ಆಫ್ಘಾನಿಸ್ತಾನದಲ್ಲಿ ಅಮೆರಿಕಾದ ಪರಾಭವ – ಭಾರತವೂ ಪಾಟ ಕಲಿಯಬೇಕಾಗಿದೆ

ಪ್ರಕಾಶ್ ಕಾರಟ್

Prakash_karat
ಪ್ರಕಾಶ್ ಕಾರಟ್

ಆಫ್ಘಾನಿಸ್ತಾನದಲ್ಲಿ ಅಮೆರಿಕದ ಪರಾಭವದಲ್ಲಿ ಭಾರತಕ್ಕೂ ಪಾಠಗಳಿವೆ. ಅಮೆರಿಕದೊಂದಿಗಿನ ಬಾಂಧವ್ಯಕ್ಕೆ ಆದ್ಯತೆ ನೀಡುವ ಭಾರತದ ನೀತಿಯಿಂದಾಗಿ ಈ ವಲಯದಲ್ಲಿ ಭಾರತ ಒಬ್ಬಂಟಿಯಾಗಿ ಬಿಟ್ಟಿದೆ. ಮೋದಿ ಸರ್ಕಾರ ತನ್ನ ವಿದೇಶಾಂಗ ನೀತಿ ಮತ್ತು ವ್ಯೂಹಾತ್ಮಕ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅದು ಹೆಚ್ಚು ವೈರತ್ವದ ಪ್ರಾದೇಶಿಕ ಸನ್ನಿವೇಶದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈ ಬೆಳವಣಿಗೆಗಳಿಂದಾಗಿ ದಕ್ಷಿಣ ಏಷ್ಯಾದಲ್ಲಿ ಇಸ್ಲಾಮೀ ಉಗ್ರಗಾಮಿತ್ವ ಬೆಳೆಯುವ ಅಪಾಯ ಎದುರಾಗಿದ್ದು, ಬಿಜೆಪಿ ಸರ್ಕಾರದ ಹಿಂದುತ್ವ ನೀತಿಗಳಿಂದಾಗಿ  ನಮ್ಮ ದೇಶವೂ ಈ ಪ್ರಭಾವಗಳಿಗೆ ಒಳಗಾಗಿ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯಿದೆ.

ಆಫ್ಘಾನಿಸ್ತಾನದಿಂದ ಅಮೆರಿಕದ ಅವಮಾನಕರ ನಿರ್ಗಮನ, ಆಫ್ಘನ್ ರಾಷ್ಟ್ರೀಯ ಸೇನೆಯ ಪತನ, ಅಧ್ಯಕ್ಷ ಅಶ್ರಫ್ ಘನಿ ಪಲಾಯನ ಮತ್ತು ತಾಲಿಬಾನ್‌ನಿಂದ ಕ್ಷಿಪ್ರ ಗ್ರಹಣ- ಈ ಎಲ್ಲವೂ ಬೆರಗುಗೊಳಿಸುವ ಬೆಳವಣಿಗೆಗಳಾಗಿವೆ.

ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತದರ ನಾಟೋ ಮಿತ್ರರು ಆಫ್ಘಾನಿಸ್ತಾನದ ಅತಿಕ್ರಮಣ ಮಾಡಿ ತಾಲಿಬಾನ್ ಆಡಳಿತವನ್ನು ಪದಚ್ಯುತಗೊಳಿಸಿದ 20 ವರ್ಷಗಳ ನಂತರ, ಕಾಬೂಲ್‌ನಲ್ಲಿ ತಾಲಿಬಾನ್ ಮತ್ತೆ ಅಧಿಕಾರಕ್ಕೆ ಬಂದಿದೆ. ಈ ಎರಡು ದಶಕಗಳಲ್ಲಿ ಅಮೆರಿಕ ಎರಡು ಟ್ರಿಲಿಯ ಡಾಲರ್‌ಗಿಂತಲೂ ಹೆಚ್ಚು ಹಣ ವೆಚ್ಚ ಮಾಡಿದೆ. ಅತಿಕ್ರಮಣದ ಉಚ್ಛಾರ್ಯ ಅವಧಿಯಲ್ಲಿ ಆಫ್ಘಾನಿಸ್ತಾನದಲ್ಲಿ 1,30,000 ನಾಟೋ ಸೈನಿಕರು ಇದ್ದರು. ರಾಷ್ಟ್ರೀಯ ಸೇನೆಯನ್ನು ಕಟ್ಟಲು 88 ಬಿಲಿಯ ಡಾಲರ್ ವ್ಯಯಿಸಲಾಗಿತ್ತು. ಇದರಲ್ಲಿ ಬ್ರಿಟನ್ ಮತ್ತು ಇತರ ನಾಟೋ ಮಿತ್ರ ದೇಶಗಳು ಖರ್ಚು ಮಾಡಿದ ಬಿಲಿಯಾಂತರ ಡಾಲರ್‌ಗಳು ಸೇರಿಲ್ಲ.

ಮರೆ ಮಾಚುವ ಸಂಕಥನ

ಅಮೆರಿಕ ಮತ್ತು ಪಾಶ್ಚಿಮಾತ್ಯ ದೇಶಗಳು ಕಳೆದ 20 ವರ್ಷಗಳಲ್ಲಿ ಆಫ್ಘಾನಿಸ್ತಾನದಲ್ಲಿ “ಪ್ರಜಾಸತ್ತಾತ್ಮಕ’’ ಪ್ರಭುತ್ವವೊಂದನ್ನು ಸೃಷ್ಟಿಸಿವೆ ಎಂದು ಹೇಳಲಾಗುತ್ತದೆ. ಆದರೆ ಈ ಸಂಕಥನದಲ್ಲಿ ಅಮೆರಿಕ ಮತ್ತದರ ಮಿತ್ರರ ವೈಮಾನಿಕ ಬಾಂಬ್ ದಾಳಿಗಳಲ್ಲಿ ಸಾವಿರಾರು  ಜನರು ಮೃತಪಟಿರುವುದನ್ನು ಯಾರೂ ಹೇಳುವುದಿಲ್ಲ. ಅಂತಃಕಲಹದ ವೇಳೆ ಮೃತಪಟ್ಟ ನಾಗರಿಕರಲ್ಲಿ ಶೇಕಡ 40ರಷ್ಟು ಮಂದಿ ಇಂಥ ವೈಮಾನಿಕ ಬಾಂಬ್ ದಾಳಿಗಳಿಗೆ ಬಲಿಯಾದವರು ಎನ್ನುವುದು ಗಮನಾರ್ಹ. ಅಶ್ರಫ್ ಘನಿ ಸರ್ಕಾರಕ್ಕೆ ಹೇಳಿಕೊಳ್ಳಬಹುದಾದ ಜನರ ಬೆಂಬಲವೇನೂ ಇರಲಿಲ್ಲ; ಅದು ಭ್ರಷ್ಟಾಚಾರದಲ್ಲಿ ಮುಳುಗಿತ್ತು; ಅದು ಸೇನೆಯ ಮೇಲೂ ದುಷ್ಪರಿಣಾಮ ಬೀರಿತ್ತು ಎಂಬ ವಿಚಾರವನ್ನು ಬಹುತೇಕ ಮಾಧ್ಯಮಗಳ ಸಂಕಥನಗಳು ಉದ್ದೇಶಪೂರ್ವಕವಾಗಿಯೇ ಅಡಗಿಸಿಟ್ಟಿವೆ.

2001 ಸೆಪ್ಟೆಂಬರ್ 11ರ ದಾಳಿಯ ನಂತರ ಅಮೆರಿಕ ಅಧ್ಯಕ್ಷ ಜಾರ್ಜ್ ಬುಷ್ ಮಾಡಿದ್ದ “ಭಯೋತ್ಪಾದನೆಯ ಮೇಲಿನ ಸಮರ’ (ವಾರ್ ಆನ್ ಟೆರರ್) ಘೋಷಣೆಯ ಹಿಂದೆ ಇದ್ದುದು  ಸಂದೇಹಾಸ್ಪದ ಪೂರ್ವಾಪರಗಳು. ಯಾವ ತಾಲಿಬಾನ್ ಆಡಳಿತ ಮತ್ತು ಒಸಾಮಾ ಬಿನ್ ಲಾಡೆನ್ ಮೇಲೆ ಆಫ್ಘಾನಿಸ್ತಾನದಲ್ಲಿ ಅಮೆರಿಕ ಗುರಿಯಿಟ್ಟಿತ್ತೋ,  ಅವರೆಲ್ಲರೂ 1980ರ ದಶಕದಲ್ಲಿ ಆಫ್ಘಾನಿಸ್ತಾನದಲ್ಲಿ ಸೋವಿಯತ್ ಒಕ್ಕೂಟದ ಹಾಜರಿಯ ವಿರುದ್ಧ ಮುಜಾಹಿದೀನ್‌ಗಳು ಆರಂಭಿಸಿದ್ದ ಜಿಹಾದ್‌ನ ಉತ್ಪನ್ನಗಳು ಎಂಬುದನ್ನು ಮರೆಯುವಂತಿಲ್ಲ. ಜಿಹಾದ್‌ನಲ್ಲಿ ಹಿಂಡುಹಿಂಡಾಗಿ ಸೇರಿಕೊಂಡ ಒಸಾಮಾ ಬಿನ್ ಲಾಡೆನ್ ಮತ್ತು ವಿವಿಧ ಇಸ್ಲಾಮಿ ಉಗ್ರಗಾಮಿ ಶಕ್ತಿಗಳಿಗೆ ಸಿಐಎ ಆರ್ಥಿಕ ನೆರವು ಒದಗಿಸಿತ್ತು. ಪಾಕಿಸ್ತಾನದ ಐಎಸ್‌ಐ ಮೂಲಕ ಶಸ್ತ್ರಾಸ್ತ್ರ ಪೂರೈಸಲಾಗಿತ್ತು. ಇವೆಲ್ಲವೂ ಅಲ್ ಖೈದಾ ಆಗಿ ಪರಿವರ್ತನೆ ಹೊಂದಿದವು. ತಾಲಿಬಾನ್, ಆಫ್ಘಾನಿಸ್ತಾನದ ಮುಜಾಹಿದಿನ್ ಶಕ್ತಿಗಳ, ಅದರಲ್ಲೂ ಮುಖ್ಯವಾಗಿ ಪಶ್ತೂನ್ ರಾಷ್ಟ್ರೀಯತೆಯ, ಸಂತಾನವಾಗಿದೆ.

ಸಾಮ್ರಾಜ್ಯಶಾಹಿ ಆಕ್ರಮಣ ಮತ್ತು ಭಯೋತ್ಪಾದನೆ ನಂಟು

ಅಂದಿನ ಅಧ್ಯಕ್ಷ ಜಾರ್ಜ್ ಬುಷ್ ಮತ್ತವರ ನವಉದಾರವಾದಿ ಸಲಹೆಗಾರರ “ಭಯೋತ್ಪಾದನೆ ಮೇಲಿನ ಯುದ್ಧ’ವು ಬಹಳ ಬೇಗನೆ ಅಮೆರಿಕ ಸಾಮ್ರಾಜ್ಯಶಾಹಿಯ ಪ್ರಾಬಲ್ಯವನ್ನು ಮುಂದುವರಿಸುವುದಕ್ಕೆ ಆಕ್ರಮಣದ ಒಂದು ಸಾಧನವಾಗಿ ಪರಿಣಮಿಸಿತು. ಆಫ್ಘಾನಿಸ್ತಾನದ ನಂತರ ಅದರ ಮುಂದಿನ ಗುರಿ 2003ರ ಮಾರ್ಚ್ನಲ್ಲಿ ಇರಾಕ್ ಆಗಿತ್ತು. ಅತ್ಯಂತ ಮೋಸದ ಆಕ್ರಮಣಕ್ಕೂ ಅಮೆರಿಕ ಒಂದು ಕುಯುಕ್ತಿಯ ನೆಪ ಮುಂದೆ ಮಾಡಿತ್ತು. ಅಲ್ ಖೈದಾ ಜೊತೆ ಸದ್ದಾಂ ಹುಸೇನ್ ಸಂಬಂಧ ಹೊಂದಿದ್ದಾರೆ ಎಂಬ ಆರೋಪವನ್ನು ಹೊರಿಸಿತ್ತು. ವಾಸ್ತವವಾಗಿ, ಆ ಹೊತ್ತಿನಲ್ಲಿ , ಸದ್ದಾಂ ಹುಸೇನ್ ಜಾತ್ಯತೀತ ಸರ್ಕಾರ ನಡೆಸುತ್ತಿರುವುದರಿಂದಾಗಿ  ಒಬ್ಬ `ನಾಸ್ತಿಕ’ ಎಂದು  ಒಸಾಮಾ ಬಿನ್ ಲಾಡೆನ್ ಖಂಡಿಸುತ್ತಿದ್ದ. ಭಯೋತ್ಪಾದನೆ ವಿರುದ್ಧದ ಸಮರ ಲಿಬ್ಯಾ ಮತ್ತು ಸಿರಿಯಾಕ್ಕೆ ವಿಸ್ತರಣೆಗೊಂಡು ವಿನಾಶದ ಅಟ್ಟಹಾಸ ಮುಂದುವರಿಯಿತು.

ಎಲ್ಲೆಲ್ಲಿ ಸಾಮ್ರಾಜ್ಯಶಾಹಿ ಆಕ್ರಮಣ ಮತ್ತು ಅತಿಕ್ರಮಣ ಇರುತ್ತದೋ ಅಲ್ಲೆಲ್ಲ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗಳ ಸಂತಾನ ಹುಟ್ಟುತ್ತವೆ ಎನ್ನುವುದು ಯಾರೂ ನಿರಾಕರಿಸಲಾಗದ ವಾಸ್ತವ. ಇರಾಕ್ ಮತ್ತು ಸಿರಿಯಾದಲ್ಲಿ ಅಲ್ ಖೈದಾ ಮಾತ್ರವಲ್ಲದೆ ಅದಕ್ಕಿಂತಲೂ ಭೀಕರವಾದ ಇಸ್ಲಾಮಿಕ್ ಸ್ಟೇಟ್ ಸಂಘಟನೆ (ಐಎಸ್‌ಐಎಸ್-ಐಸಿಸ್) ಹುಟ್ಟಿಕೊಂಡಿತು. ಲಿಬ್ಯಾದ ವಿನಾಶದ ನಂತರ ಅನೇಕ ಮುಸ್ಲಿಂ ಉಗ್ರವಾದಿ ಸಂಘಟನೆಗಳು ತಲೆಯೆತ್ತಿದವು. ಅವುಗಳು ನಂತರ ವಾಯವ್ಯ ಆಫ್ರಿಕಾಕ್ಕೆ ತಮ್ಮ ಪ್ರಭಾವವನ್ನು ವಿಸ್ತರಿಸಿದವು. ಸಾಮ್ರಾಜ್ಯಶಾಹಿ ಆಕ್ರಮಣ ಮತ್ತು ಭಯೋತ್ಪಾದನೆ ಜೊತೆ ಜೊತೆಯಲ್ಲೇ ಸಾಗಿದವು.

US in Afghanistan
ಮಿಷನ್….. ….ಕೈಗೂಡಿತು – ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಮ್ಸ್ ಆಫ್ ಇಂಡಿಯಾ

ಭವಿಷ್ಯ ಅಸ್ಪಷ್ಟ ಹಾಗೂ ಅನಿಶ್ಚಿತ

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡಿರುವುದು ತುಂಬಾ ಕಳವಳಕಾರಿ ವಿದ್ಯಮಾನ. ತಾಲಿಬಾನ್‌ನ ಪ್ರತಿಗಾಮಿ ಮೂಲಭೂತವಾದಿ ಧೋರಣೆಯೇ ಈ ಕಳವಳಕ್ಕೆ ಕಾರಣ. ತಾಲಿಬಾನ್ ಆಡಳಿತಕ್ಕೆ ಮರಳಿರುವುದರಿಂದ ಆಫ್ಘಾನಿಸ್ತಾನದ ಭವಿಷ್ಯ ಅಸ್ಪಷ್ಟ ಹಾಗೂ ಅನಿಶ್ಚಿತವಾಗಿದೆ. ಜನಾಂಗೀಯ ವೈವಿಧ್ಯತೆ, ಮಹಿಳೆಯರ ಹಕ್ಕುಗಳು ಮತ್ತು ಅಲ್ಪಸಂಖ್ಯಾತರನ್ನು ಅದು ಹೇಗೆ ನಿರ್ವಹಿಸುತ್ತದೆ ಎನ್ನುವುದರ ಮೇಲೆ ಎಲ್ಲವೂ ಅವಲಂಬಿಸಿರುತ್ತದೆ. ಹಿಂದಿನ ತಾಲಿಬಾನ್ ಆಡಳಿತ ಈ ಮೂರೂ ವಿಷಯಗಳಲ್ಲಿ ಬರ್ಬರ ಹಾಗೂ ಪ್ರತಿಗಾಮಿ ಧೋರಣೆ ಹೊಂದಿತ್ತು. ಇಸ್ಲಾಮಿಕ್ ಸ್ಟೇಟ್ (ಐಎಸ್) ಮತ್ತು ಅಲ್ ಖೈದಾದಂಥ ಭಯೋತ್ಪಾದಕ ಸಂಘಟನೆಗಳಿಗೆ ಆಫ್ಘಾನಿಸ್ತಾನ ನೆಲದಲ್ಲಿ ಆಶ್ರಯ ನೀಡಬಾರದು ಎಂಬ ವಿಚಾರದಲ್ಲಿ ಆಗಸ್ಟ್ 16ರಂದು ಈ ಕುರಿತು  ನಡೆದ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಒಮ್ಮತಾಭಿಪ್ರಾಯ ಮೂಡಿದೆ. ಇದು ಭಾರತಕ್ಕೆ ಮಹತ್ವದ ಕಾಳಜಿಯ ವಿಷಯವಾಗಿದೆ. ಆಫ್ಘಾನಿಸ್ತಾನದಲ್ಲಿ ಭಾರತೀಯ ಯೋಜನೆಗಳ ವಿರುದ್ಧ ತಾಲಿಬಾನ್‌ನ ಸಿರಾಜುದ್ದಿನ್ ಹಕ್ಕಾನಿ ಬಣ ದಾಳಿ ನಡೆಸಿದ್ದನ್ನು ನೆನಪಿಸಿಕೊಳ್ಳಬಹುದು.

ಸಾಮರಿಕ ಸ್ವಾಯತ್ತತೆಗೆ ಧಕ್ಕೆ

ಆಫ್ಘಾನಿಸ್ತಾನದಲ್ಲಿ ಅಮೆರಿಕದ ಪರಾಭವದಲ್ಲಿ ಭಾರತಕ್ಕೂ ಪಾಠಗಳಿವೆ. 2001ರಿಂದಲೂ ಆಗಿನ ವಾಜಪೇಯಿ ಸರ್ಕಾರ, ಆಫ್ಘಾನಿಸ್ತಾನದ ಮೇಲೆ ಅಮೆರಿಕದ ಅತಿಕ್ರಮಣಕ್ಕೆ ಸಂಪೂರ್ಣ ಬೆಂಬಲ ಘೋಷಿಸಿತ್ತು. ಆದರೆ, ಆಗ ಮಿಲಿಟರಿ ಸಾಗಾಟ ಸೌಲಭ್ಯವನ್ನು ಒದಗಿಸಲು ಭಾರತ ಮುಂದೆ ಬಂದರೂ ಅದನ್ನು ಅಮೆರಿಕ ನಿರಾಕರಿಸಿ, ಪಾಕಿಸ್ತಾನವನ್ನು ಅವಲಂಬಿಸಿದ್ದು ವಾಜಪೇಯಿ ಸರಕಾರಕ್ಕೆ ನಿರಾಸೆ ಉಂಟು ಮಾಡಿತ್ತು. ಇವುಗಳಿಂದ ಅಮೆರಿಕಾದ ಸಾಲಿನಲ್ಲಿ ನಿಂತುದರಿಂದ  ಭಾರತ ಈಗ ಒಂದು ಸಾಮರಿಕ ಮಿತ್ರನಾಗಿ ಬಿಟ್ಟಿದೆ.

ಮೋದಿ ಸರ್ಕಾರ ಅಮೆರಿಕದೊಂದಿಗೆ ಸರಣಿ ಮಿಲಿಟರಿ ಒಪ್ಪಂದಗಳಿಗೆ ಸಹಿ ಹಾಕಿದ್ದು ಅದರೊಂದಿಗಿನ ಮೈತ್ರಿಗೆ ಮಿಲಿಟರಿ ಸ್ವರೂಪವನ್ನು ಕೊಟ್ಟಿದೆ. ಚತುಷ್ಪಕ್ಷ ಮೈತ್ರಿಕೂಟ (ಕ್ವಾಡ್ರಿಲೇಟರಲ್ ಅಲಯನ್ಸ್-ಕ್ವಾಡ್) ಈ ವಿಚಾರದಲ್ಲಿನ ಅಂತಿಮ ಹೆಜ್ಜೆಯಾಗಿದೆ. ಅಮೆರಿಕದೊಂದಿಗಿನ ಸಾಮರಿಕ ಸಂಬಂಧಗಳು ಭಾರತದ ಸಾಮರಿಕ ಸ್ವಾಯತ್ತತೆಗೆ ಪರಿಣಾಮಕಾರಿ ರೀತಿಯಲ್ಲಿ ತಡೆಯೊಡ್ಡಿದೆ ಹಾಗೂ ದೇಶದ ಸ್ವತಂತ್ರ ವಿದೇಶಾಂಗ ನೀತಿಗೆ ಭಂಗ ಬಂದಿದೆ.

ಪಶ್ಚಿಮ ಏಷ್ಯಾದಲ್ಲಿ ತನ್ನ ಯಜಮಾನಿಕೆಯನ್ನು ಬಲಪಡಿಸಲು ‘ಭಯೋತ್ಪಾದನೆ ಮೇಲೆ ಸಮರ’ವನ್ನು ಸಾರಿದರೆ, ಚೀನಾವನ್ನು ತಡೆಹಿಡಿದು ಏಕಾಂಗಿಯಾಗಿಸುವುದು ಕ್ವಾಡ್ ಗುರಿಯಾಗಿದೆ.

ಪೂರ್ವದ ವಿಚಾರದಲ್ಲಿ ಅಮೆರಿಕದೊಂದಿಗೆ ಒಮ್ಮತಾಭಿಪ್ರಾಯವಿದ್ದರೂ ಪಶ್ಚಿಮದ ವಿಚಾರದಲ್ಲಿ, ಅದರಲ್ಲೂ ಮುಖ್ಯವಾಗಿ ಆಫ್ಘಾನಿಸ್ತಾನ ಬಗ್ಗೆ ಭಿನ್ನಮತವಿದೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಕಳೆದ ವಾರ ಹೇಳಿದ್ದರು. ಆಫ್ಘಾನಿಸ್ತಾನದಿಂದ ಅಮೆರಿಕ ಅಕಾಲಿಕವಾಗಿ ತೊರೆದದ್ದಕ್ಕೆ ನಿರಾಶೆ ವ್ಯಕ್ತಪಡಿಸುವಾಗಲೇ ಕ್ವಾಡ್‌ಗೆ ಆತುಕೊಂಡಿರುವುದು ಸರ್ಕಾರದ ಇಚ್ಛೆಯಾಗಿದೆ ಎಂಬುದು ಇದರ ಅರ್ಥವಾಗುತ್ತದೆ.

ಭಾರತದ ಮೇಲೆ ದುಪ್ಪರಿಣಾಮ

ಆಫ್ಘಾನಿಸ್ತಾನ ನೀತಿಯಲ್ಲೇ ನೋಡಿದಂತೆ, ಅಮೆರಿಕದೊಂದಿಗಿನ ಬಾಂಧವ್ಯಕ್ಕೆ ಆದ್ಯತೆ ನೀಡುವ ಭಾರತದ ನೀತಿಯಿಂದಾಗಿ ಈ ವಲಯದಲ್ಲಿ ಭಾರತ ಒಬ್ಬಂಟಿಯಾಗಿ ಬಿಟ್ಟಿದೆ. 1996 ಮತ್ತು 2001ರ ನಡುವೆ ತಾಲಿಬಾನ್ ಅಧಿಕಾರದಲ್ಲಿದ್ದಾಗ, ಉತ್ತರದ ಮೈತ್ರಿಕೂಟಕ್ಕೆ (ನಾಟೋ) ಬೆಂಬಲ ನೀಡುವಲ್ಲಿ ಭಾರತದೊಂದಿಗೆ ಕೈ ಜೋಡಿಸಿದ್ದ ರಷ್ಯಾ ಮತ್ತು ಇರಾನ್ ಈಗ ತಾಲಿಬಾನ್‌ನೊಂದಿಗೆ ಸಂಬಂಧ ಏರ್ಪಡಿಸಿಕೊಂಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ. ತಾಲಿಬಾನ್ ಇನ್ನೂ ಸಂಪೂರ್ಣ ನಿಯಂತ್ರಣ ಸಾಧಿಸುವುದಕ್ಕೂ ಮುಂಚೆಯೇ ಈ ಎರಡು ದೇಶಗಳು ಹಾಗೂ ಚೀನಾ ತಾಲಿಬಾನ್‌ನೊಂದಿಗೆ ಮಾತುಕತೆ ನಡೆಸಿದ್ದವು. ಪ್ರಸಕ್ತ ಮೋದಿ ಸರ್ಕಾರದ ಸಂಕುಚಿತ ಪಾಕಿಸ್ತಾನ-ವಿರೋಧಿ ಹಾಗೂ ಚೀನಾ-ವಿರೋಧಿ ನೀತಿಯಿಂದಾಗಿ ಭಾರತವು ದಕ್ಷಿಣ ಏಷ್ಯಾದ ಎಲ್ಲ ನೆರೆಹೊರೆ ದೇಶಗಳಿಂದ ಪ್ರತ್ಯೇಕಗೊಳ್ಳುವಂತೆ ಆಗಿದೆ. ಮೋದಿ ಸರ್ಕಾರ ತನ್ನ ವಿದೇಶಾಂಗ ನೀತಿ ಮತ್ತು ವ್ಯೂಹಾತ್ಮಕ ಧೋರಣೆಯನ್ನು ಸರಿಪಡಿಸಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಅದು ಹೆಚ್ಚು ವೈರತ್ವದ ಪ್ರಾದೇಶಿಕ ಸನ್ನಿವೇಶದಲ್ಲಿ ಕಾರ್ಯ ನಿರ್ವಹಿಸಬೇಕಾಗುತ್ತದೆ.

ಆಫ್ಘಾನಿಸ್ತಾನದ ಬೆಳವಣಿಗೆಗಳಿಂದಾಗಿ ದಕ್ಷಿಣ ಏಷ್ಯಾದಲ್ಲಿ ಇಸ್ಲಾಮೀ ಉಗ್ರಗಾಮಿತ್ವ ಬೆಳೆಯುವ ಅಪಾಯ ಎದುರಾಗಿದೆ. ಬಿಜೆಪಿ ಸರ್ಕಾರದ ಹಿಂದುತ್ವ ನೀತಿಗಳಿಂದಾಗಿ ನಮ್ಮ ದೇಶವೂ ಈ ಪ್ರಭಾವಗಳಿಗೆ ಒಳಗಾಗಿ ಸಂಕಷ್ಟಕ್ಕೆ ಗುರಿಯಾಗುವ ಸಾಧ್ಯತೆಯಿದೆ. ಅಲ್ಪಸಂಖ್ಯಾತರನ್ನು ಪೀಡಿಸುವುದು ಇಂಥದ್ದಕ್ಕೆ ಫಲವತ್ತಾದ ಮೈದಾನ ಒದಗಿಸಲಿದೆ. ದೃಢವಾದ ಜಾತ್ಯತೀತ ನೀತಿಗಳನ್ನು ಅನುಸರಿಸುವುದರಿಂದ ಮಾತ್ರವೇ ಇಂಥ ಪ್ರವೃತ್ತಿಯನ್ನು ಎದುರಿಸ ಬಹುದಾಗಿದೆ.

ತಕ್ಷಣಕ್ಕೆ, ಭಾರತ ಸರ್ಕಾರ ನಮ್ಮ ದೇಶದೊಂದಿಗೆ ನಿಕಟ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಸಂಬಂಧಗಳನ್ನು ಹೊಂದಿರುವ ಆಫ್ಘನ್ ಜನರ ತುರ್ತು ಪ್ರಶ್ನೆಗಳಿಗೆ ಸ್ಪಂದಿಸಬೇಕು. ನಿರಾಶ್ರಿತರ ನೆಲೆಯಲ್ಲಿ ಆಶ್ರಯ ಕೋರುವವರು ಆಗಮಿಸಲು ಭಾರತ ವ್ಯವಸ್ಥೆ ಮಾಡಬೇಕು. ಭಾರತದ ನಾನಾ ಭಾಗಗಳಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಧ್ಯಯನ ಮಾಡುತ್ತಿರುವ ನೂರಾರು ಆಫ್ಘನ್ ವಿದ್ಯಾರ್ಥಿಗಳ ವೀಸಾವನ್ನು ನವೀಕರಿಸಬೇಕು ಅಥವಾ ವಿಸ್ತರಿಸಬೇಕು. ಅಗತ್ಯವಿರುವವರಿಗೆ ಸ್ಕಾಲರ್‌ಶಿಪ್ ಮತ್ತು ಅನುದಾನಗಳ ಮೂಲಕ ಆರ್ಥಿಕ ನೆರವನ್ನು ಒದಗಿಸಬೇಕು.

ಆಫ್ಘಾನಿಸ್ತಾನ ಕುರಿತ ನಮ್ಮ ಹೊಸ ನೀತಿ ಆಫ್ಘನ್ ಜನರ ಹಿತ ಮತ್ತು ಕಲ್ಯಾಣ ಕೇಂದ್ರಿತ ಆಗಿರಬೇಕೇ ಹೊರತು ಭೌಗೋಳಿಕ-ರಾಜಕೀಯ ಅಧಿಕಾರದ ಆಟದಿಂದ ಪ್ರೇರಿತವಾಗಿರಬಾರದು.

ಅನು: ವಿಶ್ವ

Leave a Reply

Your email address will not be published. Required fields are marked *