ಕೋವಿಡ್ ಪರಿಹಾರದ ಹೊಣೆ ಕೇಂದ್ರ ಸರಕಾರದ್ದು: ಸಿಪಿಐ(ಎಂ)

ಕೋವಿಡ್ ಸಾವುಗಳ ಸಂಕಟಕ್ಕೆ ಈಡಾದ ಕುಟುಂಬಗಳಿಗೆ ರೂ.50,000 ಪರಿಹಾರ ನೀಡಬೇಕೆಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಶಿಫಾರಸು ಮಾಡಿರುವುದಾಗಿ ಕೇಂದ್ರ ಸರಕಾರ ಸುಪ್ರಿಂ ಕೊರ್ಟಿಗೆ ಮಾಹಿತಿ ನೀಡಿದೆ. ಆದರೆ ಈ ಮೊತ್ತವನ್ನು ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್‌ಡಿಆರ್‌ಎಫ್)ಯಿಂದ ರಾಜ್ಯ ಸರಕಾರಗಳು ಕೊಡಬೇಕಾಗಿದೆ.

ಕೋವಿಡ್ ಸಾವುಗಳಿಗೆ ಪರಿಹಾರದ ವೆಚ್ಚವನ್ನು ರಾಜ್ಯ ಸರಕಾರದ ಮೇಲೆ ಹೊರಿಸುವುದು ಸರಿಯಲ್ಲ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ಹೇಳಿದೆ. ಎಸ್‌ಡಿಆರ್‌ಎಫ್ ಕೋವಿಡ್‌ನ್ನು ನಿಭಾಯಿಸುವುದು ಸೇರಿದಂತೆ ಇತರೆಲ್ಲ ಸಾಂಕ್ರಾಮಿಕ ಸಂಬಂಧಿ ವೆಚ್ಚಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಅಲ್ಲದೆ ರಾಜ್ಯ ಸರಕಾರಗಳು ಗಂಭೀರ ಸಂಪನ್ಮೂಲ ಕೊರತೆಯನ್ನು ಎದುರಿಸುತ್ತಿವೆ.

ಕೋವಿಡ್ ಸಾಂಕ್ರಾಮಿಕದ ನಿರ್ವಹಣೆ ಪ್ರಥಮತಃ ರಾಜ್ಯ ಸರಕಾರಗಳೊಂದಿಗೆ ಒಂದು ಕೇಂದ್ರ ಸರಕಾರದ ಪ್ರಯತ್ನ. ಸಾಂಕ್ರಾಮಿಕವನ್ನು ಎದುರಿಸುವ ಎಲ್ಲ ನಿಯಮ ಸಂಹಿತೆಗಳನ್ನು ಮತ್ತು ಮಾರ್ಗದರ್ಶನಗಳನ್ನು ಕೇಂದ್ರದ  ಅಧಿಕಾರಿಗಳ ಮೂಲಕವೇ ರೂಪೀಕರಿಸಲಾಗುತ್ತಿದೆ. ಆದ್ದರಿಂದ ಕೋವಿಡ್ ಬಾಧಿತರಿಗೆ ಪರಿಹಾರವನ್ನು ಒದಗಿಸುವ ಪ್ರಮುಖ ಹೊಣೆಯನ್ನು ಕೇಂದ್ರ ಸರಕಾರವೇ  ಹೊರಬೇಕಾಗುತ್ತದೆ. ಸುಪ್ರಿಂ  ಕೋರ್ಟ್ ಇನ್ನೂ ಈ ಪ್ರಕರಣದಲ್ಲಿ ಅಂತಿಮ ಆದೇಶಗಳನ್ನು ನೀಡಿಲ್ಲ. ಪ್ರಾಥಮಿಕ ಹೊಣೆ ಕೇಂದ್ರ ಸರಕಾರದ್ದು ಎಂಬುದನ್ನು ಖಾತ್ರಿಪಡಿಸಬೇಕು ಮತ್ತು ಪರಿಹಾರ ಮೊತ್ತವನ್ನು ಗಮನಾರ್ಹವಾಗಿ ಹೆಚ್ಚಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.

Leave a Reply

Your email address will not be published. Required fields are marked *