ತ್ರಿಪುರದಲ್ಲಿ ಸಿಪಿಐ(ಎಂ) ಕಚೇರಿಗಳ ಮೇಲಿನ ಧಾಳಿ ಖಂಡಿಸಿ ಪ್ರತಿಭಟನೆ

ತ್ರಿಪುರ ರಾಜ್ಯದೆಲ್ಲೆಡೆ ಸಿಪಿಐ(ಎಂ) ಕಚೇರಿಗಳ ಮೇಲೆ ನಡೆಸಿದ ಸರಣಿ ಧಾಳಿಯನ್ನು ಖಂಡಿಸಿ ಹಾಗೂ ಬಿಜೆಪಿಯ ತಾಲಿಬಾನ್ ಮಾದರಿಯ ಗೂಂಡಾಗಿರಿ, ಪೈಶಾಚಿಕ ಕೃತ್ಯ ವಿರೋಧಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಕ್ಲಾಕ್ ಟವರ್ ಬಳಿ ಪ್ರತಿಭಟನಾ ಪ್ರದರ್ಶನ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಸೇರಿದ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಕಾರ್ಯಕರ್ತರು ಬಿಜೆಪಿಯ ಗೂಂಡಾಗಿರಿ ಹಾಗೂ ಭಯೋತ್ಪಾದನಾ ಕೃತ್ಯದ ವಿರುದ್ಧ ಆಕ್ರೋಶಭರಿತರಾಗಿ ಘೋಷಣೆಗಳನ್ನು ಕೂಗಿದರು.

CPIM Mangalore protestಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ.ಬಾಲಕೃಷ್ಣ ಶೆಟ್ಟಿ ʻʻತ್ರಿಪುರ ರಾಜ್ಯದಲ್ಲಿ 40 ವರ್ಷಗಳ ಕಾಲ ಸುದೀರ್ಘವಾಗಿ ಆಳ್ವಿಕೆ ನಡೆಸಿದ ಕಮ್ಯುನಿಸ್ಟರು ರಾಜ್ಯದ ಸರ್ವಾಂಗೀಣ ಅಭಿವ್ರದ್ದಿಗೆ ಶಕ್ತಿಮೀರಿ ಶ್ರಮಿಸಿದ್ದರು. ಮಾತ್ರವಲ್ಲದೆ ಪ್ರತ್ಯೇಕ ರಾಜ್ಯದ ಬೇಡಿಕೆಯಿಟ್ಟ ಅಲ್ಲಿನ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ದ ಪ್ರಬಲವಾಗಿ ಸೆಣಸಾಟ ನಡೆಸಿ ರಾಜ್ಯದಲ್ಲಿ ಐಕ್ಯತೆ ಸಾಧಿಸಿ, ತ್ರಿಪುರವನ್ನು ಭಾರತದ ಅವಿಬಾಜ್ಯ ಅಂಗವಾಗಿಸುವಲ್ಲಿ ಅಲ್ಲಿನ ಕಮ್ಯುನಿಸ್ಟ್ ಚಳುವಳಿಯ ಪಾತ್ರ ಪ್ರಧಾನವಾಗಿದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಣಬಲ, ತೋಲ್ಬಲವನ್ನು ಬಳಸಿ, ಕುತಂತ್ರದಿಂದ ಆಧಿಕಾರಕ್ಕೇರಿದ ಬಿಜೆಪಿ, ತನ್ನ ಜನವಿರೋಧಿ ನೀತಿಗಳಿಂದಾಗಿ ಜನರ ಆಕ್ರೋಶಕ್ಕೆ ತುತ್ತಾಗಿದೆ. ಮಾತ್ರವಲ್ಲದೆ ತನ್ನ ಭಯೋತ್ಪಾದನಾ ಕೃತ್ಯದಿಂದ ಜನತೆಯಲ್ಲಿ ಭಯಭೀತಿಯನ್ನು ಸೃಷ್ಠಿಸಿದೆ. ಇದರ ವಿರುದ್ದ ಪ್ರಬಲ ಜನಚಳುವಳಿಯನ್ನು ಸಂಘಟಿಸಿದ ಕಮ್ಯುನಿಸ್ಟರ ವಿರುದ್ದ ಸರಣಿ ಧಾಳಿ ಸಂಘಟಿಸುವ ಮೂಲಕ ತನ್ನ ಹತಾಶ ಪ್ರವ್ರತ್ತಿಯನ್ನು ಪ್ರದರ್ಶಿಸಿದೆʼʼ ಎಂದು ಟೀಕಿಸಿದರು.

ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ʻʻದೇಶಪ್ರೇಮದ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಬಿಜೆಪಿ ತ್ರಿಪುರದಲ್ಲಿ ದೇಶದ್ರೋಹಿಗಳೊಂದಿಗೆ ಒಪ್ಪಂದ ಮಾಡಿ ಕಳೆದ ಚುನಾವಣೆಯಲ್ಲಿ ಗೆದ್ದು ರಾಜ್ಯದೆಲ್ಲೆಡೆ ದೊಂಬಿ ಗಲಭೆ ಸೃಷ್ಟಿಸಿ ಜನರ ಬದುಕನ್ನೇ ನರಕಯಾತನೆಯನ್ನಾಗಿಸಿದೆ. ತನ್ನ ತಾಲಿಬಾನ್ ಮಾದರಿಯ ಭಯೋತ್ಪಾದನಾ ಕೃತ್ಯದ ಮೂಲಕ ಕಮ್ಯುನಿಸ್ಟರ ಮೇಲೆ ದೈಹಿಕ ಧಾಳಿ ನಡೆಸುವ ಬಿಜೆಪಿ ಸಂಘಪರಿವಾರದ ವಿರುದ್ದ ಬುಗಿಲೆದ್ದ ಆಕ್ರೋಶ ಜನಚಳುವಳಿಯಾಗಿ ಮಾರ್ಪಟ್ಟು ತ್ರಿಪುರ ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿದೆʼʼ ಎಂದು ಹೇಳಿದರು.

ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಯಾದವ ಶೆಟ್ಟಿ ʻʻಅಂದು ಕಾಂಗ್ರೆಸ್ ನಡೆಸಿದ ಅರೆ ಫ್ಯಾಸಿಸ್ಟ್ ದಬ್ಬಾಳಿಕೆಯನ್ನು ಎದುರಿಸಿಯೇ ತ್ರಿಪುರ ರಾಜ್ಯದಲ್ಲಿ ಕಮ್ಯುನಿಸ್ಟರು ಅಧಿಕಾರಕ್ಕೇರಿದ್ದರು. ಮಾತ್ರವಲ್ಲದೆ 40 ವರ್ಷಗಳ ಕಾಲ ಸುಧೀರ್ಘವಾಗಿ ಉತ್ತಮ ಆಡಳಿತ ನೀಡುವ ಮೂಲಕ ದೇಶದಲ್ಲೇ ಮಾದರಿ ಸರಕಾರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಬಿಜೆಪಿ ಸಂಘಪರಿವಾರ ನಡೆಸುವ ಭಯೋತ್ಪಾದನಾ ಕೃತ್ಯದಿಂದ ಕಮ್ಯುನಿಸ್ಟರು ಯಾವತ್ತೂ ವಿಚಲಿತರಾಗುವುದಿಲ್ಲ. ಕಮ್ಯುನಿಷ್ಟರು ತನ್ನ ಕೊನೆಯ ಉಸಿರು ಇರುವವರೆಗೂ ದೇಶದ ಐಕ್ಯತೆ, ಸೌಹಾರ್ದತೆಗಾಗಿ ಹಾಗೂ ಜನರ ಬದುಕಿನ ರಕ್ಷಣೆಗಾಗಿ ಶ್ರಮಿಸುತ್ತಾರೆʼʼ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ದಕ್ಷಿಣ ಕನ್ನಡ ಜಿಲ್ಲಾ ನಾಯಕರಾದ ಕೃಷ್ಣಪ್ಪ ಸಾಲ್ಯಾನ್, ದಯಾನಂದ ಶೆಟ್ಟಿ, ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ಮಂಗಳೂರು ನಗರ ಮುಖಂಡರಾದ ನವೀನ್ ಕೊಂಚಾಡಿ, ಬಶೀರ್ ಪಂಜಿಮೊಗರು, ಬಾಬು ದೇವಾಡಿಗ, ಅಶೋಕ್ ಶ್ರೀಯಾನ್, ದಿನೇಶ್ ಶೆಟ್ಟಿ, ಶಶಿಧರ್ ಶಕ್ತಿಗರ, ಶ್ರೀನಾಥ ಕಾಟಿಪಳ್ಳ ಮಹಿಳಾ ಮುಖಂಡರಾದ ಭಾರತಿ ಬೋಳಾರ, ನಳಿನಾಕ್ಷಿ, ವಿಲಾಸಿನಿ, ಪ್ರಮೀಳಾ ಶಕ್ತಿನಗರ, ದಲಿತ ಹಕ್ಕುಗಳ ಸಮಿತಿಯ ನಾಯಕರಾದ ತಿಮ್ಮಯ್ಯ ಕೊಂಚಾಡಿ, ಪ್ರಗತಿಪರ ಚಿಂತಕರಾದ ಡಾ.ಕ್ರಷ್ಣಪ್ಪ ಕೊಂಚಾಡಿ ಮುಂತಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *