ಸೆಪ್ಟೆಂಬರ್ 20ರಿಂದ 30: ದೇಶಾದ್ಯಂತ ಜಂಟಿ ಪ್ರತಿಭಟನಾ ಕಾರ್ಯಾಚರಣೆಗಳು-19 ಪ್ರತಿಪಕ್ಷಗಳ ನಿರ್ಧಾರ

ಕಾಂಗ್ರೆಸ್, ಎನ್‍.ಸಿ.ಪಿ., ಟಿಎಂಸಿ, ಎಡಪಕ್ಷಗಳು ಸೇರಿದಂತೆ ದೇಶದ 19 ಪ್ರತಿಪಕ್ಷಗಳು ಆಗಸ್ಟ್ 20ರಂದು ನಡೆದ ಆನ್‍ಲೈನ್‍ ಸಭೆಯಲ್ಲಿ ದೇಶಾದ್ಯಂತ ಸೆಪ್ಟೆಂಬರ್ 20ರಿಂದ 30ರ ನಡುವೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ಜಂಟಿಯಾಗಿ ಸಂಘಟಿಸಲು ನಿರ್ಧರಿಸಿವೆ. 11 ಬೇಡಿಕೆಗಳ ಮೇಲೆ ಈ ಕಾರ್ಯಾಚರಣೆಗಳು ನಡೆಯುತ್ತವೆ. ಈ ಸಾರ್ವಜನಿಕ ಪ್ರತಿಭಟನಾ ಕಾರ್ಯಾಚರಣೆಗಳ ಸ್ವರೂಪವನ್ನು ಈ ಎಲ್ಲ ಪಕ್ಷಗಳ ರಾಜ್ಯ ಘಟಕಗಳು ಆಯಾಯ ರಾಜ್ಯದ ಕೋವಿಡ್‍ ವಿಧಿ-ವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸುತ್ತವೆ. ಧರಣಿ, ಪ್ರತಿಭಟನಾ ಪ್ರದರ್ಶನಗಳು, ಹರತಾಳ ಮುಂತಾದ ರೂಪಗಳಲ್ಲಿ ಈ ಕಾರ್ಯಾಚರಣೆಗಳು ನಡೆಯುತ್ತವೆ ಎಂದು ಈ ಸಭೆಯ ನಂತರ ಪ್ರಕಟಿಸಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕೇಂದ್ರ ಸರಕಾರ ಮತ್ತು ಆಳುವ ಪಕ್ಷ ಸಂಸತ್ತಿನ ಮುಂಗಾರು ಅಧಿವೇಶನವನ್ನು ಛಿದ್ರಗೊಳಿಸಿದ ರೀತಿಯನ್ನು ಈ ಸಭೆ ಬಲವಾಗಿ ಖಂಡಿಸಿತು. ಪೆಗಸಸ್ ಮಿಲಿಟರಿ ಗೂಢಚರ್ಯೆ ತಂತ್ರಾಂಶದ ಕಾನೂನುಬಾಹಿರ ಬಳಕೆ, ಮೂರು ಕೃಷಿ ಕಾಯ್ದೆಗಳ ರದ್ದತಿ, ಕೋವಿಡ್‍ ಮಹಾಸೋಂಕಿನ ಅತ್ಯಂತ ಕಳಪೆ ನಿರ್ವಹಣೆ, ಲಂಗುಲಗಾಮಿಲ್ಲದ ಹಣದುಬ್ಬರ ಮತ್ತು ಬೆಲೆಯೇರಿಕೆ ಮತ್ತು ನಿರುದ್ಯೋಗ ಇವನ್ನೆಲ್ಲ ಚರ್ಚಿಸಲು ಅಥವ ಉತ್ತರಿಸಲು ನಿರಾಕರಿಸುವ ಮೂಲಕ ಅಧಿವೇಶನವನ್ನು ಛಿದ್ರಗೊಳಿಸಲಾಗಿದೆ ಎಂದು ಈ ಪಕ್ಷಗಳು ಹೇಳಿವೆ.

ಇದನ್ನು ಓದಿ: ಕೃಷಿ ಕಾಯ್ದೆಗಳು, ಕೋವಿಡ್‍ ನಿರ್ವಹಣೆಯಲ್ಲಿ ವಿಫಲತೆ, ಪೆಗಾಸಸ್ ಗೂಢಚಾರಿಕೆ ವಿರುದ್ಧ ಸೆಪ್ಟಂಬರ್‌ನಲ್ಲಿ ವ್ಯಾಪಕ ಪ್ರತಿಭಟನೆ – ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ಸಂಸತ್ತಿನಲ್ಲಿ ಹಿಂದೆಂದೂ ಕಾಣದ ದೃಶ್ಯಗಳು ಕಂಡು ಬಂದವು. ಪ್ರತಿಪಕ್ಷಗಳ ಪ್ರತಿಭಟನೆಗಳನ್ನು ಛಿದ್ರಗೊಳಿಸಲು ತಂದ ಮಾರ್ಷಲ್‍ಗಳಿಂದ ಸಂಸತ್ ಸದಸ್ಯರು, ಮಹಿಳಾ ಎಂಪಿಗಳು ಕೂಡ ಗಾಯಗೊಳ್ಳುವ ಪರಿಸ್ಥಿತಿ ಉಂಟಾಯಿತು. ದೇಶದ ಮುಂದಿರುವ ನಿರ್ಣಾಯಕ ಪ್ರಶ್ನೆಗಳನ್ನು ಎತ್ತುವ ಪ್ರತಿಪಕ್ಷಗಳ ಹಕ್ಕನ್ನು ನಿರಾಕರಿಸಿರುವುದು ಮಾತ್ರವಲ್ಲ, ಸರಕಾರ ಗದ್ದಲದ ನಡುವೆಯೇ ಎರಡೂ ಸದನಗಳಲ್ಲಿ ಶಾಸನಗಳನ್ನು ಬಲವಂತದಿಂದ ಚರ್ಚೆಯಿಲ್ಲದೆಯೇ ಪಾಸು ಮಾಡಿಸಿಕೊಂಡಿದೆ ಎಂದು ಹೇಳಿಕೆಯಲ್ಲಿ ಆಪಾದಿಸಲಾಗಿದೆ.

ಪ್ರಧಾನ ಮಂತ್ರಿಗಳು ತನ್ನ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಜನಗಳ ಸಂಕಟಗಳಿಗೆ ಸಂಬಂಧಪಟ್ಟ ಒಂದೇ ಒಂದು ಪ್ರಶ್ನೆಯ ಮೇಲೆ ಸಹ ಗಮನ ಕೇಂದ್ರೀಕರಿಸಲಿಲ್ಲ. ಆ ಭಾಷಣ ಆಡಂಭರದ ಮಾತುಗಳು, ಟೊಳ್ಳು ಘೋಷಣೆಗಳು ಮತ್ತು ಅಪಮಾಹಿತಿಗಳಿಂದ ತುಂಬಿತ್ತು. ನಿಜ ಹೇಳಬೇಕೆಂದರೆ, 2019 ಮತ್ತು 2020ರ ಭಾಷಣಗಳ ಮರು ಪ್ಯಾಕೇಜಿಂಗ್ ಮಾತ್ರ ಆಗಿದ್ದ ಈ ಭಾಷಣ, ನಮ್ಮ ಜನಗಳ ಬದುಕುಗಳು ಮತ್ತಷ್ಟು ಹದಗೆಡುತ್ತವೆ ಎಂಬುದರ ಅನಿಷ್ಟಕಾರೀ ಎಚ್ಚರಿಕೆಯೇ ಆಗಿದೆ ಎಂದು ಈ ಪ್ರತಿಪಕ್ಷಗಳು ಟೀಕಿಸಿವೆ.

ಸಂಸತ್ತು ಜನಗಳ ಜೀವ, ಜೀವನೋಪಾಯಗಳನ್ನು ಬಾಧಿಸುತ್ತಿರುವ ಮಹತ್ವದ ಪ್ರಶ್ನೆಗಳನ್ನು ಚರ್ಚಿಸಲು ಸಾಧ್ಯವಾಗಲಿಲ್ಲ, ಇತ್ತ ಪ್ರಧಾನಮಂತ್ರಿಗಳ ಭಾಷಣವೂ ಜನಗಳ ಹದಗೆಡುತ್ತಿರುವ ಸಮಸ್ಯೆಗಳಿಗೆ ಯಾವುದೇ ಪರಿಹಾರವನ್ನು ಸೂಚಿಸಿಲ್ಲ.

ಇಂತಹ ಸಂದರ್ಭದಲ್ಲಿ, ಹನ್ನೊಂದು ಬೇಡಿಕೆಗಳನ್ನು ಸರಕಾರದ ಮುಂದಿಡುವುದಾಗಿ ಈ 19 ಪಕ್ಷಗಳು ಹೇಳಿವೆ. ಅವು ಹೀಗಿವೆ:

  1. ಭಾರತದಲ್ಲಿ ಲಭ್ಯವಿರುವ ಎಲ್ಲ ಲಸಿಕೆ ಉತ್ಪಾದನಾ ಸಾಮರ್ಥ್ಯಗಳನ್ನು ಕ್ರೋಡೀಕರಿಸಬೇಕು, ಜಾಗತಿಕವಾಗಿ ಲಸಿಕೆಗಳನ್ನು ಖರೀದಿಸಬೇಕು ಮತ್ತು ತಕ್ಷಣವೇ ಉಚಿತ ಸಾರ್ವತ್ರಿಕ ಸಾಮೂಹಿಕ ಲಸಿಕೀಕರಣ ಅಭಿಯಾನದ ವೇಗವನ್ನು ಹೆಚ್ಚಿಸಬೇಕು; ಕೋವಿಡ್‍ ನಿಂದ ಪ್ರಾಣ ಕಳಕೊಂಡವರಿಗೆ ಸಾಕಷ್ಟು ಪರಿಹಾರ ಒದಗಿಸಬೇಕು ಮತ್ತು ಸಾರ್ವಜನಿಕ ಆರೋಗ್ಯಪಾಲನೆ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸಬೇಕು.
  2. ಕೇಂದ್ರ ಸರಕಾರ ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವ ಎಲ್ಲ ಕುಟುಂಬಗಳಿಗೆ ತಿಂಗಳಿಗೆ ರೂ.7500 ನಗದು ವರ್ಗಾವಣೆಯನ್ನು ಅನುಷ್ಠಾನಕ್ಕೆ ತರಬೇಕು ಮತ್ತು ಅಗತ್ಯವಿರುವ ಎಲ್ಲರಿಗೂ ದಿನಬಳಕೆಯ ಎಲ್ಲ ಅಗತ್ಯ ಸರಕುಗಳಿರುವ ಆಹಾರ ಕಿಟ್‍ ಗಳನ್ನು ಉಚಿತವಾಗಿ ವಿತರಿಸಬೇಕು.
  3. ಪೆಟ್ರೋಲಿಯಂ ಮತ್ತು ಡೀಸೆಲ್ ಮೇಲಿನ ಕೇಂದ್ರೀಯ ಅಬಕಾರಿ ಸುಂಕಗಳಲ್ಲಿ ಅಭೂತಪೂರ್ವ ಹೆಚ್ಚಳಗಳನ್ನು ಹಿಂತೆಗೆದುಕೊಳ್ಳಬೇಕು; ಅಡುಗೆ ಅನಿಲ ಮತ್ತು ಅಗತ್ಯ ವಸ್ತುಗಳ, ವಿಶೇಷವಾಗಿ ಅಡುಗೆ ತೈಲದ ಬೆಲೆಗಳನ್ನು ಕಡಿಮೆ ಮಾಡಬೇಕು ಮತ್ತು ನಾಗಾಲೋಟ ಹೂಡಿರುವ ಹಣದುಬ್ಬರವನ್ನು ನಿಯಂತ್ರಿಸಬೇಕು.
  4. ಮೂರು ಕೃಷಿ ವಿರೋಧಿ ಕಾನೂನುಗಳನ್ನು ರದ್ದುಗೊಳಿಸಬೇಕು ಮತ್ತು ರೈತರಿಗೆ ಕಡ್ಡಾಯವಾಗಿ ಎಂಎಸ್‌ಪಿ ಗ್ಯಾರಂಟಿ ಕೊಡಬೇಕು.
  5. ಸಾರ್ವಜನಿಕ ವಲಯದ ಲಂಗುಲಗಾಮಿಲ್ಲದ ಖಾಸಗೀಕರಣವನ್ನು ನಿಲ್ಲಿಸಬೇಕು ಮತ್ತು ಹಿಂದಕ್ಕೆ ಪಡೆಯಬೇಕು; ಶ್ರಮಿಕರು ಮತ್ತು ಕಾರ್ಮಿಕ ವರ್ಗದ ಹಕ್ಕುಗಳನ್ನು ದುರ್ಬಲಗೊಳಿಸುವ ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಪ್ರತಿಭಟಿಸುವ ಮತ್ತು ವೇತನ ಚೌಕಾಶಿಯ ದುಡಿಯುವ ಜನರ ಹಕ್ಕುಗಳನ್ನು ಮರುಸ್ಥಾಪಿಸಬೇಕು.
  6. ಮಧ್ಯಮ ಸಣ್ಣ ಮತ್ತು ಅತಿ ಸಣ್ಣ (ಎಂ.ಎಸ್.ಎಂ.ಇ.) ಗಳ ಪುನರುಜ್ಜೀವನಕ್ಕಾಗಿ ವಿತ್ತೀಯ ಉತ್ತೇಜನ ಪ್ಯಾಕೇಜ್‌ಗಳನ್ನು ಜಾರಿಗೊಳಿಸಬೇಕು, ಸಾಲ ನೀಡಿಕೆಗಳ ಅಂಶಗಳನ್ನಲ್ಲ. ನಮ್ಮ ಆರ್ಥಿಕ ಮತ್ತು ಸಾಮಾಜಿಕ ಮೂಲಸೌಕರ್ಯಗಳನ್ನು ನಿರ್ಮಿಸಲು ಉದ್ಯೋಗಗಳನ್ನು ಸೃಷ್ಟಿಸಲು ಮತ್ತು ದೇಶೀಯ ಬೇಡಿಕೆಯನ್ನು ಹೆಚ್ಚಿಸಲು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು. ಸರ್ಕಾರಿ ಉದ್ಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
  7. ಕನಿಷ್ಠ ಎರಡುಪಟ್ಟು ಕೂಲಿಯೊಂದಿಗೆ 200 ದಿನಗಳವರೆಗೆ ಹೆಚ್ಚಿಸಿದ ಖಾತರಿಯೊಂದಿಗೆ ಎಂಜಿಎನ್‌ಆರ್‌ಇಜಿಎ ಯನ್ನು ದೊಡ್ಡದಾಗಿ ವಿಸ್ತರಿಸಬೇಕು. ಇದೇ ರೀತಿಯಲ್ಲಿ ನಗರ ಉದ್ಯೋಗ ಖಾತರಿ ಕಾರ್ಯಕ್ರಮಕ್ಕೆ ಶಾಸನ ರೂಪಿಸಬೇಕು.
  8. ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಲಸಿಕೀಕರಣಕ್ಕೆ ಆದ್ಯತೆ ನೀಡಿ ಶಿಕ್ಷಣ ಸಂಸ್ಥೆಗಳನ್ನು ಬೇಗನೆ ಪುನಃ ತೆರೆಯುವಂತಾಗಬೇಕು.
  9. ಪೆಗಾಸಸ್ ಗೂಢಚರ್ಯೆ ತಂತ್ರಾಂಶವನ್ನು ಜನಗಳ ಮೇಲೆ ಕಣ್ಗಾವಲಿಗೆ ಬಳಸುವುದರ ಕುರಿತು ತಕ್ಷಣವೇ ಸುಪ್ರೀಂ ಕೋರ್ಟ್ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಯನ್ನು ನಡೆಸಬೇಕು. ರಫೇಲ್ ವ್ಯವಹಾರದಲ್ಲಿ ಹಿಂದಿನ ಆದೇಶವನ್ನು ರದ್ದುಗೊಳಿಸಿರುವುದು ಮತ್ತು ಹೆಚ್ಚಿನ ವೆಚ್ಚದಲ್ಲಿ ಹೊಸ ಆದೇಶವನ್ನು ನೀಡಿರುವುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು.
  10. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಮತ್ತು ಸಿಎಎ ವಿರೋಧಿ ಪ್ರತಿಭಟನೆಗಳಲ್ಲಿ ಕರಾಳ ಯುಎಪಿಎ ಅಡಿಯಲ್ಲಿ ಬಂಧನದಲ್ಲಿ ಇರುವವರೂ ಸೇರಿದಂತೆ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು. ಜನರ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ಉಲ್ಲಂಘಿಸಲು ದೇಶದ್ರೋಹ/ಎನ್‌ಎಸ್‌ಎ ನಂತಹ ಇತರ ಕಠಿಣ ಕಾನೂನುಗಳನ್ನು ಬಳಸುವುದನ್ನು ನಿಲ್ಲಿಸಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯದ ತಮ್ಮ ಮೂಲಭೂತ ಹಕ್ಕನ್ನು ಚಲಾಯಿಸಿದ್ದಕ್ಕಾಗಿ ಬಂಧಿಸಿರುವ ಎಲ್ಲಾ ಮಾಧ್ಯಮ ಸಿಬ್ಬಂದಿಯನ್ನು ಬಿಡುಗಡೆ ಮಾಡಬೇಕು.
  11. ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲಾ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು. ಕೇಂದ್ರ ಸೇವೆಗಳ ಜಮ್ಮು ಮತ್ತು ಕಾಶ್ಮೀರ ಕೇಡರ್ ಸೇರಿದಂತೆ ಪೂರ್ಣ ರಾಜ್ಯದ ಸ್ಥಾನಮಾನವನ್ನು ಮರುಸ್ಥಾಪಿಸಬೇಕು. ಆದಷ್ಟು ಬೇಗನೇ  ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಬೇಕು.

ನಮ್ಮ ಜಾತ್ಯತೀತ, ಪ್ರಜಾಸತ್ತಾತ್ಮಕ ಗಣತಣತ್ರ ವ್ಯವಸ್ಥೆಯನ್ನು ನಮ್ಮೆಲ್ಲ ಶಕ್ತಿ-ಸಾಮರ್ಥ್ಯದೊಂದಿಗೆ ರಕ್ಷಿಸಿಕೊಳ್ಳಲು ಎದ್ದು ನಿಲ್ಲಬೇಕು, ಭಾರತದ ಒಂದು ಉತ್ತಮ ನಾಳೆಗಾಗಿ ಇಂದು ಅದನ್ನು ಉಳಿಸಬೇಕು ಎಂದು ಈ 19 ಪಕ್ಷಗಳ ನೇತಾರರು ಜನರಿಗೆ ಕರೆ ನೀಡಿದ್ದಾರೆ.

ಕಾಂಗ್ರೆಸ್‍, ಎನ್‍.ಸಿ.ಪಿ., ಟಿಎಂಸಿ, ಡಿಎಂಕೆ, ಶಿವಸೇನೆ, ನ್ಯಾಷನಲ್‍ ಕಾನ್ಫರೆನ್ಸ್, ಜೆಎಂಎಂ, ಪಿಡಿಪಿ, ಆರ್.ಜೆ.ಡಿ., ಆರ್.ಎಲ್.ಡಿ., ಎಐಎಯುಡಿಎಫ್, ಎಲ್‍.ಜೆ.ಡಿ., ಸಿಪಿಐ, ಆರ್‍.ಎಸ್‍.ಪಿ., ಕೆಸಿಎಂ, ಐಯುಎಂಎಲ್, ವಿಸಿಕೆ, ಜೆಡಿ(ಎಸ್‍) ಮತ್ತು ಸಿಪಿಐ(ಎಂ) ನೇತಾರರು ಈ ಜಂಟಿ ಹೇಳಿಕೆಗೆ ಸಹಿ ಹಾಕಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಸಂಪರ್ಕದ ಸಮಸ್ಯೆಯಿಂದಾಗಿ ಈ ಸಭೆಯಲ್ಲಿ ಭಾಗವಹಿಸಲಾಗಲಿಲ್ಲ. ಅವರಿಗೆ ಈ ಹೇಳಿಕೆಯನ್ನು ಕಳಿಸಲಾಗಿದೆ ಎಂದೂ ಈ ಹೇಳಿಕೆ ತಿಳಿಸಿದೆ.

Leave a Reply

Your email address will not be published. Required fields are marked *