ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳು: 2018-21- ಭಾಗ-1

cpim rajya sammelanaಮಾಧ್ಯಮಗಳು ಆಳುವವರ ಬೇಟೆನಾಯಿಗಳಾದ ಅವಧಿ

ಸಿಪಿಐ(ಎಂ) ಕರ್ನಾಟಕ ೨೩ನೆಯ ರಾಜ್ಯ ಸಮ್ಮೇಳನದ ಸಂದರ್ಭದಲ್ಲಿ ೨೨ನೆಯ ಸಮ್ಮೇಳನದ ನಂತರದ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿನ ಬೆಳವಣಿಗೆಗಳ ಕುರಿತ ಲೇಖನಗಳ ಸರಣಿಯ ಭಾಗವಾಗಿ, ಈ ಅವಧಿಯ ಮಾಧ್ಯಮ ಕ್ಷೇತ್ರದ ಬೆಳವಣಿಗೆಗಳನ್ನು ಇಲ್ಲಿಕೊಡಲಾಗಿದೆ. ಈ ಭಾಗ-೧ ರಲ್ಲಿ ಬಹುಪಾಲು ಮಾಧ್ಯಮಗಳು ಆಳುವವರ ಬೇಟೆನಾಯಿಗಳಾದ ಪ್ರಮುಖ ಬೆಳವಣಿಗೆ ಮತ್ತಿತರ ಬೆಳವಣಿಗೆಗಳ ನಿರೂಪಣೆಯಿದೆ. ಇಲ್ಲಿ ಕೊನೆಯಲ್ಲಿ ನಿರೂಪಿಸಲಾಗಿರುವ ವೆಬ್ ಸಂಪರ್ಕ ವಿಸ್ತಾರದ ಪರಿಣಾಮವಾಗಿ ಮಾಧ್ಯಮ ಕ್ಷೇತ್ರದಲ್ಲಿ ಆಗಿರುವ ಮಹತ್ತರ ಬದಲಾವಣೆಗಳ ನಿರೂಪಣೆ ಭಾಗ-೨ ರಲ್ಲಿ ಇರುತ್ತದೆ.

ವಸಂತರಾಜ ಎನ್.ಕೆ.

೨೦೧೪ರ ಚುನಾವಣೆಯಲ್ಲಿ ಮತ್ತು ನಂತರದ ಮೂರು ವರ್ಷಗಳ (೨೦೧೪-೧೭) ಅವಧಿಯಲ್ಲಿ ಮೋದಿ ಸರಕಾರದ ಮತ್ತು ಬಿಜೆಪಿಯ ಪ್ರಜಾಪ್ರಭುತ್ವ-ವಿರೋಧಿ, ಜನ-ವಿರೋಧಿ ನಡೆಗಳನ್ನು ಕಾರ್ಪೊರೆಟ್ ಮಾಧ್ಯಮಗಳು ಪ್ರಬಲ ಪ್ರಖರ ಸಮರ್ಥನೆ ಮಾಡಿದ್ದವು. ಹಾಗೂ ಜನರ ಗಮನವನ್ನು ಭಾವನಾತ್ಮಕ ವಿಷಯಗಳತ್ತ (ಕೋಮು ದ್ವೇಷ, ಭಯೋತ್ತಾದಕ ದಾಳಿ, ಗಡಿಯಲ್ಲಿ ದೇಶದ ಭದ್ರತೆಗೆ ಅಪಾಯ ಇತ್ಯಾದಿ) ಗಮನ ತಿರುಗಿಸುವ ಕೆಲಸ ಮಾಡಿದ್ದವು. ಇದರಿಂದಾಗಿ ಮುಖ್ಯವಾಹಿನಿ ಮಾಧ್ಯಮವನ್ನು ’ಗೋದಿ ಮೀಡಿಯಾ’ (ಆಳುವವರ ಮಡಿಲ್ಲಲಿರುವ ಮುದ್ದಿನ ನಾಯಿ) ಎಂದು ಜನ ಕರೆಯಲಾರಂಭಿಸಿದ್ದರು. ಆದರೆ ಕಳೆದ ರಾಜ್ಯ ಸಮ್ಮೇಳನ ನಂತರದ ಅವಧಿಯಲ್ಲಿ (೨೦೧೮-೨೦೨೧) ಅವು ಸರಕಾರದ ಆಳುವ ಪಕ್ಷದ ಸಮರ್ಥನೆಗೆ ಮಾತ್ರ ಸೀಮಿತಗೊಳ್ಳದೆ, ಈ ನಡೆಗಳ ಬಗ್ಗೆ ಉಸಿರೆತ್ತುವ ಎಲ್ಲ ವ್ಯಕ್ತಿ, ಚಳುವಳಿ, ಶಕ್ತಿ, ಸಂಘಟನೆ, ಪಕ್ಷಗಳ ವಿರುದ್ಧ ಅಪಪ್ರಚಾರ, ನಿಂದನೆ ಮಾಡುವುದು ಹಾಗೂ ಅವರ ಸಾರ್ವಜನಿಕ ಬೇಟೆಯಾಡುತ್ತಿವೆ. ಹಾಗಾಗಿ ಅವುಗಳನ್ನು ಆಳುವವರ ’ಬೇಟೆ ನಾಯಿ’ ಎಂದು ಕರೆಯುವುದು ಹೆಚ್ಚು ಸೂಕ್ತ. ಆಳುವವರ ’ಮುದ್ದಿನ ನಾಯಿ’ ’ಬೇಟೆ ನಾಯಿ’ಯಾಗಿರುವುದು ಹೊಸ ಬೆಳವಣಿಗೆ. ಮಾಧ್ಯಮ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂರು ಅಂಗಗಳ ಮೇಲೆ ಕಣ್ಗಾವಲು ಇಡುವ ’ನಾಲ್ಕನೇ ಅಂಗ’ವಾಗಿಸುವ ಸಾಂವಿಧಾನಿಕ ಆಶಯವನ್ನು ಬುಡಮೇಲು ಮಾಡುವುದು, ಪ್ರಜಾಸತ್ತಾತ್ಮಕ ಭಿನ್ನಮತಕ್ಕೆ ಯಾವುದೇ ವೇದಿಕೆ ದೊರಕದಂತೆ ಮಾಡುವುದು ಇವುಗಳ ಹಿಂದಿರುವ ಉದ್ದೇಶ.

ಮಾಧ್ಯಮ ಬಹುತ್ವ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ

೨೦೧೮ರ ಹೊತ್ತಿಗೆನೇ ಅಂಬಾನಿಯ ನೆಟ್‌ವರ್ಕ್ ೧೮ ಮಾತ್ರವಲ್ಲ, ಟೈಮ್ಸ್, ಸನ್, ಝಿ, ಸ್ಟಾರ್, ಏಶ್ಯಾನೆಟ್, ಮುಂತಾದ ದೈತ್ಯ ಕಾರ್ಪೊರೇಟುಗಳು ಇಂಗ್ಲಿಷ್, ಹಿಂದಿ ಮಾತ್ರವಲ್ಲ ವಿವಿಧ ಭಾಷೆಗಳ ಪ್ರದೇಶಗಳ ವಿವಿಧ ಪ್ರಕಾರಗಳ ಮಾಧ್ಯಮಗಳಲ್ಲಿ ಏಕಸ್ವಾಮ್ಯ ಸಾಧಿಸಿದ್ದವು. ಪ್ರತಿಯೊಂದು ಭಾಷೆಯ ಪ್ರಿಂಟ್ ಪತ್ರಿಕೆ, ಟಿವಿ, ರೇಡಿಯೊ, ವೆಬ್ ತಾಣಗಳಲ್ಲಿ ಸಹ ಕೆಲವೇ ಕಂಪನಿಗಳ ಏಕಸ್ವಾಮ್ಯ, ಯಜಮಾನಿಕೆ ಇದೆ. ಈ ದೈತ್ಯ ಕಾರ್ಪೊರೇಟುಗಳ ಏಕಸ್ವಾಮ್ಯ ಈ ಅವಧಿಯಲ್ಲಿ (೨೦೧೮-೨೧) ಇನ್ನಷ್ಟು ಹೆಚ್ಚಿದೆ. ಇದರಾಚೆಗೆ ಇರುವ ಸ್ವತಂತ್ರ ಸಣ್ಣ-ಮಧ್ಯಮ ಮಾಧ್ಯಮ ಕಂಪನಿಗಳ ಪ್ರಮಾಣ ಇನ್ನಷ್ಟು ಕುಗ್ಗಿದೆ. ಮಾಧ್ಯಮಗಳ ಒಡೆತನದಲ್ಲಿ ಮಾತ್ರವಲ್ಲ ಪ್ರತಿ ರಾಜ್ಯದಲ್ಲೂ ಭಾಷೆಯಲ್ಲೂ ಹಲವು ಪತ್ರಿಕೆಗಳು, ಟಿವಿ ಚಾನೆಲುಗಳು, ರೇಡಿಯೋ ಸ್ಟೇಶನುಗಳು ಇದ್ದರೂ ಒಂದೆರಡು ಪತ್ರಿಕೆ, ಟಿವಿ ಚಾನೆಲುಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ನೋಡುಗ/ಕೇಳುಗ./ಓದುಗರನ್ನು ಬಾಚಿಕೊಂಡಿರುತ್ತದೆ. ಈ ಎರಡೂ ಏಕಸ್ವಾಮ್ಯಗಳನ್ನು ತಡೆಯಲು ಬೇಕಾಗಿರುವ ಕಾನೂನು ನಿಬಂಧನೆಗಳನ್ನು ಉದಾರೀಕರಣದ ಹೆಸರಲ್ಲಿ ಸಡಿಸಲಾಗಿದೆ. ಮಾಧ್ಯಮಗಳ ಒಡೆತನದ ಮತ್ತು ಫಂಡಿಂಗ್ ಬಗ್ಗೆ ಪೂರ್ಣ ಪಾರದರ್ಶಕತೆ, ವಿದೇಶೀ ಹೂಡಿಕೆಯ ಮೇಲೆ ನಿರ್ಬಂಧ, ಭಿನ್ನ ಮಾಧ್ಯಮಗಳ (ಉದಾ: ಟಿವಿ ಕಂಪನಿಗೆ ಪತ್ರಿಕೆಯ) ಒಡೆತನಕ್ಕೆ ನಿಷೇಧ, ಮಾಧ್ಯಮ ಕಂಪನಿಗಳಲ್ಲಿ ಒಡೆತನ/ಫಂಡಿಂಗ್ ಮೂಲಕ ರಾಜಕೀಯ ಪಕ್ಷಗಳ ನಿಯಂತ್ರಣದ ಕುರಿತು ನಿಬಂಧನೆಗಳು – ಇವೆಲ್ಲ ಬಹುತ್ವ ಇರುವ ಸ್ವತಂತ್ರ ಮಾಧ್ಯಮಕ್ಕೆ ಅಗತ್ಯ ಎಂದು ಪರಿಗಣಿಸಲಾಗುತ್ತದೆ. ಇವುಗಳ ಅಭಾವದಿಂದ ಮಾಧ್ಯಮದ ಬಹುತ್ವ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ.

ಹೆಚ್ಚು ಕಡಿಮೆ ಎಲ್ಲಾ ಮಾಧ್ಯಮಗಳು ಆಳುವ ಪಕ್ಷಕ್ಕೆ ಮಾತ್ರವಲ್ಲ, ಸಂಘ ಪರಿವಾರಕ್ಕೆ ಬೋ ಪರಾಕು ಹೇಳುವುದರಲ್ಲಿ ಸ್ಪರ್ಧಿಸುವ, ಎಲ್ಲ ಭಿನ್ನಮತೀಯರ ವಿರೋಧ ಪಕ್ಷಗಳ ಬೇಟೆಯಾಡುವಲ್ಲಿ ಪೈಪೋಟಿ ನಡೆಸುವ ಬೇಟೆ ನಾಯಿಗಳಾಗಿ ಬಿಟ್ಟಿವೆ. ಸಿಎಎ-ಎನ್.ಆರ್.ಸಿ ಪ್ರತಿಭಟನೆಗಳು, ಚುನಾವಣೆಗಾಗಿ ಕೋಮು ಗಲಭೆಗಳು ಮತ್ತು ಧ್ರುವೀಕರಣ, ಕುಸಿಯುತ್ತಿರುವ ಆರ್ಥಿಕತೆ, ಅಗಾಧ ನಿರುದ್ಯೋಗ, ಕೊವಿದ್ ಮಹಾಸೋಂಕಿನಿಂದ ಆದ ಮಹಾವಲಸೆ, ಭಾರೀ ಸಾವು-ನೋವುಗಳನ್ನು ನಿಭಾಯಿಸುವುದರಲ್ಲಿ ಭೀಕರ ವೈಫಲ್ಯಗಳು, ಪರಿಹಾರ ಕ್ರಮಗಳಿಗೆ ನಿರಾಕರಣೆ, ಕಾರ್ಮಿಕ-ರೈತ ವಿರೋಧಿ ಕರಾಳ ಕಾನೂನುಗಳು, ದೇಶದ ಸಾರ್ವಜನಿಕ ಆಸ್ತಿಯನ್ನು ಮಾರಾಟಕ್ಕಿಟ್ಟಿರುವ ಮತ್ತಿತರ ಎಲ್ಲಾ ಜನ-ವಿರೋಧಿ ನೀತಿಗಳನ್ನು ಕುರುಡಾಗಿ ಬೆಂಬಲಿಸುತ್ತಿವೆ. ಟಿವಿ ಮಾಧ್ಯಮದಷ್ಟು ಪತ್ರಿಕೆಗಳು ಮಾರಿಕೊಳ್ಳದಿದ್ದರೂ ಸರಕಾರದ ಕ್ರಮಗಳ ನೀತಿಗಳನ್ನು ವಸ್ತುನಿಷ್ಟವಾಗಿ ವಿಮರ್ಶಾತ್ಮಕವಾಗಿ ನೋಡುವುದಕ್ಕೆ ಬರೆಯುವುದಕ್ಕೆ ಹೆದರುತ್ತಿವೆ. ತುರ್ತು ಪರಿಸ್ಥಿತಿ ಅವಧಿ ಸೇರಿದಂತೆ ಹಿಂದೆಂದೂ ಮಾಧ್ಯಮಗಳು ಇಷ್ಟು ಕೆಳಮಟ್ಟಕ್ಕೆ ಹೋಗಿರಲಿಲ್ಲ.

ಕನ್ನಡ ಟಿವಿ ಚಾನೆಲುಗಳು

ಕರ್ನಾಟಕದಲ್ಲೂ ಅಂಬಾನಿ, ಸನ್, ಝಿ, ಏಶ್ಯಾನೆಟ್ ಟಿವಿ ಮಾಧ್ಯಮದ ಬಹುಭಾಗದ ಮೇಲೆ ಹಿಡಿತ ಸಾಧಿಸಿವೆ. ಇಲ್ಲೂ ಬಿಜೆಪಿ ಸಂಘ ಪರಿವಾರಗಳ ತುತ್ತೂರಿಯಾಗಿವೆ ಚಾನೆಲುಗಳಲ್ಲೂ ಎಡ-ಪ್ರಜಾಸತ್ತಾತ್ಮಕ ನಿಲುವುಗಳಿಗೆ ಸ್ಥಳ ಕಿರಿದಾಗುತ್ತಾ ಇಲ್ಲವೇ ಇಲ್ಲ ಎನ್ನುವ ಪರಿಸ್ಥಿತಿಗೆ ಬಂದಿದೆ. ಕರ್ನಾಟಕದಲ್ಲಿ ಈಗ ಒಟ್ಟು ರಾಜ್ಯ ಮಟ್ಟದ ೪೪ ಟಿವಿ ಚಾನೆಲುಗಳು ಮತ್ತು ದೊಡ್ಡ ಸಂಖ್ಯೆಯ (ಜಿಲ್ಲೆಗೆ ಸರಾಸರಿ ೫-೬ ರಂತೆ) ಸ್ಥಳೀಯ ಚಾನೆಲುಗಳು ಇವೆ. ಇವುಗಳಲ್ಲಿ ಒಟ್ಟು ೯ ಸುದ್ದಿ ಚಾನೆಲುಗಳು ಇವೆ. ೬ ಸುದ್ದಿ ಚಾನೆಲುಗಳು ದೈತ್ಯರಾಷ್ಟ್ರೀಯ ಜಾಲಗಳ ಮತ್ತು ೩ ಪ್ರಬಲ ರಾಜಕಾರಣಿಗಳ/ಉದ್ಯಮಿಗಳ ಒಡೆತನದಲ್ಲಿ ಇದೆ. ಸುದ್ದಿ, ವಿಶ್ಲೇಷಣೆಗಳ ಮಟ್ಟ ದಿನೇ ಕೆಳಕ್ಕೆ ಹೋಗುತ್ತಿದ್ದು ಚರ್ಚೆಯ ಹೆಸರಲ್ಲಿ ಅರಚಾಟವೇ ಪ್ರಧಾನವಾಗಿ ಬಿಟ್ಟಿದೆ. “ಮನೋರಂಜನೆ” ಚಾನೆಲುಗಳ ಸಾಂಸ್ಕೃತಿಕ ಮಟ್ಟವೂ ಕುಸಿಯುತ್ತಿದ್ದು ರಿಯಾಲಿಟಿ ಶೋ, ಮೂಢನಂಭಿಕೆ ಪ್ರಧಾನ, ಜನಜೀವನಕ್ಕೆ ದೂರವಾದ ಅಸಹಜ ಕೃತ್ರಿಮ ಪ್ರತಿಗಾಮಿ ಧೋರಣೆ ಬಿತ್ತುವ ಸಾಮಾಜಿಕ ಧಾರಾವಾಹಿಗಳ ಭರಾಟೆ ಇನ್ನಷ್ಟು ಹೆಚ್ಚಾಗಿದೆ. ಕರ್ನಾಟಕದ ಮೂರರಲ್ಲಿ ಎರಡು ಮನೆಗಳಲ್ಲಿ ಟಿವಿ ಇದ್ದು ಇದು ಇನ್ನೂ ಪ್ರಬಲ ಮಾಧ್ಯಮವಾಗಿದೆ. ಟಿವಿ ಸುದ್ದಿಗಳ ವಿಶ್ವಾಸಾರ್ಹತೆ ಕಡಿಮೆಯಾಗುತ್ತಿದ್ದರೂ ಇನ್ನೂ ರಾಜಕೀಯ ಪ್ರಚಾರದ ಮುಖ್ಯ ಸಾಧನವಾಗಿ ಮುಂದುವರೆದಿದೆ.

ಕನ್ನಡ ಪ್ರಿಂಟ್ ಪತ್ರಿಕೆಗಳ ಪ್ರಸಾರ ಕುಸಿಯುತ್ತಿದೆ

ಎಬಿಸಿ (ಆಡಿಟ್ ಬ್ಯುರೊ ಆಫ್ ಸರ್ಕುಲೇಶನ್) ಜೂನ್-ಡಿಸೆಂಬರ್ ೨೦೧೯ ಸಮೀಕ್ಷೆ ಪ್ರಕಾರ ಕನ್ನಡ ದೈನಿಕ ಪತ್ರಿಕೆಗಳ ಒಟ್ಟು ೪೪ ಆವೃತ್ತಿಗಳಿದ್ದು ಒಟ್ಟು ಪ್ರಸಾರ ೨೪.೧೩ ಲಕ್ಷಇದೆ. ೨೦೧೬ ರಲ್ಲಿದ್ದ ೩೦ ಲಕ್ಷದಿಂದ ಇದು ಸಾಕಷ್ಟು ಕುಸಿದಿದೆ. ವಿಜಯ ಕರ್ನಾಟಕ, ವಿಜಯವಾಣಿ, ಪ್ರಜಾವಾಣಿ, ಉದಯವಾಣಿ, ಕನ್ನಡಪ್ರಭ ಅನುಕ್ರಮವಾಗಿ ಅತಿ ಹೆಚ್ಚು ಪ್ರಸಾರ ಇರುವ ೫ ಪತ್ರಿಕೆಗಳು. ೨೦೨೦ರ ಎಬಿಸಿ ಪ್ರಸಾರದ ಮಾಹಿತಿ ಲಭ್ಯವಿಲ್ಲ (ಬಹುಶಃ ಕೊವಿದ್ ನಿಂದಾಗಿ ಸಮೀಕ್ಷೆ ಮಾಡಲಾಗಿಲ್ಲ). ಆದರೆ ಇ.ವೈ-ಫಿಕ್ಕಿ (ಇಙ-ಈIಅಅI) ಸಮೀಕ್ಷೆ ಪ್ರಕಾರ ಭಾರತೀಯ ಭಾಷೆ ಪತ್ರಿಕೆಗಳ ಪ್ರಸಾರ ೨೦೨೦ರಲ್ಲಿ ಕೊವಿದ್ ಪರಿಣಾಮವಾಗಿ ಸರಾಸರಿಯಾಗಿ ೨೦% ರಷ್ಟು ಪ್ರಸಾರ ಕುಸಿದಿತ್ತು, ಇಂಗ್ಲಿಷ್ ಪತ್ರಿಕೆಗಳ ಪ್ರಸಾರ ೪೫%ರಷ್ಟು ಕುಸಿದಿತ್ತು. ಜಾಹೀರಾತು ಆದಾಯ ಶೇ.೪೦ ರಷ್ಟು ಕುಸಿದಿತ್ತು. ಸಮೀಕ್ಷೆಯ ಪ್ರಕಾರ ೨೦೨೧ ಮತ್ತು ೨೦೨೨ರಲ್ಲಿ ಈ ಪ್ರಸಾರದ ನಷ್ಟ ತುಂಬಿ, ೨೦೨೩ರಲ್ಲಿ ಮಾತ್ರ ೨೦೧೯ರ ಮಟ್ಟಕ್ಕಿಂತ ಪ್ರಸಾರ ಹೆಚ್ಚಬಹುದು.

ದೊಡ್ಡ ಜಾಹೀರಾತಿಗೂ, ಸುದ್ದಿಯ ಪ್ರಧಾನ ವಿಶ್ವಾಸಾರ್ಹ ಮೂಲವಾಗಿ ಉಳಿಯಲು, ಜನಮನವನ್ನು ಪ್ರಭಾವಿಸುವ ಅವಕಾಶಕ್ಕೆ – ಟಿವಿ ಜತೆ ಪೈಪೋಟಿ ಮಾಡಬೇಕಾದ ಪತ್ರಿಕೆಗಳು ಪ್ರಧಾನ ಮಾಧ್ಯಮದ ಸ್ಥಾನ ಯಾವಾಗಲೋ ಕಳೆದುಕೊಂಡಿವೆ. ಟಿವಿ ಜತೆ ಪೈಪೋಟಿಗಿಳಿದು ಅಭಿಪ್ರಾಯಗಳಲ್ಲಿ ಬಹುತ್ವದ ಬದಲು ಆಳುವವರಿಗೆ ಪ್ರಿಯವಾಗುವ ಏಕಾಭಿಪ್ರಾಯಕ್ಕೆ,  ಜನ-ಮರುಳು ರೋಚಕತೆಗೆ, ಉದ್ರೇಕಕ್ಕೆ ಪ್ರಾಮುಖ್ಯತೆ ಕೊಡುತ್ತಿವೆ. ಆದರೂ ಮೊದಲಿಗಿಂತ ದುರ್ಬಲವಾಗುತ್ತಿದ್ದರೂ, ಸ್ವಲ್ಪ ಮಟ್ಟಿಗಾದರೂ ಸುದ್ದಿ-ವಿಶ್ಲೇಷಣೆಗಳಲ್ಲಿ ವಿಶ್ವಾಸಾರ್ಹತೆ ಉಳಿಸಿಕೊಂಡಿವೆ, ಜನರನ್ನು ತಟ್ಟುವ ವಿಷಯಗಳ ಬಗ್ಗೆ ಸ್ಪಂದಿಸುತ್ತಿವೆ,  ಸೆಕ್ಯುಲರ್ ಎಡ-ಪ್ರಜಾಸತ್ತಾತ್ಮಕ ಶಕ್ತಿಗಳಿಗೆ ಸ್ವಲ್ಪ್ಪವಾದರೂ ಅವಕಾಶ ಕೊಡುತ್ತಿವೆ.

ಎಬಿಸಿ (ಆಡಿಟ್ ಬ್ಯುರೊಆಫ್ ಸರ್ಕುಲೇಶನ್) ಜೂನ್-ಡಿಸೆಂಬರ್ ೨೦೧೯ ಸಮೀಕ್ಷೆ ಪ್ರಕಾರ ಕನ್ನಡ ಮ್ಯಾಗಜೀನ್ (ವಾರಪತ್ರಿಕೆ, ಮಾಸಿಕ ಇತ್ಯಾದಿ) ಗಳ ಒಟ್ಟು ಪ್ರಸಾರ ೧.೮೧ ಲಕ್ಷಇದೆ. ಇದು ೨೦೧೬ರಲ್ಲಿ ೨.೮ ಲಕ್ಷದಿಂದ ಗಮನಾರ್ಹವಾಗಿ ಕುಸಿದಿದೆ. ಇ.ವೈ-ಫಿಕ್ಕಿ (ಇಙ-ಈIಅಅI) ಸಮೀಕ್ಷೆ ಪ್ರಕಾರ ಭಾರತೀಯ ಭಾಷೆ ಮ್ಯಾಗಜೀನ್ ಗಳ ಪ್ರಸಾರ ೨೦೨೦ರಲ್ಲಿ ಕೊವಿದ್ ಪರಿಣಾಮವಾಗಿ ಸರಾಸರಿಯಾಗಿ ೫೦% ರಷ್ಟು ಕುಸಿದಿತ್ತು, ಜಾಹೀರಾತು ಆದಾಯ ಶೇ.೪೦ರಷ್ಟು ಕುಸಿದಿತ್ತು. ಸಮೀಕ್ಷೆಯ ಪ್ರಕಾರ ೨೦೨೧ ಮತ್ತು ೨೦೨೨ರಲ್ಲಿ ಈ ಪ್ರಸಾರದ ನಷ್ಟ ತುಂಬಿ, ೨೦೨೩ರಲ್ಲಿ ಮಾತ್ರ ೨೦೧೯ರ ಮಟ್ಟ ಮುಟ್ಟಬಹುದು.  ಈಗ ವಿಕಿಪಿಡಿಯಾ ಪ್ರಕಾರ ೧೯ ಮ್ಯಾಗಜೀನ್ ಗಳು ಪ್ರಕಟವಾಗುತ್ತಿವೆ. ಆ ಪಟ್ಟಿಯಲ್ಲಿ ಇಲ್ಲದ ಹೊಸತು, ಸಂವಾದ, ನ್ಯಾಯಪಥ, ಸಮಾಜಮುಖಿ, ಜನಶಕ್ತಿ, ಕೆಂಬಾವುಟ ಗಳನ್ನು ಸೇರಿಸಿದರೆ ಒಟ್ಟು ೨೫ ಮ್ಯಾಗಜೀನ್ ಗಳು ಪ್ರಕಟವಾಗುತ್ತಿವೆ. ಮ್ಯಾಗಜೀನ್‌ಗಳು ದೊಡ್ಡ ಪತ್ರಿಕಾ ಸಮೂಹದ (ದೈನಿಕದ ಕ್ರಾಸ್ ಸಬ್ಸಿಡಿಯಿಲ್ಲದೆ) ಭಾಗವಲ್ಲದೆ ನಡೆಯಲಾರವು ಎಂಬ ಪರಿಸ್ಥಿತಿ ಇದೆ.  ಪ್ರಸಾರದ ಜತೆಗೆ ಮ್ಯಾಗಜೀನ್ ಗಳ ಸಾಂಸ್ಕೃತಿಕ ಸಾಮಾಜಿಕ ರಾಜಕೀಯ ಪ್ರಭಾವವೂ ಕುಗ್ಗಿದೆ.

ಕನ್ನಡ ಸ್ವತಂತ್ರ ಮ್ಯಾಗಝೀನ್‌ಗಳು

ಕನ್ನಡದ ಸ್ವತಂತ್ರ ಮ್ಯಾಗಜಿನ್ ಗಳು, ಅದರಲ್ಲೂ ವಾರಪತ್ರಿಕೆಗಳು ಎದುರಿಸುತ್ತಿರುವ ಬಿಕ್ಕಟ್ಟು ನಮ್ಮಕಣ್ಣ ಮುಂದಿದೆ. ಗೌರಿ ಮೀಡಿಯಾ ಟ್ರಸ್ಟ್ ಅಡಿಯಲ್ಲಿ ಸಾಕಷ್ಟು ಸಂಪನ್ಮೂಲ ಸಂಗ್ರಹಿಸಿ, ’ಗೌರಿ ಲಂಕೇಶ್ ಪತ್ರಿಕೆಯ ಹೊಸ ಅವತಾರವಾಗಿ ’ನ್ಯಾಯಪಥ’ ವಾರಪತ್ರಿಕೆ ಆರಂಭವಾಗಿದೆ. ’ಗೌರಿ ಲಂಕೇಶ್ ಪತ್ರಿಕೆಯ ಸಂಪಾದಕೀಯ (ಸೆನ್ಸೇಶನಲಿಸಂ ಕಡಿಮೆ ಮಾಡಿದೆ) ಮತ್ತು ಪ್ರಸಾರ (ಅಂಗಡಿಗಳಲ್ಲಿ ನೇರ ಮಾರಾಟದ ಬದಲು ವಾರ್ಷಿಕ ಚಂದಾ) ಎರಡೂ ನೀತಿಗಳಲ್ಲೂ ಕೆಲವು ಗಮನಾರ್ಹ ಬದಲಾವಣೆಗಳನ್ನು ಮಾಡಿಕೊಂಡು ’ನ್ಯಾಯಪಥ’ ಮುನ್ನಡೆಯುತ್ತಿದೆ. ’ಸಮಾಜಮುಖಿ’ ಈ ಅವಧಿಯ ಹೊಸ ಮಾಸಿಕವಾಗಿದ್ದು ಉತ್ತಮವಾಗಿ ಬರುತ್ತಿದೆ. ಈ ಅವಧಿಯಲ್ಲಿ ಆರಂಭವಾದ ಸಾಹಿತ್ಯಿಕ ಪತ್ರಿಕೆ ’ಸಂಗಾತ’ ಸಹ ಉತ್ತಮವಾಗಿ ಬರುತ್ತಿದೆ. ಆದರೆ ಇವುಗಳ ಪ್ರಸಾರದ ಕುರಿತು ಮಾಹಿತಿಯಿಲ್ಲ.

ಸುದ್ದಿ ವೆಬ್/ಟಿವಿಗಳಲ್ಲಿ ಕ್ಷಣ ಕ್ಷಣಕ್ಕೂ ಸುದ್ದಿ, ದಿನಪತ್ರಿಕೆಗಳಲ್ಲಿ ವಿವರವಾದ ಸುದ್ದಿ ಮತ್ತು ಸಾಕಷ್ಟು ವಿಶ್ಲೇಷಣೆಯೂ ದೊರೆಯುತ್ತದೆ ಹಾಗೂ ದೊಡ್ಡ ಪತ್ರಿಕಾ ಸಮೂಹದ ಭಾಗವಾಗಿರುವ ವಾರಪತ್ರಿಕೆ/ಮ್ಯಾಗಜೀನುಗಳು ಕತೆ-ಕವನ ಲೇಖನಗಳನ್ನು ಕೊಡುತ್ತವೆ. ಹಾಗಾಗಿ ಸ್ವತಂತ್ರ ವಾರಪತ್ರಿಕೆಗಳು ಆಳವಾದ ವಿಶ್ಲೇಷಣೆಯನ್ನು ಮತ್ತು ಇತರ ಮ್ಯಾಗಜೀನುಗಳು ಕೊಡದ ಆದರೆ ತಮ್ಮ ನಿರ್ದಿಷ್ಟ ಓದುಗರಿಗೆ ಬೇಕಾದ್ದನ್ನು ಕೊಡಬೇಕಾಗುತ್ತದೆ. ರಾಜ್ಯ ಮಟ್ಟದ ಸ್ವತಂತ್ರ ವಾರಪತ್ರಿಕೆಗಳು ಹೀಗೆ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದ್ದರೂ, ಜಿಲ್ಲಾ/ತಾಲೂಕು ಮುಟ್ಟದ ಸ್ಥಳೀಯ (ದಿನಪತ್ರಿಕೆಗಳು ಸೇರಿದಂತೆ) ಪತ್ರಿಕೆಗಳು ಸಂಖ್ಯೆಯಲ್ಲೂ ಪ್ರಸಾರದಲ್ಲೂ ಹೆಚ್ಚುತ್ತಿರುವಂತೆ ಕಾಣುತ್ತದೆ. ಆದರೆ ಈ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಎಡಪಂಥೀಯ ಪತ್ರಿಕೆಗಳಾದ ಜನಶಕ್ತಿ, ಕೆಂಬಾವುಟ, ಹೊಸತು- ಇವು ಈ ಎಲ್ಲ ಕಷ್ಟಗಳನ್ನು ಎದುರಿಸುತ್ತಿದ್ದರೂ ಪ್ರಕಟಣೆ ಮುಂದುವರೆಸಿವೆ.

ವೆಬ್ ಸಂಪರ್ಕ ಇನ್ನಷ್ಟು ವಿಸ್ತಾರ

ಕಳೆದ ೪ ವರ್ಷಗಳಲ್ಲಿ ವೆಬ್, (ಇಂಟರ್) ನೆಟ್ ಅಥವಾ ಡಿಜಿಟಲ್ ಹೊಸ ಮಾಧ್ಯಮವಾಗಿ ಹೊಮ್ಮಿದ್ದು ಹಿಂದಿನ ಎಲ್ಲಾ ಮಾಧ್ಯಮಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿ, ಅವುಗಳ ಪಾತ್ರವನ್ನು ಪುನರ್ವಿಮರ್ಶೆಗೆ ಒಡ್ಡುವಂತೆ ಮಾಡಿದೆ. ಸ್ಮಾರ‍್ಟ್ ಫೋನ್ ಅಗ್ಗ ಮತ್ತು ವ್ಯಾಪಕವಾಗಿರುವುದು, ಡಾಟಾ ಕನೆಕ್ಶನ್ ಬೆಲೆ ಕಡಿಮೆಯಾಗಿರುವುದು ಮತ್ತು ವ್ಯಾಪಕ ಲಭ್ಯತೆ ಗಣನೀಯವಾಗಿ ಹೆಚ್ಚಿರುವುದು ಹಾಗೂ ವಾಟ್ಸಪ್/ಫೇಸ್ ಬುಕ್, ಯೂಟ್ಯೂಬ್ ಮುಂತಾದ ಸಾಮಾಜಿಕ ಮಾಧ್ಯಮ ಆಪ್ ಗಳು ಜನಪ್ರಿಯವಾಗಿರುವುದು, ನೋಟು ನಿಷೇಧ ಮತ್ತು ಕೊವಿದ್ ಲಾಕ್‌ಡೌನ್ ಪರಿಸ್ಥಿತಿಯಿಂದಾಗಿ ಏರಿದ ಡಿಜಿಟಲ್ ಹಣ ಪಾವತಿ ವ್ಯವಸ್ಥೆಯ ವಿಸ್ತಾರ, ಲಾಕ್‌ಡೌನ್ ಅವಧಿಯಲ್ಲಿ ವೆಬ್ ಪ್ರಮುಖ ಸಂವಹನ (ಜೂಮ್, ಗೂಗಲ್ ಮೀಟ್‌ಇತ್ಯಾದಿ) ಮಾಧ್ಯಮವಾಗಿದ್ದು, ಲಾಕ್‌ಡೌನ್ ಪರಿಸ್ಥಿತಿಯಿಂದ ಫಿಲಂ ಪ್ರದರ್ಶನ ನಿಂತು ಹಾಗೂ ಈಗಾಗಲೇ ಆರಂಭವಾಗಿದ್ದ ಅಮೆಜಾನ್ ಪ್ರೈಂ ವಿಡಿಯೊ, ನೆಟ್ ಫ್ಲಿಕ್ಸ್ ಇತ್ಯಾದಿ ಚಂದಾ ಆಧಾರಿತ ಡಿಜಿಟಲ್ ವಿಡಿಯೊ ಸೇವೆಯಲ್ಲಿ ಪ್ರಾದೇಶಿಕ ಭಾಷೆ ಫಿಲಂಗಳಿಗೂ ಪ್ರದರ್ಶನದ ಅವಕಾಶ ತೆರೆದಿರುವುದು- ಇವೆಲ್ಲಾ ಕಾರಣಗಳಿಂದ ವೆಬ್ ಸಂಪರ್ಕ ಹೊಂದಿರುವವರ ಸಂಖ್ಯೆಗಣನೀಯವಾಗಿ ಹೆಚ್ಚಿದೆ.

ದೇಶದಲ್ಲಿ ೨೦೨೦ರಲ್ಲಿ ೭೯.೫ ಕೋಟಿ ಜನ (೬೦.೬% ನಗರವಾಸಿ, ೩೯.೪% ಗ್ರಾಮವಾಸಿ) ನೆಟ್ ಸಂಪರ್ಕ ಮತ್ತು ಅವರಲ್ಲಿ ೭೪.೭ ಕೋಟಿ ಜನ ಬ್ರಾಡ್ ಬ್ಯಾಂಡ್ ಸಂಪರ್ಕ ಹೊಂದಿದ್ದಾರೆ. ಇದು ೨೦೧೮ಕ್ಕಿಂತ ಶೇ. ೪೦ ರಷ್ಟು ಮತ್ತು ೨೦೧೯ಕ್ಕಿಂತ ೧೩% ಹೆಚ್ಚು. ಸ್ಮಾರ್ಟ್ ಫೋನ್ ಹೊಂದಿರುವವರ ಸಂಖ್ಯೆ ೨೦೧೮ರಲ್ಲಿ ಇದ್ದಿದ್ದು ೨೦೨೦ರಲ್ಲಿ ೪೪.೮ ಕೋಟಿಗೆ ಏರಿದೆ. ೧೫ ವರ್ಷಕ್ಕಿಂತ ಹೆಚ್ಚಿನ ೪೫% ಜನರ ಬಳಿ ಸ್ಮಾರ್ಟ್ ಫೋನ್ ಇದೆ. ಮೋಬೈಲ್ ಡಾಟಾ ಬಳಕೆ ಶೇ. ೧೫ ರಷ್ಟು ಹೆಚ್ಚಿತು.

ಕರ್ನಾಟಕದಲ್ಲಿ ಮಾರ್ಚ್ ೨೦೨೧ ಕೊನೆಯ ಹೊತ್ತಿಗೆ ೫.೦ ಕೋಟಿ ವೆಬ್ ಸಂಪರ್ಕ ಹೊಂದಿರುವವರು ಇದ್ದಾರೆ ಎಂದು ಟ್ರಾಯ್(ಖಿಖಂI) ವರದಿ ಹೇಳುತ್ತದೆ. ರಾಜ್ಯದ ವಯಸ್ಕರಲ್ಲಿ ಸುಮಾರು ಶೇ. ೭೫ ರಷ್ಟು ವೆಬ್ ಸಂಪರ್ಕ ಹೊಂದಿದ್ದಾರೆ ಎನ್ನಬಹುದು. ವೆಬ್ ಸಂಪರ್ಕ ಇರುವರಲ್ಲಿ ಶೇ. ೬೪ ನಗರ ವಾಸಿಗಳು. ಸುಮಾರು ಶೇ. ೯೨ ಜನ ಬ್ರಾಡ್ ಬ್ಯಾಂಡ್ (ಅಂದರೆ ೫೧೨ ಞbಠಿsಗಿಂತ ಹೆಚ್ಚಿನ) ವೇಗದ ಸಂಪರ್ಕ ಹೊಂದಿದ್ದಾರೆ. ಶೇ. ೯೫ರಷ್ಟು ಜನ ವೆಬ್ ಸಂಪರ್ಕವನ್ನು ಮೊಬೈಲ್ ಮೂಲಕವೇ ಹೊಂದಿದ್ದಾರೆ. ಆದರೂ ವೆಬ್ ಸಂಪರ್ಕದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ, ಹಾಗೂ ಅವುಗಳ ಒಳಗೂ ವರ್ಗ, ಜಾತಿ, ಲಿಂಗ, ಪ್ರದೇಶಗಳ ಆಧಾರದ ಮೇಲೆ ಭಾರೀ ಅಸಮಾನತೆಗಳು ಇವೆ. ಉದಾಹರಣೆಗೆ, ರಾಷ್ಟ್ರೀಯ ಆರೋಗ್ಯ ಸಮೀಕ್ಷೆ ೨೦೧೯-೨೦ ಪ್ರಕಾರ, ನಗರ ಪ್ರದೇಶಗಳ ಶೇ. ೩೫ ಮಹಿಳೆಯರಿಗೆ ಮಾತ್ರ ವೆಬ್ ಸಂಪರ್ಕ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ಶೇ. ೨೪.೮ ಮಹಿಳೆಯರಿಗೆ ಮಾತ್ರ ವೆಬ್ ಸಂಪರ್ಕ ಇದೆ ಎಂಬುದನ್ನು ಗಮನಿಸಬೇಕು.

Leave a Reply

Your email address will not be published. Required fields are marked *