ತ್ರಿಪುರಾ: ಮತದಾನದಲ್ಲಿ ಮೋಸಗಳು ನಡೆದಲ್ಲಿ ಚುನಾವಣೆಗಳನ್ನು ರದ್ದುಪಡಿಸಬೇಕು, ಪ್ರಜಾಪ್ರಭುತ್ವವವನ್ನು ಮತ್ತೆ ನೆಲೆಗೊಳಿಸಬೇಕು

ನವೆಂಬರ್ 25ರಂದು ತ್ರಿಪುರಾದಲ್ಲಿ ಅಗರ್ತಲಾ ಮಹಾನಗರ ಪಾಲಿಕೆ ಮತ್ತು 19 ನಗರಸಭೆಗಳಿಗೆ ನಡೆದಿರುವ ಚುನಾವಣೆಗಳನ್ನು ಆಳುವ ಬಿಜೆಪಿ ಒಂದು ಪ್ರಹಸನವಾಗಿ ಪರಿವರ್ತಿಸಿದೆ ಎಂದು ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್ ಬ್ಯುರೊ ದೂಷಿಸಿದೆ.

ಮತದಾನದ ಹಿಂದಿನ ದಿನ, ಅಗರ್ತಲಾ ಮತ್ತು ಇತರ ಪಟ್ಟಣಗಳಲ್ಲಿ ಬಿಜೆಪಿ ಮಂದಿ ಮನೆ-ಮನೆಗೆ ಹೋಗಿ ಸಿಪಿಐ(ಎಂ) ಅಭ್ಯರ್ಥಿಗಳನ್ನು, ಪೋಲಿಂಗ್ ಏಜೆಂಟರನ್ನು ಮತ್ತು ಸ್ಥಳೀಯ ಮುಖಂಡರನ್ನು ಬೆದರಿಸಲಾರಂಭಿಸಿದರು, ಮತದಾನದ ದಿನ ಮನೆಬಿಟ್ಟು ಹೊರಬರದಂತೆ ಎಚ್ಚರಿಕೆ ನೀಡಿದರು. ದೈಹಿಕ ಹಿಂಸಾಚಾರ ಮತ್ತು ಅವರ ಕುಟುಂಬಗಳನ್ನು ಮನೆಗಳಿಂದ ಹೊಡೆದೋಡಿಸುವ ಬೆದರಿಕೆ ಹಾಕಿದರು.

ಮತದಾನ ದಿನ, ಅಗರ್ತಲಾ, ಧರ್ಮನಗರ. ಖೊವಾಯ್, ಬೆಲೊನಿಯ ಮತ್ತು ಮೆಲಾಘರ್ ನಲ್ಲಿ ಬಿಜೆಪಿ ಗೂಂಡಾಗಳಿಂದ ವ್ಯಾಪಕ ಪ್ರಮಾಣದಲ್ಲಿ ಮತಗಟ್ಟೆ ಅಪಹರಣ ನಡೆಯಿತು, ಹಲವೆಡೆಗಳಲ್ಲಿ ಮತದಾರರನ್ನು ದೈಹಿಕವಾಗಿ ತಡೆಯಲಾಯಿತು. ಅಗರ್ತಲಾ ಪಟ್ಟಣದಲ್ಲಿ ಎಡಪಕ್ಷಗಳ ಪೋಲಿಂಗ್ ಏಜೆಂಟರನ್ನು ಥಳಿಸಿ ಮತಗಟ್ಟೆಗಳಿಂದ ಹೊರಗಟ್ಟಲಾಯಿತು. ಮತದಾನದ ಆರಂಭದಲ್ಲೇ ಮತಗಟ್ಟೆಗಳನ್ನು ವಶಪಡಿಸಿಕೊಂಡರು, ಜನರು ಮತದಾನ ಮಾಡದಂತೆ ತಡೆದರು. ಇದಕ್ಕೆ ಮೊದಲು, ಏಳು ನಗರಸಭೆಗಳಲ್ಲಿ ಪ್ರತಿಪಕ್ಷಗಳ ಅಭ್ಯರ್ಥಿಗಳು ಮತಪತ್ರಗಳನ್ನು ಸಲ್ಲಿಸದಂತೆ ತಡೆಯಲಾಗಿತ್ತು. ಅದರಿಂದಾಗಿ, ಮತಪತ್ರ ಹಿಂತೆಗೆದುಕೊಳ್ಳುವ ದಿನದ ನಂತರ ಬಿಜೆಪಿ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಗೊಂಡರು.

ಸುಪ್ರಿಂ ಕೋರ್ಟ್ ಚುನಾವಣಾ ಪ್ರಕ್ರಿಯೆಯನ್ನು ಸುಭದ್ರಗೊಳಿಸಲು ಸಾಕಷ್ಟು ಪೊಲೀಸ್ ಪಡೆಗಳನ್ನು ನೆಲೆಗೊಳಿಸಬೇಕು ಎಂದು ನೀಡಿದ ಆದೇಶದ ಹೊರತಾಗಿಯೂ, ಚುನಾವಣಾ ವ್ಯವಸ್ಥೆಯ ಮೇಲೆ ಮತ್ತು ಮತದಾನದ ಹಕ್ಕಿನ ಮೇಲೆ ಈ ಲಜ್ಜಾಹೀನ ದಾಳಿಗಳು ನಡೆದಿವೆ ಎಂದಿರುವ ಸಿಪಿಐ(ಎಂ) ಪೊಲಿಟ್ ಬ್ಯುರೊ ಬಿಜೆಪಿ ರಾಜ್ಯ ಸರಕಾರ ಸುಪ್ರಿಂ ಕೋರ್ಟ್ ನೀಡಿದ ಎಲ್ಲ ಆದೇಶಗಳ ನಗ್ನ ಉಲ್ಲಂಘನೆ ನಡೆಸಿದೆ, ಪೊಲೀಸ್ ಮತ್ತು ಕೇಂದ್ರೀಯ ಪೊಲೀಸ್ ಈ ಚುನಾವಣಾ ಮೋಸಕ್ಕೆ ಮೂಕಪ್ರೇಕ್ಷಕರಾಗಿ ಇರುವಂತೆ ಮಾಡಿದೆ ಎಂದು ಹೇಳಿದೆ.

ತ್ರಿಪುರಾದ ಎಡರಂಗ ಅಗರ್ತಲಾ ಮಹಾನಗರಪಾಲಿಕೆ ಮತ್ತು ಧರ್ಮನಗರ, ಖೊವಾಯ್, ಬೆಲೊನಿಯ ಮತ್ತು ಮೆಲಘರ್ ನಗರ ಸಭೆಗಳಿಗೆ ನಡೆದ ಮತದಾನಗಳನ್ನು ರದ್ದುಗೊಳಿಸುವ ಆದೇಶ ಹೊರಡಿಸಬೇಕು ಮತ್ತು ಪಾನಿಸಾಗರ್, ಸಬ್ರೂಮ್, ಸೊನಾಮುರ, ಕುಮಾರಘಾಟ್, ಅರ‍್ಪುರ್ ಮತ್ತಿತರ ನಗರಸಭೆಗಳಲ್ಲಿ ಹಲವಾರು ವಾರ್ಡುಗಳಲ್ಲಿ ಮರುಮತದಾನ ನಡೆಸಬೇಕು ಎಂದು ಆಗ್ರಹಿಸಿದೆ.

ತ್ರಿಪುರಾದ ಎಡರಂಗದ ಈ ಆಗ್ರಹವನ್ನು ಅನುಮೋದಿಸುತ್ತ ಸಿಪಿಐ(ಎಂ) ಪೊಲಿಟ್‌ಬ್ಯುರೊ, ಮುಕ್ತ ಮತ್ತು ನ್ಯಾಯಯುತ ಮತದಾನ ನಡೆಯುವಂತೆ ಪ್ರಯತ್ನಿಸಲು ಮತ್ತು ಖಾತ್ರಿಪಡಿಸಲು ಸುಪ್ರಿಂ ಕೋರ್ಟ್ ಮಧ್ಯಪ್ರವೇಶಿಸಿರುವುದರಿಂದ, ಈಗ ಅದು ತ್ರಿಪುರಾದಲ್ಲಿ ಪ್ರಜಾಪ್ರಭುತ್ವವನ್ನು ಮತ್ತು ನಾಗರಿಕರ ಮತದಾನದ ಹಕ್ಕನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Leave a Reply

Your email address will not be published. Required fields are marked *