣ ವಲಯವು ಆಗಸ್ಟ್ 10 ರಂದು ಮುಷ್ಕರ ನಡೆಸುತ್ತಿದೆ.

ಇತರ ವಿಭಾಗಗಳು: ಯುವಜನರು  ಹೆಚ್ಚುತ್ತಿರುವ ನಿರುದ್ಯೋಗದ ವಿರುದ್ಧ  ದನಿಯೆತ್ತುತ್ತಿದ್ದಾರೆ, ಸರ್ಕಾರಿ ಮತ್ತು ಸಂಬಂಧಿತ ಇಲಾಖೆಗಳಲ್ಲಿ ಖಾಲಿ ಹುದ್ದೆಗಳನ್ನು  ಭರ್ತಿ ಮಾಡಲು ಒತ್ತಾಯಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳನ್ನು ಬೇಗನೆ ತೆರೆಯಲು ಅನುವಾಗುವಂತಹ  ಪರಿಸ್ಥಿತಿಗಳನ್ನು ಸೃಷ್ಟಿಸಬೆಕೆಂದು ಮತ್ತು ಸಾರ್ವಜನಿಕ ಶಿಕ್ಷಣವನ್ನು ಬಲಪಡಿಸಬೇಕೆಂದು  ವಿದ್ಯಾರ್ಥಿಗಳು ಒತ್ತಾಯಿಸುತ್ತಿದ್ದಾರೆ. ಮಹಿಳೆಯರು ಬೀದಿಗಿಳಿದು ಹಸಿವಿನ ವಿರುದ್ಧ ಹೋರಾಡುತ್ತಿದ್ದಾರೆ ಮತ್ತು ಜನರಿಗೆ ಪರಿಹಾರ ವಿತರಿಸುತ್ತಿದ್ದಾರೆ.

ತ್ರಿಪುರಾ: ದಾಳಿಗಳನ್ನು ನಿಲ್ಲಿಸಿ

ತ್ರಿಪುರಾದಲ್ಲಿ ಸಿಪಿಐ (ಎಂ) ಕಚೇರಿಗಳು ಮತ್ತು ಕಾರ್ಯಕರ್ತರ ಮೇಲೆ ಬಿಜೆಪಿ ಗೂಂಡಾಗಳು ನಡೆಸುತ್ತಿರುವ ದಾಳಿಗಳನ್ನು ಕೇಂದ್ರ ಸಮಿತಿಯು ಬಲವಾಗಿ ಖಂಡಿಸಿತು. ಕಳೆದ ವಾರ, ಮಾಣಿಕ್‌ಭಂದರ್‌ನಲ್ಲಿರುವ ಪಕ್ಷದ ಕಮಲಪುರ ಉಪ ವಿಭಾಗ ಕಚೇರಿಗೆ ಬೆಂಕಿ ಹಚ್ಚಲಾಯಿತು. ಈ ಹಿಂದೆ, ಸಿಪಿಐ(ಎಂ) ನಾಯಕ ರಂಜಿತ್ ಘೋಷ್ ಕಮಲಪುರದ ಸ್ಥಳೀಯ ಕಛೇರಿಯಲ್ಲಿ ಹಲ್ಲೆಗೆ ಒಳಗಾಗಿ, ತೀವ್ರವಾಗಿ ಗಾಯಗೊಂಡಿದ್ದರು. ಕಚೇರಿಗಳ ಮೇಲೆ ದಾಳಿ ಮತ್ತು ಬೆಂಕಿ ಹಚ್ಚುವ  ಕೃತ್ಯಗಳುಮೇಲೆ ಬೆಲೋನಿಯಾ ಮತ್ತು ಜಿರಾನಿಯಾ ಉಪವಿಭಾಗಗಳಲ್ಲೂ ನಡೆದಿವೆ.

ಈ ದಾಳಿಗಳಿಗೆ ಸಂಬಂಧಿಸಿದಂತೆ ಸಿಪಿಐ(ಎಂ) ನಿಯೋಗಗಳು ಈ ಹಿಂದೆ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದವು ಮತ್ತು ಅಂತಹ ಹಿಂಸೆಯನ್ನು ಅನುಮತಿಸಲಾಗುವುದಿಲ್ಲ ಎಂದು ಅವರು ಭರವಸೆ ನೀಡಿದ್ದರು. ಆದರೆ, ಇದರ ಹೊರತಾಗಿಯೂ, ಭಯೋತ್ಪಾದನೆಯ ಆಳ್ವಿಕೆ ಮುಂದುವರಿದಿದೆ.

ಕೇಂದ್ರ ಸಮಿತಿ ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷಗಳ ಮೇಲಿನ ಈ ನಿರ್ಲಜ್ಜ ದಾಳಿಯನ್ನು ಕೊನೆಗೊಳಿಸಬೇಕು ಮತ್ತು ಪ್ರಜಾಪ್ರಭುತ್ವದ ಹಕ್ಕುಗಳನ್ನು ರಕ್ಷಿಸಬೇಕು ಎಂದು ಕರೆ ನೀಡುತ್ತದೆ.

ಟೋಕಿಯೊ ಒಲಿಂಪಿಕ್ಸ್

ಸಿಪಿಐ(ಎಂ) ನ ಕೇಂದ್ರ ಸಮಿತಿಯು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಪದಕಗಳನ್ನು ಗೆದ್ದ ಮತ್ತು ದೇಶಕ್ಕೆ ಕೀರ್ತಿ ತಂದ ಎಲ್ಲರನ್ನು ಅಭಿನಂದಿಸುತ್ತದೆ. ಭಾರತವು ಮೊದಲ ಬಾರಿಗೆ ಅಥ್ಲೆಟಿಕ್ಸ್‌ನಲ್ಲಿ ಒಲಿಂಪಿಕ್ ಪದಕ ಗೆದ್ದಿದ್ದು, ಅದೂ ಚಿನ್ನದ ಪದಕ ಪಡೆದಿರುವುದು ಐತಿಹಾಸಿಕವಾಗಿದೆ. ಪುರುಷರ ಹಾಕಿ ತಂಡ ಕಂಚಿನ ಪದಕ ಗೆದ್ದರೆ, ಮಹಿಳಾ ಹಾಕಿ ತಂಡವು ಚೈತನ್ಯಪೂರ್ಣ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನದಲ್ಲಿದೆ. ಆರು ವೈಯಕ್ತಿಕ ಪದಕ ವಿಜೇತರಲ್ಲಿ ಮೂವರು ಮಹಿಳೆಯರು ಎಂಬುದು ಹೃದಯಸ್ಪರ್ಶಿಯಾಗಿದೆ.

ಈ ಅದ್ಭುತ ಪ್ರದರ್ಶನಗಳ ಹೊರತಾಗಿಯೂ,ಪದಕಗಳ ಸಂಖ್ಯೆ ಇಷ್ಟು ಕಡಿಮೆ ಇರುವುದು, ದೇಶದಲ್ಲಿ ಕ್ರೀಡೆಗಳು ಎಷ್ಟು ನಿರ್ಲಕ್ಷ್ಯಕ್ಕೊಳಗಾಗಿವೆ ಎಂಬುದನ್ನು ತೋರಿಸುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಕ್ರೀಡಾ ಸೌಲಭ್ಯಗಳು ಮತ್ತು ತರಬೇತಿಗೆ ಪ್ರಭುತ್ವದ ಬೆಂಬಲದ ೊಂದು ಸಮಗ್ರ ನೀತಿಯಿರಲೇ ಬೇಕು.

ಜಾತಿ ನಿಂದನೆಯನ್ನು ಖಂಡಿಸಿ

ಕೇಂದ್ರ ಸಮಿತಿಯು ಹರಿದ್ವಾರದಲ್ಲಿ,  ಮಹಿಳಾ ಹಾಕಿ ಆಟಗಾರ್ತಿ ವಂದನಾ ಕಟಾರಿಯಾ ವಿರುದ್ಧದ ಜಾತಿವಾದಿ ನಿಂದನೆಯನ್ನು ಬಲವಾಗಿ ಖಂಡಿಸಿತು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿತು

ಭಾರತ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವ

ಪಕ್ಷ ಈ ವಾರ್ಷಿಕೋತ್ಸವದ  ಆಚರಣೆ ನಡೆಸಬೇಕೆಂದು ಕೇಂದ್ರ ಸಮಿತಿ ನಿಧ‍್ರಿಸಿತು. ಇದರಲ್ಲಿ, ಸ್ವಾತಂತ್ರ್ಯ ಹೋರಾಟದಲ್ಲಿ ಕಮ್ಯುನಿಸ್ಟರ ಪಾತ್ರವನ್ನು , ಆಧುನಿಕ ಭಾರತದ ನಿರ್ಮಾಣದಲ್ಲಿ ಮತ್ತು “ಭಾರತ ಎಂಬ ಭಾವ”ವನ್ನು ಕ್ರೋಡೀಕರಿಸುವಲ್ಲಿ ಕಮ್ಯುನಿಸ್ಟ್ ಪಕ್ಷದ ಕೊಡುಗೆಗಳನ್ನು ಮತ್ತು `ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರ್‌ಎಸ್‌ಎಸ್ ನ ಸಂಪೂರ್ಣ ಅನುಪಸ್ಥಿತಿ, ಕೆಲವೊಮ್ಮೆ  ಬ್ರಿಟಿಷರೊಂದಿಗೆ ಶಾಮೀಲನ್ನು ಹಾಗೂ ಇಂದು ಭಾರತದ ಸಾಂವಿಧಾನಿಕ ಜಾತ್ಯತೀತ ಪ್ರಜಾಪ್ರಭುತ್ವ ಗಣತಂತ್ರವನ್ನು  ದುರ್ಬಲಗೊಳಿಸುವ ಅದರ ದುಷ್ಟತನವನ್ನು ಎತ್ತಿ ತೋರಲಾಗುವುದು.

ಸಿಪಿಐ(ಎಂ)ನ 23 ನೇ ಮಹಾಧಿವೇಶನ

ಕೇಂದ್ರ ಸಮಿತಿಯು ಪಕ್ಷದ 23 ನೇ ಮಹಾಧಿವೇಶನವನ್ನು  ಏಪ್ರಿಲ್ 2022 ರಲ್ಲಿ ಕೇರಳದ ಕಣ್ಣೂರಿನಲ್ಲಿ ಕರೆಯಲು ನಿರ್ಧರಿಸಿತು. ಇದು ಮಹಾಸೋಂಕಿನ ಮೂರ್ತ ಪರಿಸ್ಥಿತಿಗಳಲ್ಲಿ ಅಗತ್ಯ ವಿಧಿ-ವಿಧಾನಗಳನ್ನು ಪಾಲನೆಗೆ  ಒಳಪಟ್ಟಿರುತ್ತದೆ.

ಕೇಂದ್ರ ಸಮಿತಿಯ ಆಗ್ರಹಗಳು

ಕೇಂದ್ರ ಸರ್ಕಾರ ಈ ಕೆಳಗಿನ ಪ್ರಶ್ನೆಗಳ ಮೇಲಿನ ಆಗ್ರಹಗಳನ್ನು  ಜಾರಿಗೊಳಿಸಬೇಕು ಎಂದು ಕೇಂದ್ರ ಸಮಿತಿಯು ಒತ್ತಾಯಿಸುತ್ತದೆ:

  1. ಜಾಗತಿಕವಾಗಿ ಲಸಿಕೆಗಳನ್ನು ಖರೀದಿಸಬೇಕು ಮತ್ತು ತಕ್ಷಣವೇ ಉಚಿತ ಸಾರ್ವತ್ರಿಕ ಸಾಮೂಹಿಕ ಲಸಿಕೀಕರಣ ಅಭಿಯಾನವನ್ನುತ್ವರಿತಗೊಳಿಸಬೇಕು; ಕೋವಿಡ್‌ನಿಂದ ಪ್ರಾಣ ಕಳೆದುಕೊಂಡವರಿಗೆ ಸಾಕಷ್ಟು ಪರಿಹಾರ ಒದಗಿಸಬೇಕು; ಸಾರ್ವಜನಿಕ ಆರೋಗ್ಯ ಪಾಲನೆ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬೇಕು.
  2. ಆದಾಯ ತೆರಿಗೆ ವ್ಯಾಪ್ತಿಯ ಹೊರಗಿನ ಎಲ್ಲ ಕುಟುಂಬಗಳಿಗೆ ತಿಂಗಳಿಗೆ 7,500 ರೂ.ಗಳ ಉಚಿತ ನಗದು ವರ್ಗಾವಣೆಗಳನ್ನು ಜಾರಿಗೊಳಿಸಬೇಕು.
  3. ಅಗತ್ಯವಿರುವ ಎಲ್ಲರಿಗೆ ದೈನಂದಿನ ಬಳಕೆಯ ಎಲ್ಲಾ ಅಗತ್ಯ ವಸ್ತುಗಳನ್ನು ಹೊಂದಿರುವ ಉಚಿತ ಆಹಾರ ಕಿಟ್‌ಗಳನ್ನು ವಿತರಿಸಬೇಕು.
  4. ಎಲ್ಲಾ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಕೇಂದ್ರೀಯ ಅಬಕಾರಿ ಸುಂಕ ಹೆಚ್ಚಳವನ್ನು ಹಿಂಪಡೆಯಬೇಕು ಮತ್ತು ನಾಗಾಲೋಟ ಹೂಡಿರುವ ಹಣದುಬ್ಬರವನ್ನು ನಿಯಂತ್ರಿಸಬೇಕು.
  5. ಕೃಷಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು MSP ನಲ್ಲಿ(ಕನಿಷ್ಟ ಬೆಂಬಲ ಬೆಲೆಯಲ್ಲಿ) ಮಾರಾಟ ಮಾಡುವ ಹಕ್ಕನ್ನು ಕೊಡುವ ಶಾಸನ ತರಬೇಕು. C2+50 ಶೇಕಡ ಸೂತ್ರದ ಪ್ರಕಾರ MSP  ಇರಬೇಕು.
  6. ಸಾರ್ವಜನಿಕ ವಲಯದ ಖಾಸಗೀಕರಣವನ್ನು ನಿಲ್ಲಿಸಬೇಕು ಮತ್ತು ಹಿಂದಕ್ಕೆ ತಿರುಗಿಸಬೇಕು; ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು.
  7. ಮುಷ್ಕರಗಳ ಮೂಲಕ ಪ್ರತಿಭಟಿಸುವ ಮತ್ತು ವೇತನ ಚೌಕಾಶಿಯ ದುಡಿಯುವ ಜನರ ಹಕ್ಕುಗಳನ್ನು ಮರುಸ್ಥಾಪಿಸಬೇಕು..
  8. ಮಧ್ಯಮ, ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆ(MSME) ಗಳ ಪುನರುಜ್ಜೀವನಕ್ಕಾಗಿ ವಿತ್ತೀಯ ಉತ್ತೇಜನಾ ಪ್ಯಾಕೇಜ್‌ಗಳನ್ನು ಘೋಷಿಸಬೇಕು, ಸಾಲ ನೀಡಿಕೆಗಳನ್ನಲ್ಲ. .
  9. MGNREGA ಅನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬೇಕು, ಉದ್ಯೋಗ ಖಾತ್ರಿಯನ್ನು ಕನಿಷ್ಟ 200 ದಿನಗಳ ವರೆಗೆ ಹೆಚ್ಚಿಸಬೇಕು. ಕೂಲಿಗಳನ್ನು ಕನಿಷ್ಟ ಎರಡು ಪಟ್ಟಾದರೂ ಮಾಡಬೇಕು.
  10. ಇದೇ ರೀತಿಯಲ್ಲಿ ನಗರ ಉದ್ಯೋಗ ಖಾತರಿ ಕಾರ್ಯಕ್ರಮದ ಶಾಸನವನ್ನು ರಚಿಸಬೇಕು.
  11. ನಮ್ಮ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ಕಟ್ಟಲು ಸಾರ್ವಜನಿಕ ಹೂಡಿಕೆಗಳನ್ನು ಹೆಚ್ಚಿಸಬೇಕು, ಆಮೂಲಕ ಉದ್ಯೋಗಗಳನ್ನು ನಿರ್ಮಿಸಬೇಕು ಮತ್ತು ಆಂತರಿಕೆ ಬೇಡಿಕೆಗೆ ಉತ್ತೇಜನೆ ನೀಡಬೇಕು, ಸರಕಾರೀ ಉದ್ಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
  12. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಲಸಿಕೀಕರಣಕ್ಕೆ ಆದ್ಯತೆ ನೀಡಿ ಶಿಕ್ಷಣ ಸಂಸ್ಥೆಗಳನ್ನು ಬೇಗನೆ ಪುನಃ ತೆರೆಯುವುದನ್ನು ಖಚಿತಪಡಿಸಬೇಕು.
  13. ಜನಗಳ ಮೇಲೆ ಗೂಢಚಾರಿಕೆಗಾಗಿ ಪೆಗಾಸಸ್‍ ಗೂಢಚರ್ಯೆ ತಂತ್ರಾಂಶದ ಬಳಕೆ ಕುರಿತು ತಕ್ಷಣವೇ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಯನ್ನು ನಡೆಸಬೇಕು.
  14. ರಫೇಲ್ ವ್ಯವಹಾರದ ಬಗ್ಗೆ – ಹಿಂದಿನ ಆರ್ಡರನ್ನು ರದ್ದುಗೊಳಿಸಿ ಮತ್ತು ಹೆಚ್ಚಿನ ವೆಚ್ಚದಲ್ಲಿ ಹೊಸ ಆರ್ಡರನ್ನು ನೀಡಿರುವ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು.
  15. ಭೀಮಾ ಕೋರೆಗಾಂವ್ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳ ಪ್ರಕರಣಗಳಲ್ಲಿ ಕರಾಳ ಯುಎಪಿಎ ಅಡಿಯಲ್ಲಿ ಬಂಧಿಸಲ್ಪಟ್ಟವರು ಸೇರಿದಂತೆ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು.

ಕೇಂದ್ರ ಸಮಿತಿ ಕರೆ

ಮೇಲಿನ ಬೇಡಿಕೆಗಳ ಆಧಾರದ ಮೇಲೆ, ಕೇಂದ್ರ ಸಮಿತಿಯು ಸಾಂಕ್ರಾಮಿಕ ಮತ್ತು ಸ್ಥಳೀಯ ಲಾಕ್‌ಡೌನ್‌ಗಳ ಸ್ಥಳೀಯ ಪರಿಸ್ಥಿತಿಗಳನ್ನು ಅವಲಂಬಿಸಿ ಸೆಪ್ಟೆಂಬರ್ ತಿಂಗಳಲ್ಲಿ ರಾಜ್ಯ ಸಮಿತಿಗಳು ಮತ್ತು ಎಲ್ಲಾ ಕೆಳ ಘಟಕಗಳಿಂದ ದೇಶಾದ್ಯಂತ ಪ್ರತಿಭಟನೆಗಳು ಮತ್ತು ಹೋರಾಟಗಳನ್ನು ಆಯೋಜಿಸಲು ಕರೆ ನೀಡುತ್ತದೆ. ರಾಜ್ಯ ಸಮಿತಿಗಳು  ಈ ಪ್ರತಿಭಟನಾ ಕ್ರಮಗಳ ವಿವರಗಳನ್ನು ನಿರ್ಧರಿಸುತ್ತವೆ.

ಮೇಲಿನ ಬೇಡಿಕೆಗಳ ಮೇಲೆ ಈ ಪ್ರತಿಭಟನಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಇತರ ಎಲ್ಲ ವಿಭಾಗಗಳನ್ನು ಸೆಳೆಯಲು ಪ್ರಯತ್ನಗಳನ್ನು ಮಾಡಬೇಕು.

ಕ್ವಿಟ್ ಇಂಡಿಯಾ ದಿನಾಚರಣೆಯನ್ನು ರಾಷ್ಟ್ರವ್ಯಾಪಿಯಾಗಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ ನೀಡಿರುವ ಕರೆಗೆ  ಸಿಪಿಐ(ಎಂ) ಈಗಾಗಲೇ ತನ್ನ ಬೆಂಬಲವನ್ನು ನೀಡಿದೆ.

Leave a Reply

Your email address will not be published. Required fields are marked *