ದೆಹಲಿ ರೈತ ಹೋರಾಟ ಸ್ವಾತಂತ್ರ್ಯ ನಂತರದ ಅತಿ ದೊಡ್ಡ ಹಾಗೂ ದೀರ್ಘವಾದ ಹೋರಾಟ : ಹನ್ನನ್ ಮೊಲ್ಲಾ

ನಿರೂಪಣೆ: ಟಿ ಯಶವಂತ

ಅಗಸ್ಟ್ 28-30, 2021ರಲ್ಲಿ ನಡೆದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘಟನೆಯ ಕೇಂದ್ರ ಕಾರ್ಯಕಾರಿ ಸಮಿತಿ ಸಭೆಗೆ ಬಂದಿದ್ದ “ಸಂಯುಕ್ತ ಕಿಸಾನ್ ಮೋರ್ಚಾ”ದ ಪ್ರಮುಖ ನಾಯಕರು, ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಗಳಾದ ಹನ್ನನ್ ಮೊಲ್ಲಾ ರವರನ್ನು ದೆಹಲಿ ರೈತ ಹೋರಾಟಕ್ಕೆ ನೇತೃತ್ವ ನೀಡುತ್ತಿರುವ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಯ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರಾಜ್ಯ ರೈತ ಸಂಘಗಳು ಸನ್ಮಾನಿಸಿ ಗೌರವಿಸಿದವು. ಅಭಿನಂದನೆ ಸ್ವೀಕರಿಸಿ ಹನನ್ ಮೊಲ್ಲಾರವರು ರೈತ ಚಳುವಳಿಯ ಹಿನ್ನೆಲೆ ಹಾಗೂ ದೆಹಲಿ ರೈತ ಹೋರಾಟದ ಅನುಭವಗಳ ಕುರಿತು ವಿವರವಾಗಿ ಮಾತಾಡಿದರು. ಅವರ ಭಾಷಣದ ಪೂರ್ಣ ಪಾಠ ಇಲ್ಲಿದೆ…

ಸುಮಾರು 90 ಕೋಟಿಯಷ್ಟು ಬೃಹತ್ ಸಂಖ್ಯೆಯಲ್ಲಿ ಇರುವ ರೈತರಲ್ಲಿ ಶೇಕಡ 80 ರಷ್ಟು ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು, ಭೂ ಹೀನ ರೈತರು, ಸುಮಾರು 25 ಕೋಟಿಯಷ್ಟು ಕೃಷಿ ಕೂಲಿಕಾರರು ಇದ್ದಾರೆ‌. ಒಟ್ಟಾರೆ ಗ್ರಾಮೀಣ ಜನಸಂಖ್ಯೆಯ ಅತಿದೊಡ್ಡ ಸಮುದಾಯವಾಗಿರುವ ಕೃಷಿಕರ ಸ್ಥಿತಿ ಚಿಂತಾಜನಕವಾಗಿದೆ.

ಭಾರತದಲ್ಲಿ ಕೃಷಿ ಎಂಬುದು ಕೇವಲ ಆಹಾರ ಉತ್ಪಾದನೆ ಮಾತ್ರವೇ ಆಗದೇ ತನ್ನದೇ ಆದ ಸಂಸ್ಕೃತಿ, ಆಚರಣೆ ಹಾಗೂ ನಡವಳಿಕೆಗಳ ಪರಂಪರೆಯನ್ನು ಹೊಂದಿದೆ.

ಅತ್ಯಂತ ಮೂಲಭೂತ ಆರ್ಥಿಕ ಚಟುವಟಿಕೆಯಾಗಿರುವ ಕೃಷಿ ಭಾರತದ ಆರ್ಥಿಕತೆಯ ಬೆನ್ನೆಲುಬು. ಹಲವಾರು ಪಂಚವಾರ್ಷಿಕ ಯೋಜನೆಗಳಲ್ಲಿ, ವಿವಿಧ ಕೃಷಿ ನೀತಿಗಳ ಸಂದರ್ಭದಲ್ಲಿ ಸರ್ಕಾರಗಳು ರೈತರಿಗೆ ಉತ್ತಮ ಜೀವನದ ಭರವಸೆಯನ್ನು ನೀಡಿವೆ. ಆದರೂ ಬಹುತೇಕ ರೈತರು ಕಷ್ಟದಲ್ಲಿದ್ದಾರೆ. ಈಗ ಕೃಷಿ ಬಿಕ್ಕಟ್ಟಿನಿಂದ ನರಳುತ್ತಾ ತಮ್ಮ ಸಮಸ್ಯೆಗಳನ್ನು ತಾವೇ ಬಗೆಹರಿಸಿಕೊಳ್ಳಲಾಗದೇ ಆತ್ಮಹತ್ಯೆಗೀಡಾಗುತ್ತಿದ್ದಾರೆ.  ಪ್ರತಿ ದಿನ ಕನಿಷ್ಠ 50 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಸ್ವಾತಂತ್ರ್ಯ ಹೋರಾಟದಲ್ಲಿ ರೈತರು

ವಸಾಹತು ಶೋಷಣೆಯಿಂದ ಮುಕ್ತಿ ಹೊಂದುವ ಉದ್ದೇಶದಿಂದ ರೈತರು ದೊಡ್ಡ ಸಂಖ್ಯೆಯಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಮಹಾತ್ಮ ಗಾಂಧಿರವರ ನೇತೃತ್ವದ ಅಹಿಂಸೆ ಚಳುವಳಿಯಲ್ಲಿ ಭಾಗವಹಿಸಿದ್ದಾರೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಕೆಂಬಾವುಟ ನೇತೃತ್ವದ‌ ಹೋರಾಟಗಳಲ್ಲಿ ಭಾಗವಹಿಸಿದ್ದಾರೆ. ಅವರದ್ದೇ ಆದ ಸಮೂಹ ಸಂಘಟನೆಗಳ ಅಡಿಯಲ್ಲಿ ಹೋರಾಡಿದ್ದಾರೆ. 1936ರಲ್ಲಿ ಅಖಿಲ ಭಾರತ ಕಿಸಾನ್ ಸಭಾ ಅಸ್ತಿತ್ವಕ್ಕೆ ಬಂತು. ಪಾಳೇಗಾರಿ ಭೂ‌ಮಾಲೀಕತ್ವ‌ ರದ್ದತಿ ಹಾಗೂ ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟ ಈ ಎರಡು ಅಂದು ರೈತರ ಪ್ರಮುಖ ಗುರಿಯಾಗಿತ್ತು. ಇಂತಹ ಒಂದು ಗುರಿ ಹೊಂದಿದ್ದ ಎ.ಐ.ಕೆ.ಎಸ್ ದೇಶದ ಅತ್ಯಂತ ಹಳೆಯ ಹಾಗೂ ದೊಡ್ಡ ರೈತ ಸಂಘಟನೆಯಾಗಿದೆ.

ಪಾಳೇಗಾರಿಕೆ ಜೊತೆ ಹೊಂದಾಣಿಕೆ

ಸ್ವಾತಂತ್ರ್ಯ ನಂತರ ಅಧಿಕಾರಕ್ಕೆ ಬಂದ ಸರ್ಕಾರ ಭರವಸೆ ನೀಡಿದಂತೆ ಸಂಪೂರ್ಣ ಭೂ ಸುಧಾರಣೆಯನ್ನು ಜಾರಿಗೆ ತರಲಿಲ್ಲ. ಯಾವುದೇ ಅಭಿವೃದ್ಧಿ ಹೊಂದಿರುವ ದೇಶಗಳು ಸ್ವಾತಂತ್ರ್ಯ ಪಡೆದ ತಕ್ಷಣವೇ ಪಾಳೇಗಾರಿ ವ್ಯವಸ್ಥೆಯನ್ನು ನಾಶಮಾಡಿವೆ. ಆದರೆ ಭಾರತದಲ್ಲಿ ಆ ರೀತಿ ಆಗಲಿಲ್ಲ. ಜವಹರಲಾಲ್ ನೆಹರುರವರ ಭರವಸೆ ಹೊರತಾಗಿಯೂ ಸ್ವಾತಂತ್ರ್ಯ ನಂತರವೂ ಭೂಮಿ, ಶೋಷಕರ ಸಾಧನವಾಗಿ ಮುಂದುವರೆಯಿತು. ಬಂಡವಾಳಶಾಹಿ ವರ್ಗ ಹಾಗೂ ಪಾಳೇಗಾರಿ ವರ್ಗ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಬಂಡವಾಳಶಾಹಿ-ಪಾಳೇಗಾರಿ ಆರ್ಥಿಕ ವ್ಯವಸ್ಥೆ ಆಸ್ತಿತ್ವಕ್ಕೆ ಬಂತು. ಇದರಿಂದಾಗಿಯೇ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಉಂಟಾಗಿದ್ದರೂ, ಗ್ರಾಮೀಣ ಆರ್ಥಿಕತೆ ಮುಂದುವರೆದಿದ್ದರೂ ಬಹುತೇಕ ರೈತರ ಸ್ಥಿತಿ ಚಿಂತಾಜನಕವಾಗಿ ಸ್ಥಿತಿಯಲ್ಲೇ ಮುಂದುವರೆಯುತ್ತಾ ಬಂತು.

farmers-protestಕೃಷಿ ನೀತಿಗಳ ವರ್ಗ ಪಕ್ಷಪಾತ

ಸ್ವಾತಂತ್ರ್ಯ ನಂತರದಿಂದ ಹಿಡಿದು ಇಲ್ಲಿಯವರೆಗೂ ಜಾರಿಗೆ ಬಂದ ಎಲ್ಲಾ ಕೃಷಿ ನೀತಿಗಳು ರೈತ ವಿರೋಧಿಯಾಗಿವೆ. ಕೃಷಿ ಉತ್ಪಾದನೆ, ಕೃಷಿ ರಪ್ತು, ಕೃಷಿ ಸಂಬಂಧಿತ ಉದ್ದಿಮೆಗಳು ಈ ಕೃಷಿ ನೀತಿಯ ಕೇಂದ್ರವಾಗಿವೆ. ರೈತ ಈ ಕೃಷಿ ನೀತಿಗಳ ಹೊರ ವರ್ತುಲದಲ್ಲಿದ್ದಾನೆ. ಕೃಷಿ ನೀತಿಯ ಕೇಂದ್ರ ರೈತನೇ ಆಗಿರಬೇಕು. ರೈತ ಕೇಂದ್ರಿತ ಕೃಷಿ ನೀತಿ ಜಾರಿಗೆ ಬರಬೇಕು ಎಂದು ಅಖಿಲ ಭಾರತ ಕಿಸಾನ್ ಸಭಾ ಪ್ರತಿಪಾದಿಸುತ್ತಾ ಬಂದಿದೆ. ಇದೇ ನಮಗೂ ಹಾಗೂ ಸರ್ಕಾರಕ್ಕೂ ಇರುವ ಮೂಲಭೂತ ವ್ಯತ್ಯಾಸ.

ಹಸಿರು ಕ್ರಾಂತಿ ಸಂದರ್ಭದಲ್ಲಿ ಸಬ್ಸಿಡಿಗಳ ಮೂಲಕ ರೈತರಿಗೆ ಸ್ವಲ್ಪ ನೆರವು ಸಿಕ್ಕಿರುವುದು ನಿಜ. ಆದರೆ ಈ ನೆರವಿನ ಬಹುತೇಕ ಭಾಗ ಶ್ರೀಮಂತರ ಪಾಲಾಯಿತು. ಬಡ ರೈತರಿಗೆ ಏನೂ ಸಿಗಲಿಲ್ಲ. ಆದರೆ ಈ ಬಡ ರೈತರ ಶ್ರಮವೇ ಅಮೆರಿಕಾದಿಂದ ಆಹಾರ ಅಮದು ಮಾಡಿಕೊಳ್ಳಬೇಕಾದದು ಸ್ಥಿತಿಯಿಂದ ಪಾರು ಮಾಡಿ ಭಾರತ ದೇಶವನ್ನು ಆಹಾರ ಸ್ವಾವಲಂಬಿಯನ್ನಾಗಿಸಿದೆ.

ನವ ಉದಾರವಾದಿ ಆಳ್ವಿಕೆ

ದೇಶ ನವ ಉದಾರವಾದಿ ಆರ್ಥಿಕ ನೀತಿಗಳಿಗೆ ತೆರೆದುಕೊಂಡಿದ್ದರಿಂದಾಗಿ ಹಸಿರು ಕ್ರಾಂತಿಯ ಕಾರಣದಿಂದ ಸಿಕ್ಕಿದ ಫಲಿತಗಳು ಹೆಚ್ಚು ಕಾಲ ಉಳಿಯಲಿಲ್ಲ. ವಿಶ್ವ ವಾಣಿಜ್ಯ ಸಂಸ್ಥೆ(ಡಬ್ಲ್ಯೂಟಿಓ)ಯು ಕೃಷಿ ನೀತಿ ಹೇಗಿರಬೇಕು ಎಂಬುವುದನ್ನು ನಿರ್ದೇಶಿಸುತ್ತಿದೆ. ಸಾಮಾನ್ಯ ಜನರ ಮೇಲಿನ ಶೋಷಣೆಯನ್ನು ತೀವ್ರಗೊಳಿಸುವುದು ಹಾಗೂ ಶ್ರೀಮಂತ ವಿಭಾಗಗಳಿಗೆ ಹೆಚ್ಚು ಅನುಕೂಲ ಮಾಡಿಕೊಡುವುದೇ ಈ ನವ ಉದಾರವಾದಿ ಧೋರಣೆಗಳ ತಿರುಳಾಗಿದೆ. ಇಂತಹ ನವ ಉದಾರೀಕರಣ ಧೋರಣೆಯನ್ನು ಅನುಸರಿಸಿದ್ದರಿಂದಲೇ ಕೃಷಿ ರಂಗ ಗಂಭೀರವಾದ ಬಿಕ್ಕಟ್ಟಿಗೆ ಒಳಗಾಯಿತು. ಇದರಿಂದ ಕ್ರಮೇಣ ಕೃಷಿ ನಷ್ಟದ ಕಸುಬಾಗಿದೆ.

ಒಂದು ಕಡೆ ನಿರಂತರವಾಗಿ ಹಾಗೂ ವೇಗವಾಗಿ ಕೃಷಿ ಲಾಗುವಾಡುಗಳು ವೆಚ್ಚ ತೀವ್ರಗೊಳ್ಳುತ್ತಿದ್ದರೆ ಇನ್ನೊಂದು ಕಡೆ ರೈತರು ತಾವು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗದಂತಾಯಿತು. ಕೃಷಿ ಲಾಗುವಾಡುಗಳ ಮೇಲೆ ಬಹುರಾಷ್ಟ್ರೀಯ ಕಂಪನಿಗಳ‌ ಹಿಡಿತದಿಂದಾಗಿ ರೈತನ ಬೇಸಾಯ ವೆಚ್ಚ ತೀವ್ರವಾಗಿ ಬೆಳೆಯಿತು. ಈ ಕಾರಣದಿಂದಾಗಿ ಶೇ.99 ರಷ್ಟು ರೈತರು ತಮ್ಮ ಬೆಳೆಗಳನ್ನು ನಷ್ಟದಲ್ಲಿ ಮಾರುತ್ತಿದ್ದಾರೆ. ನವ ಉದಾರೀಕರಣ ಧೋರಣೆಗಳ ಉದ್ದೇಶವೇ ಲಾಭವನ್ನು ಗರಿಷ್ಠಗೊಳಿಸಿಕೊಳ್ಳುವುದೇ ಆಗಿದೆ. ಹೀಗಾಗಿಯೇ ಶೋಷಣೆಯನ್ನು ತೀವ್ರಗೊಳಿಸಲಾಯಿತು.

ವ್ಯಾಪಕಗೊಂಡ ರೈತ ಆತ್ಮಹತ್ಯೆ

ನಷ್ಟದಲ್ಲಿ ಬೇಸಾಯ ಮಾಡಬೇಕಾದ ದುಸ್ಥಿತಿಯಲ್ಲಿ ರೈತರಿಗೆ ಅಗತ್ಯವಿರುವ ಸಾಲ ಸಾಂಸ್ಥಿಕ ಮೂಲಗಳಿಂದ ಸಿಗಲಿಲ್ಲ. ನಿರಂತರವಾಗಿ ಕೃಷಿ ಸಾಲದ ಪ್ರಮಾಣ ಹೆಚ್ಚಳವಾಗಿದ್ದರೂ ಈ ರೀತಿ ಸಾಲಗಳ ಶೇ.80ರಷ್ಟು ಕೃಷಿ ಸಂಬಂಧಿತ ಉದ್ದಿಮೆಗಳ ಪಾಲಾಗಿದೆ. ವಾರ್ಷಿಕ ಶೇ.5 ಅಥವಾ ಶೇ.6 ರ ಬಡ್ಡಿ ದರ ಇರುವ ಈ ಬ್ಯಾಂಕ್ ಸಾಲಗಳ ಬದಲು ವಾರ್ಷಿಕ ಶೇ.60 ರಷ್ಟು ರವರೆಗೆ ಇರುವ ಖಾಸಗಿ ಲೇವಾದೇವಿ ಸಾಲದ ಮೇಲೆ ರೈತರು ಅವಲಂಬಿಸುವಂತಾಯಿತು. ಕಡಿಮೆ ಬಡ್ಡಿ ದರದ ಸುಲಭ ಸಾಲ ಸೌಲಭ್ಯದಿಂದ ರೈತರನ್ನು ಹೊರಗಿಡಲಾಗಿದೆ.

ಇದಲ್ಲದೇ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಪರಿಹಾರ ನೀಡದೇ ಇರುವುದು ಯಾವುದೇ ಅರ್ಥಪೂರ್ಣ ವಿಮೆ ಒದಗಿಸದೇ ಇರುವುದು ರೈತನ ಗಾಯದ ಮೇಲೆ ಉಪ್ಪು ಸವರಿದಂತೆ ಮಾಡಿದೆ. ಪ್ರಾಕೃತಿಕ ವಿಕೋಪದಿಂದ ಬೆಳೆ ನಷ್ಟ ಆಗಿ ಸಾಲಗಾರರ ಕಿರುಕುಳ ಹಾಗೂ ಬೆಲೆ ಕುಸಿತದಿಂದಾಗಿ ಆದ ನಷ್ಟ ಆತ್ಮಹತ್ಯೆಗೆ ದೂಡಿದ ಎರಡು ಪ್ರಮುಖ ಅಂಶಗಳಾಗಿವೆ. ಎ.ಐ.ಕೆ.ಎಸ್ ನ ಆತ್ಮಹತ್ಯೆಗೀಡಾದ ವಿವಿಧ ರಾಜ್ಯಗಳ ನಾಲ್ಕು ಸಾವಿರ ಕುಟುಂಬಗಳ ಭೇಟಿಯಲ್ಲೂ ಈ ಕಾರಣಗಳೇ ಕಂಡು ಬಂದಿವೆ.

ಗ್ಯಾಟ್ ಒಪ್ಪಂದದ ನಂತರ ಭಾರತದ ಮಾರುಕಟ್ಟೆ ಅಂತರಾಷ್ಟ್ರೀಯ ಮಾರುಕಟ್ಟೆ ಜೊತೆ ಜೋಡಿಸಲ್ಪಟ್ಟಿರುವುದರಿಂದ ಬ್ರಿಟನ್, ಆಮೇರಿಕಾ ಮುಂತಾದ ಸಾಮ್ರಾಜ್ಯಶಾಹಿ ದೇಶಗಳ ಹಿತಾಸಕ್ತಿಗೆ ಬಲಿಯಾಗಬೇಕಾದ ದುಸ್ಥಿತಿಯನ್ನು ಸೃಷ್ಟಿಸಿದೆ.

ಇವೆಲ್ಲಾ ಕಾರಣಗಳಿಂದಾಗಿ ರೈತರ ಆತ್ಮಹತ್ಯೆ ಈಗ ಸಾಮಾನ್ಯ ದೃಶ್ಯವಾಗಿದೆ. ದಾಖಲೆ ಪ್ರಕಾರವೇ ಪ್ರತಿ ದಿನ 50 ರೈತರ ಆತ್ಮಹತ್ಯೆಗೀಡಾಗುತ್ತಿದ್ದಾರೆ. ಕೃಷಿಕೂಲಿಕಾರರೂ ಸಹ ಆತ್ಮಹತ್ಯೆಗೀಡಾಗುತ್ತಿದ್ದಾರೆ. ರೈತರ ಮಕ್ಕಳು ರೈತರಾಗಲೂ ಇಷ್ಟ ಪಡುತ್ತಿಲ್ಲ. ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ಎಸ್‌ಎಸ್‌) ಪ್ರಕಾರವೇ ಶೇ.44 ರಷ್ಟು ರೈತರು ಪರ್ಯಾಯ ಜೀವನೋಪಾಯ ಸಿಕ್ಕರೆ ಆ ತಕ್ಷಣದಲ್ಲೇ ಕೃಷಿ ಬಿಡಲು ಸಿದ್ದರಾಗಿದ್ದಾರೆ ಎಂಬ ಅಂಶವನ್ನು ಬಯಲು ಮಾಡಿದೆ.

ಕೃಷಿ ಬಿಕ್ಕಟ್ಟು ಪರಿಹಾರಕ್ಕಾಗಿ ದೇಶದಲ್ಲಿ ಐಕ್ಯ ಹೋರಾಟಗಳು

 ನವ ಉದಾರವಾದಿ ಆಳ್ವಿಕೆ ಉಂಟು ಮಾಡಿದ ಕೃಷಿ ಬಿಕ್ಕಟ್ಟಿನ ಆರಂಭದಿಂದಲೂ ಬಿಕ್ಕಟ್ಟು ಪರಿಹರಿಸುವಂತೆ ದೇಶದಲ್ಲಿ ರೈತ ಹೋರಾಟಗಳು-ಚಳುವಳಿಗಳು ನಡೆಯುತ್ತಿವೆ. ಅಖಿಲ ಭಾರತ ಕಿಸಾನ್ ಸಭಾ ಹಾಗೂ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕೃಷಿ ಬಿಕ್ಕಟ್ಟಿನ ಪರಿಹಾರಕ್ಕೆ ಎರಡು ಕಾನೂನುಗಳನ್ನು ಜಾರಿಗೆ ತರಬೇಕು ಎಂದು ಒತ್ತಾಯ ಮಾಡುತ್ತಿವೆ.

ದೇಶದ ಎಲ್ಲಾ ರೈತರ ಎಲ್ಲಾ ರೀತಿಯ ಸಾಲಗಳನ್ನು (ಸಹಕಾರಿ, ವಾಣಿಜ್ಯ ಬ್ಯಾಂಕ್ ಹಾಗೂ ಖಾಸಗಿ) ಒಂದು ಬಾರಿಗೆ ಸಂಪೂರ್ಣ ಮನ್ನಾ ಮಾಡಬೇಕು. ಎಲ್ಲಾ ರೈತರಿಗೆ ಸುಲಭ ಹಾಗೂ ಕಡಿಮೆ ಬಡ್ಡಿ ದರದ ಸಮರ್ಪಕ ಪ್ರಮಾಣದ ಸಾಲ ಸೌಲಭ್ಯ ಒದಗಿಸಲು ಹಾಗೂ ಡಾ.ಎಂ.ಎಸ್‌.ಸ್ವಾಮಿನಾಥನ್ ಆಯೋಗದ ಶಿಪಾರಸ್ಸಿನಂತೆ ಸಿ2+50℅ ಪ್ರಕಾರ (ಸಮಗ್ರ ಕೃಷಿ ವೆಚ್ಚಕ್ಕೆ ಶೇ.50 ಲಾಭಾಂಶ ಸೇರಿಸಿ) ಕನಿಷ್ಠ ಬೆಂಬಲ ಬೆಲೆ ನಿಗದಿಸಿ ಶಾಸನಬದ್ದ ಖರೀದಿಗೆ ಅವಕಾಶ ಕಲ್ಪಿಸುವ ಕಾನೂನುಗಳನ್ನು ಜಾರಿಗೆ ತರಬೇಕೆಂಬುದೇ ಈ ಒತ್ತಾಯವಾಗಿದೆ. ರೈತ ಚಳುವಳಿಗಳ ಮುತುವರ್ಜಿಯಿಂದ ಈ ಎರಡು ಕಾನೂನುಗಳನ್ನು ಖಾಸಗಿ ಮಸೂದೆಯಾಗಿ ಕೂಡ ಮಂಡಿಸಲಾಗಿದೆ. ಆದರೂ ಸರ್ಕಾರಗಳು ನಿರ್ಲಕ್ಷ್ಯಿಸುತ್ತಾ ಬಂದಿವೆ.

ಮಹಾದ್ರೋಹ

2014ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಡೆದ 400ಕ್ಕೂ ಹೆಚ್ಚು ಬಹಿರಂಗ ಸಭೆಗಳಲ್ಲಿ ನರೇಂದ್ರ ಮೋದಿರವರು ತಾನು ಅಧಿಕಾರಕ್ಕೆ ಬಂದರೆ ಎಲ್ಲಾ ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಹಾಗೂ ಸ್ವಾಮಿನಾಥನ್ ರವರ ಶಿಪಾರಸ್ಸಿನಂತೆ ಬೆಂಬಲ ಬೆಲೆ ನೀಡಲಾಗುವುದು ಎಂದು ಭಾರತದ ರೈತರಿಗೆ ಭರವಸೆ ನೀಡಿದ್ದರು. ಈ ಭರವಸೆಯನ್ನು ನಂಬಿ ದೇಶದ ಜನ ಮೋದಿರವರನ್ನು ಅಧಿಕಾರಕ್ಕೆ ತಂದರು. ಅಧಿಕಾರಕ್ಕೆ ಬಂದ ನಂತರ ಕೇಂದ್ರ ಸರ್ಕಾರ ಯಾವ ರೈತರ ಸಾಲವನ್ನು ಮನ್ನಾ ಮಾಡುವುದಿಲ್ಲ, ಬೇಕಿದ್ದರೆ ರಾಜ್ಯ ಸರ್ಕಾರಗಳು ಮನ್ನಾ ಮಾಡಿಕೊಳ್ಳಲಿ ಎಂದು ಬೇಜವಾಬ್ದರಿಯ ಧೋರಣೆಯನ್ನು ಪ್ರಕಟಿಸಿದರು. ಬೆಂಬಲ ಬೆಲೆ ನೀಡುವ ವಿಷಯದಲ್ಲೂ ಕೂಡ ನರೇಂದ್ರ ಮೋದಿಯವರು ಸ್ವಾಮಿನಾಥನ್ ಶಿಪಾರಸ್ಸಿನಂತೆ ಬೆಂಬಲ ಬೆಲೆ ನೀಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದರು. ಇದು ರೈತರಿಗೆ ಎಸಗಿದ ಮಹಾದ್ರೋಹವಾಗಿದೆ.

ಅಫಿಡವಿಟ್ ಸಲ್ಲಿಸಿರುವ ಇದೇ ನರೇಂದ್ರ ಮೋದಿಯವರು ಈಗಾಗಲೇ ಸ್ವಾಮಿನಾಥನ್ ಶಿಪಾರಸ್ಸು ಜಾರಿ ಮಾಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಈಗ ಕೇಂದ್ರ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಯ ಸಿ.ಎ.ಸಿ.ಪಿ.(ಕೃಷಿ ವೆಚ್ಚ ಹಾಗೂ ಬೆಲೆ ಆಯೋಗ)ಯ ಲೆಕ್ಕಪತ್ರ ಆಧರಿಸಿದೆಯೇ ಹೊರತು ಸ್ವಾಮಿನಾಥನ್ ರವರ ಸಿ2+50℅ ಅನ್ನು ಆಧರಿಸಿಲ್ಲ.ಈ ರೀತಿ ಪ್ರಯೋಗಶಾಲೆಗಳಿಂದ ಪಡೆದ ಕೃಷಿ ವೆಚ್ಚವು ರೈತರ ಉತ್ಪಾದನಾ ವೆಚ್ಚಕ್ಕಿಂತ ಕಡಿಮೆ ಇದೆ. ಇದನ್ನು ಜನರಿಂದ ಮರೆ ಮಾಚುವ ವಿಫಲ ಪ್ರಯತ್ನವನ್ನು ನರೇಂದ್ರ ಮೋದಿ ಸರ್ಕಾರ ನಡೆಸುತ್ತಿದೆ.

ಕೋವಿಡ್-19ರ ಪಿಡುಗಿನ ದುರುಪಯೋಗ

ನವ ಉದಾರೀಕರಣ ನೀತಿಗಳ ದುಷ್ಪರಿಣಾಮದಿಂದ ರಕ್ಷಣೆ ಒದಗಿಸುವಂತೆ ಇಡೀ ದೇಶದ ರೈತ ಚಳುವಳಿಯ ಹೋರಾಟ ತೀವ್ರಗೊಳಿಸಿದ ಸಂದರ್ಭದಲ್ಲೇ ಕೋವಿಡ್ ಸಾಂಕ್ರಾಮಿಕ ಮಹಾ ಪಿಡುಗು ಅಪ್ಪಳಿಸಿತು. ಕೋವಿಡ್ ತಡೆಗಟ್ಟುವ ನೆಪವಾಗಿ ಇಡೀ ದೇಶದಾದ್ಯಂತ ಅವೈಜ್ಞಾನಿಕವಾದ ಯಾವುದೇ ಪೂರ್ವ ತಯಾರಿ ಇಲ್ಲದ ಕಠಿಣ ಲಾಕ್‌ಡೌನ್ ಅನ್ನು ಇಡೀ ದೇಶದ ಮೇಲೆ ಹೇರಲಾಯಿತು. ಯಾವುದೇ ಪ್ರತಿಭಟನೆ ಮಾಡಲಾರದ ಸಂದರ್ಭವನ್ನು ದುರುಪಯೋಗ ಪಡಿಸಿಕೊಂಡು 2020ರ ಜೂನ್‌ನಲ್ಲಿ ಸುಗ್ರಿವಾಜ್ಞೆ ಮೂಲಕ ಕೃಷಿ ಕಾಯ್ದೆಗಳನ್ನು ಜಾರಿಗೆ ತರಲಾಯಿತು.

ರೈತರ ಉತ್ಪನ್ನಗಳ ಮಾರಾಟ ಹಾಗೂ ವಾಣಿಜ್ಯ ಕಾಯ್ದೆ 2020 ಇಡೀ ದೇಶದ ನಿಯಂತ್ರಿತ ಕೃಷಿ ಮಾರುಕಟ್ಟೆಯನ್ನು ನಾಶ ಮಾಡುವ ಉದ್ದೇಶವನ್ನು ಹೊಂದಿರುವುದು ಮಾತ್ರವಲ್ಲ ಬಹುರಾಷ್ಟ್ರೀಯ ಹಾಗೂ ದೇಶೀಯ ಕಾರ್ಪೊರೇಟ್ ದೈತ್ಯರಿಗೆ ಕೃಷಿ ಮಾರುಕಟ್ಟೆಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಲು ಅನುವು ಮಾಡಿಕೊಟ್ಟಿದೆ. ಇದರಿಂದ ಅಪಾರ ನಷ್ಟಕ್ಕೆ ಒಳಗಾಗುವ ರೈತರಿಂದ ಕೃಷಿ ಭೂಮಿ ಹಾಗೂ ಕೃಷಿ ಉತ್ಪಾದನೆಯನ್ನು ಕಿತ್ತುಕೊಳ್ಳಲು ಸಹಾಯಕವಾಗುವಂತೆ ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಕುರಿತ ರೈತ ಒಪ್ಪಂದ ಕಾಯ್ದೆ 2020 ಅನ್ನು ಕರಾರು ಕೃಷಿ, ಗುತ್ತಿಗೆ ಕೃಷಿ ಮೂಲಕ ಬಳಸಿಕೊಳ್ಳಲಾಗುತ್ತದೆ. ಇದರ ಜೊತೆಗೆ ದಾಸ್ತಾನು ಮೇಲೆ ಮಿತಿ ತೆಗೆದು ಹಾಕುವ ಹಾಗೂ ಕಾಳಸಂತೆ ವ್ಯವಹಾರಕ್ಕೆ ರಕ್ಷಣೆ ಒದಗಿಸಲು ಅಗತ್ಯ ಸರಕುಗಳ ತಿದ್ದುಪಡಿ ಕಾಯಿದೆ 2020 ಇರುವುದರಿಂದ ರೈತರು ಮಾತ್ರವಲ್ಲ ಇಡೀ ದೇಶದ ಗ್ರಾಹಕರು ಕೂಡ ತೀವ್ರವಾದ ಸಂಕಷ್ಟಕ್ಕೆ ಒಳಗಾಗಲಿದ್ದಾರೆ. ಈಗಾಗಲೇ ಬೆಲೆ ಏರಿಕೆಯ ಬಿಸಿ ತಟ್ಟಲಾರಂಭಿಸಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆ (ಪಿಡಿಎಸ್‌)   ಸಂಪೂರ್ಣವಾಗಿ ನಿರ್ನಾಮವಾಗಲಿದೆ. ಈ ಕೃಷಿ ಕಾಯ್ದೆಗಳ ಪರಿಣಾಮಗಳನ್ನು ತೀವ್ರಗೊಳಿಸಲು ವಿದ್ಯುತ್ ಚ್ವಕ್ತಿ ಮಸೂದೆ 2021ರ ಪ್ರಸ್ತಾಪವು ಕೃಷಿ ಬಳಕೆಯ ವಿದ್ಯುತ್ ದರಗಳನ್ನು ವಿಪರೀತ ಪ್ರಮಾಣದಲ್ಲಿ ದುಬಾರಿಗೊಳಿಸಲಿದೆ. ಈ ಕಾರಣಕ್ಕಾಗಿಯೇ ದೇಶದ ಎಲ್ಲಾ ರೈತ ಚಳುವಳಿಗಳು ಈ ಮೂರು ಕೃಷಿ ಕಾಯ್ದೆಗಳು ಹಾಗೂ ವಿದ್ಯುತ್ ಚ್ವಕ್ತಿ ಮಸೂದೆ ರದ್ದಾಗಬೇಕು ಹಾಗೂ ಕೃಷಿ ಉತ್ಪನ್ನಗಳನ್ನು ಕನಿಷ್ಠ ಬೆಂಬಲ ಬೆಲೆ ಖರೀದಿಗೆ ಕಾನೂನು ಬೇಕು ಎಂದು ಆಗ್ರಹಿಸುತ್ತಿವೆ.

ಚರಿತ್ರೆ ಸೃಷ್ಟಿಸಿರುವ ಮಹಾನ್ ರೈತ ಹೋರಾಟ

 ಸುಗ್ರಿವಾಜ್ಞೆ ಬಂದ ದಿನದಿಂದಲೂ ಲಾಕ್‌ಡೌನಿನ ತೊಡಕುಗಳ ನಡುವೆಯೂ ದೇಶದಾದ್ಯಂತ ಭಾರಿ ವಿರೋಧವನ್ನು ರೈತರು ವ್ಯಕ್ತಪಡಿಸಿದರೂ ಲೆಕ್ಕಿಸದೇ ನರೇಂದ್ರ ಮೋದಿರವರು ಸೆಪ್ಟೆಂಬರ್‌ನಲ್ಲಿ ಸಂಸತ್ತಿನ ಎಲ್ಲಾ ನೀತಿ – ನಿಯಮಗಳನ್ನು ಗಾಳಿಗೆ ತೂರಿ ಆಕ್ರಮವಾಗಿ ಕಾಯ್ದೆಯನ್ನಾಗಿಸಲಾಗಿದೆ. ಇದರಿಂದಾಗಿ ರೈತರು ದೆಹಲಿಗೆ ಬರಬೇಕಾಯಿತು. ನವೆಂಬರ್ 26 ,2020ರಂದು ಹೀಗೆ ಲಕ್ಷಾಂತರ ಸಂಖ್ಯೆಯಲ್ಲಿ ದೆಹಲಿ ಚಲೋಗೆ ಬಂದ ರೈತರನ್ನು ದೆಹಲಿ ಪ್ರವೇಶ ಮಾಡದಂತೆ ತಡೆಯಲಾಗಿದೆ. ಲಾಠಿ ಚಾರ್ಜ್ , ಜಲಫಿರಂಗಿ ದಾಳಿ ನಡೆಸಿದ ಸರ್ಕಾರ ರೈತರಿಗೆ ಇನ್ನಿಲ್ಲದ ಕಿರುಕುಳ ನೀಡಿತು. ಹೆದ್ದಾರಿಗಳಲ್ಲಿ ಮುಳ್ಳು ತಂತಿ ಬೇಲಿ, ಬೃಹತ್ತಾದ ಸಿಮೆಂಟಿನ ತಡೆಗೋಡೆಗಳನ್ನು ನಿರ್ಮಿಸಿದರು. ಇದೂ ಸಾಲದು ಎಂದು ರಾಷ್ಟ್ರೀಯ ಹೆದ್ದಾರಿಯನ್ನೇ ಹತ್ತಡಿ ಆಳ -ಆಗಲ ಅಗೆಯಲಾಯಿತು.  ಇಷ್ಟೆಲ್ಲಾ ದೌರ್ಜನ್ಯ-ದಬ್ಬಾಳಿಕೆ ಬಲಪ್ರಯೋಗ ನಡೆದರೂ ರೈತರು ಹಿಮ್ಮಟ್ಟದೇ ದೆಹಲಿ ಗಡಿಗಳಲ್ಲಿ ಅಂದಿನಿಂದಲೂ ಬೀಡು ಬಿಟ್ಟಿದ್ದಾರೆ.

ಸೊನ್ನೆ ಡಿಗ್ರಿಯಷ್ಟು ಚಳಿ, 45 ಡಿಗ್ರಿಯಷ್ಟು ಬಿಸಿಲು ಮಾತ್ರವಲ್ಲದೆ ಧಾರಾಕಾರ ಮಳೆ ಮುಂತಾದ ಎಲ್ಲಾ ಅಡ್ಡಿಗಳನ್ನು ಸಹಿಸಿಕೊಂಡು ರೈತರು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಪ್ರತಿಭಟನಾ ರೈತರು ಹುತಾತ್ಮರಾಗಿದ್ದಾರೆ. ಇಂತಹ ಕಷ್ಟಗಳ ಮಧ್ಯೆ ಪ್ರತಿಭಟಿಸುತ್ತಿರುವ ರೈತರಿಗೆ ಬಿಜೆಪಿ ಸರ್ಕಾರ ಯಾವುದೇ ಸಹಾನುಭೂತಿ ತೋರದೇ ವಿದ್ಯುತ್ ಚ್ವಕ್ತಿ ಸಂಪರ್ಕ, ನೀರಿನ ಸಂಪರ್ಕ ಕಡಿತ ಮಾಡಿ ಇನ್ನಿಲ್ಲದ ಕಿರುಕುಳ ನೀಡಿತು.

ಇದೇ ಸೆಪ್ಟೆಂಬರ್ 26ಕ್ಕೆ ಹತ್ತು ತಿಂಗಳಾಗುತ್ತಿರುವ ದೆಹಲಿ ರೈತ ಹೋರಾಟದ ಆರಂಭ ದಿನದಿಂದಲೂ ಬಿಜೆಪಿ-ಆರ್‌.ಎಸ್‌.ಎಸ್. ಅಪಪ್ರಚಾರ, ನಿಂದನೆಗಳನ್ನು ನಡೆಸುತ್ತಾ ಬಂದಿವೆ. ಈ ಎಲ್ಲಾ ಅಪಪ್ರಚಾರಗಳನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ರಾಜಭವನ ಚಲೋ, ವಿಧಾನಸೌಧ ಚಲೋ, ಬಂದ್,  ರೈಲು-ರಸ್ತೆ ತಡೆ ಮುಂತಾದ ಹೋರಾಟಗಳನ್ನು ದೇಶದಾದ್ಯಂತ ನಡೆಸುತ್ತಾ ಬಂದಿದೆ. ಜನವರಿ 26ರಂದು ಶಾಂತಿಯುತ ಎರಡು ಲಕ್ಷ ಟ್ರಾಕ್ಟರ್ ಮೆರವಣಿಗೆ ನಡೆದಿದೆ. ಮೋದಿರವರು ತನ್ನ ಗೂಂಡಾಪಡೆ ಬಳಸಿ ದಾಂಧಲೆ ನಡೆಸಿದರೂ ಚಳುವಳಿ ಅತ್ಯಂತ ಆಹಿಂಸಾತ್ಮಕವಾಗಿ ಮುಂದುವರೆಯುತ್ತಿದೆ.

ದೆಹಲಿ ರೈತ ಹೋರಾಟದ ಹಿರಿಮೆ

ದೆಹಲಿ ರೈತ ಹೋರಾಟ ಸ್ವಾತಂತ್ರ್ಯ ನಂತರದ ಅತಿ ದೊಡ್ಡ ಹಾಗೂ ದೀರ್ಘವಾದ ಹೋರಾಟವಾಗಿದೆ. 500 ಕ್ಕೂ ಹೆಚ್ಚು ರೈತ ಸಂಘಟನೆಗಳ ಬೃಹತ್ತಾದ ಸಂಯುಕ್ತ ಹೋರಾಟವಾಗಿದೆ. ಎಲ್ಲ ರೀತಿಯ ಸೈದ್ಧಾಂತಿಕ ಧಾರೆಗಳ ಚಳುವಳಿಗಳೂ ಈ ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿವೆ. ಜೊತೆಗೆ ದೇಶದ ಒಳಗೆ ಹಾಗೂ ಹೊರಗೆ ಅತಿ ಹೆಚ್ಚು ಸೌಹಾರ್ದ ಬೆಂಬಲ ಈ ಚಳುವಳಿಗೆ ದೊರಕಿದೆ. ದೇಶದ 10 ಪ್ರಮುಖ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಕ್ರಿಯಾಶೀಲ ಬೆಂಬಲ ಹಾಗೂ ಪಾಲ್ಗೊಳ್ಳುವಿಕೆ, ವಿವಿಧ ವಿದ್ಯಾರ್ಥಿ-ಯುವಜನ-ಮಹಿಳಾ ಸಂಘಟನೆಗಳ ಬೆಂಬಲ ಹಾಗೂ ನೆರವು ಈ ಚಳುವಳಿಯ ಹೆಗ್ಗಳಿಕೆಯಾಗಿದೆ.

ಸುಳ್ಳುಗಾರ ಪ್ರಧಾನಿ

ಎಂಟು ಬಾರಿ ಸಂಸತ್ ಸದಸ್ಯನಾಗಿದ್ದ ನಾನು 9 ಪ್ರಧಾನ ಮಂತ್ರಿಗಳ‌ ಜೊತೆ ಕೆಲಸ ಮಾಡಿದ್ದೇನೆ. ಆದರೆ ಇಷ್ಟೊಂದು ಸುಳ್ಳು ಹೇಳುವ ಪ್ರಧಾನಿಯನ್ನು ಕಂಡಿರಲಿಲ್ಲ. ಸಂಸತ್ತಿನಲ್ಲಿ ಕಾನೂನು ಆಗಿ ಹೋಗಿದೆ, ರದ್ದು ಮಾಡಲು ಬರುವುದಿಲ್ಲ ಎಂದು ಮೋದಿ ಹೇಳಿದ್ದಾರೆ. ಆದರೆ ಸಂಸತ್ ಅಂಗೀಕರಿಸಿದ್ದ 44 ಕಾರ್ಮಿಕ ಕಾನೂನುಗಳನ್ನು ಕೇವಲ ಒಂದೇ ಗಂಟೆಯಲ್ಲಿ ರದ್ದು ಮಾಡಿ 4 ಕಾರ್ಮಿಕ ಸಂಹಿತೆಗಳನ್ನಾಗಿ ರೂಪಿಸಿದೆ. ಕೃಷಿ ಕಾನೂನುಗಳನ್ನು ತಿದ್ದುಪಡಿ ಮಾಡಲು ಸರ್ಕಾರ ತಯಾರಿದೆ, ಆದರೆ ರೈತರೇ ಸಿದ್ದರಿಲ್ಲ ಎಂದು ಮತ್ತೊಂದು ಸುಳ್ಳನ್ನು ಮೋದಿ ಹೇಳಿದ್ದಾರೆ. ಕೃಷಿ ಕಾಯ್ದೆಗಳ ಪ್ರತಿ ಪದ ಮತ್ತು ಪ್ರತಿ ವಾಕ್ಯವೂ ಜನ ವಿರೋಧಿ ಯಾಗಿರುವುದರಿಂದ ಯಾವುದೇ ತಿದ್ದುಪಡಿ ಈ ಜನ ವಿರೋಧಿ ಕಾಯ್ದೆಗಳ ಗುಣಲಕ್ಷಣಗಳನ್ನು ಬದಲಿಸದು. ಇಡೀ ಕಾಯ್ದೆಗಳನ್ನು ರದ್ದು ಮಾಡಿ ಹೊಸ ಕಾನೂನು ರಚಿಸಲಿ ರೈತರು ಕೂಡ ನೆರವು ನೀಡಲಿದ್ದಾರೆ. ಜನವರಿ 22 ರಿಂದ ಯಾವುದೇ ಮಾತುಕತೆ ನಡೆಸುತ್ತಿಲ್ಲವಾದರೂ ರೈತರು ಚರ್ಚೆಗೆ ಬರುತ್ತಿಲ್ಲ ಎಂದು ಸುಳ್ಳು ಹೇಳಿದ್ದಾರೆ. ವೇಳೆ, ದಿನಾಂಕ ಹಾಗೂ ಸ್ಥಳ ನಿಗದಿಸಿ ಮಾತುಕತೆಗೆ ಆಹ್ವಾನಿಸದೇ ಉಡಾಫೆಯಿಂದ ವರ್ತಿಸುತ್ತಿದಾರೆ.

ಫ್ಯಾಸಿಸ್ಟ್ ಸರ್ಕಾರ

ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರ‌, ಜನರ ಮಾತಿಗೆ-ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತದೆ. ಆದರೆ ತನ್ನ ಆಲೋಚನೆಗಳನ್ನು ಮಾತ್ರ ಹೇರಿಕೆ ಮಾಡುವ ಈ ಮೋದಿ ಸರ್ಕಾರ ಫ್ಯಾಸಿಸ್ಟ್ ಸರ್ಕಾರವಾಗಿದೆ. ಅಧಾನಿ-ಅಂಬಾನಿಗಳಿಗೆ ಆಸ್ತಿ ಮತ್ತು ಸಂಪತ್ತು ಹೆಚ್ವಿಸಿಕೊಡುವ ಭರವಸೆಯನ್ನು ಈ ಸರ್ಕಾರ ನೀಡಿರುವುದರಿಂದ ಕೃಷಿ ಕಾನೂನುಗಳ ರದ್ದು ಮಾಡಲು ತಯಾರಿಲ್ಲ‌. ಇದೇ ಈ ಸರ್ಕಾರದ ಮೊಂಡುತನ ಹಾಗೂ ಹಠಮಾರಿತನದ ರಹಸ್ಯ.

ಸೆಪ್ಟೆಂಬರ್ 27 ರಂದು ಭಾರತ್ ಬಂದ್‌ಗೆ ಕರೆ

ಸೆಪ್ಟೆಂಬರ್ 1 ಮತ್ತು 2ರಂದು ಎರಡು ದಿನಗಳ ಕಾಲ ಹೋರಾಟದ ಕಣವಾದ ಸಿಂಗು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ)ವು ರಾಷ್ಟ್ರೀಯ ಸಮಾವೇಶ ಸಂಘಟಿಸಿತ್ತು. ಎಲ್ಲಾ 500 ಕ್ಕೂ ಹೆಚ್ಚು ಸಂಘಟನೆಗಳನ್ನು ಪ್ರತಿನಿಧಿಸಿ ಬಂದಿದ್ದ ಪ್ರತಿಯೊಬ್ಬ ಪ್ರತಿನಿಧಿಯು ಹೋರಾಟವನ್ನು ಮುಂದುವರೆಸುವ ಅಭಿಪ್ರಾಯ ವ್ಯಕ್ತಪಡಿಸಿದರು. ರೈತ, ಕಾರ್ಮಿಕ, ಕೃಷಿ ಕೂಲಿಕಾರ ಹೀಗೆ ಮೂಲಭೂತ ಉತ್ಪಾದಕ ವರ್ಗಗಳಲ್ಲಿ ಮೂಡಿಬರುತ್ತಿರುವ ಐಕ್ಯತೆಯನ್ನು ಗುರುತಿಸಿರುವ ರಾಷ್ಟ್ರೀಯ ಸಮಾವೇಶವು ಈ ಐಕ್ಯತೆಯನ್ನು ಬಲಪಡಿಸಲು, ಕೃಷಿ ಕಾನೂನುಗಳನ್ನು ರದ್ದುಪಡಿಸುವ ಒತ್ತಡವನ್ನು ಹೆಚ್ಚು ಮಾಡಲು ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಗೆ ಕರೆ ನೀಡಿದೆ.

ಕರ್ನಾಟಕದಲ್ಲೂ ಎಲ್ಲಾ ರೈತ -ಕಾರ್ಮಿಕ-ಕೃಷಿಕೂಲಿಕಾರರು ಒಗ್ಗಟ್ಟಾಗಿ ದೆಹಲಿ ಮಾದರಿಯಲ್ಲಿ ಹೋರಾಟ ಸಂಘಟಿಸಬೇಕು ಕರ್ನಾಟಕ ಬಂದ್ ಯಶಸ್ವಿಗೊಳಿಸಬೇಕು.

Leave a Reply

Your email address will not be published. Required fields are marked *