ಕೊರೊನಾ ಮತ್ತು ಪಿತೂರಿ: ಎರಡು ವೈರಸುಗಳ ಜಂಟಿ ದಾಳಿ

ಸುರೇಶ ಕೂಡೂರು

ಭಾವಾನುವಾದ : ವಸಂತರಾಜ ಎನ್.ಕೆ.

  • ಈ ಪಿತೂರಿ ಸಿದ್ಧಾಂತವನ್ನು ಸುಳ್ಳು ಮಾಹಿತಿಗಳು, ಸುಳ್ಳು ಸುದ್ದಿಗಳು, ಸುಳ್ಳು ಕತೆಗಳು, ಕೃತಕವಾಗಿ ಸೃಷ್ಟಿಸಿದ ದತ್ತಾಂಶಗಳು, ಕಾಲ್ಪನಿಕ ಮೂಲಗಳನ್ನೆಲ್ಲಾ ಬಳಸಿ ಕುಶಲತೆಯಿಂದ ಹೆಣೆದು ಕಟ್ಟಲಾಗಿದೆ ಎಂಬುದು ಸ್ಪಷ್ಟ. ಇಂತಹ ಪಿತೂರಿ ಕತೆಗಳು ಬರಿಯ ಭೋಳೆತನದಿಂದ ಹುಟ್ಟಿದವೇನಲ್ಲ. ಇವು ಉಗ್ರ ಬಲಪಂಥೀಯ ಪ್ರಚಾರ ಉತ್ಪಾದನಾ ಫ್ಯಾಕ್ಟರಿಗಳಲ್ಲಿ ಸೃಷ್ಟಿಯಾದವು. ಅವಕ್ಕೆ ಸ್ಪಷ್ಟವಾದ ಅಜೆಂಡಾ ಮತ್ತು ಗುರಿಗಳಿವೆ.
  • ಅಮೆರಿಕದ ಟ್ರಂಪ್ ಆಡಳಿತ ಮತ್ತು ಆಳುವ ರಿಪಬ್ಲಿಕನ್ ಪಕ್ಷಕ್ಕೆ, ಆಳುವ ವಲಯಗಳಿಗೆ, ಪ್ರತಿಷ್ಟಿತರಿಗೆ, ಯುರೋಪಿನ ಬಂಡವಾಳಶಾಹಿ ಪಕ್ಷ/ಶಕ್ತಿಗಳಿಗೂ, ಜಾಗತಿಕ ನವ-ಉದಾರವಾದಿ ಬಂಡವಾಳಶಾಹಿಗೂ ಮತ್ತು ಅದರ ಬಾಲಬಡುಕ ಬೆಂಬಲಿಗರಿಗೂ ಅವರದೇ ಆದ ಕಾರಣಗಳಿಗೆ ಒಂದು ಬಲಿಪಶು ಬೇಕು. ಇವರೆಲ್ಲರ ಭೀಕರ ಆಮಾನವೀಯ ಮುಖವನ್ನು ಕೊವಿದ್-೧೯ ಹಿಂದೆಂದೂ ಕಾಣದ ರೀತಿಯಲ್ಲಿ ಬಯಲಿಗೆಳೆದಿದೆ.  ಇವರೆಲ್ಲರಿಗೆ ಈ ಚೀನೀ ಪಿತೂರಿ ಸಿದ್ಧಾಂತ ವರದಾನವಾಗಿದೆ. ಆದ್ದರಿಂದ ಇದು ಜಾಗತಿಕವಾಗಿ ಇಷ್ಟು ವ್ಯಾಪಕವಾಗಿ ಹರಡಿದೆ.
  • ಭಾರತದಲ್ಲೂ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುವುದರಲ್ಲಿ ಮೋದಿ ಸರಕಾರ ತೋರಿರುವ ಬೇಜವಾಬ್ದಾರಿ, ನಿರ್ಲಕ್ಷ, ಅದಕ್ಷತೆ, ಅಮಾನವೀಯತೆಗಳನ್ನು ಮುಚ್ಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಸಹ ಈ ಪಿತೂರಿ ಸಿದ್ಧಾಂತ ಬಹಳ ಆಪ್ಯಾಯಮಾನವಾಗಿದೆ.  ಪಾಕಿಸ್ತಾನದ ವಿರುದ್ಧ ದ್ವೇಷ ಪ್ರಚಾರ ಮಾಡಿ ಬೋರಾಗಿರುವ ಸಂಘ ಪರಿವಾರದ ಪ್ರಚಾರ ಉತ್ಪಾದನಾ ಫ್ಯಾಕ್ಟರಿಗಳು, ಚೀನಾ-ದ್ವೇಷ ಹರಡುವ ಈ ಅಮೆರಿಕನ್ ವೈರಸ್ ನ್ನು ತಮ್ಮದೇ ಭಾರತೀಯ ಮಸಾಲೆಗಳೊಂದಿಗೆ ಅತ್ಯುತ್ಸಾಹದಿಂದ ಹರಡುತ್ತಿರುವುದು ಆಶ್ಚರ್ಯವೇನಲ್ಲ.
  • ಈಗ ನಾವು ಎರಡು ಮಾರಣಾಂತಿಕ ವೈರಸುಗಳ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಒಂದು ಎಲ್ಲರಿಗೂ ಗೊತ್ತಿರುವ ಕೊರೊನಾ ವೈರಸ್. ಇನ್ನೊಂದು ಇನ್ನೂ ಹೆಚ್ಚಿನ ವಿಷಕಾರುವ ವಿಕೃತ ಪಿತೂರಿ ವೈರಸ್. ಮೊದಲನೆಯದರ ತಡೆಗೆ ನಾವು ವ್ಯಾಕ್ಸೀನ್, ಪರಿಹಾರಕ್ಕೆ ಔಷಧಿ ಕಂಡುಹಿಡಿಯಬಹುದು. ಆದರೆ ಈ ಎರಡನೆಯ ವೈರಸಿನ ತಡೆ ಅಥವಾ ಪರಿಹಾರ ಸಾಧ್ಯವೇ ಇಲ್ಲವೇನೋ?!.  ಏಕೆಂದರೆ ಅದು ಸತತವಾಗಿ ರೂಪಾಂತರಗೊಳ್ಳುತ್ತಿರುತ್ತದೆ! ಅದರ ಸುಳ್ಳಿನ ಡಿ.ಎನ್.ಎ ಎಂತಹುದೇ ಸತ್ಯದ ವ್ಯಾಕ್ಸೀನ್ ಹಿಡಿತಕ್ಕೆ ಸಿಗದೆ ತಪ್ಪಿಸಿಕೊಳ್ಳುತ್ತಿರುತ್ತದೆ!!

ಪಿತೂರಿ ಸಿದ್ಧಾಂತ

6 Trump VirusAವಿಶ್ವ ಆರೋಗ್ಯ ಸಂಸ್ಥೆ ಈ ಸಾಂಕ್ರಾಮಿಕ ರೋಗವನ್ನು ಕೊವಿದ್೧೯ (COrona VIrus Disease-2019: ಕೊರೊನಾ ವೈರಸ್ ರೋಗ೨೦೧೯) ಎಂದೂ ವೈರಸನ್ನು SARS-Cov-2 (Severe Acute Respiratory Syndrome COrona Virus 2) ಎಂದೂ ಅಧಿಕೃತವಾಗಿ ಕರೆದಿದೆ. ಆದರೆ ಅಮೆರಿಕದ ಅಧ್ಯಕ್ಷ ಟ್ರಂಪ್ (ಇದು ಜನಾಂಗ-ನಿಂದನೆಯ ಧೋರಣೆ ಎಂದು ಅಮೆರಿಕದೊಳಗೆನೇ ಹಲವು ಟೀಕೆಗಳ ನಂತರ ಈಗ ಬಿಟ್ಟಿದ್ದರೂ) ಸೇರಿದಂತೆ ಹಲವರು ಅದನ್ನು ಚೀನಿ ಅಥವಾ  ವೂಹಾನ್ ವೈರಸ್ ಎಂದು ಕರೆಯುತ್ತಿದ್ದಾರೆ. ಇದರೊಂದಿಗೆ ಈ ವೈರಸ್ ನ ಮೂಲದ ಕುರಿತು ಹಲವು ಪಿತೂರಿ ಸಿದ್ಧಾಂತಗಳು ಹುಟ್ಟಿಕೊಂಡು ವೈರಸಿಗಿಂತ ವೇಗವಾಗಿ ಹರಡುತ್ತಿವೆ.

ಇಂತಹ ಪಿತೂರಿ ಸಿದ್ಧಾಂತಗಳಲ್ಲಿ ಒಂದು ಹೀಗಿದೆ: ಜಾಗತಿಕ ಶೇರು ಮಾರುಕಟ್ಟೆಗಳು ಕುಸಿಯುವಂತೆ ಮಾಡಲು ಚೀನಾ ಕೊರೊನಾ ವೈರಸನ್ನು ಪ್ರಯೋಗಶಾಲೆಯಲ್ಲಿ ಕೃತಕವಾಗಿ ತಯಾರಿಸಿ ಸ್ವದೇಶದಲ್ಲೂ ಜಾಗತಿಕವಾಗಿಯೂ ಬೇಕೆಂತಲೇ ಹರಿಯಬಿಟ್ಟಿದೆ. ಇದಕ್ಕೆ ಮೊದಲೇ ಚೀನಾ ವ್ಯಾಕ್ಸೀನ್ ತಯಾರಿಸಿ ಇಟ್ಟುಕೊಂಡಿದೆ. ಅದು ನಿಜವೆಂದು ಎಲ್ಲರನ್ನು ನಂಬಿಸಲು ಚೀನಾದ ವೂಹಾನ್ ನಲ್ಲಿ ಕೆಲವು ವಾರಗಳ ಕಾಲ ಸಾವು-ನೋವು ಉಂಟು ಮಾಡಲು ಬಿಟ್ಟು ಆ ಮೇಲೆ ವ್ಯಾಕ್ಸೀನ್ ಬಳಸಿ ನಿಯಂತ್ರಣಕ್ಕೆ ತಂದಿದೆ. ತಾನು ಎಷ್ಟು ದಕ್ಷ ಎಂದು ತೋರಿಸಲು ಸಹ ಇದನ್ನು ಬಳಸಿದೆ. ಇಂತಹ ಕುಸಿತವಾದಾಗ ಚೀನಾ ಅಮೆರಿಕನ್ ಕಂಪನಿಗಳ ಶೇರುಗಳನ್ನು ಚೀನಾ ಕೊಂಡುಕೊಂಡಿದೆ. ಅಮೆರಿಕ ಮತ್ತು ಯುರೋಪಿನ ಆರ್ಥಿಕಗಳನ್ನು ಹಾಳುಗೆಡವಿ ಜಾಗತಿಕ ಅಧಿಪತ್ಯ ಸಾಧಿಸಲು ಹೊರಟಿದೆ.

ಈ ಪಿತೂರಿ ಸಿದ್ಧಾಂತವು  ಕಳೆದ ವರ್ಷದಿಂದಲೇ ಆಗಾಗ ವಿಕೋಪಕ್ಕೆ ಹೋಗುತ್ತಿರುವ ಅಮೆರಿಕ-ಚೀನಾ ವಾಣಿಜ್ಯ ಸಂಘರ್ಷದ ಹಿನ್ನೆಲೆಯಲ್ಲಿ ಹುಟ್ಟಿದೆ. ಇದು ಅಮೆರಿಕದಲ್ಲಿ ಹುಟ್ಟಿ ಅಲ್ಲಿ ವ್ಯಾಪಕವಾಗಿ ಪ್ರಸಾರಗೊಳ್ಳುತ್ತಿದೆ. ಈಗ ಜಗತ್ತಿಗೆಲ್ಲ ಹರಡುತ್ತಿದೆ. ಇದನ್ನು ಅಮೆರಿಕನ್ ವೈರಸ್ ಎಂದು ಕರೆಯಬಹುದೇನೋ. ಕೊರೊನಾ ವೈರಸ್ ಹಿಂದೆನೇ ಅದು ಭಾರತಕ್ಕೆ ಕಾಲಿಟ್ಟಿದೆ. ಈಗ ಭಾರತ ಈ ಎರಡು – ಚೀನೀ ಮತ್ತು ಅಮೆರಿಕನ್ – ವೈರಸ್ ಗಳ ಜಂಟಿ ದಾಳಿ ಎದುರಿಸಬೇಕಾಗಿದೆ!

ಈಗ ಈ ಪಿತೂರಿ ಸಿದ್ಧಾಂತದ ಒಂದೊಂದೇ ಹೇಳಿಕೆಗಳ ಸತ್ಯಾಸತ್ಯತೆಯನ್ನು ನೋಡುತ್ತಾ ಹೋಗೋಣ.

5 trump jinpingAಇದು ಕೃತಕ ವೈರಸ್ಸೇ?

ಈ ಪಿತೂರಿ ಸಿದ್ಧಾಂತದ ಪ್ರಕಾರ SARS-Cov-2 ಚೀನಾದ ಜೈವಿಕ ಅಸ್ತ್ರಗಳ ಪ್ರಯೋಗಶಾಲೆಯಲ್ಲಿ ಜೆನೆಟಿಕ್ ಇಂಜಿನೀಯರಿಂಗ್ ಮೂಲಕ ಕೃತಕವಾಗಿ ತಯಾರಿಸಲಾದ ವೈರಸ್. ಇದಕ್ಕೆ ಈ ಸಿದ್ಧಾಂತದ ಅನಾಮಿಕ ಪ್ರತಿಪಾದಕರು ಯಾವುದೇ ನೇರ ಪುರಾವೆ ಕೊಟ್ಟಿಲ್ಲ. ಜಗತ್ತಿನಾದ್ಯಂತ ವಿಜ್ಞಾನಿಗಳು ಈ ವೈರಸಿನ ಮೂಲ ಯಾವುದು ಎಂಬುದರ ಸಂಶೋಧನೆಯಲ್ಲಿ ತೊಡಗಿದ್ದಾರೆ, ಈ ಪಿತೂರಿ ಸಿದ್ಧಾಂತದ ಸತ್ಯಾಸತ್ಯತೆ ತಿಳಿದುಕೊಳ್ಳಲು ಅಲ್ಲ.  ಬದಲಾಗಿ ಯಾವುದೇ ವೈರಸಿಗೆ ಪರಿಣಾಮಕಾರಿ ವ್ಯಾಕ್ಸೀನ್ ಅಭಿವೃದ್ಧಿಪಡಿಸಲು ವೈರಸಿನ ಮೂಲ ಹುಡುಕುವುದು ಅಗತ್ಯವಾದ್ದರಿಂದ. ವಿಜ್ಞಾನಿಗಳ ಸಂಶೋಧನೆಯ ಪ್ರಕಾರ ಇದು ನೈಸರ್ಗಿಕವಾಗಿ ವಿಕಾಸಗೊಂಡು ಹಲವು ರೂಪಾಂತರ ಮೂಲಕ ಕಾಡುಪ್ರಾಣಿಗಳಿಂದ ಮಾನವನಿಗೆ ಹರಡಿದ ವೈರಸ್. ಇದು ಪ್ರಯೋಗಶಾಲೆಯಲ್ಲಿ ತಯಾರಿಸಲಾದ ಕೃತಕ ವೈರಸ್ ಅಲ್ಲವೆಂದಿದ್ದಾರೆ. ಇದನ್ನು ಸ್ಪಷ್ಟವಾಗಿ ಮಾರ್ಚ್ ೧೭ ರಲ್ಲಿ ನೇಚರ್ ಮೆಡಿಸಿನ್ ಎಂಬ ಪ್ರತಿಷ್ಟಿತ ವೈಜ್ಞಾನಿಕ ಜರ್ನಲ್ ನಲ್ಲಿ ಪ್ರಕಟವಾದ ವೈಜ್ಞಾನಿಕ ಪ್ರಬಂಧದಲ್ಲಿ ಹೇಳಲಾಗಿದೆ. ಈ ಸಂಶೋಧನೆ ಮಾಡಿದವರು ಚೀನಾದ ವಿಜ್ಞಾನಿಗಳಲ್ಲ! ಅಮೆರಿಕದ ಕ್ಯಾಲಿಫೋರ್ನಿಯದ ಸ್ಕ್ರಿಪ್ಸ್ ರಿಸರ್ಚ್ ಇನ್ಸ್ಟಿಟ್ಯೂಟ್ ನ ಕ್ರಿಶ್ಚಿಯನ್ ಜಿ. ಆಂಡರ್ಸನ್ ಎಂಬ ವಿಜ್ಞಾನಿಯ ನಾಯಕತ್ವದ ಮತ್ತು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯಗಳ ವಿವಿಧ ಸಂಶೋಧನಾ ಸಂಸ್ಥೆಗಳ ಐದು ವಿಜ್ಞಾನಿಗಳ ತಂಡ. ಈ ಪ್ರಬಂಧವನ್ನು ಯಾರು ಬೇಕಾದರೂ ವೆಬ್ ನಿಂದ ಈ ಕೆಳಗಿನ ಕೊಂಡಿಯಲ್ಲಿ ಓದಬಹುದು ಅಥವಾ ಡೌನ್ ಲೋಡ್ ಮಾಡಿಕೊಳ್ಳಬಹುದು.

https://www.nature.com/articles/s41591-020-0820-9

1 SARS Origins paperಇದನ್ನು ಅವರು ಹೇಗೆ ಹೇಳುತ್ತಾರೆ? ಈ ವೈರಸ್ ಹಲವು ವಿಲಕ್ಷಣ ಗುಣಲಕ್ಷಣಗಳನ್ನು ಹೊಂದಿದೆ. ಇದು ಈವರೆಗೆ ಗೊತ್ತಿರುವ ಯಾವುದೇ ವೈರಸಿನ ಜೆನೆಟಿಕ್ ಸಂರಚನೆಯಂತೆ ಇಲ್ಲವೇ ಇಲ್ಲ. ಇವತ್ತಿನ ಜೈವಿಕ ತಂತ್ರಜ್ಞಾನದಲ್ಲಿ ಪರಿಣತಿ ಇರುವುದು, ಜೈವಿಕ ಅಸ್ತ್ರ ಅಥವಾ ಇತರ ಸಂಶೋಧನೆಗಳಲ್ಲಿ ಈಗಾಗಲೇ ಗೊತ್ತಿರುವ ವೈರಸನ್ನು ಆಧಾರವಾಗಿಟ್ಟುಕೊಂಡು ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿ ಉದ್ದೇಶಿತ ಗುಣಲಕ್ಷಣ ಪಡೆಯಲು ಪ್ರಯೋಗಗಳನ್ನು ಮಾಡಲು ಮಾತ್ರ. ಆದ್ದರಿಂದ ಇದು ನೈಸರ್ಗಿಕ ವೈರಸಿನ ಅಥವಾ ವೈರಸುಗಳ ನೈಸರ್ಗಿಕ ರೂಪಾಂತರದಿಂದಷ್ಟೇ ಬಂದಿರಲು ಸಾಧ್ಯ.  ಅರಣ್ಯ ಪ್ರದೇಶಗಳಲ್ಲಿರುವ ಪ್ಯಾಂಗೋಲಿನ್ ಮತ್ತು ಬಾವಲಿಗಳಲ್ಲಿ ಮಾತ್ರ ಇರುವ ವೈರಸಿಗೆ ಇದರ ಕೆಲವು ಸಾಮ್ಯತೆಗಳು ಸಹ ಇದು ನೈಸರ್ಗಿಕ ಮೂಲದ್ದು ಎಂಬುದನ್ನು ದೃಢಪಡಿಸುತ್ತದೆ. ಬಹುಶಃ ಇದು ಈ ವೈರಸುಗಳ ಸಂಯೋಗದಿಂದ ಹುಟ್ಟಿದ ವೈರಸ್. ಆದ್ದರಿಂದ ಇದು ಮಾನವ ನಿರ್ಮಿತ ಕೃತಕ ವೈರಸ್ ಎಂಬುದಕ್ಕೆ ಆಧಾರವಿಲ್ಲ, ಎಂದು ಈ ವಿಜ್ಞಾನಿಗಳ ತಂಡ ಖಚಿತವಾಗಿ ಅಭಿಪ್ರಾಯ ಪಟ್ಟಿದೆ.

ಹೀಗೆ ಈ ಪಿತೂರಿ ಸಿದ್ಧಾಂತದ ಮುಖ್ಯ ಆಧಾರ ಸ್ತಂಭವಾದ ಕೊರೊನಾ ವೈರಸ್ ಚೀನಾ ಸರಕಾರ ಕೃತಕವಾಗಿ ತಯಾರಿಸಿದ್ದು ಎಂಬ ಆಪಾದನೆ ಕುಸಿದು ಬೀಳುತ್ತದೆ. ಅದರ ಜತೆಗೆ ಈ ಸಿದ್ಧಾಂತ ಸಹ. ಆದರೂ ಈ ಸಿದ್ಧಾಂತದ ಇನ್ನೂ ಕೆಲವು ಮುಖ್ಯ ಅಂಶಗಳ ಸತ್ಯಾಸತ್ಯತೆಯನ್ನೂ ಪರಿಶೀಲಿಸೋಣ.

ಅಮೆರಿಕನ್ ಕಂಪನಿಗಳ ಶೇರುಗಳನ್ನು ಚೀನಾ ಖರೀದಿಸಿತೇ ?

ಈ ಸಿದ್ಧಾಂತದ ಪ್ರಕಾರ ಅಮೆರಿಕದ ಕಂಪನಿಗಳ ಶೇರುಗಳನ್ನು ಖರೀದಿಸುವುದು ಈ ಪಿತೂರಿ ಯ ಪ್ರಮುಖ ಉದ್ದೇಶ. ಅಮೆರಿಕದ ಕಂಪನಿಗಳ ಶೇರುಗಳ ಬೆಲೆಯಲ್ಲಿ ಕುಸಿತ ತಂದು ಅವನ್ನು ಖರೀದಿಸುವುದು ಎಂಬುದು ಈ ಸಿದ್ಧಾಂತದ ಇನ್ನೊಂದು ಪ್ರಮುಖ ಅಂಶ. ಇದಕ್ಕೂ ಇದರ ಅನಾಮಿಕ ಸೃಷ್ಟಿಕರ್ತರು ಯಾವುದೇ ಪುರಾವೆ ಒದಗಿಸಿಲ್ಲ ಎಂಬುದು ಅನಿರೀಕ್ಷಿತವೇನಲ್ಲ. ಚೀನಾದ ಹೂಡಿಕೆದಾರರು ಅಮೆರಿಕನ್ ಕಂಪನಿಯ ಶೇರುಗಳನ್ನು ದೊಡ್ಡ ಸಂಖ್ಯೆಯಲ್ಲಿ ಖರೀದಿಸಿದ ಯಾವುದೇ ವರದಿಗಳು ಲಕ್ಷಣಗಳೂ ಇಲ್ಲ.  ಅಮೆರಿಕದ ಕಂಪನಿಗಳ ಶೇರು ಬೆಲೆ ಕುಸಿದದ್ದು ನಿಜ. ಅಮೆರಿಕನ್ ಮಾತ್ರವಲ್ಲ ಚೀನಾ ಸೇರಿದಂತೆ ಪ್ರಮುಖ ಕಂಪನಿಗಳ ಶೇರು ಬೆಲೆಗಳು ಸಹ ಕುಸಿದಿವೆ.  ವಾಸ್ತವವಾಗಿ ಅಮೆರಿಕದ ಕಂಪನಿಗಳ ಶೇರುಗಳ ಖರೀದಿಯೇ ಹೆಚ್ಚು ಕಡಿಮೆ ನಿಂತು ಹೋಗಿದೆ.

ಯಾಕೆಂದರೆ ಜಾಗತಿಕ ಕೊರೊನಾ ವೈರಸ್ ಪರಿಣಾಮವಾಗಿ ಅಮೆರಿಕದ ಮತ್ತು ಜಾಗತಿಕ ಆರ್ಥಿಕ ಚಟುವಟಿಕೆ ವ್ಯಾಪಾರಗಳು ಸ್ತಬ್ಧವಾಗಿದೆ. ಅಮೆರಿಕನ್ ಕಂಪನಿಗಳ ವಹಿವಾಟು ಮತ್ತು ಲಾಭಗಳ ಮೇಲೆ ಇದರ ದೀರ್ಘಕಾಲೀನ ದುಷ್ಪರಿಣಾಮದ  ನಿರೀಕ್ಷೆಯಲ್ಲಿ ಅವುಗಳ ಶೇರುಗಳ ಖರೀದಿ ನಿಂತಿದೆ. ಅಮೆರಿಕದ ಅಧ್ಯಕ್ಷ ಟ್ರಂಪ್ ಕೊರೊನಾ ವೈರಸ್ ಕುರಿತು ತೋರಿದ ನಿರ್ಲಕ್ಷ, ಮತ್ತು ಅದರ ಪರಿಣಾಮವಾಗಿ ನ್ಯೂಯಾರ್ಕ್, ಕ್ಯಾಲಿಫೋರ್ನಿಯ ದಂತಹ ಆರ್ಥಿಕ ವಹಿವಾಟಿನ ಕೇಂದ್ರಗಳಲ್ಲಿ ವ್ಯಾಪಕ ಸಾವು-ನೋವು ಆಗಿದ್ದು ಅಮೆರಿಕದ ಶೇರು ಮಾರುಕಟ್ಟೆ ಕುಸಿಯುವುದಕ್ಕೆ ಮುಖ್ಯ ಕಾರಣವಾಗಿದೆ. ಮಾತ್ರವಲ್ಲ, ಚೀನಾದ ಸುಮಾರು ೧೨೦೦ ಶತಕೋಟಿ ಡಾಲರುಗಳಷ್ಟು ಬೆಲೆಬಾಳುವ ೧೫೦ ಚೀನಿ ಕಂಪನಿಗಳು ಸಹ ಅಮೆರಿಕದ ಶೇರು ಮಾರುಕಟ್ಟೆಗಳಲ್ಲಿ ಇದ್ದು ಅವುಗಳು ಸಹ ಕುಸಿತದ ಪರಿಣಾಮ ಅನುಭವಿಸಿವೆ. ವಾಸ್ತವವಾಗಿ ಅಮೆರಿಕನ್ ಮಾಧ್ಯಮದಲ್ಲಿ ಬರುತ್ತಿರುವ ವರದಿಗಳ ಪ್ರಕಾರ, ಈ ಸಿದ್ಧಾಂತಕ್ಕೆ ಪ್ರತಿಯಾಗಿ, ಅಮೆರಿಕದ ಹೂಡಿಕೆದಾರರು ಚೀನಾದಲ್ಲಿರುವ ಚೀನಾದ ಕಂಪನಿಗಳಲ್ಲಿ ಹೂಡಿಕೆ ಮಾಡಲು ಮುಗಿ ಬೀಳುತ್ತಿದ್ದಾರೆ. ಅಮೆರಿಕನ್ ಸರಕಾರ ಅದನ್ನು ತಡೆಯಲು ಕಾನೂನು ಮತ್ತಿತರ ಕ್ರಮಗಳಿಂದ ಹರಸಾಹಸ ಪಡುತ್ತಿದೆ ಎಂದು ವರದಿಯಾಗಿದೆ. ಚೀನಾ ಕೊರೊನಾ ಬಿಕ್ಕಟ್ಟು ಆರಂಭವಾಗುವುದರ ಮೊದಲೇ ಇಂತಹ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿತ್ತು. ಚೀನಾ ಕಂಪನಿಗಳು ಅಮೆರಿಕದ ಶೇರು ಮಾರುಕಟ್ಟೆಗಳಿಂದ ತೆಗೆದು ಹಾಕುವುದಕ್ಕೆ ಸಹ ತಯಾರಿ ನಡೆದಿದೆ ಎಂದು ವರದಿಯಾಗಿದೆ. ಹೀಗೆ ಈ ಪಿತೂರಿ ಸಾಧಿಸಬೇಕಾಗಿದ್ದ ಮುಖ್ಯ ಉದ್ದೇಶ ಎನ್ನಲಾಗಿದ್ದ ಅಂಶ ಸಹ ಆಧಾರರಹಿತ ಎಂಬುದು ಸಿದ್ಧವಾಗುತ್ತದೆ.

ಈ ʻಪಿತೂರಿʼ ಸಿದ್ಧಾಂತಿಗಳು ಚೀನಾದ ಶೇರು ಮಾರುಕಟ್ಟೆ ಅಷ್ಟೇನು ಕುಸಿತ ಕಂಡಿಲ್ಲ ಎಂಬುದು ಸಹ ತಮ್ಮ ಸಿದ್ಧಾಂತಕ್ಕೆ ಪುರಾವೆ ಎನ್ನುತ್ತಾರೆ. ಚೀನಾದ ಶೇರು ಮಾರುಕಟ್ಟೆಯ ಮುಖ್ಯ ಸೂಚಕವಾದ ಶಾಂಘಾಯ್ ಸಂಯುಕ್ತ ಸೂಚ್ಯಂಕ ಕೊರೊನಾ ಬಿಕ್ಕಟ್ಟು ಶುರುವಾಗುವ ಮೊದಲು ಜನವರಿ ೧೩ರಂದು ೩೧೧೫ ಇದ್ದು, ನಂತರ ಫೆಬ್ರುವರಿ ೩ ರ ಹೊತ್ತಿಗೆ ೨೭೪೬ಕ್ಕೆ ಕುಸಿದಿತ್ತು. ಆದರೆ ಈಗಲೂ ಮಾರ್ಚ್ ಕೊನೆಯ ಹೊತ್ತಿಗೂ ಅದು ಸುಮಾರು ಅದೇ ಮಟ್ಟದಲ್ಲಿದೆ. ಇದಕ್ಕೆ ಕಾರಣ ಚೀನಾ ಸರಕಾರ ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಕ್ರಮಗಳನ್ನು ತೆಗೆದುಕೊಂಡು ಅದನ್ನು ತಡೆಯಲು ಸಾಧ್ಯವಾಗಿದ್ದು ಮತ್ತು ಚೀನಾದ ಆರ್ಥಿಕ ಪುನಶ್ಚೇತನಕ್ಕೆ ಘೋಷಿಸಿದ ೧೭೪ ಶತಕೋಟಿ ಡಾಲರ್ ಆರ್ಥಿಕ ಪ್ಯಾಕೇಜ್. ಚೀನಾದ ಶೇರು ಮಾರುಕಟ್ಟೆ ಕುಸಿತ ಕಂಡಿಲ್ಲ ಎಂಬುದು ನಿಜವಲ್ಲ. ಆದರೆ ಚೀನಾದ ದೃಢ ಕ್ರಮಗಳಿಂದ ಅದು ಪೂರ್ಣವಾಗಿ ಕುಸಿಯದಂತೆ ತಡೆಯುವುದು ಸಾಧ್ಯವಾಗಿದೆ. ಇದು ವಾಸ್ತವ, ಇದು ಪಿತೂರಿಗೆ ಹೇಗೆ ಪುರಾವೆ ಹೇಗಾಗುತ್ತದೆ ಎಂದು ಈ ಅನಾಮಿಕರನ್ನೇ ಕೇಳಬೇಕು!

3 Consp theoryಚೀನಾದ ಬಳಿ ವ್ಯಾಕ್ಸೀನ್ ಇದೆಯೇ?

ಈ ಪಿತೂರಿ ಸಿದ್ಧಾಂತಿಗಳ ಇನ್ನೊಂದು ಅಂಶ ಚೀನಾದ ಬಳಿ ಮೊದಲೇ ವ್ಯಾಕ್ಸೀನ್ ಇದ್ದಿದ್ದರಿಂದ ಅದನ್ನು ಇಷ್ಟು ವೇಗವಾಗಿ ತಡೆಯುವುದು ಸಾಧ್ಯವಾಯಿತು. ಇದಕ್ಕೂ ಅವರು ಯಾವುದೇ ಪುರಾವೆ ನೀಡಿಲ್ಲ. ಕೊರೊನಾ ಬಿಕ್ಕಟ್ಟು ಜಾಗತಿಕ ಪಿಡುಗು ಆದಂದಿನಿಂದ ಚೀನಾ ಸರಕಾರ ವಿಶ್ವ ಆರೋಗ್ಯ ಸಂಸ್ಥೆ ಮುಂತಾದ ಜಾಗತಿಕ ಸಂಘಟನೆಗಳ ಜತೆ ಪೂರ್ಣ ಸಹಕಾರ ಕೊಟ್ಟಿದೆ. ವಿಶ್ವ ಆರೋಗ್ಯ ಸಂಸ್ಥೆಗೂ ಇಂತಹ ವ್ಯಾಕ್ಸೀನ್ ಬಗ್ಗೆ ಯಾವುದೇ ಸುಳಿವಿಲ್ಲ. ಆದರೆ ಚೀನಾ ಪಿತೂರಿ ಸಿದ್ಧಾಂತಿಗಳಿಗೆ ಮಾತ್ರ ಇದರ ಸುದ್ದಿ ಗೊತ್ತಾಗಿದೆ. ಬೇಜಿಂಗ್ ನಲ್ಲಿ ಹೆಚ್ಚಿನ ಸಾವು-ನೋವು ಆಗದಿರುವುದು ಇನ್ನೊಂದು ಪುರಾವೆ ಎನ್ನುತ್ತಾರೆ ಇವರು. ಚೀನಾದಲ್ಲಿ ಈ ಕೊರೊನಾ ಸಾಂಕ್ರಾಮಿಕ ವೂಹಾನ್ ನಲ್ಲಿ ಮೊದಲು ಕಾಣಿಸಿಕೊಂಡಿದ್ದು ಆ ನಗರದಲ್ಲಿ ಮತ್ತು ಹುಬೆ ಪ್ರಾಂತ್ಯದ ಇತರೆಡೆ ಹರಡಿತ್ತು. ಚೀನಾ ಸರಕಾರ ವೂಹಾನ್ ಮತ್ತು ಹುಬೆ ಪ್ರಾಂತ್ಯದಲ್ಲಿ ಕಟ್ಟುನಿಟ್ಟಿನ ಲಾಕ್ ಡೌನ್ ಮತ್ತು ಇತರ ಹಲವು ಕ್ರಮಗಳನ್ನು ಕೈಗೊಂಡದ್ದರಿಂದ ಬೇಜಿಂಗ್ ಸೇರಿದಂತೆ ಚೀನಾದ ಇತರ ಪ್ರದೇಶಗಳಿಗೆ ಹರಡುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ ಎಂಬುದು ವಾಸ್ತವ. ಚೀನಾ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸಿದ ರೀತಿ, ಅದರಲ್ಲೂ ಇಡೀ ದೇಶವನ್ನು ಲಾಕ್ ಡೌನ್ ಮಾಡದೆ ಇದನ್ನು ಸಾಧಿಸಿತು ಎಂದು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚಿಕೊಂಡಿದೆ. ಚೀನಾಕ್ಕೆ ಹತ್ತಿರವಿರುವ ಜಪಾನ್, ದ.ಕೊರಿಯ ಮತ್ತು ಸಿಂಗಾಪುರ್ ಗಳು ಸಹ  ಕೊರೊನಾ ತಮ್ಮ ದೇಶಗಳಲ್ಲಿ ಹರಡದಂತೆ ಸಕಾಲಿಕ ಕ್ರಮಗಳನ್ನು ಕೈಗೊಂಡಿದ್ದರಿಂದ ತೀವ್ರ ಸಾವು-ನೋವುಗಳ ಆಗದಂತೆ ತಡೆಯುವುದು ಸಾಧ್ಯವಾಗಿದೆ. ಹಾಗಾದರೆ ಈ ದೇಶಗಳು ಚೀನಾದ ಪಿತೂರಿಯಲ್ಲಿ ಭಾಗಿಯಾಗಿದ್ದರು ಅಂತ ಈ ಪಿತೂರಿ ಸಿದ್ಧಾಂತಿಗಳು ಹೇಳ್ತಾರಾ? ಚೀನಾದ ಒಟ್ಟು ಸಾವು ನೋವುಗಳು ಕೋಟ್ಯಾಂತರ ಆಗಿವೆ ಎಂಬ ವದಂತಿಗಳನ್ನೂ ಇದೇ ಮೂಲಗಳು ಹರಡುತ್ತಿವೆ. ಇವ್ಯಾವುದಕ್ಕೂ ಯಾವುದೇ ಪುರಾವೆಗಳೆಂದರೆ ಹಲವು ಫೇಕ್ ವೆನ್ ಸೈಟುಗಳ ವರದಿಗಳು. ಅತ್ಯಂತ ಆಧುನಿಕ ಸಂಪರ್ಕ ಸಂವಹನ ಸಾಧನಗಳು ಬೆಳೆದಿರುವ ಮತ್ತು ಪ್ರತಿಯೊಬ್ಬನಿಗೆ ನಿಲುಕುತ್ತಿರುವ ಇಂದಿನ ಜಗತ್ತಿನಲ್ಲಿ ಯಾವುದೇ ಮಾಹಿತಿಯನ್ನು, ಅದು ವ್ಯಾಕ್ಸೀನ್ ಇರಬಹುದು, ಸಾವು-ನೋವುಗಳ ಸಂಖ್ಯೆ ಇರಬಹುದು ಗುಟ್ಟಾಗಿ ಇಡಲು ಬರುವುದಿಲ್ಲ. ಅವಕ್ಕೆ ಪುರಾವೆಗಳಿಲ್ಲದಿದ್ದರೆ ಅವು ಫೇಕ್ ಎಂದೇ ಅರ್ಥ.

2 why chinese virusಈ ಪಿತೂರಿ ಸಿದ್ಧಾಂತ ಯಾತಕ್ಕಾಗಿ?

ಮೇಲೆ ಹೇಳಿದ ವಾಸ್ತವಾಂಶಗಳಿಂದ ಈ ಪಿತೂರಿ ಸಿದ್ಧಾಂತವನ್ನು ಸುಳ್ಳು ಮಾಹಿತಿಗಳು, ಸುಳ್ಳು ಸುದ್ದಿಗಳು, ಸುಳ್ಳು ಕತೆಗಳು, ಕೃತಕವಾಗಿ ಸೃಷ್ಟಿಸಿದ ದತ್ತಾಂಶಗಳು, ಕಾಲ್ಪನಿಕ ಮೂಲಗಳನ್ನೆಲ್ಲಾ ಬಳಸಿ ಕುಶಲತೆಯಿಂದ ಹೆಣೆದು ಕಟ್ಟಲಾಗಿದೆ ಎಂಬುದು ಸ್ಪಷ್ಟ. ಇಂತಹ ಪಿತೂರಿ ಕತೆಗಳು ಬರಿಯ ಭೋಳೆತನದಿಂದ ಹುಟ್ಟಿದವೇನಲ್ಲ. ಇವು ಉಗ್ರ ಬಲಪಂಥೀಯ ಪ್ರಚಾರ ಉತ್ಪಾದನಾ ಫ್ಯಾಕ್ಟರಿಗಳಲ್ಲಿ ಸೃಷ್ಟಿಯಾದವು. ಅವಕ್ಕೆ ಸ್ಪಷ್ಟವಾದ ಅಜೆಂಡಾ ಮತ್ತು ಗುರಿಗಳಿವೆ. ಅಮೆರಿಕದಲ್ಲಿ ಟ್ರಂಪ್ ಆಡಳಿತ ಮತ್ತು ಆಳುವ ರಿಪಬ್ಲಿಕನ್ ಪಕ್ಷಕ್ಕೆ, ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ತಾನು ತೋರಿದ ಬೇಜವಾಬ್ದಾರಿ, ನಿರ್ಲಕ್ಷ, ಅದಕ್ಷತೆ ಗಳನ್ನು ಮುಚ್ಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಒಂದು ಬಲಿಪಶು ಬೇಕು. ಅದಕ್ಕೆ ಜನಾಂಗ-ದ್ವೇಷ ಬಳಸಲು ಹೇಸುವುದಿಲ್ಲ ಎಂಬುದನ್ನು ಅವರು ಪದೇ ಪದೇ ತೋರಿಸಿದ್ದಾರೆ. ಅಮೆರಿಕದ ಆಳುವ ವಲಯಗಳಿಗೆ, ಪ್ರತಿಷ್ಟಿತರಿಗೆ ಅದರ ಸಾಮ್ರಾಜ್ಯಶಾಹಿ ಅಧಿಪತ್ಯದ ಮಗ್ಗುಲಿನ ಮುಳ್ಳಾದ ಚೀನಾದ ವಿರುದ್ಧ ಸತತ ಶೀತ ಸಮರದ ಅಪಪ್ರಚಾರದ ಅನಿವಾರ್ಯ ಅಂಗವಿದು. ಯುರೋಪಿನ ಬಂಡವಾಳಶಾಹಿ ಪಕ್ಷ/ಶಕ್ತಿಗಳಿಗೂ ತಮ್ಮ ಪ್ರಮಾದಗಳನ್ನು ಮುಚ್ಚಿಕೊಳ್ಳಬೇಕು. ಜಾಗತಿಕ ನವ-ಉದಾರವಾದಿ ಬಂಡವಾಳಶಾಹಿಗೂ ಮತ್ತು ಅದರ ಬಾಲಬಡುಕ ಬೆಂಬಲಿಗರಿಗೂ ೧೯೩೦ ಮತ್ತು ೨೦೦೮ ನಂತರದ ಅತ್ಯಂತ ತೀವ್ರವಾದ ಇಂದಿನ ಬಿಕ್ಕಟ್ಟಿಗೆ ಕಾರಣವೆಂದು ತೋರಿಸಬಲ್ಲ ಬಲಿಪಶು ಬೇಕು. ಇವರೆಲ್ಲರ ಭೀಕರ ಆಮಾನವೀಯ ಮುಖವನ್ನು ಕೊವಿದ್-೧೯ ಹಿಂದೆಂದೂ ಕಾಣದ ರೀತಿಯಲ್ಲಿ ಬಯಲಿಗೆಳೆದಿದೆ.  ಇವರೆಲ್ಲರಿಗೆ ಈ ಚೀನೀ ಪಿತೂರಿ ಸಿದ್ಧಾಂತ ವರದಾನವಾಗಿದೆ. ಆದ್ದರಿಂದ ಇದು ಜಾಗತಿಕವಾಗಿ ಇಷ್ಟು ವ್ಯಾಪಕವಾಗಿ ಹರಡಿದೆ.

ಭಾರತದಲ್ಲೂ ಸಹ ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುವುದರಲ್ಲಿ ಮೋದಿ ಸರಕಾರ ತೋರಿರುವ ಬೇಜವಾಬ್ದಾರಿ, ನಿರ್ಲಕ್ಷ, ಅದಕ್ಷತೆ, ಅಮಾನವೀಯತೆ ಗಳನ್ನು ಮುಚ್ಚಿಕೊಂಡು ಜನರ ಗಮನ ಬೇರೆಡೆ ಸೆಳೆಯಲು ಸಹ ಈ ಪಿತೂರಿ ಸಿದ್ಧಾಂತ ಬಹಳ ಆಪ್ಯಾಯಮಾನವಾಗಿದೆ. ಟ್ರಂಪ್-ಮೋದಿ ದೋಸ್ತಿ ಮತ್ತು ಚೀನಾ-ವಿರೋಧಿ ಭಾರತ-ಅಮೆರಿಕ ವ್ಯೂಹದ ಹಿನ್ನೆಲೆಯಲ್ಲಿ ಈ ಅಮೆರಿಕನ್ ವೈರಸ್ ಗೆ ಭಾರತದಲ್ಲಿ ಭಾರೀ ಸ್ವಾಗತ ಸ್ವಾಭಾವಿಕ. ನೆರೆ ಹೊರೆಯವರನ್ನು ದ್ವೇಷಿಸು ಎಂಬ ಏಕಮೇವ ಧ್ಯೇಯವಾಕ್ಯ ಹೊಂದಿರುವ ಮತ್ತು ಪಾಕಿಸ್ತಾನದ ವಿರುದ್ಧ ದ್ವೇಷ ಪ್ರಚಾರ ಮಾಡಿ ಬೋರಾಗಿರುವ ಸಂಘ ಪರಿವಾರದ ಪ್ರಚಾರ ಉತ್ಪಾದನಾ ಫ್ಯಾಕ್ಟರಿಗಳು, ಚೀನಾ-ದ್ವೇಷ ಹರಡುವ ಈ ಅಮೆರಿಕನ್ ವೈರಸ್ ನ್ನು ತಮ್ಮದೇ ಭಾರತೀಯ ಮಸಾಲೆಗಳೊಂದಿಗೆ ಅತ್ಯುತ್ಸಾಹದಿಂದ ಹರಡುತ್ತಿರುವುದು ಆಶ್ಚರ್ಯವೇನಲ್ಲ.

ಚೀನಾ ಎರಡು ವಾರಗಳಲ್ಲಿ ವೂಹಾನ್ ನಲ್ಲಿ ಭಾರೀ ಆಸ್ಪತ್ರೆ ಕಟ್ಟಿದ್ದು ಅಸಾಧ್ಯ.  ಇದು ಮೊದಲೇ ಗೊತ್ತಿದ್ದರಿಂದ ಅವರೇ ವೈರಸ್ ಹುಟ್ಟಿಸಿ ಬಿಟ್ಟದ್ದಕ್ಕೆ ಪುರಾವೆ ಎಂದು ಇವರು ಹಿಗ್ಗಿನಿಂದ ಪ್ರಚಾರ ಮಾಡಿದರು. ಅದೇ ಸಮಯದಲ್ಲಿ ಭಾರತದ ಸೈನ್ಯ ರಾಜಸ್ಥಾನದಲ್ಲಿ ಎರಡೇ ದಿನಗಳಲ್ಲಿ ಕೊರೊನಾ ವಿರುದ್ಧ ಯುದ್ಧಕ್ಕಾಗಿ ಸಂಚಾರಿ ಆಸ್ಪತ್ರೆ ಕಟ್ಟಿದೆ ಎಂಬ ಸುದ್ದಿಯನ್ನು ಸಹ, ಕೆಲವು ದೇಶದ್ರೋಹಿಗಳು ಅದು ಫೇಕ್ ಎಂದು ಸಾಧಿಸಿದ ಮೇಲೂ, ಅಷ್ಟೆ ಹಿಗ್ಗಿನಿಂದ ಹರಡಿದರು!  ಔಷಧಿ, ಬಟ್ಟೆ ಮುಂತಾದ, ಉತ್ಪಾದನೆ-ರಫ್ತುಗಳಲ್ಲಿ ನಾವು ಮುಂದಿರುವ ಉತ್ಪನ್ನಗಳಲ್ಲಿ ಸಹ, ನಮ್ಮ ಪೂರ್ಣ ಸ್ವಾವಲಂಬನೆಯ ಅಭಾವ ಮತ್ತು ಚೀನಾದ ಮೇಲೆ ಕೆಲವು ಕಚ್ಚಾವಸ್ತು ಯಂತ್ರ ಇತ್ಯಾದಿಗಳ ಮೇಲೆ ಅವಲಂಬನೆಯ ನಮ್ಮ ನ್ಯೂನತೆಗಳು ಹಾಗೂ ಕೊರೊನಾ ಬಿಕ್ಕಟ್ಟಿನಿಂದಾಗಿ ಚೀನಾದಲ್ಲಿ ಇವುಗಳ ಉತ್ಪಾದನೆ/ಸಾಗಾಣಿಕೆಗಳಲ್ಲಿ ವ್ಯತ್ಯಯಗಳು ವಾಸ್ತವ. ಈ ವಾಸ್ತವವನ್ನು ತಲೆಕೆಳಗು ಮಾಡಿ, ಚೀನಾ ನಮ್ಮ ಜೀವನಾವಶ್ಯಕ ಔಷಧಿ ಮತ್ತಿತರ ಉತ್ಪಾದನೆಯನ್ನು ಹತ್ತಿಕ್ಕಲು ಪಿತೂರಿ ಹೂಡಿದೆ ಎಂದು ಕನ್ನಡ ಟಿವಿ ವಾಹಿನಿಗಳು ಸೇರಿದಂತೆ ಮುಖ್ಯವಾಹಿನಿ ಮಾಧ್ಯಮಗಳೂ ಚೀನಿ ಪಿತೂರಿ ವೈರಸ್ ಹರಡುವುದರಲ್ಲಿ ತೊಡಗಿವೆ. ಕೊವಿದ್-೧೯ ವಿರುದ್ಧ ಚೀನಾದ ದಿಟ್ಟ ಮತ್ತು ಸಂಘಟಿತ ಸಫಲ ಹೋರಾಟವನ್ನು ನಿರಾಕರಿಸದೆ ಮೋದಿ ಸರಕಾರದ ಅಧ್ವಾನಗಳನ್ನು ಸಮರ್ಥಿಸಿಕೊಳ್ಳುವುದು ಕಷ್ಟ.

ಇಂತಹ ಪಿತೂರಿ ಸಿದ್ಧಾಂತಗಳನ್ನು ಈಗಿನ ಭೀತಿ, ಆತಂಕದ ಸನ್ನಿವೇಶದಲ್ಲಿ ಹೆಚ್ಚೆಚ್ಚು ಜನ ಕಣ್ಣು ಮುಚ್ಚಿ ನಂಬಿ ಬಿಡುತ್ತಾರೆ ಎಂಬುದು ಕಳವಳದ ವಿಷಯ. ಮಾತ್ರವಲ್ಲ ಕೊರೊನಾ ವೈರಸ್ ವಿರುದ್ಧ ವಾಸ್ತವ ಹೋರಾಟವನ್ನು ದಾರಿ ತಪ್ಪಿಸುವಂತಹುದು. ಯಾವುದೇ ಸಮಸ್ಯೆಯ ಬಿಕ್ಕಟ್ಟಿನ ಮೂಲವನ್ನು ವೈಜ್ಞಾನಿಕವಾಗಿ ಶೋಧಿಸದೆ, ಅದು ಈ ಹೋರಾಟದಲ್ಲಿ ತೊಡಗಿರುವ ಎಲ್ಲರಿಗೂ ಅರ್ಥವಾಗದೆ, ಅದರ ವಿರುದ್ಧ ಪರಿಣಾಮಕಾರಿಯಾಗಿ ಹೋರಾಟ ಮಾಡಲಾಗುವುದಿಲ್ಲ. ಆದ್ದರಿಂದ ಕೊರೊನಾ ವೈರಸ್ ಜೊತೆಗೆ ಈ ಪಿತೂರಿ ಸಿದ್ಧಾಂತಗಳ ವೈರಸ್ ವಿರುದ್ಧ ಸಹ ಪ್ರಚಾರಾಂದೋಲನ ಬೇಕಾಗಿದೆ.

Leave a Reply

Your email address will not be published. Required fields are marked *