ಕರ್ನಾಟಕದ ಆರ್ಥಿಕ ಪರಿಸ್ಥಿತಿ 2018-21

cpim rajya sammelanaಭಾರತದ ಪ್ರಮುಖ ಎಡಪಕ್ಷ ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ದ 23ನೇ ಮಹಾಧಿವೇಶನ ಎಪ್ರಿಲ್ ತಿಂಗಳಲ್ಲಿ ಕೇರಳದ ಕಣ್ಣೂರಿನಲ್ಲಿ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಕರ್ನಾಟಕ ರಾಜ್ಯ ಸಮ್ಮೇಳನ ಜನವರಿ 2 ರಿಂದ 4 ರ ವರೆಗೆ ಗಂಗಾವತಿಯಲ್ಲಿ ನಡೆಯಲಿದೆ. ಕರ್ನಾಟಕದ ಜನತೆಯ, ಅದರಲ್ಲೂ ಕಾರ್ಮಿಕರ, ರೈತರ ಮತ್ತು ಇತರ ದುಡಿಯುವ ಜನವಿಭಾಗಗಳ ಹಿತರಕ್ಷಣೆಯಲ್ಲಿ ಕಳೆದ ಮೂರು ವರ್ಷಗಳ ಅನುಭವಗಳು ಮತ್ತು ಅದರ ಬೆಳಕಿನಲ್ಲಿ ಮುನ್ನಡೆಯ ದಾರಿಯನ್ನು ರೂಪಿಸುವುದು ಈ ಸಮ್ಮೇಳನದ ಪ್ರಮುಖ ಕಾರ್ಯಸೂಚಿ. ದುಡಿಯುವ ಜನವಿಭಾಗಗಳ ನಡುವೆ ಕೆಲಸ ಮಾಡುತ್ತಿರುವವರ ಪ್ರತಿನಿಧಿಗಳು ಇದನ್ನು ಆಮೂಲಾಗ್ರವಾಗಿ ಚರ್ಚಿಸಲಿದ್ದಾರೆ. ಇದಕ್ಕಾಗಿ ರಾಜ್ಯ ಮುಖಂಡತ್ವ ಸಿದ್ಧಪಡಿಸಿರುವ ಕರಡು ವರದಿಯ ಕೆಲವು ಅಂಶಗಳನ್ನು ಇಲ್ಲಿ ನಮ್ಮ ಓದುಗರಿಗಾಗಿ ಇಲ್ಲಿ ಪ್ರಕಟಿಸುತ್ತಿದ್ದೇವೆ.

2016-17 ರಲ್ಲಿ 13.3 ಶೇಕಡವಾರು ಬೆಳೆವಣಿಗೆ ದರ ಸಾಧಿಸಿದ್ದ ಸ್ಥಿರ ಬೆಲೆಗಳ ಆಧಾರಿತ ರಾಜ್ಯದ ಒಟ್ಟಾರೆ ಆಂತರಿಕ ಉತ್ಪನ್ನವು (GSDP) ಆನಂತರ ಪ್ರತಿ ವರ್ಷವು ಇಳಿಮುಖವಾಗಿದೆ. 2020-21 ರಲ್ಲಿ ಭಾರತ ಸರ್ಕಾರದ ಮುನ್ಸೂಚನೆ ಅಂದಾಜಿನಂತೆ-2.6 ಶೇಕಡವಾರು ಋಣಾತ್ಮಕವಾಗಿದೆ. ರಾಷ್ಟ್ರೀಯ ಆಂತರಿಕ ಉತ್ಪನ್ನ ಬೆಳೆವಣಿಗೆ ದರಕ್ಕಿಂತ ಸದಾ ಹೆಚ್ಚಿರುತ್ತಿದ್ದ ರಾಜ್ಯದ ಆಂತರಿಕ ಉತ್ಪನ್ನ ದರವು ಕೋವಿಡ್ ಲಾಕ್ಡೌನ್ ಕಾಲದಲ್ಲೂ ರಾಷ್ಟ್ರೀಯ ಉತ್ಪನ್ನ ಬೆಳವಣಿಗೆ ದರ (-7.7) ಕುಸಿದಿರುವಷ್ಟು ಪ್ರಮಾಣದಲ್ಲಿ ಕುಸಿತ ಕಂಡಿಲ್ಲ. (ಕೋಷ್ಟಕ-1)

Kostaka 01

ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ನೋಟು ರದ್ಧತಿ, ಅವೈಜ್ಞಾಕ ಜಿಎಸ್‌ಟಿ ಜಾರಿ ಮುಂತಾದ ದಿವಾಳಿಕೋರ ಆರ್ಥಿಕ ನೀತಿಗಳು ಮೇಲಿನ ಆಂತರಿಕ ಉತ್ಪನ್ನ ದರದ ನಿರಂತರ ಕುಸಿತಕ್ಕೆ ಕಾರಣವಾಗಿದೆ. ಅಂತೆಯೇ ಕೋವಿಡ್ ಸಾಂಕ್ರಾಮಿಕ ಮತ್ತದರ ನಿರ್ವಹಣೆಯಲ್ಲಿ ಕೇಂದ್ರ ರಾಜ್ಯ ಬಿಜೆಪಿ ಸರ್ಕಾರಗಳ ದುರಾಡಳಿತ, ಲಾಕ್ಡೌನ್ ಸಂತಸ್ತರಿಗೆ ಪರಿಹಾರ ಡುವಲ್ಲಿ ತೋರಿದ ನಿರ್ಲಕ್ಷ್ಯ, ನೇರ ನಗದು ವರ್ಗಾವಣೆ, ತಲಾ ೧೦ ಕೆಜಿ ಉಚಿತ ಆಹಾರ ಧಾನ್ಯ ವಿತರಣೆ, ನಗರ ಪ್ರದೇಶಗಳಿಗೂ ಉದ್ಯೋಗ ಖಾತ್ರಿ ವಿಸ್ತರಣೆ, ೨೦೦ ದಿನಗಳ ಉದ್ಯೋಗ ಖಾತ್ರಿ ಕೆಲಸದ ದಿನಗಳ ಹೆಚ್ಚಳದೊಂದಿಗೆ ಕೂಲಿ ಹೆಚ್ಚಳದ ಪರ್ಯಾಯ ಕ್ರಮವಹಿಸಲು ಬಿಜೆಪಿ ಸರ್ಕಾರದ ಕ್ರಿಮಿನಲ್ ನಿರಾಕರಣೆಯು ಇಂತಹ ಆಂತರಿಕ ಉತ್ಪನ್ನ ಬೆಳವಣಿಗೆ ದರ ಕುಸಿತಕ್ಕೆ ನೇರ ಕಾರಣವಾಗಿದೆ. ಋಣಾತ್ಮಕ ಬೆಳವಣಿಗೆ ದರವು ಕೇವಲ ಮುನ್ಸೂಚನ ಅಂದಾಜಾಗಿದ್ದು, ವಾಸ್ತವು ಮತ್ತಷ್ಟು ತೀವ್ರವಾಗಿದೆ, ಮಾತ್ರವಲ್ಲದೆ ಕೈಗಾರಿಕೆ, ವ್ಯಾಪಾರ, ವಾಣಿಜ್ಯ, ಕೃಷಿ ಎಲ್ಲವು ತೀವ್ರ ಹೊಡೆತಕ್ಕೆ ಸಿಲುಕಿವೆ. ಅದರ ನೇರ ಪರಿಣಾಮವು ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲುಂಟಾಗಿದೆ. ಅದರ ನಿಖರ ಮಾಹಿತಿ ಅಂಕಿ ಅಂಶಗಳಲ್ಲಿ ಇನ್ನು ಮುಂದಿನ ವರ್ಷಗಳಲ್ಲಿ ತೆರೆದುಕೊಳ್ಳಬೇಕಿದೆ.

ಈ ಕಾಲಾವಧಿಯಲ್ಲಿ ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಕೋವಿಡ್-೧೯, ಲಾಕ್ಡೌನ್ ಮಗದೊಂದೆಡೆ ಬಿಜೆಪಿ ಸರ್ಕಾರಗಳ ದಿವಾಳಿಕೋರ ನವಉದಾರವಾದಿ ಆರ್ಥಿಕ ನೀತಿಗಳು ರಾಜ್ಯದ ಆರ್ಥಿಕತೆಯನ್ನು ಋಣಾತ್ಮಕ ಬೆಳವಣಿಗೆಗೆ ದೂಡಿವೆ.

ರಾಜ್ಯದ ಸ್ಥಿರ ಬೆಲೆಗಳಲ್ಲಿ ಒಟ್ಟು ಆಂತರಿಕ ಉತ್ಪನ್ನದ ಕೃಷಿ ಮತ್ತು ಅವಲಂಬಿತ ವಲಯದ ಬೆಳವಣಿಗೆ ದರ ೨೦೧೯-೨೦ರಲ್ಲಿ ೧೨.೩ ಶೇಕಡದಿಂದ ೨೦೨೦-೨೧ ರಲ್ಲಿ ೬.೪ ಶೇಕಡಕ್ಕೆ ಇಳಿಯಲಿದೆ, ಕೈಗಾರಿಕಾ ವಲಯದ ದರವು ೦.೧ ಶೇಕಡದಿಂದ (-)೫.೧ ಶೇಕಡಕ್ಕೆ ಕುಸಿಯಲಿದೆ. ಸೇವಾ ವಲಯದ ಬೆಳವಣಿಗೆ ದರವು ೬.೭ ರಿಂದ (-) ೩.೧ ಶೇಕಡಕ್ಕೆ ಕುಸಿಯಲಿದೆ. ಪರಿಣಾಮವಾಗಿ ರಾಜ್ಯ ಆಂತರಿಕ ಉತ್ಪನ್ನ ದರವು ೫ ಶೇಕಡದಿಂದ (-)೨.೬ ಶೇಕಡಕ್ಕೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ.

ಪ್ರಸಕ್ತ ಬೆಲೆಗಳಲ್ಲಿ ರಾಜ್ಯದ ಆಂತರಿಕ ಉತ್ಪನ್ನಕ್ಕೆ ೨೦೧೯-೨೦ ರಲ್ಲಿ ೧೨.೭೯ ಶೇಕಡ ಕೊಡುಗೆ ನೀಡಿರುವ ಕೃಷಿ ವಲಯವು ೨೦೨೦-೨೧ ರಲ್ಲಿ ೧೩.೬೮, ಕೈಗಾರಿಕಾ ವಲಯವು ೨೧.೦೬ ರಿಂದ ೧೯.೭೯ ಹಾಗೂ ಸೇವಾ ವಲಯವು ೬೬.೧೬ ಶೇಕಡದಿಂದ ೬೬.೫೩ ಶೇಕಡ ಕೊಡುಗೆ ನೀಡಲಿದೆ ಎಂದು ಅಂದಾಜಿಸಲಾಗಿದೆ.(ಕೋಷ್ಟಕ-೨)

Kostaka 02

ರಾಜ್ಯಗಳ ಆದಾಯದ ಸಾಲಿನಲ್ಲಿ ರಾಜ್ಯವು ತಮಿಳುನಾಡು ಮತ್ತು ಉತ್ತರಪ್ರದೇಶ ರಾಜ್ಯಗಳ ನಂತರ ಮೂರನೇ ಸ್ಥಾನದಲ್ಲಿದ್ದರೆ, ತಲಾ ಆದಾಯದ ಲೆಕ್ಕದಲ್ಲಿ ಗೋವಾ, ಸಿಕ್ಕಿಂ, ದೆಹಲಿ, ಹರಿಯಾಣ, ತೆಲಂಗಾಣದ ನಂತರ ಆರನೇ ಸ್ಥಾನದಲ್ಲಿದೆ. (ಕೋಷ್ಟಕ-೩)

Kostaka 03

ಜಿಲ್ಲಾ ಆದಾಯ ಮತ್ತು ತಲಾ ಆದಾಯದ ಆಧಾರದಲ್ಲಿ ರೂ.೪,೯೬,೨೦೮ ತಲಾ ಆದಾಯದೊಂದಿಗೆ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದ್ದರೆ, ರೂ.೩,೫೧,೨೭೧ ದೊಂದಿಗೆ ದಕ್ಷಿಣ ಕನ್ನಡ, ರೂ.೨,೮೪,೫೨೧ ದಂದಿಗೆ ಉಡುಪಿ ಮತ್ತು  ರೂ.೨,೦೫,೩೬೮ ದಂದಿಗೆ ಚಿಕ್ಕಮಗಳೂರು ನಂತರದ ಸ್ಥಾನಗಳಲ್ಲಿವೆ. ಕೊನೆಯ ಸ್ಥಾನದಲ್ಲಿ ರೂ.೯೭,೩೫೩ ದೊಂದಿಗೆ ಯಾದಗಿರಿ ಜಿಲ್ಲೆಯಿದೆ. ತಲಾ ಆದಾಯದಲ್ಲಿ ಬೆಂಗಳೂರು ವಿಭಾಗ ಮೊದಲ ಸ್ಥಾನದಲ್ಲಿದ್ದರೆ, ಮೈಸೂರು ಮತ್ತು ಬೆಳಗಾವಿ ವಿಭಾಗಗಳು ನಂತರದ ೨ನೇ ಮತ್ತು ೩ನೇ ಸ್ಥಾನದಲ್ಲಿವೆ. ಕಲ್ಬುರಗಿ ವಿಭಾಗವು ಕೊನೆಯ ನಾಲ್ಕನೇ ಸ್ಥಾನದಲ್ಲಿದೆ.

೨೦೧೯-೨೦ರಲ್ಲಿ ಪರಿಷ್ಕೃತ ಅಂದಾಜಿನಂತೆ ೩,೨೫,೯೬೯ ಕೋಟಿ ರೂಗಳಷ್ಟಿದ್ದ ಸಾಲ, ೨೦೨೦-೨೧ ರಲ್ಲಿ ಆಯವ್ಯಯ ಅಂದಾಜಿನಂತೆ ೩,೬೮,೬೯೨ ಕೋಟಿ ರೂಗಳಿಗೆ ಹೆಚ್ಚಾಗಲಿದೆ. ೨೦೧೫-೧೬ ರಲ್ಲಿ ೧,೮೩,೩೨೦ ಕೋಟಿ ರೂಗಳಿದ್ದ ರಾಜ್ಯದ ಸಾಲವು ೨೦೧೬-೧೭ ರಲ್ಲಿ ರೂ.೨,೨೧,೩೨೦ ಕೋಟಿಗೆ ಮತ್ತು ೨೦೧೭-೧೮ ರಲ್ಲಿ ರೂ.೨,೪೬,೨೩೨ ಕೋಟಿಗೆ ಹಾಗೂ ೨೦೧೮-೧೯ ರಲ್ಲಿ ರೂ.೨,೮೫,೨೩೮ ಕೋಟಿ ರೂಗಳಿಗೆ ಹೆಚ್ಚಳವಾಗಿದೆ. ರಾಜ್ಯ ಬಿಜೆಪಿ ಸರ್ಕಾರವು ೨೦೧೯-೨೦ ರಲ್ಲಿ ೪೮,೪೯೦.೦೧ ಕೋಟಿ ರೂ ಮತ್ತು ೨೦೨೦-೨೧ ರಲ್ಲಿ ೫೨,೯೧೭.೫೦ ಕೋಟಿ ರೂಗಳ ಸಾಲ ಮಾಡಿದೆ.

ಕೇಂದ್ರ ತೆರಿಗೆಗಳಲ್ಲಿನ ರಾಜ್ಯದ ಪಾಲು ೨,೩೨೮ ಕೋಟಿ ರೂಗಳಷ್ಟು ಅಂದರೆ ೭.೫೩ ಶೇಕಡ ಇಳಿಕೆಯಾಗುವ ನಿರೀಕ್ಷೆಯಿದೆ. ಸರಕು ಮತ್ತು ಸೇವಾ ತೆರಿಗೆ ಹೊರತುಪಡಿಸಿ ೨೦೧೯-೨೦ ರಲ್ಲಿ ೧೯,೮೪೦ ಕೋಟಿ ರೂಗಳಷ್ಟಿರುವ ಕೇಂದ್ರದ ಅನುದಾನವು ೨೦೨೦-೨೧ ರಲ್ಲಿ ೧೫,೪೫೪.೪೬ ಕೋಟಿ ರೂಗಳಿಗೆ ಇಳಿಕೆಯಾಗಿದೆ. ಅಂದರೆ ೪,೩೮೫.೫೪ ಕೋಟಿ ರೂಗಳ ಅನುದಾನವನ್ನು ಕೇಂದ್ರ ಬಿಜೆಪಿ ಸರ್ಕಾರವು ಕಡಿಮೆ ಮಾಡಿದೆ. ಒಟ್ಟಾರೆ ಕೇಂದ್ರೀಯ ಅನುದಾನವು ೨೦೧೯-೨೦ ರಲ್ಲಿ ರೂ.೩೭,೦೮೮.೮೩ ಕೋಟಿ ಇದ್ದದ್ದು ೨೦೨೦-೨೧ ರಲ್ಲಿ ರೂ.೩೧,೫೭೦.೪೬ ಕೋಟಿಗಳಿಗೆ (ಶೇಕಡ ೧೪.೮೭ ರಷ್ಟು) ಇಳಿಕೆಯಾಗಿದೆ. ಅಂತೆಯೇ ೨೦೧೯-೨೦ ಕ್ಕೆ ಹೋಲಿಸಿದಾಗ ೨೦೨೦-೨೧ ರಲ್ಲಿ ರಾಜಸ್ವ ಜಮೆಯಲ್ಲಿ ಕೇಂದ್ರಿಯ ಅನುದಾನವು ೨೦.೯೨ ಶೇಕಡದಿಂದ ೧೭.೫೫ಕ್ಕೆ ಇಳಿಕೆಯಾಗಿದೆ. ಕೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ರಾಜ್ಯಕ್ಕೆ ಅನುದಾನವನ್ನು ನಿರಂತರವಾಗಿ ಕಡಿಮೆ ಮಾಡುತ್ತಿದೆ.

Leave a Reply

Your email address will not be published. Required fields are marked *