ಸಿಪಿಐ(ಎಂ) ಪಕ್ಷದ ವತಿಯಿಂದ ಬೃಹತ್‌ ವಿಧಾನಸೌಧ ಚಲೋ

ಬೆಂಗಳೂರು: ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು, ಪ್ರತಿ ಕುಟುಂಬಕ್ಕೂ ಹತ್ತು ಸಾವಿರ ರೂ.ಗಳ ಪರಿಹಾರ, ತ್ವರಿತ ಮತ್ತು ಉಚಿತ ಸಾರ್ವತ್ರಿಕ ಲಸಿಕೆಗಾಗಿ, ರೈತ ವಿರೋಧಿ ಶಾಸನಗಳು ಮತ್ತು ಕಾರ್ಮಿಕ ವಿರೋಧಿ ಸಂಹಿತೆಯಗಳನ್ನು ರದ್ದುಪಡಿಸಬೇಕೆಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪಕ್ಷದ ವತಿಯಿಂದ ನಗರದಲ್ಲಿ ಬೃಹತ್‌ ವಿಧಾನಸೌಧ ಚಲೋ ಮೂಲಕ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸಿಪಿಐ(ಎಂ) ಪಕ್ಷದ ಬೆಂಗಳೂರು ಉತ್ತರ ಮತ್ತು ದಕ್ಷಿಣ ಜಿಲ್ಲಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾದ ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದ ಜನತೆ ಅದರಲ್ಲೂ ಹೆಚ್ಚಾಗಿ ಮಹಿಳೆಯರು ಭಾಗಿಯಾಗಿ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.

CPIM Protest on 23 09 2021 Bengaluru Photo3

ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಬೃಹತ್‌ ಬಹಿರಂಗ ಸಭೆಯಲ್ಲಿ ಅಸಂಘಟಿತ ಕಾರ್ಮಿಕರ ದೊಡ್ಡ ಪ್ರಮಾಣದಲ್ಲಿದ್ದು ಅವರು ಅರ್ಜಿ ಸಲ್ಲಿಸಿದ ಎಲ್ಲರಿಗೂ ಕೂಡಲೇ ಪರಿಹಾರಗಳನ್ನು ಬಿಡುಗಡೆ ಮಾಡಬೇಕು ಮತ್ತು ಮುಖ್ಯಮಂತ್ರಿಗಳ ಬಹುಮಹಡಿ ವಸತಿ ಯೋಜನೆಯ ಅರ್ಜಿ ಸಲ್ಲಿಕೆ ಕಾಲಾವಧಿ ವಿಸ್ತರಿಸಬೇಕೆಂದು ಸಿಪಿಐ(ಎಂ) ಪಕ್ಷವು ಆಗ್ರಹಿಸಿದೆ.

ಕೋವಿಡ್‌ ಸಾಂಕ್ರಾಮಿಕದ ಸಂಕಷ್ಟದಲ್ಲಿ ಜನತೆ ಇರುವಾಗ ಲಸಿಕೆ ಪೂರೈಕೆಯನ್ನು ಉಚಿತವಾಗಿ ತ್ವರಿತವಾಗಿ ಮತ್ತು ಸಾರ್ವತ್ರಿಕವಾಗಿ ಒದಗಿಸದೆ ಜನತೆಯು ಲಸಿಕೆಗಾಗಿ ಪರದಾಡುವ ಪರಿಸ್ಥಿತಿಯನ್ನು ಕೇಂದ್ರ ಬಿಜೆಪಿ ಸರ್ಕಾರವು ಸೃಷ್ಟಿಸಿದೆ. ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳ ಮಧ್ಯಪ್ರವೇಶ ಹಾಗೂ ವಿರೋಧ ಪಕ್ಷಗಳ ಒತ್ತಾಯದ ಮೇರೆಗೆ ಉಚಿತ ಲಸಿಕೆಯ ಯೋಜನೆಯನ್ನು ಕೇಂದ್ರ ಬಿಜೆಪಿ ಸರ್ಕಾರವು ತಡವಾಗಿ ಆರಂಭಿಸಿದೆ. ಈಗಲೂ ಎಲ್ಲರಿಗೂ ಲಸಿಕೆ ದೊರೆಯುತ್ತಿಲ್ಲ ಎಂಬುದು ವಾಸ್ತವ ಅಂಶವಾಗಿದೆ. ಎಂದು ಸಿಪಿಐ(ಎಂ) ಪಕ್ಷವು ಪ್ರತಿಭಟನೆಯಲ್ಲಿ ಆಗ್ರಹಿಸಲಾಗಿದೆ.

ಕೋವಿಡ್‌ ಕ್ಕಾಗಿ ಜನತೆಯು ನಡೆಸಿದ ಹೋರಾಟದ ಪರಿಣಾಮವಾಗಿ ಪ್ರಸಕ್ತ ವರ್ಷದಲ್ಲಿ 11 ವೃತ್ತಿಯಲ್ಲಿರುವ ಅಸಂಘಟಿತ ಕಾರ್ಮಿಕರಿಗೆ 2000 ರೂ.ಗಳ ಪರಿಹಾರವನ್ನು ರಾಜ್ಯ ಸರ್ಕಾರವು ಪ್ರಕಟಿಸಿದೆ. ಅರ್ಜಿ ಸಲ್ಲಿಸಿ ಎರಡು ತಿಂಗಳಾದರೂ ಇದುವರೆಗೆ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಿಲ್ಲ. ಲಾಕ್‌ಡೌನ್‌ ಪರಿಣಾಮದಿಂದಾಗಿ ಈಗಲೂ ಆರ್ಥಿಕತೆ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಂಡಿಲ್ಲ.

ಇಂತಹ ಸಂದರ್ಭದಲ್ಲಿ ಕೇಂದ್ರ ಬಿಜೆಪಿ ಸರ್ಕಾರವು ಜನತೆಯ ಆಸ್ತಿಯನ್ನು ಆರು ಕಾಸು ಮೂರು ಕಾಸಿಗೆ ಮಾರಾಟ ಮಾಡಲು ರಾಷ್ಟ್ರೀಯ ನಗದೀಕರಣ ಪೈಪ್‌ಲೈನ್‌ ಯೋಜನೆಯನ್ನು ಪ್ರಕಟಿಸಿದೆ. ಸಂವಿಧಾನಿಕ ಸಂಸ್ಥೆಗಳನ್ನು ಕಡೆಗಣಿಸಿ ಪಲ್ಲಟಗೊಳಿಸಲು ಮುಂದಾಗಿದೆ. ಜನತೆಯ ನೆರವಿಗೆ ಧಾವಿಸುತ್ತಿಲ್ಲ. ಆದರೆ ಬಿಜೆಪಿ ಸರ್ಕಾರಗಳು ತಮ್ಮ ಹಿಂದಿನ ಕೋಮುವಾದಿ ಧೃವೀಕರಣಕ್ಕೆ ನಿರಂತರ ಯತ್ನವನ್ನು ಮಾಡುತ್ತಾ ಬಂದಿವೆ.

CPIM Protest on 23 09 2021 Bengaluru Photoರೈತ ವಿರೋಧಿ ಶಾಸನಗಳ ವಿರುದ್ಧ ರೈತರು 2020ರ ನವೆಂಬರ್‌ 26ರಿಂದ ನಡೆಸುತ್ತಿರುವ ಹೋರಾಟಕ್ಕೆ ಪರಿಹಾರ ಕಂಡುಕೊಳ್ಳಲು ಯತ್ನಿಸುತ್ತಿಲ್ಲ. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ರೂಪಿಸಿ ಜಾರಿಗೊಳಿಸಲು ಕೇಂದ್ರ ಬಿಜೆಪಿ ಸರ್ಕಾರ ಮುಂದಾಗಿದೆ. ಅದರ ವಿರುದ್ಧದ ಕಾರ್ಮಿಕರ ಹೋರಾಟಗಳನ್ನು ಮನಗಾಣುತ್ತಿಲ್ಲ. ರಾಷ್ಟ್ರದ ಶಿಕ್ಷಣ ವ್ಯವಸ್ಥೆಯನ್ನು ತ್ವರಿತವಾಗಿ ವ್ಯಾಪಾರೀಕರಣ, ವಾಣಿಜ್ಯೀಕರಣಕ್ಕೆ ಅನುವುಗೊಳಿಸಲು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೇಂದ್ರ ಬಿಜೆಪಿ ಸರ್ಕಾರವು ಏಕಪಕ್ಷೀಯವಾಗಿ ರೂಪಿಸಿ ರಾಜ್ಯ ಬಿಜೆಪಿ ಸರ್ಕಾರವು ಅದರ ಜಾರಿಗೆ ಮುಂದಾಗಿದೆ.

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಷ್ಟ್ರ, ರಾಜ್ಯದ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಪರ್ಯಾಯ ನೀತಿಗಳ ಬೇಡಿಕೆಗಳಿಗಾಗಿ ಸಿಪಿಐ(ಎಂ) ಪಕ್ಷವು ರಾಷ್ಟ್ರವ್ಯಾಪಿ ಪ್ರಚಾರಾಂದೋಲನವನ್ನು ನಿರಂತರವಾಗಿ ಹಮ್ಮಿಕೊಂಡಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ಸಿಪಿಐ(ಎಂ) ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಕೆ.ಎನ್.ಉಮೇಶ್‌, ಬೆಂಗಳೂರು ಉತ್ತರ ಜಿಲ್ಲಾ ಕಾರ್ಯದರ್ಶಿ ಎನ್.‌ ಪ್ರತಾಪ್‌ ಸಿಂಹ, ಮುಖಂಡರಾದ ಗೌರಮ್ಮ, ಟಿ.ಲೀಲಾವತಿ, ಹೆಚ್‌.ಎನ್‌.ಗೋಪಾಲಗೌಡ, ಎನ್.ವೆಂಕಟಚಲಯ್ಯ, ಬಿ.ಎನ್.ಮಂಜುನಾಥ್‌, ಸಿ.ಚಂದ್ರಶೇಖರ್‌, ಬಿ.ರಾಜಶೇಖರ ಮೂರ್ತಿ, ಸೆಲ್ವಿ, ಮತ್ತಿತರ ಮುಖಂಡರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *