ಬೆಳಗಾವಿ ದುರಂತ ಸಾವುಗಳಿಗೆ ಯಾರು ಹೊಣೆ?

ಕಳೆದ ಕೆಲವು ದಿನಗಳಿಂದ ರಾಜ್ಯದ ವಿವಿಧೆಡೆ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳೆದು ನಿಂತ ಪೈರು ನೀರು ಪಾಲಾಗಿದೆ. ನದಿಗಳಲ್ಲಿ ಭೀಕರ ಪ್ರವಾಹ ಉಂಟಾಗಿದೆ. ಜನ ಜಾನುವಾರುಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮರಗಳು, ವಿದ್ಯುತ್ ಕಂಬಗಳು ಧರೆಗಿಳಿದಿವೆ. ರಸ್ತೆಗಳು, ಸೇತುವೆಗಳು ಮುಳುಗಿವೆ.

ಬೆಳಗಾವಿ ಜಿಲ್ಲೆಯಲ್ಲಿ ಬಡಾಲ ಅಂಕಲಗಿ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು ಇಬ್ಬರು ಬಾಲಕೀಯರು ಸೇರಿದಂತೆ 7 ಮಂದಿ ಮೃತಪಟ್ಟಿದ್ದಾರೆ. ಅವಶೇಷಗಳ ಕೆಳಗೆ ಸಿಲುಕಿದ್ದವರ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅಸುನೀಗಿದ್ದಾರೆ. ಭಾರೀ ಮಳೆ ಸುರಿಯುತ್ತಿರುವುದನ್ನು ಆತಂಕದಿಂದ ನೋಡುತ್ತಾ ನಿಂತಾಗ ಮನೆಯ ಗೋಡೆಯೊಂದು ದಿಢೀರನೆ ಅವರ ಮೇಲೆ ಕುಸಿದು ಬಿದ್ದಿದೆ. ಆ ಕುಟುಂಬದ ಒಬ್ಬ ಬಾಲಕಿ ಸೇರಿ ಆರು ಮಂದಿ ಮತ್ತು ಪಕ್ಕದ ಮನೆಯ ಎಂಟು ವರ್ಷದ ಬಾಲಕಿ ಸೇರಿ ಏಳು ಮಂದಿ ಮರಣಹೊಂದಿದ್ದಾರೆ. ಹೊರಗೆ ಹೋಗಿದ್ದ ಮನೆಯ ಯಜಮಾನ ಮತ್ತು ಮಗ ಬದುಕುಳಿದಿದ್ದಾರೆ. ಇಂತಹ ಅಮಾಯಕರ ಸಾವುಗಳಿಗೆ ಯಾರು ಹೊಣೆ?

“ಹುಟ್ಟಿದವರು ಒಮ್ಮೆ ಸಾಯಲೇ ಬೇಕು” ಎಂದು ನಾವು ಸಮಾಧಾನಪಟ್ಟುಕೊಳ್ಳುತ್ತೇವೆ. ಆದರೆ ನಾವು ಅನಾಥ ಶವಗಳಾಗಿ ಮಣ್ಣಲ್ಲಿ ಮುಚ್ಚಿಹೋಗುವ, ನೀರಲ್ಲಿ ಕೊಚ್ಚಿಹೋಗುವುದು ಯಾವ ತಪ್ಪಿಗೆ ಶಿಕ್ಷೆ? ನರೇಂದ್ರ ಮೋದಿರವರು ಹೊಣೆಗಾರರಾಗಿರಲಿಕ್ಕಿಲ್ಲ, ಯಾಕೆಂದರೆ ಅವರು ನಮ್ಮಿಂದ ದೂರ, ಬಹುದೂರ ಇದ್ದಾರೆ. ಬಸವರಾಜ ಬೊಮ್ಮಾಯಿರವರು ಹೊಣೆಗಾರರಲ್ಲ, ಏಕೆಂದರೆ ಅವರು ಕುರ್ಚಿ ಹೊಣೆಗಾರಿಕೆಗೆ ತೀರಾ ಹೊಸಬರು. ಇನ್ನು ಅಧಿಕಾರಿ ವರ್ಗದವರು. ಅವರು ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಕಲೆಯನ್ನು ಕರಗತಗೊಳಿಸಿಕೊಂಡವರು, ಬಡ್ತಿ ಪಡೆದು ಬಂದವರು.

ನಮ್ಮ ಸಂವಿಧಾನ ನಮಗೆ ಬದುಕುವ ಹಕ್ಕನ್ನು ನೀಡಿದರೆ. ನನ್ನ ಜೀವ ತೆಗೆಯಲು ಯಾರಾದರೂ ಪ್ರಯತ್ನಪಟ್ಟರೆ ನಾನು ನ್ಯಾಯಾಲಯದ ಮೊರೆ ಹೋಗಬಹುದು. ನಾನು ಕುಟುಂಬ ಸಮೇತನಾಗಿ ವಾಸಮಾಡುತ್ತಿರುವ ಶಿಥಿಲಗೊಂಡ ಮನೆ ಕುಸಿದುಬಿದ್ದು ನಾವು ಜೀವಕಳೆದುಕೊಳ್ಳುವ ಅಪಾಯವಿದ್ದಾಗ ನಾನು ನ್ಯಾಯಾಲಯದ ಮೊರೆ ಹೋಗಬಹುದೆ? ಒಂದು ಸುರಕ್ಷಿತ ವಾಸಸ್ಥಳ ಸಂವಿಧಾನ ನೀಡಿರುವ ಬದುಕುವ ಹಕ್ಕಿನ ಭಾಗವಲ್ಲವೇ?

‘ಪ್ರಜೆಗಳೇ ಪ್ರಭುಗಳು’ ಎಂದು ಪ್ರತಿಪಾದಿಸುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಸಕ್ಕೆ ಸುರಕ್ಷಿತ ಮನೆಗಳಿಲ್ಲದ ಅಸಂಖ್ಯಾತ ಕುಟುಂಬಗಳಿವೆ. ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಸಿಕೊಂಡು ವಾಸಿಸುತ್ತಿರುವ ಎಷ್ಟೋ ಕುಟುಂಬಗಳಿವೆ. ಸರ್ಕಾರ ಶ್ರೀಮಂತರಿಗೆ ದೊಡ್ಡ ಬಂಗ್ಲೆಗಳನ್ನು ಕಟ್ಟಿಕೊಳ್ಳಲು ಭೂಮಿಯನ್ನು ಒದಗಿಸುತ್ತದೆ. ಆದರೆ ಸ್ವಂತ ಮನೆಗಳಿಲ್ಲದ ಬಡವರಿಗೆ ತಲೆಯ ಮೇಲಿನ ಸೂರಿಗಾಗಿ ಸಣ್ಣ ನಿವೇಶನಗಳನ್ನು ನೀಡಲು ಮುಂದಾಗುತ್ತಿಲ್ಲ. ಸರ್ಕಾರಿ ಜಾಗದಲ್ಲಿ ಕಟ್ಟಿಕೊಂಡಿರುವ ಸಣ್ಣ ಸಣ್ಣ ಮನೆಗಳನ್ನು ಮತ್ತು ಬಳಸಿಕೊಂಡ ನಿವೇಶನಗಳನ್ನು ಸಕ್ರಮಗೊಳಿಸಲು ಸಲ್ಲಿಸಿದ ಮನವಿಗಳೆಲ್ಲ ಕಸದ ಬುಟ್ಟಿ ಸೇರುತ್ತವೆ.

ಬೆಳಗಾವಿ, ವಿಜಯಪುರದಂತಹ ಜಿಲ್ಲೆಗಳಲ್ಲಿ ಬಡವರು ಮಣ್ಣಿನ ಮನೆಗಳಲ್ಲಿ ವಾಸ ಇರುತ್ತಾರೆ. ನಿರಂತರ ಮಳೆಯಿಂದ ಅಂತಹ ಮನೆಗಳು ಬೇಗನೆ ಶಿಥಿಲಗೊಂಡು ಕುಸಿದು ಬೀಳುವ ಅಪಾಯದಲ್ಲಿರುತ್ತವೆ. ಆದರೆ ಅಂತಹ ಮನೆಗಳನ್ನು ದುರಸ್ತಿ ಮಾಡಲು, ಸುರಕ್ಷಿತ ಮನೆಗಳನ್ನು ಕಟ್ಟಿಸಿ ಕೊಡಲು ಸರ್ಕಾರ ಬಜೆಟ್ ಅನುದಾನ ಒದಗಿಸುವುದಿಲ್ಲ. ಇತ್ತೀಚೆಗೆ ಕೆಲವೆಡೆ ಧಾರಕಾರ ಮಳೆ ಸುರಿದು ಮನೆಗಳು ಕುಸಿದು ಬೀಳುವುದು ವ್ಯಾಪಕವಾಗಿದೆ. ಶಿಥಿಲಾವಸ್ಥೆಗೆ ಬಂದಿರುವ ಮನೆಗಳನ್ನು ದುರಸ್ತಿ ಮಾಡಿಸಿ ಕೊಡುವುದು ಸರ್ಕಾರದ ಆಧ್ಯತೆ ಯಾಕಾಗಬಾರದು? ಪ್ರವಾಹಕ್ಕೆ ಸಿಕ್ಕಿ ಮನೆಗಳನ್ನು ಕಳೆದುಕೊಂಡ ಅದೆಷ್ಟೋ ಕುಟುಂಬಗಳಿಗೆ ಇದುವರೆಗೂ ಪುನರ್ವಸತಿ ಕಲ್ಪಿಸದೆ ತಗಡಿನ ಶೆಡ್ಡುಗಳಲ್ಲಿ ಅವರನ್ನು ಗೋಳಾಡಿಸಲಾಗುತ್ತಿದೆ.

ಬೆಳಗಾವಿಯ 7 ಜನ ಅಮಾಯಕರ ಸಾವನ್ನು ತಪ್ಪಿಸಲು ಸಾಧ್ಯವಿತ್ತು. ಅದು ಅವರ ಹಕ್ಕೂ ಆಗಿತ್ತು.

Leave a Reply

Your email address will not be published. Required fields are marked *