ಅತ್ಯಂತ ಹೊಲಸು ಹತ್ಯೆ

ಪ್ರಕಾಶ ಕಾರಟ್

prakash karat
ಪ್ರಕಾಶ ಕಾರಟ್

ಲಖಿಂಪುರ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ನಡೆಸಲಾದ ಹಿಂಸಾಚಾರ ಆಳುವ ಬಿಜೆಪಿಯ ಒಂದು ಹತಾಶ ಕೃತ್ಯ. ಬಿಜೆಪಿ ನಾಯಕರು ಮತ್ತು ಮಂತ್ರಿಗಳ ಹೇಳಿಕೆಗಳು ರೈತರ ಚಳವಳಿಯ ತೀವ್ರತೆ ಮುಂದುವರೆಯುತ್ತಿರುವುದು ಹಾಗೂ ಅದನ್ನು ಛಿದ್ರಗೊಳಿಸಲು ತಮಗೆ ಆಗದಿರುವುದನ್ನು ನೋಡಿ  ಹತಾಶೆಯ ದನಿಯನ್ನು ಪಡೆಯುತ್ತಿವೆ. ಆದರೆ ಇಂಥ ಹಿಂಸಾಚಾರಗಳಿಂದ ರೈತರ ಹೋರಾಟವನ್ನು ಬಗ್ಗುಬಡಿಯಲು ಸಾಧ್ಯವಿಲ್ಲ.

ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಅಕ್ಟೋಬರ್ 3ರಂದು ಪ್ರತಿಭಟನೆ ನಿರತ ರೈತರ ಮೇಲೆ ನಡೆದ ಘೋರ ದಾಳಿಯು ಕಳೆದ 10 ತಿಂಗಳಿಂದ ನಡೆಯುತ್ತಿರುವ ರೈತ ಚಳವಳಿ ವಿರುದ್ಧ ಹಿಂಸೆಯ ಒಂದು ಹೊಸ ಮಟ್ಟವನ್ನು ಸೂಚಿಸುತ್ತದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಸಂಘಟಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲಿದ್ದ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಭೇಟಿಯನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದರು.

ಮೌರ್ಯ ಆಗಮಿಸಲಿದ್ದ ಸ್ಥಳದ ಸಮೀಪ ರೈತರು ಜಮಾಯಿಸಿದ್ದರು. ಆಗ ಅಜಯ್ ಮಿಶ್ರಾ ಹಾಗೂ ಅವರ ಮಗ ಆಶಿಶ್ ಮಿಶ್ರಾ ಇದ್ದ ವಾಹನದ ನೇತೃತ್ದದ ಕಾರುಗಳ ಸಾಲನ್ನು ಪ್ರತಿಭಟಿಸಲು ಸೇರಿದ್ದ ರೈತರ ಮೇಲೆ ಹರಿಸಿದಾಗ ನಾಲ್ಕು ರೈತರು ಮೃತಪಟ್ಟು ಅನೇಕರು ಗಾಯಗೊಂಡರು. ಗಾಯಾಳುಗಳಲ್ಲಿ ಕಿಸಾನ್ ನೇತಾರ ತೇಜಿಂದರ್ ಸಿಂಗ್ ವಿರ್ಕ್ ಕೂಡ ಸೇರಿದ್ದಾರೆ. ಮಗುಚಿ ಬಿದ್ದ ಕಾರಿನಲ್ಲಿದ್ದ ನಾಲ್ವರನ್ನು ಹೊಡೆಯಲಾಯಿತು, ಅವರು ಸತ್ತಿದ್ದಾರೆ. ಆಶಿಶ್ ಮಿಶ್ರಾ ಸಮೀಪದ ಹೊಲಗಳ ಮೂಲಕ ಪಲಾಯನ ಮಾಡಿದ್ದಕ್ಕೆ ಅಲ್ಲಿ ಹಾಜರಿದ್ದ ರೈತರು ಪುರಾವೆ ಒದಗಿಸಿದ್ದಾರೆ.

General Tyre 071021
ಜನರಲ್ ಡಾಯರ್ ಟಾಯರ್, ವ್ಯಂಗ್ಯಚಿತ್ರ ಕೃಪೆ: ದಿನೇಶ್ ಕುಕ್ಕುಜಡ್ಕ

ಕೃಷಿ ಕಾನೂನುಗಳು ಹಾಗೂ ಅದನ್ನು ವಿರೋಧಿಸಿ 10 ತಿಂಗಳಿಂದ ರೈತರು ನಡೆಸುತ್ತಿರುವ ಚಳವಳಿ ಬಗ್ಗೆ ನರೇಂದ್ರ ಮೋದಿ ಸರ್ಕಾರ ಕಠಿಣ ನಿಲುವು ತಳೆಯುತ್ತಿರುವ ಹಿನ್ನೆಲೆಯಲ್ಲಿ ಈ ಲಜ್ಜೆಗೇಡಿ ಹಲ್ಲೆ ನಡೆದಿದೆ. ಒಂದು ವಾರದ ಹಿಂದೆ ನಿಯತಕಾಲಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೃಷಿ ಕಾಯ್ದೆಗಳನ್ನು ಸಮರ್ಥಿಸಿಕೊಂಡಿದ್ದರು. ಅವನ್ನು ವಿರೋಧಿಸಿದ್ದಕ್ಕಾಗಿ ಪ್ರತಿಪಕ್ಷಗಳು ’ಬೌದ್ಧಿಕವಾಗಿ ಅಪ್ರಾಮಾಣಿಕರು’, ’ರಾಜಕೀಯ ವಂಚಕರು’ ಎಂದು ಆರೋಪಿಸಿದ್ದರು. ಅದಾದ ನಂತರ, ಹರ್ಯಾಣ ಮುಖ್ಯಮಂತ್ರಿ ಮನೋಹರ ಲಾಲ್ ಖಟ್ಟರ್ ಬಿಜೆಪಿ ಕಿಸಾನ್ ಮೋರ್ಚಾದಲ್ಲಿ ಮಾಡಿದ ಭಾಷಣದಲ್ಲಿ ಚಳವಳಿ ನಿರತ ರೈತರ ವಿರುದ್ಧ ದೊಣ್ಣೆಗಳನ್ನು ಕೈಗೆತ್ತಿಕೊಳ್ಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದರು. ರೈತರ ವಿರುದ್ಧ ’ಮುಯ್ಯಿಗೆ ಮುಯ್ಯಿ ಕೈಗೊಳ್ಳುವುದು ಅಗತ್ಯ ಎಂದು ಪ್ರಚೋದಿಸಿದ್ದರು.

ಲಖಿಂಪುರ್ ಖೇರಿ ಪ್ರಕರಣಕ್ಕೆ ಸಂಬಂಧಿಸಿ ಹೇಳುವುದಾದರೆ ಕೇಂದ್ರ ಮಂತ್ರಿ ಅಜಯ್ ಮಿಶ್ರಾ ಸೆಪ್ಟೆಂಬರ್ 25ರಂದು ಕೃಷಿ ಕಾನೂನುಗಳ ವಿರುದ್ಧ ಚಳವಳಿ ನಡೆಸುತ್ತಿರುವ ರೈತರ ವಿರುದ್ಧ ಹಿಂಸಾಚಾರದ ಬೆದರಿಕೆ ಹಾಕಿ ಪ್ರಚೋದನಕಾರಿ ಭಾಷಣ ಮಾಡಿದ್ದರು. ಅದಾದ ಕೆಲವು ದಿನಗಳ ನಂತರ ರೈತರ ಮೇಲೆ  ಹಲ್ಲೆ ನಡೆದಿದೆ. ಬಿಜೆಪಿ ನಾಯಕರು ಮತ್ತು ಮಂತ್ರಿಗಳ ಹೇಳಿಕೆಗಳು ರೈತರ ಚಳವಳಿಯ ತೀವ್ರತೆ ಮುಂದುವರೆಯುತ್ತಿರುವುದು ಹಾಗೂ ಅದನ್ನು ಛಿದ್ರಗೊಳಿಸಲು ತಮಗೆ ಆಗದಿರುವುದನ್ನು ನೋಡಿ  ಹತಾಶೆಯ ದನಿಯನ್ನು ಪಡೆಯುತ್ತಿವೆ.

ಇದಕ್ಕೂ ಮುಂಚೆ ಹರ್ಯಾಣದ ಕರ್ನಾಲ್‌ನ ಟೋಲ್ ಪ್ಲಾಜಾ ಬಳಿ ರೈತರ ಮೇಲೆ ಪೊಲೀಸರು ನಡೆಸಿದ ಕ್ರೂರ ಲಾಠಿ ಪ್ರಹಾರದ ಬಗ್ಗೆ  ಖಟ್ಟರ್ ವಿಷಾದ ವ್ಯಕ್ತಪಡಿಸಬೇಕಾಗಿ ಬಂದಿತ್ತು. ಆ ದಾಳಿಯಲ್ಲಿ ಒಬ್ಬ ರೈತ ಮೃತಪಟ್ಟಿದ್ದರು. ಅದಕ್ಕೂ ಮೊದಲು, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಆಯುಷ್ ಸಿನ್ಹಾ ’ತಡೆಬೇಲಿ ಮುರಿಯಲು ಯತ್ನಿಸುವ ರೈತರ ತಲೆ ಒಡೆಯಿರಿ’ ಎಂದು ಪೊಲೀಸರಿಗೆ ಕರೆ ನೀಡಿದ್ದರು. ಈ ಘಟನೆಯ ನಂತರ, ಸಂಯುಕ್ತ ಕಿಸಾನ್ ಮೋರ್ಚಾ ನಾಯಕತ್ವದಲ್ಲಿ ರೈತರು ಕರ್ನಾಲ್‌ನಲ್ಲಿ ಮಿನಿ-ಸೆಕ್ರಟಾರಿಯೇಟ್‌ಗೆ ಮುತ್ತಿಗೆ ಹಾಕಿದ್ದರು. ಅದಾದ ನಾಲ್ಕು ದಿನಗಳ ನಂತರ ಮಣಿದ ಆಡಳಿತ ರೈತರ ಪ್ರಮುಖ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿತ್ತು. ದೌರ್ಜನ್ಯದ ಬಗ್ಗೆ ನ್ಯಾಯಾಂಗ ತನಿಖೆ, ಮೃತ ರೈತನ ಕುಟುಂಬಕ್ಕೆ ಪರಿಹಾರ ಹಾಗೂ ಒಂದು ಉದ್ಯೋಗ ಹಾಗೂ ದರ್ಪದ ಅಧಿಕಾರಿ ಸಿನ್ಹಾರನ್ನು ರಜೆ ಮೇಲೆ ಕಳಿಸಬೇಕೆಂಬ ಬೇಡಿಕೆಗಳ್ನು ಸರ್ಕಾರ ಒಪ್ಪಿದೆ.

Lakhimpur-Kheri-UP031021ಲಖಿಂಪುರ್ ಖೇರಿಯಲ್ಲಿ ಅಮಾನುಷ ಕೃತ್ಯ ನಡೆದ ನಂತರ ಸ್ಥಳದಲ್ಲಿ ಸಾವಿರಾರು ರೈತರು ನೆರೆದಿದ್ದರು. ಕಿಸಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ ನಂತರ ಉತ್ತರ ಪ್ರದೇಶ ಆಡಳಿತ ಮಣಿದು ಕೆಲವು ಪ್ರಮುಖ ಬೇಡಿಕೆಗಳ ಈಡೇರಿಕೆಗೆ ಒಪ್ಪಿದೆ. ಕೇಂದ್ರ ಸಚಿವರ ಮಗನ ಹೆಸರು ನಮೂದಿಸಿ ಎಫ್‌ಐಆರ್ ದಾಖಲು, ಎಫ್‌ಐಆರ್ ಮೇಲೆ ಕ್ರಮ ಕೈಗೊಳ್ಳಲು ಆಡಳಿತ ಏಳು ದಿನ ಕಾಲಾವಕಾಶ ಕೋರಿಕೆ, ಮೃತ ರೈತರ ಕುಟುಂಬಗಳಿಗೆ ತಲಾ 45 ಲಕ್ಷ ರೂಪಾಯಿ ಹಾಗೂ ಗಾಯಾಳು ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಪರಿಹಾರದ ಹಕ್ಕೊತ್ತಾಯಗಳಿಗೆ ಸರ್ಕಾರ ಒಪ್ಪಿದೆ. ಘಟನೆ ಬಗ್ಗೆ ಹೈಕೋರ್ಟ್‌ನ  ನಿವೃತ್ತ ನ್ಯಾಯಮೂರ್ತಿ ಯವರಿಂದ ವಿಚಾರಣೆ ನಡೆಸುವುದಾಗಿಯೂ ಕೂಡ ಸರ್ಕಾರ ಪ್ರಕಟಿಸಿದೆ. ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

ಪ್ರತಿ ಬಾರಿಯೂ ಸರ್ಕಾರಿ ಯಂತ್ರವು ಚಳವಳಿಗಳನ್ನು ದಮನಿಸಲು ಪೊಲೀಸ್ ಅಥವಾ ಇತರ ವಿಧಾನಗಳನ್ನು ಬಳಸುತ್ತಾ ಬಂದಿದೆ. ಆದರೆ ರೈತರು ಅದನ್ನು ಹಿಮ್ಮೆಟ್ಟಿಸುತ್ತಿದ್ದಾರೆ. ದೆಹಲಿ ಮತ್ತು ಸುತ್ತಮುತ್ತ ಜನವರಿ 26ರಂದು ನಡೆದ ಘಟನೆಗಳ ನಂತರ ಈ ನಮೂನೆ ಸಾಮಾನ್ಯವಾಗಿ ಬಿಟ್ಟಿದೆ.

ಆದಿತ್ಯನಾಥ್ ಆಡಳಿತ ದಬ್ಬಾಳಿಕೆ ಮತ್ತು ಪೊಲೀಸ್ ದೌರ್ಜನ್ಯಕ್ಕೆ ಬಹಳ ಕುಖ್ಯಾತವಾಗಿದೆ. ಘಟನೆಯ ಮರುದಿನ ಲಖಿಂಪುರ್ ಖೇರಿಗೆ ತೆರಳಲು ಬಯಸಿದ ಪ್ರತಿಪಕ್ಷಗಳ ಎಲ್ಲ ನಾಯಕರನ್ನು ತಡೆದು ಬಂಧಿಸಲಾಗಿದೆ. ಉತರ ಪ್ರದೇಶದ ಅನೇಕ ಕಡೆ, ರೈತರ ಹತ್ಯಾಕಾಂಡ ಪ್ರತಿಭಟಿಸಿ ಶಾಂತಿಯುತ ಪ್ರತಿಭಟನೆ ನಡೆಸಲು ಕೂಡ ಅವಕಾಶ ನೀಡಲಾಗಿಲ್ಲ.

Lakhimpur & monkeys 061021
ಪ್ರಧಾನಿಯಾಗಲೀ, ಗೃಹ ಸಚಿವರಾಗಲೀ ರೈತರ ಕೊಲೆಗಳನ್ನು ಖಂಡಿಸುವ ಗೋಜಿಗೂ ಹೋಗಿಲ್ಲ. ಆ ಸೌಜನ್ಯವೂ ಅವರಿಗಿಲ್ಲ. ವ್ಯಂಗ್ಯಚಿತ್ರ: ಅಲೋಕ್ ನಿರಂತರ್

ಕೇಂದ್ರದ ಒಬ್ಬ ರಾಜ್ಯ ಸಚಿವ, ಅದರಲ್ಲೂ ಗೃಹ ಖಾತೆಯ ಮಂತ್ರಿ, ಈ ರೀತಿಯ ಹಿಂಸಾತ್ಮಕ ಘಟನೆಗೆ ಪ್ರಚೋದಿಸಲು ಕಾರಣವಾದರೆ, ಅದರಲ್ಲೂ ಘಟನೆಯಲ್ಲಿ ಸ್ವತಃ ಅವರ ಮಗ ಒಳಗೊಂಡಿರುವಾಗ, ಸಚಿವ ಸ್ಥಾನದಿಂದ ಅವರನ್ನು ತೆಗೆದು ಹಾಕುವುದು ಪ್ರಧಾನ ಮಂತ್ರಿ ಹಾಗೂ ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿದೆ. ಆದರೆ ಇನ್ನೂ ಹಾಗೆ ಮಾಡಿಲ್ಲ. ಪ್ರಧಾನಿಯಾಗಲೀ ಕೇಂದ್ರದ ಗೃಹ ಸಚಿವರಾಗಲೀ ರೈತರ ಕೊಲೆಗಳನ್ನು ಖಂಡಿಸುವ ಗೋಜಿಗೂ ಹೋಗಿಲ್ಲ. ಆ ಸೌಜನ್ಯವೂ ಅವರಿಗಿಲ್ಲ. ಘಟನೆಯ ಎರಡು ದಿನದ  ನಂತರ, ಅಂದರೆ ಅಕ್ಟೋಬರ್ 5ರಂದು ಲಖನೌಗೆ ಭೇಟಿ ನೀಡಿದ ಪ್ರಧಾನಿ ಮೋದಿ ಈ ಪ್ರಕರಣದ ಪ್ರಸ್ತಾಪವನ್ನೂ ಮಾಡಿಲ್ಲ.

ಲಖಿಂಪುರ್ ಖೇರಿಯಲ್ಲಿ ಪ್ರತಿಭಟನಾ ನಿರತ ರೈತರ ಮೇಲೆ ನಡೆಸಲಾದ ಹಿಂಸಾಚಾರ ಆಳುವ ಬಿಜೆಪಿಯ ಒಂದು ಹತಾಶ ಕೃತ್ಯ. ಇಂಥ ಹಿಂಸಾಚಾರಗಳಿಂದ ರೈತರ ಹೋರಾಟವನ್ನು ಬಗ್ಗುಬಡಿಯಲು ಸಾಧ್ಯವಿಲ್ಲ.

ಅನು: ವಿಶ್ವ

Leave a Reply

Your email address will not be published. Required fields are marked *