ಹಬ್ಬಗಳು ಅಶಾಂತಿ ಹಬ್ಬಿಸದಿರಲಿ

ಹಬ್ಬಗಳ ಸೀಜನ್ ಆರಂಭವಾಗಿದೆ. ಎಲ್ಲಾ ಧರ್ಮಿಯರು ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳು ನಮ್ಮ ಬಹುಮುಖಿ ಸಂಸ್ಕೃತಿಯ ಭಾಗವಾಗಿವೆ. ಹಬ್ಬದ ಕೆಲವು ಆಚರಣೆಗಳಲ್ಲಿ ಕೆಲವು ಮೌಢ್ಯಾಚರಣೆಗಳು ಸೇರಿಕೊಂಡಿದ್ದರೂ ಬಹುತೇಕ ಹಬ್ಬಗಳು ಕುಟುಂಬದ ಸದಸ್ಯರನ್ನು ಒಂದೆಡೆ ಸೇರಿಸುವ, ಕಾರಣಾಂತರದಿಂದ ಮರೆತುಹೋದ ಸಂಪರ್ಕಗಳನ್ನು ಮತ್ತೆ ಉರ್ಜಿತಗೊಳಿಸುವ, ಅಕ್ಕಪಕ್ಕದ ನೆರೆಮನೆಯವರೊಂದಿಗೆ ಸ್ನೇಹ ಬಾಂಧವ್ಯವನ್ನು ಬಲಪಡಿಸುವ ಸಂದರ್ಭಗಳಾಗಿ ನಡೆದುಕೊಂಡು ಬಂದಿವೆ. ಹಿಂದುಗಳು, ಮುಸಲ್ಮಾನರು, ಕ್ರೈಸ್ತರು, ಸಿಖ್ಖರು, ಬೌದ್ಧರು, ಜೈನರು, ಆದಿವಾಸಿಗಳು ಎಲ್ಲರೂ ತಮ್ಮ ತಮ್ಮ ಸಂಪ್ರದಾಯಗಳ ಪ್ರಕಾರ ಹಬ್ಬಗಳನ್ನು ಆಚರಿಸುತ್ತಾರೆ. ಹಬ್ಬಗಳು ಎಲ್ಲರನ್ನು ಒಳಗೊಳಿಸುವ, ಎಲ್ಲರಲ್ಲೂ ಶಾಂತಿಯನ್ನು ಹರಡುವ ಪ್ರಕ್ರಿಯೆಯಾಗಿದೆ. ದೇವರನ್ನು ತಾತ್ವಿಕವಾಗಿ ನಂಬದವರು ಸಹ ಬೇರೆಯವರ ನಂಬಿಕೆಗಳಿಗೆ ಅಡ್ಡಿಯನ್ನುಂಟುಮಾಡುವುದಿಲ್ಲ.

ಆದರೆ ಇತ್ತೀಚಿನ ವರ್ಷಗಳಲ್ಲಿ ವಿಶ್ವದಲ್ಲಿ ವಿಶೇಷವಾಗಿ ಭಾರತದಲ್ಲಿ ಧಾರ್ಮಿಕ ಹಬ್ಬಗಳು ಶಾಂತಿಯನ್ನು ಪಸರಿಸುವ ಬದಲಾಗಿ ಹೆಚ್ಚು ಹೆಚ್ಚಾಗಿ ಅಶಾಂತಿಯನ್ನು ಹರಡುತ್ತಿವೆ. ಹಬ್ಬಗಳ ಮೂಲ ಆಶಯಗಳೇ ಮರೆಯಾಗುತ್ತಿವೆ. ಶಾಂತಿ ಸೌಹಾರ್ಧತೆಯನ್ನು ಹರಡುವ ಬದಲಾಗಿ ನಮ್ಮ ಹಬ್ಬಗಳು ಸಮಾಜದಲ್ಲಿ ಅಶಾಂತಿ, ಆತಂಕವನ್ನು ಹೆಚ್ಚಿಸುತ್ತಿವೆ. ಕೊರೊನಾ ಸೋಂಕಿನ ಕಾರಣದಿಂದ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಇದರ ಹಿಂದಿನ ಸದುದ್ದೇಶವನ್ನು ಅರ್ಥಮಾಡಿಕೊಂಡು ಸಹಕರಿಸುವ ಬದಲಾಗಿ ಈ ಬೆಳವಣಿಗೆಯನ್ನು ಮತೀಯ ಧ್ರುವೀಕರಣಕ್ಕೆ ಬಳಸಿ ನಡೆದಿರುವುದು ಖೇದದ ವಿಷಯ.

ಬೆಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣಾ ವೇದಿಕೆ ಹಾಗೂ ಬಜರಂಗದಳ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ಗಣಪತಿ ಮೂರ್ತಿಗಳನ್ನು ತಮ್ಮೊಂದಿಗೆ ತಂದಿದ್ದ ಪ್ರತಿಭಟನಾಕಾರರು ನಗರದ ಬಿಬಿಎಂಪಿ ಕೇಂದ್ರ ಕಚೇರಿ ಎದುರು ಪ್ರತಿಭಟಸುತ್ತಾ ಸಾರ್ವಜನಿಕ ಗಣೇಶೋತ್ಸವಕ್ಕೆ ಮಾತ್ರ ನಿರ್ಬಂದ ಯಾಕೆ? ಎಂದು ಕೂಗುತ್ತಿದ್ದರು. ಮತೀಯ ಸಾಮರಸ್ಯಕ್ಕೆ ಧಕ್ಕೆ ತರುವುದೇ ಇಂತಹ ಪ್ರಚೋದಾತ್ಮಕ ಪದ ಬಳಕೆಯ ಉದ್ದೇಶವಾಗಿತ್ತು ಎಂಬುದು ಸ್ವಷ್ಟ. ದೇಶದಲ್ಲಿ ಇಂತಹ ಪ್ರಚೋದನಾಕಾರಿ ಮಾತುಗಳ, ಘೋಷಣೆಗಳ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಧ್ವಂಸಮಾಡುವವರಿಗೆ ಯಾಕೆ ಶಿಕ್ಷೆಯಾಗುವುದಿಲ್ಲ.

ಕೊರೊನಾ ಹಿನ್ನೆಲೆಯಲ್ಲಿ ಸಾವಿರಾರು ಜನರು ಯಾವುದೇ ನಿರ್ಬಂಧವಿಲ್ಲದೆ ಒಂದೆಡೆ ಸೇರುವುದು ಆಚರಣೆಗಳಲ್ಲಿ ತೊಡಗುವುದು ಅಪಾಯಕಾರಿ. ಸರ್ಕಾರ ಇಂತಹ ಮತಾಂಧರ ಒತ್ತಡಗಳಿಗೆ ಮಣಿದು ನಿರ್ಬಂಧಗಳನ್ನು ತೆಗೆದು ಹಾಕಬಹುದು. ಇದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಸರಿಯಾದುದಲ್ಲ ಎಂಬುದನ್ನು ಅರಿಯಲು ಸರ್ಕಾರದ ಆದೇಶಕ್ಕೆ ಕಾಯಬೇಕಾಗಿಲ್ಲ. ಇಂತಹ ಸರ್ಕಾರಗಳು ನಂಬಿಕೆಗೆ ಅರ್ಹವಲ್ಲ.

ಕೊರೊನಾ ಮೂರನೇ ಅಲೆ ಬೂದಿ ಮುಚ್ಚಿದ ಕೆಂಡದಂತೆ ಕಾಡುತ್ತಿದೆ. ಯಾವುದೇ ಕಾರಣದಿಂದ ನಾವು ಮೈಮರೆಯಬಾರದು. ಗಣೇಶೋತ್ಸವವನ್ನು ರಾಜಕೀಯಗೊಳಿಸುವ ಪ್ರಯತ್ನ ನಡೆಯುತ್ತಿದೆ. ರಾಜಕೀಯ ಪುಢಾರಿಗಳು ಮಾತನಾಡುವುದು ಸಮಾಜದ ಆರೋಗ್ಯಕ್ಕೆ ಪೂರಕವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು. ಯಾವುದೇ ಒಂದು ಮತಧರ್ಮದ ವಕ್ತಾರನಂತೆ ಮಾತನಾಡುವುದು ಸಮಾಜದಲ್ಲಿ ಶಾಂತಿಯನ್ನು ಕದಡುವ ದುರುದ್ದೇಶವನ್ನು ಹೊಂದಿದೆ. ಅಂತವರ ಮಾತುಗಳಿಂದ ಯಾರೂ ಪ್ರಚೋದನೆಗೆ ಒಳಗಾಗಬಾರದು. ಹಬ್ಬಗಳು ನಮ್ಮನ್ನು ಪರಸ್ಪರ ಹತ್ತಿರಕ್ಕೆ ತರಬೇಕು. ನಮ್ಮನ್ನು ಒಂದುಗೂಡಿಸಬೇಕು.

ಇತ್ತೀಚೆಗೆ ನ್ಯಾಯಾಲಯ ಸರ್ಕಾರಿ ಜಾಗದಲ್ಲಿ ಸ್ಥಾಪಿಸಲಾದ ಗಣ್ಯರ ಪ್ರತಿಮೆಗಳನ್ನು ಅನಧೀಕೃತ ದೇವಸ್ಥಾನಗಳನ್ನು ಸ್ಥಳಾಂತರಿಸಬೇಕೆಂದು ಆದೇಶ ಕೊಟ್ಟಿತು. ಆ ಸಮಯದಲ್ಲಿ ಕೆಲವರು `ಮೊದಲು ದರ್ಗಾಗಳನ್ನು ತೆಗೆಯಿರಿ; ಆನಂತರವಷ್ಟೇ ಹಿಂದುಗಳ ಸ್ಮಾರಕಗಳನ್ನು ತೆಗೆಯಿರಿ. ದೇಶದಲ್ಲಿ ಸಂಘ ಪರಿವಾರ ಸ್ಥಾಪನೆಯಾದ ನಂತರವಷ್ಟೇ ಇಂತಹ ಪ್ರಚೋದನಾಕಾರಿ ರಾಜಕೀಯ ಬೆಳವಣಿಗೆಗಳು ಹೆಚ್ಚುತ್ತಾ ಬಂದಿವೆ. ಇದು ಸಂಘ ಪರಿವಾರದ ಒಡೆದು ಆಳುವ ನೀತಿ. ಅವರು ಅದನ್ನು ಕಲಿತಿರುವುದು ಬ್ರಿಟಿಷರಿಂದ. ನಮ್ಮದೊಂದು ಸಮ್ಮಿಶ್ರ ಸಮಾಜ. ಒಗ್ಗಟ್ಟಿನಲ್ಲೇ ನಮ್ಮ ಬಲವಿದೆ. ಹಬ್ಬಗಳು ನಮ್ಮನ್ನು ಒಂದುಗೂಡಿಸಬೇಕು. ಛಿಧ್ರಗೊಳಿಸಬಾರದು. ನಾವು ಆಚರಿಸುವ ಹಬ್ಬಗಳಿಂದ ದುಂದುವೆಚ್ಚ ಆಗಬಾರದು. ಹಸಿದವರಿಗೆ ಅನ್ನ ನೀಡಲು ಸಾಧ್ಯವಾಗಬೇಕು. ಕೊರೊನಾ ವೈರಸ್ ಹರಡುವುದನ್ನು ತಡೆಯಬೇಕು. ಹಾಗೇ ಕೋಮು ದ್ವೇಷದ ವೈರಸ್ ಹಬ್ಬುವುದನ್ನೂ ತಡೆಯಬೇಕು.

Leave a Reply

Your email address will not be published. Required fields are marked *